Saturday, March 14, 2026
Home Blog Page 305

ಮದ್ದಲೆಯ ಮಾಂತ್ರಿಕ ಶಂಕರ ಭಾಗವತ ಯಲ್ಲಾಪುರರವರಿಗೆ ಕಾಳಿಂಗ ನಾವಡ ಪ್ರಶಸ್ತಿ

ಯಕ್ಷಗಾನದ ಕಂಚಿನ ಕಂಠ, ಭಾಗವತಿಕೆಯ ಮೇರು ಶಕ್ತಿ ಕಾಳಿಂಗ ನಾವಡರು. 1991ರಲ್ಲೇ, ತಮ್ಮ 32ನೇ ವಯಸ್ಸಿನಲ್ಲಿ ಮರೆಯಾದ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಕರಾವಳಿ ಗಾನ ಕೋಗಿಲೆ ಖ್ಯಾತಿಯ ಕಾಳಿಂಗ ನಾವಡರ ಹಾಗೂ ಅವರ ಸಿರಿ ಕಂಠದ ನೆನೆಪಿನಲ್ಲಿ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ಕಳೆದ 11 ವರ್ಷಗಳಿಂದ “ಕಾಳಿಂಗ ನಾವಡ ಪ್ರಶಸ್ತಿ”ಯನ್ನು ಯಕ್ಷಲೋಕದ ಹಿಮ್ಮೇಳದ ಗಣ್ಯರಿಗೆ ಕೊಡುತ್ತಾ ಬಂದಿದೆ.


ಕಲಾಕದಂಬ ಸಂಸ್ಥೆಯು ಅಂಬರಿಷ್ ಭಟ್, ದೇವರಾಜ ಕರಬ, ವಿಶ್ವನಾಥ ಉರಾಳ್, ಮಮತಾ ಆರ್ ಕೆ, ಮುರಳೀಧರ ನಾವಡರ ಉಪಸ್ಥಿತಿಯ ಸಭೆಯಲ್ಲಿ 2021ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಅನುಭವಿ, ಮದ್ದಳೆಯ ಮಾಂತ್ರಿಕ ಕ್ರಿಯಾಶೀಲ ಕಲಾವಿದ, ಮಾರ್ಗದರ್ಶಕರಾದ ಶಂಕರ ಭಾಗವತ ಯಲ್ಲಾಪುರರನ್ನು ಆಯ್ಕೆ ಮಾಡಿದೆಯೆಂದು ಕಲಾಕದಂಬ ಸಂಸ್ಥೆಯ ನಿರ್ದೇಶಕರಾದ ಡಾ ರಾಧಾಕೃಷ್ಣ ಉರಾಳರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಳಿಂಗ ನಾವಡ


ಅಕ್ಟೋಬರ್ 31ರ ಭಾನುವಾರ ಸಂಜೆ ಬೆಂಗಳೂರಿನ ಬಸವನಗುಡಿಯ ಗವಿಪುರಂ ನಲ್ಲಿರುವ ಉದಯಭಾನು ಕಲಾಮಂದಿರದಲ್ಲಿ ಈ ಒಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಶಸ್ತಿಯು ಸನ್ಮಾನ ಪತ್ರ, ಫಲಕ, ಬೆಳ್ಳಿತಟ್ಟೆ ಸೇರಿದಂತೆ ಹತ್ತು ಸಾವಿರ ರೂಪಾಯಿ ನಗದನ್ನೊಳಗೊಂಡಿರುತ್ತದೆ.


ಹೆಚ್ಚಿನ ವಿವರಗಳಿಗೆ ಮುರಳೀಧರ ನಾವಡ 9886066732, ವಿಶ್ವನಾಥ ಉರಾಳ 9845663646, ಡಾ. ರಾಧಾಕೃಷ್ಣ ಉರಾಳ 9448510582 ಅವರನ್ನು ಸಂಪರ್ಕಿಸಬಹುದು.

ಕಲಾಕದಂಬ ಆರ್ಟ್ ಸೆಂಟರ್, ಕಲಾಗುಡಿ, 858, ವಿಶ್ವೇಶ್ವರಯ್ಯ 4ನೇ ಬ್ಲಾಕು, ಬೆಂ. 560110

ದಿ. ಸುಬ್ರಾಯ ಬಳ್ಳುಳ್ಳಾಯರಿಗೆ ಯಕ್ಷತೂಣೀರ ಸಂಪ್ರತಿಷ್ಠಾನದ ನುಡಿನಮನ

ಇತ್ತೀಚಿಗೆ ನಿಧನರಾದ ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಆಡಳಿತ ಮೊಕ್ತೇಸರ ದಿ ಯನ್ ಸುಬ್ರಾಯ ಬಳ್ಳುಳ್ಳಾಯ ಅವರಿಗೆ ನುಡಿ ನಮನ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ಜರಗಿತು. ಸುಬ್ರಹ್ಮಣ್ಯ ಭಟ್ ಅಡ್ಕ  ಅಧ್ಯಕ್ಷ ಸ್ಥಾನ ವಹಿಸಿ ನುಡಿನಮನ ಮಾತುಗಳನ್ನಾಡಿದರು. ಶಂಕರನಾರಾಯಣ ಹೊಳ್ಳ, ರಾಘವನ್ ಬೆಳ್ಳಿಪ್ಪಾಡಿ, ಗೋವಿಂದಬಳ್ಳಮೂಲೆ ಇವರು ಸಾಂದರ್ಭಿಕ ನುಡಿಗಳನ್ನಾಡಿದರು.  


ವೃಂದ ಬಳ್ಳಮೂಲೆ ಪ್ರಾರ್ಥನೆ ಹಾಡಿ  ಡಾ. ಶಿವಕುಮಾರ್ ಅಡ್ಕ ಸ್ವಾಗತಿಸಿ ಸೀತಾರಾಮ ಬಳ್ಳುಳ್ಳಾಯ ಅವರು ಧನ್ಯವಾದವಿತ್ತರು. . ಮುರಳಿಕೃಷ್ಣ ಸ್ಕಂದ ಕಾರ್ಯಕ್ರಮ ಸಂಯೋಜನೆ ಮಾಡಿದರು. ಕೃಷ್ಣ ಭಟ್ ಅಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸದಸ್ಯರಾದ ರಾಘವೇಂದ್ರ ಉಡುಪುಮೂಲೆ, ಅನುಪಮಾ ರಾಘವೇಂದ್ರ, ವಿಜಯಲಕ್ಷ್ಮಿ ಮುರಳಿಕೃಷ್ಣ ಸ್ಕಂದ, ಹರಿಕೃಷ್ಣ ಪೆರಡಂಜಿ, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ ಉಪಸ್ಥಿತರಿದ್ದರು.

ಪ್ರಸಿದ್ಧ ಯಕ್ಷಗಾನ ಕಲಾವಿದ ಸಂತೋಷ್ ಕುಮಾರ್ ಮಾನ್ಯ ಅವರಿಗೆ ಯಕ್ಷತೂಣೀರ ಸಂಪ್ರತಿಷ್ಠಾನದ ಗೌರವಾರ್ಪಣೆ

ಯಕ್ಷಗಾನ ಕಲಾವಿದರಾಗಿದ್ದ ದಿವಂಗತ ಈಶ್ವರ ಭಟ್ ಬಳ್ಳಮೂಲೆ ಅವರ ಸ್ಮರಣಾರ್ಥ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸಂತೋಷ ಮಾನ್ಯ ಅವರನ್ನು ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.  ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಜರಗಿದ  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಬ್ರಹ್ಮಣ್ಯ ಅಡ್ಕ ಅವರು ಶಾಲು ಹೊದೆಸಿ ಗೌರವಿಸಿದರು.

ಕ್ಷೇತ್ರದ ವ್ಯವಸ್ಥಾಪಕರಾದ ಸೀತಾರಾಮ ಬಳ್ಳುಳ್ಳಾಯರು ಫಲಾರ್ಪಣೆ ಮಾಡಿ ರಾಘವೇಂದ್ರ ಉಡುಪುಮೂಲೆ ಅವರು ಗೌರವ ಫಲಕವನ್ನೂ ಮುರಳಿಕೃಷ್ಣ ಸ್ಕಂದ ಅವರು ಸ್ಮರಣಿಕೆಯನ್ನೂ ನೀಡಿ ಪುರಸ್ಕರಿಸಿದರು. ಕೃಷ್ಣ ಭಟ್ ಅಡ್ಕ ಮಾನ್ಯ ಅವರನ್ನು ಅಭಿನಂದಿಸಿ ಮಾತನಾಡಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ ಡಾ. ಶಿವಕುಮಾರ್ ಅಡ್ಕ ವಂದನಾರ್ಪಣೆ ಮಾಡಿದರು. 


ಮುಂದೆ ಸಂತೋಷ್ ಮಾನ್ಯ ಹಾಗೂ ಬಳಗದವರಿಂದ  ಸಂಕಯ್ಯ ಭಾಗವತ ವಿರಚಿತ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟವು ಸಂಪನ್ನವಾಯಿತು. 

ಕಲಾವಿದರಾಗಿ ಹಿಮ್ಮೇಳದಲ್ಲಿ ತಲ್ಪಣಾಜೆ ವೆಂಕಟ್ರಮಣ ಭಟ್, ಲಕ್ಷ್ಮೀನಾರಾಯಣ ಅಡೂರು, ಶ್ರೀಧರ ಪಡ್ರೆ, ಲೋಕೇಶ್ ಮುಳಿಯಾರು ಹಾಗೂ ಮುಮ್ಮೇಳದಲ್ಲಿ  ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅರುಣ್ ಕೋಟ್ಯಾನ್, ಸಂತೋಷಕುಮಾರ್ ಮಾನ್ಯ , ಶಿವಾನಂದ ಪೆರ್ಲ, ಮಹೇಶ್ ಮಣಿಯಾಣಿ, ಶಬರೀಷ ಮಾನ್ಯ, ಸುಕೇಶ ಏಳ್ಕಾನ, ಬಾಲಚಂದ್ರ ಬಂಟ್ರಡ್ಕ, ಯತಿಕಾ ಬದಿಯಡ್ಕ ಇವರು ಭಾಗವಹಿಸಿದರು. ರಾಕೇಶ್ ಗೋಳಿಯಡ್ಕ ಹಾಗೂ ಬಳಗದವರು ವಸ್ತ್ರಾಲಂಕಾರದಲ್ಲಿ ಸಹಕರಿಸಿದರು.

ಯಕ್ಷಪದ – 3

ಇದೊಂದು ಪದಬಂಧ. ಯಕ್ಷಗಾನದ ಜ್ಞಾನವನ್ನು ವೃದ್ಧಿಸಲು ಸಹಕಾರಿ. ಅದಕ್ಕಾಗಿ ಈ ಸಣ್ಣ ಪ್ರಯತ್ನ. ಈ ಪದಬಂಧವನ್ನು ತುಂಬಿಸಿ ಅಥವಾ ಸರಿಯಾದ ಉತ್ತರವನ್ನು ಶಬ್ದಗಳ ರೂಪದಲ್ಲಿ ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ ಎರಡು ದಿನಗಳೊಳಗೆ ಕಳುಹಿಸಿ. ಸರಿಯಾದ ಉತ್ತರವನ್ನು ಬರೆದ ಎಲ್ಲರ ಹೆಸರುಗಳನ್ನೂ ನಮ್ಮ ಮುಂದಿನ ಪದಬಂಧ ಲೇಖನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸಾಪ್ ಸಂಖ್ಯೆ 9535618305

ಯಕ್ಷಪದ – 2 ರ ಸರಿ ಉತ್ತರ ನೀಡಿದವರು:

1. ಶ್ರೀ ಶಾಮ ಪ್ರಸಾದ್ ಪಟ್ಟಾಜೆ, ತುಮಕೂರು 

2. ಶ್ರೀಮತಿ ಜ್ಯೋತಿ ಕೆ. ಭಟ್, ಅರಂಬೂರು, ಸುಳ್ಯ 

3. ಶ್ರೀಮತಿ ಜ್ಯೋತಿ ಎನ್. ಜಿ. ಹೊಸಹಿತ್ಲು 

4. ಶ್ರೀನಿವಾಸ ಭಟ್ ಕುಂಞಿಹಿತ್ತಿಲು, ಬೆಳ್ಳಾರೆ 

5. ಸುಬ್ರಹ್ಮಣ್ಯ ಪ್ರಸಾದ ಪುತ್ರೋಟಿ, ಬೆಂಗಳೂರು 

6. ಕೇಶವ ಪ್ರಶಾಂತ ಬರೆಕೆರೆ, ಕಾವು 

7. ನಾರಾಯಣ ಬಿಲ್ಲಾರಮೂಲೆ 

ಯಕ್ಷಪದ – 3

ಎಡದಿಂದ ಬಲಕ್ಕೆ: 1. ಖ್ಯಾತ ತಾಳಮದ್ದಳೆ ಅರ್ಥಧಾರಿ ವೆಂಕಪ್ಪ ಶೆಟ್ಟರ ಬಿರುದು. (4)

3. ಬಡಗಿನ ಯಕ್ಷಗಾನ ಪ್ರಿಯರ ಕಣ್ಮಣಿ. ಅವರ ಬದುಕು ಅಕಾಲ ಅಂತ್ಯವನ್ನು ಕಂಡಿದ್ದು ಕಣ್ಣಿನಲ್ಲಿ ನೀರು ತಂದಿದೆ. (4)

5. ಯಕ್ಷಗಾನದಲ್ಲಿ ತರುಣಿಯ ತುಂಬಿದೆದೆಯನ್ನು ಇದಕ್ಕೆ ಹೋಲಿಸುತ್ತಾರೆ. ರಾವಣನ ತಮ್ಮನ ಹೆಸರಿನ ಪೂರ್ವಾರ್ಧವೂ ಹೌದು. (2)

6. ಬಕಾಸುರನನ್ನು ಕೊಲ್ಲಲು ಭೀಮನು ಇದರಲ್ಲಿ ಪ್ರಯಾಣಿಸಿದನು. (2)

7. ಬಾಲ ಪ್ರಹ್ಲಾದನ ಮುಖವನ್ನು ಕಂಡಾಗ ಕಯಾದುವಿಗೆ ಉಂಟಾಗುತ್ತಿದ್ದ ಸಂತೋಷ (ಬಲದಿಂದ ಎಡಕ್ಕೆ) – (3)

10. __________ ಋಷಿಮಂಡಲದ ಮಧ್ಯದಿ, ಮೆರೆವ ಯಜ್ನೇಶ್ವರನ ಪ್ರಭೆಯಲಿ (3)

11. ಈ ಎರಡೂ ಪಂಗಡದವರು ಸೇರಿ ಸಮುದ್ರವನ್ನು ಮಥಿಸಿದರು. (5)

14. ವಿದ್ಯಾ ದದಾತಿ ________ (ಬಲದಿಂದ ಎಡಕ್ಕೆ) (3)

15. ಮೇಳವೊಂದರ ಹೆಸರು. ದೇವಿಯ ಇನ್ನೊಂದು ಹೆಸರಾದರೂ ಭಗವಂತನಂತೆ ಕಾಣಿಸುತ್ತಿದೆ. (4)

17. ಬಣ್ಣದ ವೇಷಗಳಲ್ಲಿ ಇದೂ ಒಂದು ವಿಧ. ಕೇರಳದ ಗಾಳಿಯಂತೆ ಕಾಣಿಸುತ್ತಿದೆ (ಬಲದಿಂದ ಎಡಕ್ಕೆ) (2)

19. ಇವನ ಕಾರಣದಿಂದ ಕೃಷ್ಣಾರ್ಜುನರು ಪರಸ್ಪರ ಯುದ್ಧ ಮಾಡುವಂತಾಯಿತು. (2)

21. ಉಡುಪಿಯ ಈ ಸಂಸ್ಥೆ ಯಕ್ಷಗಾನಕ್ಕೋಸ್ಕರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆ. (8)


 ಮೇಲಿನಿಂದ ಕೆಳಕ್ಕೆ: 1.  ನಮ್ಮ ರಾಜ್ಯದ ಯಕ್ಷಗಾನ ಮೇಳ (4)

2. ವಿಷ್ಣುವಿನ ವಾಸಸ್ಥಳಕ್ಕೆ ಭೂಮಿಯನ್ನು ಜೋಡಿಸಿದರೆ ಹೀಗೆ ಹೇಳಬಹುದು. ದ್ವಾರಕೆಗೂ ಹೀಗೆ ಕರೆಯಬಹುದೇ? (4)

3. ಯಕ್ಷಗಾನ ಮೇಳಗಳ ಯಜಮಾನಿಕೆಯನ್ನು ಕೈಗೊಂಡ ಪ್ರಸಿದ್ಧ ಮನೆತನ. (3)

4. ಇದನ್ನು ಭಾಗವತರು ಹೆಚ್ಚು ಮಾಡಿದರೆ ವೇಷಧಾರಿಗಳಿಗೆ ಅಭಿನಯಿಸಲು ಕಷ್ಟವಾಗುತ್ತದೆ ಎಂಬ ವಾದವಿದೆ. – ಕೆಳಗಿನಿಂದ ಮೇಲಕ್ಕೆ (4)

7. ವಿಕಾರ ರೂಪದಲ್ಲಿದ್ದರೂ “ತನ್ನ ಪತಿಯೇ ಈತ” ಎಂದು ಬಾಹುಕನನ್ನು ಗುರುತು ಹಿಡಿದವಳು! (4)

8. ಕೃಷ್ಣನು ಸಂಬಂಧಿ ಎಂದು ನೋಡಲಿಲ್ಲ. ತನ್ನ ________ ನನ್ನೇ ಕೊಂದನು. (2)

9. ರಾಕ್ಷಸರಿಗೆ ತಪಸ್ಸು ಮಾಡುವುದಕ್ಕೆ ಪ್ರಶಾಂತವಾದ ಈ ಪ್ರದೇಶವೇ ಆಗಬೇಕು. (2)

11. _________ ಕೈಯ ಕಪ್ಪವ ಕೊಂಬಗೆ (5)

12. ಹರಿ ಕಳುಹಿಸಿದ ಓಲೆಯನ್ನು ಕೊಂಡುಹೋಗಿ ಕಾಮ್ಯಕಾವನಕ್ಕೆ ತಲುಪಿಸಿದ್ದು ಈತನೇ (3)

13. ಯಕ್ಷಗಾನದ ಹೊಸ ಪ್ರಯೋಗ. ಇದರಲ್ಲಿ ಹಿಮ್ಮೇಳಕ್ಕೆ ಮಾತ್ರ ಅವಕಾಶ – ಕೆಳಗಿನಿಂದ ಮೇಲಕ್ಕೆ (5)

16. “ಬ್ರಹ್ಮದೇವನನ್ನು ಮೆಚ್ಚಿಸಿ ಬೇಕುಬೇಕಾದ ______ಗಳನ್ನು ಪಡೆದೆ” (2)

18. ಬಡಗು ತಿಟ್ಟಿನ ದಂತಕತೆಯಾದ ಭಾಗವತ. ಅಕಾಲ ಮೃತ್ಯುವಶರಾದವರು. ಇವರ ಹೆಸರು ಸರ್ಪವೊಂದನ್ನು ನೆನಪಿಸುತ್ತಿದೆ. (3)

20. ಯಕ್ಷಗಾನ ಮೇಳದ ತಿರುಗಾಟ ನಡೆಸಿದ ಹಿಮ್ಮೇಳದ ಪತಿ ಪತ್ನಿ ಜೋಡಿಯಲ್ಲಿ ಪತ್ನಿಯಾದ ಈಕೆ ತನ್ನ ಸುಶ್ರಾವ್ಯ ಕಂಠಕ್ಕೆ ಪ್ರಸಿದ್ಧರು. (2)

ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ಯಕ್ಷಗಾನ ಕಲಾರಂಗವು ಪ್ರತಿ ವರ್ಷ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಗೆ ಹಾಗೂ ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಅನುಕ್ರಮವಾಗಿ ಹಿರಿಯ ಅರ್ಥಧಾರಿಗಳಾದ ವಾಸುದೇವ ರಾವ್ ಸುರತ್ಕಲ್ ಹಾಗೂ ಉಮಾಕಾಂತ ಭಟ್ಟ ಕೆರೇಕೈ ಇವರಿಗೆ ನೀಡಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟಂಬರ್ 26, ಭಾನುವಾರ ಸಂಜೆ 4 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಮಾಜಿ ಧರ್ಮದರ್ಶಿಗಳಾದ ಕೃಷ್ಣಪ್ರಸಾದ ಅಡ್ಯಂತಾಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪೂರ್ವದಲ್ಲಿ ಅಪರಾಹ್ನ 1.45ಕ್ಕೆ ಕರ್ಗಲ್ಲು ವಿಶ್ವೇಶ್ವರ ಭಟ್ಟರ ನಾಟ್ಯ ಪ್ರಾತ್ಯಕ್ಷಿಕೆ ಬಳಿಕ 3ರಿಂದ 4ರ ವರೆಗೆ ತಾಳಮದ್ದಲೆ ‘ಕನಸ ಕಂಡನು ಕಂಸ’ ಪ್ರಸ್ತುತಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳು C4U ಚಾನಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರಾಣ, ತುಳು ಪ್ರಸಂಗಗಳ ಅನುಭವಿ ಶ್ರೀ ಗುಡ್ಡಪ್ಪ ಸುವರ್ಣ ಪಂಜ

ಶ್ರೀ ಗುಡ್ಡಪ್ಪ ಸುವರ್ಣ ಪಂಜ ಇವರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ಲೇಖಕರೂ ಆಗಿ ಸಾಹಿತ್ಯಸೇವೆಯನ್ನು ಕಲಾಸೇವೆಯ ಜತೆ ಮಾಡಿಕೊಂಡು ಬಂದವರು. ಹಲವು ಭಕ್ತಿ ಗೀತೆಗಳನ್ನೂ ಹದಿನೈದು ಪ್ರಸಂಗಗಳನ್ನೂ ರಚಿಸಿರುತ್ತಾರೆ. ಅಲ್ಲದೆ ಸುಮಾರು ಇಪ್ಪತ್ತೈದು ಪ್ರಸಂಗಗಳಿಗೆ ಪದ್ಯ ರಚನೆಯನ್ನೂ ಮಾಡಿರುತ್ತಾರೆ.

ಕಳೆದ ನಲುವತ್ತು ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಕಲಾ ಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಹಿರಿಯ ಅನುಭವಿ ಕಲಾವಿದ ಶ್ರೀ ಗುಡ್ಡಪ್ಪ ಸುವರ್ಣರ ಹುಟ್ಟೂರು ಸುಳ್ಯ ತಾಲೂಕಿನ ಪಂಜ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸಮೀಪದ ಊರು ಪಂಜ. 1967 ಜನವರಿ 27ರಂದು ಶ್ರೀ ಚೋಮಣ್ಣ ಪೂಜಾರಿ ಮತ್ತು ಶ್ರೀಮತಿ ವಾಸಮ್ಮ ದಂಪತಿಗಳ ಪುತ್ರನಾಗಿ ಜನನ. ಗುಡ್ಡಪ್ಪ ಸುವರ್ಣರ ತಾಯಿಯ ತಂದೆ ಶ್ರೀ ಮಂಜಪ್ಪ ಪೂಜಾರಿ ಅವರು ಯಕ್ಷಗಾನ ಕಲಾವಿದರಾಗಿದ್ದರು.

ಶ್ರೀ ಗುಡ್ಡಪ್ಪ ಸುವರ್ಣರಿಗೆ ಬಾಲ್ಯದಲ್ಲೇ ಯಕ್ಷಗಾನ ಆಸಕ್ತಿ ಇತ್ತು. ಪ್ರದರ್ಶನಗಳನ್ನು ಬಿಡದೆ ನೋಡಿ ಆನಂದಿಸುತ್ತಿದ್ದರು. ಓದಿದ್ದು ಐದನೇ ತರಗತಿ ವರೆಗೆ. ಪಂಜ ಸಮೀಪದ ಪಂಬೆತ್ತಾಡಿ ಶಾಲೆಯಲ್ಲಿ. ಕಲಾವಿದನಾಗಬೇಕೆಂಬ ಆಸೆಯಿಂದ ಯಕ್ಷಗಾನ ನಾಟ್ಯ ಕಲಿಯಲು ತೀರ್ಮಾನಿಸಿದ್ದರು. ಕಲ್ಮಡ್ಕ ಸಂಗಮ ಕಲಾ ಸಂಘದ ರೂವಾರಿಗಳಾದ ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಪ್ರೋತ್ಸಾಹದಲ್ಲಿ ತೆಂಕುತಿಟ್ಟಿನ ನಾಟ್ಯಾಚಾರ್ಯ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ.

ಬಳಿಕ ಸಂಗಮ ಕಲಾ ಸಂಘದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಕಾರ್ತವೀರ್ಯಾರ್ಜುನ ಕಾಳಗದ ಭಾರ್ಗವನಾಗಿ ರಂಗ ಪ್ರವೇಶ. ಸುದರ್ಶನ ವಿಜಯ ಪ್ರಸಂಗದ ಸುದರ್ಶನ ಶ್ರೀ ಗುಡ್ಡಪ್ಪ ಸುವರ್ಣರು ನಿರ್ವಹಿಸಿದ ಎರಡನೇ ವೇಷ. ಪ್ರೋತ್ಸಾಹ ನೀಡಿ ಬೆಳೆಯಲು ಅವಕಾಶ ನೀಡಿದ ಕೆರೆಕೋಡಿ ಪಂಡಿತ ಶ್ರೀ ಗಣಪತಿ ಭಟ್ಟರು ನನ್ನ ಪಾಲಿಗೆ ದೇವರೆಂದು ಗುಡ್ಡಪ್ಪ ಸುವರ್ಣರು ಅವರನ್ನು ಗೌರವಿಸುತ್ತಾರೆ. ನಾಟ್ಯ ಕಲಿಸಿ ವೇಷ ಮಾಡಲು ಅವಕಾಶ ನೀಡಿ ಆಶೀರ್ವದಿಸಿದ ಗುರು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರ ಮೇಲೆ ಪ್ರೀತಿ, ಗೌರವ ಶ್ರೀ ಗುಡ್ಡಪ್ಪ ಸುವರ್ಣರಿಗೆ. 

ಪಂಜ ಶ್ರೀ ಗುಡ್ಡಪ್ಪ ಸುವರ್ಣರು ಮೊದಲು ವ್ಯವಸಾಯ ಮಾಡಿದ್ದು ಶ್ರೀ ಕೆ.ಟಿ ಗುಜರನ್ ಸಂಚಾಲಕತ್ವದ ತಲಕಳ ಮೇಳದಲ್ಲಿ. ಬಾಲ ಕಲಾವಿದನಾಗಿ ಸೇರ್ಪಡೆ. ಪುಂಡುವೇಷಧಾರಿಯಾಗಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರ ನಿರ್ವಹಣೆ. ಹತ್ತು ವರ್ಷಗಳ ಕಾಲ ತಲಕಳ ಮೇಳದಲ್ಲಿ ತಿರುಗಾಟ. ಬಳಿಕ ನಾಲ್ಕು ವರ್ಷ ಕರ್ನೂರು ಶ್ರೀ ಕೊರಗಪ್ಪ ರೈಗಳ ನಾಯಕತ್ವದ ಕದ್ರಿ ಮೇಳದಲ್ಲಿ ಪುಂಡುವೇಷದ ಜತೆ ಕಿರೀಟ ವೇಷಧಾರಿಯಾಗಿ ಕಲಾಸೇವೆ.

ಮತ್ತೆ ಶ್ರೀ ದಿವಾಕರ ಹೆಗ್ಡೆ ಪುತ್ತೂರು ಇವರ ನೇತೃತ್ವದ ಕೊಲ್ಲೂರು ಮೇಳದಲ್ಲಿ ಎರಡು ವರ್ಷ ಕಲಾಸೇವೆ. ನಂತರ ಮಂಗಳೂರು ಅಡ್ಯಾರು ಮಹಾಲಿಂಗೇಶ್ವರ ಮೇಳದಲ್ಲಿ ಒಂದು ವರ್ಷ ತಿರುಗಾಟ. ಇದರ ಸಂಚಾಲಕರಾಗಿದ್ದವರು ಕರ್ನೂರು ರಾಮಯ್ಯ ರೈಗಳು. ಬಳಿಕ ಎರಡು ವರ್ಷ ಶ್ರೀ ರಾಧಾಕೃಷ್ಣ ನಾವಡರ ನೇತೃತ್ವದ ಮಧೂರು ಮೇಳದಲ್ಲಿ ವ್ಯವಸಾಯ. ಬಳಿಕ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ಮೂರು ವರ್ಷ ಕಲಾಸೇವೆ.

ಬಳಿಕ ತಿರುಗಾಟವನ್ನು ನಿಲ್ಲಿಸಿ ಶ್ರೀ ಗುಡ್ಡಪ್ಪ ಸುವರ್ಣರು ಬೆಂಗಳೂರಿಗೆ ತೆರಳಿದ್ದರು. ಪ್ರಸಿದ್ಧ ಗಾಯಕರಾದ ಶ್ರೀ ಶಶಿಧರ ಕೋಟೆ ಅವರಿಂದ ಅಭ್ಯಾಸ. ಅವರೊಂದಿಗೆ ಮತ್ತು ಸುರೇಖಾ ಸುಬ್ರಹ್ಮಣ್ಯ ಅವರ ಜತೆ ಹಾಡಿ ಅನುಭವವನ್ನೂ ಗಳಿಸಿಕೊಂಡಿದ್ದರು. ಬೆಂಗಳೂರಿನಿಂದ ಊರಿಗೆ ಮರಳಿದ ಶ್ರೀ ಗುಡ್ಡಪ್ಪ ಸುವರ್ಣರು ಶ್ರೀ ಶ್ರೀ ನಿರಂಜನ ಸ್ವಾಮೀಜಿಯವರ ಆಶೀರ್ವಾದದಿಂದ ಐದು ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ್ದರು.

ಕಳೆದ ಹನ್ನೆರಡು ವರ್ಷಗಳಿಂದ ಶ್ರೀ ವಿನೋದ ಕುಮಾರ್ ಬಜಪೆ ಅವರ ನೇತೃತ್ವದ ಬಪ್ಪನಾಡು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ತಿರುಗಾಟದಲ್ಲಿ ಹೆಚ್ಚಿನ ಎಲ್ಲಾ ಪುಂಡು ವೇಷಗಳನ್ನೂ ನಿರ್ವಹಿಸಿ ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪುರಾಣ ಮತ್ತು ತುಳು ಪ್ರಸಂಗಗಳ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದ ಅನುಭವಿ ಇವರು.

ಕೋಟಿ ಚೆನ್ನಯ ಪ್ರಸಂಗದ ಚೆನ್ನಯ, ಬನತ್ತ ಬಂಗಾರ್ ಪ್ರಸಂಗದ ಕಂಧರ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿ ಮತ್ತು ತೃಪ್ತಿಯನ್ನು ತಂದುಕೊಟ್ಟವು. ಕಲಾಸೇವೆಯ ಜತೆ ಭಕ್ತಿಗೀತೆ, ಯಕ್ಷಗಾನ ಪ್ರಸಂಗ ಮತ್ತು ಪದ್ಯಗಳ ರಚನೆಯಲ್ಲೂ ತೊಡಗಿಸಿಕೊಂಡ ಸಾಹಸಿ ಶ್ರೀ ಗುಡ್ಡಪ್ಪ ಸುವರ್ಣರು.

ಇವರು ಸಂಸಾರಿಕವಾಗಿಯೂ ವೃತ್ತಿ ಬದುಕಿನಲ್ಲೂ ತೃಪ್ತರು. ಶ್ರೀ ಗುಡ್ಡಪ್ಪ ಸುವರ್ಣರ ಪತ್ನಿ ಶ್ರೀಮತಿ ಗುಲಾಬಿ. ಇವರಿಗೆ ಮೂವರು ಪುತ್ರಿಯರು. ಹಿರಿಯ ಪುತ್ರಿ ಶ್ರೀಮತಿ ರಚನಾ. ಇವರು ಗೃಹಣಿ. ಇವರ ಪತಿ ಶ್ರೀ ಹರೀಶ್ ಕೃಷಿಕರು. ಹರೀಶ್, ರಚನಾ ದಂಪತಿಗಳ ಪುತ್ರಿ ಕು| ತನ್ವಿ. ಶ್ರೀ ಗುಡ್ಡಪ್ಪ ಸುವರ್ಣರ ದ್ವಿತೀಯ ಪುತ್ರಿ ಕು| ರಕ್ಷಿತಾ. ಈಕೆ ಪದವೀಧರೆ. ತೃತೀಯ ಪುತ್ರಿ ಕು|ರಶ್ಮಿ. ಈಕೆ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ.

ಪಂಜ ಶ್ರೀ ಗುಡ್ಡಪ್ಪ ಸುವರ್ಣರು ಯಕ್ಷಗಾನ ವೇಷಭೂಷಣ ತಯಾರಿಕಾ ಕಲೆಯನ್ನೂ ಬಲ್ಲವರು. ಕಲ್ಮಡ್ಕ ಸಂಗಮ ಕಲಾಸಂಘದಲ್ಲಿ ಸಕ್ರಿಯರಾಗಿರುವಾಗಲೇ ಈ ವಿಚಾರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಸಂಘದ ನೇತಾರ ಕಲ್ಮಡ್ಕ ಶ್ರೀ ಮಹಾಬಲ ಭಟ್ಟರ ಸಹಕಾರ, ಪ್ರೋತ್ಸಾಹವೂ ಈ ವಿಚಾರದಲ್ಲಿ ದೊರಕಿತ್ತು. ಪ್ರಸ್ತುತ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಪ್ರೋತ್ಸಾಹದಲ್ಲಿ ಕಟೀಲು ಮೇಳಗಳ ವೇಷಭೂಷಣಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಪಂಜ ಶ್ರೀ ಗುಡ್ಡಪ್ಪ ಸುವರ್ಣರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶವು ಸಿಗಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಹುಟ್ಟಿದ ಹಬ್ಬ ಹೀಗೂ ಆಚರಿಸಬಹುದು !

ನಮ್ಮ ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳು ಎತ್ತ ಸಾಗುತ್ತಿವೆ ಎಂದು ಯೋಚಿಸಿದಾಗ ಕೆಲವೊಮ್ಮೆ ಮನಸ್ಸಿಗೆ ತುಂಬಾ ಖೇದವೆನಿಸುತ್ತದೆ. ಮದುವೆಯ ನಿಶ್ಚಿತಾರ್ಥವೇ ಇರಲಿ ಅಥವಾ ಹುಟ್ಟಿದ ಹಬ್ಬವೇ ಇರಲಿ. ನಾವು ನಮ್ಮತನ ಮತ್ತು ನಮ್ಮ ಸನಾತನ ಹಿಂದೂ ಸಂಪ್ರದಾಯವನ್ನು ಮರೆತುಬಿಡುತ್ತೇವೆ. ಈಗ ಎಲ್ಲವೂ ಪಾಶ್ಚಾತ್ಯಮಯ. ನಿಶ್ಚಿತಾರ್ಥಕ್ಕೆ ವಧೂವರರು ಪರಸ್ಪರ ಉಂಗುರ ಬದಲಾಯಿಸಬೇಕು. ಅದೂ ಅಲ್ಲದೆ ಪ್ರಿ ವೆಡ್ಡಿಂಗ್ ಫೋಟೋಶೂಟ್, ವೀಡಿಯೊ ಶೂಟ್ ಬೇಕೇ ಬೇಕು. ಮದುವೆಯ ನಂತರದ ಶೃಂಗಾರ ಚೇಷ್ಟೆಗಳೆಲ್ಲಾ ಈ ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಬರಬೇಕು. ಹುಟ್ಟುಹಬ್ಬವಂತೂ ಈಗ ಸಂಪೂರ್ಣ ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿದೆ. 

ಆದರೆ ಇದಕ್ಕೆ ಅಪವಾದವೋ ಎಂಬಂತೆ ಇಂದೊಂದು ಹುಟ್ಟಿದ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡೆ. ನಿವೃತ್ತ ಭಾರತೀಯ ಆಡಳಿತ ಸೇವೆಯ ಅಧಿಕಾರಿ ತಿಂಗಳಾಡಿಯ ಶ್ರೀ ಪ್ರಮೋದ ಕುಮಾರ್ ರೈಯವರ ಮೊಮ್ಮಗನ ಹುಟ್ಟಿದ ಹಬ್ಬ. ಆದರೆ ಹುಟ್ಟಿದ ಹಬ್ಬವೆಂದು ಸಮಾರಂಭದ ಕೊನೆಯಲ್ಲಿ ಗೊತ್ತಾದದ್ದು. ಈ ರಹಸ್ಯವನ್ನು ಹೇಳದೆ ಕೊನೆಯವರೆಗೂ ಕಾಪಾಡಿಕೊಂಡು ಬಂದಿದ್ದರು. 

ಅವರ ಆಮಂತ್ರಣದ ಕರೆ ಬಂದಾಗ ಸಹಜವಾಗಿಯೇ ಯಾಕೆಂದು ಕೇಳಿದ್ದೆ. ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಸಾಹಿತ್ಯಸೇವೆಯಲ್ಲಿ  ನಿರತರಾಗಿರುವವರನ್ನು ಗೌರವಿಸುವ ಕಾರ್ಯಕ್ರಮವೆಂದು ಹೇಳಿದ್ದರು. ಸಂಜೆ ಏಳು ಘಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಾಹಿತಿಗಳು ಅಥವಾ ಸಾಹಿತ್ಯಪ್ರೇಮಿಗಳು, ಪುಸ್ತಕ ಪ್ರೇಮಿಗಳನ್ನು ಗೌರವಿಸಲಾಗಿತ್ತು. ಪ್ರತಿಯೋರ್ವರನ್ನೂ ಗೌರವಿಸುವಾಗ ಅವರ ವಿವರಗಳನ್ನು ಸ್ವತಃ ಪ್ರಮೋದ್ ಕುಮಾರ್ ರೈಯವರೇ ಹೇಳುತ್ತಿದ್ದರು.

ಇದೊಂದು ವಿಶಿಷ್ಟ ರೀತಿಯಲ್ಲಿ ಆಯೋಜಿಸಿದ ಸಮಾರಂಭ. ತಲೆಚಿಟ್ಟು ಹಿಡಿಸುವ ಸ್ವಾಗತ, ನಿರೂಪಣೆ, ಧನ್ಯವಾದಗಳಿಲ್ಲದೆ ಅಚ್ಚುಕಟ್ಟಾದ ಸೊಗಸಾದ ಕಾರ್ಯಕ್ರಮ. ಎಲ್ಲವನ್ನೂ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ಪ್ರಮೋದ್ ಕುಮಾರ್ ರೈಯವರೇ ನಿರ್ವಹಿಸಿದರು. ಸಾಹಿತ್ಯ ಕರ್ಮಿಗಳನ್ನು ಗೌರವಿಸುವಾಗ ನಾನೊಂದು ವಿಚಾರ ಗಮನಿಸಿದೆ. ವೇದಿಕೆಯ ಆಸನದ ಹಿಂಭಾಗದಲ್ಲಿ ಮೂರು ದಿನಪತ್ರಿಕೆಗಳನ್ನು ನೇತಾಡಿಸಿದ್ದರು. ಅದು ಇಂದಿನ ಪತ್ರಿಕೆಯೇ ಆಗಿರಬೇಕೆಂದು ಭಾವಿಸಿದೆ.

ಪ್ರಮೋದ್ ಕುಮಾರ್ ರೈಗಳ ಸಾಹಿತ್ಯ, ಪತ್ರಿಕಾ ಪ್ರೇಮದ ಬಗ್ಗೆ ಆಶ್ಚರ್ಯವಾಯಿತು. ಅದಕ್ಕಾಗಿಯೇ ಪತ್ರಿಕೆಗಳನ್ನು ಅಲ್ಲಿ ಹಾಕಿದ್ದಿರಬಹುದು ಎಂದು ತರ್ಕಿಸಿದೆ. ಆದರೆ ಕಾರ್ಯಕ್ರಮದ ಕೊನೆಯ ಹಂತದಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಪ್ರಮೋದ್ ಕುಮಾರ್ ರೈಗಳ ಸೂಚನೆಯಂತೆ ಆ ಹಳೆಯ ದಿನಪತ್ರಿಕೆಗಳನ್ನೂ ಅಲ್ಲಿಂದ ತೆಗೆಯಲಾಯಿತು! ಆಗ ಅಲ್ಲಿ ‘HAPPY BIRTHDAY’ ಎನ್ನುವ ಬರಹ ಗೋಚರಿಸಿತು.

ತಮ್ಮ ಮೊಮ್ಮಗನ ಜನ್ಮದಿನವನ್ನು ಈ ರೀತಿ ಸಾಹಿತಿ, ಸಾಹಿತ್ಯ ಪ್ರೇಮಿಗಳನ್ನು ಗೌರವಿಸಿ ಆಚರಿಸುವ ತಮ್ಮ ನಿರ್ಧಾರವನ್ನು ರೈಗಳು ಈ ರೀತಿ ಬಹಿರಂಗಪಡಿಸಿದರು. ಇಂತಹದೊಂದು ಅಪೂರ್ವ ಹಾಗೂ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಎಲ್ಲರಿಗೂ ಧನ್ಯತಾಭಾವ. ಇದೊಂದು  ಅವರ್ಣನೀಯ ಅನುಭವ. ಜನಮ ದಿನವನ್ನು ಹೀಗೂ ಆಚರಿಸಬಹುದಲ್ಲ ಎಂಬ ಉದ್ಘಾರ ನನ್ನ ಬಾಯಿಯಿಂದ ನನಗರಿವಿಲ್ಲದೆ ಹೊರಬಂತು. ಆಮೇಲೆ ಇನ್ನುಳಿದ ಅತಿಥಿ ಸತ್ಕಾರ ಕೂಟ ಇತ್ಯಾದಿಗಳು ಜರಗಿದುವು. ಕಾರ್ಯಕ್ರಮ ಮುಗಿದು ಮನೆಗೆ ತಲುಪುವ ವರೆಗೂ ಮನಸ್ಸು ಅದೇ ಗುಂಗಿನಲ್ಲಿ ವಿಹರಿಸುತ್ತಿತ್ತು. 

ಅನುಭವಿ ಪುಂಡುವೇಷಧಾರಿ – ಶ್ರೀ ರತ್ನಾಕರ ಹೆಗ್ಡೆ ಪುತ್ತೂರು

ತೆಂಕುತಿಟ್ಟು ಯಕ್ಷಗಾನದಲ್ಲಿ ಇಂದು ಅನೇಕ ಪುಂಡುವೇಷಧಾರಿಗಳು ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಪ್ರವೇಶ, ಗಿರಕಿ, ಹುಡಿನಾಟ್ಯ, ಯುದ್ಧದ ಕ್ರಮಗಳು, ಜಲಕೇಳಿ, ವನವಿಹಾರ, ಯುದ್ಧರೀತಿಗಳು ಮೊದಲಾದ ಸಂದರ್ಭಗಳಲ್ಲಿ ಅಭಿನಯಿಸುತ್ತಾ ಇವರು ಪ್ರೇಕ್ಷಕರ ಮನವನ್ನು ಬೇಗನೆ ಸೂರೆಗೊಳ್ಳುತ್ತಾರೆ. ಪ್ರೇಕ್ಷಕರ ಮನವನ್ನು ಗೆಲ್ಲಲು ಈ ವಿಭಾಗದಲ್ಲಿ ಅವಕಾಶಗಳು ಧಾರಾಳವಾಗಿ ದೊರೆಯುತ್ತವೆ. ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಅದು ಪಾತ್ರೋಚಿತವಾಗಿಯೇ ಇರಬೇಕೆಂಬ ಎಚ್ಚರಿಕೆಯು ಇದ್ದಾಗ ಪಾತ್ರದ ಜತೆ ಪಾತ್ರವನ್ನು ಧರಿಸಿದ ಕಲಾವಿದನೂ ಗೆಲ್ಲುತ್ತಾ ಸಾಗುತ್ತಾನೆ. ಮುಂದು ಅವನೊಬ್ಬ ಶ್ರೇಷ್ಠ ಪುಂಡು ವೇಷಧಾರಿಯೇ ಆಗುತ್ತಾನೆ. ಹೀಗೆ ಸಾಗಿ ಬಂದ ಪುಂಡು ವೇಷಧಾರಿಗಳಲ್ಲೊಬ್ಬರು ಪುತ್ತೂರು ಶ್ರೀ ರತ್ನಾಕರ ಹೆಗ್ಡೆ ಅವರು.

ಇವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ಶ್ರೀ ರತ್ನಾಕರ ಹೆಗ್ಡೆ ಅವರ ಮೂಲಮನೆ ಪುತ್ತೂರು ಸಮೀಪದ ಬಪ್ಪಳಿಗೆ. ಶ್ರೀ ಕರುಣಾಕರ ಹೆಗ್ಡೆ ಮತ್ತು ಶ್ರೀಮತಿ ಸುಲೋಚನಾ ದಂಪತಿಗಳ ಪುತ್ರನಾಗಿ ಮಂಗಳೂರಿನಲ್ಲಿ 1966, ಜೂನ್ 28ರಂದು ಜನನ. ಕರುಣಾಕರ ಹೆಗ್ಡೆ ಅವರ ಎಂಟು ಮಂದಿ ಮಕ್ಕಳಲ್ಲಿ (ಐದು ಗಂಡು ಮತ್ತು ಮೂರು ಹೆಣ್ಣು) ರತ್ನಾಕರ ಹೆಗ್ಡೆ ಕಿರಿಯವರು.

ಕರುಣಾಕರ ಹೆಗ್ಡೆ ಅವರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೂವತ್ತೈದು ವರ್ಷಗಳ ಸೇವೆ ಸಲ್ಲಿಸಿದವರು.(ಮಂಗಳೂರು). ಇವರು ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳನ್ನು ಕಲಿತು ಕಲಾವಿದರಾಗಿದ್ದರು. ರತ್ನಾಕರ ಹೆಗ್ಡೆ ಅವರು ಓದಿದ್ದು ಎಂಟನೆಯ ತರಗತಿಯ ವರೆಗೆ, ಮೂರನೆಯ ತರಗತಿಯ ವರೆಗೆ ಮಂಗಳೂರಿನಲ್ಲಿ. ಬಳಿಕ ಪುತ್ತೂರಿನ ಹಾರಾಡಿ ಶಾಲೆಯಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಇತ್ತು. ಖ್ಯಾತ ಕಲಾವಿದ ಕೀರ್ತಿಶೇಷ ಶ್ರೀ ಪುತ್ತೂರು ನಾರಾಯಣ ಹೆಗ್ಡೆ ಅವರು ಕುಂಟುಂಬಿಕರೇ ಆಗಿದ್ದರು.

ರತ್ನಾಕರ ಹೆಗ್ಡೆಯವರು ಐದನೆಯ ತರಗತಿಯ ವಿದ್ಯಾರ್ಥಿಯಾಗಿರುವಾಗ ಪುತ್ತೂರು ಶ್ರೀಧರ ಭಂಡಾರಿ ಅವರಿಂದ ಯಕ್ಷಗಾನ ನಾಟ್ಯ ಕಲಿತರು. ಪುತ್ತೂರಿನ ಹೆಗ್ಡೆ ಸಮಾಜದವರು ಪುತ್ತೂರು ನಾರಾಯಣ ಹೆಗ್ಡೆಯವರ ಅಳಿಯ ಶ್ರೀ ವಾಸುದೇವ ಹೆಗ್ಡೆ ಅವರ ನೇತೃತ್ವದಲ್ಲಿ ನಡೆಸಿದ ಪ್ರದರ್ಶನವಾದ ಗುರುದಕ್ಷಿಣೆ ಪ್ರಸಂಗದಲ್ಲಿ ರತ್ನಾಕರ ಹೆಗ್ಡೆ ಅವರು ಅರ್ಜುನನಾಗಿ ರಂಗ ಪ್ರವೇಶ ಮಾಡಿದರು. ಬಳಿಕ ಭಾರ್ಗವ, ಜಯಂತ, ಷಣ್ಮುಖ, ಲಕ್ಷ್ಮಣ, ಅತಿಕಾಯನ ಪಾತ್ರಗಳನ್ನು ಮಾಡಿದ್ದರು. 1980ರಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳಕ್ಕೆ ಸೇರಿ ಮೂರು ವರ್ಷಗಳ ತಿರುಗಾಟ ನಡೆಸಿದ್ದರು.

ಬಳಿಕ ಸುಂಕದಕಟ್ಟೆ ಮೇಳದಲ್ಲಿ ಪುಂಡುವೇಷಧಾರಿಯಾಗಿ 20 ವರ್ಷ ತಿರುಗಾಟ ನಡೆಸಿದರು. ಪುತ್ತೂರು ಮೇಳದಲ್ಲಿ ಒಂದು ವರ್ಷದ ತಿರುಗಾಟದ ನಂತರ ಹೆಚ್ಚಿನ ಕಲಿಕೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ಶ್ರೀ ಕೆ.ಗೋವಿಂದ ಭಟ್ ಮತ್ತು ಅಳಿಕೆ ಶ್ರೀ ರಾಮಯ್ಯ ರೈಗಳಿಂದ ತರಬೇತಿ ಪಡೆದಿದ್ದರು. ಸುಂಕದಕಟ್ಟೆ ಮೇಳದ ಬಳಿಕ ಕುಂಟಾರು ಮೇಳದಲ್ಲಿ ಒಂದು ವರ್ಷ, ಎಡನೀರು ಮೇಳದಲ್ಲಿ ಎರಡು ವರ್ಷ, ಬಪ್ಪನಾಡು ಮೇಳದಲ್ಲಿ ಒಂದು ವರ್ಷ ವ್ಯವಸಾಯ ಮಾಡಿದ್ದರು. ಈ ಸಂದರ್ಭಗಳಲ್ಲಿ ರತ್ನಾಕರ ಹೆಗ್ಡೆಯವರು ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪುಂಡು ವೇಷಧಾರಿಯಾಗಿ ರಂಜಿಸಿದ್ದರು.

ಕೂಡ್ಲು ನಾರಾಯಣ ಬಲ್ಯಾಯ ಅವರಿಂದಲೂ ತರಬೇತಿ ಪಡೆದಿದ್ದ ಇವರು ಕಳೆದ ಹನ್ನೊಂದು ವರ್ಷಗಳಿಂದ ಕಟೀಲು ಒಂದನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪೂರ್ವರಂಗದಲ್ಲಿ ಕೋಡಂಗಿ ವೇಷದಿಂದ ತೊಡಗಿ ಹಂತ ಹಂತವಾಗಿ ಬೆಳೆದು ಬಂದವರಿವರು. ವಿಷ್ಣು, ಶ್ರೀಕೃಷ್ಣ, ಚಂಡಮುಂಡರು, ಬಬ್ರುವಾಹನ, ಅಭಿಮನ್ಯು, ಭಾರ್ಗವ, ಶ್ವೇತಕುಮಾರ, ಅಶ್ವತ್ಥಾಮ, ಅಯ್ಯಪ್ಪ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯು ಜನಮೆಚ್ಚುಗೆಗೆ ಪಾತ್ರವಾಗಿದೆ. 

ಪುತ್ತೂರು ಶ್ರೀ ರತ್ನಾಕರ ಹೆಗ್ಡೆ ಅವರು ವೇಷ ಭೂಷಣ ತಯಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಧರ್ಮಸ್ಥಳದಲ್ಲಿ ಶ್ರೀ ಚಂದ್ರಶೇಖರ ಹೆಗ್ಡೆ ಮತ್ತು ಶ್ರೀ ಕಮಲಾಕ್ಷ ದೇವಾಡಿಗ ಅವರಿಂದ ಈ ಕಲೆಯನ್ನು ಅಭ್ಯಸಿಸಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಧರ್ಮಸ್ಥಳ ಮತ್ತು ಸುಂಕದಕಟ್ಟೆ ಮೇಳಗಳಿಗೆ ಬೇಕಾದ ವೇಷಭೂಷಣಗಳ ತಯಾರಿಯಲ್ಲಿ ಇವರೂ ಭಾಗವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳಗಳ ರಂಗ ಪ್ರಸಾಧನ ಕೆಲಸವನ್ನು ಮಾಡುತ್ತಿದ್ದಾರೆ.

ಪುತ್ತೂರು ರತ್ನಾಕರ ಹೆಗ್ಡೆ ಅವರ ಅಣ್ಣಂದಿರೂ ಕಲಾವಿದರಾಗಿ ಪ್ರಸಿದ್ದರು. ಹಿರಿಯ ಅಣ್ಣ ಶ್ರೀ ದಿವಾಕರ ಹೆಗ್ಡೆ ಅವರು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. ವೇಷಧಾರಿಯಾಗಿ ಯಕ್ಷಗಾನ ಮೇಳ ಮತ್ತು ಸಂಘಗಳನ್ನು ನಡೆಸಿದವರು. ಮತ್ತೊಬ್ಬ ಸಹೋದರ ಶ್ರೀ ತಿಲಕರಾಜ್ ಹೆಗ್ಡೆ ಅವರು ವೃತ್ತಿ ಕಲಾವಿದರು. ರತ್ನಾಕರ ಹೆಗ್ಡೆ ಅವರ ಪತ್ನಿ ಶ್ರೀಮತಿ ಯಶೋದ (1997ರಲ್ಲಿ ವಿವಾಹ). ಇವರಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಜೀವನ್ ರಾಜ್. ದ್ವಿತೀಯ ಪುತ್ರ ಶ್ರೀ ಭರತ್ ರಾಜ್. ಇಬ್ಬರೂ ವಿದ್ಯಾವಂತರಾಗಿ ಉದ್ಯೋಗಿಗಳಾಗಿದ್ದಾರೆ. ಪುತ್ತೂರು ರತ್ನಾಕರ ಹೆಗ್ಡೆ ಅವರು ಪ್ರಸ್ತುತ ಸುಂಕದಕಟ್ಟೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಇವರಿಗೆ ಅನುಗ್ರಹಿಸಲಿ. 

ಲೇಖಕ: ರವಿಶಂಕರ್ ವಳಕ್ಕುಂಜ 

 

ಕಾಂತಾವರ ಯಕ್ಷದೇಗುಲದಿಂದ ಕುಂಬ್ಳೆ ಸುಂದರರಾಯರಿಗೆ ಸನ್ಮಾನ

ಯಕ್ಷದೇಗುಲ ಕಾಂತಾವರ ರಿ. ಸಂಸ್ಥೆಯು ಕಳೆದ ಹತ್ತೊಂಬತ್ತು ವರ್ಷಗಳಿಂದ ಯಕ್ಷಗಾನದ ಆಟ ಕೂಟ , ಗಾನ ನಾಟ್ಯ ವೈಭವ , ಯಕ್ಷ ನಾಟ್ಯಶಿಕ್ಷಣ ಶಿಬಿರ ಹೀಗೆ ವಿವಿದ ಪ್ರಕಾರಗಳನ್ನು ಸಂಯೋಜನೆ ಮಾಡುತ್ತಾ ಬಂದಿದ್ದು ಪ್ರತಿ ವಾರ್ಷಿಕ ಸಮಾರಂಭಗಳಲ್ಲಿ ಯಕ್ಷಗಾನ ರಂಗದ ಸಾಧನಾ ಶೀಲ ಕಲಾವಿದರನ್ನು ಸನ್ಮಾನಿಸುತ್ತಾ ಬಂದಿದೆ.


ಅಂತೆಯೆ ಈಬಾರಿ ವಿಷೇಶವಾಗಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ  ಧರ್ಮಸ್ಥಳದ ಮೇಳದಲ್ಲಿ ಸುಮಾರು ವರ್ಷಗಳ ಕಾಲ ಕಲಾವಿದರಾಗಿ ಖ್ಯಾತವೆತ್ತ ,  ರಾಜಕೀಯ ನೇತಾರ ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಇವರನ್ನು ಯಕ್ಷದೇಗುಲ ಸಂಸ್ಥೆಯು ಅವರ ಸ್ವಗ್ರಹಲ್ಲಿ ಕಳೆದ ಮಂಗಳವಾರ ಸಂಸ್ಥೆಯ ಅದ್ಯಕ್ಷ ಬೆಳುವಾಯಿ ಶ್ರೀಪತಿರಾವ್ ರವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. , ಧರ್ಮರಾಜ ಕಂಬಳಿ ಕಾಂತಾವರ, ರಮೇಶ ಸೆಟ್ಟಗಾರ್, ದೇವಾನಂದ್ ಭಟ್ ಬೆಳುವಾಯಿ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ.ಹಾಗೂ ಮಧುಸೂದನ್ ಭಟ್ ಉಪಸ್ತಿತರಿದ್ದರು. 

ಯಕ್ಷಾಗಸದಲ್ಲಿ ಮಿಂಚಿ ಮರೆಯಾದ ಕಲಾತಾರೆ – ಕಾಂಚನ ಶ್ರೀ ಸಂಜೀವ ರೈ

ಅನುಪಮ ಕಲೆಯಾದ ಯಕ್ಷಗಾನದಲ್ಲಿ ಸಾಧನೆಯ ಮೂಲಕವೇ ಮಿಂಚಿ, ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿ ಅನೇಕ ಕಲಾವಿದರುಗಳು ಕೀರ್ತಿಶೇಷರಾದರು. ಪ್ರೇಕ್ಷಕರಿಗೆ ಅವರ ನೆನಪು ಸದಾ ಇರುತ್ತದೆ. ಅಂತಹ ಹಿರಿಯ ಶ್ರೇಷ್ಠ ಕಲಾವಿದರನ್ನೂ, ಅವರ ಪಾತ್ರ ನಿರ್ವಹಣೆಯನ್ನೂ ನೆನಪಿಸಿಕೊಂಡು ಕಲಾಭಿಮಾನಿಗಳು ಸಂತೋಷಪಡುತ್ತಾರೆ. ಯಕ್ಷಗಾನ ಕ್ಷೇತ್ರದಲ್ಲಿ ಸಾಧಕನಾಗಿ ಮೆರೆದು ಮರೆಯಾದ ಕಲಾವಿದರಲ್ಲಿ ಕಾಂಚನ ಶ್ರೀ ಸಂಜೀವ ರೈಗಳ ಹೆಸರು ಮೊದಲ ಸಾಲಿನಲ್ಲಿಯೇ ಇರುತ್ತದೆ. ಮರೆಯಲಾಗದ ಮರೆಯಬಾರದ ಮಹಾನುಭಾವರಿವರು. ಸದಾ ಅಧ್ಯಯನಶೀಲರಾಗಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸಮಾನವಾಗಿ ಮಿಂಚಿದ ಕಲಾವಿದರುಗಳಲ್ಲಿ ಇವರೂ ಒಬ್ಬರು.  ಕಾಂಚನ ಶ್ರೀ ಸಂಜೀವ ರೈಗಳು ಯಕ್ಷಗಾನ ಕ್ಷೇತ್ರದಲ್ಲಿ ಕಾಂಚನದಂತೆ ಹೊಳೆದು ಕಾಣಿಸಿಕೊಂಡವರು. 


ಕಾಂಚನ ಶ್ರೀ ಸಂಜೀವ ರೈಗಳ ಹುಟ್ಟೂರು ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ನಗ್ರಿಗುತ್ತು. ಶ್ರೀ ಮುಂಡಪ್ಪ ರೈ ಮತ್ತು ಶ್ರೀಮತಿ ಮುತ್ತಕ್ಕೆ ದಂಪತಿಗಳ ಪುತ್ರನಾಗಿ 1942ನೇ ಇಸವಿ ಆಗಸ್ಟ್ 24ರಂದು ಜನನ. ಶ್ರೀ ಮುಂಡಪ್ಪ ರೈಗಳು ಉತ್ತಮ ಕೃಷಿಕರು. ಮಾಣಿ ಸಮೀಪದ ಬಾರ್ದಿಲ, ಅಲ್ಲದೆ ಪೆಲತ್ತಿಮಾರು, ನಾಯ್ಲ ಎಂಬ ಸ್ಥಳಗಳಲ್ಲಿ ವಾಸವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಬಳಿಕ ಕಾಂಚನ ಸಮೀಪದ ಪಾತ್ರಮಾಡಿ ಎಂಬಲ್ಲಿ ವಾಸವಾಗಿದ್ದರು. ಇವರು ಕಲಾಸಕ್ತರಾಗಿದ್ದರು. 

ಕಾಂಚನ ಶ್ರೀ ಸಂಜೀವ ರೈಗಳು ಓದಿದ್ದು ಏಳನೆಯ ತರಗತಿ ವರೆಗೆ. ಗೋಳಿತಟ್ಟು ಮತ್ತು ಕಾಂಚನ ಶಾಲೆಗಳಲ್ಲಿ. ಅನಿವಾರ್ಯ ಕಾರಣಗಳಿಂದ ಓದು ಮುಂದುವರಿಸಲಾಗಿರಲಿಲ್ಲ. ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತರಾಗಿದ್ದರು. ಹಾಗಾಗಿ ಯಕ್ಷಗಾನ ಕಲಾವಿದನಾಗುವ ಮನಮಾಡಿದ್ದರು. ಖ್ಯಾತ ಕಲಾವಿದ ಮಾಣಂಗಾಯಿ ಶ್ರೀ ಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಇವರು ಕಾಂಚನದ ಸಮೀಪವೇ ವಾಸವಾಗಿದ್ದುದು ಯಕ್ಷಗಾನ ಕಲಾಸಕ್ತರಿಗೆ ಅನುಕೂಲವೇ ಆಗಿತ್ತು. ಹಿರಿಯ ಶ್ರೇಷ್ಠ ಕಲಾವಿದ ಶ್ರೀ ಶಿವರಾಮ ಜೋಗಿಯವರು ಕಾಂಚನ ಸಂಜೀವ ರೈಗಳ ಸಹಪಾಠಿಯಾಗಿದ್ದರು.

ಹೆಜ್ಜೆಗಾರಿಕೆ ಕಲಿತು  ಕಾಂಚನ ಶ್ರೀ ಸಂಜೀವ ರೈಗಳು ತನ್ನ ಹತ್ತೊಂಭತ್ತನೆಯ ವರ್ಷದಲ್ಲಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ನೇತೃತ್ವದ ಆದಿಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಸಣ್ಣ ಪುಟ್ಟ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದು ಪಕ್ವರಾದರು. ಯಕ್ಷಗಾನ ಕ್ಷೇತ್ರದಲ್ಲೇ ಇವರನ್ನು ಮುಂದುವರಿಯಲು ಪ್ರೇರೇಪಿಸಿದವರು ಶ್ರೀ ಮಾಣಂಗಾಯಿ ಕೃಷ್ಣ ಭಟ್ ಮತ್ತು ಸಂಗೀತ ವಿದ್ವಾಂಸರಾದ ಕಾಂಚನ ಶ್ರೀ ವೆಂಕಟಸುಬ್ರಹ್ಮಣ್ಯ ಅಯ್ಯರ್. ಈ ಶ್ರೇಷ್ಠ ಕಲಾವಿದರೀರ್ವರೂ  ಕಾಂಚನ ಸಂಜೀವ ರೈಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದರು. ಸುಬ್ರಹ್ಮಣ್ಯ, ನಂದಾವರ, ವೇಣೂರು, ಸುರತ್ಕಲ್, ಕರ್ನಾಟಕ, ಕದ್ರಿ, ಪುತ್ತೂರು ಮೊದಲಾದ ಮೇಳಗಳಲ್ಲಿ ಸುಮಾರು 42 ತಿರುಗಾಟ. ಒಟ್ಟು ಐವತ್ತೊಂದು ವರ್ಷಗಳ ಕಾಲ  ಕಾಂಚನ ಸಂಜೀವ ರೈಗಳು ಯಕ್ಷಗಾನ ಕಲಾವಿದನಾಗಿ ಸೇವೆ ಸಲ್ಲಿಸಿದ್ದರು. 


ಕಾಂಚನ ಶ್ರೀ ಸಂಜೀವ ರೈಗಳು ಪುಂಡುವೇಷ ಮತ್ತು ಕಿರೀಟ ವೇಷಗಳಲ್ಲಿ  ಮಿಂಚಿದವರು. ಎಳವೆಯಲ್ಲಿ ವಿವಿಧ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ ಅನುಭವವುಳ್ಳವರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪರಿಣತಿಯನ್ನು ಹೊಂದಿದ ಶ್ರೇಷ್ಠ ಕಲಾವಿದರಿವರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಂದರವಾಗಿ, ಸರಳವಾಗಿ ಸಂಭಾಷಣೆಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಹೇಳುತ್ತಿದ್ದರು. ಪಾತ್ರ ನಿರ್ವಹಣೆಯಲ್ಲಿ ಭಾವನೆಗಳು ತುಂಬಿರುತ್ತಿದ್ದುವು. ಆಕರ್ಷಕವಾಗಿ, ಪ್ರಭಾವಪೂರ್ಣವಾಗಿ ಸಂಭಾಷಣೆಗಳನ್ನು ಹೇಳುತ್ತಿದ್ದರು.

ಪ್ರೇಕ್ಷಕರ ಮನಸೂರೆಗೊಳ್ಳುವ ಮಾತಿನ ಶೈಲಿಯು ಇವರಿಗೆ ಕಲಾಮಾತೆಯ ಅನುಗ್ರಹದಿಂದ ಒಲಿದಿತ್ತು. ಧರ್ಮಾಂಗದ, ವಿಷ್ಣು, ಮಾರ್ತಾಂಡತೇಜ, ಬಬ್ರುವಾಹನ, ಶ್ವೇತಕುಮಾರ, ಅಯ್ಯಪ್ಪ, ಶ್ರೀಕೃಷ್ಣ, ಕರ್ಣ, ಅತಿಕಾಯ, ಅರ್ಜುನ ಮೊದಲಾದವು  ಕಾಂಚನ ಸಂಜೀವ ರೈಗಳಿಗೆ ಹೆಸರು ಮತ್ತು ತೃಪ್ತಿಯನ್ನು ನೀಡಿದ ಪಾತ್ರಗಳು. ತುಳು ಪ್ರಸಂಗಗಳಲ್ಲಿ ಬುದ್ಧಿವಂತ, ದೇವಪೂಂಜ, ಕಾಂತಾಬಾರೆ, ಕೋಟಿ, ಚಂದನ, ಪದ್ಮತಾಮರೆ ಪ್ರಸಂಗದ ಮಂತ್ರಿ ಪದ್ಮ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಧನ ಸಂಪಾದನೆಗಿಂತಲೂ ಜನರ ಮೆಚ್ಚುಗೆ, ಪ್ರೀತಿ, ವಿಶ್ವಾಸಗಳನ್ನು ಯಕ್ಷಗಾನದಿಂದಾಗಿ ಪಡೆದಿದ್ದೇನೆ ಎಂದು ಆತ್ಮೀಯರಲ್ಲಿ ಹೇಳುತ್ತಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2009ನೇ ಸಾಲಿನ ಗೌರವ ಪ್ರಶಸ್ತಿಯನ್ನು  ಕಾಂಚನ ಶ್ರೀ ಸಂಜೀವ ರೈಗಳಿಗೆ ನೀಡಿ ಗೌರವಿಸಿದೆ. ಅಳಿಕೆ ರಾಮಯ್ಯ ರೈ ಪ್ರಶಸ್ತಿಯೂ ಇವರಿಗೆ ದೊರಕಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹವ್ಯಾಸಿ ಬಳಗ ಕದ್ರಿ ಈ ಸಂಸ್ಥೆಗಳಿಂದಲೂ ಸನ್ಮಾನಿತರಾಗಿದ್ದಾರೆ. ಮುಂಬೈ, ಮದರಾಸು, ಹೈದರಾಬಾದ್ ನಗರಗಳ ಪ್ರದರ್ಶನಗಳಲ್ಲಿ ಭಾಗಿಯಾಗಿ ಸನ್ಮಾನ, ಗೌರವಗಳನ್ನು ಪಡೆದಿರುತ್ತಾರೆ. ಇನ್ನೂ ಅನೇಕ ಕಡೆ ಸನ್ಮಾನಗಳನ್ನು ಪಡೆದ  ಕಾಂಚನ ಶ್ರೀ ಸಂಜೀವ ರೈಗಳು ಸರಕಾರವು ನೀಡುವ ಗೌರವಧನಕ್ಕೂ ಪಾತ್ರರಾಗಿದ್ದರು. ಇದು ಶ್ರೀಯುತರ ಪ್ರಾಮಾಣಿಕ ಕಲಾಸೇವೆಗೆ ಸಂದ ಗೌರವಗಳೇ ಹೌದು.  ಕಾಂಚನ ಶ್ರೀ ಸಂಜೀವ ರೈಗಳ ಜೀವಿತಾವಧಿ 1942 ಆಗಸ್ಟ್ 24 – 2013 ಮಾರ್ಚ್ 5. 


ಕಾಂಚನ ಶ್ರೀ ಸಂಜೀವ ರೈಗಳ ಪತ್ನಿ ಶ್ರೀಮತಿ ಶುಭವತಿ. ಇವರಿಗೆ ಐದು ಮಂದಿ ಮಕ್ಕಳು. (ಇಬ್ಬರು ಪುತ್ರಿಯರು ಮತ್ತು ಮೂವರು ಪುತ್ರರು) ಹಿರಿಯ ಪುತ್ರಿ ಶ್ರೀಮತಿ ಸರೋಜ. ಇವರ ಪತಿ ಶ್ರೀ ವಿಠಲ ಚೌಟರು. ಇವರು ಕೃಷಿಕರು. ಸಕಲೇಶಪುರದಲ್ಲಿ ವಾಸ್ತವ್ಯ. ಪ್ರಥಮ ಪುತ್ರ ಶ್ರೀ ರಘುನಾಥ ರೈ . ಇವರು ಪುತ್ತೂರು ನಗರಪಾಲಿಕೆಯ ಉದ್ಯೋಗಿಯಾಗಿದ್ದಾರೆ. ದ್ವಿತೀಯ ಪುತ್ರ ಶ್ರೀ ಬಾಲಚಂದ್ರ ರೈ ಕೃಷಿಕರು. ದ್ವಿತೀಯ ಪುತ್ರಿ ಶ್ರೀಮತಿ ಚಂದ್ರಾವತಿ ರೈ. ಇವರು ಹಲವು ವಿದ್ಯಾಸಂಸ್ಥೆಗಳಲ್ಲಿ ಉಪಾನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಶ್ರೀ ಸುಧಾಕರ ರೈ ಪಾಲ್ತಾಡಿ. ಇವರು ಕೃಷಿಕರು ಮತ್ತು ಫೋಟೋಗ್ರಾಫರ್. ಬೆಳ್ಳಾರೆಯ ಶೃಂಗಾರ್ ಸ್ಟುಡಿಯೋ ಮಾಲಕರು. ತೃತೀಯ ಪುತ್ರ ಶ್ರೀ ವಿಠಲ್ ರೈ. ಇವರು ಕೃಷಿಕರು ಮತ್ತು ಸ್ವಂತ ಉದ್ಯೋಗವನ್ನು ನಡೆಸುತ್ತಿದ್ದಾರೆ.  ಕಾಂಚನ ಶ್ರೀ ಸಂಜೀವ ರೈಗಳ ಮಕ್ಕಳು, ಮೊಮ್ಮಕ್ಕಳು, ಬಂಧುಗಳಿಗೆ ಕಲಾಮಾತೆಯ ಅನುಗ್ರಹವು ಸದಾ ದೊರೆಯಲಿ ಎಂಬ ಹಾರೈಕೆಗಳು. 

ಲೇಖನ: ರವಿಶಂಕರ್ ವಳಕ್ಕುಂಜ 


ಲೇಖನ: ರವಿಶಂಕರ್ ವಳಕ್ಕುಂಜ