Tuesday, March 17, 2026
Home Blog Page 131

ತನ್ನೊಡನೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ ಹಿಂದೂ ಹುಡುಗಿಯನ್ನು ಕೊಂದು, 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಮುಸ್ಲಿಂ ಯುವಕ – ಲವ್ ಜಿಹಾದಿನ ಕರಾಳ ಮುಖ ಬಯಲು 

0

ತನ್ನೊಡನೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ ಹಿಂದೂ ಹುಡುಗಿಯು ಮದುವೆಯಾಗುವಂತೆ ಒತ್ತಾಯಿಸಿದಾಗ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಗೆಳತಿಯನ್ನು ಕತ್ತು ಹಿಸುಕಿ, ಅವಳನ್ನು ತುಂಡುಗಳಾಗಿ ಕತ್ತರಿಸಿ ಅವಳ ದೇಹದ ಭಾಗಗಳನ್ನು ದೆಹಲಿಯಾದ್ಯಂತ ಅಲ್ಲಲ್ಲಿ ಬಿಸಾಡಿ ಚದುರಿಸಿದ ಘಟನೆ ನಡೆದಿದೆ.

ಈ ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕತ್ತು ಹಿಸುಕಿ, ಅವಳನ್ನು ತುಂಡುಗಳಾಗಿ ಕತ್ತರಿಸಿ ಅವಳ ದೇಹದ ಭಾಗಗಳನ್ನು ದೆಹಲಿಯಾದ್ಯಂತ ಅಲ್ಲಲ್ಲಿ ಎಸೆದನು. ಸಂತ್ರಸ್ತೆ, 27 ವರ್ಷದ ಶ್ರದ್ಧಾ ವಾಕರ್, ಅಫ್ತಾಬ್ ಅಮೀನ್ ಪೂನಾವಾಲಾ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಆಕೆಯ ಪೋಷಕರು ಒಟ್ಟಿಗೆ ಇರುವುದನ್ನು ವಿರೋಧಿಸಿದ ನಂತರ ಅವರು ದೆಹಲಿಗೆ ಓಡಿಹೋಗಿದ್ದರು.

ಆದಾಗ್ಯೂ, ಶ್ರದ್ಧಾ ತನ್ನ ಗೆಳೆಯ ಅಫ್ತಾಬ್‌ನನ್ನು ಮದುವೆಗೆ ಒತ್ತಾಯಿಸಲು ಪ್ರಾರಂಭಿಸಿದಾಗ ಇಬ್ಬರ ನಡುವೆ ವಿಷಯಗಳು ಹದಗೆಟ್ಟವು. ಮದುವೆಯಾಗಲು ಇಷ್ಟವಿಲ್ಲದ ತನ್ನ ಆತ ಇಂತಹ ಭಯಾನಕ ಘೋರ ರೀತಿಯಲ್ಲಿ ತನ್ನನ್ನು ಮುಗಿಸಿ ಕೊನೆಗೊಳಿಸುತ್ತಾನೆ ಎಂದು ಅವಳು ಸ್ವಲ್ಪವೂ ಊಹಿಸಿರಲಿಲ್ಲ.

ಬಹುಶಃ ಈ ಘೋರ ಸಂಬಂಧದ ಅತ್ಯಂತ ನಂಬಲಾಗದ ಅಂಶವೆಂದರೆ ಕೊಲೆ ಸುಮಾರು ಆರು ತಿಂಗಳವರೆಗೆ ಬೆಳಕಿಗೆ ಬರಲಿಲ್ಲ. ಸಂತ್ರಸ್ತೆಯ ತಂದೆ ಕಾಣೆಯಾದವರ ವರದಿಯನ್ನು ದಾಖಲಿಸುವವರೆಗೆ ಮತ್ತು ಪೊಲೀಸರು ಅವನ ಬಾಗಿಲು ಬಡಿಯುವವರೆಗೂ ಆರೋಪಿ ಆರಾಮವಾಗಿ ದೆಹಲಿಯಲ್ಲಿ ತಿರುಗಾಡಿದ.

ಸಂತ್ರಸ್ತೆ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆಕೆ ಅಫ್ತಾಬ್‌ನನ್ನು ಭೇಟಿಯಾದಳು. ಶೀಘ್ರದಲ್ಲೇ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆದರೆ ಶ್ರದ್ಧಾ ಕುಟುಂಬ ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಇಬ್ಬರೂ ದೆಹಲಿಗೆ ಓಡಿಹೋದರು, ಅಲ್ಲಿ ಅವರು ಛತ್ತರ್‌ಪುರ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದರು.

ಶ್ರದ್ಧಾ ಅಫ್ತಾಬ್ ಅವರನ್ನು ಮದುವೆಯಾಗಲು ಬಯಸಿದ್ದರು ಆದರೆ ಅವನಿಗೆ ಇಷ್ಟವಿರಲಿಲ್ಲ. ಇದರಿಂದ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೇ 18ರಂದು ಇಬ್ಬರ ನಡುವೆ ಮದುವೆ ವಿಷಯವಾಗಿ ತೀವ್ರ ಜಗಳವಾಗಿತ್ತು. ಕ್ಷಣಾರ್ಧದಲ್ಲಿ ಅಫ್ತಾಬ್ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದಾನೆ. ಬಂಧನವನ್ನು ತಪ್ಪಿಸಲು, ಅವನು ಅವಳ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿದನು. ಶ್ರದ್ಧಾ ಅವರ ಅವಶೇಷಗಳನ್ನು ಸಂಗ್ರಹಿಸಲು 300-ಲೀಟರ್ ಫ್ರಿಜ್ ಖರೀದಿಸಿದೆ ಎಂದು ಅಫ್ತಾಬ್ ನಂತರ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರತಿ ರಾತ್ರಿ, ಮುಂದಿನ 16 ದಿನಗಳವರೆಗೆ, ಅವರು ದೇಹದ ಒಂದೊಂದೇ ಭಾಗಗಳನ್ನು ದೆಹಲಿಯಾದ್ಯಂತ ಅಲ್ಲಲ್ಲಿ ಎಸೆಯುತ್ತಾ ವಿಲೇವಾರಿ ಮಾಡುತ್ತಿದ್ದ. ಕೊಳೆತ ವಾಸನೆ ಬರದಂತೆ ಮನೆಯಲ್ಲಿ ಅಗರಬತ್ತಿ ಹಚ್ಚಿ ಇಡುತ್ತಿದ್ದ. ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ವಾಸಿಸುವ ಶ್ರದ್ಧಾಳ ಕುಟುಂಬವು ಅವಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಕಳವಳಗೊಂಡಿತು. ಆಕೆಯ ತಂದೆ ವಿಕಾಸ್ ಮದನ್ ವಾಕರ್ ಅವರು ಆಗಸ್ಟ್‌ನಲ್ಲಿ ಮಾಣಿಕ್‌ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದವಳ ದೂರನ್ನು ಸಲ್ಲಿಸಿದರು.

ಈ ತಿಂಗಳ ಆರಂಭದಲ್ಲಿ, ವಿಕಾಸ್ ತನ್ನ ಮಗಳನ್ನು ಹುಡುಕಲು ದೆಹಲಿಗೆ ಬಂದನು ಆದರೆ ಛತ್ತರ್‌ಪುರದ ಬಾಡಿಗೆ ಫ್ಲಾಟ್‌ನಲ್ಲಿ ಅವಳು ಕಾಣಿಸಲಿಲ್ಲ. ಮಹಾರಾಷ್ಟ್ರ ಪೊಲೀಸರು ಪ್ರಕರಣವನ್ನು ದೆಹಲಿ ಪೊಲೀಸರಿಗೆ ರವಾನಿಸಿದ್ದಾರೆ. ಅಫ್ತಾಬ್ ತನ್ನ ಮಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಮತ್ತು ಆಗಾಗ್ಗೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಶ್ರದ್ಧಾಳ ತಂದೆ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ತಾಂತ್ರಿಕ ಕಣ್ಗಾವಲು ಬಳಸಿ, ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದರು. ಅವರನ್ನು ವಿಚಾರಣೆಗಾಗಿ ಕರೆದೊಯ್ಯಲಾಯಿತು ಅಲ್ಲಿ ಆತನು ತಾನು ಮಾಡಿದ ಎಲ್ಲಾ ಕೃತ್ಯಗಳನ್ನು ಒಪ್ಪಿಕೊಂಡನು. ನಂತರ ಪೊಲೀಸರು ನಗರದ ಅರಣ್ಯ ಪ್ರದೇಶದಲ್ಲಿ ಶ್ರದ್ಧಾಳ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದರು ಮತ್ತು ಕೆಲವು ಮಾನವ ಮೂಳೆಗಳನ್ನು ವಶಪಡಿಸಿಕೊಂಡರು. ನವೆಂಬರ್ 14, ಸೋಮವಾರದಂದು ಅಫ್ತಾಬ್‌ನನ್ನು ಬಂಧಿಸಲಾಯಿತು.

ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು, ತನ್ನ ಹೇಳಿಕೆಯನ್ನು ನೀಡಲು ಆರಂಭದಲ್ಲಿ ಕರೆದಾಗ, ಜಗಳದ ನಂತರ ಶ್ರದ್ಧಾ ಮೇ 2022 ರಲ್ಲಿ ತನ್ನನ್ನು ತೊರೆದಿದ್ದಾಳೆ ಮತ್ತು ಅಂದಿನಿಂದ ಅವಳು ಎಲ್ಲಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ಅಫ್ತಾಬ್ ಹೇಳಿದ್ದ. ತನ್ನ ಗೆಳತಿಯನ್ನು 35 ತುಂಡುಗಳಾಗಿ ಕತ್ತರಿಸಿದ ನಂತರ, ಅಫ್ತಾಬ್ ಅವುಗಳನ್ನು ಸಂಗ್ರಹಿಸಿಡಲು ಫ್ರಿಜ್ ಖರೀದಿಸಿದ್ದ. ಶ್ರದ್ಧಾ ಅವರ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟಿದ್ದು, ಆಕೆಯ ದೇಹದ ತುಂಡನ್ನು ವಿಲೇವಾರಿ ಮಾಡಲು ಪ್ರತಿ ರಾತ್ರಿ ತನ್ನ ಅಪಾರ್ಟ್‌ಮೆಂಟ್‌ನಿಂದ ಹೊರಬರುತ್ತಿದ್ದೆ ಎಂದು ಆರೋಪಿ ಅಫ್ತಾಬ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಅಫ್ತಾಬ್ 26 ವರ್ಷದ ಶ್ರದ್ಧಾಳ ದೇಹವನ್ನು ಛಿದ್ರಗೊಳಿಸಿದ್ದಲ್ಲದೆ, ಆಕೆಯ ಮೃತದೇಹವನ್ನು ಅಧಿಕಾರಿಗಳು ಹಿಂಪಡೆಯಲು ಸಾಧ್ಯವಾಗದಂತೆ ಇರಿಸುವ ಯೋಜನೆಯನ್ನು ರೂಪಿಸಿದ್ದ. ಶ್ರದ್ಧಾಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು ಕತ್ತರಿಸಿದ ನಂತರ, ಅಫ್ತಾಬ್ ಅವರು 300-ಲೀಟರ್ ರೆಫ್ರಿಜರೇಟರ್ ಅನ್ನು ಖರೀದಿಸಿದ, ನಂತರ ಅವರು 16 ದಿನಗಳ ಕಾಲ ದೆಹಲಿ ಅರಣ್ಯದ ಕೆಲವು ಭಾಗಗಳಲ್ಲಿ ಎಸೆದ. ರಾಷ್ಟ್ರರಾಜಧಾನಿಯಲ್ಲಿ ಹೀಗೆ ಮಾಡಿ ಅರಣ್ಯ ಪ್ರದೇಶಗಳ ಸುತ್ತಮುತ್ತ ಎಸೆದಿದ್ದೇನೆ ಎಂದು ಹೇಳಿದ.

ದೇಹದ ಭಾಗಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಅವನಿಗೆ 16 ದಿನಗಳು ಬೇಕಾಯಿತು.ಪೊಲೀಸರಿಂದ ಸಿಕ್ಕಿಬಿದ್ದ ನಂತರ, ಅಫ್ತಾಬ್ ತನ್ನ ವಿಚಾರಣೆಯ ಸಮಯದಲ್ಲಿ ಕೊಲೆಯಾದ ಸಂತ್ರಸ್ತೆಯ ಜೊತೆ ಲಿವ್-ಇನ್ ಸಂಬಂಧವನ್ನು ಹೊಂದಿದ್ದಾಗಿ ತಿಳಿಸಿದ್ದಾನೆ. ಆರೋಪಿಯನ್ನು ಐದು ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ – ಶ್ರೀ ಚಿದಂಬರ ಬಾಬು ಕೋಣಂದೂರು

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ತೆಂಕುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಅನುಭವಿ. ಕಳೆದ 42 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಮೂವತ್ತೈದು ವರ್ಷಗಳ ಕಾಲ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ನಡೆಸಿದವರು. ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಬಾಲ್ಯದಲ್ಲಿ ಇವರು ನಾಟಕ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಾ ತಬಲಾ ವಾದನವನ್ನು ಕಲಿತು ತೊಡಗಿಸಿಕೊಂಡಿದ್ದರು. ಪುರಾಣ ಪ್ರಸಂಗಗಳ ಜತೆಗೆ ತುಳು ಪ್ರಸಂಗಗಳಲ್ಲೂ ವೇಷಗಳನ್ನು ನಿರ್ವಹಿಸಿದ ಅನುಭವಿ ಇವರು. ಕಿರೀಟ ಮತ್ತು ನಾಟಕೀಯ ವೇಷಗಳಲ್ಲಿ ಪ್ರಸ್ತುತ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ‘ಅಣ್ಣಪ್ಪ’ ಪಾತ್ರವನ್ನು ಕಳೆದ ಆರು ವರ್ಷಗಳಿಂದ ಇವರೇ ನಿರ್ವಹಿಸುತ್ತಿದ್ದಾರೆ. 

ಶ್ರೀ ಧರ್ಮಸ್ಥಳ ಮೇಳದ ಕಲಾವಿದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅತಲಾಪುರ ಗ್ರಾಮದ ಕೋಣಂದೂರು ಸಮೀಪದ ಹಿತ್ತಲಸರ. 1961ನೇ ಇಸವಿ ಏಪ್ರಿಲ್ 23ರಂದು ಶ್ರೀ ನಾಗೇಶ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಕೃಷಿ ಕುಟುಂಬ. ಮನೆಯವರೆಲ್ಲ ಕೃಷಿಯಲ್ಲಿ ಆಸಕ್ತರು.  ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಓದಿದ್ದು ನಾಲ್ಕನೇ ತರಗತಿಯವರೆಗೆ. ಅತಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.

ಬಾಲ್ಯದಲ್ಲಿ ಇವರಿಗೆ ಯಕ್ಷಗಾನ ಪ್ರದರ್ಶನಗಳನ್ನು ನೋಡುವ ಅವಕಾಶಗಳು ಸಿಕ್ಕಿರಲಿಲ್ಲ. ಆದರೂ ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು.  ಅಧ್ಯಾಪಕರೂ ಹೆಸರಾಂತ ಕಲಾವಿದರೂ ಆಗಿದ್ದ ಶ್ರೀ ಹಾಲೇಶಪ್ಪ ಇವರಿಂದ ನಾಟಕ ಕಲೆಯ ತರಬೇತಿಯನ್ನು ಹೊಂದಿ ವೇಷ ಮಾಡಲು ಆರಂಭಿಸಿದ್ದರು. ಪ್ರಪ್ರಥಮ ಬಾರಿಗೆ “ತ್ಯಾಗಿ” ಎಂಬ ನಾಟಕದಲ್ಲಿ ಕಥಾನಾಯಕನಾಗಿ ರಂಗ ಪ್ರವೇಶ ಮಾಡಲು ಅವಕಾಶವಾಗಿತ್ತು. ಖ್ಯಾತ ನಾಟಕ ಕಲಾವಿದರಾದ ಶ್ರೀ ಸತ್ಯನಾರಾಯಣ ಜೋಯಿಸ್, ಶ್ರೀ ಬಸವರಾಜ ಮಾಸ್ತರ್, ಶ್ರೀ ಜಯಪ್ಪ ಮಾಸ್ತರ್ ಅವರ ಒಡನಾಟವು ನಾಟಕ ಕಲಾವಿದನಾಗಿ ಬೆಳೆಯಲು ಅನುಕೂಲವಾಗಿತ್ತು.

ಮೂರೇ ವರ್ಷಗಳಲ್ಲಿ ನಾಟಕ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದರು. ಇವರ ನಿರ್ದೇಶನದಲ್ಲಿ ಕೆಲವು ನಾಟಕ ಪ್ರದರ್ಶನಗಳು ನಡೆದಿತ್ತು. ಕೋಣಂದೂರಿನ ಶ್ರೀ ಮಲ್ಲಿಕಾರ್ಜುನ ಕಲಾ ಸಂಘದಲ್ಲಿ ಸಕ್ರಿಯರಾಗಿ ಇವರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ತ್ಯಾಗಿ, ತಂಗಿಯ ತಾಳಿ, ಗೌಡರ ಗದ್ದಲ, ಮುದುಕನ ಮದುವೆ, ಪಶ್ಚಾತಾಪ ಮೊದಲಾದ ನಾಟಕಗಳಲ್ಲಿ ಇವರು ಅಭಿನಯಿಸಿದ್ದರು. ಸುಮಾರು ನೂರಾ ಐವತ್ತಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ಅಭಿನಯಿಸಲು ಅವಕಾಶವಾಗಿತ್ತು.

ನಾಟಕ ಕಲಾವಿದನಾಗಿರುವಾಗಲೇ ತಬಲಾ ಕಲಿಯುವ ಆಸಕ್ತಿಯೂ ಆಗಿತ್ತು. ಹೆಸರಾಂತ ಕಲಾವಿದ ಶ್ರೀ ಬಸವರಾಜ್ ಗವಾಯಿ ಅವರಿಂದ ತರಬೇತಿ ಪಡೆದು ತಬಲಾ ನುಡಿಸಲು ಆರಂಭಿಸಿದ್ದರು. ಪ್ರಸ್ತುತ ನ್ಯಾಯವಾದಿಗಳೂ, ಯಕ್ಷಗಾನ ವೇಷಧಾರಿ, ತಾಳಮದ್ದಳೆ ಅರ್ಥಧಾರಿಗಳೂ ಆದ ಶ್ರೀ ರಮಣ ಆಚಾರ್ಯ ಕಾರ್ಕಳ ಇವರು ತಬಲಾ ವಾದನವನ್ನು ಕಲಿಯುವಾಗ ಇವರ ಸಹಪಾಠಿಯಾಗಿದ್ದರು.  ಶ್ರೀ ಚಿದಂಬರ ಬಾಬು ಕೋಣಂದೂರು ಎರಡೂವರೆ ವರ್ಷಗಳ ಕಾಲ ತರಬೇತಿಯನ್ನು ಪಡೆದು ತಬಲಾವಾದಕರಾಗಿ ಕಾಣಿಸಿಕೊಂಡರು. ಅನೇಕ ಹರಿಕಥೆಗಳಲ್ಲಿ ತಬಲಾ ನುಡಿಸಲು ಅವಕಾಶವಾಗಿತ್ತು. 

ನಾಟಕ ಕಲಾವಿದರಾಗಿದ್ದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರಿಗೆ ಯಕ್ಷಗಾನಾಸಕ್ತಿ ಹುಟ್ಟಿಕೊಂಡದ್ದು ತನ್ನ ಹತ್ತೊಂಭತ್ತನೆಯ ವಯಸ್ಸಿನಲ್ಲಿ. ಆ ವರ್ಷ ಸಾಲಿಗ್ರಾಮ ಮೇಳದ ಕೆಲವು ಪ್ರದರ್ಶನಗಳನ್ನು ನೋಡಿದ್ದರು. ಶ್ರೀ ಜಿ.ಆರ್. ಕಾಳಿಂಗ ನಾವಡರ ಹಾಡುಗಾರಿಕೆ ಮತ್ತು ವೇಷಧಾರಿಗಳ ನಿರ್ವಹಣೆಯನ್ನು ಕಂಡು ತಾನೂ ಯಕ್ಷಗಾನ ಕಲಾವಿದನಾಗಬೇಕು ಎಂಬ ಆಸೆಯಾಗಿತ್ತು. ಯಕ್ಷಗಾನ ನಾಟ್ಯ ಕಲಿಯಲು ಅವಕಾಶವೂ ಸಿಕ್ಕಿತ್ತು. ಶ್ರೀ ಧರ್ಮಸ್ಥಳ ಲಲಿತಕಲಾ ತರಬೇತಿ ಕೇಂದ್ರದ ಸಂದರ್ಶನ ಕರೆಯನ್ನು ಪತ್ರಿಕೆಯಲ್ಲಿ ಓದಿ ಅಲ್ಲಿಗೆ ತೆರಳಿದರು.

ಅಣ್ಣಪ್ಪ ಪಾತ್ರಧಾರಿಯಾಗಿ

1980ರಲ್ಲಿ ಶ್ರೀ ಧರ್ಮಸ್ಥಳ ತರಬೇತಿ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ಟರಿಂದ ತರಬೇತಿ. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಕೇಂದ್ರ ಪ್ರದರ್ಶನಗಳಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ರಾವಣ ಮತ್ತು ಜಮದಗ್ನಿ, ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಭೀಮನಾಗಿ ವೇಷ ಮಾಡುವ ಅವಕಾಶವೂ ದೊರೆತಿತ್ತು. ಇವರಿಗೆ ಬಣ್ಣಗಾರಿಕೆಯನ್ನು ಕಲಿಸಿದವರು ಖ್ಯಾತ ಬಣ್ಣದ ವೇಷಧಾರಿ ಶ್ರೀ ಡಿ. ಗೋಪಾಲ ಭಟ್ ಅವರು. ತರಬೇತಿ ಮುಗಿದ ಬಳಿಕ ಅದೇ ವರ್ಷ ನೆಡ್ಲೆ ಶ್ರೀ ನರಸಿಂಹ ಭಟ್ಟರ ಹೇಳಿಕೆಯಂತೆ ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ ಜತೆ ಸುಂಕದಕಟ್ಟೆ ಮೇಳಕ್ಕೆ.

ಅದು ಪೋರ್ಕೋಡಿ ಶ್ರೀ ಸುಂದರ ಶೆಟ್ರ ಸಂಚಾಲಕತ್ವದ ಮೇಳ. ಇವರು ಮೇಳದಲ್ಲಿ ಮನೆಯಂತೆಯೇ ಇದ್ದು ಕಲಿತು ಕಲಾವಿದನಾಗಿ ಕಾಣಿಸಿಕೊಂಡವರು. ವೇಷ  ಮಾಡುವುದರ ಜತೆಗೆ ಲೈಟಿಂಗ್ಸ್, ಅಡುಗೆ ಕೆಲಸಗಳನ್ನೂ ಮಾಡಿದ್ದರು. 24 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ವ್ಯವಸಾಯ. ಬಳಿಕ 11 ವರ್ಷ ಮುಖ್ಯ ವೇಷಧಾರಿಯಾಗಿ ವ್ಯವಸಾಯ. ಹೀಗೆ ಸುಂಕದಕಟ್ಟೆ ಮೇಳದಲ್ಲಿ ಒಟ್ಟು 35 ವರ್ಷಗಳ ವ್ಯವಸಾಯ. ಯಕ್ಷಗಾನ ಕ್ಷೇತ್ರಕ್ಕೆ ಬಂದ ಮೇಲೂ ಮಳೆಗಾಲದಲ್ಲಿ ಏಳು ವರ್ಷ ನಾಟಕಗಳಲ್ಲೂ ಭಾಗವಹಿಸಿದ್ದರು. 

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಪುರಾಣ ಮತ್ತು ತುಳು ಪ್ರಸಂಗಗಳ ವೇಷಧಾರಿಯಾಗಿ ಸುಂಕದಕಟ್ಟೆ ಮೇಳದಲ್ಲಿ ಕಾಣಿಸಿಕೊಂಡರು. ಕೋಟಿ ಚೆನ್ನಯ ಪ್ರಸಂಗದ ಕೋಟಿ, ಮಲ್ಲಯ್ಯ ಬುದ್ಧಿವಂತ, ಚಂದುಗಿಡಿ ಪಾತ್ರಗಳನ್ನು ಮಾಡಿದ್ದರು. ಕಾಂತಾಬಾರೆ ಬೂದಾಬಾರೆ ಪ್ರಸಂಗದಲ್ಲಿ ಮೊದಲು ಗೌಡರಸು ಪಾತ್ರಮಾಡಿದ್ದರು. ಬಳಿಕ ಕಾಂತಾಬಾರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತುಳು ಪ್ರಸಂಗದಲ್ಲಿ ಇವೆಲ್ಲಾ ಇವರಿಗೆ ಇಷ್ಟವಾದ ಮತ್ತು ಹೆಸರು ಕೊಟ್ಟ ಪಾತ್ರಗಳು.

ಪುರಾಣ ಪ್ರಸಂಗಗಳಲ್ಲಿ ಕಿರೀಟ ಮತ್ತು ನಾಟಕೀಯ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಸುಂಕದಕಟ್ಟೆ ಮೇಳದಲ್ಲಿ ಶ್ರೀ ಪುತ್ತಿಗೆ ತಿಮ್ಮಪ್ಪ ರೈ  ಮತ್ತು ಪದ್ಯಾಣ ಶಂಕರನಾರಾಯಣ ಭಟ್ ಅವರ ನಿರ್ದೇಶನವು ದೊರೆತಿತ್ತು. ಕಲಾವಿದನಾಗಿ ಬೆಳೆಯಲು ಇದರಿಂದ ಅನುಕೂಲವಾಗಿತ್ತು. ಸದ್ರಿ ಮೇಳದಲ್ಲಿ ಖ್ಯಾತ ಹಿರಿಯ ಕಿರಿಯ ಕಲಾವಿದರ ಒಡನಾಟವು ದೊರೆತಿತ್ತು. ಭಸ್ಮಾಸುರ, ಹಿರಣ್ಯಕಶ್ಯಪ ಮೊದಲಾದ ನಾಟಕೀಯ ಪಾತ್ರಗಳನ್ನೂ ಅರ್ಜುನ, ದೇವೇಂದ್ರ, ಋತುಪರ್ಣ, ಅತಿಕಾಯ ಮೊದಲಾದ ಪಾತ್ರಗಳನ್ನೂ ಮಾಡುವ ಅವಕಾಶವಾಗಿತ್ತು. ‘ನಳದಮಯಂತಿ’ ಪ್ರಸಂಗದಲ್ಲಿ ನಳ, ಋತುಪರ್ಣ ಮತ್ತು ಬಾಹುಕ ಈ ಮೂರೂ ಪಾತ್ರಗಳನ್ನೂ ನಿರ್ವಹಿಸಿದ ಅನುಭವಿ ಇವರು. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಧು, ಕೈಟಭ, ಮಹಿಷಾಸುರ, ರಕ್ತಬೀಜ ಈ ನಾಲ್ಕೂ ಪಾತ್ರಗಳನ್ನೂ ಮಾಡಿದ ಅನುಭವಿ ಇವರು.

ಒಳ್ಳೆಯ ಸ್ವರಭಾರ, ಆಳಂಗ, ಹಿತಮಿತವಾದ ಮಾತು ಮತ್ತು ಕುಣಿತಗಳಿಂದ ಇವರು ಪಾತ್ರಗಳನ್ನು ನಿರ್ವಹಿಸುತ್ತಾರೆ. ಸುಂಕದಕಟ್ಟೆ ಮೇಳದ ತಿರುಗಾಟದ ಬಳಿಕ ಕಳೆದ ಆರು ವರ್ಷಗಳಿಂದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಮತ್ತು ಶ್ರೀ ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಡಿ ವೇಷಗಳನ್ನು ಮಾಡುವ ಅವಕಾಶವಾಗಿತ್ತು. ಅವರ ನಿರ್ದೇಶನವೂ ಸಿಕ್ಕಿತ್ತು. ಅಲ್ಲದೆ ಹಿರಿಯ ಕಿರಿಯ ಕಲಾವಿದರ ಒಡನಾಟ ಮತ್ತು ಸಹಕಾರವೂ ಸಿಕ್ಕಿತ್ತು.

ಧರ್ಮಸ್ಥಳ ಮೇಳಕ್ಕೆ ಸೇರಿದ ಮೊದಲ ವರ್ಷ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಮೊದಲ ಮೂರು ಪ್ರಯೋಗಗಳಲ್ಲಿ ಈಶ್ವರನಾಗಿ ಅಭಿನಯಿಸಿದ್ದರು. ನಾಲ್ಕನೇ ಪ್ರಯೋಗದಲ್ಲಿ ಗೋವಿಂದ ದೀಕ್ಷಿತ ಎಂಬ ಪಾತ್ರ ಮಾಡಿದ್ದರು. ಐದನೇ ಪ್ರಯೋಗದಿಂದ ತೊಡಗಿ ಕಳೆದ ಆರು ವರ್ಷಗಳಿಂದ ಅಣ್ಣಪ್ಪ ಎಂಬ ಪಾತ್ರವನ್ನು ಇವರೇ ಮಾಡುತ್ತಿದ್ದಾರೆ. ಪ್ರಸ್ತುತ ನಾಟಕೀಯ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

“ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುವುದು ಎಂದರೆ ಅದು ಒಂದು ಗೌರವದ ವಿಚಾರ. ಈ ಅವಕಾಶವನ್ನು ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಡೆಯವರು ಮತ್ತು ಮೇಳವನ್ನು ಮುನ್ನಡೆಸುತ್ತಿರುವ ಶ್ರೀ ಡಿ. ಹರ್ಷೇ೦ದ್ರಕುಮಾರರು ಒದಗಿಸಿಕೊಟ್ಟಿದ್ದಾರೆ. ಅವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ವ್ಯವಸಾಯ ಮಾಡುತ್ತಿದ್ದೇನೆ” ಈ ಮಾತುಗಳಿಂದ  ಚಿದಂಬರ ಬಾಬು ಅವರು ಶ್ರೀ ಕ್ಷೇತ್ರವನ್ನು ಮತ್ತು ತಮ್ಮ ಆಶ್ರಯದಾತರನ್ನು ಗೌರವಿಸುತ್ತಾರೆ.

ಮಳೆಗಾಲದಲ್ಲಿ ಶ್ರೀಯುತರು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ಮುಂಬಯಿ ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಳಿಯಾಲ ಶ್ರೀ ಭೀಮ ಭಟ್, ಹಾಸ್ಯರತ್ನ  ನಯನಕುಮಾರ್,ಉದ್ಯಾವರ ಜಯಕುಮಾರ್ ಅವರ ನೇತೃತ್ವದ ತಂಡಗಳ ಸದಸ್ಯನಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ.

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ವೃತ್ತಿ ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ಅತ್ಯಂತ ತೃಪ್ತರು.  ಇವರ ಪತ್ನಿ ಶ್ರೀಮತಿ ಪಾರ್ವತಿ. ಇವರು ಗೃಹಣಿ. ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಕಾರ್ತಿಕ್. ಇವರು ಕೃಷಿಕರು. ಕಿರಿಯ ಪುತ್ರ ಶ್ರೀ ಕೌಶಿಕ್. ಇವರು ಬೆಂಗಳೂರಿನಲ್ಲಿ ಉದ್ಯೋಗಿ. ಅನುಭವೀ ಕಲಾವಿದ ಶ್ರೀ ಚಿದಂಬರ ಬಾಬು ಕೋಣಂದೂರು ಇವರಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಾಲ ಕಲಾ ವ್ಯವಸಾಯವು ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಚಿದಂಬರ ಬಾಬು ಕೋಣಂದೂರು, ಮೊಬೈಲ್: 9880911375

ಲೇಖಕ: ರವಿಶಂಕರ್ ವಳಕ್ಕುಂಜ

ಲೇಖಕ: ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ಫೋಟೋ: ಶ್ರೀ ರಾಧಾಕೃಷ್ಣ ಭಟ್ ಕೊಂಗೋಟ್

ವಿಶ್ವವಿನೋದ ಬನಾರಿಯವರಿಗೆ 75ರ ಅಭಿನಂದನಾ ಸಮಾರಂಭ ‘ವಿಶ್ಯವಿನೋದ 75 ಯಕ್ಷಕಲಾರವ’

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ದಿನಾಂಕ 13-11-2022ರಂದು ಶ್ರೀ ವಿಶ್ವವಿನೋದ ಬನಾರಿಯವರಿಗೆ 75ರ ಅಭಿನಂದನಾ ಸಮಾರಂಭ ‘ವಿಶ್ಯವಿನೋದ 75 ಯಕ್ಷಕಲಾರವ’ ನಡೆಯಿತು.

ಯಕ್ಷಗಾನ ಗುರುಕುಲದ ರೂವಾರಿಯೆಂದೇ ಖ್ಯಾತರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸುಪುತ್ರ ಶ್ರೀ ವಿಶ್ವವಿನೋದ ಬನಾರಿಯವರು ಈಗ ತನ್ನ ಬಾಳಿನ ಎಪ್ಪತ್ತೈದರ ಹೊಸ್ತಿಲಲ್ಲಿದ್ದಾರೆ. ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಯಕ್ಷಗಾನದ ವಿವಿಧ ಮಜಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಯಕ್ಷಗಾನದ ಓರ್ವ ಸರ್ವಾಂಗ ಸಾಧಕನಾಗಿ ಅಪಾರ ಜನರ ಗೌರವಕ್ಕೆ ಪಾತ್ರರಾದವರು. ಯಕ್ಷಗಾನ ಪ್ರಸಂಗಕರ್ತರಾಗಿ ಭಾಗವತರಾಗಿ ಮತ್ತು ಭಾಗವತ ಗುರುಗಳಾಗಿ ಪ್ರಸಿದ್ಧರಾದ ಶ್ರೀಯುತರನ್ನು ಅವರ ಶಿಷ್ಯವೃಂದದವರು, ಅಭಿಮಾನಿಗಳು ಮತ್ತು ಬಂಧುವರ್ಗದವರು ಸೇರಿ ಔಚಿತ್ಯಪೂರ್ಣವಾಗಿ ಅಭಿನಂದಿಸಲಾಯಿತು.

ಮೊದಲಿಗೆ ಅಭಿನಂದನಾರ್ಹ ವಿ.ವಿ.ಬನಾರಿಯವರನ್ನು ‘ಹರಿಹರ ಸುತ ಸಿಂಗಾರಿ ಮೇಳ ದೇಲಂಪಾಡಿ’ ಇದರ ಚೆಂಡೆ ನಾದದೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಬಳಿಕ ಬಿಡುಗಡೆಯಾಗಲಿರುವ ‘ವಿಶ್ವಯಾನ’ ಅಭಿನಂದನಾ ಗ್ರಂಥವನ್ನು ವಿಶಿಷ್ಟ ರೀತಿಯಲ್ಲಿ ವೇದಿಕೆಗೆ ತರಲಾಯಿತು.

ಕರ್ನಾಟಕ ಸರಕಾರದ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಅಂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಯಕ್ಷಗಾನ ಒಂದು ಮಹತ್ತರವಾದ ಕಲೆ. ಈ ಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ದೇಲಂಪಾಡಿ ಅಭಿವೃದ್ಧಿ ಹೊಂದಬೇಕಾದ ಅಗತ್ಯ ಇದೆ. ಇಲ್ಲಿನ ರಸ್ತೆಗೆ ಮರುಡಾಮರೀಕರಣಕ್ಕೆ, ಕಾಂಕ್ರಿಟೀಕರಣಕ್ಕೆ ಸರಕಾರದಿಂದ ಅನುದಾನ ಕೊಡಿಸುತ್ತೇವೆ’ ಎಂಬುದಾಗಿ ಭರವಸೆಯನ್ನು ಇತ್ತರು.  

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಡಾ. ಜಿ. ಎಲ್ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಸಿ.ಹೆಚ್.ಕುಞಂಬು ಶಾಸಕರು, ಉದುಮ ಇವರು ಭಾಗವಹಿಸಿದರು. ‘ಯಕ್ಷಗಾನ ಕಲೆ ಬಹಳ ರಮ್ಯಾದ್ಭುತ ಕಲೆ. ನೃತ್ಯ, ಮಾತು, ವೇಷಭೂಷಣ, ಅಭಿನಯ ಎಲ್ಲವೂ ಒಳಗೊಂಡ ಈ ಕಲೆ ಸಮಗ್ರವಾಗಿದೆ. ಕೇರಳದಲ್ಲಿ ಈ ಕಲೆಗೆ ಪೂರ್ಣ ಮಾನ್ಯತೆ ಸಿಗುವಂತೆ ತಾನು ಪ್ರಯತ್ನಿಸುತ್ತೇನೆ. ವಿ.ವಿ.ಬನಾರಿಯವರು ಬಹುಮುಖಿ ಸಾಧಕರು. ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಶ್ರೀಯುತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಶ್ವವಿನೋದ ಬನಾರಿಯವರ ಆತ್ಮವೃತ್ತಾಂತವೂ ಸೇರಿದಂತೆ ಅಭಿನಂದನಾ ಗ್ರಂಥ ‘ವಿಶ್ವಯಾನ’ವನ್ನು ಲೋಕಾರ್ಪಣೆಗೊಳಿಸಲಾಯಿತು. ನಾರಾಯಣ ನಾಯ್ಕ್ ಊಜಂಪಾಡಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಚಂದ್ರಶೇಖರ ಏತಡ್ಕ ಅವರು ಸಂಪಾದಕರ ನುಡಿಯನ್ನಾಡಿದರು. ‘ಬನಾರಿಯವರ ಜೀವನದ ಸಮಗ್ರ ಚಿತ್ರಣವನ್ನು ನೀಡುವಲ್ಲಿ ಈ ಕೃತಿಯು ಸಾಫಲ್ಯವನ್ನು ಕಂಡಿದೆ. ಅವರ ನಿಕಟವರ್ತಿಗಳು, ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಕೃತಿಯಲ್ಲಿ ಕೆಲವು ವಿಚಾರಗಳು ಪುನರಾವರ್ತನೆಯಾದರೂ ಅದು ಅಭಾಸ ಎಂದೆನಿಸುವುದಿಲ್ಲ’ವೆಂದು ಅವರು ಹೇಳಿದರು.

ಜಾನಪದ ಸಂಶೋಧಕರಾದ ಡಾ.ಸುಂದರ ಕೇನಾಜೆಯವರು ಗ್ರಂಥಾವಲೋಕನ ಮಾಡುತ್ತಾ “ವಿ.ವಿ.ಬನಾರಿಯವರು ತಮ್ಮ ಜೀವಿತಾವಧಿಯಲ್ಲಿ  ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಕುರಿತು ಈ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಇದು ಈ ಊರಿನ ಸಮಗ್ರ ಚಿತ್ರಣವಾಗಿದೆ. ಅವರ ಸ್ಮರಣಶಕ್ತಿ ಅಗಾಧವಾದುದು. ಕೃತಿಯು ಸಾಹಿತ್ಯ ಕ್ಷೇತ್ರಕ್ಕೊಂದು ಕೊಡುಗೆ” ಎಂದರು.

ತದನಂತರ ವಿಶ್ವವಿನೋದ ಬನಾರಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಉಮಾಪರಮೇಶ್ವರಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ “ರಮಾನಂದ ಬನಾರಿ ವಿರಚಿತ ಶುಭಾಶಯ ಗೀತೆ’ಯನ್ನು ಅನ್ನಪೂರ್ಣ ಏತಡ್ಕ ಹಾಗೂ ಬಳಗದವರು ಬಹಳ ಸುಶ್ರಾವ್ಯವಾಗಿ ಹಾಡಿದರು. ಹಿರಿಯ ಕಲಾವಿದರಾದ ಜಬ್ಬಾರ್ ಸಮೊ ಸಂಪಾಜೆ ಅವರು ಅಭಿನಂದನಾ ಭಾಷಣ ಗೈದರು. ಬನಾರಿಯವರ ಸಹೃದಯತೆ, ಕಲಾ ಸಹಜ ಒಲವುಗಳು ಅನುಕರಣೀಯ. ಅವರ ಒಂದು ಕುಟುಂಬವೇ ಕಲಾಮಾಧ್ಯಮಕ್ಕೆ ತೆರೆದುಕೊಂಡ ರೀತಿ ಅನ್ಯಾದೃಶವಾದುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಪ್ರಭಾಕರ ಶಿಶಿಲ, ಅಡ್ವಕೇಟ್ ಎ.ಪಿ.ಉಷಾ, ಗಣರಾಜ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.

ನಾರಾಯಣ ತೋರಣಗಂಡಿ ಅವರು ಶಿಷ್ಯನುಡಿ ವಂದನೆ ಸಲ್ಲಿಸಿ ಗುರುಗಳ ವಿಶಿಷ್ಟ ರೀತಿಯ ಯಕ್ಷಪಾಠ ಅನನ್ಯ ಮತ್ತು ಅಸಂಖ್ಯ ಶಿಷ್ಯಂದಿರಿಗೆ ದಾರಿದೀವಿಗೆ ಎಂದರು.

ಶ್ರೀಮತಿ ಅಪರ್ಣಾ ರಾವ್ ಕುತ್ಯಾಡಿಯವರಿಂದ ಪ್ರಾಥನೆ ಮೊದಲ್ಗೊಂಡು ಆರಂಭವಾದ ಈ ಕಾರ್ಯಕ್ರಮದಲ್ಲಿ ನಾರಾಯಣ ದೇಲಂಪಾಡಿ ಅವರು ಎಲ್ಲರನ್ನೂ ಸ್ವಾಗತಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಚಂದ್ರಶೇಖರ ಏತಡ್ಕ ಧನ್ಯವಾದ ಸಮರ್ಪಿಸಿದರು.

ನಾಯಿಗೆ ನೇಣು ಬಿಗಿದ ಮೂವರು ಮೂರ್ಖರು! – ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿದ ವಿಡಿಯೋ ವೈರಲ್

0

ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿದ ವಿಡಿಯೋ ವೈರಲ್ ಆಗಿದೆ, ಅವರಿಗೆಲ್ಲರಿಗೂ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.

ಗಾಜಿಯಾಬಾದಿನಲ್ಲಿ ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರು ನೋಟಿಸ್ ನೀಡಲು ವ್ಯಕ್ತಿಗಳನ್ನು ಕರೆಸಿ ಕೇಸು ದಾಖಲಿಸಿದ್ದಾರೆ.

ವೀಡಿಯೊದಲ್ಲಿ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪುರುಷರು ಅದರ ಕುತ್ತಿಗೆಯನ್ನು ಲೋಹದ ಸರಪಳಿಯಿಂದ ಕಟ್ಟಿ ಗೋಡೆಗೆ ನೇತುಹಾಕುತ್ತಿರುವುದನ್ನು ಕಾಣಬಹುದು.

ನಂತರ ವೀಡಿಯೊದಲ್ಲಿ, ಅವರಲ್ಲಿ ಒಬ್ಬರು ಸರಪಳಿಯನ್ನು ಎಳೆಯುತ್ತಾರೆ, ಇದರಿಂದಾಗಿ ನಾಯಿ ನೋವಿನಿಂದ ಅಳುತ್ತದೆ ಮತ್ತು ಇತರರು ಅವನನ್ನು ಪ್ರೋತ್ಸಾಹಿಸುತ್ತಾರೆ. ನಾಯಿ ಕೊನೆಗೆ ಚಿತ್ರಹಿಂಸೆಗೆ ಬಲಿಯಾಗುತ್ತದೆ.

ವೀಡಿಯೋ ಮೂರು ತಿಂಗಳ ಹಳೆಯದಾಗಿದ್ದು, ವಿಡಿಯೋದಲ್ಲಿರುವವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಶ್ರಯ ಮನೆಯಿಂದ (Shelter Home) ಒಂಭತ್ತು ಹುಡುಗಿಯರು ನಾಪತ್ತೆ – ಪೊಲೀಸರ ತೀವ್ರ ಹುಡುಕಾಟ 

0

ಆಶ್ರಯ ಮನೆಯಿಂದ ಪೋಕ್ಸೋ ಪ್ರಕರಣದ ಸಂತ್ರಸ್ತರು ಸೇರಿದಂತೆ ಒಂಭತ್ತು ಹುಡುಗಿಯರು ನಾಪತ್ತೆಯಾಗಿದ್ದಾರೆ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಟ್ಟಾಯಂ: ಪೋಕ್ಸೋ ಪ್ರಕರಣದ ಸಂತ್ರಸ್ತ ಮಹಿಳೆ ಸೇರಿದಂತೆ ಒಂಬತ್ತು ಬಾಲಕಿಯರು ಮಂಗನಂನ ಆಶ್ರಯ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಹಿಳಾ ಸಮಾಖ್ಯ ಎನ್‌ಜಿಒ ನಡೆಸುತ್ತಿದ್ದ ಖಾಸಗಿ ಆಶ್ರಯ ಮನೆಯಿಂದ ಬಾಲಕಿಯರು ಪರಾರಿಯಾಗಿದ್ದಾರೆ.

ಸೋಮವಾರ ಬೆಳಗ್ಗೆ 5.30ಕ್ಕೆ ಸಿಬ್ಬಂದಿ ಎಬ್ಬಿಸಲು ಹೋದಾಗ ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಶ್ರಯ ಮನೆಯಲ್ಲಿ ಸುಮಾರು 12 ಬಾಲಕಿಯರಿದ್ದಾರೆ.

ಪೋಕ್ಸೊ ಪ್ರಕರಣಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಒಳಗಾದ ಹುಡುಗಿಯರನ್ನು ಇಲ್ಲಿ ದಾಖಲಿಸಲಾಗಿದೆ. ಈ ಆಶ್ರಯ ಮನೆ ಮಕ್ಕಳ ಕಲ್ಯಾಣ ಸಂಘದ ಮಾನ್ಯತೆಯನ್ನು ಹೊಂದಿದೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ಹುಡುಗಿಯರು ಪ್ರತಿಭಟನೆ ನಡೆಸುತ್ತಿದ್ದರು. ಅವರಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ

ಹಿರಿಯ ಮದ್ದಳೆಗಾರ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’

ಹಿರಿಯ ಮದ್ದಳೆಗಾರ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’


ಯಕ್ಷಗಾನದ ಗುರು ದಂಪತಿ ಖ್ಯಾತ ಮದ್ದಳೆಗಾರ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಖ್ಯಾತ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ (ರಿ) ಬೆಂಗಳೂರು ಮೂಲಕ ಕೊಡಮಾಡುವ ಶ್ರೀಹರಿಲೀಲಾ ಯಕ್ಷನಾದ 2ನೇ ವರ್ಷದ ಪ್ರಶಸ್ತಿಯನ್ನು ಹಿರಿಯ ಮದ್ದಳೆಗಾರ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಯಿತು.

ಮೊನ್ನೆ ಶನಿವಾರ (ನ.12) ಮೂಡುಬಿದಿರೆಯ ಆಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ವಿದ್ವಾಂಸ, ವಿಮರ್ಶಕ, ಅರ್ಥಧಾರಿ ಡಾ.ಮಾಳ ಪ್ರಭಾಕರ ಜೋಶಿ, 

ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ, ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯ, ಆರತಿ ಪಟ್ರಮೆ, ಡಾ. ಸಿಬಂತಿ ಪದ್ಮನಾಭ, ಬೈಪಾಡಿತ್ತಾಯ ಗುರುಗಳ ಶಿಷ್ಯರಾದ ಚಂದ್ರಶೇಖರ ಕೊಂಕಣಾಜೆ, ಗಿರೀಶ್ ಕಿನಿಲಕೋಡಿ, ಆನಂದ ಗುಡಿಗಾರ, ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಇದ್ದಾರೆ. 

ಕಾಂತಾರ ಕಮಲಕ್ಕ ಖ್ಯಾತಿಯ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಅವರ ನೃತ್ಯ ವೈಭವ

0

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ದಿನಾಂಕ 13-11-2022ರಂದು ನೃತ್ಯನಿಕೇತನ ಕೊಡವೂರು ಉಡುಪಿ ಕಲಾವಿದರಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ ಜರಗಿತು.

ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ಕಾಂತಾರ ಕಮಲಕ್ಕ ಖ್ಯಾತಿಯ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಅವರ ನಿರ್ದೇಶನದಲ್ಲಿ ನಡೆದ ಈ ನೃತ್ಯ ವೈಭವವನ್ನು ವಿಶ್ವವಿನೋದ ಬನಾರಿಯವರ 75ನೇ ಅಭಿನಂದನಾ ಸಮಾರಂಭದ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು.

ಬಹಳ ಅದ್ಭುತವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕು.ಸಂಜನಾ ಶ್ರೀ, ವಿದುಷಿ ಸಾಧನಾ ಕಾಮತ್, ವಿದುಷಿ ಚೈತನ್ಯ ಆಚಾರ್ಯ, ವಿದುಷಿ ಅನಘ ಶ್ರೀ, ಕು. ಪ್ರಿಯಂವದಾ, ಕು.ಕೀರ್ತನಾ, ಕು. ಸೌಂದರ್ಯ, ಕು. ಪೃಥ್ವಿ, ಕು. ಬಿಂದಿಯ, ಕು. ವರ್ಷಿಣಿ, ಕು. ಮಹಿಮ, ಕು. ಅನಘ, ಕು. ಅರ್ಪಿತ, ಕು.ಶ್ರೇಯಾ, ಕು.ಪ್ರಜ್ಞಾ, ಕು.ಚೈತ್ರ ಶೆಣೈ, ಕು. ವರ್ಷಾ, ಕು.ಸುರಭಿ ಸುಧೀರ್ ಹಾಗೂ ಮಾನಸಿ ಸುಧೀರ್ ಅವರು ಭಾಗವಹಿಸಿದರು. ಶ್ರೀ ಸುಧೀರ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಕಲಾವಿದೆಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉತ್ತಮವಾದ ಪ್ರಸಾಧನವನ್ನೊದಗಿಸಿದ ಪ್ರಕಾಶ್ ಕುಂಜೆತೊಟ್ಟು ಇವರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ದಂಪತಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಯಕ್ಷಗಾನ ಗೋಷ್ಠಿ

ದಿನಾಂಕ 13-11-2022ರಂದು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ವಿಶ್ವವಿನೋದ ಬನಾರಿಯವರ 75ನೇ ಅಭಿನಂದನಾ ಸಮಾರಂಭದ ಎರಡನೆಯ ಅಂಗವಾಗಿ ಯಕ್ಷಗಾನ ಹಾಡುಗಾರಿಕೆಯ ಸಾಂಪ್ರಾದಾಯಿಕ ಮಟ್ಟುಗಳು – ಒಂದು ಪ್ರಾತ್ಯಕ್ಷಿಕೆ ಎಂಬ ವಿಚಾರವಾಗಿ ಯಕ್ಷಗಾನ ಗೋಷ್ಠಿ ಜರಗಿತು.

ಸುಬ್ರಾಯ ಸಂಪಾಜೆ, ಡಾ. ಪುರುಷೋತ್ತಮ ಭಟ್ ನಿಡುವಾಜೆ, ಭವ್ಯಶ್ರೀ ಕುಲ್ಕುಂದ, ಅವರು ಯಕ್ಷಗಾನದ ವಿವಿಧ ರಾಗ, ತಾಳಗಳಲ್ಲಿ ಪ್ರಸಂಗ ಪದ್ಯಗಳನ್ನು ಪ್ರಸ್ತುತಪಡಿಸಿದರು. ಡಾ. ಶ್ರೀಕೃಷ್ಣ ಸುಣ್ಣಂಗುಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಚಂದ್ರಶೇಖರ ಗುರುವಾಯನಕೆರೆ ಭಾಗವಹಿಸಿದರು.

ಬೆಳ್ಳಿಗೆ ನಾರಾಯಣ ಮಣಿಯಾಣಿ, ನಾ. ಕಾರಂತ ಪೆರಾಜೆ, ದಿವಾಣ ಶಂಕರ ಭಟ್, ಎಸ್.ಎನ್.ಪಂಜಾಜೆ, ಡಾ. ವೀಣಾ ಪಾಲಚಂದ್ರ ಸುಳ್ಯ, ಎಸ್.ಎನ್.ಭಟ್ ಬಾಯಾರು, ರಾಜಗೋಪಾಲ ಕನ್ಯಾನ, ಬೆಳ್ಳಿಪ್ಪಾದಿ ಸದಾಶಿವ ರೈ, ಜಯರಾಮ ಭಟ್ ದೇವಸ್ಯ, ಕೋಡ್ಲ ಗಣಪತಿ ಭಟ್, ಸಬ್ಬಣಕೋಡಿ ರಾಮ ಭಟ್, ಹರೀಶ್ ಕುಲ್ಕುಂದ, ಪ್ರಶಾಂತ್ ರೈ, ಸುನಂದಾ ಶೆಟ್ಟಿ ಸುಳ್ಯ, ರಾಜಶ್ರೀ ಟಿ.ರೈ ಪೆರ್ಲ, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ಮೊದಲಾದವರು ಗೋಷ್ಟಿಯ ಸಂವಾದದಲ್ಲಿ ಪಾಲ್ಗೊಂಡರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಕಾರದಲ್ಲಿ ನಡೆದ ಈ ಗೋಷ್ಠಿಯ ಅಧ್ಯಕ್ಷತೆಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ವಹಿಸಿಕೊಂಡಿದ್ದರು.  “ಅಡಿಕೆಯಲ್ಲಿ ವಿವಿಧ ಪ್ರಕಾರಗಳಿದ್ದಂತೆ ಯಕ್ಷಗಾನದಲ್ಲೂ ವಿವಿಧ ಶೈಲಿಗಳಿವೆ . ಬಲಿಪರು, ಅಗರಿಯವರು, ಮಾಂಬಾಡಿಯವರ ವಿಭಿನ್ನ ಶೈಲಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಪದ್ಯದಲ್ಲಿ ಅಕಾರವಿದ್ದರೆ ಆಲಾಪನೆಯೂ ಅಕಾರದಲ್ಲಿ ಇರಬೇಕು. ಉಕಾರವಾದರೆ ಉಕಾರ ಹೀಗೆ….” ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಮಾತನಾಡಿದರು. ಕಾಲಧರ್ಮಕ್ಕನುಗುಣವಾಗಿ ಕಲೆಯಲ್ಲಿ ಮಾರ್ಪಾಡು ಅಗತ್ಯ. ಆದರೆ ಅದರ ಮೂಲಸತ್ತ್ವ ಕಳೆದುಹೋಗಬಾರದು ಎಂಬುದಾಗಿಯೂ ತಿಳಿಸಿದರು.

ಪ್ರಭಾಕರ ಶಿಶಿಲ, ರಾಜಗೋಪಾಲ ಕನ್ಯಾನ, ರಾಜಶ್ರೀ ಟಿ.ರೈ ಪೆರ್ಲ, ಸದಾಶಿವ ರೈ ಬೆಳ್ಳಿಪ್ಪಾಡಿ, ಸುಂದರ ಕೇನಾಜೆ, ಜಯರಾಮ ಭಟ್ ದೇವಸ್ಯ ಮೊದಲಾದವರು ಗೋಷ್ಠಿಯಲ್ಲಿ ಮಾತನಾಡುತ್ತ ಹಾಡುಗಳು ಹೇಗಿತ್ತು ಹೇಗಾಗಬೇಕು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಕೇಶ್ ರೈ ಶೇಣಿ ಸ್ವಾಗತಿಸಿ ಜಲಜಾಕ್ಷಿ ರೈ ಬೆಳ್ಳಿಪ್ಪಾಡಿ ವಂದಿಸಿದರು.

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಸರ್ಕಲ್ ಇನ್ಸ್‌ಪೆಕ್ಟರ್ ಬಂಧನ, ಬೇರೊಂದು ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಎಎಸ್‌ಐ ಪರಾರಿ

0

ಕೋಜಿಕೋಡು: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ಬಂಧಿಸಲಾಗಿದೆ. ಬಂಧಿತನನ್ನು ಕೋಝಿಕ್ಕೋಡ್‌ನ ಕರಾವಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುನು ಎಂದು ಗುರುತಿಸಲಾಗಿದೆ

ತೃಕ್ಕಾಕರದಲ್ಲಿ ದಾಖಲಾದ ಪ್ರಕರಣದಲ್ಲಿ ಕ್ರಮ ಜರುಗಿಸಲಾಗಿದೆ. ತ್ರಿಕಕ್ಕರ ಪೊಲೀಸರು ವೃತ್ತ ನಿರೀಕ್ಷಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ಘಟನೆ ನಡೆದಿತ್ತು.

ಸುನು ಸೇರಿದಂತೆ ಗುಂಪು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದೆ ಎಂದು ತ್ರಿಕಕ್ಕರದಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ತ್ರಿಕಕ್ಕರ ಪೊಲೀಸರು ಕೋಝಿಕ್ಕೋಡ್ ಪೊಲೀಸ್ ಠಾಣೆಯಿಂದ ಆತನನ್ನು ಬಂಧಿಸಿದ್ದಾರೆ.

ಈ ಮಧ್ಯೆ, ಪೋಕ್ಸೋ ಪ್ರಕರಣದಲ್ಲಿ ಬದುಕುಳಿದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಅಂಬಲವ್ಯಾಲ್ ಠಾಣೆಯ ಎಎಸ್‌ಐ ಟಿ ಜಿ ಬಾಬು ಎಂಬಾತ ಪರಾರಿಯಾಗಿದ್ದಾನೆ.ನಿನ್ನೆ ರಾತ್ರಿ ಪೊಲೀಸರು ಬಾಬು ಮನೆಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಟಿ ಜಿ ಬಾಬು ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಜುಲೈ 26 ರಂದು ಪೋಕ್ಸೋ ಪ್ರಕರಣದಲ್ಲಿ ಬದುಕುಳಿದಿರುವ 16 ವರ್ಷದ ಬಾಲಕಿಯನ್ನು ಸಾಕ್ಷ್ಯ ಸಂಗ್ರಹಿಸಲು ಊಟಿಯ ಲಾಡ್ಜ್‌ಗೆ ಕರೆದೊಯ್ದ ಘಟನೆ ನಡೆದಿದೆ.

ಸಬ್ ಇನ್ಸ್ ಪೆಕ್ಟರ್ ಸೋಬಿನ್, ಗ್ರೇಡ್ ಎಎಸ್ ಐ ಟಿ.ಜಿ.ಬಾಬು, ಸಿವಿಲ್ ಪೊಲೀಸ್ ಅಧಿಕಾರಿ ಪ್ರಜಿಶಾ ತಂಡದಲ್ಲಿದ್ದರು. ಸಾಕ್ಷಿ ಸಂಗ್ರಹ ಮುಗಿಸಿ ಊಟಿಯಿಂದ ವಾಪಸಾಗುತ್ತಿದ್ದಾಗ ನಗರದಲ್ಲಿ ವಾಹನ ನಿಲ್ಲಿಸಿ ಬಾಬು ಆಕೆಯ ಕೈ ಹಿಡಿದು ಮೊಬೈಲ್‌ನಲ್ಲಿ ಚಿತ್ರ ತೆಗೆದಿದ್ದಾನೆ ಎಂದು ದೂರು ನೀಡಲಾಗಿದೆ.

ಶೆಲ್ಟರ್ ಹೋಮ್‌ನಲ್ಲಿ ನಡೆದ ಕೌನ್ಸೆಲಿಂಗ್ ವೇಳೆ ಬಾಲಕಿ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ.

ಶ್ರೀ ರಾಮಾಯಣ ಸರಣಿಯ ತಾಳಮದ್ದಳೆಯ ಸಮಾರೋಪ

ಶ್ರೀರಾಮಾಯಣ ಸರಣಿಯ ತಾಳಮದ್ದಳೆಯ ಸಮಾರೋಪ.

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ 2022 ರ ಜನವರಿಯಿಂದ ಆರಂಭವಾದ ಶ್ರೀರಾಮಾಯಣ ಸರಣಿಯ ತಾಳಮದ್ದಳೆಯು ಶ್ರೀರಾಮ ನಿರ್ಯಾಣ ತಾಳ ಮದ್ದಳೆಯೊಂದಿಗೆ ಮುಕ್ತಾಯಗೊಂಡಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಡಿ.ಕೆ ಆಚಾರ್ಯ ಅಲಂಕಾರು, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಹಿಮ್ಮೇಳದಲ್ಲಿ ಶ್ರೀಪತಿ ಉಪ್ಪಿನನಂಗಡಿ, ಮೋಹನ ಶರವೂರು, ಗುರುಮೂರ್ತಿ ಅಮ್ಮಣ್ಣಾಯ, ಕಾರ್ತಿಕ್ ಬಳ್ಳಮಂಜ ಅರ್ಥಧಾರಿಗಳಾಗಿ ಅಂಬಾ ಪ್ರಸಾದ್ ಪಾತಾಳ, ದಿವಾಕರ ಆಚಾರ್ಯ ಗೇರುಕಟ್ಟೆ, ಭಾಸ್ಕರ ಬಾರ್ಯ, ದಿವಾಕರ ಆಚಾರ್ಯ ನೇರೇಂಕಿ, ಜಿನೇಂದ್ರ ಜೈನ್, ಹರೀಶ್ ಆಚಾರ್ಯ ಉಪ್ಪಿನಂಗಡಿ,ಸಂಜೀವ ಪಾರೆಂಕಿ,ಗಂಗಾಧರ ಟೈಲರ್ ಭಾಗವಹಿಸಿದ್ದರು.

ಸರಣಿಯುದ್ದಕ್ಕೂ ಸಹಕರಿಸಿದ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಾಗವಹಿಸಿದ ಎಲ್ಲಾ ಕಲಾವಿದರಿಗೆ , ಯಕ್ಷಗಾನ ಸಂಘಗಳಿಗೆ ಅಧ್ಯಕ್ಷರಾದ ದಿವಾಕರ ಆಚಾರ್ಯ ಕೃತಜ್ಞತೆ ವ್ಯಕ್ತಪಡಿಸಿ,

ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಜನವರಿ 2023 ರಿಂದ ಶ್ರೀ ಮಹಾಭಾರತ ಸರಣಿ ತಾಳಮದ್ದಲೆಯನ್ನು ಪ್ರಾಯೋಜಕರ ನೆಲೆಯಲ್ಲಿ ವಿಶಿಷ್ಟವಾಗಿ ನಡೆಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.