ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಹಾಗೂ ಹಿರಿಯರ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
23 ವರ್ಷದೊಳಗಿನ ವಿಭಾಗದಲ್ಲಿ ಕಾಲೇಜಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ಪವಿತ್ರ.ಜಿ ಟ್ರಿಪಲ್ ಜಂಪ್‌ನಲ್ಲಿ 12.52 ಮೀಟರ್ ದೂರ ಜಿಗಿಯುವ ಮೂಲಕ ನೂತನ ಕೂಟ ದಾಖಲೆಯನ್ನು ಸ್ಥಾಪಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಪವಿತ್ರ ಅವರು 5.59 ಮೀಟರ್ ಹಾರಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.
ಇದೇ ವಿಭಾಗದಲ್ಲಿ ದ್ವಿತೀಯ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಕೀರ್ತಿರಾಜ್.ಕೆ.ಎಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಕ್ರೀಡಾಕೂಟದಲ್ಲಿಯೂ ನೂತನ ಕೂಟ ದಾಖಲೆಗಳನ್ನು ಸ್ಥಾಪಿಸಿದ್ದರು. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ತರಬೇತಿಯನ್ನು ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.
ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉಡುಪಿಯ ವಿದ್ಯಾರ್ಥಿನಿ ಕು| ಪ್ರನುಷಾ ಎಂ.ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕರಾಟೆ ಪಂದ್ಯಾಟದ 40-45 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಇಲಾಖೆಗಳ ಸಹಕಾರದಲ್ಲಿ ಈ ಸ್ಪರ್ಧೆಯನ್ನು ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 26 ಆಗಸ್ಟ್ 2022ರಂದು ಆಯೋಜಿಸಲಾಗಿತ್ತು.
ವಿಜೇತ ವಿದ್ಯಾರ್ಥಿನಿಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಕಾರ್ನಾಡ್ ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿರುತ್ತಾರೆ.
ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಪುತ್ತೂರು, ಅ 30: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕಲ್ಲಡ್ಕದ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದ ಯೋಗಾಸನ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ(ಪುತ್ತೂರಿನ ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ) ಪ್ರಥಮ ಸ್ಥಾನ ಗಳಿಸಿದ್ದಾರೆ. ರಿಧಮಿಕ್ ವಿಭಾಗದ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮನ್ನಿತ್ ಎನ್ ಗೌಡ (ಬನ್ನೂರಿನ ರಮೇಶ ಗೌಡ ಎನ್ ಮತ್ತು ನಳಿನಿ ದಂಪತಿ ಪುತ್ರ) ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಾಗರಿ(ಮೈಸೂರಿನ ನೂತನ್ ಕುಮಾರ್ ಮತ್ತು ಸುಚಿತ್ರಾ ರೈ ದಂಪತಿ ಪುತ್ರಿ) ವೈಯಕ್ತಿಕ ವಿಭಾಗದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳು ಹಾವೇರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯೋಗಾಸನ ಸ್ಫರ್ಧೆಗೆ ಆಯ್ಕೆ ಆಗಿದ್ದಾರೆ.
ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕುಟುಂಬದ ಆಚರಣೆಯಾಗಿತ್ತು ಈ ಹಬ್ಬವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಉದ್ದೀಪನ ಗೊಳಿಸುವುದಕ್ಕಾಗಿ ಬಳಸಿಕೊಂಡರು. ಕ್ರಿಶ 1892 ರಲ್ಲಿ ಮಹಾರಾಷ್ಟ್ರದಲ್ಲಿ ಬಾವು ಸಾಹೇಬ್ ಲಕ್ಷ್ಮಣ್ ಜವೆಲ್ ಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರಾದರೂ 1893ರಲ್ಲಿ ತಿಲಕರು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಪ್ರೇರೇಪಿಸಿದರು.
ತಮ್ಮ ಸಂಪಾದಕತ್ವದ ಕೇಸರಿ ಪತ್ರಿಕೆಯಲ್ಲಿ ವ್ಯಾಪಕ ಪ್ರಚಾರ ನೀಡಿ 1894 ರಲ್ಲಿ ಪುಣೆಯ ಕೇಸರಿವಾಡದಲ್ಲಿ ಪ್ರಥಮ ಸಾರ್ವಜನಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ವೇದಿಕೆಯಾಯಿತು.
ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳನ್ನು ಬಹಿಷ್ಕರಿಸಿದ ಸಂದರ್ಭಗಳಲ್ಲಿಯೂ ಗಣೇಶೋತ್ಸವವು ಒಂದು ರಾಷ್ಟ್ರೀಯ ಹಬ್ಬದಂತೆ ಬೆಳೆದು ಹಲವು ಎಡರು ತೊಡರುಗಳ ನಡುವೆ ವ್ಯಾಪಕವಾಗಿ ಆಚರಿಸಲ್ಪಡುತ್ತಾ ಬಂದಿರುವುದನ್ನು ಕಾಣಬಹುದಾಗಿದೆ.
128 ವರ್ಷಗಳ ಇತಿಹಾಸವಿರುವ ಸಾರ್ವಜನಿಕ ಗಣೇಶೋತ್ಸವ ಈಗ ಪ್ರತಿ ಹಳ್ಳಿ ಪಟ್ಟಣಗಳಲ್ಲಿಯೂ ಒಂದು ದಿನದಿಂದ ತೊಡಗಿ ತಿಂಗಳ ಪರ್ಯಂತ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೆರುಗಿನಲ್ಲಿ ಈ ಬಾರಿ ಗಣೇಶೋತ್ಸವ ಹಬ್ಬಕ್ಕೆ ವಿಶೇಷ ಮೆರುಗು ಬಂದಿದೆ. ಕಳಿಯ, ನ್ಯಾಯ ತರ್ಪು ಮತ್ತು ಓಡಿಲ್ನಾಳ ಗ್ರಾಮಗಳ ಗ್ರಾಮಸ್ಥರ ಭಾಗವಹಿಸುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಈ ಪರಿಸರದ ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳುಗಳಾದ ಆರ್.ಎನ್ ಸಂಪಿಗೆತ್ತಾಯ, ಭಂಡಾರಿ ಕೋಡಿ ನಾರಾಯಣ ಶೆಟ್ಟಿ, ಸಂಬೊಳ್ಯ ನಾರಾಯಣ ಭಟ್, ಜಿ ಕೇಶವ ಪೈ, ಕುಂಟಿನಿ ನಾರಾಯಣ ಭಟ್, ಬಿಳಿಬೈಲು ವೆಂಕಪ್ಪ ಪೂಜಾರಿ, ಕೆ. ಮೋನಪ್ಪ ಆಚಾರ್ಯ ಗೇರುಕಟ್ಟೆ ಮೊದಲಾದವರು ಸೇರಿ ಕೊರಂಜ ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರೆಂದು ತಿಳಿದು ಬರುತ್ತದೆ. ವೈದಿಕ ನೇತೃತ್ವವನ್ನು ಅನೂಚಾನವಾಗಿ ಕುಂಟಿಣಿ ರಾಮಕೃಷ್ಣ ಭಾಂಗಿಣ್ಣಾಯ ಮತ್ತು ಈಗ ಅವರ ಮಗ ರಾಘವೇಂದ್ರ ಭಾಂಗಿಣ್ಣಾಯ ನಡೆಸಿಕೊಂಡು ಬರುತ್ತಿದ್ದಾರೆ.
ಸುಬ್ರಾಯ ಭಟ್ ಕುಂಟಿನಿ, ನಾರಾಯಣ ಆಚಾರ್ಯ ಗೇರುಕಟ್ಟೆ , ಬೊಮ್ಮಯ್ಯ ಗೌಡ ಮೊದಲಾದವರು ಗಣೇಶೋತ್ಸವದ ಸಂದರ್ಭದಲ್ಲಿ ನೀಡುತ್ತಿದ್ದ ಸಹಕಾರ ಸ್ಮರಣೀಯವಾದದ್ದು.
ಹರಿದಾಸ ಪಡಂತ್ತಾಯ, ಕೃಷ್ಣರಾವ್ ಗೇರುಕಟ್ಟೆ, ವಸಂತ ಮಜಲು, ಜನಾರ್ಧನ ಪೂಜಾರಿ. ಎಂ, ರತ್ನಾಕರ ಪೂಜಾರಿ, ಜಿ ವೆಂಕಟ್ರಮಣ ಪೈ, ಸುರೇಂದ್ರ ಕುಮಾರ್ ಜೈನ್ ಕಳಿಯ ಬೀಡು ಡಾ.ಅನಂತ್ ಭಟ್, ಹರಿಪ್ರಸಾದ್ ಕೆ.ಎಸ್, ತುಕಾರಾಮ ಪೂಜಾರಿ, ಸತೀಶ್ ಕುಮಾರ್ ಆರ್.ಯನ್, ಸದಾಶಿವ ಆಚಾರ್ಯ, ರತ್ನಾಕರ ಪೂಜಾರಿ ಬಳ್ಳಿ ದಡ್ಡ, ರತ್ನಾಕರ.ಎಂ, ಪ್ರಭಾಕರ ಆಚಾರ್ಯ ,ಶಿವರಾಯ ಪ್ರಭು, ನವೀನ್ ಚಂದ್ರ ದಾಸಕೋಡಿ, ಸುಧಾಕರ ಮಜಲು, ಕೇಶವ ಬಂಗೇರ, ಸುರೇಶ್ ಕುಮಾರ್ ಆರ್.ಯನ್, ರಾಘವ ಗೇರುಕಟ್ಟೆ, ಭುವನೇಶ ,ಶರತ್ ಕುಮಾರ್ ಶೆಟ್ಟಿ, ಯೋಗೀಶ್ ಸುವರ್ಣ, ಪುರಂದರ ಗೇರುಕಟ್ಟೆ, ಉಮೇಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಹರೀಶ್ ಕುಮಾರ್. ಬಿ, ಶೇಖರ ನಾಯ್ಕ್ , ಲೋಕೇಶ್ ಕುಮಾರ್ .ಯನ್, ಜಯಪ್ರಕಾಶ್ ಗೇರುಕಟ್ಟೆ, ವಿಭುದೇಂದ್ರ ಆಳ್ವ, ಗಿರೀಶ್ ನಾಳ ಮೊದಲಾದವರು ಗಣೇಶೋತ್ಸವ ಸೇವಾ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯಕರ್ತರಾಗಿ ಮತ್ತು ಹಲವರು ಸ್ವಯಂಸೇವಕರಾಗಿ ದುಡಿಯುತ್ತಾ ಬಂದಿದ್ದಾರೆ.
1998ರಲ್ಲಿ ಕೊರಂಜ ಶಾಲೆಯಲ್ಲಿ ಗಣೇಶೋತ್ಸವದ ರಜತ ಮಹೋತ್ಸವವು ಸಮಿತಿಯ ಅಧ್ಯಕ್ಷರಾಗಿದ್ದ ದಿವಾಕರ ಆಚಾರ್ಯ ಗೇರುಕಟ್ಟೆ ಇವರ ನೇತೃತ್ವದಲ್ಲಿ ಜರಗಿತ್ತು. ಮೊದಲ ಬಾರಿಗೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ನಡೆಸಲಾಯಿತು.
2006 -07ರಲ್ಲಿ ಸಮಿತಿಯು ನೊಂದಾವಣೆಗೊಂಡಿದ್ದು ಕಳೆದ 12 ವರ್ಷಗಳಿಂದ ಪುರುಷೋತ್ತಮ.ಜಿ ಶ್ರೀ ಗಣೇಶೋತ್ಸವ ಸೇವಾ ಸಮಿತಿ ( ರಿ) ಇದರ ಅಧ್ಯಕ್ಷರಾಗಿದ್ದಾರೆ.
ಆರಂಭದಲ್ಲಿ ಶಾಲಾ ಒಳಾಂಗಣದಲ್ಲಿ ನಂತರ ಶಾಲಾ ಬಯಲು ರಂಗ ಮಂದಿರದಲ್ಲಿ ಗಣೇಶೋತ್ಸವ ನಡೆಯುತ್ತಿದ್ದು ಕಳೆದ ಎಂಟು ವರ್ಷಗಳಿಂದ ಕಳಿಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಉಪನ್ಯಾಸಗಳೊಂದಿಗೆ ನಡೆಯುತ್ತಿದೆ.
ಮಹಾಪೂಜೆಯ ಬಳಿಕ ಶೋಭಾ ಯಾತ್ರೆಯು ಗೇರುಕಟ್ಟೆ ಪೇಟೆ ಮತ್ತು ದಕ್ಷಿಣಕ್ಕೆ ಪರಪ್ಪು, ನಾಳದ ವರೆಗೆ ನಡೆದು ಶಾಲಾ ಆಭರಣದಲ್ಲಿ ಮೂರ್ತಿಯ ವಿಸರ್ಜನೆಯಾಗುತ್ತಿತ್ತು. ಗ್ರಾಮಸ್ಥರು, ಭಕ್ತಾಭಿಮಾನಿಗಳು ಸೇವಾ ರೂಪದಲ್ಲಿ ಮತ್ತು ಪ್ರಾಯೋಜಕರಾಗಿ ಕಳೆದ 49 ವರ್ಷಗಳಿಂದ ಸಹಕರಿಸುತ್ತಾ ಬಂದಿದ್ದಾರೆ.
50ನೇ ವರ್ಷದ ಗಣೇಶೋತ್ಸವವು ಮೂರು ದಿನಗಳ ಪರ್ಯಂತ ನಡೆಯುತ್ತಿದ್ದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಕುಮಾರ್ ಆರ್.ಯನ್ , ಕಾರ್ಯದರ್ಶಿಯಾಗಿ ರಾಜೇಶ ಪೆಂರ್ಬುಡ, ಉಪಾಧ್ಯಕ್ಷರಾಗಿ ಸದಾನಂದ ಶೆಟ್ಟಿ, ನಾಣ್ಯಪ್ಪ ಪೂಜಾರಿ, ದಯರಾಜ ಕೆ.ಪಿ, ಯಶೋಧರ ಶೆಟ್ಟಿ ಕೊರಂಜ, ವಿಜಯ ಕುಮಾರ್, ರಾಘವ.ಎಚ್ ಮತ್ತು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಆ.31 ರಿಂದ ಸೆಪ್ಟೆಂಬರ್ 2 ರವರೆಗೆ ಗಣೇಶನಿಗೆ ವಿವಿಧ ಸೇವೆಗಳು, ಭಜನಾ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ಗಣಾಧಿಪತ್ಯಯಕ್ಷಗಾನ ತಾಳಮದ್ದಳೆ, ಬಯಲಾಟ, ಸೆ.2ರಂದು ಬೆಳಿಗ್ಗೆ ಗಂಟೆ 10 ರಿಂದ ಪಟ್ಲ ಸತೀಶ್ ಶೆಟ್ಟಿ , ಸತ್ಯನಾರಾಯಣ ಪುಣಿಚಿತ್ತಾಯ, ರವಿಚಂದ್ರ ಕನ್ನಡಿ ಕಟ್ಟೆ, ಕಾವ್ಯಶ್ರೀ ಅಜೇರು ಬಳಗದಿಂದ ಯಕ್ಷ ಗಾನವೈಭವ ನಡೆಯಲಿದೆ.
ವಿದ್ಯಾಭಾರತಿ ಕರ್ನಾಟಕ, ದ.ಕ.ಜಿಲ್ಲೆ ಹಾಗೂ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕಇದರ ಆಶ್ರಯದಲ್ಲಿ ಆಗಸ್ಟ್ 24ರಂದು ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 14ರ ವಯೋಮಾನದ ಮತ್ತು 17ರ ವಯೋಮಾನದ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
14ರ ವಯೋಮಾನದ ಬಾಲಕರ ತಂಡದಲ್ಲಿ 8ನೇ ತರಗತಿಯ ಮನ್ವಿತ್ ನೆಕ್ಕರೆ(ಕಬಕ ನಿವಾಸಿ ಶ್ರೀ ಉಮೇಶ್.ಎನ್ ಮತ್ತು ಕವಿತ ಇವರ ಪುತ್ರ), ಪ್ರಣಾಮ್.ಪಿ.ಶೆಟ್ಟಿ(ಪುಣಚ ನಿವಾಸಿ ಪ್ರವೀಣ್.ಎಸ್ ಮತ್ತು ಸತ್ಯ ಇವರ ಪುತ್ರ), ಸವಂತ್ ರೈ.ಎಂ (ಕೆದಂಬಾಡಿ ನಿವಾಸಿ ಶ್ರೀ ಸುರೇಶ್ ರೈ ಮತ್ತು ಸೌಮ್ಯ ಇವರ ಪುತ್ರ),
ಆರ್ಯನ್.ಜೆ (ಪೇರಾಜೆ ನಿವಾಸಿ ಶ್ರೀ ಜಗದೀಶ್ ಮತ್ತು ಪವಿತ್ರ ಇವರ ಪುತ್ರ), 7ನೇ ತರಗತಿಯ ಮೋಕ್ಷಿತ್ (ನೇರಳಕಟ್ಟೆ ನಿವಾಸಿ ಶ್ರೀ ಜಗದೀಶ್ ಮತ್ತು ಪ್ರೇಮ ಇವರ ಪುತ್ರ), ಪ್ರೀತಮ್ (ಮಿತ್ತೂರು ನಿವಾಸಿ ಜಯಂತ ಗೌಡ ಮತ್ತು ಲೀಲಾವತಿ ಇವರ ಪುತ್ರ), ಪ್ರಣಾಮ್ (ಮಿನಾವು ನಿವಾಸಿ ಶ್ರೀ ಕೇಶವ ಮತ್ತು ಶುಭಶ್ರೀ ಇವರ ಪುತ್ರ),
ದನ್ವಿತ್ (ಬಲ್ನಾಡು ನಿವಾಸಿ ಶ್ರೀ ಕೆ.ಮಾಧವ ಗೌಡ ಮತ್ತು ಯಶೋಧ ಇವರ ಪುತ್ರ), ತ್ರಿಜಲ್ (ಕೈಕಾರ ನಿವಾಸಿ ಶ್ರೀ ವಿನೋದ್ ಮತ್ತು ಶರಿಕ ಇವರ ಪುತ್ರ), ವೈಶಾಖ್ (ಬುಳ್ಳೇರಿಕಟ್ಟೆ ನಿವಾಸಿ ಶ್ರೀ ಗಣೇಶ್ ಎಮ್ ಮತ್ತು ಸರಸ್ವತಿ.ಪಿ ಇವರ ಪುತ್ರ) ಮತ್ತು 6ನೇ ತರಗತಿಯ ಚಿನ್ಮಯಿ (ಒಳತ್ತಡ್ಕ ನಿವಾಸಿ ಶ್ರೀ ಸೇಸಪ್ಪ ಮತ್ತು ಚಂದ್ರಿಕಾ ಇವರ ಪುತ್ರ), ಮತ್ತು ರಿತೇಶ್ (ಕಬಕ ನಿವಾಸಿ ಶ್ರೀ ವೆಂಕಪ್ಪ ಮತ್ತು ವೀಣ ಇವರ ಪುತ್ರ) ಹಾಗೂ
17ರ ವಯೋಮಾನದ ಬಾಲಕರ ತಂಡದಲ್ಲಿ10ನೇ ತರಗತಿಯ ಶರಣ್.ಎಸ್.ರೈ (ಕೃಷ್ಣನಗರ ನಿವಾಸಿ ಶ್ರೀ ಸೀತಾರಾಮ್ ಮತ್ತು ಸವಿತ ರೈಇವರ ಪುತ್ರ), ಮೊಹಮ್ಮದ್ ಅನಸ್ (ಬುಳ್ಳೇರಿಕಟ್ಟೆ ನಿವಾಸಿ ಶ್ರೀ ಅಶ್ರಫ್ ಮತ್ತು ರಹಿಮತ್ ಇವರ ಪುತ್ರ), ಲಿಖಿತ್ ಗೌಡ (ಸಂಟ್ಯಾರ್ ನಿವಾಸಿ ಶ್ರೀ ಚೆನ್ನಪ್ಪ ಮತ್ತು ಯಶಕಲಾ ಇವರ ಪುತ್ರ),
ಯಶಸ್ವಿನ್.ಡಿ (ಕಬಕ ನಿವಾಸಿ ಲೋಕೇಶ್ ಮತ್ತು ಲೀಲಾವತಿ ಇವರ ಪುತ್ರ),ಕಿಶನ್.ಬಿ (ಉರಿಮಜಲು ನಿವಾಸಿ ಶ್ರೀ ದಿನೇಶ್‌ಕುಮಾರ್ ಮತ್ತು ಪೂರ್ಣಿಮ ಇವರ ಪುತ್ರ), ಶಶಾಂಕ್.ಎಂ (ಸುಳ್ಯ ನಿವಾಸಿ ಶ್ರೀ ಮೋಹನಪ್ಪ ಮತ್ತು ಶಾಂತಿ ಇವರ ಪುತ್ರ), ಪ್ರಧಾನ್.ಕೆ (ತೆಂಕಿಲ ನಿವಾಸಿ ಚಂದ್ರ.ಕೆ ಮತ್ತು ಶಶಿಕಲಾ ಇವರ ಪುತ್ರ),
ಜೀವಿತ್.ಡಿ (ಕೋಡಿಮರ ನಿವಾಸಿ ಶ್ರೀ ಪ್ರೇಮಚಂದ್ರ ಮತ್ತು ಜಯಶ್ರೀ ಇವರ ಪುತ್ರ),ತ್ರಿಶೂಲ್‌ರಾಜ್.ಕೆ.ಎಲ್ (ಪುತ್ತೂರು ನಿವಾಸಿ ಶ್ರೀಮತಿ ಲೋಕಮಣಿ ಇವರ ಪುತ್ರ), ಮತ್ತು 9ನೇ ತರಗತಿಯ ಧ್ಯಾನ್(ಕಬಕ ನಿವಾಸಿ ಆನಂದ.ಕೆ ಮತ್ತು ಮಮತ.ಕೆಇವರ ಪುತ್ರ), ಚವನ್ (ಪಡ್ಡಾಯೂರು ನಿವಾಸಿ ಶ್ರೀ ಕುಮಾರ್ ನಾಯಕ್ ಮತ್ತು ಇಂದಿರಾ.ಪಿ ಇವರ ಪುತ್ರ),
10ನೇ ತರಗತಿಯ ನಿಶಾಂತ್ (ಪೆರಿಯತೋಡಿ ನಿವಾಸಿ ಶ್ರೀ ಕೆ.ರವಿ ಮತ್ತು ಪ್ರಮೀಣ ಇವರ ಪುತ್ರ) ಇವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಾಜಸ್ಥಾನದಲ್ಲಿ ನಡೆದ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟದಲ್ಲಿ ಯುವಕರ ವಿರುದ್ಧ ಹಿರಿಯರು ಕಬಡ್ಡಿ ಆಡಿದ್ದಾರೆ.
ರಾಜಸ್ಥಾನದ 44,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಾರಂಭವಾದ ರಾಜೀವ್ ಗಾಂಧಿ ಗ್ರಾಮೀಣ ಒಲಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ ಹಿರಿಯ ಪುರುಷರು ಮತ್ತು ಯುವಕರು ಕಬಡ್ಡಿ ಪಂದ್ಯವನ್ನು ಆಡುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ರಾಜಸ್ಥಾನ ಕಬಡ್ಡಿ ಪಂದ್ಯದಲ್ಲಿ, ಹಿರಿಯರ ಸ್ವಿಫ್ಟ್ ಯುವಕರನ್ನು ದಿಗ್ಭ್ರಮೆಗೊಳಿಸಿತು. ರಾಜಸ್ಥಾನ ಸರ್ಕಾರವು ರಾಜ್ಯದ 44,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂದು ತಿಂಗಳ ಕಾಲ ನಡೆಯುವ ರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದೆ.
ಹಿರಿಯರು ಮತ್ತು ಯುವಕರು ಒಟ್ಟಾಗಿ ಸಾಂಪ್ರದಾಯಿಕ ಆಟ ಕಬಡ್ಡಿಯನ್ನು ಆನಂದಿಸುತ್ತಿದ್ದಾರೆ. ವೀಡಿಯೊವು ವಯಸ್ಸಾದ ಸಂಭಾವಿತ ವ್ಯಕ್ತಿಯೊಬ್ಬ ಆರು ಯುವಕರ ವಿರುದ್ಧ ಆಡುವುದನ್ನು ತೋರಿಸುತ್ತದೆ ಮತ್ತು ವೃದ್ಧನು ತನ್ನ ನುಣುಪಾದ ನಡೆಗಳಿಂದ ಎಲ್ಲರನ್ನು ಬೆರಗುಗೊಳಿಸುತ್ತಾನೆ.
राजीव गांधी ग्रामीण ओलंपिक खेल
आज खेलों के माध्यम से दिखा ग्रामीणों के जोश का नया रूप
बुजुर्ग और युवा मिलकर ले रहे कबड्डी के पारंपरिक खेल का आनंद
ಪುತ್ತೂರು: ದೇಶದಲ್ಲಿರುವ ಅಗಾಧವಾದ ಮೂಲವಸ್ತುಗಳನ್ನು ಬಳಸಿ ನಮಗೆ ಬೇಕಾದಂತಹ ವಸ್ತುಗಳನ್ನು ಇಲ್ಲಿಯೇ ತಯಾರಿಸಿ ಬಳಸುವುದರಿಂದ ಇತರ ದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾಣಿಜ್ಯೋದ್ಯಮ ಅಭಿವೃದ್ಧಿ ಕೋಶ ಹಾಗೂ ಸ್ವದೇಶಿ ಜಾಗರಣಾ ಮಂಚ್ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಸ್ವಾವಲಂಬಿ ಭಾರತ ಒಂದು ಪರಿಕಲ್ಪನೆ ಎನ್ನುವ ವಿಷಯದ ಬಗೆಗಿನ ವಿಚಾರ ಸಂಕಿರಣದಲ್ಲಿ ಮಾತಾಡಿದರು.
ಸ್ಥಳೀಯವಾಗಿ ದೊರಕುವ ದೇಶೀಯ ಸಂಪತ್ತನ್ನು ವಿನಿಯೋಗಿಸಿಕೊಂಡು ಅದನ್ನು ಉತ್ಪನ್ನವಾಗಿ ಅಭಿವೃದ್ಧಿಪಡಿಸುವುದರ ಜತೆಯಲ್ಲಿ ಅದಕ್ಕೆ ವ್ಯಾಪಕವಾದ ಮಾರುಕಟ್ಟೆಯನ್ನು ಒದಗಿಸಿಕೊಡುವಲ್ಲಿ ತಂತ್ರಜ್ಞರೆಲ್ಲರೂ ಶ್ರಮಿಸಬೇಕೆಂದು ನುಡಿದರು. ಭಾರತವು ಹತ್ತು ಹಲವು ವಿಚಾರಗಳಲ್ಲಿ ಮೊದಲಿಗನಾಗಿದೆ, ಈ ನಿಟ್ಟಿನಲ್ಲಿ ಭಾರತೀಯತೆಯೊಂದಿಗೆ ಹೊಸತನವನ್ನು ತರುವುದಕ್ಕಾಗಿ ಯುವಜನತೆ ಸನ್ನದ್ಧರಾಗಬೇಕು ಮತ್ತು ಅದಕ್ಕೆ ಬೇಕಾದ ತಾಂತ್ರಿಕ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದರಿಂದಾಗಿ ಭಾರತವು ಸ್ವಾವಲಂಬನೆಯನ್ನು ಸಾಧಿಸುವುದರ ಜತೆಯಲ್ಲಿ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಮಾತನಾಡಿ ಶಿಕ್ಷಣ ಪಡೆದು ಉದ್ಯೋಗ ಅರಸುವುದು ನಮ್ಮ ಕಾಯಕವಾಗಬಾರದು. ಬದಲಿಗೆ ದೊರೆಯುವ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಉದ್ದಿಮೆಯನ್ನು ಸ್ಥಾಪಿಸಬೇಕು ತನ್ಮೂಲಕ ಇತರರಿಗೆ ಉದ್ಯೋಗ ದಾತರಾಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ .ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮ ಸಂಯೋಜಕ ಕಾಲೇಜಿನ ವಾಣಿಜ್ಯೋದ್ಯಮ ಅಭಿವೃದ್ಧಿ ಕೋಶದ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ ವಂದಿಸಿದರು.
ತುಳು ಬಾಷೆಗೆ ಮಾನ್ಯತೆ ಸಿಗಬೇಕು ಮತ್ತು ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬ ತುಳುವರ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ತಿಳಿಸುವ ವಿಭಿನ್ನ ಯೋಜನೆಯನ್ನು ತುಳುವೆರೆ ಕುಡ್ಲ (ರಿ) ತುಳು ಸಂಘಟನೆ ,ತುಳುನಾಡು ವಾರ್ತೆ ವಾರ ಪತ್ರಿಕೆ ಮತ್ತು ನಮ್ಮ ಟಿ.ವಿ ಸಹಯೋಗದಲ್ಲಿ ದಿ. 01.09.2022ನೇ ಗುರುವಾರ ತುಳುನಾಡಿನ ತುತ್ತ ತುದಿಯಾದ ಬೆಳ್ತಂಗಡಿ ತಾಲೂಕಿನ “ಬಂಜಾರು ಮಲೆ” ಎಂಬ ಪ್ರದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಈ ಅಭಿಯಾನವು 1 ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್ ತುಳುನಾಡಿನ ಜನತೆಯಿಂದ ಬರೆಯಿಸಿ ಕಳುಹಿಸುವ ಗುರಿಯನ್ನು ಹೊಂದಿದ್ದು. ಈಗಾಗಲೇ ಅಭಯಾನಕ್ಕೆ ಹಲವು ಸಂಘಟನೆಗಳ ಬೆಂಬಲ ದೊರೆತಿದೆ.
ಅಭಿಯಾನದ ಆಯೋಜಕರುಗಳು ತುಳುನಾಡಿನ ಎಲ್ಲಾ ರಾಜಕೀಯ, ಧಾರ್ಮಿಕ ಮತ್ತು ಎಲ್ಲಾ ಸಂಘಟನೆಗಳಿಗೆ ಈ ಅಭಿಯಾನದಲ್ಲಿ ನಮ್ಮೊಂದಿಗೆ ಕೈ ಜೋಡಿಸುವಂತೆ ವಿನಂತಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 9845858594 ಮೊಬೈಲ್ ನಂಬರನ್ನು ಸಂಪರ್ಕಿಸಿ.
ಸಂಗಮ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಯಕ್ಷಸಂಗಮ ಉಪ್ಪಿನಂಗಡಿ ಹಾಗೂ ವಾಟ್ಸಾಪ್ ಬಳಗದ ವತಿಯಿಂದ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷ ಪಂಚಮ 2022, 5 ನೇ ವರ್ಷದ ಯಕ್ಷೋತ್ಸವ ಪ್ರಯುಕ್ತ ಪರಿಣಯತ್ರಯ (ಅಸಿಕ ಪರಿಣಯ, ಉಷಾ ಪರಿಣಯ, ಸ್ವಯಂಪ್ರಭಾ ಪರಿಣಯ), ದುಂದುಭಿ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸೆಪ್ಟೆಂಬರ್ 17 ರ ಶನಿವಾರದಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ, ಸಂಜೆ 5.30 ರಿಂದ ಮರುದಿನ ಮುಂಜಾನೆಯವರೆಗೆ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ, ಪುತ್ತೂರು ಹಾಗೂ ಕರಾವಳಿಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪರಿಣಯತ್ರಯ ಹಾಗೂ ದುಂದುಭಿ ಎಂಬ ಪ್ರದರ್ಶನ ನಡೆಯಲಿರುವುದು.
ಯಕ್ಷಗಾನದ ಅದ್ವಿತೀಯ ಹಿಮ್ಮೇಳ ಕಲಾವಿದರಾದ ಕೀರ್ತಿಶೇಷ ಶ್ರೀ ಕಡಬ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಕೀರ್ತಿಶೇಷ ಶ್ರೀ ವಿನಯ ಆಚಾರ್ಯ ಕಡಬ ಇವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುತ್ತಿರುವ ಕಡಬದ್ವಯ ಸಂಸ್ಮರಣ ಯಕ್ಷಗಾನ ಪ್ರಶಸ್ತಿ 2022 ಕಾರ್ಯಕ್ರಮ ದಿನಾಂಕ 09.10.2022ನೇ ಆದಿತ್ಯವಾರ ನಡೆಯಲಿದೆ.
ಅಪರಾಹ್ನ 1.45 ಘಂಟೆಗೆ ಆರಂಭವಾಗಲಿರುವ ಕಾರ್ಯಕ್ರಮ ಶ್ರೀ ರಾಧಾಕೃಷ್ಣ ಭಜನಾ ಯುವಕ ಸಂಘ, ಕಿನ್ನಿಕಂಬಳ, ಗುರುಪುರ ಕೈಕಂಬ ಇಲ್ಲಿ ನಡೆಯಲಿದೆ.
ಈ ಬಾರಿಯ ಕಡಬದ್ವಯ ಸಂಸ್ಮರಣ ಯಕ್ಷಗಾನ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಮದ್ದಳೆಗಾರ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ ಅವರಿಗೆ ನೀಡಲಾಗುತ್ತದೆ.
ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ
ಸಂಸ್ಮರಣಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಾರ್ಯಕ್ರಮದ ವಿವರಗಳಿಗೆ ಕರಪತ್ರದ ಚಿತ್ರಗಳನ್ನು ನೋಡಿ