ಉಡುಪಿ : ಹಿರಿಯ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ (79 ವರ್ಷ) ಇಂದು ಬಂಟ್ವಾಳ ತಾಲೂಕಿನ ಮಿತ್ತನಡ್ಕದ ಸ್ವಗೃಹದಲ್ಲಿ 26-01-2022 ರಂದು ನಿಧನರಾದರು.
ಬಾಲ್ಯದಲ್ಲಿಯೇ ಯಕ್ಷಗಾನದಿಂದ ಆಕರ್ಷಿತರಾಗಿ ಕುರಿಯ ವಿಠಲ ಶಾಸ್ತ್ರಿಗಳಲ್ಲಿ ನಾಟ್ಯಾಭ್ಯಾಸ ಮಾಡಿದ್ದರು. ಧರ್ಮಸ್ಥಳ, ಮುಲ್ಕಿ, ಸೌಕೂರು, ಕುತ್ಯಾಳ, ಸುಬ್ರಹ್ಮಣ್ಯ, ಕೂಡ್ಲು ಮೇಳಗಳಲ್ಲಿ ಸೇವೆಸಲ್ಲಿಸಿ ಸುಂಕದಕಟ್ಟೆ ಮೇಳದಲ್ಲಿ ಸುದೀರ್ಘ 33 ವರ್ಷ ತಿರುಗಾಟ ನಡೆಸಿದ್ದರು. ಒಟ್ಟು ನಾಲ್ಕೂವರೆ ದಶಕಗಳ ಕಾಲ ಕಲಾಸೇವೆಗೈದಿದ್ದಾರೆ.
ಸ್ತ್ರೀವೇಷ ಹಾಗೂ ಪುರುಷ ಪಾತ್ರಗಳಲ್ಲಿ ಸಮಾನ ಸಿದ್ಧಿ ಪಡೆದ ಇವರು ದೇವೇಂದ್ರನ ಪಾತ್ರದಲ್ಲಿ ವಿಶೇಷ ಪ್ರಸಿದ್ಧಿ ಪಡೆದಿದ್ದರು. ತುಳು ಮತ್ತು ಕನ್ನಡ ಯಕ್ಷಗಾನದಲ್ಲಿ ತಮ್ಮ ಕಲಾಪ್ರೌಢಿಮೆ, ಮಾತುಗಾರಿಕೆ ಮೆರೆದಿದ್ದರು.
ಮೊನ್ನೆ ನಿಧನರಾದ ಮುಳಿಯಾಲು ಭೀಮ ಭಟ್ಟರೊಂದಿಗೆ ದೀರ್ಘ ಕಾಲದ ಯಕ್ಷಗಾನ ತಿರುಗಾಟ ಮಾಡಿದ್ದರು. ಇವರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಯಕ್ಷಗಾನದ ಪ್ರಸಿದ್ಧ ಕಲಾವಿದ ದೇವಿ ಭಟ್ರು ಎಂದೇ ಹೆಸರು ಪಡೆದಿದ್ದ ಮುಳಿಯಾಲ ಭೀಮ ಭಟ್ (85 ವರ್ಷ) ಇವರು 25-01-2022 ಮಂಗಳವಾರ ಬೆಳಗ್ಗೆ ಕಾಂತಾವರದಲ್ಲಿ ನಿಧನರಾದರು.
ಸಕ್ರಿಯ ಯಕ್ಷಗಾನ ರಂಗದಿಂದ ನಿವೃತ್ತರಾದ ಬಳಿಕ ಕಾಂತಾವರ ದೇವಸ್ಥಾನದಲ್ಲಿ ಸೇವೆಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ದೇವಿಯ ಪಾತ್ರಕ್ಕೆ ಜೀವ ತುಂಬಿದ್ದ ಇವರನ್ನು ಯಕ್ಷಗಾನ ಅಭಿಮಾನಿಗಳು ದೇವಿ ಭಟ್ರು ಎಂದೇ ಕರೆಯುತ್ತಿದ್ದರು.
ದಿವಂಗತ ಕುರಿಯ ವಿಠಲ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ್ದ ಭೀಮ ಭಟ್ಟರು 5ನೇ ತರಗತಿ ಓದಿದವರು. ಅನಂತರ ಯಕ್ಷಗಾನ ಕಲಿತು ಧರ್ಮಸ್ಥಳ, ಕೂಡ್ಲು, ಕುಂಡಾವು, ಕಟೀಲು ಹಾಗೂ ಸುಂಕದಕಟ್ಟೆ ಮೇಳಗಳಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಕಲಾಸೇವೆಗೈದಿದ್ದಾರೆ.
ಸ್ತ್ರೀವೇಷಗಳಲ್ಲದೆ ಪುರುಷ ಪಾತ್ರಗಳಿಗೂ ಜೀವ ತುಂಬಿದವರು. ಮಳೆಗಾಲದಲ್ಲಿ ಯಕ್ಷಗಾನದ ತಂಡ ಕಟ್ಟಿಕೊಂಡು ರಾಜ್ಯ ಹಾಗೂ ದೇಶದ ವಿವಿಧೆಡೆ ಯಕ್ಷಗಾನ ಪ್ರದರ್ಶನಗಳನ್ನು ಮಾಡಿಸಿದ್ದರು. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.