Monday, March 16, 2026
Home Blog Page 127

ಅಂಬಿಕಾ ಸಿಬಿಎಸ್‌ಸಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – “ಕ್ರಿಯಾಶೀಲತೆ ಮೂಡಿಸಲು ಬಾಲ್ಯಜೀವನ ಸಹಕಾರಿ”: ಡಾ. ಮಾಧವ ಭಟ್

0

ಪುತ್ತೂರು: ಬಾಲ್ಯದಲ್ಲಿ ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ ಮೃದುವಾಗಿದ್ದು, ಉತ್ತಮ ವಿಚಾರ ಧಾರೆಗಳಿಂದ ಅವರನ್ನು ರೂಪಿಸುವ ಕಾರ್ಯವನ್ನು ಪೋಷಕರು ಮಾಡಬೇಕಿದೆ. ಪ್ರಾಥಮಿಕ ಹಂತದ ಶಿಕ್ಷಣ ಹಾಗೂ ಇನ್ನಿತರ ಅನುಭವಗಳು ಮುಂದಿನ ಜೀವನ ರೂಪಿಸಲು ನೆರವಾಗುವುದರಿಂದ ಹೆತ್ತವರು ಮಕ್ಕಳಿಗೆ ಹೆಚ್ಚು ಸಮಯ ನೀಡುವುದು ಅವಶ್ಯ. ಪೋಷಕರು ಹಾಗೂ ಶಿಕ್ಷಕರು ನೀಡುವ ಉತ್ತಮ ವಿಚಾರಗಳು ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಸಿ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ಪ್ರತಿಭಾ ತರಂಗಿಣೀ 2022-23’ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ವಿದ್ಯಾರ್ಥಿ ಜೀವನದಲ್ಲಿ ಪಡೆದ ಪುರಸ್ಕಾರಗಳನ್ನು ಮಕ್ಕಳು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಬಾಲ್ಯದಲ್ಲಿ ಮಕ್ಕಳ ಸಣ್ಣ ಪುಟ್ಟ ಸಂತೋಷಗಳಲ್ಲಿ ಪೋಷಕರು ಭಾಗಿಯಾಗುವುದು ಅತ್ಯಗತ್ಯ. ಇಂದಿನ ದಿನಗಳಲ್ಲಿ ಹೆತ್ತವರಿಗೆ ತಮ್ಮ ದೈನಂದಿನ ಒತ್ತಡಗಳಿಂದಾಗಿ ಮಕ್ಕಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಶಾಲಾ ವಾರ್ಷಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಪೋಷಕರು ಬಿಡುವು ಮಾಡಿಕೊಂಡು ಮಕ್ಕಳ ಬೆಳವಣಿಗೆಯನ್ನು ಗಮನಿಸಬೇಕಿದೆ ಎಂದರು.


ಮಕ್ಕಳು ಒಬ್ಬರಿಗಿಂತ ಒಬ್ಬರು ವೈವಿಧ್ಯಮಯ ಪ್ರತಿಭೆಗಳನ್ನು ಹೊಂದಿದ್ದು ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ. ವಿವಿಧ ವಯೋಮಾನಗಳಲ್ಲಿ ಪ್ರತಿಯೊಬ್ಬರೂ ವಿಶೇಷ ಸಾಧನೆಯನ್ನು ಮೆರೆಯುತ್ತಾರೆ. ಆದ್ದರಿಂದ ಮಕ್ಕಳು ಪ್ರಶಸ್ತಿ ಗಳಿಸದಿದ್ದರೂ ಒತ್ತಡ ಹೇರುವ ಅಗತ್ಯವಿಲ್ಲ. ಅವರ ಅಭಿರುಚಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ನಡೆಸಬೇಕಿದೆ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವುದು ಪೋಷಕರು ನಿರ್ವಹಿಸಬೇಕಾದ ಅತೀ ದೊಡ್ಡ ಜವಾಬ್ದಾರಿಯಾಗಿದೆ. ಮಕ್ಕಳು ಸಾಧನೆ ಮಾಡಿದಾಗ ಪ್ರೋತ್ಸಾಹಿಸುವುದು, ದಾರಿ ತಪ್ಪಿ ನಡೆದಾಗ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರುವ ಕಾರ್ಯವನ್ನೂ ಸಮರ್ಥವಾಗಿ ನಿರ್ವಹಿಸುವುದು ಅಗತ್ಯ. ಯುವಜನತೆ ದೇಶದ ಶಕ್ತಿಯಾಗಿದ್ದು, ಅವರು ಸಾಧನೆಯ ಉತ್ತುಂಗ ಶಿಖರಕ್ಕೆ ಏರುವುದನ್ನು ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳನ್ನು ಸಮರ್ಥವಾಗಿ ರೂಪಿಸುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.


ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಗುಂಪು ವಿಭಾಗದಲ್ಲಿ ಐರಾವತ ತಂಡ ಚಾಂಪಿಯನ್‌ಷಿಪ್ ಪಡೆದರೆ, ಅಮೃತಾ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ಶಾಲಾ ಮಕ್ಕಳು ‘ಪಾಂಚಜನ್ಯ’ ಹಾಗೂ ‘ಏಕಾದಶಿ ಮಹಾತ್ಮೆ’ ಪ್ರಸಂಗ ಯಕ್ಷಗಾನ ಪ್ರದರ್ಶನ ನೀಡಿದ್ದು ನೆರೆದಿದ್ದವರ ಮನಸ್ಸನ್ನು ಸೂರೆಗೊಂಡಿತು. ಜತೆಗೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಕಾರ್ಯಕ್ರಮದಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಸತ್ಯ ಪ್ರಸಾದ್ ಕೋಟೆ, ಶಿಕ್ಷಕ-ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಸ್ಕೃತಿ ಎಸ್. ಶೆಟ್ಟಿ, ಮನ್ವಿತ್ ಎಸ್. ಉಪಸ್ಥಿತರಿದ್ದರು.


ಉಪಪ್ರಾಂಶುಪಾಲೆ ಸುಜನಿ ಎಂ. ಬೋರ್ಕರ್ ಸ್ವಾಗತಿಸಿದರು. ಪ್ರಾಂಶುಪಾಲೆ ಮಾಲತಿ ಡಿ. ವಂದಿಸಿದರು.

ಅನುಭವೀ ಮದ್ದಳೆಗಾರರು, ಯಕ್ಷಗಾನ ವಾದ್ಯೋಪಕರಣಗಳ ತಯಾರಕರು – ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಹಿರಿಯ ಮದ್ದಳೆಗಾರರು. ಕಲಾಕ್ಷೇತ್ರದಲ್ಲಿ ಶ್ರೀಯುತರು ಸುಮಾರು ನಾಲ್ಕೂವರೆ ದಶಕಗಳ ಅನುಭವಿ. ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಇವರು ಬಳಿಕ ಮದ್ದಳೆಗಾರನಾಗಿ ಕಾಣಿಸಿಕೊಂಡು ಪ್ರಸಿದ್ಧರಾದರು. ಉಪ್ಪಳ, ಕಟೀಲು, ಸುಂಕದಕಟ್ಟೆ, ಸುರತ್ಕಲ್, ಮಧೂರು, ಮಲ್ಲ ಮತ್ತು ಧರ್ಮಸ್ಥಳ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಗಳಿಸಿಕೊಂಡವರು. ತೆಂಕುತಿಟ್ಟಿನ ಹೆಚ್ಚಿನ ಹಿರಿಯ ಭಾಗವತರುಗಳ ಹಾಡುಗಾರಿಕೆಗೆ ಚೆಂಡೆ ಮದ್ದಲೆಗಳನ್ನು ನುಡಿಸುವ ಅವಕಾಶವು ಇವರಿಗೆ ದೊರೆತಿತ್ತು.

ಯಕ್ಷಗಾನ ಕಲೆಯ ವಾದ್ಯೋಪಕರಣಗಳಾದ ಚೆಂಡೆ ಮತ್ತು ಮದ್ದಳೆಗಳ ನುಡಿಸುವಿಕೆಯಲ್ಲಿ ಇವರು ಪರಿಣತರು. ಈ ವಾದ್ಯೋಪಕರಣಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಹೊಸ ಚೆಂಡೆ ಮತ್ತು ಮದ್ದಲೆಗಳನ್ನು ತಯಾರಿಸಿ ಪ್ರದರ್ಶನಕ್ಕಾಗಿ ಒದಗಿಸಿ ಕೊಡುತ್ತಾರೆ. ಹಳತನ್ನು ದುರಸ್ಥಿಗೊಳಿಸಿ ಕೊಡುತ್ತಾರೆ. ಚೆಂಡೆಯ ಕೋಲುಗಳನ್ನು ಬೇಕಾದಂತೆ ಸಿದ್ಧಗೊಳಿಸಿ ಕೊಡುತ್ತಾರೆ. ಇವರು ಸಿದ್ಧಗೊಳಿಸಿದ ಚೆಂಡೆ, ಮದ್ದಳೆ, ಚೆಂಡೆಯ ಕೋಲುಗಳು ಪ್ರದರ್ಶನಗಳಲ್ಲಿ ಬಳಕೆಯಾಗುವುದನ್ನು ನಾವು ಗಮನಿಸಬಹುದು. ಈ ವಿಭಾಗದಲ್ಲಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಬಿಡುವಿಲ್ಲದ ದುಡಿಮೆಯು ಪ್ರಶಂಸನೀಯವಾದುದು.

1996ರಲ್ಲಿ ಮೇಳದ ವ್ಯವಸಾಯಕ್ಕೆ ವಿದಾಯ ಹೇಳಿದ ಬಳಿಕ ಯಕ್ಷಗಾನ ಹಿಮ್ಮೇಳ ಪರಿಕರಗಳ ತಯಾರಿಕೆಯಲ್ಲಿ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಕಲಿಕಾಸಕ್ತ ಮತ್ತು ವ್ಯವಸಾಯ ಮಾಡುತ್ತಿರುವ ಭಾಗವತರುಗಳಿಗೆ, ಅವರ ಅಭಿರುಚಿಗೆ ತಕ್ಕಂತೆ ಶ್ರುತಿಬದ್ಧವಾದ ಕಂಚಿನ ಜಾಗಟೆಯನ್ನೂ ಇವರು ತರಿಸಿಕೊಡುತ್ತಾರೆ. ಗುರುವಾಗಿ ಕಲಿಕಾಸಕ್ತರಿಗೆ ಭಾಗವತಿಕೆ ಮತ್ತು ಚೆಂಡೆ ಮದ್ದಳೆ ನುಡಿಸುವಲ್ಲಿ ತರಬೇತಿಯನ್ನೂ ನೀಡುತ್ತಿದ್ದಾರೆ. ಮದ್ದಳೆಗಾರರಾಗಿ, ಯಕ್ಷಗಾನ ವಾದ್ಯೋಪಕರಣಗಳ ತಯಾರಕರಾಗಿ, ಗುರುವಾಗಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಕಲಾಭಿಮಾನಿಗಳಿಗೆಲ್ಲರಿಗೂ ಪರಿಚಿತರು.

ಅನುಭವೀ ಮದ್ದಳೆಗಾರ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಹುಟ್ಟೂರು ಕಾಸರಗೋಡು ಜಿಲ್ಲೆಯ ಮೈರೆ ಗ್ರಾಮದ ಶೇಣಿ. (ಯಕ್ಷಗಾನ ರಂಗದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಹುಟ್ಟೂರು ಇದೇ ಶೇಣಿ) 1960ನೇ ಇಸವಿ ಶೇಣಿ ಶ್ರೀ ಮಹಾಬಲ ಭಟ್ ಮತ್ತು ಶ್ರೀಮತಿ ಶಾರದಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಶ್ರೀ ಮಹಾಬಲ ಭಟ್ಟರು ಕೃಷಿಕರೂ ಯಕ್ಷಗಾನ ಕಲಾವಿದರೂ ಆಗಿದ್ದರು. ಇವರು ಮದ್ದಳೆಗಾರರಾಗಿ ಕೂಡ್ಲು ಮತ್ತು ಮುಲ್ಕಿ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಯಕ್ಷಗಾನ ಹಿಮ್ಮೇಳದಲ್ಲಿ ಹೆಸರುವಾಸಿಯಾದ ಕುದ್ರೆಕೋಡ್ಲು ಮನೆಯವರು ಇವರಿಗೆ ಬಂಧುಗಳು. ಶೇಣಿ ಮಹಾಬಲ ಭಟ್ಟರ ಅಕ್ಕ ಕುದ್ರೆಕೋಡ್ಲು ಹಿರಿಯ ರಾಮ ಭಟ್ಟರ ಪತ್ನಿ. ಹೀಗೆ ಕುದ್ರೆಕೋಡ್ಲು ಮನೆಯವರೊಂದಿಗೆ ಶೇಣಿ ಮನೆಯವರಿಗೆ ಬಂಧುತ್ವವು ಬೆಸೆದಿತ್ತು. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ವಿದ್ಯಾರ್ಜನೆ ಎಸ್ಸೆಸ್ಸೆಲ್ಸಿ ವರೆಗೆ. ಏಳನೇ ತರಗತಿ ವರೆಗೆ ಶೇಣಿ ಶಾಲೆಯಲ್ಲಿ. ಎಂಟನೇ ತರಗತಿ ಉಪ್ಪಿನಂಗಡಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ. ಬಾಲ್ಯದಲ್ಲಿ ಇವರಿಗೆ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುವುದರ ಜತೆಗೆ ತಂದೆಯವರಿಂದ ಮದ್ದಳೆವಾದನದ ಪಾಠವೂ ಆಗಿತ್ತು. ಆದರೆ ಇವರಿಗೆ ಮುಮ್ಮೇಳದಲ್ಲಿ ಆಸಕ್ತಿ ಉಂಟಾಗಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ವೇಷ ಮಾಡುವ ಅವಕಾಶವೂ ಸಿಕ್ಕಿತ್ತು.

ಆಗ ಖ್ಯಾತ ತಾಳಮದ್ದಳೆ ಅರ್ಥಧಾರಿ ಪೆರ್ಲ ಶ್ರೀ ಕೃಷ್ಣ ಭಟ್ಟರು (ಹಿಂದಿ ಪಂಡಿತರು) ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಸೂಚನೆಯಂತೆ ಹಿರಿಯ ಕಲಾವಿದ ಪಡ್ರೆ ಬದಿ ಶ್ರೀ ಕುಂಞಪ್ಪ ನಾಯ್ಕ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆಯ ಅಭ್ಯಾಸ. (ಇವರ ಪುತ್ರ ಪಡ್ರೆ ಶ್ರೀಧರ ಪ್ರಸ್ತುತ ಕಟೀಲು ಮೇಳದ ಮದ್ದಳೆಗಾರ) ಪೆರ್ಲ ಕೃಷ್ಣ ಭಟ್ಟರ ನಿರ್ದೇಶನವೂ ಸಿಕ್ಕಿತ್ತು. ಶಾಲಾ ಪ್ರದರ್ಶನ, ಮಾಗದ ವಧೆ ಪ್ರಸಂಗದಲ್ಲಿ ಮಾಗಧನಾಗಿ ರಂಗಪ್ರವೇಶ ಮಾಡಿದ್ದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಜನೆಯ ಬಳಿಕ ಕುಂಬಳೆ ಶ್ರೀ ಸೇಸಪ್ಪ ಸಂಚಾಲಕತ್ವದ ಉಪ್ಪಳ ಶ್ರೀ ಭಗವತೀ ಮೇಳದಲ್ಲಿ ಎರಡು ವರ್ಷ ತಿರುಗಾಟ. ಮೊದಲ ವರ್ಷ ವೇಷಧಾರಿಯಾಗಿ ತಮ್ಮ ಪಾಲಿಗೆ ಸಿಕ್ಕ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಹಿಮ್ಮೇಳದತ್ತ ಒಲವು ಉಂಟಾಗಿ ಮದ್ದಳೆಗಾರನಾಗಬೇಕೆಂಬ ಆಸೆಯಾಗಿತ್ತು. ತಂದೆಯವರಿಂದ ಈ ಬಗೆಗೆ ತರಬೇತಿಯೂ ಸಿಕ್ಕಿತ್ತು. ಬಂಧುಗಳಾದ ಪೆರುವಾಯಿ ಶ್ರೀ ಕೃಷ್ಣ ಭಟ್ಟರ ನಿರ್ದೇಶನವೂ ಸಿಕ್ಕಿತ್ತು. ಇವರಿಂದಲೇ ಮದ್ದಳೆ ನುಡಿತಗಳ ಬಾಯಿತಾಳವನ್ನು ಅಭ್ಯಸಿಸಿದ್ದರು.

ಎರಡನೇ ವರ್ಷ ಉಪ್ಪಳ ಮೇಳದಲ್ಲಿ ಮದ್ದಳೆಗಾರನಾಗಿ ತಿರುಗಾಟ. ಆಗ ಹಿರಿಯ ಮದ್ದಳೆಗಾರರಾದ ಮಳಿ ಶ್ರೀ ಶ್ಯಾಮ ಭಟ್ಟರ ಒಡನಾಟವೂ, ನಿರ್ದೇಶನವೂ ಸಿಕ್ಕಿತ್ತು. ಉಪ್ಪಳ ಮೇಳದಲ್ಲಿ ಎರಡು ವರ್ಷ ತಿರುಗಾಟದ ಬಳಿಕ ಕಟೀಲು ಮೇಳ ಸೇರಲು ಶ್ರೀ ಶೇಣಿ ಮಹಾಬಲ ಭಟ್ಟರು ಸೂಚನೆ ನೀಡಿದ್ದರು. ತೀರ್ಥರೂಪರ ಸಲಹೆಯಂತೆ ಶೇಣಿ ಸುಬ್ರಹ್ಮಣ್ಯ ಭಟ್ಟರು ಕಟೀಲು ಮೇಳದಲ್ಲಿ ವ್ಯವಸಾಯ ಮಾಡುವ ನಿರ್ಧಾರವನ್ನು ಕೈಗೊಂಡರು. ಕಟೀಲು ಎರಡನೇ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಮೊದಲ ವರ್ಷ ಅಡೂರು ಸುಂದರ ರಾಯರ ಒಡನಾಟ, ಸಹಕಾರವು ಸಿಕ್ಕಿತ್ತು. ಎರಡನೇ ವರ್ಷ ಶ್ರೀ ಪೆರುವಾಯಿ ನಾರಾಯಣ ಭಟ್ಟರ ಮತ್ತು ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರ ಒಡನಾಟವು ಸಿಕ್ಕಿತ್ತು.

ಕಟೀಲು ಮೇಳದ ತಿರುಗಾಟದ ಬಳಿಕ ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಇಲ್ಲಿ ಪುತ್ತಿಗೆ ತಿಮ್ಮಪ್ಪ ರೈಗಳ ಮತ್ತು ತಲೆಂಗಳ ಗೋಪಾಲಕೃಷ್ಣ ಭಟ್ಟರ ಒಡನಾಟವು ಸಿಕ್ಕಿತ್ತು. ಮೂರು ತಿಂಗಳ ತಿರುಗಾಟದ ಬಳಿಕ ಮುಖ್ಯ ಮದ್ದಳೆಗಾರರಾಗಿ ವ್ಯವಸಾಯ ಮಾಡಲು ಅವಕಾಶವಾಗಿತ್ತು. ಬಳಿಕ ಸುರತ್ಕಲ್ ಮೇಳದಲ್ಲಿ ಮೂರು ವರ್ಷ ವ್ಯವಸಾಯ. ಈ ಸಂದರ್ಭದಲ್ಲಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಶಿರಂಕಲ್ಲು ನಾರಾಯಣ ಭಟ್ಟರೊಂದಿಗೆ ವ್ಯವಸಾಯ ಮಾಡಲು ಅವಕಾಶವಾಗಿತ್ತು.

ಬಳಿಕ ಮಧೂರು ಮೇಳದಲ್ಲಿ ಒಂದು  ಇಲ್ಲಿ ಕಾಸರಗೋಡು ವೆಂಕಟ್ರಮಣ ಅವರೊಂದಿಗೆ ವ್ಯವಸಾಯ. ಬಳಿಕ ಒಂದು ವರ್ಷ ಪಟ್ಲಗುತ್ತು ಮಹಾಬಲ ಶೆಟ್ರ ನಾಯಕತ್ವದ ಮಲ್ಲ ಮೇಳದಲ್ಲಿ ವ್ಯವಸಾಯ. ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಐದು ವರ್ಷ ವ್ಯವಸಾಯ. ಇಲ್ಲಿ ಕಡತೋಕಾ ಮಂಜುನಾಥ ಭಾಗವತ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಸುಬ್ರಹ್ಮಣ್ಯ ಶಾಸ್ತ್ರಿ ಅವರೊಂದಿಗೆ ವ್ಯವಸಾಯ. ಇಲ್ಲಿ ಮುಮ್ಮೇಳದ ಖ್ಯಾತ ಕಲಾವಿದರ ಒಡನಾಟವೂ ದೊರೆತಿತ್ತು. ಧರ್ಮಸ್ಥಳ ಮೇಳದ ನಂತರ ಒಂದು ವರ್ಷ ಕರ್ನಾಟಕ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಮಯದಲ್ಲಿ ದಿನೇಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಮೊದಲಾದವರ ಒಡನಾಟ ದೊರಕಿತ್ತು.

ಮನೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಅನಿವಾರ್ಯತೆಯಿಂದ 1996ರಲ್ಲಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು.  ಬಹು ಬೇಡಿಕೆಯ ಕಲಾವಿದನಾಗಿರುವಾಗಲೇ ಇವರು ಮೇಳದ ವ್ಯವಸಾಯವನ್ನು ನಿಲ್ಲಿಸಬೇಕಾಗಿ ಬಂದಿತ್ತು. ಆದರೂ ಯಕ್ಷಗಾನದಿಂದ ನಿವೃತ್ತರಾಗದೆ ವ್ಯವಸಾಯವನ್ನು ಮಾಡುತ್ತಿದ್ದಾರೆ. 1996ರ ಬಳಿಕ ಅತಿಥಿ ಕಲಾವಿದನಾಗಿ ಹವ್ಯಾಸೀ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತಾರೆ.  ಅಲ್ಲದೆ ತಾನು ಬಹುವಾಗಿ ಪ್ರೀತಿಸುವ ಯಕ್ಷಗಾನದ ವಾದ್ಯೋಪಕರಣಗಳಾದ ಚೆಂಡೆ ಮದ್ದಳೆಯನ್ನು ತಯಾರಿಸುವ ಕೆಲಸದಲ್ಲೂ ತೊಡಗಿಸಿಕೊಂಡು ಬಂದಿರುತ್ತಾರೆ. ಚೆಂಡೆಯ ಕೋಲುಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಈ ವಿಭಾಗದಲ್ಲೂ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಬಹು ಬೇಡಿಕೆಯ ಕಲಾವಿದರು.

ಈ ಪರಿಕರಗಳನ್ನು ತಯಾರಿಸುವಲ್ಲಿ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 2020-21ರಿಂದ ತೊಡಗಿ ಕಾಯರ್ ಕಟ್ಟೆ ಅಯ್ಯಪ್ಪ ಭಜನಾ ಮಂದಿರ, ಸಜಂಕಿಲ ಶ್ರೀ ದುರ್ಗಾ ಯುವಕ ಮಂಡಲ ಮೊದಲಾದ ಕಡೆ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಮೂರು ವರ್ಷ ಭಾಗವಹಿಸಿರುತ್ತಾರೆ. ಒಂದು ಬಾರಿ ವಿದೇಶಯಾತ್ರೆಯನ್ನೂ ಕೈಗೊಂಡಿದ್ದಾರೆ. ಸಂಘಟಕರಾದ ಶ್ರೀ ಎಸ್.ಎನ್. ಪಂಜಾಜೆ ಅವರ ನೇತೃತ್ವದಲ್ಲಿ ದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರದರ್ಶನದಲ್ಲೂ ಭಾಗವಹಿಸಿರುತ್ತಾರೆ. 1997ರಿಂದ ಇವರು ಬಾಯಾರು ಸಮೀಪದ ಉಳುವಾನ ಎಂಬಲ್ಲಿ ವಾಸಿಸುತ್ತಿದ್ದಾರೆ. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಮೇಳದ ವ್ಯವಸಾಯದಲ್ಲಿ, ಹಿರಿಯ ಮದ್ದಳೆಗಾರರ ಒಡನಾಟದಲ್ಲಿ ಕಲಿಯುತ್ತಾ ಹಿಮ್ಮೇಳ ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಬಾಲ್ಯದಲ್ಲಿ ತೀರ್ಥರೂಪರಿಂದ ಬಾಲಪಾಠ. ಬಳಿಕ ಬಂಧುಗಳಾದ ಕಿರಿಯ ಕುದ್ರೆಕೊಡ್ಲು ರಾಮಭಟ್ಟರಿಂದಲೂ ತರಬೇತಿ ಪಡೆದಿದ್ದರು. ಮೇಳದ ವ್ಯವಸಾಯದುದ್ದಕ್ಕೂ ಸಹ ಕಲಾವಿದರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು.

ಕಲಾ ಬದುಕಿನಲ್ಲೂ ಸಾಂಸಾರಿಕವಾಗಿಯೂ ಶ್ರೀಯುತರು ತೃಪ್ತರು. ಇವರ ಪತ್ನಿ ಶ್ರೀಮತಿ ಶೈಲಜಾ. ಇವರು ಗೃಹಣಿ. ಇವರು ಶ್ರೀ ಸುಬ್ರಾಯ ಭಟ್ ತಾಳ್ತಜೆ ಮತ್ತು ಶ್ರಿಮತಿ ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರಿ. ಇವರ ತವರುಮನೆ ತಾಳ್ತಜೆ. ಯಕ್ಷಗಾನ ಹಿನ್ನೆಲೆ ಇರುವ ಮನೆ ಇದು. ಇವರ ದೊಡ್ಡಪ್ಪ ತಾಳ್ತಜೆ ಶ್ರೀ ತಿರುಮಲೇಶ್ವರ ಭಟ್ಟರು ಭಾಗವತರಾಗಿ ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡಿದವರು. ಇವರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಶ್ರೀಮತಿ ಶೈಲಜಾ ಅವರ ತಂದೆ ಶ್ರೀ ಸುಬ್ರಾಯ ಭಟ್ ತಾಳ್ತಜೆ ಹವ್ಯಾಸಿ ಮದ್ದಳೆಗಾರರು. ಇವರೂ ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಶೈಲಜಾ ದಂಪತಿಗಳಿಗೆ ಮೂವರು ಪುತ್ರರು. ಹಿರಿಯ ಪುತ್ರ ಶ್ರೀ ರವಿಕಿರಣ. ಇವರು ಪುತ್ತೂರಿನ ಅನಘ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕರು. ಇವರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತಿದ್ದು ವೇಷ ಮಾಡಿ ಅನುಭವ ಉಳ್ಳವರು. ಇವರ ಪತ್ನಿ ಶ್ರೀಮತಿ ಶೃತಿ. ರವಿಕಿರಣ,ಶೃತಿ ದಂಪತಿಗಳ ಪುತ್ರ ಮಾಸ್ಟರ್ ವಿಹಾನ್ ಕೃಷ್ಣ. ದ್ವಿತೀಯ ಪುತ್ರ ಶ್ರೀ ಮುರಳಿಕೃಷ್ಣ. ಇವರು ಮಂಗಳೂರಿನಲ್ಲಿ ಉದ್ಯೋಗಿ. ಇವರು ಯಕ್ಷಗಾನ ಹಿಮ್ಮೇಳ ಕಲಿತು ಚೆಂಡೆ ಬಾರಿಸುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರ ಪತ್ನಿ ಶ್ರೀಮತಿ ಜಯದುರ್ಗಾ. ಇವರು ಗೃಹಣಿ. ತೃತೀಯ ಪುತ್ರ ಶ್ರೀ ಸತ್ಯನಾರಾಯಣ. ಇವರು ಬೆಂಗಳೂರಿನಲ್ಲಿ ಕಂಪೆನಿ ಸೆಕ್ರೆಟರಿ (CS) ಓದುತ್ತಿದಾರೆ. ನಾಟ್ಯ ಕಲಿತು ವೇಷ ಮಾಡುವ ಹವ್ಯಾಸವು ಇವರಿಗಿದೆ. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಮನೆಯವರಿಗೆಲ್ಲಾ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಲಿ. ಅವರ ಮನೋಕಾಮನೆಗಳೆಲ್ಲವೂ ಈಡೇರಲಿ. ಶೇಣಿ ಸುಬ್ರಹ್ಮಣ್ಯ ಭಟ್ಟರಿಂದ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್, ಉಳುವಾನ, ಅಂಚೆ ಚಿಪ್ಪಾರು, ವಯಾ ಉಪ್ಪಳ, ಮೊಬೈಲ್:8547206905

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ,

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್:9164487083

ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ವಾರ್ಷಿಕೋತ್ಸವ – ಪ್ರತಿಭಾ ತರಂಗಿಣೀ

0

ಪುತ್ತೂರು: ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. ಶಾಲೆ ಕೇವಲ ಪಠ್ಯ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಂಸ್ಕಾರವನ್ನೂ ಪಡೆದಾಗ ಉತ್ಕೃಷ್ಟ ವ್ಯಕ್ತಿತ್ವ ಪಡೆಯಲು ಸಾಧ್ಯವಾಗುತ್ತದೆ ಎಂದು ವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ತರಂಗಿಣೀ 2022-23 – ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕಲೆಗಳು ಭಾರತೀಯ ಮೌಲ್ಯಗಳಿಗೆ ಆಸರೆಯಾಗಿದ್ದು, ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳು ಸೂಕ್ತ ವೇದಿಕೆಯಲ್ಲಿ ಪ್ರದರ್ಶನವಾಗಬೇಕು. ವಿದ್ಯಾರ್ಥಿಗಳು ಪೂರ್ಣ ಮನಸ್ಸಿನಿಂದ ಭಾರತೀಯ ಕಲಾ ಪ್ರಕಾರಗಳ ಕುರಿತು ಅರಿತಾಗ ಅವರ ಚಿಂತನೆಯೂ ಬದಲಾಗುತ್ತದೆ ಎಂದರು.


ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ವಾರ್ಷಿಕ ವಿಶೇಷ ವರದಿಯ ವಿಡಿಯೋ ಪ್ರದರ್ಶನ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ವೇದಿಕೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ವಿದ್ಯಾರ್ಥಿ ಪ್ರತಿನಿಧಿಗಳಾದ ಮನ್ವಿತ್ ಎಸ್., ಸಂಸ್ಕೃತಿ ವಿ ಶೆಟ್ಟಿ ಉಪಸ್ಥಿತರಿದ್ದರು.


ಪ್ರಾಂಶುಪಾಲೆ ಮಾಲತಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಸುಜನಿ ಎಂ. ಬೋರ್ಕರ್ ವಂದಿಸಿದರು.

ಕಾಸರಗೋಡಿನ ಯುವ ಮಾಡೆಲ್ ಮೇಲೆ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ, ನಂತರ ಮನೆ ಮುಂದೆ ಡ್ರಾಪ್; ಮಹಿಳೆ ಸೇರಿದಂತೆ ನಾಲ್ವರ ಬಂಧನ

0

ಚಲಿಸುತ್ತಿದ್ದ ಕಾರಿನೊಳಗೆ 19 ವರ್ಷದ ಕಾಸರಗೋಡು ಮೂಲದ ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಗುರುವಾರ ತಡರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಪೊಲೀಸರು ಮೂವರು ಪುರುಷರು ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮೂವರು ಯುವಕರು ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕಾಸರಗೋಡು ಮೂಲದ ಮಾಡೆಲ್ ಯುವತಿ ಕೆಲ ದಿನಗಳ ಹಿಂದೆ ಇಲ್ಲಿಗೆ ಬಂದಿದ್ದರು ಯುವ ಮಾಡೆಲ್ ನಿನ್ನೆ ರಾತ್ರಿ 8:30 ರ ಸುಮಾರಿಗೆ ತನ್ನ ಸ್ನೇಹಿತೆಯೊಂದಿಗೆ ಕೊಚ್ಚಿಯ ಬಾರ್‌ಗೆ ಬಂದಿದ್ದಾಳೆ. ರಾತ್ರಿ 10 ಗಂಟೆಗೆ ಬಾರ್‌ನಲ್ಲಿ ಕುಸಿದು ಬಿದ್ದಿದ್ದಾಳೆ.

ಈ ಹಿನ್ನೆಲೆಯಲ್ಲಿ ಯುವಕರು ಆಕೆಯನ್ನು ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆಕೆಯ ಮಹಿಳಾ ಸ್ನೇಹಿತೆ ಕಾರಿನಲ್ಲಿ ಬರಲಿಲ್ಲ. ಬಳಿಕ ಕಾರಿನಲ್ಲಿ ನಗರದೆಲ್ಲೆಡೆ ಸುತ್ತಾಡಿದ ಯುವಕರು ಕಾರಿನೊಳಗೆ ರೂಪದರ್ಶಿಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಕಾಕ್ಕನಾಡಿನ ಆಕೆಯ ಮನೆಯ ಮುಂದೆ ಡ್ರಾಪ್ ಮಾಡಿದ್ದಾರೆ.

ಬಳಿಕ ಮಹಿಳೆ ತನ್ನ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇಂದು ಆಕೆ ತನ್ನ ಸ್ನೇಹಿತೆಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯನ್ನು ಸ್ನೇಹಿತೆ ಪೊಲೀಸರಿಗೆ ತಿಳಿಸಿದ್ದಾರೆ. ಇಂದು ಬೆಳಗ್ಗೆ ದೂರು ಸ್ವೀಕರಿಸಿದ ಪೊಲೀಸರು ಯುವತಿ ಹೋದ ಬಾರ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಯುವಕರು ನೀಡಿದ ಗುರುತಿನ ದಾಖಲೆಗಳಲ್ಲಿ ನಕಲಿ ವಿಳಾಸ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆಕೆಯನ್ನು ವಿಚಾರಿಸಿದಾಗ ಮೂವರು ಯುವಕರು ಕೊಡುಂಗಲ್ಲೂರು ಮೂಲದವರು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ವೇಳೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಕೊಡುಂಗಲ್ಲೂರಿನ ವಿವೇಕ್, ನಿತಿನ್ ಮತ್ತು ಸುಧೀಪ್ ಮತ್ತು ರಾಜಸ್ಥಾನದ ಡಿಂಪಲ್ ಲವಾ ಎರ್ನಾಕುಲಂ ದಕ್ಷಿಣ ಪೊಲೀಸರ ವಶದಲ್ಲಿದ್ದಾರೆ.

ಗುರುವಾರ ರಾತ್ರಿ ಎರ್ನಾಕುಲಂನ ಅಟ್ಲಾಂಟಿಸ್ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಇಲ್ಲಿ ನಡೆದ ಡಿಜೆ ಪಾರ್ಟಿ ಬಳಿಕ ರಾಜಸ್ಥಾನ ಮಹಿಳೆ ಡಿಂಪಲ್ ಲಾವಾ ಜೊತೆ ಮದ್ಯ ಸೇವಿಸುತ್ತಿದ್ದ ಯುವತಿ ಕುಸಿದು ಬಿದ್ದಿದ್ದಾಳೆ. ಸಹಾಯಕ್ಕೆ ಬಂದ ವ್ಯಕ್ತಿಗಳು ಕಾಕ್ಕನಾಡ್‌ನಲ್ಲಿರುವ ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಯುವತಿಯ ಸ್ನೇಹಿತೆಯಾದ ರಾಜಸ್ಥಾನ ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ.

ಆಮೇಲೆ ವಿವೇಕ್ ಅವರ ಹೊಚ್ಚಹೊಸ ಮಹೀಂದ್ರಾ ಥಾರ್‌ನಲ್ಲಿ ಆರೋಪಿಗಳು ನಗರದಲ್ಲಿ ಸುತ್ತಾಡಿದ ನಂತರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಾಡೆಲ್ ವಾಸವಿದ್ದ ಕಾಕ್ಕನಾಡು ಇನ್ಫೋಪಾರ್ಕ್ ಬಳಿಯ OYO ಸ್ಟೆ ಎದುರು ಮಹಿಳೆಯನ್ನು ಇಳಿಸಲಾಗಿತ್ತು.

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಇಂದು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರು ಆಕೆಯನ್ನು ಕಲಮಸೇರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳಾ ಸ್ನೇಹಿತೆ ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಹೋಗದಿರಲು ನಿರ್ಧರಿಸಿದ್ದಾರೆ ಎಂದು ತೀರ್ಮಾನಿಸಿ ಅವಳನ್ನು ಬಂಧಿಸಲಾಗಿದೆ. ಬಾರ್‌ನಲ್ಲಿ ಯುವಕರು ನೀಡಿದ ವಿಳಾಸಗಳು ನಕಲಿಯಾಗಿತ್ತು. ರಾಜಸ್ಥಾನದ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮೂಲ ಮಾಹಿತಿ ಸಿಕ್ಕಿದೆ. ಪ್ರಕರಣವನ್ನು ದಕ್ಷಿಣ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಮಹೀಂದ್ರ ಥಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಇಂದು “ಸಂಪೂರ್ಣ ಕುರುಕ್ಷೇತ್ರ” ಭರ್ಜರಿ ಯಕ್ಷಗಾನ ಪ್ರದರ್ಶನ : ಭೀಷ್ಮ ಪರ್ವ – ಅನುಭವಿಗಳ ಪ್ರದರ್ಶನ, ದ್ರೋಣಪರ್ವ-ಹಿರಿಯ-ಕಿರಿಯ ಕಲಾವಿದರ ಸಂಗಮ, ಕರ್ಣಪರ್ವದಲ್ಲಿ ವಾಗ್ದೇವಿಯ ಸುಪುತ್ರರಿಂದ ಮಾತಿನ ಜಟಾಪಟಿಯ ನಿರೀಕ್ಷೆ, ಗದಾಪರ್ವ- ಓಹ್… ಅಭಿನಯ,ನಾಟ್ಯಗಳ ಸಂಗಮ 

ಯಕ್ಷಗಾನಪ್ರಿಯರಿಗೆ ಯಕ್ಷಗಾನ ಆಸ್ವಾದಿಸಲು ಒಂದು ಸುವರ್ಣಾವಕಾಶದ ಸಂದರ್ಭ ಇದೀಗ ಒದಗಿಬಂದಿದೆ.

ಸೂರಂಬೈಲಿನ (ಕುಂಬಳೆ-ಬದಿಯಡ್ಕ ರಸ್ತೆ) ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ 28ನೇ ವಾರ್ಷಿಕ ದೀಪೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಮಂದಿರದ ವಠಾರದಲ್ಲಿರುವ ರಂಗ ಮಂಟಪದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾಗವಹಿಸುವಿಕೆಯಲ್ಲಿ ‘ಸಂಪೂರ್ಣ ಕುರುಕ್ಷೇತ್ರ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಇಂದು ಸೂರಂಬೈಲಿನಲ್ಲಿ “ಸಂಪೂರ್ಣ ಕುರುಕ್ಷೇತ್ರ” ಭರ್ಜರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮೊದಲಿಗೆ ಭೀಷ್ಮ ಪರ್ವ ಪ್ರಸಂಗದಲ್ಲಿ ಅನುಭವಿಗಳ ಪ್ರದರ್ಶನ, ದ್ರೋಣಪರ್ವದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರ ಸಂಗಮ, ಕರ್ಣಪರ್ವದಲ್ಲಿ ವಾಗ್ದೇವಿಯ ಸುಪುತ್ರರಿಂದ ಮಾತಿನ ಜಟಾಪಟಿಯ ನಿರೀಕ್ಷೆ, ಗದಾಪರ್ವದಲ್ಲಿ  ಅಭಿನಯ,ನಾಟ್ಯಗಳ ಸಂಗಮ ವಿವಿಧ ಪ್ರಸಿದ್ಧ ಕಲಾವಿದರಿಂದ ನಡೆಯಲಿದೆ. ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಹೆಸರಾಂತ ಕಲಾವಿದರು ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ. 

ದಿನಾಂಕ 19.11.2022ನೇ ಶನಿವಾರ ರಾತ್ರಿ 10 ಘಂಟೆಗೆ ಆರಂಭವಾಗಲಿರುವ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರ ನೋಡಿ 

ಬೆಂಗಳೂರು ಕಾಲೇಜು ಫೆಸ್ಟ್‌ನಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ – ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

0

ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಕಾಲೇಜು ಫೆಸ್ಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕಾಗಿ ಬೆಂಗಳೂರಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತರ ಕಾಲೇಜು ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಐಪಿಎಲ್ ಕ್ರಿಕೆಟ್ ತಂಡಗಳ ಘೋಷಣೆಗಳನ್ನು ಕೂಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅದೇ ಸಮಯದಲ್ಲಿ, ಅಪ್ರಾಪ್ತ ವಯಸ್ಕರಾದ ಒಬ್ಬ ಹುಡುಗ ಮತ್ತು ಹುಡುಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದರು ಮತ್ತು ಇತರ ವಿದ್ಯಾರ್ಥಿಗಳು ಆಕ್ಷೇಪಿಸಿ ಅವರನ್ನು ತಡೆಯಲು ಪ್ರಯತ್ನಿಸಿದರು, ನಂತರ ಅವರು ಕೂಗುವುದನ್ನು ನಿಲ್ಲಿಸಿದರು.

ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ವಿಡಿಯೋ ವೈರಲ್ ಆಗಿದ್ದು, ಕಾಲೇಜು ವಿಚಾರಣೆ ನಡೆಸಿ ಇಬ್ಬರಿಂದ ಕ್ಷಮಾಪಣೆ ಪತ್ರ ಪಡೆದು ಅಮಾನತು ಮಾಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 505(1)ಬಿ (ಸಾರ್ವಜನಿಕರಿಗೆ ಭಯ ಉಂಟು ಮಾಡುವ ಉದ್ದೇಶದಿಂದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ಪೊಲೀಸರು ಇಬ್ಬರು ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಗರ್ಭಿಣಿ ಪತ್ನಿ ಕಣ್ಣೆದುರೇ ಸಾವನ್ನಪ್ಪಿದ ನಂತರ ಖಿನ್ನತೆಗೊಳಗಾಗಿದ್ದ ಪತಿ ಆತ್ಮಹತ್ಯೆ

0

ಅಪಘಾತದಲ್ಲಿ ಗರ್ಭಿಣಿ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾರಾಯಣಗಾಂವ್, 18 ನವೆಂಬರ್ 2022: ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ತನ್ನ 23 ವರ್ಷದ ಗರ್ಭಿಣಿ ಪತ್ನಿಯ ಸಾವಿನಿಂದ ಮಾನಸಿಕ ಆಘಾತದಿಂದ ಪತಿ ವಿಷಕಾರಿ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜುನ್ನಾರದ ಧೋಂಡಕರವಾಡಿ ನಿಮ್ದಾರಿ ನಿವಾಸಿ ರಮೇಶ ನವನಾಥ ಕಂಸ್ಕರ್ (29) ನ.14ರಂದು ತನ್ನ ಪತ್ನಿ ವಿದ್ಯಾ ಕಂಸ್ಕರ್ (23) ತಾಯಿ ವಿಮಲ್ ಜಾಧವ್ ಅವರೊಂದಿಗೆ ಚಿನ್ನಾಭರಣ ಖರೀದಿಸಲು ನಾರಾಯಣನಗರಕ್ಕೆ ಬಂದಿದ್ದರು. ಶಾಪಿಂಗ್ ಮುಗಿಸಿ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಾಲಿನ ಡೇರಿ ಎದುರು ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಬೈಕ್ ನಿಂದ ಇಳಿದಿದ್ದಾರೆ.

ಅದೇ ಸಮಯಕ್ಕೆ ಎದುರಿನಿಂದ ಎರಡು ಟ್ರಾಲಿಗಳಲ್ಲಿ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಢಿಕ್ಕಿ ಹೊಡೆದು ಚಕ್ರದ ಕೆಳಗೆ ಸಿಲುಕಿ ಮೃತಪಟ್ಟಳು. ಪತಿ ಎದುರೇ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಕಳೆದ ಮೂರು ದಿನಗಳಿಂದ ರಮೇಶ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಈ ಅಪಘಾತಕ್ಕೆ ನಾನೇ ಕಾರಣ ಎಂದು ಭಾವಿಸಿದ್ದರು. ಅದೇ ಸ್ಥಿತಿಯಲ್ಲಿ ಮಧ್ಯರಾತ್ರಿ ವಿಷ ಸೇವಿಸಿದ್ದಾರೆ. ಬೆಳಗ್ಗೆ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಮೇಶನನ್ನು ಆರಂಭದಲ್ಲಿ ಜುನ್ನಾರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ನಾರಾಯಣಗೌಡ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

ರಮೇಶ್ ಕನ್ಸ್ಕರ್ ಮತ್ತು ವಿದ್ಯಾ ಪ್ರೇಮ ವಿವಾಹವಾಗಿದ್ದರು. ಮದುವೆಗೆ ಮುನ್ನ ಆಕೆಯ ಕೆಲವು ಶಿಕ್ಷಣ ವೆಚ್ಚವನ್ನು ರಮೇಶ್ ಭರಿಸಿದ್ದರು. ವಿದ್ಯಾಗೆ ತಾಯಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹಾಗಾಗಿ ರಮೇಶ ತನ್ನ ತಾಯಿಯೊಂದಿಗೆ ವಿದ್ಯಾಳನ್ನು ನೋಡಿಕೊಳ್ಳುತ್ತಿದ್ದ.

ಎಂಟು ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿದ್ಯಾ ಒಂದು ತಿಂಗಳ ಗರ್ಭಿಣಿ. ಪತ್ನಿಯ ಆಕಸ್ಮಿಕ ಸಾವಿನಿಂದ ರಮೇಶ್ ಆಘಾತಕ್ಕೊಳಗಾಗಿದ್ದರು. ಇವರು ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದಾಗ ಅಥವಾ ಚೆನ್ನಾಗಿ ಅಧ್ಯಯನ ಮಾಡದಿದ್ದಾಗ ಪೋಷಕರು ಏನು ಮಾಡಬೇಕು?  ಬೆಂಗಳೂರು ನಿಮ್ಹಾನ್ಸ್ ನ ಮಾನಸಿಕ ತಜ್ಞೆ ಡಾ.ಸ್ನೇಹಾ ಏನು ಹೇಳುತ್ತಾರೆ? – ವೀಡಿಯೊ ನೋಡಿ

0

ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದಾಗ ಅಥವಾ ಚೆನ್ನಾಗಿ ಅಧ್ಯಯನ ಮಾಡದಿದ್ದಾಗ ಪೋಷಕರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಕೊನೆಯವರೆಗೆ ಈ ವೀಡಿಯೊ ನೋಡಿ.

ಈ ವೀಡಿಯೋದಲ್ಲಿ ಮಕ್ಕಳ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಬೆಂಗಳೂರು ನಿಮ್ಹಾನ್ಸ್ ನ ಮಾನಸಿಕ ತಜ್ಞೆ ಡಾ.ಸ್ನೇಹಾ ಅವರು ಹಲವಾರು ವಿಷಯಗಳತ್ತ ಬೆಳಕು ಚೆಲ್ಲಿದ್ದಾರೆ.

ಡಾ. ಸ್ನೇಹಾ ಅವರು ಹೇಳುವಂತೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದಾಗ ಅಥವಾ ಚೆನ್ನಾಗಿ ಅಧ್ಯಯನ ಮಾಡದಿದ್ದಾಗ ಅಧ್ಯಯನದಲ್ಲಿ ಸೋಮಾರಿಗಳು ಅಥವಾ ಉತ್ಸಾಹವಿಲ್ಲದವರು ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ.

ಮಕ್ಕಳಿಗೆ ಕೆಲವು ನಿಜವಾದ ಸಮಸ್ಯೆಗಳಿರಬಹುದು. ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್ – ಮಕ್ಕಳು ದೀರ್ಘಕಾಲದವರೆಗೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ದೀರ್ಘಕಾಲದವರೆಗೆ ಒಂದು ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು, ಅವರ ತಿರುವುಗಳಿಗಾಗಿ ಕಾಯುವಲ್ಲಿ ಕಷ್ಟವಾಗಬಹುದು.

ಈ ಎಲ್ಲಾ ಸಮಸ್ಯೆಗಳು ಶೈಕ್ಷಣಿಕವಾಗಿ ಅವನತಿಗೆ ಕಾರಣವಾಗುತ್ತವೆ ಎಂದು ಡಾಕ್ಟರ್ ಹೇಳುತ್ತಾರೆ. ವೀಡಿಯೊ ನೋಡಿ.

ಯಕ್ಷಾಂಗಣ ದಶಮಾನ ಸಡಗರ – ಯಕ್ಷಗಾನ ತಾಳಮದ್ದಳೆ ಸಪ್ತಾಹ 2022 : ಹತ್ತನೇ ವರ್ಷದ ನುಡಿ ಹಬ್ಬ, ನವೆಂಬರ 21-27

ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವ ವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಹತ್ತನೇ ವರ್ಷದ ನುಡಿಹಬ್ಬವನ್ನು ಇದೇ 2022 ನವೆಂಬರ 21 ರಿಂದ 27 ರವರೆಗೆ ‘ದಶಮಾನ ಸಡಗರ’ವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ಸಂಜೆ ಸರಣಿ ತಾಳಮದ್ದಳೆ, ಸಾಧಕ ಸಮ್ಮಾನ, ಪ್ರಶಸ್ತಿ ಪ್ರದಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

ಉದ್ಘಾಟನೆ ಮತ್ತು ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ :
ನವೆಂಬರ 21 ರಂದು ಸೋಮವಾರ ಸಂಜೆ ಗಂ. 4ಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಸರಣಿಯನ್ನು ಉದ್ಘಾಟಿಸುವರು. ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಯಕ್ಷಾಂಗಣದ ದಶಮಾನ ಜ್ಯೋತಿ ಬೆಳಗುವರು. ಕಲಾ ಪೋಷಕ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿಯವರಿಗೆ ಮಂಗಳೂರು ವಿ.ವಿ. ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಅವರು ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ವನ್ನು ಪ್ರದಾನ ಮಾಡುವರು.

ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ‘ಸಾರ್ವಭೌಮ’ ಗ್ರಂಥಾರ್ಪಣೆ ಮಾಡುವರು. ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಯವರು ಅಧ್ಯಕ್ಷತೆ ವಹಿಸಲಿದ್ದು ಮೇಯರ್ ಜಯಾನಂದ ಅಂಚನ್, ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ರಮೇಶ್ ಭಟ್, ಶಶಿಧರ ಶೆಟ್ಟಿ ಬರೋಡ, ಪ್ರದೀಪ್ ಕುಮಾರ ಕಲ್ಕೂರ, ವೇಣುಗೋಪಾಲ್ ಎಲ್ ಶೆಟ್ಟಿ ಥಾಣೆ, ವಿ. ಕರುಣಾಕರ, ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಕೆ. ಶೆಟ್ಟಿ ಅಹ್ಮದ್ ನಗರ, ಡಾ. ಅನಸೂಯ ರೈ, ಸಿ.ಎಸ್.ಭಂಡಾರಿ ಅತಿಥಿಗಳಾಗಿರುವರು.

‘ಸಪ್ತ ವಿಜಯ’ ಸರಣಿ ತಾಳಮದ್ದಳೆ :
ಹತ್ತನೇ ವರ್ಷದ ತಾಳಮದ್ದಳೆ ಸಪ್ತಾಹದಲ್ಲಿ ‘ಸಪ್ತ ವಿಜಯ’ ಸರಣಿ ಪ್ರಸಂಗಗಳನ್ನು ಆಯ್ದುಗೊಳ್ಳಲಾಗಿದೆ. ನ. 21 ರಿಂದ ಕ್ರಮವಾಗಿ ಷಡಾನನ ವಿಜಯ, ವಾನರೇಶ್ವರ ವಿಜಯ, ವೀರಾಂಜನೇಯ ವಿಜಯ, ಭೀಮಸೇನ ವಿಜಯ, ಸ್ವರಾಜ್ಯ ಸ್ವಾತಂತ್ರ್ಯ ವಿಜಯ, ವಿಕ್ರಮಾರ್ಜುನ ವಿಜಯ ಮತ್ತು ಯಕ್ಷಲೋಕ ವಿಜಯ ಆಖ್ಯಾನಗಳಿದ್ದು, ಸಮಾರೋಪಕ್ಕೆ ಮುನ್ನ ಸಿರಿಕಿಟ್ಣ ವಿಜಯೊ ಎಂಬ ತುಳು ಪ್ರಸಂಗವನ್ನು ಸಂಯೋಜಿಸಲಾಗಿದೆ.

ಸಂಸ್ಮರಣೆ – ಸನ್ಮಾನ :
ಪ್ರತಿ ದಿನದ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಕಲಾವಿದರು ಮತ್ತು ಕಲಾಪೋಷಕರ ಸಂಸ್ಮರಣೆಯೂ ನಡೆಯಲಿದೆ. ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿ, ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ. ಕಾಂತ ರೈ ಮೂಡಬಿದ್ರೆ, ಅತ್ತಾವರ ಶಿವಾನಂದ ಕರ್ಕೇರ, ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ, ಹಾಗೂ ದಿ| ಎನ್. ಎಸ್. ಕಿಲ್ಲೆ ಅವರ ನುಡಿ ನಮನದಲ್ಲಿ ಹಿರಿಯ ಸಾಧಕರಾದ ಬಿ. ಭುಜಬಲಿ ಧರ್ಮಸ್ಥಳ, ಪಟ್ಲ ಗುತ್ತು, ಮಹಾಬಲ ಶೆಟ್ಟಿ, ಪ್ರೊ| ಜಿ.ಆರ್. ರೈ, ಕೃಷ್ಣ ಶೆಟ್ಟಿ ಕುಡುಮಲ್ಲಿಗೆ, ಕೆ.ಕೆ. ಪೂಂಜಾ ಫರಂಗಿಪೇಟೆ ಅವರನ್ನು ಸನ್ಮಾನಿಸಲಾಗುವುದು.
ಯಕ್ಷಾಂಗಣ ಪ್ರಶಸ್ತಿ ಪ್ರದಾನ :

ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಭಾಗವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ. ರಮೇಶಾಚಾರ್ಯ ಅವರಿಗೆ 2021-22 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡುವರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ದೀಪ ಪ್ರಜ್ವಲನೆ ಮಾಡುವರು. ಡಾ. ಹರಿಕೃಷ್ಣ ಪುನರೂರು, ಸೌಂದರ್ಯ ರಮೇಶ್, ಬಾಬು ಶೆಟ್ಟಿ ಪೆರಾರ, ಅಗರಿ ರಾಘವೇಂದ್ರ ರಾವ್, ವಿಜಯ ಕುಮಾರ್ ಶೆಟ್ಟಿ, ಡಾ. ಸುಭಾಷಿಣಿ ಶ್ರೀವತ್ಸ, ಕಡಮಜಲು ಸುಭಾಷ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.


ಯಕ್ಷಾಂಗಣ ದಶಮಾನೋತ್ಸವ ಅಂಗವಾಗಿ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಗಣ್ಯರು ಅತಿಥಿಗಳಾಗಿ ಸಭಾ ಕಲಾಪಗಳನ್ನು ನಡೆಸಿಕೊಡುವುದರೊಂದಿಗೆ ಕರಾವಳಿ ಜಿಲ್ಲೆಗಳ 70 ಕ್ಕೂ ಮಿಕ್ಕಿದ ಪ್ರಸಿದ್ಧ ಕಲಾವಿದರು ತಾಳಮದ್ದಳೆ ಸರಣಿಯ ಹಿಮ್ಮೇಳ ಮುಮ್ಮೇಳಗಳಲ್ಲಿ ಕಾಣಿಸಿಕೊಳ್ಳುವರು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ  ಭಾಸ್ಕರ ರೈ ಕುಕ್ಕುವಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ಬೆಟ್ಟಂಪಾಡಿ ಸುಂದರ ಶೆಟ್ಟಿ (ಉಪಾಧ್ಯಕ್ಷ), ತೋನ್ಸೆ ಪುಷ್ಕಳ ಕುಮಾರ್ (ಪ್ರಧಾನ ಕಾರ್ಯದರ್ಶಿ), ಕೆ. ರವೀಂದ್ರ ರೈ ಕಲ್ಲಿಮಾರು  (ಸಂಚಾಲಕರು), ಕೆ. ಲಕ್ಷ್ಮೀನಾರಾಯಣ ರೈ ಹರೇಕಳ (ಜತೆ ಕಾರ್ಯದರ್ಶಿ), ನಿವೇದಿತಾ ಎನ್. ಶೆಟ್ಟಿ (ಮಹಿಳಾ ಪ್ರತಿನಿಧಿ) ಯವರು ಉಪಸ್ಥಿತರಿದ್ದರು. 

ಯಕ್ಷಗಾನದ ಯುವ ಭಾಗವತ ನೇಣು ಬಿಗಿದು ಆತ್ಮಹತ್ಯೆ 

0

ತೆಂಕುತಿಟ್ಟು ಯಕ್ಷಗಾನದ ಯುವ ಭಾಗವತರೋರ್ವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಂಕುತಿಟ್ಟಿನ ಭಾಗವತಿಕೆಯಲ್ಲಿ ತನ್ನದೇ ಛಾಪನ್ನು ಮೂಡಿಸಿ ಹೆಸರು ಮಾಡುತ್ತಿದ್ದ ಯುವ ಭಾಗವತರಾದ ಕೀರ್ತನ್ ಶೆಟ್ಟಿ ವಗೆನಾಡು ಅವರು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಕಲಾವಿದರು. 

ಭಾಗವತರು ಇಂದು ಮುಡಿಪು ಸಮೀಪ ಮೂಳೂರು ಬಳಿ ತಮ್ಮ ಬಾಡಿಗೆ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರು ಬಪ್ಪನಾಡು ಹಾಗೂ ಇನ್ನಿತರ ಮೇಳಗಳಲ್ಲಿ ಭಾಗವತರಾಗಿ ಕಲಾಸೇವೆ ಮಾಡಿದ್ದರು.

ಇತ್ತೀಚಿಗೆ ಚಿಕ್ಕಮೇಳಗಳಲ್ಲಿಯೂ ಭಾಗವತರಾಗಿ ತಿರುಗಾಟ ನಡೆಸಿದ್ದರು. ಕೆಲವೊಂದು ವೈಯುಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಂದ  ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. 

“ಆತ್ಮಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ, ನಿಮ್ಮ ಯಾವುದೇ ಸಮಸ್ಯೆಗಳಿಗೆ ಮಾನಸಿಕ ತಜ್ಞರ ಸಹಾಯ ಪಡೆಯಿರಿ”