Saturday, March 14, 2026
Home Blog Page 301

ಅಮೃತ ಮಹೋತ್ಸವ ಸಂಭ್ರಮದಲ್ಲಿ ಯಕ್ಷನಾರಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು

ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯರು ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನದಲ್ಲಿ ಮೆರೆದ ನಾರಿ. ವಿವಾಹದ ನಂತರ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಹಾಡುಗಾರಿಕೆಯನ್ನು ಕಲಿತು ರಂಗವೇರಿ ಭಾಗವತರಾಗಿ ರಂಜಿಸಿದವರು. ಗುರುವಾಗಿ ಕಲಿಕಾಸಕ್ತರಿಗೆ ತರಬೇತಿಯನ್ನು ನೀಡಿದವರು. ಪತಿಯ ಜತೆಯಾಗಿಯೇ ಇದ್ದು ಯಕ್ಷಗಾನ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದವರು.

ಸ್ತ್ರೀಯರಿಗೆ ಯಕ್ಷಗಾನವು ನಿಷೇಧವಿದ್ದ ದಿನಗಳಲ್ಲೇ ಕಲಾಸೇವೆಯನ್ನು ಮಾಡಿ, ಅದನ್ನೇ ಉಸಿರಾಗಿಸಿಕೊಂಡು ಬದುಕಿದವರು.  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಗಂಡುಕಲೆಯಾದ ಯಕ್ಷಗಾನದತ್ತ ಸ್ತ್ರೀಯರು ಒಲವನ್ನು ತೋರಿಸುವುದಕ್ಕೆ ಪ್ರೇರಕ ಶಕ್ತಿಯಾಗಿ ಒದಗಿದವರು ಎಂದು ಹೇಳಿದರೆ ತಪ್ಪಾಗಲಾರದು. ಯಕ್ಷಗಾನ ಹಾಡುಗಾರಿಕೆಯಲ್ಲಿ ರಂಜಿಸುವುದರ ಜತೆಗೆ ಕಲಿಕಾಸಕ್ತರಿಗೆ ತರಬೇತಿಯನ್ನೂ ನೀಡಿ ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲಾಭಿಮಾನಿಗಳಿಗೆ ಇವರು ಪ್ರೀತಿಯ ಲೀಲಕ್ಕ. ಶಿಷ್ಯಂದಿರಿಗೆ ವಾತ್ಸಲ್ಯಮಯಿಯಾದ ‘ಅಮ್ಮ’. ಶಿಷ್ಯರಿಗೆ ವಿದ್ಯೆಯೆಂಬ ಅಮೃತವನ್ನು ಉಣಿಸಿದ ಇವರಿಗೆ ಈಗ ಎಪ್ಪತ್ತೈದನೆಯ ವಯಸ್ಸು. ಅಮೃತ ಮಹೋತ್ಸವದ ಸಂಭ್ರಮ. 

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಜನಿಸಿದ್ದು ಕಾಸರಗೋಡು ತಾಲೂಕಿನ ಆದೂರು ಗ್ರಾಮದ ಕಡುಮನಡ್ಕದ ಕಡುಮನೆ ಹೆಬ್ಬಾರರ ಮನೆತನದಲ್ಲಿ. 1947 ಮೇ 23ರಂದು ಶ್ರೀ ಪುಂಡರೀಕಾಕ್ಷ ಹೆಬ್ಬಾರ್ ಮತ್ತು ಶ್ರೀಮತಿ ಮಹಾಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನನ. (ಮಧೂರು ಪಡುಕಕ್ಕೆಪ್ಪಾಡಿ ಅಜ್ಜನ ಮನೆಯಲ್ಲಿ ಜನನ) ತನ್ನ 5ನೆಯ ವಯಸ್ಸಿನಲ್ಲಿ ತಂದೆಯವರನ್ನು ಕಳೆದುಕೊಂಡ ಲೀಲಾವತಿ ಅವರು ತನ್ನ ಅಣ್ಣ ವಿಷ್ಣು ಹೆಬ್ಬಾರರ ಜತೆ ಸೋದರಮಾವ ಪಡುಕಕ್ಕೆಪ್ಪಾಡಿ ಶ್ರೀ ರಾಮಕೃಷ್ಣ ಕೇಕುಣ್ಣಾಯರ ಮನೆಯಲ್ಲಿ ಬೆಳೆದವರು. ಶ್ರೀ ಪುಂಡರೀಕಾಕ್ಷ ಹೆಬ್ಬಾರರು ಕಳ್ಯಾರು ದೇವಳದ ಅರ್ಚಕರಾಗಿದ್ದವರು.

ಲೀಲಾವತಿ ಅವರು ಶಾಲೆಗೆ ಹೋದವರಲ್ಲ. ತಂದೆಯಿಂದ ಮತ್ತು ಅಜ್ಜನ ಮನೆಯ ಹತ್ತಿರದ ಹೆಮ್ಮಕ್ಕಳಿಂದ ಅಕ್ಷರ ಕಲಿತಿದ್ದರು. ಅವರಿಂದ ಹಿಂದಿ ಭಾಷೆಯನ್ನೂ ಕಲಿತು ಹಿಂದಿ ವಿಶಾರದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಎಳವೆಯಲ್ಲಿ ಶಾಸ್ತ್ರೀಯ ಸಂಗೀತದ ಒಲವು ಮೂಡಿತ್ತು. ಮಧೂರು ಪದ್ಮನಾಭ ಸರಳಾಯರಿಂದ ಸಂಗೀತ ಕಲಿಕೆ. ಪದ್ಮನಾಭ ಸರಳಾಯರ ಅಣ್ಣ ರಂಗಯ್ಯ ಸರಳಾಯರಿಂದ ಪುತ್ರಿಯರಾದ ಕಾಮಾಕ್ಷಿ, ಸುಶೀಲ ಮತ್ತು ಶೈಲಜ ಎಂಬವರು ಸಂಗೀತ ಕಲಿಯುವಾಗ ಇವರ ಸಹಪಾಠಿಗಳಾಗಿದ್ದರು. ಇವರುಗಳು ಸಂಗೀತ ಕ್ಷೇತ್ರದಲ್ಲಿ ಮಧೂರು ಸಹೋದರಿಯರೆಂದೇ ಖ್ಯಾತರು.

ಏಳು ವರ್ಷಗಳ ಕಾಲ ಸಂಗೀತ ಅಭ್ಯಸಿಸಿ ಹಾಡಲು ಆರಂಭಿಸಿದರು. ಯಕ್ಷಗಾನಾಸಕ್ತಿಯೂ ಇತ್ತು. ಪ್ರತಿ ಮೇಳದ ಪ್ರದರ್ಶನಗಳು ಮಧೂರು ಕ್ಷೇತ್ರದಲ್ಲಿ ನಡೆಯುತ್ತಿದ್ದಾಗ ನೋಡಲು ಅವಕಾಶವಾಗಿತ್ತು. ಪರಿಸರದಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳಲ್ಲಿ ಮಧೂರು ಸಹೋದರಿಯರ ಜತೆ ಹಾಡಲು ಆರಂಭಿಸಿದ್ದರು. 1970ರಲ್ಲಿ ಗುರುಹಿರಿಯರ ನಿರ್ಣಯದಂತೆ ಶ್ರೀ ಹರಿನಾರಾಯಣ ಬೈಪಡಿತ್ತಾಯರ ಜತೆ ವಿವಾಹ. ಆಗ ಅವರು ಕೂಡ್ಲು ಮೇಳದ ಕಲಾವಿದರಾಗಿದ್ದರು. ಕೂಡ್ಲು ಮೇಳದ ಕಲಾವಿದ ಮಧೂರು ಶ್ರೀ ಗಣಪತಿ ರಾಯರ ಸೂಚನೆಯಂತೆ, ಗುರುಹಿರಿಯರ ನಿರ್ಣಯದಂತೆ ಇವರ ವಿವಾಹವು ನಡೆದಿತ್ತು. ಕಡಬ ಬೈಪಾಡಿತ್ತಾಯರ ಬೀಡುಮನೆಗೆ ಸೊಸೆಯಾಗಿ ಬಂದವರು  ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯರು. ಆದರೆ ಹಾಡುವ ಅವಕಾಶದಿಂದ ವಂಚಿತರಾಗಿದ್ದರು. ಸಂಗೀತ ಕಲಿತಿದ್ದರೂ ಹಾಡುವ ಅವಕಾಶವಿರಲಿಲ್ಲ.

ಪರಿಸರದಲ್ಲಿ ಸಂಗೀತ ಕಚೇರಿಗಳು ನಡೆಯುತ್ತಿರಲಿಲ್ಲ. ಹಾಗೆಂದು ಸುಮ್ಮನೆ ಕುಳಿತವರಲ್ಲ. ತೋಟ ಗದ್ದೆಗಳಲ್ಲಿ ಪತಿಯ ಜತೆ ದುಡಿದ ಶ್ರಮಜೀವಿ ಇವರು. ಏತ ನೀರಾವರಿಯ ದುಡಿಮೆಯನ್ನೂ ಮಾಡಿದ್ದರು. ಪತ್ನಿಯು ಶ್ರಮಪಟ್ಟು ಕಲಿತ ಸಂಗೀತ ವಿದ್ಯೆಗೆ ಅವಕಾಶವಿಲ್ಲದೆ ಹೋಯಿತು ಎಂಬ ಕೊರಗು ಶ್ರೀ ಹರಿನಾರಾಯಣ ಬೈಪಾಡಿತ್ತಾಯರನ್ನು ಕಾಡುತ್ತಿತ್ತು. ಕಡಬ ಬೈಪಾಡಿತ್ತಾಯರ ಮನೆಯವರು ಕಲಾಸಕ್ತರು. ವಾರಕ್ಕೊಂದು ತಾಳಮದ್ದಳೆ ಕೂಟ ಅಲ್ಲಲ್ಲಿ ನಡೆಯುತ್ತಿತ್ತು. ಅದು ಬೆಳಗಿನ ವರೆಗಿನ ತಾಳಮದ್ದಳೆ. ಹರಿನಾರಾಯಣ ಬೈಪಾಡಿತ್ತಾಯರಿಗೆ ಮದ್ದಳೆ ಬಾರಿಸುವ ಆಸಕ್ತಿ. ಆದರೆ ಆಗ ಭಾಗವತರ ಸಂಖ್ಯೆ ಕಡಿಮೆ. ಸಂಗೀತ ಕಲಿತ ಲೀಲಾವತಿ ಬೈಪಾಡಿತ್ತಾಯರಿಗೆ ಯಕ್ಷಗಾನ ಭಾಗವತಿಕೆ ಪಾಠ ಮಾಡಲು ತೊಡಗಿಯೇ ಬಿಟ್ಟಿದ್ದರು. ಒಂದೇ ವರ್ಷದಲ್ಲಿ ಲೀಲಾವತಿ ಬೈಪಾಡಿತ್ತಾಯರು ಪ್ರದರ್ಶನಕ್ಕೆ ಹಾಡುವಷ್ಟು ಸಿದ್ಧರಾಗಿದ್ದರು.

ಮಧೂರಿನಲ್ಲಿ ಸಂಗೀತ ಕಲಿತುದು ಅನುಕೂಲವೇ ಆಗಿತ್ತು. ನಾರಿಯೊಬ್ಬಳು ಯಕ್ಷಗಾನದಲ್ಲಿ ಹಾಡುತ್ತಿದ್ದಾಳೆ ಎಂಬ ಪ್ರಚಾರವೂ ಸಿಕ್ಕಿತ್ತು. ಅಲ್ಲಲ್ಲಿ ನಡೆಯುತ್ತಿದ್ದ ತಾಳಮದ್ದಳೆ, ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲಿ ಪತಿಯ ಜತೆ ಸಾಗಿ ಯಕ್ಷಗಾನ ಭಾಗವತಿಕೆ ಮಾಡಲಾರಂಭಿಸಿದರು. ಪಂಜ, ಚಾರ್ವಾಕ, ನಿಂತಿಕಲ್ಲು, ಸುಬ್ರಹ್ಮಣ್ಯ ಮೊದಲಾದೆಡೆ ಆಟ, ತಾಳಮದ್ದಳೆಗಳಲ್ಲಿ ಭಾಗವತರಾಗಿ ಕಾಣಿಸಿಕೊಂಡರು. ಇವರ ಭಾಗವತಿಕೆಯನ್ನು ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳು ಮೆಚ್ಚಿ ಪ್ರಶಂಸಿಸಿದ್ದರು. ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಪತಿಯ ಜತೆ ಅತಿಥಿ ಕಲಾವಿದೆಯಾಗಿ ಭಾಗವತಿಕೆ. ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಅತಿಥಿ ಭಾಗವತರಾಗಿ ಕಲಾಸೇವೆ.

ಬಳಿಕ ಅರುವ ನಾರಾಯಣ ಶೆಟ್ಟರು ಆರಂಭಿಸಿದ ಸೋಮನಾಥೇಶ್ವರೀ ಯಕ್ಷಗಾನ ಮಂಡಳಿ ಅರುವ, ಅಳದಂಗಡಿ ಮೇಳದಲ್ಲಿ ಪತಿಯ ಜತೆ ಕಲಾಸೇವೆ. ಆಗ ಸರಪಾಡಿ ಶಂಕರನಾರಾಯಣ ಕಾರಂತ, ಕುಬಣೂರು ಶ್ರೀಧರ ರಾಯರ ಜತೆ  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ವ್ಯವಸಾಯ ಮಾಡಿದವರು. ಮದ್ದಳೆಗಾರರಾಗಿ ಹರಿನಾರಾಯಣ ಬೈಪಾಡಿತ್ತಾಯರು, ಲಕ್ಷ್ಮೀಶ ಅಮ್ಮಣ್ಣಾಯರು, ಪೆರುವಾಯಿ ಕೃಷ್ಣ ಭಟ್ಟರೂ ಜತೆಗಿದ್ದರು. ಹತ್ತು ವರ್ಷಗಳ ಕಾಲ ವ್ಯವಸಾಯ ಮಾಡಿ ತಿರುಗಾಟ ನಿಲ್ಲಿಸಿದ್ದರು. ಎರಡು ವರ್ಷಗಳ ಬಳಿಕ ಕೆ.ಎಚ್ ದಾಸಪ್ಪ ರೈಗಳ ಕುಂಬಳೆ ಮೇಳಕ್ಕೆ. ಸದ್ರಿ ಮೇಳದಲ್ಲಿ 2 ವರ್ಷ. ಬಳಿಕ ಅಡ್ಯಾರು ಶಂಕರ ಆಳ್ವರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ಕಲಾಸೇವೆ ಮಾಡಿದ್ದರು. ಈ ಸಂದರ್ಭಗಳಲ್ಲಿ ಪತಿ ಹರಿನಾರಾಯಣ ಬೈಪಾಡಿತ್ತಾಯರೂ ಮದ್ದಳೆಗಾರರಾಗಿ ಜತೆಗಿದ್ದು ಪ್ರೋತ್ಸಾಹಿಸಿದ್ದರು.

ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುಗಳಾಗಿ ನೇಮಕಗೊಂಡಾಗ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಅವಕಾಶ ಲೀಲಾವತಿ ಬೈಪಾಡಿತ್ತಾಯರಿಗೂ ದೊರಕಿತ್ತು. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಈ ಅವಕಾಶವನ್ನು ಬೈಪಾಡಿತ್ತಾಯ ದಂಪತಿಗಳಿಗೆ ನೀಡಿ ಪ್ರೋತ್ಸಾಹಿಸಿದ್ದರು. ಲೀಲಾವತಿ ಬೈಪಡಿತ್ತಾಯರು ಹತ್ತು ವರ್ಷಗಳ ಕಾಲ ಧರ್ಮಸ್ಥಳ ಕಲಿಕಾ ಕೇಂದ್ರದ ಗುರುವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಭಾಗವತಿಕೆಯ ಪಾಠ ಮಾಡಿದ್ದರು. ಶ್ರೀ ತಿಮ್ಮಪ್ಪ ಗುಜರನ್ ಅವರ ಸೂಚನೆಯಂತೆ ಬೈಪಾಡಿತ್ತಾಯ ದಂಪತಿಗಳು ಕೊಳಂಬೆ ಗ್ರಾಮದ ತಲಕಳ ಎಂಬಲ್ಲಿ ಸ್ಥಳ ಖರೀದಿಸಿ ಪ್ರಸ್ತುತ ಅನೇಕ ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಕಟೀಲು, ಗಂಜಿಮಠ, ಆಲಂಕಾರು ಮೊದಲಾದೆಡೆ ಹಿಮ್ಮೇಳ ತರಗತಿಗಳನ್ನು ನಡೆಸಿರುತ್ತಾರೆ. ಈಗ ತಮ್ಮ ಕೊಳಂಬೆ ತಲಕಳ ಮನೆಯಲ್ಲೂ ಕಲಾಸಕ್ತರಿಗೆ ಹೇಳಿಕೊಡುತ್ತಿದ್ದಾರೆ. 

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ‘ಯಕ್ಷಗಾನ ಅಕಾಡೆಮಿ ಬೆಂಗಳೂರು’ ಈ ಘನ ಸಂಸ್ಥೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ಪತಿಯ ನೆರಳಾಗಿದ್ದುಕೊಂಡೇ ಯಕ್ಷಗಾನ ಕಲಾಸೇವೆ, ಮನೆವಾರ್ತೆಯನ್ನು ಜತೆಯಾಗಿ ನಡೆಸುತ್ತಾ ಯಶಸ್ವಿಯಾದ ರೀತಿಗೆ ಯಾರಾದರೂ ಅಚ್ಚರಿಪಡಲೇಬೇಕು. ಇದೊಂದು ಮಹಾನ್ ಸಾಧನೆಯೇ ಹೌದು. ಅವರ ಈ ಅಪೂರ್ವ ಸಾಧನೆಗೆ ಸಂದ ಪ್ರಶಸ್ತಿಗಳು ಹಲವು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದಿಂದ ಕೊಡಮಾಡುವ ಪ್ರಶಸ್ತಿ, ಕರ್ನಾಟಕ ಸರಕಾರದ ಹಿರಿಯ ನಾಗರಿಕರ ದಿನಾಚರಣೆಯ ದಿನ ಕೊಡಮಾಡುವ ಸಾಧಕ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಂಗಳೂರು ವಿ.ವಿ ಯ ಯಕ್ಷಮಂಗಳ ಪ್ರಶಸ್ತಿ, ಕಡತೋಕಾ ಕೃತಿ-ಸ್ಮೃತಿ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ದಿವಾಣ ಭೀಮ ಭಟ್ ಪ್ರಶಸ್ತಿ, ವನಜ ರಂಗಮನೆ ಸುಳ್ಯ ಪ್ರಶಸ್ತಿ. ಅಲ್ಲದೆ ಇನ್ನೂ ಅನೇಕ ಸಂಸ್ಥೆಗಳಿಂದ, ಗಣ್ಯರಿಂದ  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಸನ್ಮಾನಗಳನ್ನು ಪಡೆದಿರುತ್ತಾರೆ.

ಬೈಪಾಡಿತ್ತಾಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಗುರುಪ್ರಸಾದ್ ಸ್ನಾತಕೋತ್ತರ ಪದವೀಧರ. ಬೆಂಗಳೂರಿನಲ್ಲಿ ಬಾಸುಮತಿ ರೈಸ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ವಾಣಿ ಗುರುಪ್ರಸಾದ್. ವಾಣಿ, ಗುರುಪ್ರಸಾದ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ವಾತಿ ಪದವೀಧರೆ. ಉದ್ಯೋಗಸ್ಥೆ. ಶಾಸ್ತ್ರೀಯ ಸಂಗೀತ, ವೀಣೆ ಕಲಿತಿದ್ದಾರೆ. ಅಜ್ಜಿ ಲೀಲಾವತಿ ಬೈಪಾಡಿತ್ತಾಯರಿಂದ ಯಕ್ಷಗಾನ ಭಾಗವತಿಕೆ ಕಲಿತು ಪ್ರದರ್ಶನಗಳಲ್ಲಿ ಹಾಡುತ್ತಿದ್ದಾರೆ. ಪುತ್ರ ಶ್ರೇಯಸ್ ಪ್ರಥಮ ಪಿಯುಸಿ ವಿದ್ಯಾರ್ಥಿ. ಶಾಸ್ತ್ರೀಯ ಸಂಗೀತ ಮತ್ತು ಕೊಳಲು ವಾದನ ಕಲಿತಿದ್ದಾರೆ.

ಬೈಪಾಡಿತ್ತಾಯ ದಂಪತಿಗಳ ದ್ವಿತೀಯ ಪುತ್ರ ಅರಿ ಅವಿನಾಶ್ ಬೈಪಾಡಿತ್ತಾಯ ಪದವೀಧರರು. ಬೆಂಗಳೂರಿನಲ್ಲಿ ಪತ್ರಕರ್ತರು. ಕಳೆದ ಎರಡು ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ಪತ್ರಕರ್ತರು. ವಿಜಯ ಕರ್ನಾಟಕ ಪತ್ರಿಕೆಯ ಪತ್ರಕರ್ತರಾಗಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು. ಚಿಕ್ಕವನಾಗಿರುವಾಗಲೇ ಮದ್ದಳೆವಾದನ ಅಭ್ಯಾಸ ಮಾಡಿದ್ದರು. ಊರ ಪರವೂರ ಪ್ರದರ್ಶನಗಳಲ್ಲಿ ಅವಕಾಶ ಸಿಕ್ಕಾಗ ಕಲಾಸೇವೆ ಮಾಡುತ್ತಾರೆ. ಅವರು ಬರಹಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ಇವರಿ ಪತ್ನಿ ಶ್ರೀಮತಿ ವಾಣಿ ಕಲಾಸಕ್ತೆ. ಬೆಂಗಳೂರಿನಲ್ಲಿ ಫ್ಯಾಷನ್ ಡಿಸೈನ್ ಉದ್ಯೋಗ ಮಾಡುತ್ತಿದ್ದಾರೆ. ವಾಣಿ, ಅವಿನಾಶ್ ಬೈಪಾಡಿತ್ತಾಯ ದಂಪತಿಗಳಿಗೆ ಓರ್ವ ಪುತ್ರ. ಶ್ರೀ ಅಭಿಷೇಕ್ ಬೈಪಾಡಿತ್ತಾಯ. ದ್ವಿತೀಯ ಪದವಿ ಓದುತ್ತಿದ್ದಾರೆ. ಅಜ್ಜ, ಅಜ್ಜಿಯರಿಂದ ಯಕ್ಷಗಾನ ಹಿಮ್ಮೇಳ ಕಲಿತು ಕಲಾಸೇವೆ ಮಾಡುತ್ತಿದ್ದಾರೆ.

ಬದುಕಿನ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರಿಗೆ ಶುಭಾಶಯಗಳು. ಬೈಪಾಡಿತ್ತಾಯ ದಂಪತಿಗಳಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಅವರಿಗೆ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಈ ಸಂದರ್ಭದಲ್ಲಿ ಶ್ರೀ ಹರಿಲೀಲಾ – ೭೫ ಕಾರ್ಯಕ್ರಮದಡಿ ಗುರುದಂಪತಿಗಳನ್ನು ಅವರ ಶಿಷ್ಯಂದಿರೆಲ್ಲಾ ಸೇರಿ ಗೌರವಿಸುತ್ತಿರುವುದು ಸಂತೋಷದ ವಿಚಾರ. ಕಲಾಮಾತೆಯ ಅನುಗ್ರಹದಿಂದ ಈ ಸತ್ಕಾರ್ಯವು ಯಶಸ್ವಿಯಾಗಿ ನಡೆಯಲಿ. ಕಲಾಭಿಮಾನಿಗಳೆಲ್ಲರ ವತಿಯಿಂದ ಶುಭಾಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ತಾಳಮದ್ದಳೆ ಸಪ್ತಾಹ ಮತ್ತು ಕೀರ್ತಿಶೇಷ ಕಲಾವಿದರ ಸಂಸ್ಮರಣೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವು ದೇರಾಜೆ ಸಂಸ್ಮರಣಾ ಸಮಿತಿಯ ಹಾಗೂ ಕಲಾಪೋಷಕರ ಸಹಕಾರದೊಂದಿಗೆ ‘ಕೀರ್ತಿಶೇಷ ಕಲಾವಿದರ ಸಂಸ್ಮರಣೆ ಮತ್ತು  ತಾಳಮದ್ದಳೆ ಸಪ್ತಾಹ’ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ವಿಟ್ಲ ಭಗವತಿ ದೇವಸ್ಥಾನದಲ್ಲಿ ನಡೆಯಲಿದೆ.

ಕಾರ್ಯಕ್ರಮವು 24.10.2021ರಿಂದ ನಿರಂತರ ಏಳು ದಿನಗಳ ಕಾಲ ನಡೆಯಲಿದೆ. 30.102021ರಂದು ಸಮಾರೋಪ ಸಮಾರಂಭವು ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ಈ ವರದಿಯ ಜೊತೆಗೆ ಲಗತ್ತಿಸಲಾಗಿದೆ. 

ಗಾಯನ ಹಾಗೂ ಯಕ್ಷಗಾನ

ದಿನಾಂಕ 17.10.2021ರ ಸಂಜೆ 5 ಘಂಟೆಗೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆಯಲ್ಲಿ ಕನ್ನಡ ಸಂ ಸ್ಕೃತಿ ಇಲಾಖೆಯಿಂದ ಪ್ರಾಯೋಜಿತವಾದ ಕಲಾಕದಂಬ ಆರ್ಟ್ ಸೆಂಟರ್ ನ ಕಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಡಾ. ರಾಧಾಕೃಷ್ಣ ಉರಾಳರ ನಿರ್ದೇಶನದ ಯಕ್ಷಗಾನ “ದಕ್ಷಯಜ್ಞ” ಹಾಗೂ ಮುರಳೀಧರ ನಾವಡರ ನಿರ್ದೇಶನದ ಸುಗಮ ಸಂಗೀತ ಗಾಯನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ನಿರ್ದೇಶಕರಾದ ಜಯರಾಮ ಅಡಿಗರು ಮಾತನಾಡಿ ಮಕ್ಕಳಿಗೆ ನಮ್ಮ ನಾಡಿನ ಸಾಂಸ್ಕೃತಿಕ ಕಲೆಗಳನ್ನು ಕಲಿಸಿ ಆ ಕಲೆಗಳಲ್ಲಿ ಅವರಿಗೆ ಆಸಕ್ತಿ ಮೂಡಿಸುವಲ್ಲಿ ಕಲಾಕದಂಬ ಸಂಸ್ಥೆಯು ಯಶಸ್ಸನ್ನು ಕಾಣುತ್ತಿದೆ ಅಲ್ಲದೇ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಕೂಡ ಒದಗಿಸಿ ಕೊಟ್ಟು ಒಳ್ಳೆಯ ಕಲಾವಿದರ ಸೃಷ್ಟಿಗೂ ಈ ಸಂಸ್ಥೆ ಪಾತ್ರವಾಗುತ್ತಿರುವುದು ನಿಜಕ್ಕೂ ತುಂಬಾ ಸಂತೋಷದ ವಿಷಯ ಎಂದು ತಮ್ಮ ಪ್ರಶಂಸೆಯ ನುಡಿಗಳನ್ನು ಹೇಳಿ ಮಕ್ಕಳನ್ನು ಹುರಿದುಂಬಿಸಿದರು.

ಮತ್ತೊಬ್ಬ ಅತಿಥಿ ಖ್ಯಾತ ಕಿರುತೆರೆ ಹಾಗೂ ಹಿರಿತೆರೆ ನಟಿಯಾದ ನಮಿತಾ ರಾವ್‌ ತಮ್ಮ ಕಲಾ ಬದುಕನ್ನು ಸ್ಮರಿಸುತ್ತಾ ಕಲೆಯಿಂದ ನಮ್ಮ ಜೀವನವನ್ನು ಚನ್ನಾಗಿ ರೂಪಿಸಿ ಕೊಳ್ಳಬಹುದು ಅಲ್ಲದೇ ಒಂದು ಸುಂದರ ಸಮಾಜವನ್ನು ಕೂಡ ಕಟ್ಟಿಕೊಳ್ಳಬಹುದು ನಮ್ಮ ಏನೇ ನೋವು ಕಷ್ಟಗಳಿದ್ದರು ಅವೆಲ್ಲವನ್ನೂ ಗೌಣವಾಗಿಸುವುದು ಕಲೆಯಿಂದಲಷ್ಟೇ ಸಾಧ್ಯ , ಇಲ್ಲಿ ಇವತ್ತು ಪ್ರದರ್ಶನ ನೀಡಿದಂತ ಎಲ್ಲಾ ಮಕ್ಕಳು ನಿಜಕ್ಕೂ ನಮ್ಮ ನಾಡಿನ ಕಲಾ ಪ್ರಪಂಚಕ್ಕೆ ಕೊಡುಗೆಗಳಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.


ಈ ಒಂದು ವೇದಿಕೆಯಲ್ಲಿ ಶ್ರೀ ಸಿದ್ಧಿಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಉಪಸ್ಥಿತರಿದ್ದರು.


ನಿಶ್ಚಿತ, ಮಧುಮಿತ, ಪೂಜಾಆಚಾರ್ಯ, ಅದಿತಿ ಉರಾಳ, ಪ್ರಶಸ್ತಿ, ನಿತ್ಯಾ, ಚಿರಾಗ್, ತೇಜಸ್ ಹಾಗೂ ರಜತ್‌ ದಕ್ಷಯಜ್ಞ ಯಕ್ಷಗಾನದ ಪಾತ್ರಧಾರಿಗಳಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.


ಸುಗಮ ಸಂಗೀತದಲ್ಲಿ ಪಕ್ಕ ವಾದ್ಯದಲ್ಲಿ ವೆಂಕಟೇಶ್ ನಾಯ್ಡು, ಲೋಕೇಶ್ ಹಾಗೂ ಪ್ರಕಾಶ್ ಸಹಕರಿಸಿದರು. ಅನ್ವಿತ ಸೋಮಯಾಜಿ, ಕವಿತ, ಚಿತ್ಕಲ ಐತಾಳ್, ಸಿರಿ ಭಟ್, ಜಾಹ್ನವಿ ಕಾಮತ್, ಮಂಗಳಾ ಹರ್ಷ, ಖುಷಿ, ಜಾಹ್ನವಿ, ಪರ್ಣಿಕ ನಾವಡ, ಪನ್ವಿತ್,ಕೀರ್ತಿ ಮತ್ತು ತನ್ಮಶ್ರೀ ತಮ್ಮ ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನ ತಣಿಸಿದರು.


ನೇಪಥ್ಯದಲ್ಲಿ ವಿಶ್ವಾನಾಥ ಉರಾಳ, ದೇವರಾಜ ಕರಬ, ನಿತ್ಯಾನಂದ ನಾಯಕ್, ಭರತ್, ಸುರೇಶ್, ಸುಜನ್ ಹಾಗೂ ಪವನ್ ಸಹಕರಿಸಿದರು.


ಸುಜಯೀಂದ್ರ ಹಂದೆಯವರಿಗೆ ಸನ್ಮಾನ

ಬೆಂಗಳೂರಿನ ಯಕ್ಷದೇಗುಲ ತಂಡ ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ವಿನಾಯಕ ದೇವಳದ ಪ್ರಾಂಗಣದಲ್ಲಿ ಆಯೋಜಿಸಿದ ರುರು-ಪ್ರಮದ್ವರ ಯಕ್ಷಗಾನ ಪ್ರಸಂಗದ ಪ್ರಥಮ ಪ್ರದರ್ಶನದಲ್ಲಿ ಪ್ರಸಂಗಕರ್ತ, ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ ಎಚ್ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಹುಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ, ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ, ಸಾಲಿಗ್ರಾಮ ಗುರುನರಸಿಂಹ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಎಸ್. ಕಾರಂತ, ತ್ರಿಕಣ್ಣೇಶ್ವರಿ ಮಾಸ ಪತ್ರಿಕೆಯ ಸಂಪಾದಕರಾದ ತೇಜೇಶ್ವರ ರಾವ್, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ, ಕರ್ನಾಟಕ ಕಲಾದರ್ಶಿನಿ ಮಂಗಳೂರಿನ ಜನಾರ್ದನ ಹಂದೆ, ಹಂದೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ವೆಂಕಟರಮಣ ಸೋಮಾಯಾಜಿ, ಹಂದೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅಮರ ಹಂದೆ, ಕೋಟ ಸುದರ್ಶನ ಉರಾಳ ಹಾಗೂ ಉಪನ್ಯಾಸಕ ರಾಘವೇಂದ್ರ ತುಂಗರು ಉಪಸ್ಥಿತರಿದ್ದರು.

  • ಕೋಟ ಸುದರ್ಶನ ಉರಾಳ

ವಿ.ಸೂ: ಸನ್ಮಾನ ಕಾರ್ಯಕ್ರಮದ ಛಾಯಾಚಿತ್ರವನ್ನು ಲಗತ್ತಿಸಲಾಗಿದೆ.

ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರು ಶ್ರೀ ಹರಿನಾರಾಯಣ ಬೈಪಾಡಿತ್ತಾಯರು

ಕಡಬ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಿಮ್ಮೇಳದ ಗುರುಗಳಲ್ಲೊಬ್ಬರು. ಮಾಂಬಾಡಿ ನಾರಾಯಣ ಭಾಗವತ, ಸುಬ್ರಹ್ಮಣ್ಯ ಭಟ್, ನೆಡ್ಲೆ ನರಸಿಂಹ ಭಟ್, ಗೋಪಾಲಕೃಷ್ಣ ಕುರುಪ್, ದಿವಾಣ ಭೀಮ ಭಟ್ ಮೊದಲಾದವರಂತೆ ಅನೇಕ ಶಿಷ್ಯಂದಿರಿಗೆ ಹಿಮ್ಮೇಳ ತರಬೇತಿಯನ್ನು ನೀಡಿ ಕಲಾವಿದರನ್ನಾಗಿ ರೂಪಿಸಿದ ಸಾಧಕರು.

ಪ್ರಸ್ತುತ ಉದಯೋನ್ಮುಖರೂ ಕಲಿಕಾಸಕ್ತರಿಗೆ ತರಬೇತಿಯನ್ನು ನೀಡುತ್ತಿರುವುದು ಯಕ್ಷಗಾನ ಕಲೆಗೆ ಅನುಕೂಲವೇ ಆಗಿದೆ. ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಕಳೆದ ಆರು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರು. ಕಲಾವಿದರಾಗಿ, ಹಿಮ್ಮೇಳ ಗುರುಗಳಾಗಿ ಮೇರು ಕಲೆ ಯಕ್ಷಗಾನಕ್ಕೆ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಇವರಿಂದ ಕಲಿತ ಅನೇಕ ಕಲಾವಿದರು ಇಂದು ಮೇಳಗಳಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ ಕಲಾಸೇವೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ. 

ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಈ ಲೋಕದ ಬೆಳಕನ್ನು ಕಂಡದ್ದು 1946ನೇ ಇಸವಿ ನವೆಂಬರ್ 13ರಂದು. ಕಡಬ ಗ್ರಾಮದ ಬೈಪಾಡಿತ್ತಾಯ ಮನೆತನದಲ್ಲಿ ಶ್ರೀ ರಾಮಕೃಷ್ಣ ಬೈಪಾಡಿತ್ತಾಯ ಶ್ರೀಮತಿ ಪದ್ಮಾವತಿ ಅಮ್ಮ ದಂಪತಿಗಳ ಪುತ್ರನಾಗಿ ಕೆಂಚಭಟ್ಟರ ಮನೆಯಲ್ಲಿ ಜನನ. ಶ್ರೀ ರಾಮಕೃಷ್ಣ ಬೈಪಾಡಿತ್ತಾಯ ವೃತ್ತಿಯಲ್ಲಿ ಅರ್ಚಕರು. ಕಡಬ ಶ್ರೀ ಮಹಾಗಣಪತಿ ದೇವಳ ಮತ್ತು ಶ್ರೀ ದುರ್ಗಾಂಬಾ ದೇವಳದ ಪೂಜಾ ಕೈಂಕರ್ಯವನ್ನು ಮೊದಲಿನಿಂದಲೂ ಬೈಪಾಡಿತ್ತಾಯ ಮನೆಯವರೇ ನಡೆಸುತ್ತಿದ್ದರು. ರಾಮಕೃಷ್ಣ ಬೈಪಾಡಿತ್ತಾಯರು ಕಲಾಪ್ರೇಮಿಯಾಗಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿದ್ದರು.

ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಚಿಕ್ಕಪ್ಪ ಶ್ರೀ ವಾಸುದೇವ ಬೈಪಾಡಿತ್ತಾಯರು ಅಪಾರ ಪುರಾಣಜ್ಞಾನವನ್ನು ಹೊಂದಿ ಆ ಕಾಲದ ಒಳ್ಳೆಯ ಅರ್ಥಧಾರಿಯಾಗಿದ್ದರು. ಹರಿನಾರಾಯಣ ಬೈಪಾಡಿತ್ತಾಯರ ಸಣ್ಣಜ್ಜ ಶ್ರೀ ವಿಷ್ಣು ಬೈಪಾಡಿತ್ತಾಯರು ಕಲಾವಿದರಾಗಿ ಯಕ್ಷಗಾನ ನಾಟಕ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಓದಿದ್ದು ಆರನೇ ತರಗತಿ ವರೆಗೆ. 5ನೇ ತರಗತಿ ವರೆಗೆ ಎಡಮಂಗಲ ಶಾಲೆಯಲ್ಲಿ. ಬಳಿಕ ಕಡಬ ಶಾಲೆಯಲ್ಲಿ. ಬಂಧುಗಳಾದ ಶ್ರೀ ಎನ್. ಆರ್.ಚಂದ್ರ ಅವರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗಿದ್ದರು. ಶ್ರೀ ಎನ್. ಆರ್.ಚಂದ್ರ ಅವರು ತಾಳಮದ್ದಳೆ ಅರ್ಥಧಾರಿಯಾಗಿದ್ದರು.

ಶ್ರೀ ಕೆ.ವಿ ಗಣಪಯ್ಯ, ಶ್ರೀ ಎನ್. ಆರ್.ಚಂದ್ರ, ಶ್ರೀ ರಾಮಣ್ಣ ರೈ, ಎ. ಆರ್.ಚಂದ್ರ ಇವರುಗಳು ಒಡನಾಡಿಗಳಾಗಿ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಜತೆ ಹರಿನಾರಾಯಣ ಬೈಪಾಡಿತ್ತಾಯರೂ ಕೂಟಗಳಿಗೆ ಹೋಗುತ್ತಾ ಯಕ್ಷಗಾನಾಸಕ್ತಿ ಬೆಳೆಸಿಕೊಂಡಿದ್ದರು. ಶ್ರೀ ರಾಮ ಅಮ್ಮಣ್ಣಾಯರು (ದಿನೇಶ ಅಮ್ಮಣ್ಣಾಯರ ಚಿಕ್ಕಪ್ಪ) ಪುರುಷಯ್ಯ ಆಚಾರ್ಯ ಮತ್ತು ಶ್ರೀ ಮಂದಾರ ಶೆಟ್ಟರ ಭಾಗವತಿಕೆಗೆ ಬೆಳಗಿನ ವರೆಗೂ ಶ್ರುತಿ ಬಾರಿಸುತ್ತಿದ್ದರಂತೆ. ಹೀಗೆ ಯಕ್ಷಗಾನದ ಆಸಕ್ತಿ ಬೆಳೆಯಿತು. ಶಾಲೆ ಬಿಟ್ಟ ನಂತರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಶ್ರೀ ವಿಶ್ವಜ್ಞ ತೀರ್ಥರು ಮತ್ತು ಶ್ರೀ ಶ್ರೀ ವಿದ್ಯಾಸಿಂಧು ತೀರ್ಥರ ಸಹಾಯಕರಾಗಿ ನಾಲ್ಕು ವರ್ಷ ಕಾಲ ಕೆಲಸ ಮಾಡಿದ್ದರು. ಜತೆಗೆ ಶ್ರೀ ಮಠದ ವಿದ್ಯಾರ್ಥಿಯಾಗಿ ಮಂತ್ರವನ್ನೂ ಕಲಿತಿದ್ದರು. ಜತೆಗೆ ಯಕ್ಷಗಾನ ಪ್ರದರ್ಶನಗಳನ್ನೂ ನೋಡುತ್ತಿದ್ದರು. ಕಲಾವಿದನಾಗಬೇಕೆಂಬ ಆಸೆಯೂ ಮೂಡಿತ್ತು.

ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಗೆ ಹಿಮ್ಮೇಳ ಕಲಿಯುವ ಆಸೆ ಉಂಟಾಗಿತ್ತು. ಶ್ರೀ ಪುರುಷಯ್ಯ ಆಚಾರ್ಯ ಅವರಿಂದ ಮದ್ದಳೆವಾದನದ ಕಲಿಕೆಗೆ ತೊಡಗಿದರು. ಇವರ ತಮ್ಮ ಶ್ರೀ ಅನಂತ ಬೈಪಾಡಿತ್ತಾಯರು ಭಾಗವತಿಕೆ ಕಲಿಯಲಾರಂಭಿಸಿದರು. ಜತೆಯಲ್ಲಿ ಕಲಿತ ಕಾರಣ ಉಭಯರಿಗೂ ಭಾಗವತಿಕೆ ಮತ್ತು ಚೆಂಡೆ ಮದ್ದಳೆವಾದನದ ವಿದ್ಯೆ ಅರಿಯಲು ಅನುಕೂಲವಾಗಿತ್ತು. ಊರಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಮದ್ದಳೆ ಬಾರಿಸಲು ಅವಕಾಶವೂ ಸಿಗುತ್ತಿತ್ತು. ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಶ್ರೀ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಭಾಗವಹಿಸುವ ಅವಕಾಶವೂ ಸಿಕ್ಕಿತ್ತು. ಆಗ ಅದು ಟೆಂಟಿನ ಮೇಳವಾಗಿತ್ತು. ಚೆಂಡೆ ಮದ್ದಳೆ ಬಾರಿಸುವ ಅವಕಾಶ ನೀಡಿ ಶ್ರೀ ಶೀನಪ್ಪ ಭಂಡಾರಿಗಳು ಪ್ರೋತ್ಸಾಹ ನೀಡಿದ್ದರು. ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಅನಿವಾರ್ಯಕ್ಕೆ, ಅಪರೂಪಕ್ಕೆ ಪ್ರದರ್ಶನಗಳಲ್ಲಿ ಕಲಾಸೇವೆ ಮಾಡುತ್ತಿದ್ದರು.

ಬಳಿಕ ಕಲ್ಲಾಡಿ ಕೊರಗ ಶೆಟ್ರ ಸಂಚಾಲಕತ್ವದ ಇರಾ ಸೋಮನಾಥೇಶ್ವರ ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. (ಕುಂಡಾವು ಮೇಳ). ಬಲಿಪ ನಾರಾಯಣ ಭಾಗವತ, ಕಾಸರಗೋಡು ವೆಂಕಟ್ರಮಣ, ಪಟ್ಲ ,ಮಹಾಬಲ ಶೆಟ್ಟಿ, ಕೆ.ಗೋವಿಂದ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕುಡಾನ ಗೋಪಾಲಕೃಷ್ಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಅರುವ ಕೊರಗಪ್ಪ ಶೆಟ್ಟಿ, ಅರಾಟೆ ಮಂಜುನಾಥ ಮೊದಲಾದವರ ಒಡನಾಟ ಕಲಿಕೆಗೆ ಅವಕಾಶ ಒದಗಿಸಿತ್ತು. ಕುಂಡಾವು ಮೇಳದಲ್ಲಿ ಪೂರ್ವರಂಗದ ನೃತ್ಯ ಪ್ರದರ್ಶನದಲ್ಲಿಯೂ ಮದ್ದಳೆ ಬಾರಿಸಲು ಅವಕಾಶವಾಗಿತ್ತು. ಅದೇ ವರ್ಷ ಕುಂಡಾವು ಮೇಳ ತಿರುಗಾಟ ನಿಲ್ಲಿಸಿದ ಕಾರಣ ಬೈಪಾಡಿತ್ತಾಯರಿಗೆ ಬೇರೆ ಮೇಳಕ್ಕೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಧರ್ಮಸ್ಥಳ ಮೇಳಕ್ಕೆ ಸೇರುವ ಅವಕಾಶವೂ ಸಿಕ್ಕಿತ್ತು. ಇವರ ವಾದನವನ್ನು ಪರೀಕ್ಷಿಸಲೆಂದೇ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿದ್ದ ಶ್ರೀ ರತ್ನವರ್ಮ ಹೆಗ್ಗಡೆಯವರು ತಾಳಮದ್ದಳೆ ಏರ್ಪಡಿಸಿದ್ದರು. ಪರೀಕ್ಷೆಯಲ್ಲಿ ಬೈಪಾಡಿತ್ತಾಯರು ಉತ್ತೀರ್ಣರಾಗಿದ್ದರು.

ಒಂದು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ. ಕಡತೋಕಾ, ನೆಡ್ಲೆ, ಪುತ್ತೂರು ನಾರಾಯಣ ಹೆಗ್ಡೆ, ಕುಂಬಳೆ ಸುಂದರ ರಾವ್, ವಿಟ್ಲ ಗೋಪಾಲಕೃಷ್ಣ ಜೋಯಿಸ, ಕೆ.ಗೋವಿಂದ ಭಟ್, ಪಾತಾಳ ವೆಂಕಟ್ರಮಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ವಂಡ್ಸೆ ನಾರಾಯಣ, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ ಮೊದಲಾದ ಕಲಾವಿದರ ಒಡನಾಟ ದೊರಕಿತ್ತು. ಮುಂದಿನ ಎರಡು ವರ್ಷಗಳ ಕಾಲ ಶ್ರೀ ಶಂಕರನಾರ್ಣಪ್ಪಯ್ಯ ಅವರ ಕೋರಿಕೆಯಂತೆ ಕೂಡ್ಲು ಮೇಳದಲ್ಲಿ ತಿರುಗಾಟ. ದೊಂಡೋಲೆ ತಾಳಮದ್ದಳೆಯಲ್ಲಿ ಬೈಪಾಡಿತ್ತಾಯರ ಮದ್ದಳೆವಾದನವನ್ನು ಕೇಳಿದ ಶಂಕರನಾರ್ಣಪ್ಪಯ್ಯನವರು ಕೂಡ್ಲು ಮೇಳಕ್ಕೆ ಆಹ್ವಾನ ನೀಡಿದ್ದರು. ಇದಕ್ಕೆ ಶೇಣಿ ಶ್ರೀ ಗೋಪಾಲಕೃಷ್ಣ ಭಟ್ಟರ ಸಹಮತವೂ ಇತ್ತು. ಕೂಡ್ಲು ಮೇಳದಲ್ಲಿ ಅಗರಿ, ಬಲಿಪ, ದಿವಾಣ, ಶೇಣಿ, ವಿಟ್ಲ ಜೋಶಿ, ಕೊಕ್ಕಡ ಈಶ್ವರ ಭಟ್, ಕುಡಾಣ ಮೊದಲಾದವರು ಸಹಕಲಾವಿದರಾಗಿ ಒದಗಿದ್ದರು.

ಕೂಡ್ಲು ಮೇಳದ 2ನೆಯ ವರ್ಷದ ತಿರುಗಾಟದಲ್ಲಿರುವಾಗ ಲೀಲಾವತಿ ಅವರ ಜತೆ ವಿವಾಹ. ಮತ್ತೆ ಒಂದು ವರ್ಷ ಮರಳಿ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಧರ್ಮಸ್ಥಳ ಮೇಳದ ತಿರುಗಾಟದ ಸಂದರ್ಭ ನೆಡ್ಲೆ ನರಸಿಂಹ ಭಟ್ಟರಿಂದ ಕಲಿಕೆಗೆ ಅವಕಾಶವಾಗಿತ್ತು. ಹಗಲು ವಿಶ್ರಾಂತಿಯ ಸಮಯ ನೆಡ್ಲೆಯವರು ಹೇಳಿಕೊಡುತ್ತಿದ್ದರಂತೆ. ಮತ್ತೆ ತಿರುಗಾಟ ನಿಲ್ಲಿಸಿದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಎಂಟು ವರ್ಷಗಳ ಕಾಲ ಸಂಸಾರದ ಹೊಣೆಯನ್ನು ಹೊತ್ತಿದ್ದರು. ಪೂರ್ಣ ಪ್ರಮಾಣದ ತಿರುಗಾಟ ನಿಲ್ಲಿಸಿದರೂ ಧರ್ಮಸ್ಥಳ ಮತ್ತು ಕರ್ನಾಟಕ ಮೇಳದ ಪ್ರದರ್ಶನಗಳಲ್ಲಿ ಅನಿವಾರ್ಯಕ್ಕೆ ಕಲಾಸೇವೆ ಮಾಡುತ್ತಿದ್ದರು. ಈ ಸಂದರ್ಭಗಳಲ್ಲಿ ಶ್ರೀ ದಾಮೋದರ ಮಂಡೆಚ್ಚರು ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಒಡನಾಟವೂ ದೊರಕಿತ್ತು. 


ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಮಳೆಗಾಲದಲ್ಲಿ ಶ್ರೀ ಚವಾಣರ ಟೂರಿನ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದರು. ಮನೆಯಲ್ಲಿ ತಮ್ಮ ಶ್ರೀಮತಿ, ಲೀಲಾವತಿ ಬೈಪಾಡಿತ್ತಾಯರಿಗೆ ಯಕ್ಷಗಾನ ಹಾಡುಗಾರಿಕೆಯನ್ನು ಕಲಿಸಿದರು. ಆ ಕಾಲದಲ್ಲಿ ಪತ್ನಿಯನ್ನು ಹಾಡುಗಾರಿಕೆಗೆ ಸಿದ್ಧಗೊಳಿಸಿ ಯಕ್ಷಗಾನ ರಂಗಕ್ಕೇರಿಸಿ ಮೆರೆಸಿದ ಸಾಧನೆ ಶ್ರೀ ಹರಿನಾರಾಯಣ ಬೈಪಾಡಿತ್ತಾಯರದ್ದು. ಪತ್ನಿ ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ಮತ್ತು ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಮದ್ದಳೆಗಾರರಾಗಿ ಜತೆಯಾಗಿಯೇ ಆದಿ ಸುಬ್ರಹ್ಮಣ್ಯ, ಪುತ್ತೂರು, ಅಳದಂಗಡಿ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ಕಲಾಸೇವೆ ಮಾಡಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನೀಡಿದ್ದರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಹನ್ನೆರಡು ವರ್ಷಗಳ ಕಾಲ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಹತ್ತು ವರ್ಷಗಳ ಕಾಲ ಪತ್ನಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರೂ ಇವರ ಜತೆಗೆ ಕಲಿಕಾ ಕೇಂದ್ರದಲ್ಲಿ ಕಲಿಕಾಸಕ್ತರಿಗೆ ತರಬೇತಿ ನೀಡಿದ್ದರು. 


ತೆಂಕುತಿಟ್ಟಿನ ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯರ ತಾಯಿ ಹರಿನಾರಾಯಣ ಬೈಪಡಿತ್ತಾಯರ ಸೋದರತ್ತೆ. ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ದಿನೇಶ ಅಮ್ಮಣ್ಣಾಯರ ದೊಡ್ಡಪ್ಪನ ಮಗ. ಹೀಗೆ ಅಮ್ಮಣ್ಣಾಯದ್ವಯರು ಬೈಪಾಡಿತ್ತಾಯರ ಬಂಧುಗಳೇ ಆಗಿದ್ದಾರೆ. ಹರಿನಾರಾಯಣ ಬೈಪಾಡಿತ್ತಾಯರ ತಮ್ಮಂದಿರೆಲ್ಲರೂ ಖ್ಯಾತ ಕಲಾವಿದರೇ ಆಗಿದ್ದಾರೆ.

ಕಡಬ ಮೋಹನ ಬೈಪಡಿತ್ತಾಯರು ಕಲಾವಿದರಾಗಿಯೂ ಯಕ್ಷಗಾನ ಹಿಮ್ಮೇಳ ಗುರುಗಳಾಗಿಯೂ ಪ್ರಸಿದ್ಧರು. ಮೋಹನ ಬೈಪಾಡಿತ್ತಾಯರು ಅಣ್ಣ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದಲೇ ತರಬೇತಿ ಪಡೆದವರು. ಕಿರಿಯ ತಮ್ಮ ಕೇಶವ ಬೈಪಾಡಿತ್ತಾಯರು ಹಿಮ್ಮೇಳ ಮುಮ್ಮೇಳ ಕಲಾವಿದರಾಗಿ ವ್ಯವಸಾಯ ಮಾಡಿದವರು. ಲಲಿತ ಕಲಾ ಕೇಂದ್ರದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯ ಕಲಿತು ತಿರುಗಾಟ ನಡೆಸಿದ್ದರು. ಕೇಶವ ಬೈಪಡಿತ್ತಾಯರು ಅಣ್ಣ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಮದ್ದಳೆ ವಾದನವನ್ನು ಕಲಿತು ಮೇಳದ ತಿರುಗಾಟವನ್ನು ನಡೆಸಿದವರು.

ಕುಡುಪು ಮತ್ತು ಕಟೀಲಿನ ಸಮೀಪದ ಎಕ್ಕಾರು ಮತ್ತು ಅಳದಂಗಡಿಯಲ್ಲಿ ವಾಸ್ತವ್ಯವಿದ್ದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಪ್ರಸ್ತುತ ಕೊಳಂಬೆ ಗ್ರಾಮದ ತಲಕಳದಲ್ಲಿ ವಾಸವಾಗಿದ್ದಾರೆ. ಕಟೀಲು, ಗಂಜಿಮಠ, ಆಲಂಗಾರು, ಕಾರ್ಕಳ ಮೊದಲಾದೆಡೆ ಕಲಿಕಾಸಕ್ತರಿಗೆ ತರಬೇತಿ ನೀಡಿ ಅಪಾರ ಶಿಷ್ಯಂದಿರನ್ನು ಹೊಂದಿರುವ ಬೈಪಾಡಿತ್ತಾಯರು ಪ್ರಸ್ತುತ ಕಲಿಕಾಸಕ್ತರಿಗೆ ಮನೆಯಲ್ಲಿಯೇ ಹೇಳಿಕೊಡುತ್ತಿದ್ದಾರೆ. ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ನೆಡ್ಲೆ ನರಸಿಂಹ ಭಟ್ ಸಂಸ್ಮರಣಾ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಪಡ್ರೆ ಚಂದು ಸ್ಮಾರಕ ಪ್ರಶಸ್ತಿ, ಪುತ್ತೂರು ಹೆಗ್ಡೆ ಪ್ರಶಸ್ತಿ, ಕೆರೆಮನೆ ನಾಟ್ಯೋತ್ಸವ, ಕಡಬ ಸಂಸ್ಮರಣಾ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನೂ ಪಡೆದಿರುತ್ತಾರೆ. ಅಲ್ಲದೆ ಅನೇಕ ಸಂಸ್ಥೆಗಳು ಮತ್ತು ಗಣ್ಯರಿಂದ ಗೌರವ ಸನ್ಮಾನಗಳನ್ನು ಪಡೆದಿರುತ್ತಾರೆ.

ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳು ಸಾಂಸಾರಿಕವಾಗಿಯೂ ತೃಪ್ತರು. ಇವರಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಗುರುಪ್ರಸಾದ್. ಸ್ನಾತಕೋತ್ತರ ಪದವೀಧರ. ಬೆಂಗಳೂರಿನಲ್ಲಿ ಬಾಸುಮತಿ ರೈಸ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್. ಇವರ ಪತ್ನಿ ಶ್ರೀಮತಿ ವಾಣಿ ಗುರುಪ್ರಸಾದ್. ಗೃಹಣಿ. ಕಲಾಸಕ್ತೆ. ವಾಣಿ, ಗುರುಪ್ರಸಾದ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ವಾತಿ ಪದವೀಧರೆ. ಉದ್ಯೋಗಸ್ಥೆ. ಅಜ್ಜಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಂದ ಭಾಗವತಿಕೆಯನ್ನು ಅಭ್ಯಸಿಸಿ ರಂಗಪ್ರವೇಶ ಮಾಡಿರುತ್ತಾಳೆ. ಪ್ರದರ್ಶನಗಳಲ್ಲಿ ಹಾಡುತ್ತಿದ್ದಾಳೆ. ಶಾಸ್ತ್ರೀಯ ಸಂಗೀತ ಮತ್ತು ವೀಣೆಯನ್ನು ಅಭ್ಯಸಿಸಿರುತ್ತಾಳೆ. ಪುತ್ರ ಶ್ರೇಯಸ್ ಪ್ರಥಮ ಪಿಯುಸಿ ವಿದ್ಯಾರ್ಥಿ. ಶಾಸ್ತ್ರೀಯ ಸಂಗೀತ ಮತ್ತು ಕೊಳಲು ಅಭ್ಯಸಿಸಿದ್ದಾನೆ.

ಬೈಪಾಡಿತ್ತಾಯ ದಂಪತಿಗಳ ದ್ವಿತೀಯ ಪುತ್ರ ಶ್ರೀ ಅವಿನಾಶ್ ಬೈಪಾಡಿತ್ತಾಯ. ಬಿ.ಎಸ್ ಸಿ ಪದವೀಧರರು. ಬೆಂಗಳೂರಿನಲ್ಲಿ ಪತ್ರಕರ್ತರು. ಕಳೆದ ಎರಡು ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ಉದ್ಯೋಗಿ. ಹದಿನಾಲ್ಕು ವರ್ಷ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಚಿಕ್ಕವನಿರುವಾಗಲೇ ಮದ್ದಳೆ ಕಲಿತಿದ್ದರು. ಅವಕಾಶ ಸಿಕ್ಕಾಗ ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ಮತ್ತು ಊರಿನ ಯಕ್ಷಗಾನ ಸಂಬಂಧೀ ಕಾರ್ಯಕ್ರಮಗಳಲ್ಲಿ ಸಕ್ರಿಯರು. ಇವರು ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿ ಶ್ರೀಮತಿ ವಾಣಿ ಅವಿನಾಶ್. ಕಲಾಸಕ್ತೆ. ಇವರು ಫ್ಯಾಶನ್ ಡಿಸೈನ್ ಉದ್ಯೋಗ ಮಾಡುತ್ತಾರೆ. ವಾಣಿ, ಅವಿನಾಶ್ ಬೈಪಾಡಿತ್ತಾಯ ದಂಪತಿಗಳ ಪುತ್ರ ಅಭಿಷೇಕ್ ಬೈಪಾಡಿತ್ತಾಯ ದ್ವಿತೀಯ ಪದವಿ ವಿದ್ಯಾರ್ಥಿ. ಅಜ್ಜ, ಅಜ್ಜಿಯರಿಂದ ಯಕ್ಷಗಾನ ಹಿಮ್ಮೇಳ ಕಲಿತು ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾನೆ.

ಶ್ರೀ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ದಂಪತಿಗಳು ಸೊಸೆಯಂದಿರ ಬಗೆಗೆ ಮೆಚ್ಚುಗೆಯ ನುಡಿಗಳನ್ನು ಆಡುತ್ತಾರೆ. ಕಲಾಸೇವೆಯನ್ನು ಎಷ್ಟು ಹೊತ್ತಿಗೆ ಮುಗಿಸಿ ಮನೆಗೆ ಬಂದರೂ ಬಳಿ ಬಂದು ಮಧುರ ಮಾತುಗಳಿಂದ ನುಡಿಸಿ ಶ್ರಮವನ್ನು ತಣಿಸುವ ಸೊಸೆಯಂದಿರ ಬಗೆಗೆ ಬೈಪಾಡಿತ್ತಾಯ ದಂಪತಿಗಳು ಮೆಚ್ಚುಗೆಯನ್ನು ಸೂಚಿಸುತ್ತಾರೆ. ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳಿಗೆ ಹಾಗೂ ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನು ಅನುಗ್ರಹಿಸಲಿ. 

ಲೇಖಕ: ರವಿಶಂಕರ್ ವಳಕ್ಕುಂಜ 

 

ಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು

ಫೋಟೋ ಕೃಪೆ: ಕಿಶನ್ ಹೊಳ್ಳ, ನೂಜಿಪ್ಪಾಡಿ

ಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ನಿಷ್ಠಾವಂತ, ಅರ್ಪಣಾ ಭಾವದ ಕಲಾವಿದ. ಸದಾ ಅಧ್ಯಯನಶೀಲ. ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ.

ಯಕ್ಷಗಾನದಲ್ಲಿ ಸ್ತ್ರೀ ವೇಷಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ತಾನು ಧರಿಸಿದ್ದು ಹೆಣ್ಣು ವೇಷ ಎಂಬ ಎಚ್ಚರ ಕೊನೆಯ ತನಕವೂ ಬೇಕು. ಅದನ್ನು ಉಳಿಸಿಕೊಳ್ಳಬೇಕು. ಗಂಡು ಕಲೆಯಾದ ಯಕ್ಷಗಾನದಲ್ಲಿ ಈಗ ನಾರಿಯರೂ ಮೆರೆಯುತ್ತಿದ್ದಾರೆ. ಸಂತೋಷದ ವಿಚಾರ. ಆದರೂ ಸ್ತ್ರೀಯರು ಪುರುಷ ವೇಷಗಳನ್ನು ಧರಿಸಿ ಅಭಿನಯಿಸುವುದು ಸುಲಭವಲ್ಲ. ಪಾತ್ರದ ಕೊನೆವರೆಗೂ ತಾನು ಧರಿಸಿದ್ದು ಪುರುಷ ವೇಷ ಎಂಬ ಎಚ್ಚರ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಪಾತ್ರವೂ ಪ್ರದರ್ಶನವೂ ಪೇಲವವಾಗುತ್ತದೆ.

ಪುರುಷರು ಸ್ತ್ರೀ ಪಾತ್ರಧಾರಿಯಾಗಿ, ಸ್ತ್ರೀಯರು ಪುರುಷ ಪಾತ್ರಗಳಲ್ಲಿ ಸರಿಯಾಗಿ ಯಶಸ್ವಿಯಾದರೆ ಅದು ಒಂದು ಸಾಧನೆಯೇ ಹೌದು. ಅಭಿನಂದಿಸಲೇ ಬೇಕು. ಯಕ್ಷಗಾನದಲ್ಲಿ ಹಿರಿಯ ಖ್ಯಾತ ಅನೇಕ ಸ್ತ್ರೀ ವೇಷಧಾರಿಗಳು ತಮ್ಮ ಪ್ರತಿಭಾ ವ್ಯಾಪಾರದಿಂದ ರಂಗದಲ್ಲಿ ರಂಜಿಸಿದರು. ಅಂತಹಾ ಶ್ರೇಷ್ಠ ಕಲಾವಿದರೇ ಉದಯೋನ್ಮುಖರಿಗೆ ಆದರ್ಶರು. ಪ್ರಸ್ತುತ ಯಕ್ಷಗಾನದಲ್ಲಿ ವೃತ್ತಿ ಕಲಾವಿದರಾಗಿ ಅನೇಕ ಉದಯೋನ್ಮುಖ ಸ್ತ್ರೀ ವೇಷಧಾರಿಗಳು ವ್ಯವಸಾಯ ಮಾಡುತ್ತಿದ್ದಾರೆ. ಅಂತಹಾ ಕಲಾವಿದರಲ್ಲೊಬ್ಬರು ಶ್ರೀ ಸಂದೀಪ್  ಕೋಳ್ಯೂರು. 


ಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು ಅವರ ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಳಿಯೂರು ಗ್ರಾಮದ ಕೋಳ್ಯೂರು ಪದವು. 1986ನೇ ಇಸವಿ ಜೂನ್ 4ರಂದು ಜನನ. ಶ್ರೀ ಚಂದ್ರಶೇಖರ ಎಸ್. ಮತ್ತು ಶ್ರೀಮತಿ ಕಲ್ಯಾಣಿ ಎಸ್. ದಂಪತಿಗಳ ಮೂವರು ಗಂಡುಮಕ್ಕಳಲ್ಲಿ ಇವರು ಹಿರಿಯವರು. ವಿದ್ಯಾರ್ಜನೆ ಪಿಯುಸಿ ವರೆಗೆ. ಕೋಳ್ಯೂರು ಶಾಲೆ, ಕೊಡ್ಲಮೊಗರು ವಾಣೀ ವಿಜಯ ಪ್ರೌಢಶಾಲೆ ಮತ್ತು ಮಂಗಳೂರು ಕುದ್ರೋಳಿ ನಾರಾಯಣಗುರು ಕಾಲೇಜಿನಲ್ಲಿ ವಿದ್ಯಾರ್ಜನೆ.

ಸಂದೀಪ್ ಅವರ ತಂದೆಯ ತಮ್ಮ ಶ್ರೀ ನಾರಾಯಣ ಎಸ್ ಮತ್ತು ತಾಯಿಯ ತಮ್ಮ ಶ್ರೀ ಲಿಂಗಪ್ಪ ಇವರು ಹವ್ಯಾಸಿ ನಾಟಕ ಕಲಾವಿದರು. ಕ್ಯಾಸೆಟ್ ಯುಗ. ಯಕ್ಷಗಾನ ಕ್ಯಾಸೆಟ್ ಗಳನ್ನು ಕೇಳಿ ಸಂತೋಷ ಪಡುತ್ತಿದ್ದ ಸಂದೀಪರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿಯು ಬೆಳೆದಿತ್ತು. ಸುಂಕದಕಟ್ಟೆ ಮತ್ತು ಆಸುಪಾಸಿನಲ್ಲಿ ನಡೆಯುತ್ತಿದ್ದ ಧರ್ಮಸ್ಥಳ, ಕರ್ನಾಟಕ, ಕದ್ರಿ ಮೇಳಗಳ ಆಟಗಳನ್ನು ನೋಡುತ್ತಿದ್ದರು.

ಪಾತಾಳ ಶ್ರೀ ಅಂಬಾಪ್ರಸಾದರ ಸುಭದ್ರೆಯ ವೇಷವನ್ನು ನೋಡಿ, ತಾನೂ ಸ್ತ್ರೀ ಪಾತ್ರಧಾರಿ ಆಗಬೇಕೆಂಬ ನಿರ್ಣಯವನ್ನು ಮಾಡಿದ್ದರು. ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೇ ವಿದ್ಯಾಭ್ಯಾಸ ನಿಲ್ಲಿಸಲು ಕಾರಣ. ಇದಕ್ಕೆ ಮನೆಯವರ ಆಕ್ಷೇಪ ಇತ್ತು. ಆದರೂ ಅಂದು ಆಕ್ಷೇಪಿಸಿದವರೆಲ್ಲರೂ ಇಂದು ಸಂದೀಪರ ಸಾಧನೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮನೆಯವರಿಗೂ ಊರಿನವರಿಗೂ ಸಂದೀಪ್ ನಮ್ಮೂರಿನ ಕಲಾವಿದನೆಂಬ ಹೆಮ್ಮೆಯಿದೆ.

ಇವರ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿ ಪೋಷಿಸಿದವರು ವಾರಣಾಸಿ ಶ್ರೀ ಸದಾಶಿವ ಭಟ್. ಇವರು ಹವ್ಯಾಸಿ ಭಾಗವತರು. ಕಲಾವಿದರಾದ ಶ್ರೀ ತನಿಯಪ್ಪ ಭಂಡಾರಿ ಕಳಿಯಾರು ಮತ್ತು ಶ್ರೀ ಶಂಕರ ಆಚಾರ್ಯ ಕೋಳ್ಯೂರು ಇವರಿಂದ ನಾಟ್ಯಾಭ್ಯಾಸ. “ಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿ, ವರ್ಕಾಡಿ, ಸುಂಕದಕಟ್ಟೆ’ ಈ ಸಂಘದ ಆಶ್ರಯದಲ್ಲಿ ಅಭ್ಯಾಸ. ಈ ಸಂಘದ ನೇತೃತ್ವ ವಹಿಸಿದವರು ಹವ್ಯಾಸಿ ಬಣ್ಣದ ವೇಷಧಾರಿ ಶ್ರೀ ನಾರಾಯಣ ಬೆಜ್ಜ ಅವರು. ಸಂಘದ ಪ್ರದರ್ಶನದಲ್ಲಿ ರಂಗಪ್ರವೇಶ. ಏಕಾದಶೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿಯಾಗಿ ಎರಡು ಬಾರಿ ಅಭಿನಯಿಸಿದ್ದರು. ಕಾಂತಾಬಾರೆ ಬೂದಾಬಾರೆ ಪ್ರಸಂಗದಲ್ಲೂ ಎರಡು ಬಾರಿ ಪಾತ್ರ ನಿರ್ವಹಿಸಿದ್ದರು.

ಮತ್ತೆ ಎಂಟು ದಿನಗಳ ಕಾಲ ವರ್ಕಾಡಿ ಐತಪ್ಪರ ಕದ್ರಿ ಮೇಳದಲ್ಲಿ ವೇಷ ಮಾಡಿದ್ದರು. ಈ ಸಂದರ್ಭದಲ್ಲಿ ಚಂದ್ರಮಂಡಲ ಶ್ರೀ ಗಣೇಶ ಮತ್ತು ಕಡಬ ದಿನೇಶ ರೈಗಳು ಪ್ರೋತ್ಸಾಹಿಸಿದ್ದರು. ಇವರ ಹೇಳಿಕೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ಮನೆಯಲ್ಲಿ ತಿಳಿಸದೇ ಧರ್ಮಸ್ಥಳಕ್ಕೆ ತೆರಳಿದ್ದರು. ಕೇಂದ್ರಕ್ಕೆ ಸೇರಿದ ವಿಚಾರ, ಕೆಲ ದಿನಗಳ ಬಳಿಕವೇ ಮನೆಯವರಿಗೆ ತಿಳಿಯಿತು.

ಕೇಂದ್ರದ ಗುರುಗಳಾದ ದಿವಾಣ ಶ್ರೀ ಶಿವಶಂಕರ ಭಟ್ಟರಿಂದ ನಾಟ್ಯಾಭ್ಯಾಸ. ಕೇಂದ್ರದಲ್ಲಿ ಇವರು ಸಹಪಾಠಿಗಳಾಗಿದ್ದವರು ತಿರುಮಲೇಶ್ವರ ಅಳಿಕೆ, ವಿಠಲ ತ್ರಾಸಿ, ಚಿದಾನಂದ ಗೌಡ, ನೇಜಿಕಾರು ಗಣೇಶ, ಹರೀಶ ಕಳಸ, ಪ್ರವೀಣ ಮರ್ಕಮೆ. 
2008ನೇ ಇಸವಿಯಲ್ಲಿ ಸಂದೀಪ್ ಕೋಳ್ಯೂರು ಅವರು ತಿರುಗಾಟ ಆರಂಭಿಸಿದ್ದರು. ಕಟೀಲು ಎರಡನೇ ಮೇಳ. ಶ್ರೀ ಬಲಿಪ ಪ್ರಸಾದರು ಮತ್ತು ಪಟ್ಲ ಶ್ರೀ ಸತೀಶ ಶೆಟ್ಟರು ಭಾಗವತರಾಗಿದ್ದರು. ಪೂರ್ವರಂಗದಲ್ಲಿ ಮುಖ್ಯ ಸ್ತ್ರೀ ವೇಷ ಮತ್ತು ಪ್ರಸಂಗದ ಸಣ್ಣಪುಟ್ಟ ಮಾಡುತ್ತಿದ್ದರು.

ಮೇಳಕ್ಕೆ ಸೇರಿದ ಮೂರನೆಯ ದಿನ ದೇವಿ ಮಹಾತ್ಮೆ ಪ್ರಸಂಗದಲ್ಲಿ ಆದಿಮಾಯೆ ಪಾತ್ರವನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಎರಡನೇ ವರ್ಷದಲ್ಲಿ ಮಾಲಿನಿ, ಸೌಗಂಧಿಕೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸುವುದು ಸಂದೀಪರಿಗೆ ತುಂಬಾ ಇಷ್ಟದ ವಿಚಾರ. ಎರಡನೇ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಮತ್ತೆ ಎರಡನೇ ಸ್ತ್ರೀ ವೇಷಧಾರಿಯಾಗಿ ನಾಲ್ಕನೇ ಮೇಳಕ್ಕೆ.

ನಾಲ್ಕನೇ ಮೇಳದಲ್ಲಿ ಆರು ವರ್ಷಗಳ ವ್ಯವಸಾಯ. ಈ ಸಂದರ್ಭದಲ್ಲಿ ಎರಡನೇ ವೇಷದ ಜತೆಗೆ ಪ್ರಸಂಗದ ಮುಖ್ಯ ಸ್ತ್ರೀ ಪಾತ್ರಗಳನ್ನೂ ಮಾಡುವ ಅವಕಾಶವೂ ದೊರೆಯಿತು. ಹೀಗೆ ಪುರಾಣ ಪ್ರಸಂಗದ ಅನುಭವಗಳನ್ನು ಗಳಿಸಿಕೊಂಡರು. ಬಳಿಕ ಐದನೇ ಮೇಳದಲ್ಲಿ ಒಂದು ವರ್ಷ ಕಲಾಸೇವೆ. ಮರಳಿ ನಾಲ್ಕನೇ ಮೇಳಕ್ಕೆ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಪುನರಾಗಮನ. ಶ್ರೀದೇವಿ ಪಾತ್ರಧಾರಿಯಾಗಿ.

ಸಂದೀಪರ ಹೆಚ್ಚಿನ ಎಲ್ಲಾ ವೇಷಗಳನ್ನು ನೋಡಿದ್ದೇನೆ. ಸಹಕಲಾವಿದನಾಗಿ ಅಭಿನಯಿಸಿದ್ದೇನೆ. ಒಳ್ಳೆಯ ನಾಟಕೀಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ಚೆನ್ನಾಗಿ ಸಂಭಾಷಣೆ ಮಾಡುತ್ತಾರೆ. ನಾಟ್ಯ ಮತ್ತು ಮಾತುಗಾರಿಕೆ ಎರಡರಲ್ಲೂ ಅವರ ಪ್ರತಿಭೆಯನ್ನು ಗುರುತಿಸಬಹುದು. ವೃತ್ತಿ ಕಲಾವಿದನಾಗಿ ಹದಿನಾಲ್ಕು ವರ್ಷಗಳ ಅನುಭವ. ಸ್ತ್ರೀ ವೇಷಗಳು ಹೆಚ್ಚಾಗಿ ಶೃಂಗಾರ ಮತ್ತು ಕರುಣ ರಸಕ್ಕೆ ಸಂಬಂಧಪಟ್ಟವುಗಳು. ಈ ಎರಡೂ ವಿಭಾಗಗಳಲ್ಲಿ ಸಂದೀಪರು ಉತ್ತಮವಾಗಿ ಅಭಿನಯಿಸುತ್ತಾರೆ ಎಂಬುದು ನೋಟಕನಾಗಿ, ಸಹಕಲಾವಿದನಾಗಿ ನನ್ನ ಅನಿಸಿಕೆ.

ಸಂದೀಪ್ ಕೋಳ್ಯೂರು ಅವರ ಪತ್ನಿ ಶ್ರೀಮತಿ ಮೋಹಿನಿ. 2018ರಲ್ಲಿ ವಿವಾಹ. ಸಂದೀಪ್ ಮೋಹಿನಿ ದಂಪತಿಗಳಿಗೆ ಒಬ್ಬ ಪುತ್ರ. ಹೆಸರು ಮಾಸ್ಟರ್ ಪುನೀಶ್ (ಎರಡು ವರ್ಷ). ಬಾಲಕ ಪುನೀಶ್ ಗೆ ಉಜ್ವಲ ಭವಿಷ್ಯವು ದೊರಕಲಿ. ಶ್ರೀ ಸಂದೀಪ್ ಕೋಳ್ಯೂರು ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಮಾಸದ ಮೆಲುಕು – 106

ಕರೋನಾಘಾತದಿಂದ ನಿಂತ ನೀರಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಕರೋನ ಇಳಿಮುಖದಿಂದಾಗಿ ಮತ್ತೆ ತನ್ನ ಕಲಾ ಜಗತ್ತಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ನಿರಂತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದ ನಮ್ಮ ಕಲಾಕದಂಬ ಆರ್ಟ್ ಸೆಂಟರ್ ಮತ್ತೆ ತನ್ನ ಕಾರ್ಯಕ್ರಮಗಳ ಮೂಲಕ ಕಲಾ ಪ್ರೇಮಿಗಳ ಮನ ತಣಿಸಲು ಸಜ್ಜಾಗಿ ನಿಂತಿದೆ.


ಇದೇ ಬರುವ ದಿನಾಂಕ-17-10-2021ರ ಭಾನುವಾರ ಸಂಜೆ 5.15ಕ್ಕೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಕೆ ಎಸ್ ಆರ್ ಟಿ ಸಿ ಲೇ ಔಟ್ ನಲ್ಲಿರುವ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ತನ್ನ ತಿಂಗಳ ಕಾರ್ಯಕ್ರಮವಾದ “ಮಾಸದ ಮೆಲುಕು” ಶಿರೋನಾಮೆಯಡಿಯಲ್ಲಿ ಮಾಸದ ಮೆಲುಕು-106ರ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಒಂದು ಕಾರ್ಯಕ್ರಮದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಮುರಳೀಧರ ನಾವಡ ಹಾಗೂ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಸುಗಮ ಸಂಗೀತ ಗಾಯನ ಹಾಗೂ “ದಕ್ಷಯಜ್ಞ” ಎಂಬ ಯಕ್ಷಗಾನ ಪ್ರದರ್ಶನವನ್ನು ಪ್ರದರ್ಶಿಸಲಿದ್ದಾರೆ.


ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ದ ಕವಿ ದಿವಂಗತ ಗೋಪಾಲಕೃಷ್ಣ ಅಡಿಗರ ಸಹೋದರರು ಹಾಗೂ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ನಿರ್ದೇಶಕರೂ ಆದ ಶ್ರೀ ಜಯರಾಮ ಅಡಿಗರು, ರಂಗಭೂಮಿ,ಕಿರುತೆರೆ, ಚಲನಚಿತ್ರ ನಟಿ ಹಾಗೂ ನಿರ್ಮಾಪಕಿಯಾದ ಶ್ರೀಮತಿ ನಮಿತಾ ರಾವ್, ಶ್ರೀ ಸಿದ್ಧಿಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.

ವಿಶ್ವನಾಥ ಉರಾಳ, ದೇವರಾಜ ಕರಬ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದು ಹೆಚ್ಚಿನ ಮಾಹಿತಿಗಾಗಿ ಮುರಳೀಧರ ನಾವಡ-9886066732, 8310482075 ಸಂಪರ್ಕಿಸಬಹುದು.
ಧನ್ಯವಾದಗಳು
ಕಲಾಕದಂಬ ಆರ್ಟ್ ಸೆಂಟರ್, ಬೆಂಗಳೂರು

ಅನುಭವಿ ಬಣ್ಣದ ವೇಷಧಾರಿ – ಶ್ರೀ ಶಶಿಧರ ಶೆಟ್ಟಿ ಪಂಜ ಕೊಯಿಕುಡೆ

ತೆಂಕುತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ ವಿಶೇಷ ಸ್ಥಾನ, ಗೌರವಗಳ ಜತೆ ಪ್ರದರ್ಶಿಸುವಲ್ಲಿ ತನ್ನದೇ ಆದ ರೀತಿ, ನಿಯಮಗಳೂ ಇವೆ. ಇದು ವೇಗದ ಯುಗ. ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ಬಣ್ಣದ ವೇಷಗಳಿಗೆ ಅವಕಾಶ, ಪ್ರೋತ್ಸಾಹಗಳು ಸರಿಯಾಗಿ ದೊರಕುತ್ತಿಲ್ಲ ಎಂಬ ಮಾತು ಕೇಳಿ ಬಂದರೆ ಅದು ತಪ್ಪಾಗದು.

ಹಾಗಾಬಾರದು. ಯಕ್ಷಗಾನದಲ್ಲಿ ಬಣ್ಣ ಎಂಬ ವಿಭಾಗವು ಬಲಿಷ್ಠವಾಗಿಯೇ ಇರಬೇಕು. ಅದು ಸೊರಗಲೇ ಬಾರದು. ಸೊರಗಿದರೆ ಯಕ್ಷಗಾನದ ಸೌಂದರ್ಯವೂ ನಷ್ಟವಾಗುವುದೆಂದು ನಮಗೆಲ್ಲರಿಗೂ ತಿಳಿದಿದೆ. ಖಂಡಿತವಾಗಿಯೂ ಬಣ್ಣದ ವೇಷಗಳಿಗೆ ಬೇಕಾದಷ್ಟು ಸಮಯ ಅವಕಾಶಗಳು ಮುಂದಿನ ದಿನಗಳಲ್ಲಿ ಸಿಗಲಿ. ಯಕ್ಷಗಾನದಲ್ಲಿ ಆ ವಿಭಾಗವು ವಿಜೃಂಭಿಸಲಿ ಎಂದು ಹಾರೈಸೋಣ.

ಇಂದು ತೆಂಕುತಿಟ್ಟು ಯಕ್ಷಗಾನದಲ್ಲಿ ಅನೇಕ ಕಲಾವಿದರು ಬಣ್ಣದ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜ ಬದುಕಿನಲ್ಲಿ ಸಾತ್ವಿಕರಾದರೂ ರಂಗದಲ್ಲಿ ಅಸುರರಾಗಿ ಅಬ್ಬರಿಸುತ್ತಿದ್ದಾರೆ. ಇದುವೇ ಪರಕಾಯ ಪ್ರವೇಶ. ಪಾತ್ರಗಳನ್ನು ಕಟ್ಟಿಕೊಡುವ ರೀತಿ. ಪಾತ್ರಗಳ ಸ್ವಭಾವಗಳನ್ನು ಅರಿತು ಅಭಿನಯಿಸುವ ಕಲೆಯು. ಹಿರಿಯ ಕಲಾವಿದರ ಜತೆಗೆ ಉದಯೋನ್ಮುಖ ಬಣ್ಣದ ವೇಷಧಾರಿಗಳೂ ಬೆಳೆದು ಅನುಭವಗಳನ್ನು ಗಳಿಸಿಕೊಳ್ಳುತ್ತಿದ್ದಾರೆ.

ಶ್ರೀ ಶಶಿಧರ ಶೆಟ್ಟಿ ಪಂಜ, ಕೊಯಿಕುಡೆ ಅವರು ಕಟೀಲು ಮೇಳದ ಅನುಭವಿ ಬಣ್ಣದ ವೇಷಧಾರಿ. ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಶಶಿಧರ ಶೆಟ್ಟಿ ಅವರು ಮಂಗಳೂರು ತಾಲೂಕಿನ ಪಂಜ ಕೊಯಿಕುಡೆ ಗ್ರಾಮದ ಮೂಡುಮನೆಯಲ್ಲಿ ಶ್ರೀ ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಶೆಟ್ಟಿ ದಂಪತಿಗಳ ಪುತ್ರನಾಗಿ 1968 ನವೆಂಬರ್ 22ರಂದು ಜನಿಸಿದರು. ಶ್ರೀ ನಾರಾಯಣ ಶೆಟ್ಟರು ಕೃಷಿಕರು. ಯಕ್ಷಗಾನ ಕಲಾಸಕ್ತರೂ ಆಗಿದ್ದರು.

ಶಶಿಧರ ಶೆಟ್ಟಿ ಅವರಿಗೆ ಬಾಲ್ಯದಲ್ಲಿ ಯಕ್ಷಗಾನಾಸಕ್ತಿ ಇತ್ತು. ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ಶಾಲಾ ಕಲಿಕೆ 6ನೇ ತರಗತಿ ವರೆಗೆ. ಪಕ್ಷಿಕೆರೆ ಶಾಲೆಯ ವಿದ್ಯಾರ್ಥಿಯಾಗಿ ಓದಿದ್ದರು. ಹೆಚ್ಚಿನ ಕಲಿಕೆಗೆ ಅವಕಾಶವಿರಲಿಲ್ಲ. ಉದ್ಯೋಗವನ್ನರಸಿ ಮುಂಬೈ ಮಹಾನಗರಿಗೆ ತೆರಳಿದರು. ಮುಂಬೈಯಲ್ಲಿ ಇರುವಾಗಲೂ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಹತ್ತು ವರ್ಷಗಳ ಕಾಲ ಮುಂಬೈ ನಗರಿಯಲ್ಲಿದ್ದು ಊರಿಗೆ ಮರಳಿದ್ದರು.

ಕಲಾವಿದನಾಗಬೇಕೆಂಬ ಆಸೆಗೆ ಆಸರೆಯಾದುದು ಶ್ರೀ ಬಪ್ಪನಾಡು ಮೇಳ. ಶ್ರೀ ಶಶಿಧರ ಶೆಟ್ಟಿ ಅವರು ಮೊದಲು ತಿರುಗಾಟ ನಡೆಸಿದ್ದು ಅಡ್ಯಾರು ಶ್ರೀ ಶಂಕರ ಆಳ್ವರ ನೇತೃತ್ವದ ಬಪ್ಪನಾಡು ಮೇಳದಲ್ಲಿ. ಹೆಜ್ಜೆಗಾರಿಕೆಯನ್ನು ಕಲಿಯುತ್ತಾ ವೇಷ ಮಾಡಲು ತೊಡಗಿದರು. ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತೊಡಗಿಸಿಕೊಂಡು ಬಳಿಕ ಕಟೀಲು ಮೇಳಕ್ಕೆ ಸೇರಿದ್ದರು. ಕಟೀಲು 1ನೇ ಮೇಳದಲ್ಲಿ ಒಂದು ತಿರುಗಾಟದ ನಂತರ ನಾಟ್ಯ ಕಲಿಕೆಗಾಗಿ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ತೆಂಕುತಿಟ್ಟಿನ ಪ್ರಖ್ಯಾತ ಸ್ತ್ರೀ ಪಾತ್ರಧಾರಿ ಕೋಳ್ಯೂರು ಶ್ರೀ ರಾಮಚಂದ್ರ ರಾವ್ ಅವರಿಂದ ತರಬೇತಿಯನ್ನು ಹೊಂದಿದರು.

ಬಳಿಕ ಕಟೀಲು 3ನೇ ಮೇಳದಲ್ಲಿ ವ್ಯವಸಾಯ ಆರಂಭಿಸಿದ್ದರು. ಪೂರ್ವರಂಗದಲ್ಲಿ ಪೀಠಿಕಾ ಸ್ತ್ರೀ ವೇಷದಿಂದ ತೊಡಗಿ ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಮಾಡುತ್ತಾ ಸಾಗಿದರು. ಒಂಭತ್ತು ವರ್ಷಗಳ ತಿರುಗಾಟದಲ್ಲಿ ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಗಳನ್ನು ನಿರ್ವಹಿಸಿದರು. ಬಳಿಕ ಬಲಿಪ ಶ್ರೀ ನಾರಾಯಣ ಭಾಗವತರ ಸೂಚನೆ, ಪ್ರೋತ್ಸಾಹದಂತೆ ಬಣ್ಣದ ವೇಷಗಳತ್ತ ಗಮನ ಹರಿಸಿದರು.

ಅನಿವಾರ್ಯ ಸಂದರ್ಭಗಳಲ್ಲಿ ಬಣ್ಣದ ವೇಷಗಳನ್ನು ನಿರ್ವಹಿಸಿದರೂ ಅದು ಖಾಯಂ ಆಗಿತ್ತು. ಶಶಿಧರ ಶೆಟ್ಟರು ಬಣ್ಣದ ವೇಷಧಾರಿಯಾಗಿ ಬೆಳೆಯಲು, ಕಾಣಿಸಿಕೊಳ್ಳಲು ಅದು ವೇದಿಕೆಯಾಗಿತ್ತು. ಕಳೆದ ಇಪ್ಪತ್ತೊಂದು ವರ್ಷಗಳಿಂದ ಕಟೀಲು 2ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿರುತ್ತಾರೆ. ಇವರು ಪ್ರಸಂಗಗಳ ನಡೆಯನ್ನು ಚೆನ್ನಾಗಿ ಬಲ್ಲವರು. ಸುಲಭವಾಗಿ ಪಾತ್ರವನ್ನು ನಿರ್ವಹಿಸಲು ಇದರಿಂದ ಅನುಕೂಲವಾಗಿತ್ತು.

ಬಲಿಪರು, ಪೆರುವಾಯಿ ನಾರಾಯಣ ಭಟ್, ರೆಂಜಾಳ ರಾಮಕೃಷ್ಣ ರಾವ್, ಪೆರುವಾಯಿ ನಾರಾಯಣ ಶೆಟ್ಟಿ, ಅಜೆಕಾರು ರಾಜೀವ ಶೆಟ್ಟಿ, ಬಾಯಾರು ರಮೇಶ ಭಟ್, ದಿನೇಶ ಶೆಟ್ಟಿ ಕಾವಳಕಟ್ಟೆ, ಬಣ್ಣದ ಸುಬ್ರಾಯ, ನಾರಾಯಣ ಕುಲಾಲ್ ಮೊದಲಾದ ಅನುಭವಿಗಳ ಒಡನಾಟವು ಕಲಿಕೆಗೆ ಸಹಕಾರಿಯಾಗಿತ್ತು. ಇವರು ವೇಷಭೂಷಣ ತಯಾರಿಕೆಯಲ್ಲೂ ಅನುಭವವನ್ನು ಹೊಂದಿದ್ದಾರೆ. ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಆಶ್ರಯದಲ್ಲಿ ಕಳೆದ 5 ವರ್ಷಗಳಿಂದ ಯಕ್ಷಗಾನ ರಂಗಪ್ರಸಾಧನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಲಾವಿದನಾಗಿ ತಿರುಗಾಟ ನಡೆಸಲು ಪ್ರೋತ್ಸಾಹಿಸಿದ ಕಲ್ಲಾಡಿ ಮನೆಯ ಯಜಮಾನರುಗಳನ್ನು, ಕಟೀಲು ಶ್ರೀ ಆಸ್ರಣ್ಣ ಬಂಧುಗಳನ್ನು ಗೌರವಿಸುವ ಶ್ರೀ ಶಶಿಧರ ಶೆಟ್ಟರು, ಸಹಕರಿಸಿದ ಸಹಕಲಾವಿದರು ಮತ್ತು ಕಲಾಭಿಮಾನಿಗಳನ್ನು ಸದಾ ನೆನಪಿಸುತ್ತಾರೆ. ಕಟೀಲು ಮೇಳದ ಬಣ್ಣದ ವೇಷಧಾರಿ ಶ್ರೀ ಶಶಿಧರ ಶೆಟ್ಟರ ಪತ್ನಿ ಶ್ರೀಮತಿ ಸುನೀತಾ ಶೆಟ್ಟಿ. ಪ್ರಸ್ತುತ ಶ್ರೀ ಶಶಿಧರ ಶೆಟ್ಟಿ ದಂಪತಿಗಳು ಸಚ್ಚರಿಪೇಟೆ ಸಮೀಪದ ಬೋಳದಗುತ್ತು ಎಂಬಲ್ಲಿ ವಾಸಿಸುತ್ತಿದ್ದಾರೆ. ಇವರ ಕಲಾಸೇವೆಯು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಶ್ರೀ ಶಶಿಧರ ಶೆಟ್ಟಿ ಅವರ ಮೇಲಿರಲಿ ಎಂಬುದೇ ನಮ್ಮ ಆಶಯ. 

ಲೇಖಕ: ರವಿಶಂಕರ್ ವಳಕ್ಕುಂಜ 

ಎಡನೀರು ಮಠದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಅವರಿಂದ ಭರತನಾಟ್ಯ ಪ್ರದರ್ಶನ

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಎಡನೀರು ಮಠದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಅವರಿಂದ 17.10.2021, ಆದಿತ್ಯವಾರದಂದು ಬೆಳಗ್ಗೆ 10.30ಕ್ಕೆ ಭರತನಾಟ್ಯ ಪ್ರದರ್ಶನ ನಡೆಯಲಿದೆ.