ಯುಎಸ್ ಮೂಲದ ಔಷಧೀಯ ಸಂಸ್ಥೆ ಜಾನ್ಸನ್ ಮತ್ತು ಜಾನ್ಸನ್ ಸಿಡಿಎಸ್‌ಸಿಒಗೆ (Central Drugs Standard Control Organisation) ತನ್ನ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಮಕ್ಕಳ ಮೇಲೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ನಿರ್ಣಾಯಕ ಬೆಳವಣಿಗೆಯಲ್ಲಿ, ಯುಎಸ್ ಮೂಲದ ಔಷಧೀಯ ಸಂಸ್ಥೆ ಜಾನ್ಸನ್ ಮತ್ತು ಜಾನ್ಸನ್ ಮಕ್ಕಳ ಮೇಲೆ ತನ್ನ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ. 12-17 ವರ್ಷ ವಯಸ್ಸಿನ ಹದಿಹರೆಯದವರಿಂದ ಅಧ್ಯಯನ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ, ಭಾರತ್ ಬಯೋಟೆಕ್ ಮತ್ತು ಜೈಡಸ್ ಕ್ಯಾಡಿಲಾ ಮಕ್ಕಳಿಗಾಗಿ ತಮ್ಮ ಹೊಸ ಕರೋನವೈರಸ್ ಲಸಿಕೆಗಳನ್ನು ಪರೀಕ್ಷಿಸುತ್ತಿದ್ದಾರೆ.
Johnson & Johnson has submitted an application to the Central Drugs Standard Control Organisation (CDSCO) to conduct a study of its COVID-19 vaccine in India in adolescents aged 12-17 years.
ಭಾರತದಲ್ಲಿ ಕೋವಿಡ್ -19 ಲಸಿಕೆ:
ಜುಲೈನಲ್ಲಿ 13.45 ಕೋಟಿ ದಾಟುವುದರೊಂದಿಗೆ ಲಸಿಕೆ ಹಾಕುವಿಕೆಯು ವೇಗವನ್ನು ಪಡೆಯುತ್ತಿದೆ- ಜೂನ್ 11.96 ಮತ್ತು ಮೂಲಗಳ ಪ್ರಕಾರ, ಅಕ್ಟೋಬರ್ ವೇಳೆಗೆ ತಿಂಗಳಿಗೆ 40 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳು ಲಭ್ಯವಿರುತ್ತವೆ. ಅಕ್ಟೋಬರ್ ವೇಳೆಗೆ ಒಟ್ಟು 7 ಲಸಿಕೆಗಳು ಲಭ್ಯವಿರುವುದರಿಂದ ಇದು ಸಾಧ್ಯ. ಒಟ್ಟು 44,49,37,560 ಜನರಿಗೆ ಲಸಿಕೆ ಹಾಕಲಾಗಿದೆ ಆದರೆ ಅವರಲ್ಲಿ 12,66,57,103 ಜನರು ಲಸಿಕೆಯ ಎರಡನೇ ಡೋಸ್ ಕೂಡ ಪಡೆದಿದ್ದಾರೆ.
ಸರಯೂ ಬಾಲ ಯಕ್ಷ ವೃಂದ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ಆಯೋಜಿಸಿದ 16-08-2021ರಂದು ಸರಯೂ ತುಳು ಯಕ್ಷಗಾನ ಸಪ್ತಾಹದ ಆರನೆಯ ದಿನದ ಸಭಾ ಕಾರ್ಯಕ್ರಮ ಸಮಾರಂಭದಲ್ಲಿ ಯಕ್ಷಗಾನ ಕಲಾವಿದರಾದ ಶ್ರೀ ರವಿ ಭಟ್ ನೆಲ್ಯಾಡಿ ಮತ್ತು ಶ್ರೀ ಸ್ಕಂದ ಕೊನ್ನಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಬದುಕಿಗಾಗಿ ನೌಕರಿಯನ್ನು ಪಡೆದುಕೊಳ್ಳಬೇಕಾದರೆ ವಿದ್ಯಾರ್ಹತೆಯನ್ನು ಹೊಂದಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ನಡೆಯುವ ಸಹಜವಾದ ಕ್ರಿಯೆ ಇದು. ಆಮೇಲೆ ಪರೀಕ್ಷೆ, ಸಂದರ್ಶನಗಳು ಇದ್ದೇ ಇರುತ್ತವೆ. ಆದರೆ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯಲು ಈ ಅನಿವಾರ್ಯತೆಗಳು ಬೇಕಾಗಿಲ್ಲ. ಆಸಕ್ತಿಯಿದ್ದವರಿಗೆ ಪ್ರಯತ್ನಿಸಬಹುದು. ಪ್ರವೇಶಿಸಿದ ನಂತರ ಸದಾ ಅಧ್ಯಯನಶೀಲರಾಗಿ ಬೆಳೆಯುತ್ತಾ ಕಲಾವಿದನಾಗಿ ಕಾಣಿಸಿಕೊಳ್ಳಬೇಕಾದುದು ಕರ್ತವ್ಯವೂ ಹೌದು. ಹಿಂದಿನ ಕಾಲದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಯಕ್ಷಗಾನವನ್ನೇ ಬದುಕಿಗಾಗಿ ಆಯ್ಕೆ ಮಾಡಿದವರನೇಕರು. ವಿದ್ಯಾರ್ಜನೆಗೂ ಹೆಚ್ಚು ಅವಕಾಶವಿಲ್ಲದ ಕಾರಣ ಮೇಳಕ್ಕೆ ಸೇರಿ (ನೇಪಥ್ಯ ಕೆಲಸಕ್ಕೆ) ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಆಟಗಳನ್ನು ನೋಡುತ್ತಾ ಮತ್ತೆ ಕಲಾವಿದನಾಗಿ ಅಭಿನಯಿಸಿ ಸತತ ಪರಿಶ್ರಮದಿಂದ ಖ್ಯಾತರಾದರು.
ಉದ್ಯೋಗವಿಲ್ಲದೆ ಮನೆಯಲ್ಲೇ ಕುಳಿತವವನನ್ನು ಹಿರಿಯರು ಹೀಗೆ ಆಕ್ಷೇಪಿಸುವ ಕ್ರಮವೂ ಇತ್ತು. ‘ನೀನು ಆಟದ ಪೆಟ್ಟಿಗೆ ಹೊರಲು ಆದೀತು’ಎಂದು. ಇದು ತಾತ್ಸಾರದಿಂದ ಆಡಿದ ಮಾತುಗಳಂತೂ ಖಂಡಿತಾ ಅಲ್ಲ. ಮೊದಲಿನ ಕಾಲದಲ್ಲಿ ವಾಹನ, ರಸ್ತೆ ಸೌಕರ್ಯಗಳು ಇದ್ದಿರಲಿಲ್ಲ. ಪ್ರದರ್ಶನಗಳು ನಡೆಯುವ ಜಾಗಕ್ಕೆ ಸರಂಜಾಮುಗಳನ್ನು ಹೊತ್ತೇ ಸಾಗಬೇಕಾಗಿತ್ತು. ನಡೆಯುವ ದಾರಿಯೂ ದುರ್ಗಮವಾಗಿತ್ತು. ಉತ್ತಮ ಆರೋಗ್ಯವನ್ನು ಹೊಂದಿದ ತರುಣರಿಂದ ಮಾತ್ರ ಈ ಕೆಲಸ ಸಾಧ್ಯ. ಹೀಗೆ ಮೇಳದ ಕೆಲಸಕ್ಕೆ ಸೇರಿದ ಅನೇಕರು ತಿರುಗಾಟದ ಏನನ್ನು ಮನೆಗೆ ಕೊಂಡುಹೋದರು? ಎಷ್ಟು ಕೊಂಡು ಹೋದರು?ಎಂಬ ಪ್ರಶ್ನೆ ಹುಟ್ಟಿಕೊಂಡರೆ ಅದಕ್ಕೆ ಉತ್ತರವಿದೆ.
ಅವರು ಬೆಲೆಕಟ್ಟಲಾಗದ ವಿಚಾರವನ್ನು ತಮ್ಮ ಜತೆ ಮನೆಗೆ ಕೊಂಡೊಯ್ದಿದ್ದರು. ಅದುವೇ ಯಕ್ಷಗಾನದ ಹುಚ್ಚು. ಯಕ್ಷಗಾನ ಕಲೆಯ ಆಸಕ್ತಿ. ತಾನೂ ಕಲಾವಿದನಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನಿಸಿಯೂ ಇದ್ದರು. ಹಿಂದಿನ ಕಾಲದಲ್ಲಿ ಹೆಚ್ಚಿನ ಕಲಾವಿದರೂ ಇದೇ ತೆರನಾಗಿಯೇ ಸಾಗಿ ಬಂದವರು. ನೇಪಥ್ಯದ ಕೆಲಸಕ್ಕೆಂದು ಮೇಳಕ್ಕೆ ಸೇರಿದ ಬಳಿಕ ಕಲಾವಿದರಾದ ಅನೇಕ ವ್ಯಕ್ತಿಗಳು ಇಂದೂ ನಮ್ಮ ಜತೆ ಇದ್ದಾರೆ. ಎಳವೆಯಲ್ಲೇ ಬದುಕಿಗಾಗಿ ಯಕ್ಷಗಾನವನ್ನೇ ಆಶ್ರಯಿಸಿ ಸತತ ಪರಿಶ್ರಮದಿಂದ ಖ್ಯಾತ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಮೆರೆದ ಅನೇಕ ಹಿರಿಯರನ್ನು ಗಮನಿಸಬಹುದು. ಬೆರಗು ಹುಟ್ಟಿಸುವಂತಹ ಸಾಧನೆಯಿದು. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಕುಂಬಳೆ ಕುಟ್ಯಪ್ಪು (ಬಣ್ಣದ ಕುಟ್ಯಪ್ಪು).
1914ರಲ್ಲಿ ಕಣ್ಣನ್, ಚೋಯಿಚ್ಚಿ ದಂಪತಿಗಳಿಗೆ ಮಗನಾಗಿ ಕೂಡ್ಲಿನಲ್ಲಿ ಜನನ. (ಅಜ್ಜನ ಮನೆ). ಕುಟ್ಯಪ್ಪು ಅವರ ಮೂಲಮನೆ ಕುಂಬಳೆ ಸಮೀಪದ ಬಳ್ಳಂಬಾಡಿ. ಹಾಗಾಗಿ ಕುಂಬಳೆ ಕುಟ್ಯಪ್ಪು ಎಂದೇ ಕರೆಸಿಕೊಂಡಿದ್ದರು. ಮಹಿಷಾಸುರ ವೇಷದ ಖ್ಯಾತಿಯ ಬಣ್ಣದ ಕುಟ್ಯಪ್ಪು ಅವರ ಹುಟ್ಟೂರು ಕಾಸರಗೋಡಿನ ಕುಂಬಳೆ. ಬಣ್ಣದ ವೇಷಗಳನ್ನೂ ಮಾಡುತ್ತಾ ಖ್ಯಾತರಾದ ಕಾರಣ ಕುಂಬಳೆ ಕುಟ್ಯಪ್ಪು ಅವರನ್ನು ಬಣ್ಣದ ಕುಟ್ಯಪ್ಪು ಎಂದೇ ಕಲಾಭಿಮಾನಿಗಳು ಕರೆಯುತ್ತಿದ್ದರು. ಶ್ರೀಯುತರು ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು ಮೊದಲಾದವರ ಸಮಕಾಲೀನರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡಿದವರು. ಇವರು ಓದಿದ್ದು 4ನೇ ತರಗತಿಯ ವರೆಗೆ ಮಾತ್ರ. ಎಳವೆಯಲ್ಲೇ ಯಕ್ಷಗಾನ ಬಯಲಾಟಗಳನ್ನು ನೋಡುತ್ತಾ ಬೆಳೆದವರು. ಬಣ್ಣದ ವೇಷಧಾರಿಗಳ ಅಭಿನಯವನ್ನು ನೋಡುತ್ತಾ ಆಕರ್ಷಿತರಾಗಿದ್ದರು.
ಇವರು ಮೊದಲು ಕಾಣಿಸಿಕೊಂಡದ್ದು ಪುಂಡುವೇಷಗಳಲ್ಲಿ. ಬಳಿಕ ಬಣ್ಣದ ವೇಷಗಳನ್ನು ಮಾಡಲು ತೊಡಗಿದ್ದರು. ಮಹಿಷಾಸುರನ ವೇಷವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ರುದ್ರಭೀಮ, ವೀರಭದ್ರ, ಕುಂಭಕರ್ಣ, ಅಜಮುಖಿ, ಪೂತನಿ, ರಾವಣ, ಶೂರಪದ್ಮ, ತಾರಕಾಸುರ ಮೊದಲಾದ ಪಾತ್ರಗಳಲ್ಲೂ ಮಿಂಚಿ ಹೆಸರನ್ನು ಗಳಿಸಿದರು. ವೀರರಸದ ಪದ್ಯಗಳಿಗೆ ಇವರದು ಅಮೋಘ ಅಭಿನಯವೆಂದು ಹಿರಿಯ ಕಲಾಭಿಮಾನಿಗಳು ಹೇಳುತ್ತಾರೆ. ಬಣ್ಣದ ಕುಟ್ಯಪ್ಪು ಅವರು ತೆಂಕುತಿಟ್ಟಿನ ಅಪ್ರತಿಮ ಬಣ್ಣದ ವೇಷಧಾರಿಯಾಗಿ ಮೆರೆದವರೆಂದು ಹಿರಿಯ ಕಲಾಭಿಮಾನಿಗಳೆಲ್ಲರೂ ಹೇಳುವುದನ್ನು ನಾವು ಕೇಳಿರುತ್ತೇವೆ. ತೆಂಕುತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲೂ ವ್ಯವಸಾಯ ಮಾಡಿದ್ದರು. ಕೊನೆಗೆ ಕಟೀಲು ಮೇಳದಲ್ಲಿ ಹಲವು ವರ್ಷಗಳ ತಿರುಗಾಟ ನಡೆಸಿ ನಿವೃತ್ತರಾಗಿದ್ದರು.
1982ರಲ್ಲಿ ದೆಹಲಿಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ನಿರ್ವಹಿಸಿದ ರಾವಣ ಮತ್ತು ತಾರಕಾಸುರ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿ ಪ್ರಶಂಸಿದ್ದರು. ಸುಮಾರು ಐವತ್ತು ವರ್ಷಗಳ ಕಲಾಸೇವೆ ಇವರದು. ಸುಮಾರು ನಲುವತ್ತು ವರ್ಷಗಳ ಕಾಲ ಕಾಸರಗೋಡಿನ ಕೋಟೆಕಣಿ ಎಂಬಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು. ಇವರ ಪತ್ನಿ ಶ್ರೀಮತಿ ಪಾಟೀ ಅಮ್ಮ. ಕುಟ್ಯಪ್ಪು ಪಾಟೀ ಅಮ್ಮ ದಂಪತಿಗಳಿಗೆ ಏಳು ಮಂದಿ ಮಕ್ಕಳು. (ಆರು ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿ) ಪ್ರಥಮ ಪುತ್ರ ಶ್ರೀ ರಾಮಚಂದ್ರ. ಇವರು ದಿವಂಗತರು. ಕಾಸರಗೋಡು ನುಳ್ಳಿಪ್ಪಾಡಿಯ ಗಜಾನನ ಗ್ಯಾರೇಜ್ ಮಾಲೀಕರಾಗಿದ್ದರು. ದ್ವಿತೀಯ ಪುತ್ರ ಶ್ರೀ ಸುಂದರ. ಟೈಲರ್ ಉದ್ಯೋಗಿ. ಕಾಸರಗೋಡು ಎಂ.ಜಿ ರೋಡಿನ ಕೊಹಿನೂರ್ ಟೈಲರ್ಸ್ ನ ಮಾಲೀಕರು. ತೃತೀಯ ಪುತ್ರ ಶ್ರೀ ಮಾಧವ. ಇವರು ದಿವಂಗತರು. ಟ್ಯಾಕ್ಸಿ ಡ್ರೈವರ್ ಆಗಿದ್ದರು. ನಾಲ್ಕನೆಯ ಪುತ್ರ ಶ್ರೀ ಭಾಸ್ಕರ. ಕೆ.ಎಸ್.ಆರ್.ಟಿ.ಸಿ ಡ್ರೈವರ್ ಆಗಿ ನಿವೃತ್ತರು. ಐದನೆಯ ಪುತ್ರ ಶ್ರೀ ಪ್ರಭಾಕರ. ಉಪಜಿಲ್ಲಾಧಿಕಾರಿಯಾಗಿ ನಿವೃತ್ತರು. ಕೊನೆಯ ಪುತ್ರ ಶ್ರೀ ರವೀಂದ್ರ ಕೋಟೆಕಣಿ. ಮಂಜೇಶ್ವರ ಕುಂಜತ್ತೂರಿನ ಕೆನರಾ ಮೋಟರ್ಸ್ ಗ್ಯಾರೇಜಿನ ಮಾಲೀಕರು. ಇವರು ಹಲವು ಧಾರ್ಮಿಕ ಸಂಸ್ಥೆಗಳಲ್ಲಿ ಮುಂದಾಳುಗಳಾಗಿ ಸೇವೆ ಮಾಡುತ್ತಿದ್ದಾರೆ. ಇವರ ಪುತ್ರ ಅಕ್ಷಯ ಕುಮಾರ್ ಸಿಎ ಪರೀಕ್ಷೆಯಲ್ಲಿ ಕೇರಳ ರಾಜ್ಯಕ್ಕೆ ಪ್ರಥಮ ಮತ್ತು ದೇಶಕ್ಕೆ ಆರನೆಯ ರಾಂಕ್ ಗಳಿಸಿರುತ್ತಾರೆ. ಬಣ್ಣದ ಕುಟ್ಯಪ್ಪು ಅವರ ಪುತ್ರಿ ಶ್ರೀಮತಿ ಬೇಬಿ ದಾಮೋದರ್. ಇವರ ಪತಿ ಶ್ರೀ ದಾಮೋದರ್ ಕೇರಳ ಸರಕಾರೀ ಉದ್ಯೋಗಿಯಾಗಿ ನಿವೃತ್ತರು. (ನೀರಾವರಿ ಇಲಾಖೆ).
ಪ್ರಾಮಾಣಿಕ ಕಲಾಸೇವೆಯನ್ನು ಮಾಡಿದ ಕಾರಣ ಕಲಾಮಾತೆಯು ಪ್ರಸನ್ನಳಾಗಿ ಬಣ್ಣದ ಕುಟ್ಯಪ್ಪು ಅವರ ಮನೆಯವರನ್ನು ಅನುಗ್ರಹಿಸಿ ರಕ್ಷಿಸಿದ್ದಾಳೆ. ಮಕ್ಕೆಳೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಮೊಮ್ಮಕ್ಕಳೂ ವಿದ್ಯಾವಂತರಾಗಿ ಹಿರಿಯರಿಗೆ ಸಂತಸವನ್ನು ಉಣಿಸುತ್ತಿದ್ದಾರೆ. ಶ್ರೀ ಬಣ್ಣದ ಕುಟ್ಯಪ್ಪು ಅವರ ಬದುಕಿನ ಅವಧಿ 1914-1985. ಅನಾರೋಗ್ಯದ ನಿಮಿತ್ತ ಯಕ್ಷಗಾನದಿಂದ ದೂರವಾಗಿ ಮೂರು ವರ್ಷಗಳ ಕಾಲ ನಿವೃತ್ತ ಜೀವನವನ್ನು ನಡೆಸಿದ್ದರು. ಕಾಸರಗೋಡಿನ ಸಮೀಪ ಹಳಿ ದಾಟುವಾಗ ರೈಲು ಢಿಕ್ಕಿ ಹೊಡೆದು ಗಾಯಗೊಂಡಿದ್ದ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಕುಂಬಳೆ ಕುಟ್ಯಪ್ಪು ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದ ಬಣ್ಣದ ಕುಟ್ಯಪ್ಪು ಅವರು ಸರಳ, ಸಜ್ಜನ ಸಾತ್ವಿಕ ವ್ಯಕ್ತಿಯಾಗಿದ್ದರು. ನಿಜಬದುಕಿನಲ್ಲಿ ಸಜ್ಜನ, ಸಾತ್ವಿಕರಾದರೂ, ರಂಗದಲ್ಲಿ ರಾಕ್ಷಸರಾಗಿ ಕಲಾವಿದರು ಅಭಿನಯಿಸುವುದನ್ನು ಕಂಡಾಗ ಯೋಚಿಸಿದಾಗ ಬೆರಗು ಹುಟ್ಟದೆ ಇರದು. ಇದುವೇ ಯಕ್ಷಗಾನವೆಂಬ ಗಂಡು ಕಲೆಯ ವಿಶೇಷತೆಯು. ಇದುವೇ ಕಲಾವಿದರ ಸಾಮರ್ಥ್ಯ. ಇದುವೇ ಪಾತ್ರೋಚಿತವಾಗಿ ಅಭಿನಯಿಸುವ ಕಲೆ. ಇದುವೇ ಪರಕಾಯ ಪ್ರವೇಶ. ಪಾತ್ರವನ್ನು ತನಗೆ ಬೇಕಾದಂತೆ ಬಾಗಿಸದೆ ತಾನು ಪಾತ್ರಕ್ಕೆ ಬೇಕಾದಂತೆ ಬಾಗುವ ಕ್ರಿಯೆಯು.
ಹಿರಿಯ ಯಕ್ಷಗಾನ ಕಲಾವಿದರಾದ ಚಿತ್ತೂರು ನಾರಾಯಣ ದೇವಾಡಿಗ(70) 15-8-20201ರಂದು ಬೈಂದೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು. ಕುಂದಾಪುರ ತಾಲೂಕಿನ ಹಳ್ನಾಡಿನ ದೇವಾಡಿಗರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರ ಗರಡಿಯಲ್ಲಿ ಪಳಗಿ ಸ್ತ್ರೀವೇಷಧಾರಿಯಾಗಿ ಮೇಳ ಸೇರಿದರು. ಕಮಲಶಿಲೆ, ಸಾಲಿಗ್ರಾಮ, ಹಳವಾಡಿ, ಗೋಳಿಗರಡಿ, ಮಾರಣಕಟ್ಟೆ, ಸೌಕೂರು, ಮಡಾಮಕ್ಕಿ, ಪೆರ್ಡೂರು ಹಾಗು ಹಾಲಾಡಿ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕಳೆದೆರಡು ವರ್ಷಗಳಲ್ಲಿ ಅಸೌಖ್ಯದಿಂದಾಗಿ ಮನೆಯಲ್ಲಿದ್ದು ಅದರ ಪೂರ್ವದಲ್ಲಿ ಮಂದಾರ್ತಿ ಮೇಳದಲ್ಲಿ ಕಲಾಸೇವೆ ಮಾಡಿದ್ದರು. ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ, ಚಿತ್ರಾಂಗದೆ ಮೊದಲಾದ ಪೌರಾಣಿಕ ಸ್ತ್ರೀಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದಾರೆ. ಕೃಷ್ಣ, ಭೀಷ್ಮ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕಲಾಸಾಧನೆಗೆ ದ್ಯೋತಕವಾಗಿ ಹಲವು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯು ಶಿರಿಯಾರ ಮಂಜು ನಾಯ್ಕ ನೆನಪಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಇವರು ಪತ್ನಿ ,ಈರ್ವರು ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ .ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದರು.
ಯಕ್ಷಗಾನ ಭಾಗವತ, ಪ್ರಸಂಗಕರ್ತ ಪುರುಷೋತ್ತಮ ಪೂಂಜರು ಅಸೌಖ್ಯದಿಂದ 14-8-2021 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು. ಅವರಿಗೆ 68ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಬಿ.ಎಸ್ಸಿ ಪದವಿ ಮುಗಿಸಿ ಮುಂಬಯಿಯಲ್ಲಿ ಉದ್ಯೋಗಿಯಾಗಿ ಅಲ್ಲಿರುವಾಗಲೇ ವೇಷಗಳನ್ನು ಮಾಡುತ್ತಾ ಮುಂದೆ ಯಕ್ಷಗಾನದ ಮೇಲಿನ ಸೆಳೆತದಿಂದ ಊರಿಗೆ ಬಂದು ಭಾಗವತರಾಗಿ ಪುತ್ತೂರು, ಕರ್ನಾಟಕ ಮೇಳಗಳಲ್ಲಿ ಏಳು ವರ್ಷ ತಿರುಗಾಟ ಮಾಡಿ ಕಳೆದ ಮೂರು ದಶಕದಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ತುಳು ಮತ್ತು ಕನ್ನಡದಲ್ಲಿ ಹತ್ತಾರು ಶ್ರೇಷ್ಠ ಪ್ರಸಂಗಗಳನ್ನು ರಚಿಸಿದ್ದಾರೆ. ಮಾನಿಷಾದವಂತೂ ಆಟಕೂಟಳಲ್ಲಿ ಸಾವಿರಾರು ಪ್ರದರ್ಶನ ಕಂಡಿದೆ. ಯಕ್ಷಗಾನ ಗುರುಗಳಾಗಿ ಅತ್ಯುತ್ತಮ ನಿರ್ದೇಶಕರಾಗಿ ಮಾನಿತರಾಗಿದ್ದಾರೆ. ಹಲವು ಪುರಸ್ಕಾರಗಳಿಗೆ ಭಾಜನರಾದ ಅವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಯಕ್ಷಗಾನ ವಿದ್ವಾಂಸರಿಗಾಗಿರುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ಟರು ಬಹುಮುಖ ಪ್ರತಿಭೆಯ ಸಾಧಕರು. ಯಕ್ಷಗಾನ ಸಂಘಟಕರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಒಳ್ಳೆಯ ಬರಹಗಾರರಾಗಿ. ಸಜ್ಜನ ವ್ಯಕ್ತಿಯಾಗಿ ಎಲ್ಲರಿಗೂ ಪರಿಚಿತರು. ಕಲಾಸೇವೆಯ ಜತೆ ಸಾಹಿತ್ಯಸೇವೆಯನ್ನೂ ಮಾಡಿ ಹೆಸರು ಗಳಿಸಿದ್ದಾರೆ. ಅನೇಕ ಪುಸ್ತಕಗಳನ್ನೂ ರಚಿಸಿರುತ್ತಾರೆ. ‘ಜಲಜ ಸಖ’ ಎಂಬುದು ಇವರ ಕಾವ್ಯನಾಮ. ಕಲಾವಿದರು, ಕಲಾಭಿಮಾನಿಗಳಿಗೆ ಶ್ರೀಯುತರು ಪ್ರೀತಿಯ ಬೆಳ್ಳಾರೆ ಸೂರ್ಯಣ್ಣ. ತೆರೆದು ಕಾಣಿಸಿಕೊಳ್ಳದೆ ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಆದರೂ ಎಲೆಮರೆಯ ಕಾಯಿಯಂತೆ ಕಲಾಸೇವೆಯನ್ನು ಮಾಡಿಕೊಂಡು ಬಂದವರು.
ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ಟರ ಮೂಲಮನೆ ಕುಂಞಿಹಿತ್ತಿಲು ಎಂಬಲ್ಲಿ. 1938ನೇ ಇಸವಿ ಜುಲೈ 14ರಂದು ಕುಂಞಿಹಿತ್ತಿಲು ಶ್ರೀ ಗೋವಿಂದ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಅಜ್ಜನ ಮನೆ ಕುತ್ಯಾಡಿಯಲ್ಲಿ ಜನನ. ಕುಂಞಿಹಿತ್ತಿಲು ಗೋವಿಂದ ಭಟ್ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ಐವರು ಪುತ್ರಿಯರು ಮತ್ತು ಮೂವರು ಪುತ್ರರು). ಗೋವಿಂದ ಭಟ್ಟರು ತಾಳಮದ್ದಳೆ ಅರ್ಥಧಾರಿಯೂ ಕೃಷಿಕರೂ ಆಗಿದ್ದರು. ಆ ಕಾಲದಲ್ಲಿ ಯಕ್ಷಗಾನ ಹಿಮ್ಮೇಳಕ್ಕೆ ಶ್ರುತಿ ಪೆಟ್ಟಿಗೆ ಇರಲಿಲ್ಲ. ಸೋರೆ ಕಾಯಿಯ ಬುರುಡೆಯಿಂದ ಶ್ರುತಿ ಪೆಟ್ಟಿಗೆ ತಯಾರಿಸುತ್ತಿದ್ದರಂತೆ.
ಶ್ರೀ ಗೋವಿಂದ ಭಟ್ಟರು ಬೆಳ್ಳಾರೆಯಲ್ಲಿ ವಾಸವಾಗಿದ್ದರು. ಸೂರ್ಯನಾರಾಯಣ ಭಟ್ಟರು ಓದಿದ್ದು, ಬೆಳೆದದ್ದು ಬೆಳ್ಳಾರೆಯಲ್ಲಿ. ಆದ ಕಾರಣ ಕುಂಞಿಹಿತ್ತಿಲು ಮನೆಯವರಾದರೂ ಬೆಳ್ಳಾರೆ ಸೂರ್ಯನಾರಾಯಣ ಭಟ್ ಎಂದೇ ಕರೆಸಿಕೊಂಡರು. ಓದಿದ್ದು ಬೆಳ್ಳಾರೆ ಮತ್ತು ಕಲ್ಮಡ್ಕ ಶಾಲೆಗಳಲ್ಲಿ. 9ನೇ ಕ್ಲಾಸಿನ ವರೆಗೆ(4th Form). ಆಗ ಹನ್ನೊಂದನೇ ಇಯತ್ತೆಗೆ ಎಸ್.ಎಸ್.ಎಲ್.ಸಿ ಎಂದು ಹೇಳುತ್ತಿದ್ದರಂತೆ 10ನೇ ತರಗತಿಯನ್ನು 5th Form ಎಂದು ಹೇಳುತ್ತಿದ್ದರು.
ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಬೆಳ್ಳಾರೆ ಶಾಲೆಯಲ್ಲಿ ಓದುತ್ತಿರುವಾಗ ಕಾವೇರಿಕಾನ ಶ್ರೀ ಮಹಾಲಿಂಗ ಭಟ್ಟರು ಅಧ್ಯಾಪಕರಾಗಿದ್ದರು. ವಾರದಲ್ಲಿ ಎರಡು ಪೀರಿಯಡ್ ಸಿಟಿಜನ್ ಶಿಪ್ ಟ್ರೈನಿಂಗ್’ ಎಂಬ ಕಾರ್ಯಕ್ರಮವು ಅಭ್ಯಾಸ ರೂಪದಲ್ಲಿ ನಡೆಯುತ್ತಿತ್ತು. ಈ ಅಭ್ಯಾಸ ತರಗತಿಯಲ್ಲಿ ತಾಳಮದ್ದಳೆ ನಡೆಸೋಣ ಎಂದು ಸೂರ್ಯನಾರಾಯಣ ಭಟ್ಟರು ಕೇಳಿಕೊಂಡಿದ್ದರು. ಪುರಾಣ ಜ್ಞಾನವನ್ನು ನೀಡಿ ಮಕ್ಕಳ ಪ್ರತಿಭೆಯನ್ನು ಬೆಳಗಿಸಲು ಅವಕಾಶ ಇರುವ ಕಾರಣ ಅಧ್ಯಾಪಕರ ಅನುಮತಿಯೂ ದೊರೆತಿತ್ತು. ಖ್ಯಾತ ತಾಳಮದ್ದಳೆ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರು ಶಾಲೆಯಲ್ಲಿ ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಸಹಪಾಠಿಯಾಗಿದ್ದರು.
ಶ್ರೀ ಚಿನ್ನಪ್ಪ ಗೌಡರು ಭಾಗವತಿಕೆಗೆ. ಕಾವಿನಮೂಲೆ ಕೃಷ್ಣಕುಮಾರರು ಮದ್ದಳೆಗೆ. ಎಲ್ಲರೂ ಶಾಲಾ ವಿದ್ಯಾರ್ಥಿಗಳು. ಗ್ಲುಕೋಸ್ ಕರಡಿಗೆಗಳನ್ನು ಬೇಕಾದಂತೆ ಜೋಡಿಸಿ ಮದ್ದಳೆಯನ್ನು ತಯಾರಿಸಿದ್ದರಂತೆ. ಅರ್ಥಗಾರಿಕೆಗೆ ಇವರಿಗೆಲ್ಲಾ ರಸಋಷಿ ದೇರಾಜೆ ಶ್ರೀ ಸೀತಾರಾಮಯ್ಯನವರು ನಿರ್ದೇಶಕರು. ಅಂದವಾಗಿ ಅರ್ಥವಾಗುವಂತೆ ಅರ್ಥ ಬರೆದು ಕೊಡುತ್ತಿದ್ದರಂತೆ. ದೇರಾಜೆಯವರು ಆಗ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು.
ಬೆಳ್ಳಾರೆ ಬೋರ್ಡಿಂಗ್ ನಲ್ಲಿ ಪ್ರತಿವಾರ ತಾಳಮದ್ದಳೆ ನಡೆಯುತ್ತಿತ್ತು. ದೇರಾಜೆ, ಭೀಮಗುಳಿ ಗೋಪಾಲಕೃಷ್ಣಯ್ಯ. ಗಟ್ಟಿಗಾರು ನಾರಾಯಣ ಭಟ್ ಮೊದಲಾದವರು ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ರಾತ್ರಿ ಒಂಬತ್ತು ಘಂಟೆಯಿಂದ ಎರಡು ಘಂಟೆಯ ವರೆಗೆ ತಾಳಮದ್ದಳೆ. ಆರನೇ ತರಗತಿಯಲ್ಲಿರುವಾಗ ಮೊದಲ ಬಾರಿ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕಲ್ಮಡ್ಕದಲ್ಲಿ ವಾರಣಾಸಿ ಶ್ರೀ ಸೀತಾರಾಮಯ್ಯನವರು ಆಯೋಜಿಸುತ್ತಿದ್ದ ತಾಳ ಮದ್ದಳೆ. ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥ ಹೇಳಿ ಅನುಭವಗಳನ್ನು ಗಳಿಸಿಕೊಂಡರು. ಬಡತನ, ಆರ್ಥಿಕ ಸಮಸ್ಯೆಯಿಂದಾಗಿ ಓದು ಮುಂದುವರಿಸಲಾಗಲಿಲ್ಲ. ಆದರೂ ಬದುಕು ಎಂಬ ಪಾಠ ಶಾಲೆಯಲ್ಲಿ ಕಲಿಯುತ್ತಾ ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಬಹಳಷ್ಟು ಕಲಿತಿದ್ದರು.
ಬದುಕಿಗಾಗಿ ಉದ್ಯೋಗವನ್ನು ಅರಸಲೇ ಬೇಕಾಗಿತ್ತು. ಮೈಸೂರಿಗೆ ತೆರಳಿ ಶ್ರೀ ದಾಸ ಪ್ರಕಾಶ್ ಮತ್ತು ನಿಯೋ ಮೈಸೂರ್ ಎಂಬ ಹೊಟೇಲುಗಳಲ್ಲಿ ದುಡಿದಿದ್ದರು. ಈ ಹೋಟೆಲ್ ಮಾಲೀಕರು ದಕ್ಷಿಣ ಕನ್ನಡದವರು. ಯಕ್ಷಗಾನ ಪ್ರಿಯರೂ ಆಗಿದ್ದರು. ಕುಬಣೂರು ಶ್ರೀ ಬಾಲಕೃಷ್ಣ ರಾಯರು ಯಕ್ಷಗಾನದ ಖ್ಯಾತ ಅರ್ಥಧಾರಿಗಳು ಮತ್ತು ಸಂಘಟಕರು. ಅವರ ನೇತೃತ್ವದ ತಂಡವು ಮೈಸೂರಿಗೆ ಬಂದಾಗ ಆಟಕೂಟಗಳನ್ನು ತಪ್ಪದೆ ನೋಡುತ್ತಿದ್ದರು. ಐದು ವರ್ಷಗಳ ಕಾಲ ಮೈಸೂರಿನಲ್ಲಿ ಹೋಟೆಲ್ ಕೆಲಸ. ಬಳಿಕ ಎರಡು ವರ್ಷ ಮದ್ರಾಸಿನಲ್ಲಿ. ಮತ್ತೆ ಅನಿವಾರ್ಯವಾಗಿ ಊರಿಗೆ ಮರಳಬೇಕಾಗಿ ಬಂತು.
ಕೈಂತಜೆ ಡಾ. ಕೃಷ್ಣ ಭಟ್ಟರ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿ ಐದು ವರ್ಷಗಳ ಕಾಲ ಕೆಲಸ ಮಾಡಿದರು. ಬಳಿಕ ಬೆಂಗಳೂರು ಹೈಕೋರ್ಟ್ ವಕೀಲರೂ, ಜಡ್ಜರೂ ಆಗಿದ್ದ ಶ್ರೀ ಜಿ.ಕೆ ಗೋವಿಂದ ಭಟ್ಟರ ಬಳಿ ಮೂರು ವರ್ಷಗಳ ಕಾಲ ದುಡಿದಿದ್ದರು. ಬಳಿಕ ಬೆಳ್ಳಾರೆ ಜಾಗದಲ್ಲಿ ವಾಸ್ತವ್ಯ. ಬದುಕಿಗಾಗಿ ವ್ಯಾಪಾರವನ್ನು ಆರಂಭಿಸಿದ್ದರು. ಮುಳಿ ಮಾಡಿನ, ಮಣ್ಣಿನ ಗೋಡೆಯ ಕಟ್ಟಡ. ಒಮ್ಮೆ ಮನೆ, ಅಂಗಡಿಯು ಬೆಂಕಿಗೆ ಆಹುತಿಯಾಗಿತ್ತು. ಮತ್ತೆ ಹಂಚು ಮತ್ತು ಶೀಟ್ ಹಾಕಿ ಕಟ್ಟಿಸಿದ್ದರು. ಈ ಕಾರ್ಯಕ್ಕೆ ಊರ ಮಹನೀಯರು ಸಹಕರಿಸಿದ್ದರು. ಈ ಸಂದರ್ಭಗಳಲ್ಲೂ ಸೂರ್ಯನಾರಾಯಣ ಭಟ್ಟರು ಯಕ್ಷಗಾನದಿಂದ ದೂರ ಉಳಿದವರಲ್ಲ.
ಶ್ರೀ ವಾಣೀ ಗಣೇಶ ಪ್ರಸಾದಿತ ಕಲಾ ವೃಂದ, ಬೆಳ್ಳಾರೆ ಎಂಬ ಸಂಸ್ಥೆಯಡಿ ಕಲಾಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ತಿಂಗಳಿನ ಪ್ರಥಮ ಶನಿವಾರದಂದು ರಾತ್ರಿಯಿಂದ ಬೆಳಗಿನ ವರೆಗೆ ವಾರಕ್ಕೊಂದು ಮತ್ತು ವಿಶೇಷ ದಿನಗಳಲ್ಲಿ ತಾಳಮದ್ದಲೆಗಳನ್ನು ನಡೆಸುತ್ತಿದ್ದರು. ಯಕ್ಷಗಾನ ಹಿಮ್ಮೇಳದ ಎಲ್ಲಾ ವಾದ್ಯೋಪಕರಣಗಳೂ ಈ ಸಂಸ್ಥೆಯಲ್ಲಿ ಇತ್ತು. ಇದು ಪ್ರಾರಂಭವಾದುದು 1976ರಲ್ಲಿ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಸಂಘಟನೆಯ ಈ ತಾಳಮದ್ದಳೆಗಳಲ್ಲಿ ಶೇಣಿ, ಶಾಸ್ತ್ರಿಗಳು, ಪೆರ್ಲ ಕೃಷ್ಣ ಭಟ್, ಉಡುವೆಕೋಡಿ ಸುಬ್ಬಪ್ಪಯ್ಯನವರು, ಡಾ. ಎಂ. ಪ್ರಭಾಕರ ಜೋಶಿ ಮೊದಲಾದ ಹಿರಿಯ ವಿದ್ವಾಂಸರೆಲ್ಲರೂ ಭಾಗವಹಿಸಿದ್ದರು.
ಸಾಹಿತ್ಯಾಸಕ್ತಿಯನ್ನು ಹೊಂದಿದ್ದ ಇವರು ಬರೆಯುವಲ್ಲಿಯೂ ತೊಡಗಿಸಿಕೊಂಡಿದ್ದರು. 1986ರಲ್ಲಿ ಶ್ರೀ ವಾಣೀ ಗಣೇಶ ಪ್ರಸಾದಿತ ಕಲಾ ವೃಂದದ ದಶಮಾನೋತ್ಸವ ಕಾರ್ಯಕ್ರಮವನ್ನು ನಡೆಸಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಾಧನೆ’ ಎಂಬ ಪುಸ್ತಕವೂ ಪ್ರಕಟಗೊಂಡಿತ್ತು. ಕಲಾಸೇವೆಯ ಜತೆ ಸಾಹಿತ್ಯಸೇವೆಯೂ ನಿರಂತರವಾಗಿ ಸಾಗಿತ್ತು.
1970ರಲ್ಲಿ ವಿವಾಹ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಪತ್ನಿ ಶ್ರೀಮತಿ ಸರಸ್ವತಿ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಸಾತ್ವಿಕ ಪಾತ್ರಗಳಲ್ಲಿ ಹೆಚ್ಚಾಗಿ ಅರ್ಥ ಹೇಳುತ್ತಿದ್ದರು. ಸ್ತ್ರೀ ಪಾತ್ರಗಳ, ಭಾವನಾತ್ಮಕ ಸನ್ನಿವೇಶಗಳನ್ನು ಉತ್ತಮವಾಗಿ ಚಿತ್ರಿಸುತ್ತಿದ್ದರು. ಹೆಚ್ಚಿನ ಎಲ್ಲಾ ಹಿರಿಯ ಕಲಾವಿದರ ಒಡನಾಟವೂ ಇವರಿಗೆ ದೊರಕಿದೆ. ಶೇಣಿಯವರ ವಾಲಿಗೆ ತಾರೆ, ರಾವಣನಿಗೆ ಮಂಡೋದರಿ (ಮೈಸೂರು ಅರಮನೆಯಲ್ಲಿ), ಭೀಮನಿಗೆ ದ್ರೌಪದಿ ಮೊದಲಾದ ಪಾತ್ರಗಳಲ್ಲಿ ಅರ್ಥ ಹೇಳುವ ಅವಕಾಶವೂ ಸಿಕ್ಕಿತ್ತು.
ಬೆಳ್ಳಾರೆ ಪರಿಸರದಲ್ಲಿ ತೆಂಕು ಬಡಗಿನ ಪ್ರದರ್ಶನಗಳು ನಡೆದರೆ ಹಿರಿಯ ಕಲಾವಿದರು ಇವರ ಮನೆಗೆ ಬಂದೇ ಬರುತ್ತಿದ್ದರು. ಉಪಾಹಾರ ವಿಶ್ರಾಂತಿಗೆ ಇವರದೇ ವ್ಯವಸ್ಥೆ. ಬೆಳ್ಳಾರೆಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಯಕ್ಷಗಾನ ಕಲೆಯೊಂದಿಗೆ ಬಾಂಧವ್ಯ ಇರಿಸಿಕೊಂಡೇ ಬದುಕಿದ್ದರು. 1999ರಲ್ಲಿ ಉಜಿರೆಯ ಸಮೀಪದ ಬೆಳಾಲು ಎಂಬಲ್ಲಿಗೆ ಬಂದು ವಾಸವಾಗಿದ್ದರು.
ಕಳೆದ ಹತ್ತು ವರ್ಷಗಳಿಂದ ಮಚ್ಚಿನ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ವಾಸವಾಗಿದ್ದಾರೆ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಸುಮಾರು ನಲುವತ್ತಕ್ಕೂ ಮಿಕ್ಕಿ ಪುಸ್ತಕಗಳನ್ನು ರಚಿಸಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ಯಕ್ಷಗಾನ ಪ್ರಸಂಗಗಳು. ಅಲ್ಲದೆ ಚುಟುಕು, ಕವನ, ನಾಟಕ, ಕಾದಂಬರಿ, ಮಕ್ಕಳ ಕಥೆ, ಅನುಭವ ಕಥನ, ಭಜನೆ, ಸಣ್ಣ ಕಥೆಗಳು, ಸುಪ್ರಭಾತ ಮೊದಲಾದ ಪುಸ್ತಕಗಳನ್ನೂ ರಚಿಸಿರುತ್ತಾರೆ.
ಇವರು ರಚಿಸಿದ ಪುಸ್ತಕಗಳು: ಕೀರ್ತನಮಾಲಾ, ಅಕ್ಷರಮಾಲಾ, ಶ್ರೀಹರಿ ಸ್ತೋತ್ರಂ, ಶ್ರೀ ಗಣೇಶ ಮಹಾತ್ಮೆ, ಭಕ್ತ ವಿಜಯ, ಕುಶಲವ ವಿಜಯ, ದೇವಶಕ್ತಿ, ಕನಪಡಿತ್ತಾಯ ಚರಿತ್ರೆ, ಚಂದ್ರಾವತೀ ಕಲ್ಯಾಣ, ಅನಾರ್ಕಲಿ, ಸತಿ ವೈಶಾಲಿನಿ, ಶಿವಲೀಲಾ, ಗೌತಮ ಬುದ್ಧ, ಯಜ್ಞಫಲ, ಅಂಗುಲಿಮಾಲಾ, ಸೂರ್ಯೋದಯ, ಹವ್ಯಕ ಗೀತಂ, ಇಂಚಾಂಡ ಎಂಚ?, ಸುಗ್ರೀವ ಸಖ್ಯ-ವಾಲಿ ಮೋಕ್ಷ, ಜನಕಕಲ್ಯಾಣ-ಮಿತಸಂತಾನ, ಶ್ರೀರಾಮ ಪಟ್ಟಾಭಿಷೇಕ, ಶ್ರೀ ಅಜಪಿಲ ಮಹಾಲಿಂಗೇಶ್ವರ ಸುಪ್ರಭಾತ, ಶ್ರೀ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ಸುಪ್ರಭಾತ, ಶ್ರೀ ಭಗವತೀ ಚೌಡೇಶ್ವರೀ ಸುಪ್ರಭಾತ, ತೋಚಿದ್ದು-ಗೀಚಿದ್ದು, ಕನ್ನಡ ತುಳು ಹವ್ಯಕ ಮಲೆಯಾಳ ತೆಲುಗು ಭಾಷೆಗಳ ಚುಟುಕುಗಳು, ಬನದ ಕುಸುಮ, ಮರ್ಮಜ್ಞ ವಚನಂ, ಚಾವಟಿ, ಪ್ರವಾಸ, ಜಾನಪದ ನೀತಿ ಸಾರ, ಭಕ್ತ ಸುಧನ್ವ, ಶಿವಲೀಲೆ, ಸ್ವಾತಂತ್ರ್ಯ, ವಿಶ್ವಪ್ರಭಾ, ವಿಧಿಲಿಪಿ, ಚಿಕ್ಕಮ್ಮ, ಶಾಂತಿಸದನ, ಬಾಳ ಗೋಳು, ಪುಟ್ಟು ಕಂದ, ಕಂದನ ನಂದನ, ತಾಟಕಾ, ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ, ಇವುಗಳಲ್ಲಿ ಕೆಲವು ಪ್ರಕಟಿತ. ಕೆಲವು ಅಪ್ರಕಟಿತ.
ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಪುಸ್ತಕ ಸಂಗ್ರಹಕಾರರೂ ಹೌದು. ಇವರ ಸಂಗ್ರಹದಲ್ಲಿ ಅನೇಕ ಪುಸ್ತಕಗಳಿವೆ. ಸುಮಾರು ಇನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ಪುಸ್ತಕಗಳೂ ಇದರಲ್ಲಿ ಸೇರಿವೆ. ಇವರ ಈ ಹವ್ಯಾಸವನ್ನು ಕಲಾಪೋಷಕರಾದ ಶ್ರೀ ಟಿ. ಶ್ಯಾಮ ಭಟ್ಟರೂ ಮೆಚ್ಚಿಕೊಂಡಿದ್ದರು. ಪುಸ್ತಕಗಳು ಕೆಡದಂತೆ ಸಂರಕ್ಷಿಸಲು ಒಂದು ಒಳ್ಳೆಯ ಕಪಾಟನ್ನೂ ಕೊಡುಗೆಯ ರೂಪದಲ್ಲಿ ನೀಡಿದ್ದರು.
ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್, ಸರಸ್ವತಿ ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳು. ಹಿರಿಯ ಪುತ್ರ ಶ್ರೀನಿವಾಸ ಸ್ವ ಉದ್ಯೋಗಿ. ಪುತ್ರಿಯರಾದ ಭಾರತಿ ಮತ್ತು ಲಲಿತಾ ಅವರು ವಿವಾಹಿತೆಯರು. ಗೃಹಣಿಯರು. ಕಿರಿಯ ಪುತ್ರ ಗಣೇಶ ಕಟೀಲು ಮೇಳದ ಹಿಮ್ಮೇಳ ಕಲಾವಿದ, ಮದ್ದಳೆಗಾರ. ತೆಂಕುತಿಟ್ಟಿನ ಹಿರಿಯ ಖ್ಯಾತ ಕಲಾವಿದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಸೂರ್ಯನಾರಾಯಣ ಭಟ್ಟರ ತಮ್ಮ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರಿಗೆ ಶ್ರೀ ದೇವರು ಆರೋಗ್ಯ, ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.
ಯಕ್ಷಗಾನ ಲೋಕ ಕಂಡ ಶ್ರೇಷ್ಠ ಭಾಗವತರಲ್ಲೊಬ್ಬರಾದ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ನಿಧನರಾಗಿದ್ದಾರೆ. ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಆಗಲಿ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ಇತ್ತೀಚಿಗೆ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರು ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಯಕ್ಷಗಾನ ಲೋಕ ಕಂಡ ಸಮರ್ಥ ಭಾಗವತ, ನಿರ್ದೇಶಕ. ಪ್ರಸಂಗಕರ್ತ ಹೀಗೆ ಯಕ್ಷಗಾನದ ಹಲವಂಗಗಳಲ್ಲಿ ವಿದ್ವಾಂಸರಾಗಿದ್ದ ಅವರ ಅಗಲಿಕೆ ಈ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಎಂಬುದರಲ್ಲಿ ಸಂಶಯವಿಲ್ಲ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಯಕ್ಷರಂಗದಲ್ಲಿ ನಡೆದು ಬಂದ ಹಾದಿಯ ಸಣ್ಣ ಪರಿಚಯ ಇಲ್ಲಿದೆ.
ಮಂಗಳೂರು ತಾಲೂಕಿನ ಮಂಜನಾಡಿ ಎಂಬ ಪುಟ್ಟ ಗ್ರಾಮ. ಆ ಊರಿನ ಯುವಕನೊಬ್ಬ ಕಣ್ಣುಗಳ ತುಂಬ ಕನಸುಗಳನ್ನು ಹೊತ್ತು ಮುಂಬೈ ಮಹಾನಗರದತ್ತ ಪ್ರಯಾಣ ಬೆಳೆಸಿದ. ತನ್ನ ಕಲ್ಪನೆಯ ಮಹಾನಗರದಲ್ಲಿ ಕೊನೆಗೂ ಕೆಲಸವನ್ನು ಗಿಟ್ಟಿಸಿದ. ಉದ್ಯೋಗದೊಂದಿಗೇ ತನ್ನ ವಿದ್ಯಾರ್ಥಿ ದೆಸೆಯಿಂದಲೇ ಅಂಟಿಸಿಕೊಂಡಿದ್ದ ಗೀಳು ಯಕ್ಷಗಾನವನ್ನು ಮರೆಯಲಿಲ್ಲ. ಕೆಲಸದ ಜೊತೆಗೆ ಹವ್ಯಾಸೀ ಕಲಾಸೇವೆಯ ನಂಟು ಬೆಳೆಯುತ್ತಾ ಹೋಯಿತು. ಕೆಲಸ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥರೊಂದಿಗಿನ ವೈಯಕ್ತಿಕ ಭಿನ್ನಾಭಿಪ್ರಾಯವು ಅವನನ್ನು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಮಾಡಿತು. ಅವರೇ ಬೊಟ್ಟಿಕೆರೆ ಪುರುಷೋತ್ತಮ ಪೂಂಜ.
ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಬೊಟ್ಟಿಕೆರೆ ಎಂಬಲ್ಲಿ ಶ್ರೀ ತ್ಯಾಂಪಣ್ಣ ಪೂಂಜ. ಶ್ರೀಮತಿ ಜಲಜಾ ದಂಪತಿಗಳ ಸುಪುತ್ರನಾಗಿ ಜನಿಸಿದ ಪುರುಷೋತ್ತಮ ಪೂಂಜರ ಯಕ್ಷಗುರುಗಳು ಆನೆಗುಂಡಿ ಗಣಪತಿ ಭಟ್ಟರು. ಪೂಂಜರು ಐದನೇ ತರಗತಿಯ ವರೆಗೆ ಅಸೈಗೋಳಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾಲೆಯ ಶಿಕ್ಷಕರಿಗೆ ಯಕ್ಷಗಾನದ ಬಗ್ಗೆ ವಿಶೇಷ ಒಲವಿತ್ತು. ಪೂಂಜರಿಗೂ ಅದರ ಬಗ್ಗೆ ಕುತೂಹಲವಿತ್ತು. ನಂತರ ಕೈರಂಗಳ ಸಮೀಪದ ಶಾಲೆಯಲ್ಲಿ ಕಲಿಯುತ್ತಿರುವಾಗ ಅಲ್ಲಿ ಯಕ್ಷಗಾನ ಸಂಘವೇ ಇತ್ತು. ಇವರ ಅಣ್ಣ ಶ್ರೀ ಸೀತಾರಾಮ ಪೂಂಜರು ಅಲ್ಲೇ ಶಿಕ್ಷಕರಾಗಿದ್ದರು. ಅವರು ಯಕ್ಷಗಾನದ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದರು. ಬಾಲ್ಯ ಸಹಜ ಕುತೂಹಲದಿಂದ ಪುರುಷೋತ್ತಮ ಪೂಂಜರು ಅವರು ಅಭ್ಯಾಸ ಮಾಡುತ್ತಿದ್ದ ಪುಸ್ತಕಗಳನ್ನು ಬಿಡಿಸಿ ನೋಡುತ್ತಿದ್ದರು.
ಶಾಲೆಯ ವಾರ್ಷಿಕೋತ್ಸವದ ದಿನ ಪೆರ್ಲ ಕೃಷ್ಣ ಭಟ್ಟರು ಬರೆದ “ತಾಳ ಮದ್ದಳೆ” ಎಂಬ ಪ್ರಹಸನವನ್ನು ಶಿಕ್ಷಕರಿಗೋಸ್ಕರ ಏರ್ಪಡಿಸಿದರು. ಅದರಲ್ಲಿ ಭಾಗವತರ ಪಾತ್ರವನ್ನು ಮಾಡಲು ಶಿಕ್ಷಕರಲ್ಲಿ ಯಾರೂ ಸಿಕ್ಕದ ಕಾರಣ ಭಜನೆ ಹಾಡಿ ಅಭ್ಯಾಸವಿದ್ದ ಬೊಟ್ಟಿಕೆರೆಯವರನ್ನು ಆಯ್ಕೆ ಮಾಡಿದರು. ಆ ಪಾತ್ರವು ಮೂರು ನಾಲ್ಕು ಪದ್ಯ ಹಾಡಬೇಕಾಗಿತ್ತು. ಅದಕ್ಕೆ ಬೇಕಾದ ತಾಳ, ಮಟ್ಟುಗಳನ್ನು ಅವರಿಗೆ ಕಲಿಸಲಾಯಿತು. ಅವರು ಆ ಪಾತ್ರವನ್ನು ನಿರ್ವಹಿಸಿದರು. ಹಾಗೆ ಹುಟ್ಟಿದ ಯಕ್ಷಗಾನದ ನಂಟು ಕೊನೆಯ ವರೆಗೆ ಬಿಡಲಿಲ್ಲ.
ಮುಮ್ಮೇಳದಲ್ಲಿ ಕಲಾವಿದನಾಗಿ ಕೂಡಾ ನಿರ್ವಹಿಸುತ್ತಿದ್ದ ಪೂಂಜರು ಹೆಚ್ಚಾಗಿ ಕೃಷ್ಣ, ರಾಮ ಹಾಗೂ ಇದೇ ತರಹದ ಪಾತ್ರಗಳನ್ನು ಮಾಡುತ್ತಿದ್ದರು. ಕೀರೀಟ ವೇಷಗಳಾದ ಕರ್ಣ, ಕೌರವ, ಅತಿಕಾಯ ಇತ್ಯಾದಿಗಳನ್ನು ಕೂಡಾ ನಿರ್ವಹಿಸಿದ್ದರು. ಯಕ್ಷಗಾನದಲ್ಲಿ ಚಿಕ್ಕಂದಿನಲ್ಲೇ ಆಸಕ್ತಿ ಇದ್ದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಆ ಕಲೆಯ ಒಂದೊಂದೇ ಅಂಗಗಳನ್ನೇ ಕಲಿಯುತ್ತಾ ಬಂದರು. ಸಿಕ್ಕ ಅವಕಾಶಗಳನ್ನೆಲ್ಲಾ ಉಪಯೋಗಿಸಿಕೊಂಡರು. ಯಕ್ಷಗಾನದ ಎಲ್ಲಾ ಅಂಗಗಳಲ್ಲೂ ಪರಿಪೂರ್ಣ ಅಲ್ಲದಿದ್ದರೂ ಒಂದಷ್ಟು ತಿಳುವಳಿಕೆ ಪಡೆಯುತ್ತಾ ಬಂದರು. ಆ ನಂತರ ಯಕ್ಷಗಾನದ ಆಕರ್ಷಣೆ ದೂರವಾಗಲಿಲ್ಲ.
ಕಾಲೇಜು ಕಲಿಯುವ ದಿನಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುತ್ತಿದ್ದರು. ಈ ಸಂಘದ ವೇಷ ಭೂಷಣಗಳನ್ನು ಯಕ್ಷಗಾನ ನಡೆಯುವಲ್ಲಿಗೆ ಕೊಂಡು ಹೋಗಬೇಕಿತ್ತು. ಜೊತೆಗೆ ಪೂಂಜರೂ ಹೋಗುತ್ತಿದ್ದರು. ಮೇಕಪ್ ಕೂಡಾ ಮಾಡುತ್ತಿದ್ದರು. ಅಲ್ಲಿ ಹೋದ ನಂತರ ಅವಕಾಶ ಸಿಕ್ಕಿದಾಗ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದರು. ಹಿಮ್ಮೇಳ ಅಥವಾ ವೇಷಧಾರಿಯಾಗಿ ಪರಿಪೂರ್ಣ ಅಲ್ಲದಿದ್ದರೂ ಯಕ್ಷಗಾನದ ಎಲ್ಲ ಅಂಗಗಳಲ್ಲಿಯೂ ಕೈಯಾಡಿಸುವ ಅವಕಾಶ ಲಭ್ಯವಾಯಿತು.
ಪದವಿ ಶಿಕ್ಷಣ ಪಡೆಯುತ್ತಿರುವಾಗ ಕಾಲೇಜಿನ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹಾಗೂ ಹವ್ಯಾಸಿ ಸಂಘಗಳಲ್ಲಿ ಒಬ್ಬ ಕಲಾವಿದನಾಗಿ ರೂಪುಗೊಂಡ ಪೂಂಜರು ಆಗ ಹೆಚ್ಚಾಗಿ ವೇಷಧಾರಿಯಾಗಿದ್ದರೂ ಪರಿಸ್ಥಿತಿ ಬಂದೊದಗಿದಾಗ ಭಾಗವತಿಕೆ, ಹಾಗೂ ಹಿಮ್ಮೇಳವಾದನ ಕೂಡಾ ಮಾಡುತ್ತಿದ್ದರು. ಕೆಲವೊಮ್ಮೆ ಪ್ರಧಾನ ಭಾಗವತರು ಏರುಸ್ತಾಯಿಯಲ್ಲಿ ಹಾಡುತ್ತಿರುವಾಗ ಸ್ವರ ಬಿದ್ದು ಹೋಗುವ ಸಂದರ್ಭದಲೆಲ್ಲಾ ಪೂಂಜರು ವೇಷ ಕಳಚಿ ಭಾಗವತಿಕೆ ಮಾಡಿದ್ದುಂಟು.
ಮುಂದೆ ಉದ್ಯೋಗದ ನಿಮಿತ್ತ ಮುಂಬೈಗೆ ತೆರಳಿದರು. ಅಲ್ಲಿ ಕೂಡಾ ಯಕ್ಷಗಾನದ ನಂಟು ಮುಂದುವರೆಯಿತು. ಹಲವು ಯಕ್ಷಗಾನ ಮಂಡಳಿಗಳಿರುವ ಮುಂಬೈಯಲ್ಲಿ ಗೀತಾಂಬಿಕಾ ಮಂಡಳಿಯಲ್ಲಿ 7 ವರ್ಷ ಸದಸ್ಯನಾಗಿ, ವೇಷಧಾರಿಯಾಗಿ, ಭಾಗವತನಾಗಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳು ಮೇಳದ ಕಲಾವಿದನಾಗಲು ಮಾರ್ಗಸೂಚಿಯಾಯಿತು. ಅದೇ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಭಡ್ತಿ ವಿಷಯದಲ್ಲಿ ವ್ಯವಸ್ಥಾಪಕರೊಡನೆ ವಾಗ್ವಾದವಾಯಿತು. ಅದರಿಂದ ಬೇಸರಿಸಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಮರಳಿದರು. ಆ ಮೇಲೆ ಪುತ್ತೂರು ಮೇಳದಲ್ಲಿ ಭಾಗವತನಾಗಿ ಸೇರಿದ ಆ ವರ್ಷವೇ ಅವರು ಬರೆದ ‘ಪಟ್ಟದ ಕತ್ತಿ’ ಎಂಬ ಪ್ರಸಂಗವನ್ನು ಮೇಳಕ್ಕೆ ಕೊಟ್ಟರು. ಹಾಗೆ ಪ್ರಾರಂಭವಾದ ಮೇಳದ ಬದುಕು ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದರು.
“ತುಂಬಾ ಚೆನ್ನಾಗಿ ಹಾಡುವವರಿದ್ದಾರೆ. ಬೇರೇನೂ ವಿಷಯ ಗೊತ್ತಿಲ್ಲದವರೂ ಇದ್ದಾರೆ. ಭಾಗವತರಿಗೆ ಯಕ್ಷಗಾನದ ಸಮಗ್ರವಾದ ವಿಷಯ ಗೊತ್ತಿರಬೇಕು. ಮೂಲಭೂತ ವಿಷಯಗಳಾದ ರಾಗ, ತಾಳ, ಲಯ ಮಾತ್ರ ಗೊತ್ತಿದ್ದರೆ ಸಾಲದು. ಸಾಹಿತ್ಯ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ತಿಳಿದಿರಬೇಕು. ಹೆಜ್ಜೆಗಾರಿಕೆ, ಹಿಮ್ಮೇಳದ ಚೆಂಡೆ, ಮದ್ದಳೆ ಬಗ್ಗೆಯೂ ಗೊತ್ತಿರಬೇಕು. ಮಾತ್ರವಲ್ಲ ವೇಷಧಾರಿಯ ಬಣ್ಣಗಾರಿಕೆಯ ಬಗ್ಗೆಯೂ ಜ್ಞಾನ ಮತ್ತು ಕಾಳಜಿಯನ್ನು ತೋರಿಸುವವರಾಗಿರಬೇಕು. ಇಂತಹಾ ಯಕ್ಷಗಾನದ ಸಮಗ್ರ ವಿಷಯಗಳ ಬಗ್ಗೆಯೂ ಅಧ್ಯಯನ ಕೈಗೊಂಡು ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸುವವರೇ ಪರಿಪೂರ್ಣ ಭಾಗವತ ಎಂದು ಕರೆಸಿಕೊಳ್ಳುತ್ತಾರೆ. ಸ್ವರ ಚೆನ್ನಾಗಿದ್ದು, ತಾಳ, ಲಯ ಹಿಡಿತ ಸಿಕ್ಕಿದಾಗ ನಾನು ಭಾಗವತನಾದೆ ಎಂದು ತಿಳಿದುಕೊಳ್ಳಬಾರದು” ಎನ್ನುತ್ತಾರೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ.
“ಮೇಳದ ಬಿಡಾರದಲ್ಲ್ಲಿ ಉಳಿದುಕೊಳ್ಳುವಾಗ ಕೆಲವು ಸಮಸ್ಯೆಗಳು ಬರುತ್ತಿರುತ್ತವೆ. ಕುಡಿಯುವ ನೀರು ಬದಲಾಗುತ್ತಲೇ ಇರುವಾಗ ಕೆಲವೊಮ್ಮೆ ಸ್ವರಗಳು ಬೀಳುತ್ತಿತ್ತು. ಇದರಿಂದ ನಾನು ಪ್ರತಿದಿನವೂ ಮನೆಯಿಂದ ಕ್ಯಾಂಪ್, ಕ್ಯಾಂಪ್‍ನಿಂದ ಮನೆ ಹೀಗೆ ಪ್ರಯಾಣಿಸುತ್ತಿದ್ದೆ. ಸಮಯದ ಅಭಾವವಿದ್ದರೂ ಹಾಗೂ ಪ್ರಯಾಣ ಕಷ್ಟವಿದ್ದರೂ ನೆಮ್ಮದಿ ಇರುತ್ತಿತ್ತು. ಹೆಚ್ಚಾಗಿ ನನ್ನ ಬರವಣಿಗೆ ಎಲ್ಲಾ ಮೇಳದ ತಿರುಗಾಟದ ಅವಧಿಯಲ್ಲಿ ಇರಲಿಲ್ಲ. ಕೊನೆಯ ಸೇವೆಯಾಟದ ನಂತರ ನನ್ನ ಬರವಣಿಗೆ ಸಾಗುತಿತ್ತು. ಅನಿವಾರ್ಯ ಸಂದರ್ಭಗಳಲ್ಲಿ ಮೇಳದ ತಿರುಗಾಟದಲ್ಲಿ ಬರೆದದ್ದೂ ಉಂಟು. ‘ಮನ್ಮಥೋಪಖ್ಯಾನ’ ಹಾಗೂ ‘ಸತಿ ಉಲೂಪಿ’ ಎಂಬ ಪ್ರಸಂಗಗಳನ್ನು ತಿರುಗಾಟದ ಸಮಯದಲ್ಲಿ ಬರೆದಿದ್ದೆ. ನಿದ್ರೆಯ ಅಭಾವದಿಂದ ಅವುಗಳನ್ನು ಬರೆಯಲು ಸ್ವಲ್ಪ ಕಷ್ಟವಾಗಿತ್ತು. ಸ್ವಲ್ಪ ಬಿಡುವೇನಾದರೂ ಸಿಕ್ಕಿದರೆ, ಓದುವ ಹವ್ಯಾಸವಿದೆ. ವರ್ತಮಾನ ಪತ್ರಿಕೆಗಳನ್ನೋದುವುದು, ಬರೆಯುವ ಹವ್ಯಾಸ, ಕ್ರಿಕೆಟ್ ಮ್ಯಾಚ್ ನೋಡುವುದು,ಸಂಗೀತ ಕೇಳುವುದು ಮೊದಾದ ಹವ್ಯಾಸಗಳು ಕೂಡಾ ಇವೆ. ನನ್ನ ಕಾಲೇಜಿನ ದಿನಗಳಲ್ಲಿ ಕ್ರೀಡಾ ಪಟುವಾಗಿದ್ದೆ, ಕಾಲೇಜಿನ ವಾಲಿಬಾಲ್ ತಂಡದ ನಾಯಕನಾಗಿದ್ದೆ” ಎಂದು ಬೊಟ್ಟಿಕೆರೆಯವರು ನುಡಿಯುತ್ತಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಅವರ ಅನುಭವ ಈ ರೀತಿ ಇದೆ. ಉಪ್ಪಳ ಭಗವತಿ ಮೇಳ-ಒಂದು ವರ್ಷ ಮುಂಬಯಿ ಗೀತಾಂಬಿಕಾ ಮಂಡಳಿ-ಏಳು ವರ್ಷ, ಪುತ್ತೂರು ಮೇಳ – ಎರಡು ವರ್ಷ, ಕರ್ನಾಟಕ ಮೇಳ – ಐದು ವರ್ಷ, ಕಟೀಲು ಮೇಳ – ಇಪ್ಪತ್ತೆಂಟು ವರ್ಷಗಳಿಂದ. ಬರೆದ ಪೌರಾಣಿಕ ಯಕ್ಷಗಾನ ಪ್ರಸಂಗಗಳು: ಕನ್ನಡ ಪೌರಾಣಿಕ: ವಧುವೈಶಾಲಿನಿ, ಉಭಯಕುಲ ಬಿಲ್ಲೋಜ, ನಳಿನಾಕ್ಷನಂದಿನಿ, ಮಾನಿಷಾದ ಕ್ಷಾತ್ರ ಮೇಧ, ರಾಜಾದ್ರುಪದ, ಮಾತಂಗಕನ್ಯೆ, ಮನ್ಮಥೋಪಖ್ಯಾನ, ಗಂಡುಗಲಿ ಘಟೋತ್ಕಚ, ಪಾಂಚಜನ್ಯ, ಕಾರ್ತಿಕೇಯ ಕಲ್ಯಾಣ, ಗಾಂಗೇಯ, ಕಲಿಕೀಚಕ, ರುದ್ರಪಾದ, ಸತಿ ವಿಲೂಪಿ, ಬೋಪದೇವೋಪಾಖ್ಯಾನ, ದತ್ತಸಂಭವ ಇತ್ಯಾದಿ. ಕನ್ನಡ ಕಾಲ್ಪನಿಕ ಪ್ರಸಂಗಗಳು : ಮೇಘ ಮಯೂರಿ, ಸ್ವರ್ಣನೂಪುರ, ಅಮೃತವರ್ಷಣಿ, ಮೇಘ ಮಾಣಿಕ್ಯ. ತುಳು ಕಾಲ್ಪನಿಕ ಪ್ರಸಂಗಗಳು : ಪಟ್ಟದಕತ್ತಿ, ಬಂಗಾರ್ದಗೆಜ್ಜೆ, ದಳವಾಯಿ ಮುದ್ದಣ್ಣೆ, ನಲಿಕೆದ ನಾಗಿ, ಸ್ವರ್ಣ ಕೇದಗೆ, ಗರುಡ ಕೇಂಜವೆ. ನೃತ್ಯ ರೂಪಕಗಳು : ಅಂಧಕ ನಿದಾನ, ಭುವನಾಭಿರಾಮ (ಕನ್ನಡ), ಜೇವು ಕೇದಗೆ (ತುಳು). ಮಕ್ಕಳ ನಾಟಕ : ಹಿತ್ತಾಳೆ ಕಿವಿ. ಇತ್ತೀಚಿಗೆ ಪ್ರಕಟವಾದ ಪ್ರಸಂಗ ಪುಸ್ತಕಗಳು: ‘ಅಂಬುರುಹ ಲವ’ ಮತ್ತು ‘ಅಂಬುರುಹ ಕುಶ’ ತಾಳ ಲಯ ಪರಿಪಕ್ವತೆಗೆ ಇನ್ನೊಂದು ಹೆಸರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪತ್ನಿ ಶೋಭಾ, ಮಕ್ಕಳು ಜೀವಿತೇಶ ಮತ್ತು ಪರೀಕ್ಷಿತ.
ಶಿಕ್ಷಕ, ತಾಳಮದ್ದಲೆ ಅರ್ಥಧಾರಿ, ಚಿಂತಕಕೂರಾಡಿ ಸದಾಶಿವ ಕಲ್ಕೂರ (86 ವರ್ಷ) 10-08-2021ರ ರಾತ್ರಿ ಅಲೆವೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು. ಮೂರುವರೆ ದಶಕಗಳ ಕಾಲ ವಿವಿಧೆಡೆ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಬಳಿಕ ಉಪ್ಪೂರಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು.
‘ಬಿತ್ತಿದಂತೆ ಬೆಳೆ’ ಎಂಬ ಯಕ್ಷಗಾನ ಹಾಗೂ ಸಾಮಾಜಿಕ ಸ್ಥಿತಿ ಗತಿಗಳ ಕುರಿತಾದ ಅಮೂಲ್ಯ ಬರಹಗಳನ್ನೊಳಗೊಂಡ ಪುಸ್ತಕವನ್ನು ಪ್ರಕಟಿಸಿದ್ದಾರೆ. ಶಿವರಾಮ ಕಾರಂತ, ಬೈಕಾಡಿ ವೆಂಕಟಕೃಷ್ಣರಾವ್, ಗೋಪಾಲ ಕೃಷ್ಣ ಅಡಿಗ ಹೀಗೆ ಹಲವು ಸಾಹಿತಿಗಳೊಂದಿಗೆ ತನ್ನ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸುತ್ತಾ ಬಂದಂತ ಧೀಮಂತ ವ್ಯಕ್ತಿಯಾಗಿದ್ದರು.
ಬಡಗಿನ ಹಾರಾಡಿ ಮತ್ತು ಮಟಪಾಡಿ ತಿಟ್ಟಿನ ಹಿರಿಯ ಕಲಾವಿದರ ಅನನ್ಯತೆಯ ಬಗ್ಗೆ ಸೋದಾರಣವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದರು. ಕೂರಾಡಿಯಲ್ಲಿ ‘ಸಂಸ್ಕೃತಿ ಸಂಘ’ವನ್ನು ಕಟ್ಟಿ ಗ್ರಾಮೀಣ ಭಾಗಕ್ಕೆ ನಾಡಿನ ಶ್ರೇಷ್ಠ ಸಾಹಿತಿಗಳನ್ನು ಕರೆಸಿಕೊಂಡು ಅವರ ವಿಚಾರಗಳನ್ನು ಜನರಿಗೆ ತಲುಪಿಸುತ್ತಾ ಕನ್ನಡದ ಸೇವೆಯನ್ನು ನಿರಂತರ ನಡೆಸಿಕೊಂಡು ಬಂದಿದ್ದರು. ತಾಳಮದ್ದಲೆಯ ಅರ್ಥಧಾರಿಯಾಗಿ ಕಲಾ ಸೇವೆಗೈದ ಇವರನ್ನುಯಕ್ಷಗಾನ ಕಲಾರಂಗ, ಅಂಬಲಪಾಡಿ ಯಕ್ಷಗಾನ ಸಂಘವೂ ಸೇರಿದಂತೆ ಹಲವಾರು ಸಂಸ್ಥೆಗಳು ಗೌರವಿಸಿದ್ದವು. ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಕೂರಾಡಿಯವರು ಅಗಲಿದ್ದಾರೆ.ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾರ್ಥಿಸಿದ್ದಾರೆ.
ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 46ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಆಗಸ್ಟ್ 9, 2021ರಂದು ಸಭೆ ನಡೆಸಿ ಎಂ. ಗಂಗಾಧರ್ ರಾವ್ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. 2021-22ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು.
ಉಪಾಧ್ಯಕ್ಷರು : ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕಾರ್ಯದರ್ಶಿ: ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳು : ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕೋಶಾಧಿಕಾರಿ : ಮನೋಹರ ಕೆ., ಸದಸ್ಯರು : ಕೆ. ಗಣೇಶ್ ರಾವ್, ತಲ್ಲೂರು ಶಿವರಾಮ ಶೆಟ್ಟಿ, ಬಿ. ನಾರಾಯಣ, ಪ್ರೊ. ಕೆ. ಸದಾಶಿವ ರಾವ್, ಪ್ರೊ. ಎಂ. ಎಲ್. ಸಾಮಗ, ಎಸ್. ಗಣರಾಜ್ ಭಟ್, ಬಿ. ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಎಚ್. ಎನ್. ವೆಂಕಟೇಶ್, ವಿಜಯ್ ಕುಮಾರ್ ಮುದ್ರಾಡಿ, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ವಿದ್ಯಾಪ್ರಸಾದ್, ಅಶೋಕ್ ಎಂ, ದಿನೇಶ್ ಪಿ. ಪೂಜಾರಿ, ರಾಜೇಶ್ ನಾವಡ, ಮಂಜುನಾಥ ಹೆಬ್ಬಾರ್.
ಆಹ್ವಾನಿತರು : ಕೆ. ಗೋಪಾಲ, ರಮೇಶ್ ರಾವ್, ಗಣೇಶ್ ಬ್ರಹ್ಮಾವರ, ಪೃಥ್ವಿರಾಜ್ ಕವತ್ತಾರ್, ಕೆ. ಆನಂದ ಶೆಟ್ಟಿ, ನಾಗರಾಜ ಹೆಗಡೆ, ರಾಜೀವಿ, ಕೆ.ಎಸ್ ಸುಬ್ರಹ್ಮಣ್ಯ ಬಾಸ್ರಿ, ಸಂತೋಷ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಭಟ್ ಪುತ್ತೂರು, ಡಾ. ಶೈಲಜಾ, ಕಿಶೋರ್. ಸಿ. ಉದ್ಯಾವರ, ಪ್ರಸಾದ್ ರಾವ್ ಪುತ್ತೂರು, ಸುದರ್ಶನ ಬಾಯರಿ, ಗಣೇಶ್ ರಾವ್ ಎಲ್ಲೂರು, ರಮಾನಾಥ ಶ್ಯಾನುಭಾಗ, ರವಿನಂದನ್ ಎಸ್.ಟಿ, ವಿಪುಲ್ ಪ್ರಭು.
ಕಲಿಯುವಿಕೆ ಎಂಬ ಕ್ರಿಯೆಯು ನಿರಂತರವಾಗಿ ಸಾಗುತ್ತದೆ. ಅದು ಮುಗಿಯಿತು ಎಂದು ಹೇಳುವ ಹಾಗಿಲ್ಲ. ಬದುಕಿನುದ್ದಕ್ಕೂ ಕಲಿಯುತ್ತಾ ಇರುತ್ತೇವೆ. ಹಿರಿಯರು ಬದುಕಿನಲ್ಲಿ ತಾವು ಗಳಿಸಿದ ಅನುಭವಗಳನ್ನು ಕಿರಿಯರಿಗೆ ಧಾರೆಯೆರೆದು ಅವರಿಗೆ ಮಾರ್ಗದರ್ಶಕರಾಗುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲೂ ಹೀಗೊಂದು ಕೌಟುಂಬಿಕ ವಾತಾವರಣವು ಸದಾ ಇದ್ದರೆ ಅದೆಷ್ಟು ಸೊಗಸು! ಕಿರಿಯರು ಹಿರಿಯರನ್ನು ಗೌರವಿಸಿ ಅವರ ಅನುಭವಗಳನ್ನು ಪಡೆದುಕೊಳ್ಳುವುದು. ಹಿರಿಯರು ಕಿರಿಯರಿಗೆ ಪ್ರೀತಿಯಿಂದ ಹೇಳಿಕೊಡುವುದು. ಇದು ನಮ್ಮ ಭಾರತೀಯ ಸಂಸ್ಕೃತಿ. ಎಲ್ಲಾ ಕಡೆಗಳಲ್ಲಿಯೂ ಈ ಶ್ರೇಷ್ಠ ವ್ಯವಸ್ಥೆಯು ಸದಾ ಇರಲೆಂದು ನಾವು ಆಶಿಸೋಣ.
ಯಕ್ಷಗಾನ ಕ್ಷೇತ್ರದಲ್ಲಿ ಈಗ ವ್ಯವಸಾಯ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ನಿಡ್ಲೆ ಶ್ರೀ ಉಮೇಶ ಹೆಬ್ಬಾರರೂ ಒಬ್ಬರು. ಇವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲ, ನಿರ್ವಹಿಸಿದ ಕಲಾವಿದರಿವರು. ನಿಡ್ಲೆ ಉಮೇಶ ಹೆಬ್ಬಾರರ ಮೂಲ ಮನೆ ಕಡಬ ಸಮೀಪದ ಹೊಸಮಠ. ಶ್ರೀ ಪದ್ಮನಾಭ ಹೆಬ್ಬಾರ್ ಮತ್ತು ಶ್ರೀಮತಿ ಯಮುನಾ ಬಾಯಿ ದಂಪತಿಗಳ ಮಗನಾಗಿ 1955 ನವಂಬರ್ 1ರಂದು ಜನನ. ಶ್ರೀ ಪದ್ಮನಾಭ ಹೆಬ್ಬಾರ್ ಮತ್ತು ಶ್ರೀಮತಿ ಯಮುನಾ ಬಾಯಿ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು) ನಿಡ್ಲೆ ಉಮೇಶ ಹೆಬ್ಬಾರರು ಪದ್ಮನಾಭ ಹೆಬ್ಬಾರ್ ದಂಪತಿಗಳ ಮಕ್ಕಳಲ್ಲಿ 5ನೇಯವರು. ಪದ್ಮನಾಭ ಹೆಬ್ಬಾರರು ಕೃಷಿಕರೂ, ಪುರೋಹಿತರೂ, ಯಕ್ಷಗಾನ ಕಲಾವಿದರೂ ಆಗಿದ್ದರು. ಹಿಮ್ಮೇಳ ಮುಮ್ಮೇಳಗಳ ಜ್ಞಾನವನ್ನು ಹೊಂದಿದ್ದರು.
ಇವರು ನಾರಾವಿ ಸಮೀಪದ ಈದು ಎಂಬಲ್ಲಿ ವಾಸವಾಗಿದ್ದರು. ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಅನೇಕ ಕಲಿಕಾಸಕ್ತರಿಗೆ ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳ ವಿದ್ಯೆಯನ್ನು ಕಲಿಸಿದ್ದರು. ಉಮೇಶ ಹೆಬ್ಬಾರರಿಗೆ ಕಲೆಯು ರಕ್ತಗತವಾಗಿಯೇ ಇತ್ತು. ಓದಿದ್ದು ಹತ್ತನೇ ತರಗತಿ ವರೆಗೆ. ನಾರಾವಿ ಪ್ರಾಢಶಾಲೆಯಲ್ಲಿ. ಇವರು ಪುರಾಣ ಪ್ರಪಂಚದತ್ತ ಆಕರ್ಷಿತರಾಗಲು ಕನ್ನಡ ಪಂಡಿತರಾದ ಶ್ರೀ ಬಾಬು ಶೆಟ್ಟರು ಕಾರಣರು. ಪುರಾಣದಲ್ಲಿ ಬರುವ ಎಲ್ಲಾ ಪಾತ್ರಗಳ ಬಗೆಗೂ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಅವರು ವಿವರಿಸುತ್ತಿದ್ದರಂತೆ. ಹರಿಶ್ಚಂದ್ರ, ಸೀತೆ, ಶ್ರೀರಾಮ, ಲಕ್ಷ್ಮಣ, ನಳ, ದಮಯಂತಿ, ದ್ರೌಪದಿ ಮೊದಲಾದ ಪಾತ್ರಗಳ ಬಗ್ಗೆ ಕುತೂಹಲ ಹುಟ್ಟಿಕೊಂಡಿತ್ತು. ಪುರಾಣ ಪುಣ್ಯ ಪುರುಷರು ಶ್ರೀ ಬಾಬು ಶೆಟ್ಟರ ನಿರೂಪಣೆಯಿಂದ ಉಮೇಶ ಹೆಬ್ಬಾರರ ಮನದಲ್ಲಿ ಬಂದು ನೆಲೆಸುವಂತಾಗಿತ್ತು.
ಕಾರಣಾಂತರಗಳಿಂದ ಓದು ಮುಂದುವರಿಸಲಾಗಲಿಲ್ಲ. ಯಕ್ಷಗಾನಾಸಕ್ತರಾಗಿ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಬಯಕೆ ಉಂಟಾಗಿತ್ತು. ಇಡಗುಂಜಿ ಮೇಳದ ಪ್ರದರ್ಶನ. ಕೆರೆಮನೆ ಶ್ರೀ ಗಜಾನನ ಹೆಗಡೆ ಅವರ ಸ್ತ್ರೀ ವೇಷದ ಅಭಿನಯಕ್ಕೆ ಉಮೇಶ ಹೆಬ್ಬಾರರು ಆಕರ್ಷಿತರಾಗಿದ್ದರು. (ಅಂಬೆ ಪಾತ್ರ) ಎಳವೆಯಲ್ಲಿ ಶೇಣಿ, ಸಾಮಗ, ವಿಟ್ಲ ಜೋಶಿ, ತೆಕ್ಕಟ್ಟೆ, ಪೆರುವೋಡಿ, ಕೊಳ್ಯೂರು, ಮೂಡಬಿದಿರೆ ಮಾಧವ ಶೆಟ್ಟರು, ಬೋಳಾರ ನಾರಾಯಣ ಶೆಟ್ಟಿ, ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಗೋವಿಂದ ಭಟ್, ಕ್ರಿಶ್ಚನ್ ಬಾಬು ಮೊದಾಲಾದವರು ಉಮೇಶ ಹೆಬ್ಬಾರರ ಪಾಲಿಗೆ ಹೀರೋಗಳಾಗಿದ್ದರು.
ನಿಡ್ಲೆ ಉಮೇಶ ಹೆಬ್ಬಾರರು ಕಲಾವಿದನಾಗಬೇಕೆಂಬ ಬಯಕೆಯಿಂದ ನಾಟ್ಯ ಕಲಿಯುವ ಮನ ಮಾಡಿದ್ದರು. 1974ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಸೇರಿದ್ದರು. ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸ. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಕೇಂದ್ರದಲ್ಲಿ ಕಲಿಯುತ್ತಿರುವಾಗಲೇ ಅಳಿಕೆ ಶಾಲೆಯಲ್ಲಿ ನಡೆದ ಪ್ರದರ್ಶನ. ಪ್ರಸಂಗ ವಾಲಿ ವಧೆ. ಕೇದಗಡಿ ಗುಡ್ಡಪ್ಪ ಗೌಡರ ವಾಲಿ. ಉಮೇಶ ಹೆಬ್ಬಾರರಿಗೆ ತಾರೆ ಪಾತ್ರವನ್ನು ಮಾಡುವ ಅವಕಾಶ ಸಿಕ್ಕಿತ್ತು. ಅದೇ ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಆರಂಭ. (1974ರಲ್ಲಿ) ಪೂರ್ವ ರಂಗದಲ್ಲಿ ಮುಖ್ಯ ಸ್ತ್ರೀ ವೇಷದಿಂದ ಆರಂಭ.
ಇರಾ ಭಾಗವತರು, ನೆಡ್ಲೆ ನರಸಿಂಹ ಭಟ್ಟರ ಜತೆ ತಿರುಗಾಟ. ಅವರಿಬ್ಬರ ನಿರ್ದೇಶನದಲ್ಲಿ ಬೆಳೆದರು. ರಂಗದ ಪರಿಪೂರ್ಣ ಮಾಹಿತಿ ನೀಡಿದವರು ನೆಡ್ಲೆ ನರಸಿಂಹ ಭಟ್ಟರು. ತಾಳ, ಪಾತ್ರದ ಸ್ವಭಾವ, ಅರ್ಥಗಾರಿಕೆಯ ಬಗ್ಗೆ ಅವರಿಂದ ಕಲಿತಿದ್ದರು. ನಾಲ್ಕು ತಿರುಗಾಟ ಕಳೆದಾಗ ಎರಡನೇ ಪುಂಡು ವೇಷ ಮತ್ತು ಸ್ತ್ರೀ ವೇಷಗಳನ್ನು ಮಾಡುತ್ತಿದ್ದರು. ಆಗ ಎಸ್. ಸಂಜೀವ ಅವರು ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದರು. ಅನಿವಾರ್ಯವಾದರೆ ಮೊದಲನೇ ಪುಂಡುವೇಷ ಮತ್ತು ಸ್ತ್ರೀ ವೇಷಗಳನ್ನು ಮಾಡುತ್ತಿದ್ದರು. ಐದು ತಿರುಗಾಟ ಕಳೆದಾಗ ಶ್ರೀದೇವಿ ಪಾತ್ರವನ್ನು ಮಾಡುವ ಅವಕಾಶವು ಸಿಕ್ಕಿತ್ತು. ಬಳಿಕ ಪ್ರಧಾನ ಸ್ತ್ರೀ ಪಾತ್ರಗಳ ನಿರ್ವಹಣೆ. ಅಕ್ಷಯಾಂಬರ ವಿಲಾಸದ ದ್ರೌಪದಿ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ನೀಡಿತ್ತು. ಆಗ ಶ್ರೀ ಗಂಗಯ್ಯ ಶೆಟ್ರು ದುಶ್ಶಾಸನನ ಪಾತ್ರ ಮಾಡುತ್ತಿದ್ದರು.
ಪ್ರಮೀಳೆ, ಶಶಿಪ್ರಭೆ ಮೊದಲಾದ ಕಸೆ ಸ್ತ್ರೀ ವೇಷಗಳೂ ಉಮೇಶ ಹೆಬ್ಬಾರರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿತ್ತು. ಈ ವೇಷಗಳಲ್ಲಿ ಹೆಬ್ಬಾರರ ನಿರ್ವಹಣೆಯು ಮೇಳದ ಯಜಮಾನರಾದ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಮೆಚ್ಚುಗೆಗೂ ಪಾತ್ರವಾಯಿತು. ಇವರ ಕಲಾ ಸೇವೆಗೆ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಮತ್ತು ಕಟೀಲು ಶ್ರೀ ಕೃಷ್ಣ ಆಸ್ರಣ್ಣರ ಆಶೀರ್ವಾದವೂ ಇತ್ತು. ಹತ್ತು ತಿರುಗಾಟ ಒಂದನೇ ಮೇಳದಲ್ಲಿ. ಆಗ ಕೊಗ್ಗು ಹಾಸ್ಯಗಾರರ ಒಡನಾಟವೂ ದೊರಕಿತ್ತು. ಇರಾ ಭಾಗವತರು, ಬಲಿಪರು ನೆಡ್ಲೆ, ಸರಪಾಡಿ ಶಂಕರನಾರಾಯಣ ಕಾರಂತ ಮೊದಲಾದವರ ಸಹಕಾರವೂ ಸಿಕ್ಕಿತ್ತು. ಬಳಿಕ 3ನೇ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಅನಿವಾರ್ಯವಾಗಿ ತುಳು ಪ್ರಸಂಗಗಳಲ್ಲಿ ವೇಷಗಾರಿಕೆ. ಅರುವ ನಾರಾಯಣ ಶೆಟ್ಟರ ನೇತೃತ್ವದ ಅಳದಂಗಡಿ ಶ್ರೀ ಸೋಮನಾಥೇಶ್ವರ ಮೇಳದಲ್ಲಿ. ಮೂರು ವರ್ಷ ಟೆಂಟ್ ಮೇಳದಲ್ಲಿ ತಿರುಗಾಟ. ಬಳಿಕ ಕೌಟುಂಬಿಕ ಹೊಣೆಯನ್ನು ವಹಿಸಬೇಕಾಗಿ ಬಂದುದರಿಂದ ಶ್ರೀ ಉಮೇಶ ಹೆಬ್ಬಾರರು ಮೇಳದ ತಿರುಗಾಟ ನಿಲ್ಲಿಸಿದ್ದರು.
1985ರಲ್ಲಿ ವಿವಾಹ. ಶ್ರೀ ನಿಡ್ಲೆ ಉಮೇಶ ಹೆಬ್ಬಾರರ ಪತ್ನಿ ಶ್ರೀಮತಿ ಅಪರ್ಣಾ ಹೆಬ್ಬಾರ್. 1985ರಿಂದ ನಿಡ್ಲೆಯಲ್ಲಿ ವಾಸ್ತವ್ಯ. ಮೇಳದ ತಿರುಗಾಟದಿಂದ ದೂರವಾದರೂ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು. ಮೊಂಟೆತ್ತಡ್ಕ ಮೇಳದಲ್ಲಿ 22 ವರ್ಷಗಳ ಕಾಲ ವೇಷ ಮಾಡಿದ್ದರು. ಶ್ರೀ ನಾರಾಯಣ ಕಮ್ತಿ ಅವರ ಬಪ್ಪನಾಡು ಮೇಳದಲ್ಲಿ 1 ವರ್ಷ. ಕಟೀಲು 5ನೇ ಮೇಳ ಆರಂಭವಾದಾಗ ಮತ್ತೆ ಕಟೀಲು ಮೇಳಕ್ಕೆ ಸೇರಿ ವ್ಯವಸಾಯ ಮಾಡುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಲುವತ್ತೇಳು ವರ್ಷಗಳ ಅನುಭವಿ ಶ್ರೀ ಉಮೇಶ ಹೆಬ್ಬಾರರು. ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ ಹೀಗೆ ಯಾವ ವೇಷ ನೀಡಿದರೂ ಸಮರ್ಪಕವಾಗಿ ನಿರ್ವಹಿಸಬಲ್ಲ ಕಲಾವಿದರಿವರು. ಇವರ ನಾಟ್ಯವು ಬಲು ಸೊಗಸು. ಪಾತ್ರೋಚಿತವಾದ ಮಾತು ಮತ್ತು ನಾಟ್ಯಗಳಿಂದ ಅಭಿನಯಿಸುತ್ತಾರೆ. ಇನ್ನೂ ಮೂರು ನಾಲ್ಕು ವರ್ಷಗಳ ತಿರುಗಾಟ ಕಟೀಲು ಮೇಳದಲ್ಲಿ ಮಾಡಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದಾರೆ. ನಿಡ್ಲೆ ಶ್ರೀ ಉಮೇಶ ಹೆಬ್ಬಾರರೊಂದಿಗೆ ಸಹಕಲಾವಿದನಾಗಿ ವ್ಯವಸಾಯ ಮಾಡುವ ಅವಕಾಶವು ನನಗೆ ಸಿಕ್ಕಿದೆ. ಸರಳ, ಸಜ್ಜನ ಸಹೃದಯೀ ಕಲಾವಿದರು. ಕೋಪವೆಂಬುದು ಇವರ ಬಳಿ ಬಾರದು. ನಗು ನಗುತ್ತಾ ಎಲ್ಲರೊಡನೆ ಬೆರೆಯುತ್ತಾರೆ.
ಶ್ರೀ ಉಮೇಶ ಹೆಬ್ಬಾರ್ ಮತ್ತು ಅಪರ್ಣಾ ಹೆಬ್ಬಾರ್ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರಿ ಸುಹಾಸಿನಿ. ವಿವಾಹಿತೆ. ಗೃಹಣಿ. ದ್ವಿತೀಯ ಪುತ್ರಿ ವಿಧೀಶಾ ವಿವಾಹಿತೆ. ಗೃಹಣಿ. ಪುತ್ರ ಶಿವರಂಜನ್. ಕೃಷಿಕ. ನಿಡ್ಲೆ ಉಮೇಶ ಹೆಬ್ಬಾರರು ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಮತ್ತು ಉಡುಪಿ ಯಕ್ಷಗಾನ ಕಲಾ ರಂಗದ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶ್ರೀಯುತರಿಂದ ಇನ್ನಷ್ಟು ವರ್ಷಗಳ ಕಲಾ ಸೇವೆಯು ನಡೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ನಿಡ್ಲೆ ಶ್ರೀ ಉಮೇಶ ಹೆಬ್ಬಾರರಿಗೆ ಅನುಗ್ರಹಿಸಲಿ ಎಂಬ ಹಾರೈಕೆಗಳು.