Monday, March 16, 2026
Home Blog Page 120

ಅಂಬಿಕಾ ಮಹಾವಿದ್ಯಾಲಯದಲ್ಲಿ ಅನುಪಮ ಪ್ರತಿಭಾ ವೇದಿಕೆ ಕಾರ್ಯಕ್ರಮ – ಪ್ರತಿಯೊಬ್ಬ ವಿದ್ಯಾಥಿಯಲ್ಲೂ ವಿಭಿನ್ನ ಕೌಶಲಗಳಿವೆ: ಗಣೇಶ್ ಪ್ರಸಾದ್

0

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ ಕೌಶಲಗಳನ್ನು ಹೊಂದಿದ್ದು, ಸೂಕ್ತ ವೇದಿಕೆ ಲಭಿಸಿದಾಗ ಪ್ರತಿಭೆಯನ್ನು ಪ್ರದರ್ಶಿಸಬೇಕು. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆಯ ಪ್ರಸರಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ವಿಶೇಷ ಸಾಮರ್ಥ್ಯವೂ ಹೊರಬರಲು ಸಾಧ್ಯವಾಗುತ್ತದೆ. ವಿದ್ಯಾಲಯಗಳಲ್ಲಿ ಲಭಿಸುವ ಅವಕಾಶಗಳ ಸದ್ಬಳಕೆ ಮಾಡಿದಾಗ ಆತ್ಮವಿಶ್ವಾಸ ಮೂಡಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ದೊರಕುತ್ತದೆ ಎಂದು ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ. ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ರೂಪಿಸಿದ ‘ಅನುಪಮ ಪ್ರತಿಭಾ ವೇದಿಕೆ’ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.

ಆಧುನಿಕ ದಿನಮಾನದ ಶೈಕ್ಷಣಿಕ ವ್ಯವಸ್ಥೆ ವಿದ್ಯಾರ್ಥಿಗಳು ಪಠ್ಯ ವಿಷಯಕ್ಕಷ್ಟೇ ಗಮನಹರಿಸುವಂತೆ ರೂಪುಗೊಳ್ಳುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ. ಆದಾಗ್ಯೂ ವಿದ್ಯಾರ್ಥಿಗಳು ಅವಕಾಶ ಸೃಷ್ಟಿಸಿಕೊಂಡು ನೃತ್ಯ, ಹಾಡುಗಾರಿಕೆ, ಕ್ರೀಡೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ನಮ್ಮನ್ನು ನಾವು ಮಾನಸಿಕವಾಗಿ ಸದೃಢವಾಗಿರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಿಗುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ. ವಿವಿಧ ವೇದಿಕೆಗಳು ಹೊಸ ಪ್ರತಿಭೆಗಳನ್ನು ಹೊರತರುವ ಕಾರ್ಯ ನಡೆಸುತ್ತವೆ. ನಾನಾ ಬಗೆಯ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲೂ ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ ಎಂದರು.


ವಿದ್ಯಾರ್ಥಿಗಳಾದ ಶೇಖರ್, ವಿಕ್ರಂ, ವೈಭವ್, ಗುರುಪ್ರಸಾದ್ ಕವನ ವಾಚನ, ಭಾಷಣ ಹಾಗೂ ಗಾಯನದಲ್ಲಿ ತಮ್ಮ ಪ್ರತಿಭೆ ವ್ಯಕ್ತಪಡಿಸಿದರೆ ವಿದ್ಯಾರ್ಥಿನಿಯರಾದ ಶ್ರಾವ್ಯಶ್ರೀ, ನಯನಾ, ವರೇಣ್ಯ, ಲೇಖಾ, ಚೈತನ್ಯ ಹಾಗೂ ಅಪೂರ್ವ ಹಾಡು, ಚರ್ಚೆ ಮತ್ತು ಮೆಹೆಂದಿ ವಿನ್ಯಾಸ ರಚಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.


ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ಪಂಚಮಿ ಬಾಕಿಲಪದವು ಸ್ವಾಗತಿಸಿ, ಜಯಶ್ರೀ ವಂದಿಸಿದರು. ಪ್ರತಿಭಾ ವೇದಿಕೆ ಕಾರ್ಯದರ್ಶಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಮೇಘಾ ಡಿ. ನಿರೂಪಿಸಿದರು.

 ಧನುಷ್ ರಾಮ್ ಚೆಸ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾರವಾರ,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರಕನ್ನಡ ಇವರ ಜಂಟಿ ಆಶ್ರಯದಲ್ಲಿ ಸೈಂಟ್ ಮೈಕೆಲ್ ಕಾನ್ವೆಂಟ್ ಕಾರವಾರ

ಇಲ್ಲಿ ನವೆಂಬರ್ 24 ರಿಂದ 26 ವರೆಗೆ ನಡೆದ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಕೆ.ಧನುಷ್ ರಾಮ್, ಕೆ.ಪ್ರಣೀಲ್ ರೈ ಹಾಗೂ 9ನೇ ತರಗತಿಯ ಸುಶ್ಮಿತಾ ರಾವ್ ಭಾಗವಹಿಸಿದ್ದು, 

ಇವರ ಪೈಕಿ ಧನುಷ್ ರಾಮ್ (ಶ್ರೀ ದಿನೇಶ್ ಪ್ರಸನ್ನ ಹಾಗೂ ಶ್ರೀಮತಿ ಉಮಾ.ಡಿ. ಪ್ರಸನ್ನ ದಂಪತಿ ಪುತ್ರ) ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ರಾಷ್ಟ್ರಮಟ್ಟದ ಚೆಸ್  ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಾರ್ಷಿಕ ಕ್ರೀಡಾಕೂಟ – ವಿವೇಕ ಕ್ರೀಡಾ ಸಂಭ್ರಮ-2022

0

ದಿನಾಂಕ 26-11-2022ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇದರ 2022-23ರ ಸಾಲಿನ ವಾರ್ಷಿಕ ಕ್ರೀಡಾಕೂಟ -“ವಿವೇಕ ಕ್ರೀಡಾ ಸಂಭ್ರಮ-2022”ದ ಉದ್ಘಾಟನಾ ಕಾರ್ಯಕ್ರಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್‌ .ಎಂ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಆರೋಗ್ಯ, ಸಂಸ್ಕೃತಿ  ಸಂಸ್ಕಾರವನ್ನು ಪಡೆಯಲು ಆರೋಗ್ಯವೇ ಮುಖ್ಯ ಕ್ರೀಡೆ ಗುಣ, ಆತ್ಮ ವಿಶ್ವಾಸ, ಬದುಕಿಗೆ ಸ್ಪೂರ್ತಿ ನೀಡಬಲ್ಲದ್ದು ಮತ್ತು ಸಾಧನೆಯ ಉತ್ತುಂಗಕ್ಕೆ ಕ್ರೀಡೆಯ ಒಂದು ಪ್ರಮುಖ ಹಂತ ಎಂದರು.

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್  ಟೆಕ್ನಾಲಜಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವಾಸ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಪರಿಪೂರ್ಣ ಹಾಗೂ ದೇಶಭಕ್ತಿ, ಸದೃಢ ಯುವ ಜನರಾಗಿ ರೂಪಿಸುವಲ್ಲಿ ಕ್ರೀಡೆಯ ಮಹತ್ವವನ್ನು  ತಿಳಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಕ್ರೀಡಾ ವಿಭಾಗದಲ್ಲಿ ಸಂಸ್ಥೆಯ  ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿದರು. ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ತೀರಾ ಅನಿವಾರ್ಯವಾಗಿ ಬೇಕಾಗಿರುವ 400ಮೀ ನ  ಟ್ರಾಕ್ ನ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ತಮ್ಮ ಸಹಕಾರದ ಭರವಸೆಯನ್ನು ನೀಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಧ್ವಜ ವಂದನೆ ಸ್ವೀಕರಿಸಿದ ಪುತ್ತೂರಿನ ಖ್ಯಾತ ಉದ್ಯಮಿ ಶ್ರೀ ಶಿವಪ್ರಸಾದ್ ರೈಯವರು ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸತೀಶ್ ಬಪ್ಪಳಿಗೆ ಇವರು ಧ್ವಜಾರೋಹಣಗೈದು ಮಾತನಾಡಿ, ಪೋಷಕರಾಗಿ ಶಾಲಾ ಹಿರಿಮೆ-ಗರಿಮೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಸಂಸ್ಥೆಗೆ ಮತ್ತು  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾಗೇಶ್ ಪ್ರಭು ಇವರು ಕ್ರೀಡಾ ಜ್ಯೋತಿ ಬೆಳಗುವುದರ ಮೊಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾ ಕಾರ್ಯದರ್ಶಿ ಕು.ಯುಕ್ತಶ್ರೀ ಕ್ರೀಡಾ ಪ್ರತಿಜ್ಞಾ ವಿಧಿ ನೆರವೇರಿಸಿದಳು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರುಗಳು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಶೆಣೈ, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಭಾಸ್ಕರ್ ಗೌಡ ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕಿರಾದ ವಾಣಿಶ್ರೀ.ಎನ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ರ‍್ಯಾಪಿಡೋ ರೈಡ್ ಬೈಕ್ ಟ್ಯಾಕ್ಸಿ ಚಾಲಕ, ಸಹಚರನಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ –  ರ‍್ಯಾಪಿಡೋ ಬೈಕ್ ಸವಾರ ಶಹಾಬುದ್ದೀನ್ ಮತ್ತು ಆತನ ಸ್ನೇಹಿತ ಅಖ್ತರ್​ ಬಂಧನ 

0

ಬೈಕ್ ಟ್ಯಾಕ್ಸಿ ಚಾಲಕ, ಸಹಚರನಿಂದ ಕೇರಳ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ದೂರಿನ ಆಧಾರದ ಮೇಲೆ ಬೆಂಗಳೂರಿನ ಇಬ್ಬರು ಆರೋಪಿಗಳು ಮತ್ತು ಪಶ್ಚಿಮ ಬಂಗಾಳದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರು: ಕೇರಳ ಮೂಲದ 22 ವರ್ಷದ ಯುವತಿಯೊಬ್ಬಳ ಮೇಲೆ ಬೈಕ್ ಟ್ಯಾಕ್ಸಿ ಚಾಲಕ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಯುವತಿ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. 

22 ವರ್ಷದ ಅತ್ಯಾಚಾರ ಸಂತ್ರಸ್ತೆ ತನ್ನ ದೂರಿನಲ್ಲಿ, ಮಧ್ಯರಾತ್ರಿಯ ಸುಮಾರಿಗೆ ಇನ್ನೊಬ್ಬ ಸ್ನೇಹಿತೆಯನ್ನು ಭೇಟಿ ಮಾಡಲು ಬೈಕ್ ಟ್ಯಾಕ್ಸಿ ಬುಕ್ ಮಾಡುವ ಮೊದಲು ಶುಕ್ರವಾರ ತನ್ನ ಸ್ನೇಹಿತೆಯ ಮನೆಯಲ್ಲಿದ್ದಳು. ಪೊಲೀಸರ ಪ್ರಕಾರ, ರೈಡ್-ಶೇರಿಂಗ್ ಅಪ್ಲಿಕೇಶನ್ ‘ರಾಪಿಡೋ’ ನಲ್ಲಿ ಬೈಕ್ ಬುಕ್ ಮಾಡುವಾಗ ಮಹಿಳೆ ಪಾನಮತ್ತಳಾಗಿದ್ದಳು.

ಚಾಲಕ ಶಹಾಬುದ್ದೀನ್ ಮಹಿಳೆಯನ್ನು ಆಕೆಯ ಗಮ್ಯಸ್ಥಾನಕ್ಕೆ ಕರೆದೊಯ್ದರೂ ಆಕೆ ಬೈಕ್ ನಿಂದ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಪರಿಸ್ಥಿತಿಯ ಲಾಭ ಪಡೆದ ಚಾಲಕ ಶಹಾಬುದ್ದೀನ್ ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದನು, ಅಲ್ಲಿ ಈಗಾಗಲೇ ಇನ್ನೊಬ್ಬ ಮಹಿಳೆ ಇದ್ದಳು.

ಸ್ವಲ್ಪ ಸಮಯದ ನಂತರ, ಚಾಲಕನ ಸಹವರ್ತಿ ಅಖ್ತರ್ ಕೂಡ ಇಬ್ಬರೊಂದಿಗೆ ಸೇರಿಕೊಂಡರು. ಅತ್ಯಾಚಾರ ಸಂತ್ರಸ್ತೆಯ ದೂರಿನ ಪ್ರಕಾರ, ಇಬ್ಬರೂ ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮರುದಿನ, ಮಹಿಳೆಗೆ ಪ್ರಜ್ಞೆ ಬಂದಾಗ, ಅವಳು ಭಯಾನಕ ನೋವಿನಿಂದ ಬಳಲುತ್ತಿದ್ದಳು.

ಆಕೆ ಆರೋಪಿಯ ಮನೆಯಿಂದ ಹೊರಬಂದು ಸೇಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿದಳು, ಆಕೆಯ ಗುದದ್ವಾರದಿಂದ ರಕ್ತಸ್ರಾವವಾಗುತ್ತಿತ್ತು. ಅಲ್ಲಿ ವೈದ್ಯರು ಅವಳನ್ನು ಪರೀಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ದೂರಿನ ಆಧಾರದ ಮೇಲೆ ಘಟನೆ ಬಗ್ಗೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು ರ‍್ಯಾಪಿಡೋ ಬೈಕ್ ಸವಾರ ಶಹಾಬುದ್ದೀನ್ ಮತ್ತು ಆತನ ಸ್ನೇಹಿತ ಅಖ್ತರ್​ ಹಾಗೂ ಅತ್ಯಾಚಾರ ನಡೆದರೂ ಏನೂ ಮಾಡದೆ ರೂಮಿನಲ್ಲಿದ್ದ ಯುವತಿಯನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

17 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ –  ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಕಾರಣಕ್ಕೆ ದುಡುಕಿನ ನಿರ್ಧಾರ ಕೈಗೊಂಡ ಬಾಲಕಿ

0

ಪ್ರಥಮ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಕಾರಣಕ್ಕೆ 17 ವರ್ಷದ ಬಾಲಕಿಯೊಬ್ಬಳು ನ.28ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರಿನ ತನ್ನ ನಿವಾಸದಲ್ಲಿ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮೃತಳನ್ನು ಪೆರ್ಡೂರಿನ ನಿವಾಸಿ ತೃಪ್ತಿ (17) ಎಂದು ಗುರುತಿಸಲಾಗಿದೆ. ಹೆಬ್ರಿಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಳು.

ಪೊಲೀಸರ ಪ್ರಕಾರ, ತೃಪ್ತಿ ತನ್ನ ಅಧ್ಯಯನದಲ್ಲಿ ನಿಪುಣೆಯಾಗಿದ್ದಳು. ಆದರೆ ಇತ್ತೀಚಿನ ಪರೀಕ್ಷೆಯಲ್ಲಿ ಅವಳು ಕಡಿಮೆ ಅಂಕಗಳನ್ನು ಗಳಿಸಿದ್ದಳು. ಭಾನುವಾರ ಬೆಳಗ್ಗೆ ವಿಶೇಷ ತರಗತಿಗೆ ಹೋಗಿ ಮನೆಗೆ ಮರಳಿದ್ದಳು.

ಬಳಿಕ ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಪಾಲಕರು ತೃಪ್ತಿ ತನ್ನ ಕೊಠಡಿಯ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದನ್ನು ಗಮನಿಸಿದ್ದಾರೆ.

ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ಸಮಸ್ಯೆಗಳಿಗೆ ಒಳಗಾಗಿದ್ದರೆ ದಯವಿಟ್ಟು ಮಾನಸಿಕ ತಜ್ಞರ ಸಹಾಯವನ್ನು ಪಡೆದುಕೊಳ್ಳಿ

2 ತಿಂಗಳ ಹಸುಳೆ ತನ್ನ ಅಜ್ಜ ಹಾಡುತ್ತಿರುವಾಗ ತಾನೂ ಜೊತೆಗೆ ಅನುಕರಿಸುತ್ತಿರುವ ವೀಡಿಯೊ ವೈರಲ್ 

0

ಎರಡು ತಿಂಗಳ ಗಂಡು ಮಗು ತನ್ನ ಅಜ್ಜನೊಂದಿಗೆ ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್‌ನ Instagram ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ ಮತ್ತು ಸಾವಿರಾರು ವೀಕ್ಷಣೆಗಳನ್ನು ಹೊಂದಿದೆ.

ಎರಡು ತಿಂಗಳ ಗಂಡು ಮಗು ತನ್ನ ಅಜ್ಜನೊಂದಿಗೆ ಹಾಡುತ್ತಿರುವ ವೀಡಿಯೊವನ್ನು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದು ನಾವು ಪ್ರತಿನಿತ್ಯ ಕಾಣುತ್ತಿರುವ ಸಂಗತಿಯಲ್ಲವಾದುದರಿಂದ ಇಲ್ಲಿ ಹಂಚಿಕೊಳ್ಳಲಾಗಿದೆ.

ಅಜ್ಜ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಹಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗುವೂ ಅಜ್ಜನನ್ನು ಅನುಕರಿಸಲು ಪ್ರಯತ್ನಿಸಿದನು ಮತ್ತು ಅವನೊಂದಿಗೆ ಹಾಡಿದನು.

ವೀಡಿಯೊ ಸಂಪೂರ್ಣವಾಗಿ ಆಕರ್ಷಕವಾಗಿದೆ. ಹಾಗೆಂದು ಇಂತಹಾ ಮಕ್ಕಳು ಹಾಡುವ ವೀಡಿಯೊಗಳು ಭಾರತದಲ್ಲಿ ಹಿಂದೆಯೂ ಹಲವಾರು ಬಾರಿ ಸಂಭವಿಸಿದೆ.

“ಅಜ್ಜನಿಗೆ ಸುಂದರವಾದ ಧ್ವನಿ ಇದೆ ಮತ್ತು ಮಗು ಅವನೊಂದಿಗೆ ಹಾಡಲು ಪ್ರಯತ್ನಿಸುತ್ತಿದೆ. ಆ ಮಗುವಿಗೆ ಎಷ್ಟು ದೊಡ್ಡ ಸ್ಮರಣೆ ಇದೆ! ” ಎಂದು ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

ಯುವ ಅನುಭವೀ ಕಲಾವಿದ, ಹಾಸ್ಯಗಾರ – ಶ್ರೀ ನಾಗೇಂದ್ರ ಮೂರೂರು 

ಶ್ರೀ ನಾಗೇಂದ್ರ ಮೂರೂರು ಅವರು ಬಡಗುತಿಟ್ಟಿನ ಯುವ, ಅನುಭವೀ ಕಲಾವಿದರು. ಪ್ರಸ್ತುತ ಹಾಸ್ಯಗಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಾಸ್ಯಗಾರನಾದರೂ ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಸಾಮರ್ಥ್ಯ ಉಳ್ಳವರು. ಆದುದರಿಂದ ತಂಡಕ್ಕೆ ಅನಿವಾರ್ಯ ಸಂದರ್ಭಗಳಲ್ಲಿ ಇವರು ಆಪದ್ಬಾಂಧವರಾಗಿ ಒದಗಬಲ್ಲವರು. ಇವರಲ್ಲಿರುವ ಹಾಸ್ಯಪ್ರಜ್ಞೆಯನ್ನು ಗುರುತಿಸಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಲು ಪ್ರೇರಣೆ ನೀಡಿ ಅವಕಾಶ ನೀಡಿದವರು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು.

‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ’ ತಂಡದ ಸದಸ್ಯನಾಗಿ ವೇಷಗಳನ್ನು ಮಾಡುತ್ತಿದ್ದಾಗ ಪ್ರೇಕ್ಷಕರು ಇವರಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದರು. ಗುಂಡಬಾಳಾ ಮೇಳ,  ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ’ ಕುಂಭಾಶಿ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿಯವರ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಶ್ರೀ ಬಳ್ಕೂರು ಕೃಷ್ಣಯಾಜಿ ಅವರ  ಯಾಜಿ ಯಕ್ಷಮಿತ್ರ ಮಂಡಳಿ, ಇಟಗಿ ಶ್ರೀ ಮಹಾಬಲೇಶ್ವರ ಭಟ್ ಅವರ ಕಲಾಭಾಸ್ಕರ ಮೊದಲಾದ ತಂಡಗಳಲ್ಲಿ ವ್ಯವಸಾಯ ಮಾಡಿದ ಅನುಭವಿ ಇವರು. ಅನಿವಾರ್ಯ ಸಂದರ್ಭಗಳಲ್ಲಿ ಸಾಲಿಗ್ರಾಮ ಮೇಳದಲ್ಲಿ ವೇಷ ಮಾಡಿದ್ದೂ ಇದೆ. ಯಕ್ಷಗಾನ ಕ್ಷೇತ್ರದಲ್ಲಿ ಇವರು  ಸುಮಾರು ಮೂವತ್ತು ವರ್ಷಗಳ ಅನುಭವಿ. 

ಬಡಗುತಿಟ್ಟಿನ ಅನುಭವೀ ಹಾಸ್ಯಗಾರರಾದ  ಶ್ರೀ ನಾಗೇಂದ್ರ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳವಳ್ಳಿ ಗ್ರಾಮದ ಮೂರೂರು. 1977ನೇ ಇಸವಿ ಸೆವ್ಟೆಂಬರ್ 30ರಂದು ಶ್ರೀ  ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳ ಪುತ್ರನಾಗಿ ಜನನ. ಕೃಷಿ ಕುಟುಂಬ ಇವರದ್ದು. ಮನೆಯ ಸದಸ್ಯರೆಲ್ಲರೂ ಯಕ್ಷಗಾನ ಕಲಾಸಕ್ತರು. ವಿದ್ಯಾರ್ಜನೆ ಎಸ್. ಎಸ್. ಎಲ್. ಸಿ ವರೆಗೆ. 7ನೇ ತರಗತಿ ವರೆಗೆ ಅಳವಳ್ಳಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕವಲಕ್ಕಿ ಜೂನಿಯರ್ ಕಾಲೇಜಿನಲ್ಲಿ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು.

ಶಾಲಾ ವಿದ್ಯಾರ್ಥಿಯಾಗಿದ್ದಾಗ ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಮೂರೂರು ದೇವರು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಂ.ಎ ನಾಯ್ಕ್, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕುಂಜಾಲು ರಾಮಕೃಷ್ಣ, ಬೆಳಿಯೂರು ಕೃಷ್ಣಮೂರ್ತಿ ಮೊದಲಾದ ಖ್ಯಾತ ಕಲಾವಿದರ ವೇಷಗಳನ್ನು ನೋಡುವ ಅವಕಾಶವಾಗಿತ್ತು.  ಶ್ರೀ ನಾಗೇಂದ್ರ ಅವರಿಗೆ ಬೆಳಿಯೂರು ಕೃಷ್ಣಮೂರ್ತಿಯವರ ಹಾಸ್ಯ ಎಂದರೆ ಬಲು ಇಷ್ಟ. ಇವರ ವೇಷಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯು ಚಿಗುರೊಡೆದಿತ್ತು.  ಶ್ರೀ ನಾಗೇಂದ್ರ ಮೂರೂರು ಅವರಿಗೆ ನಾಟಕದಲ್ಲೂ ಆಸಕ್ತಿ ಇತ್ತು.

ಯಕ್ಷಗಾನ ಕಲಾವಿದನಾಗುವುದಕ್ಕಿಂತ ಮೊದಲೇ ಇವರು ನಾಟಕದಲ್ಲಿ ವೇಷ ಮಾಡಿದ್ದರು. ಶ್ರೇಷ್ಠ ಕಲಾವಿದರಾದ ಕೆಕ್ಕಾರು ಜಿ.ಡಿ ಭಟ್ಟರ ಜತೆ ನಾಟಕದಲ್ಲಿ ಪಾತ್ರ ಮಾಡಿದ್ದರು. ಕೆಕ್ಕಾರು ಜಿ.ಡಿ ಭಟ್ಟರು ಕಲಾವಿದರೂ ಚಿತ್ರ ಕಲಾಕಾರರೂ ಆಗಿದ್ದರು. ಮಣ್ಣಿನಿಂದ ವಿವಿಧ ಮೂರ್ತಿಗಳನ್ನು ರಚಿಸುವ ಕಲೆಯೂ ಅವರಿಗೆ ತಿಳಿದಿತ್ತು.  ಶ್ರೀ ನಾಗೇಂದ್ರ ಮೂರೂರು ಅವರು ನಾಟ್ಯ ಕಲಿತು ಯಕ್ಷಗಾನ ಕಲಾವಿದನಾಗಲು ನಿರ್ಧರಿಸಿದ್ದರು. ಮನೆಯಲ್ಲಿ ಬಡತನವಿತ್ತು. ಹಣ ಸಂಪಾದನೆ ಅಷ್ಟು ಸುಲಭವಿರಲಿಲ್ಲ. ಅಡುಗೆ ಕೆಲಸಕ್ಕೆ ತೆರಳಿ ಹಣ ಸಂಪಾದಿಸಿದ್ದರು.

ಮೂರೂರು ದೇವರು ಹೆಗಡೆ ಸ್ಮಾರಕ ಪ್ರತಿಷ್ಠಾನ ಸಂಸ್ಥೆಯಡಿ ಮೂರೂರು ಸುಬ್ರಹ್ಮಣ್ಯ ಮತ್ತು ಸರ್ವೇಶ್ವರ ಮೂರೂರು ಅವರಿಂದ ನಾಟ್ಯ ಅಭ್ಯಾಸ. ಮೂರೂರಿನಲ್ಲಿ ನಡೆದ ಪ್ರದರ್ಶನ, ಕಂಸ ವಧೆ ಪ್ರಸಂಗದಲ್ಲಿ ಕಂಸನಾಗಿ ರಂಗಪ್ರವೇಶ. ಬಳಿಕ ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ದಕ್ಷ, ಗಯ ಚರಿತ್ರೆ ಪ್ರಸಂಗದಲ್ಲಿ ಗಯ ಮೊದಲಾದ ಪಾತ್ರಗಳನ್ನು ಮಾಡಿದ್ದರು. 

ಶ್ರೀ ನಾಗೇಂದ್ರ ಮೂರೂರು ಅವರು ಮೊದಲು ವ್ಯವಸಾಯ ಮಾಡಿದ್ದು ಗುಂಡಬಾಳಾ ಮೇಳದಲ್ಲಿ. ಸದ್ರಿ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಬಳಿಕ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ನೇತೃತ್ವದ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ ತಂಡದಲ್ಲಿ  ನಿರಂತರ 14 ವರ್ಷ ವ್ಯವಸಾಯ. ಈ ತಂಡದಲ್ಲಿ ಖ್ಯಾತ ಕಲಾವಿದರ ಒಡನಾಟವೂ ಸಿಕ್ಕಿತ್ತು. ಮೊದಲು ಕಟ್ಟು ವೇಷ, ಒಡ್ಡೋಲಗ ವೇಷಗಳನ್ನು ಮಾಡುತ್ತಾ ಸಾಗಿದ್ದರು. ಬಳಿಕ ಕೊಂಡದಕುಳಿಯವರು ಕಾರ್ತವೀರ್ಯ, ಕೀಚಕ, ಈಶ್ವರನ ಪಾತ್ರಗಳನ್ನು ನಿರ್ವಹಿಸಿದಾಗ ಅವರ ಜತೆ ರಾವಣ, ವಲಲ, ಮಹೋಗ್ರ ಪಾತ್ರಗಳನ್ನು ಮಾಡಲು ಅವಕಾಶವು ಸಿಕ್ಕಿತ್ತು.

ಇವರಲ್ಲಿರುವ ಹಾಸ್ಯ ಪ್ರಜ್ಞೆಯನ್ನು ಗುರುತಿಸಿದ ಕೊಂಡದಕುಳಿಯವರು ಹಾಸ್ಯ ಪಾತ್ರಗಳನ್ನು ಮಾಡಲು ಸಲಹೆ ನೀಡಿ ಪ್ರೋತ್ಸಾಹಿಸಿದ್ದರು. ಈ ತಂಡದ ಹಾಸ್ಯಗಾರನಾಗಿ ಮಂಥರೆ, ನಕ್ಷತ್ರಿಕ, ಚಿತ್ರಗುಪ್ತ, ಚಿತ್ರಾಕ್ಷಿ ಕಲ್ಯಾಣದ ಪ್ರಸಂಗದ ಅಜ್ಜಿ, ಚಂದ್ರಾವಳೀ ವಿಲಾಸ ಪ್ರಸಂಗದ ಗೋಪಾಲಕರು, ಚಂದಗೋಪ, ಅತ್ತೆ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಾಗಿತ್ತು. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಬೆಳಿಯೂರು ಸಂಜಯಕುಮಾರರ ಬಣ್ಣಗಾರಿಕೆಯಿಂದ ಪ್ರೇರಿತರಾಗಿ ನಾಗೇಂದ್ರ ಮೂರೂರು ಅವರು ನೇಪಥ್ಯದಲ್ಲಿ ಸಿದ್ಧರಾಗುತ್ತಾರೆ. ಕೊಂಡದಕುಳಿ ಅವರ ನಿರ್ದೇಶನದಲ್ಲಿ ಸ್ತ್ರೀ ಪಾತ್ರಗಳನ್ನೂ ನಿರ್ವಹಿಸಿದ್ದಾರೆ.

“ನಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಅವರೇ ಕಾರಣರು. ಬಣ್ಣ ಹಾಕಲು, ಶೃತಿಬದ್ಧವಾಗಿ ಮಾತನಾಡಲು, ವೇಷಭೂಷಣಗಳನ್ನು ಧರಿಸಲು, ಸಮಯಪಾಲನೆ ಮತ್ತು ಶಿಸ್ತನ್ನು ಅವರಿಂದಲೇ ಕಲಿತೆ. ಮನೆಯ ಸದಸ್ಯನಂತೆ ನನ್ನನ್ನು ನೋಡಿಕೊಂಡಿದ್ದಾರೆ” ಎಂದು ಹೇಳುವ ಮೂಲಕ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರನ್ನು  ಶ್ರೀ ನಾಗೇಂದ್ರ ಮೂರೂರು ಅವರು ಗೌರವಿಸುತ್ತಾರೆ. 

ಶ್ರೀ ನಾಗೇಂದ್ರ ಮೂರೂರು ಅವರು ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಯಾಜಿ ಯಕ್ಷಮಿತ್ರ ಮಂಡಳಿ ತಂಡಗಳಲ್ಲೂ ವ್ಯವಸಾಯ ಮಾಡಿರುತ್ತಾರೆ. ಇಟಗಿ ಶ್ರೀ ಮಹಾಬಲೇಶ್ವರ ಭಟ್ ಅವರ ‘ಕಲಾಭಾಸ್ಕರ’ ತಂಡದಲ್ಲಿ ಆರಂಭದಿಂದ ಇಂದಿನ ತನಕವೂ ಎಲ್ಲಾ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. (ಹಾಸ್ಯ ಪಾತ್ರಗಳಲ್ಲಿ) ಶಿರಸಿ, ಸಿದ್ಧಾಪುರ ಪ್ರದೇಶದ ಪ್ರೇಕ್ಷಕರು ಇವರನ್ನು ಗುರುತಿಸಲು ಇದರಿಂದ ಅನುಕೂಲವಾಗಿತ್ತು.

ಸತ್ಯ ಹರಿಶ್ಚಂದ್ರ ಪ್ರಸಂಗದಲ್ಲಿ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಹರಿಶ್ಚಂದ್ರನಾಗಿಯೂ ತೋಟಿಮನೆ ಗಣಪತಿ ಹೆಗಡೆಯವರು ವಿಶ್ವಾಮಿತ್ರನಾಗಿಯೂ ಅಭಿನಯಿಸಿದಾಗ ಅವರ ಜತೆಯಲ್ಲಿ ನಕ್ಷತ್ರಿಕನಾಗಿ ಅಭಿನಯಿಸಲು ಅವಕಾಶವಾಗಿತ್ತು. ‘ದುಷ್ಯಂತ-ಶಕುಂತಲಾ’ ಪ್ರಸಂಗದ ತುಕ್ರ ಅಂಬಿಗನ ಹೆಂಡತಿ ಚಂದ್ರಿ ಎಂಬ ಪಾತ್ರದಲ್ಲಿ ನಾಗೇಂದ್ರ ಮೂರೂರು ಅವರ ಅಭಿನಯವನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು. ಮಲ್ಪೆ ಶ್ರೀ ವಾಸುದೇವ ಸಾಮಗ, ಚಪ್ಪರಮನೆ ಶ್ರೀಧರ ಹೆಗಡೆ, ಶ್ರೀಧರ ಭಟ್ ಕಾಸರಕೋಡ್ ಇವರುಗಳು ತುಕ್ರ ಅಂಬಿಗನ ಪಾತ್ರ ಮಾಡಿದಾಗ ಅವರ ಜತೆಯಲ್ಲಿ ಚಂದ್ರಿಯಾಗಿ ಅಭಿನಯಿಸಿದ್ದರು.

ಈ ಜತೆಗಾರಿಕೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸೀತಾ ವಿಯೋಗ ಪ್ರಸಂಗದ ವಾಲ್ಮೀಕಿ, ಲವಕುಶರ ಕಾಳಗ ಪ್ರಸಂಗದ ಮಾಣಿ, ದೂತ, ಕೀಚಕ ವಧೆ ಪ್ರಸಂಗದ ವಿಜಯ,ಪಟ್ಟಾಭಿಷೇಕ ಪ್ರಸಂಗದ ಮಂಥರೆ, ಮೊದಲಾದ ಪಾತ್ರಗಳೂ ಇವರಿಗೆ ಹೆಸರನ್ನು ತಂದುಕೊಟ್ಟವು. ವಿದೇಶ ಯಾತ್ರೆಯನ್ನು ಕೈಗೊಂಡು ದುಬಾಯಿ, ಶಾರ್ಜಾ, ಬಹರೈನ್, ಸಿಂಗಾಪುರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ದೆಹಲಿ, ಉಜ್ಜಯಿನಿ, ಕೇರಳ, ಹೈದರಾಬಾದ್, ಕೋಲ್ಕೊತಾ, ಮುಂಬಯಿ ಮೊದಲಾದ ನಗರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ರಂಜಿಸುವ ಅವಕಾಶವೂ ಇವರಿಗೆ ಸಿಕ್ಕಿದೆ. 

ಶ್ರೀ ನಾಗೇಂದ್ರ ಮೂರೂರು ಅವರು ಪ್ರಸ್ತುತ ಯಾವುದೇ ತಂಡದ ಖಾಯಂ ಸದಸ್ಯನಲ್ಲ. ಕರೆದಲ್ಲಿ ತೆರಳಿ ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶ್ರೀಯುತರ ಪತ್ನಿ ಶ್ರೀಮತಿ ಜಾಹ್ನವಿ. ಇವರು ಗೃಹಣಿ.  ಶ್ರೀ ನಾಗೇಂದ್ರ ಮೂರೂರು ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕಗಳು. 

ಶ್ರೀ ನಾಗೇಂದ್ರ ಮೂರೂರು. ಮೊಬೈಲ್ : 9480056665

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ ಮೊಬೈಲ್: 9164487083

ಮತ್ತೊಂದು ಅಫ್ತಾಬ್ ಮಾದರಿಯ ಪ್ರಕರಣ, ದೆಹಲಿಯಲ್ಲಿ ಗಂಡನನ್ನು ಕೊಂದ ಪತ್ನಿ ಮಗ – ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇರಿಸಿ ಕಸದೊಂದಿಗೆ ವಿಲೇವಾರಿ ಮಾಡಿದ ತಾಯಿ, ಮಗ ಬಂಧನ

0

ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ವಾಕರ್ ಮಾದರಿಯ ಪ್ರಕರಣ; ವ್ಯಕ್ತಿಯನ್ನು ಬರ್ಬರವಾಗಿ ಕೊಂದು, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಮಹಿಳೆ ಮತ್ತು ಆಕೆಯ ಮಗನನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ತಾಯಿ-ಮಗ ವ್ಯಕ್ತಿಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇರಿಸಿದರು ಮತ್ತು ಸುಮಾರು ಆರು ತಿಂಗಳ ಕಾಲ ಹತ್ತಿರದ ಕಸ ಎಸೆಯುವ ಮೈದಾನದಲ್ಲಿ ತುಂಡುಗಳನ್ನು ವಿಲೇವಾರಿ ಮಾಡಿದರು. ಕ್ರೂರ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ, ದಿಲ್ಲಿಯ ಪಾಂಡವನಗರ ಪ್ರದೇಶದಲ್ಲಿ ಅಂತಹುದೇ ಘಟನೆ ವರದಿಯಾಗಿದೆ.

ಆರಂಭಿಕ ವರದಿಗಳ ಪ್ರಕಾರ, ಮಧ್ಯವಯಸ್ಕ ಮಹಿಳೆ ಮತ್ತು ಆಕೆಯ ಮಗನನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಿದೆ. ಆರೋಪಿಗಳನ್ನು ”ಪೂನಂ” ಮತ್ತು ಆಕೆಯ ಮಗ ”ದೀಪಕ್” ಎಂದು ಗುರುತಿಸಲಾಗಿದೆ.

ದೆಹಲಿ ಪೊಲೀಸರ ಅಪರಾಧ ವಿಭಾಗವು ಪಾಂಡವ್ ನಗರದಲ್ಲಿನ ಕಸವನ್ನು ಎಸೆಯುವ ಸ್ಥಳದಲ್ಲಿ ತಾಯಿ ಮತ್ತು ಮಗ ದೇಹದ ಭಾಗಗಳನ್ನು ವಿಲೇವಾರಿ ಮಾಡುತ್ತಿರುವ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದೆ. ಆ ಪ್ರದೇಶದಿಂದ ಪಡೆದ ಆಘಾತಕಾರಿ ದೃಶ್ಯಾವಳಿಗಳು ದೀಪಕ್ ದೇಹದ ತುಂಡುಗಳನ್ನು ಎಸೆಯಲು ತಡರಾತ್ರಿಯಲ್ಲಿ ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ತಾಯಿ ಪೂನಂ ಅವರನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು.

ಕ್ರೈಂ ಬ್ರಾಂಚ್ ತಂಡವು ಮೊದಲು ಜೂನ್‌ನಲ್ಲಿ ಪಾಂಡವ್ ನಗರದಲ್ಲಿ ದೇಹದ ಭಾಗಗಳನ್ನು ಪತ್ತೆ ಮಾಡಿತ್ತು, ಆದರೆ ನಂತರ ಅವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಅವುಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಘೋರ ವಿವರಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದ ನಂತರ, ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂಬ ಬಗ್ಗೆಯೂ ತನಿಖೆ ನಡೆಸಲಾಯಿತು. ಆದರೆ, ಅವುಗಳು ಪಾಂಡವನಗರ ಪ್ರದೇಶದ ನಿವಾಸಿ ಅಂಜನ್ ದಾಸ್‌ ದೇಹದ ತುಂಡುಗಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಜೂನ್‌ನಲ್ಲಿ ಇಬ್ಬರು ದಾಸ್‌ನನ್ನು ಕೊಂದಿದ್ದಾರೆ. ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದರು. ನಂತರ ಆರೋಪಿಯು ಆತನ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ಪಾಂಡವ್ ನಗರದ ಘಟನೆಯು ಶ್ರದ್ಧಾ ವಾಕರ್ ಕೊಲೆ ಪ್ರಕರಣಕ್ಕೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ, ಇದರಲ್ಲಿ ಆಕೆಯ ಲೈವ್-ಇನ್ ಪಾಲುದಾರ ಅಫ್ತಾಬ್ ಅಮೀನ್ ಪೂನಾವಾಲಾ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಆತನನ್ನು ಮರೆಮಾಡಲು ಹಲವಾರು ಸ್ಥಳಗಳಲ್ಲಿ ಎಸೆದಿದ್ದ.

ಅಂಬಿಕಾದಲ್ಲಿ ‘ಸೈ-ಫೈ’ ಸ್ಪರ್ಧೆಗೆ ಚಾಲನೆ, “ಸಮಾಲೋಚನಾ ಕೇಂದ್ರ ಉದ್ಘಾಟನೆ ತಂತ್ರಜ್ಞಾನದೊಂದಿಗೆ ಮಾನಸಿಕ ಸದೃಢತೆ ಅವಶ್ಯ”: ತೀರ್ಥರಾಮ ವಳಲಂಬೆ

0


ಪುತ್ತೂರು: ಮನುಷ್ಯ ಸಂಘ ಜೀವಿಯಾಗಿದ್ದು, ವಿಶ್ವದಲ್ಲಿರುವ ಇತರ ಜೀವಿಗಳಿಗಿಂತ ಭಿನ್ನವಾಗಿ ಬದುಕುತ್ತಾನೆ. ಹಲವು ಶತಮಾನಗಳು ಉರುಳಿದರೂ ಪ್ರಾಣಿ – ಪಕ್ಷಿಗಳು ಒಂದು ನಿರ್ದಿಷ್ಟ ಸೂತ್ರದೊಂದಿಗೆ ಮಾತ್ರ ಬದುಕುತ್ತಿವೆ. ಆದರೆ ಮನುಷ್ಯ ಮಾತ್ರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಸಾಧಿಸುತ್ತಾ ಇದೀಗ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಮಾನಸಿಕ ಸದೃಢತೆ ಸಾಧಿಸುವುದು ಅತ್ಯವಶ್ಯಕವಾಗಿದೆ ಎಂದು ಲೇಖಕ ಹಾಗೂ ಚಿಂತಕ ತೀರ್ಥರಾಮ ವಳಲಂಬೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿರುವ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಪಿ.ಯು. ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ‘ಐಕ್ಯೂ’ ಪರೀಕ್ಷಾ ಸ್ಪರ್ಧೆ ಸೈ- ಫೈಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.


ತಂತ್ರಜ್ಞಾನದ ಬಳಕೆಯಿಂದ ಜನತೆ ಆರೋಗ್ಯ, ಸಂಬಂಧ ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆಧುನಿಕತೆಯ ಪ್ರವಾಹದಲ್ಲಿ ಯಾವುದೇ ವಸ್ತು ಅಥವಾ ವಿಚಾರಗಳ ಬಳಕೆಯ ಅವಶ್ಯಕತೆಯ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಬೇಕು. ವಸ್ತುಗಳು ಮನುಷ್ಯನನ್ನು ನಿಯಂತ್ರಿಸುವ ಸ್ಥಿತಿ ಬರಲು ಬಿಡಬಾರದು, ಇದಕ್ಕಾಗಿ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಅಗತ್ಯ ಎಂದರು.


ವಿದ್ಯಾರ್ಥಿಗಳು ಮಾನಸಿಕ ಕೀಳರಿಮೆ ದೂರ ಮಾಡಿಕೊಂಡು ಯಾವುದನ್ನೂ ಸಾಧಿಸಬಲ್ಲೆ ಎಂಬ ದೃಢತೆ ಹೊಂದಿದಾಗ ಎಲ್ಲಾ ಮಿತಿಗಳನ್ನು ಮೀರಿ ಸಾಧನೆ ಮಾಡಲು ಸಾಧ್ಯ. ಕಷ್ಟಗಳೇ ಮನುಷ್ಯನನ್ನು ಸಾಧಕರಾಗಲು ಪ್ರೇರೇಪಣೆ ನೀಡುತ್ತವೆ. ಸರಿಯಾದ ಮಾರ್ಗದರ್ಶನ ಹಾಗೂ ಪರಿಶ್ರಮದಿಂದ ಪ್ರತಿಯೊಬ್ಬರೂ ಗೆಲುವಿನ ಮೆಟ್ಟಿಲು ಏರಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾಲೇಜಿನ ಮನಃಶಾಸ್ತ್ರ ವಿಭಾಗದ ಆಶ್ರಯದಲ್ಲಿ ರೂಪಿಸಲಾಗಿರುವ ಆಪ್ತ ಸಮಾಲೋಚನಾ ಕೇಂದ್ರ ‘ಚಿತ್ತ ಚಿಕಿತ್ಸಾ’ವನ್ನು ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಬಹುತೇಕರಿಗೆ ತಮ್ಮ ಶಕ್ತಿಯ ಅರಿವು ಇರುವುದಿಲ್ಲ, ಇದು ಅವರ ಸಾಧನೆಗೆ ಅಡ್ಡಿಯಾಗುತ್ತಿರುತ್ತದೆ.

ನಮ್ಮ ಶಕ್ತಿಯನ್ನು ನಾವು ಅರಿತುಕೊಂಡು ನಿರ್ದಿಷ್ಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಹತ್ತರ ಸಾಧನೆ ಮಾಡಲು ಸಾಧ್ಯ. ಐಕ್ಯೂ ಪರೀಕ್ಷೆಯ ಮೂಲಕ ನಮ್ಮನ್ನು ನಾವು ತಿಳಿದುಕೊಂಡು, ಹೆಚ್ಚಿನ ತರಬೇತಿ ಪಡೆದಾಗ ಯಶಸ್ಸು ಗಳಿಸಬಹುದು. ಭಾರತ ಹಲವು ವಿಚಾರಗಳ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದು, ಉತ್ಕೃಷ್ಟ ಭಾರತೀಯರ ನಿರ್ಮಾಣವಾಗಬೇಕಿದೆ ಎಂದರು.


ತೀರ್ಥರಾಮ ವಳಲಂಬೆ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ವಿವಿಧ ಸಂಸ್ಥೆಗಳ 400ಕ್ಕೂ ಹೆಚ್ಚು ಪಿಯು ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಐಕ್ಯೂ ಪರೀಕ್ಷಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು.


ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ ಕಮ್ಮಜೆ ಸ್ವಾಗತಿಸಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ವಂದಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ನಿರೂಪಣೆ ಮಾಡಿದರು. ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಐಕ್ಯೂ ಪರೀಕ್ಷೆ ನಡೆಸಿದರು. ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಸ್ಪರ್ಧಾ ವಿವರಗಳನ್ನು ತಿಳಿಸಿದರು.

ಇಂದು ಆಟ ಎಲ್ಲೆಲ್ಲಿ? (28-11-2022, ಸೋಮವಾರ)

ಮೇಳಗಳ ಇಂದಿನ (28.11.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸುರತ್ಕಲ್ ಸಮೀಪ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿಯಲ್ಲಿ 

ಕಟೀಲು ಮೂರನೇ ಮೇಳ== ‘ಶಕ್ತಿ ಕೃಪಾ’ 3ನೇ ಕ್ರಾಸ್ ಕಾಟಿಪಳ್ಳ ಶ್ರೀ ನಾರಾಯಣಗುರು ಮಂದಿರದ ಬಳಿ 

ಕಟೀಲು ನಾಲ್ಕನೇ ಮೇಳ  == ಕಮಲಾನಿವಾಸ, ಗುರುವಪ್ಪ ಕಾಂಪೌಂಡ್, ಕೆಳಕಿಲ ಮುದ್ರಾಡಿ 

ಕಟೀಲು ಐದನೇ ಮೇಳ == ತಾರಿಪಡ್ಪು ನರಿಕೊಂಬು ಪಾಣೆಮಂಗಳೂರು 

ಕಟೀಲು ಆರನೇ ಮೇಳ == ಮಿಜಾರು ಮರಕಡಕೆರೆ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಮೈಲ್ಕೊಮೆ ಹೆಗ್ಗುಂಜೆ ಮಂದಾರ್ತಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಗರಡಿ ಹತ್ತಿರ ಹಂದಾಡಿ ಬ್ರಹ್ಮಾವರ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಸಿದ್ಧಿವಿನಾಯಕ ಮೂಡುಗಣಪತಿ ದೇವಸ್ಥಾನ ಮಾಬುಕಳ ಕುಮ್ರಗೋಡು ಬ್ರಹ್ಮಾವರ – ಶ್ರೀ ಹರಿಲೀಲಾಮೃತಮ್ 

ಶ್ರೀ ಸಾಲಿಗ್ರಾಮ ಮೇಳ == ಕೆಂಚನೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಮುನಿಯಾಲು – ಪಾವನ ತುಳಸಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಶ್ರೀಕನಕ, ಕಟ್ಕೇರಿ ಉಪ್ಪುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಎಚ್ ಎಂ ಟಿ , ಕೋಣಿ 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಶೂರ್ಪನಖಾ  ವಿವಾಹ, ಶಶಿಪ್ರಭಾ ಪರಿಣಯ 

ಶ್ರೀ ಕಮಲಶಿಲೆ ಮೇಳ == ಸುಂದರರಾಮ್ ಶೆಟ್ಟಿ ಸಭಾಂಗಣ ಬನ್ನೇರುಘಟ್ಟ ರೋಡ್, ಬೆಂಗಳೂರು  

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಿದ್ಕಲ್ ಕಟ್ಟೆ 

ಶ್ರೀ ಸೌಕೂರು ಮೇಳ == ಶ್ರೀ ಕ್ಷೇತ್ರ ಸೌಕೂರು – ಕುಶಲವ, ಶಶಿಪ್ರಭೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾಳ್ಕುದ್ರು ಹೆಗ್ಡೇರ್ ಮನೆ 

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರ ಕೆದೂರು 

ಶ್ರೀ ನೀಲಾವರ ಮೇಳ  == ಕೊಕ್ಕರ್ಣೆ ಬಸ್ ಸ್ಟಾಂಡ್ ಹತ್ತಿರ 

ಶ್ರೀ ಹಟ್ಟಿಯಂಗಡಿ ಮೇಳ == ಉಳ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿ – ನಾಗಾಂಬಿಕೆ  

ಶ್ರೀ ಬೋಳಂಬಳ್ಳಿ ಮೇಳ== ಶಿವಪುರ – ಶಿವ ದುರ್ಗಾ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗುಳಿಯ ಸಜೀಪ ಮುನ್ನೂರು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ದೇವಸ್ಥಾನದ ವಠಾರ – ಭಾಗ್ಯವಂತೆರ್ 

ಶ್ರೀ ದೇಂತಡ್ಕ ಮೇಳ == ‘ಮಾರ್ಗ’ ಇರ್ದೆ ಗ್ರಾಮ – ಪ್ರಸೀದ ಪರಮೇಶ್ವರಿ 

ಶ್ರೀ ಗೆಜ್ಜೆಗಿರಿ ಮೇಳ == ಅಳದಂಗಡಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು.