Sunday, March 15, 2026
Home Blog Page 102

ಮಹಿಳೆಯನ್ನು ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣ ಮತ್ತು ಚಿನ್ನ ಸುಲಿಗೆ – ಯುವಕನ ಬಂಧನ

ವಿವಿಧ ಹೋಟೆಲ್‌ಗಳಿಗೆ ಮಹಿಳೆಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ತಿರುವನಂತಪುರ ನಗರದ ಅನ್ಸಾರ್ ಎಂದು ಗುರುತಿಸಲಾಗಿದ್ದು, ಟೆಕ್ನೋಪಾರ್ಕ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.

ಅನ್ಸಾರ್ ಮಹಿಳೆಯ ನಗ್ನ ಚಿತ್ರಗಳನ್ನು ಹಾಕಿ ಬೆದರಿಸಿ ಹಣ ಮತ್ತು ಚಿನ್ನವನ್ನು ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 45 ವರ್ಷದ ಮಹಿಳೆ ತನ್ನ ದೂರಿನಲ್ಲಿ ಆರೋಪಿ 12 ಲಕ್ಷ ರೂಪಾಯಿ, 19 ಪವನ್ ಚಿನ್ನ ಮತ್ತು ಕಾರನ್ನು ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

45 ವರ್ಷದ ಮಹಿಳೆ ತಿರುವನಂತಪುರಂ ನಗರದಲ್ಲಿ ಖಾಸಗಿ ಕಂಪನಿ ನಡೆಸುತ್ತಿದ್ದಾರೆ. ಕನ್ಯಾಕುಲಂಗರದಲ್ಲಿ ಬಾಡಿಗೆಗೆ ವಾಸವಾಗಿರುವ ಅನ್ಸಾರ್ ಮೂರು ವರ್ಷಗಳ ಹಿಂದೆ ಮಹಿಳೆಯನ್ನು ಭೇಟಿಯಾಗಿದ್ದ. ಇವರಿಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಾದರು.

ನಂತರ ಕ್ರಮೇಣ ಆಕೆಗೆ ಹತ್ತಿರವಾದ. ಆರೋಪಿಯು ಆಕೆಯ ಸಂಸ್ಥೆಗೆ ಆಗಾಗ ಭೇಟಿ ನೀಡಲಾರಂಭಿಸಿದ. ಸ್ನೇಹ ಬೆಳೆಸಿದ ಬಳಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಬೆದರಿಸಲು ಆರಂಭಿಸಿದ್ದರು. ದೂರಿನ ಪ್ರಕಾರ, ಅನ್ಸಾರ್ ಮಹಿಳೆಯನ್ನು ನಗರದ ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಅನ್ಸಾರ್ ತನ್ನ ನಗ್ನ ಫೋಟೋಗಳನ್ನು ಪ್ರಸಾರ ಮಾಡುವುದಾಗಿ ಮತ್ತು ಪತಿಗೆ ತಿಳಿಸುವುದಾಗಿ ಬೆದರಿಸಿ ಹಣ, ಚಿನ್ನ ಮತ್ತು ಕಾರು ಸುಲಿಗೆ ಮಾಡಿದ್ದಾನೆ. ವಟ್ಟಪ್ಪರ ಪೊಲೀಸರು ಕನ್ಯಾಕುಲಂಗರದ ಅನ್ಸಾರ್‌ನನ್ನು ಬಂಧಿಸಿದ್ದಾರೆ

ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ

ಹಿರಿಯ ಸಾಹಿತಿ, ಶಿಕ್ಷಕ, ಹರಿದಾಸ, ಜಿನದಾಸ, ಅರ್ಥಧಾರಿ, ಕಲಾವಿದ, ನಾಟಕಕಾರ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ ಎಲ್ಲ ಸಂಘಟನೆಗಳ ಸಹಯೋಗದೊಂದಿಗೆ ದಿನಾ0ಕ 27-02-2023ರಂದು ಎ0.ಜಿ.ಎ0.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.


ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿಯವರು ತಾನು ಅ0ಬಾತನ ಮುದ್ರಾಡಿಯವರೊಂದಿಗೆ ಕಳೆದ ದಿನಗಳು ಸ್ಮರಣೀಯವಾದುದು. ಧರ್ಮರಾಯ, ವಿದುರ, ಅಕ್ರೂರ ಮುಂತಾದ ಸಾತ್ವಿಕ ಪಾತ್ರಗಳನ್ನು ಅಂಬಾತನಯರು ಅತ್ಯ0ತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು.

ಅಂಬಾತನಯರ0ತಹ ಸರಳ,ಸಜ್ಜನಿಕೆಯ ಸಾತ್ವಿಕ ವ್ಯಕ್ತಿಗಳನ್ನು ತಾನು ಕಂಡದ್ದು ವಿರಳ. ತೀವ್ರ ಅನಾರೋಗ್ಯದ ನಡುವೆಯೂ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ್ದುದು ಕಲೆ ಮತ್ತು ಸಮಾಜದ ಬಗ್ಗೆ ಅವರಿಗಿರುವ ಗಾಢವಾದ ಪ್ರೀತಿಯ ದ್ಯೋತಕವಾಗಿದೆ. ವೈಯಕ್ತಿಕವಾಗಿ ಅವರ ಅಗಲಿಕೆ ನನಗೆ ದೊಡ್ಡ ನಷ್ಟ ಎಂದು ನುಡಿದರು.

ನೀಲಾವರ ಸುರೇ0ದ್ರ ಅಡಿಗ, ಬೆಳಗೋಡು ರಮೇಶ್‌ಭಟ್, ಶ್ರೀಮತಿ ಪೂರ್ಣಿಮಾ, ಎಸ್. ವಿ.ಭಟ್, ಪ್ರೊ.ಹಿರಿಯಡ್ಕ ಮುರಲೀಧರ ಉಪಾಧ್ಯ, ಡಾ.ಪಾದೆಕಲ್ಲು ವಿಷ್ಣುಭಟ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿ.ಭುವನಪ್ರಸಾದ್‌ ಹೆಗ್ಡೆ, ಡಾ.ಬಿ. ಜಗದೀಶ್ ಶೆಟ್ಟಿ, ಉದ್ಯಾವರ ನಾಗೇಶ್‌ಕುಮಾರ್, ಗಿರೀಶ್ ಶೆಟ್ಟಿಗಾರ್, ಎ. ನರಸಿಂಹ ರವಿರಾಜ್, ಎಂ. ಗಂಗಾಧರ ರಾವ್, ಪ್ರದೀಪಚಂದ್ರ ಕುತ್ಪಾಡಿ, ಪ್ರೊ.ಎಂ.ಎಲ್. ಸಾಮಗ, ವಿಶ್ವನಾಥ ಶೆಣೈ, ಪೂರ್ಣಿಮಾ ಸುರೇಶ್, ಶ್ರೀಮತಿ ಶ್ರೀ ಮುದ್ರಾಡಿ ಅಂಬಾತನಯ ಮುದ್ರಾಡಿಯವರ ಒಡನಾಟದ ನೆನಪುಗಳನ್ನು ಸ್ಮರಿಸಿಕೊಂಡರು. ವಿಜಯಕುಮಾರ್ ಮುದ್ರಾಡಿಯವರು ಧನ್ಯವಾದ ಸಲ್ಲಿಸಿದರು.

ಮುರಲಿ ಕಡೆಕಾರ್ ಮುದ್ರಾಡಿಯವರ ಕುರಿತು ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಶ್ರಾವ್ಯ ಬಾಸ್ರೀ ಮತ್ತು ಎ.ಪಿ ಪಾಠಕ್‌ ಗಾಯನ ನಮನ ಸಲ್ಲಿಸಿದರು.

ಧೀಮಂತ ಲೇಖಕ, ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ ಅಂಬಾತನಯ ಮುದ್ರಾಡಿ ನಿಧನ 

ಸಾಹಿತಿ, ಕಲಾವಿದ, ಶಿಕ್ಷಕ ಸಾತ್ವಿಕ ಮನೋಭಾವದ ಸಹೃದಯಿ ಅಂಬಾತನಯ ಮುದ್ರಾಡಿ (88)  ಇಂದು ಮುಂಜಾನೆ ನಮ್ಮನ್ನಗಲಿದ್ದಾರೆ.

ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಶಿಕ್ಷಕ, ಹರಿದಾಸ,ಸಾಹಿತಿ ಮೊದಲಾದ  ವಿಭಾಗಗಳಲ್ಲಿ ಜನಪ್ರಿಯರಾದ ಅಂಬಾತನಯ ಮುದ್ರಾಡಿ (ಶ್ರೀ ಕೇಶವ ಶೆಟ್ಟಿಗಾರ್) ಬಹುಮುಖೀ ಸಾಧನೆ ಮತ್ತು ಸಾತ್ವಿಕ ಮನೋಭಾವಕ್ಕೆ ಹೆಸರಾಗಿದ್ದರು. 

ಅಂಬಾತನಯ ಮುದ್ರಾಡಿ ಎಂಬುದು ಲೇಖಕ ಶ್ರೀ ಕೇಶವ ಶೆಟ್ಟಿಗಾರರ ಕಾವ್ಯನಾಮ. ಊರ ಪರಿಸರದಲ್ಲಿ ಶ್ರೀಯುತರು ಕೇಶವ ಶೆಟ್ಟಿಗಾರರೆಂದೂ ಕೇಶವ ಮಾಸ್ಟರರೆಂದೂ ಗುರುತಿಸಲ್ಪಟ್ಟರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬಾತನಯ ಮುದ್ರಾಡಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು.  

ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅವರಿಗೆ ಅರ್ಹವಾಗಿ ಸಂದಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.

ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ “ಸ್ವಪ್ರಯತ್ನದ ಧೀಮಂತ ಲೇಖಕ – ಅಂಬಾತನಯ ಮುದ್ರಾಡಿ” ಎಂಬ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು.

ಅಂಬಾತನಯ  ಮುದ್ರಾಡಿಯವರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. 

ಬೊಂಡಾಲ ಜನಾರ್ದನ ಶೆಟ್ಟಿ – ರಾಮಣ್ಣ ಶೆಟ್ಟಿ ಪ್ರಶಸ್ತಿ ಪ್ರದಾನ; “ಕಲಾಪೋಷಕರಿಂದ ಯಕ್ಷಗಾನ ಉಳಿವು”: ಅನಂತ ಆಸ್ರಣ್ಣ

ಮಂಗಳೂರು: ‘ಯಕ್ಷಗಾನವನ್ನು ನಿರಂತರವಾಗಿ ಉಳಿಸಿ, ಬೆಳೆಸಲು ಕಲಾಪೋಷಕರ ಪಾತ್ರ ಹಿರಿದು, ಬೊಂಡಾಲದಲ್ಲಿ ದೀರ್ಘಕಾಲ ಯಕ್ಷಗಾನವನ್ನು ಸೇವಾರೂಪದಲ್ಲಿ ಆಡಿಸುವುದಲ್ಲದೆ, ಕಲಾವಿದರನ್ನು ಸನ್ಮಾನಿಸುವ ಮೂಲಕ ಕಲಾಮಾತೆಯ ಸೇವೆಯನ್ನೂ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯರ್ಹ’ ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದ್ದಾರೆ.

ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಬೊಂಡಾಲ ಪ್ರಶಸ್ತಿಯನ್ನು ಕಟೀಲು ಮೇಳದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರಿಗೆ ಶುಕ್ರವಾರ ರಾತ್ರಿ ಬೊಂಡಾಲದಲ್ಲಿ ನಡೆದ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು. ‘ಯಕ್ಷಗಾನ ಬೆಳೆಯಬೇಕು ಎಂದಿದ್ದರೆ, ಕಲಾವಿದರು ಬೇಕು, ಉತ್ತಮ ಕಲಾವಿದರನ್ನು ಗುರುತಿಸುವುದು ಕಲಾಮಾತೆಯಾದ ಶ್ರೀ ದುರ್ಗಾಪರಮೇಶ್ವರಿಯ ಸೇವೆ’ ಎಂದವರು ಹೇಳಿದರು.

           ಕಟೀಲು 6 ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪತ್ರಕರ್ತ ಹರೀಶ ಮಾಂಬಾಡಿ ಮುಖ್ಯ ಅತಿಥಿಗಳಾಗಿ  ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮಾತನಾಡಿ, ‘ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಬಲಿಪ ಪರಂಪರೆಯನ್ನು ಮುಂದುವರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆ’ ಎಂದರು.

ಬಲಿಪರಿಗೆ ಶ್ರದ್ಧಾಂಜಲಿ:

       ಕಾರ್ಯಕ್ರಮದಲ್ಲಿ ದಿವಂಗತ ಬಲಿಪ ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಬಲಿಪ ನಾರಾಯಣ ಭಾಗವತರ ಸಂಸ್ಮರಣೆ ಮಾಡಿದರು.

   ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ನಿವೃತ್ತ ಶಿಕ್ಷಕ ನಾರಾಯಣ ಗೌಡ ಸನ್ಮಾನ ಪತ್ರ ವಾಚಿಸಿದರು. ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ಬೊಂಡಾಲ ವಂದಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀದೇವಿ ಮಹಾತ್ಮೆ’ ಬಯಲಾಟ ಜರಗಿತು.

ಎಸ್.ಡಿ.ಎಂ. ಯಕ್ಷೋತ್ಸವ ಸಮಿತಿ: ಬಲಿಪರಿಗೆ ನುಡಿನಮನ
ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತ: ಡಾ.ಜೋಶಿ

ಎಸ್.ಡಿ.ಎಂ. ಯಕ್ಷೋತ್ಸವ ಸಮಿತಿ: ಬಲಿಪರಿಗೆ ನುಡಿನಮನ
ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತ: ಡಾ.ಜೋಶಿ
——————————–


ಮಂಗಳೂರು: ‘ಬಲಿಪ ನಾರಾಯಣ ಭಾಗವತರದು ಮೇರು ವ್ಯಕ್ತಿತ್ವ.ಅಪಾರ ಅನುಭವ ಹೊಂದಿದ್ದರೂ ಗರ್ವವರ್ಜಿತರಾದ ನಿಜಾರ್ಥದ ಭಾಗವತ ಬಲಿಪರು. ಅವರ ಅಗಲುವಿಕೆಯ ಬಳಿಕವೂ ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತವಾಗಿರುತ್ತದೆ’ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.


ಗುರುವಾರ ನಿಧನರಾದ ಪ್ರಸಿದ್ಧ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಯಕ್ಷೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬಲಿಪ ಪರಂಪರೆ:
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿ ಮಾತನಾಡಿ ‘ತೆಂಕುತಿಟ್ಟು ಯಕ್ಷಗಾನದ ಪ್ರಮುಖ ಘರಾನವೆನಿಸಿದ ಬಲಿಪ ಪರಂಪರೆಯಲ್ಲಿ ಹಿರಿಯ ಅಜ್ಜ ಬಲಿಪರ ನಂತರ ಅಷ್ಟೇ ಸಮರ್ಥವಾಗಿ ಅದನ್ನು ಜನಪ್ರಿಯ ಗೊಳಿಸಿದ ಕೀರ್ತಿ ಬಲಿಪ ನಾರಾಯಣ ಭಾಗವತರಿಗೆ ಸಲ್ಲುತ್ತದೆ.

ಮಗು ಮನಸ್ಸಿನ ಅವರ ಸಾಧನೆ ಅಪಾರ. ಅಮೋಘ ಕಂಠಸಿರಿಯಿಂದ ಸಮುದಾಯವನ್ನು ಕ್ಷಣಮಾತ್ರದಲ್ಲಿ ಆವರಿಸುವ ಬಲಿಪತನ ಎಂದೆಂದಿಗೂ ಪ್ರಸ್ತುತ’ ಎಂದರು .


ಶ್ರೀ ಕೃಷ್ಣ ಯಕ್ಷಸಭಾದ ಸುಧಾಕರರಾವ್ ವೇಜಾವರ, ದೇರಳಕಟ್ಟೆ ರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅನಿವಾಸಿ ಭಾರತೀಯ ರಮೇಶ್ ಮಂಜೇಶ್ವರ, ಕಲಾಪೋಷಕ ಹರೀಶ್ ಶೆಟ್ಟಿ ಕೊಡೆತ್ತೂರು ಗುತ್ತು ಮೃತರ ಗುಣಗಾನ ಮಾಡಿದರು.

ಯಕ್ಷೋತ್ಸವ ಸಮಿತಿ ಸಂಚಾಲಕ ಪ್ರೊ. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿ, ಪ್ರೊ.ನರೇಶ್ ಮಲ್ಲಿಗೆ ಮಾಡು ವಂದಿಸಿದರು. ಮೌನ ಪ್ರಾರ್ಥನೆಯ ಬಳಿಕ ಬಲಿಪರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಯಕ್ಷರಂಗದ ಭೀಷ್ಮ, ತೆಂಕುತಿಟ್ಟಿನ ಮೇರು ಭಾಗವತ, ಬಲಿಪ ಶೈಲಿಯ ಅದ್ವಿತೀಯ ಕಲಾವಿದ,  ಪರಂಪರೆಯ ಕೊಂಡಿ ಬಲಿಪ ನಾರಾಯಣ ಭಾಗವತ ನಿಧನ 

ಯಕ್ಷರಂಗದ ಭೀಷ್ಮ, ತೆಂಕುತಿಟ್ಟಿನ ಮೇರು ಭಾಗವತ, ಬಲಿಪ ಶೈಲಿಯ ಅದ್ವಿತೀಯ ಕಲಾವಿದ,  ಪರಂಪರೆಯ ಕೊಂಡಿ ಬಲಿಪ ನಾರಾಯಣ ಭಾಗವತರು ನಿಧನರಾಗಿದ್ದಾರೆ.  ಇಂದು ಸಂಜೆ 6.30ಕ್ಕೆ ಸರಿಯಾಗಿ ಅವರು ಮೂಡಬಿದಿರೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಮಾಹಿತಿಯಿದೆ. ಯಕ್ಷಗಾನದ ಭಾಗವತಿಕೆಯ ಬಗ್ಗೆ ಕರಾರುವಾಕ್ಕಾಗಿ ಹೀಗೆಯೇ ಎಂದು ಹೇಳಬಲ್ಲ ಕಲಾವಿದರನ್ನು ನಾವಿಂದು ಕಳೆದುಕೊಂಡಿದ್ದೇವೆ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹಾಗೂ ಬಲಿಪ ಮನೆತನದ ಅಭಿಮಾನಿಗಳು ಹಾಗೂ ಯಕ್ಷಗಾನದ ಅಭಿಮಾನಿಗಳನ್ನು ಅವರಿಂದು ಅಗಲಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ. ಬಲಿಪ ನಾರಾಯಣ ಭಾಗವತರ ನಿಧನದಿಂದ ತೆಂಕುತಿಟ್ಟು ಭಾಗವತಿಕೆಯ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯರಾತ್ರಿ 1.30 ಘಂಟೆಗೆ ಸರಿಯಾಗಿ ಅವರ ಸ್ವಗೃಹದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಬಲಿಪ ನಾರಾಯಣ ಭಾಗವತರು ನಡೆದುಬಂದ ಹಾದಿ:
ಹೆಸರು: ಬಲಿಪ ನಾರಾಯಣ ಭಾಗವತರು
ಪತ್ನಿ: ದಿ। ಜಯಲಕ್ಷ್ಮಿ
ಜನನ: 19.03.1938
ಜನನ ಸ್ಥಳ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ
ತಂದೆ ತಾಯಿ: ಶ್ರೀ ಬಲಿಪ ಮಾಧವ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ
ಯಕ್ಷಗಾನ ಗುರುಗಳು: ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟ
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ಮದ್ದಳೆಗಾರರಾದ ದಿ| ಕುದ್ರೆಕೋಡ್ಲು ರಾಮ ಭಟ್ಟ, ವೇಷಧಾರಿಗಳಾದ ದಿ| ಕುಂಬಳೆ ತಿಮ್ಮಪ್ಪ ಮತ್ತು ದಿ| ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿ
ಅನುಭವ: 55 ವರ್ಷಕ್ಕೂ ಮೇಲ್ಪಟ್ಟು (ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ.
ಮಕ್ಕಳು: ನಾಲ್ಕು ಜನ ಗಂಡುಮಕ್ಕಳು (ಬಲಿಪ ಮಾಧವ ಭಟ್ಟ, ಕಟೀಲು ಮೇಳದ ಭಾಗವತ ಬಲಿಪ ಶಿವಶಂಕರ ಭಟ್ಟ, ಬಲಿಪ ಶಶಿಧರ ಭಟ್ಟ, ಹಾಗೂ ಕಟೀಲು ಮೇಳದಲ್ಲಿ ಭಾಗವತರಾಗಿದ್ದ ದಿ| ಬಲಿಪ ಪ್ರಸಾದ ಭಟ್ಟ)

ರಚಿಸಿದ ಪ್ರಸಂಗಗಳು: 35ಕ್ಕೂ ಮಿಕ್ಕಿ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಸುಮಾರು 200 ಕ್ಕೂ ಹೆಚ್ಚು.  ಅದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ 2010, ಆಳ್ವಾಸ್ ನುಡಿಸಿರಿ 2010, ಕರ್ನಾಟಕ ಸಂಘ ದುಬೈ 1988, ಶ್ರೀ ಎಡನೀರು ಮಠ 1994, ಕರಾವಳಿ ಯಕ್ಷಗಾನ ಸಮ್ಮೇಳನ 2000, ಕರ್ನಾಟಕ ಜನಪದ ಪರಿಷತ್ತು ಬೆಂಗಳೂರು 2002, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 2002, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು 2004, ಕೇರಳ ಸಂಗೀತ ನಾಟಕ ಅಕಾಡೆಮಿ ತಿರುವನಂತಪುರ 2007, ಕರ್ನಾಟಕ ಜಾನಪದ ಕಲಾ ಅಧ್ಯಯನ ಕೇಂದ್ರ ಉಡುಪಿ 2008, ಕಲ್ಕೂರ ಪ್ರತಿಷ್ಠಾನ 2015, ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಇನ್ನೂ ಹಲವಾರು.  

ಯಕ್ಷಗಾನ ಕಂಡ ಮಹಾನ್ ಕಲಾವಿದ ಬಲಿಪ ನಾರಾಯಣ ಭಾಗವತರಿಗೆ ಎಲ್ಲಾ ಯಕ್ಷಗಾನ ಅಭಿಮಾನಿಗಳ ಪರವಾಗಿ ಗೌರವಪೂರ್ವಕ ಶ್ರದ್ಧಾಂಜಲಿ. 

ಕೆ. ಗೋವಿಂದ ಭಟ್ಟರಿಗೆ ಕಲಾಸಂಗಮ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ʼಭಸ್ಮಾಸುರ ಮೋಹಿನಿʼ ಯಕ್ಷಗಾನ

ಕಲಾಸಂಗಮ ಚಾರಿಟೇಬಲ್‌ ಟ್ರಸ್ಟ್‌ ಇದರ ದಶಮಾನೋತ್ಸವ ಆಚರಣೆಯ ಪ್ರಯುಕ್ತ ಮಂಗಳೂರು ಪುರಭವನದಲ್ಲಿ ಕೆ. ಗೋವಿಂದ ಭಟ್ಟರಿಗೆ ಕಲಾಸಂಗಮ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ʼಭಸ್ಮಾಸುರ ಮೋಹಿನಿʼ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಚಿತ್ರ ನೋಡಿ.

ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರಿಗೆ ಬೊಂಡಾಲ ಪ್ರಶಸ್ತಿ: ಫೆಬ್ರವರಿ 17ರಂದು ಪ್ರಶಸ್ತಿ ಪ್ರದಾನ

ಮಂಗಳೂರು: ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಭಾಗವತ, ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ.

ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2022 – 23 ನೇ ಸಾಲಿಗೆ ಪುಂಡಿಕಾಯಿ ಅವರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ರೂ. 10,000/- ನಗದು; ಶಾಲು,ಸ್ಮರಣಿಕೆ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ಪುಂಡಿಕಾಯಿ ಗೋಪಾಲಕೃಷ್ಣ ಭಟ್:

      ಬಲಿಪ ಪರಂಪರೆಯ ಪ್ರಮುಖ ಕೊಂಡಿಯಾಗಿರುವ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಜನಿಸಿದ್ದು 1973 ಮೇ 14ರಂದು; ತಂದೆ ಗೋವಿಂದ ಭಟ್, ತಾಯಿ ಭವಾನಿ. ಅಡ್ಯನಡ್ಕದಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಪೂರೈಸಿ ವಿಟ್ಲ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಬಳಿಕ ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು.

     ಯಕ್ಷಗಾನದ ಹಾಡುಗಾರಿಕೆಯಲ್ಲಿ ಆಸಕ್ತರಾದ ಗೋಪಾಲಕೃಷ್ಣ ಭಟ್ಟರಿಗೆ ಮಾವ ಬಲಿಪ ನಾರಾಯಣ ಭಾಗವತರೇ ಆರಂಭಿಕ ಗುರುಗಳು. ಬಲಿಪ ವಿಶ್ವೇಶ್ವರ ಭಟ್ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಭಾಗವತಿಕೆಯ ವಿವಿಧ ಆಯಾಮಗಳನ್ನು ಕಲಿತ ಅವರು ಕುಬಣೂರು ಶ್ರೀಧರಾಯರ ಮಾರ್ಗದರ್ಶನದಲ್ಲಿ ಯಕ್ಷಗಾನವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ಪ್ರಥಮವಾಗಿ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ ಪುಂಡಿಕಾಯಿ ಬಳಿಕ ಕಾಟಿಪಳ್ಳ ಮೇಳದಲ್ಲಿ ಮತ್ತೊಂದು ವರ್ಷ ದುಡಿದರು. ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ 27 ವರ್ಷಗಳನ್ನು ಪೂರೈಸಿ ಕಳೆದ ಆರು ವರ್ಷಗಳಿಂದ ಪ್ರಧಾನ ಭಾಗವತರಾಗಿ ಪ್ರಸ್ತುತ ಆರನೇ ಮೇಳದಲ್ಲಿ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ

     ಯಕ್ಷಗಾನದ ಘರಾನವೆನಿಸಿದ ಬಲಿಪ ಶೈಲಿಯ ಹಾಡುಗಾರಿಕೆಯಲ್ಲಿ ಜನಪ್ರಿಯತೆ ಗಳಿಸಿರುವ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನದ ಸಂಪ್ರದಾಯಗಳನ್ನು ತಿಳಿದ ಕೆಲವೇ ಭಾಗವತರಲ್ಲಿ ಒಬ್ಬರು. ಪತ್ನಿ ಹೇಮಲತಾ ಹಾಗೂ ಮಕ್ಕಳಾದ ದುರ್ಗಾ ಕಿರಣ್ ಮತ್ತು ಶ್ರೀಭವಾನಿಯವರನ್ನೊಳಗೊಂಡ ಸಂತೃಪ್ತ ಸಂಸಾರ ಹೊಂದಿದ್ದಾರೆ.

ಫೆ. 17 ಕ್ಕೆ ಪ್ರಶಸ್ತಿ ಪ್ರದಾನ :

        ಫೆಬ್ರವರಿ 16 ರಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ದಾನಶೂರ ಕರ್ಣ’  ಹಾಗೂ 17ರಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ.

      ಫೆಬ್ರವರಿ 17 ರಂದು ಶುಕ್ರವಾರ ರಾತ್ರಿ ರಂಗಸ್ಥಳದಲ್ಲಿ ಜರಗುವ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅವರ ಅಧ್ಯಕ್ಷತೆಯಲ್ಲಿ ಕಟೀಲು ಕ್ಷೇತ್ರದ ಆರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಮಾಜಿ ಸಚಿವ ಬಿ. ರಮಾನಾಥ ರೈ, ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅತಿಥಿಗಳಾಗಿ ಭಾಗವಹಿಸುವರು ಎಂದು  ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ಸಮ್ಮೇಳನದ ಆಮಂತ್ರಣ ಪತ್ರ – ಯಕ್ಷಗಾನ ಪಿ.ಎಚ್.ಡಿ ಪದವೀಧರೆ ಡಾ. ಮಾರ್ತಾ ಅವರಿಗೆ

ಇದೇ ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನದ ಸಂದರ್ಭದಲ್ಲಿ 75 ಜನ ಸಾಧಕರಿಗೆ ‘ಸಮ್ಮೇಳನ ಸಮ್ಮಾನ’ ನೀಡಲಿದ್ದು,

ಯಕ್ಷಗಾನದಲ್ಲಿ ಸಂಶೋಧನೆ ಮಾಡಿ ಪ್ರಥಮ ಪಿ.ಎಚ್.ಡಿ ಪದವೀಧರೆ ಎನಿಸಿಕೊಂಡ ಡಾ. ಮಾರ್ತಾ ಏಸ್ಟನ್ ಸಿಕೋರ ಸಂಮಾನಿತರಲ್ಲಿ ಓರ್ವರಾಗಿದ್ದು, ಇವರು ತೀವ್ರ ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು,

ಅವರ ಪತಿ ಶ್ರೀ ಬಾಬ್ ಸಿಕೋರ ಇವರಿಗೆ ಇಂದು ಶ್ರೀ ಆನಂದ ಹಾಸ್ಯಗಾರ ಅವರು ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಅವರ ಮನೆಗೆ ಹೋಗಿ ಆಮಂತ್ರಣ ಪತ್ರವನ್ನು ನೀಡಿದರು.

ವಿವಾದಗಳ ಕಿಚ್ಚನ್ನು ನಂದಿಸಿ – ಅನಗತ್ಯ ಪಾತ್ರಗಳ ಪೋಷಣೆ ಅಗತ್ಯವಿದೆಯೇ?  

ಕೆಲವೊಂದು ವಿಚಾರಗಳನ್ನು ಇಲ್ಲಿ ಯಾರಿಗೂ ನೋವಾಗದಂತೆ ಬರೆಯಬೇಕಾಗಿದೆ. ಯಾಕೆಂದರೆ ಹೆಚ್ಚಿನ ಕಲಾವಿದರು ನಾನು ತಿಳಿದಿರುವಂತೆ ಸೂಕ್ಷ್ಮ  ಮನೋಭಾವದವರಾಗಿರುತ್ತಾರೆ. ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸುವಾಗ ಯಕ್ಷಗಾನ ಕಲಾವಿದರು ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ಜಾಗ್ರತೆಯಿಂದಿರುವುದು ಒಳ್ಳೆಯದು ಎಂದು ಅನಿಸುತ್ತದೆ. ಯಾಕೆಂದರೆ ಈಗ ನಿಮ್ಮ ಪ್ರದರ್ಶನಗಳನ್ನು ಸಾಮಾಜಿಕ ಜಾಲತಾಣವೆಂಬ ಹದ್ದಿನ ಕಣ್ಣು ತದೇಕಚಿತ್ತದಿಂದ ನೋಡುತ್ತಿರುತ್ತದೆ. ಆದುದರಿಂದ ಕಲಾವಿದರು ತಮ್ಮ ಅಭಿನಯ ಮತ್ತು ಮಾತುಗಳ ಮೇಲೆ ಸ್ವಲ್ಪ ನಿಯಂತ್ರಣವನ್ನು ಅವರವರೇ ಸಾಧಿಸಬೇಕಾಗಿದೆ. 

ಒಂದು ಮಾತನ್ನು ಖೇದದಿಂದ ಹಾಗೂ ವಿಷಾದದಿಂದ ಹೇಳಬಯಸುತ್ತೇನೆ. ನಾವು ಈಗ ಇಪ್ಪತ್ತೊಂದನೇ ಶತಮಾನದಲ್ಲಿದ್ದೇವೆ. ಜಾತಿ ಪದ್ಧತಿಯನ್ನು ಹೊಡೆದೋಡಿಸಿದ್ದೇವೆ ಎಂದು ಯಾರಾದರೂ ಧೈರ್ಯದಿಂದ ಎದೆತಟ್ಟಿ ಹೇಳಬಹುದೇ?

ಅದು ಸಾಧ್ಯವಿಲ್ಲ. ಈಗ ಜಾತಿಯ ಭೂತ ಬೃಹದಾಕಾರವಾಗಿ ಬೆಳೆಯುತ್ತಿದೆ. ಅದು ಮತ್ತೂ ಬೆಳೆಯಬಹುದು. ಈ ಜಾತಿ ಎಂಬ ಭೂತವನ್ನು ಸಾಕುತ್ತಿರುವವರು ಹಲವಾರು ಮಂದಿ ಇದ್ದಾರೆ. ಓಟಿನ ಬೇಟೆಗೆ, ಮತವನ್ನು ಗಳಿಸುವುದಕ್ಕೋಸ್ಕರ ಈ ಜಾತಿ ಎಂಬುದು ಜೀವಂತವಿರಲೇ ಬೇಕು. ನಮ್ಮ ಧರ್ಮ, ನಮ್ಮ ಜಾತಿ, ನಮ್ಮ ಮಠ, ನಮ್ಮ ಸ್ವಾಮಿಗಳು (ಸ್ವಾಮಿಗಳು ಎಂತಹವರೇ ಇರಲಿ, ಅದು ನಗಣ್ಯ) ಈ ಮನೋಭಾವ ಈಗ ಜನರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ಇತ್ತೀಚೆಗೆ ಯಕ್ಷಗಾನದಲ್ಲೂ ಜಾತಿ ವಿಪರೀತ ಸದ್ದು ಮಾಡುತ್ತಿದೆ. ಪುರಾಣ ಪ್ರಸಂಗಗಳಲ್ಲಿ ಸಾಧಾರಣವಾಗಿ ಎಲ್ಲಾ ಜಾತಿಯ ಪಾತ್ರಗಳು ಬರುತ್ತವೆ. ಅದರಲ್ಲಿ ಕೆಲವೊಂದು ಜಾತಿಯ ಪಾತ್ರಗಳು ಹೆಚ್ಚಾಗಿ ಕಾಣಸಿಗುತ್ತವೆ. ಇಂತಹಾ ಸಂದರ್ಭದಲ್ಲಿ ಈ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ಎಚ್ಚರ ವಹಿಸದಿದ್ದರೆ ವಿವಾದ ಕಟ್ಟಿಟ್ಟ ಬುತ್ತಿ.

ಮೊದಲಾಗಿ ಪಾತ್ರೋಚಿತವಾಗಿ ಮಾತನಾಡುವುದು ಮುಖ್ಯವಾಗುತ್ತದೆ. ಅನಗತ್ಯವಾಗಿ ಕೆಲವು ಶಬ್ದಗಳನ್ನು ಉಪಯೋಗಿಸುವುದು, ಜಾತಿಯ ಹೆಸರುಗಳನ್ನು ಎತ್ತಿ ಹೇಳುವುದು ಮೊದಲಾದುವುಗಳನ್ನು ಮಾಡದಿದ್ದರೆ ಒಳ್ಳೆಯದು. ಚಪ್ಪಾಳೆ ಹೊಡೆಯುವವರು, ವಿಸಿಲ್ ಹಾಕುವವರು ಹಲವಾರು ಮಂದಿ ಇರುತ್ತಾರೆ. ಆದರೆ ಅದರಿಂದ ಕಲಾವಿದರು ಪ್ರೇರಿತರಾಗಬಾರದು. ಅಲ್ಲಿ ಚಪ್ಪಾಳೆ ಹೊಡೆದವರೇ ಆಮೇಲೆ ವಿವಾದಗಳುಂಟಾದಾಗ “ಅವನಿಗೆ ಇದು ಬೇಕಿತ್ತಾ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದದ್ದನ್ನೂ ಕಂಡಿದ್ದೇವೆ.

ಇನ್ನೂ ಒಂದು ಮುಖ್ಯವಾದ ವಿಚಾರ. ಕೆಲವೊಂದು ಹಿಂದಿನಿಂದ ಬಂದ ಪಾತ್ರ ಹಾಗೂ  ಸಂಪ್ರದಾಯ ಸನ್ನಿವೇಶಗಳನ್ನು ಕಲಾವಿದರು ಈಗ ಪ್ರದರ್ಶನದಲ್ಲಿ ಮಾಡದೆ ಬಿಡುವುದು ಒಳಿತು. ಇಲ್ಲದಿದ್ದರೆ ಅದು ವಿವಾದಕ್ಕೆಡೆಯಾಗಬಹುದು. ಹಿಂದಿನ ಹಿರಿಯ ಕಲಾವಿದರು ಹೀಗೆ ಹೇಳಿದ್ದಾರೆ, ಅಥವಾ ಅವರು ಮಾಡಿದ್ದಾರೆ ಎಂದು ಈಗ ಅದನ್ನೇ ಮುಂದುವರಿಸಲು ಸಾಧ್ಯವಿಲ್ಲ. ಯಾಕೆಂದರೆ ಕೆಲವು ಪುರಾಣಗಳಲ್ಲಿಲ್ಲದ ವಿಚಾರ ಹಾಗೂ ಪಾತ್ರಗಳನ್ನು ಮನೋರಂಜನೆ ಮತ್ತು ಹಾಸ್ಯಕ್ಕಾಗಿ ಯಕ್ಷಗಾನದಲ್ಲಿ ಸೇರಿಸಲಾಗಿದೆ. ಇವುಗಳನ್ನು ಭವಿಷ್ಯದಲ್ಲಿ ಬಿಡಬೇಕಾಗಿ ಬರಬಹುದು.

ಹೆಚ್ಚಿನ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಪುರಾಣಗಳಲ್ಲಿ ಇಲ್ಲದ ವಿಚಾರಗಳಾದ್ದರಿಂದ ಅವುಗಳನ್ನು ಪ್ರದರ್ಶಿಸುವಾಗ ಕಲಾವಿದರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಕ್ಷಗಾನದ ಕಾಲ್ಪನಿಕ ಪ್ರಸಂಗಗಳಲ್ಲಿ ಹಾಸ್ಯಕ್ಕಾಗಿ ಅನಗತ್ಯ ಜಾತಿಯ ಪಾತ್ರಗಳನ್ನು ದಯವಿಟ್ಟು ತುರುಕಬೇಡಿ ಎಂದು ಪ್ರಸಂಗಕರ್ತರಲ್ಲಿ ವಿನಂತಿಸುತ್ತೇನೆ. ಪುರಾಣ ಪ್ರಸಂಗಗಳಲ್ಲಿಯೂ ಅನಗತ್ಯ ಪಾತ್ರಗಳನ್ನು ಮುಂದುವರಿಸುವ ಅಗತ್ಯ ಇಲ್ಲ.

ಯಕ್ಷಗಾನದಲ್ಲಿ ಎಷ್ಟೆಲ್ಲಾ ಬದಲಾವಣೆ ತಂದಿದ್ದೇವೆ. ಈ ವಿಚಾರದಲ್ಲಿಯೂ ಸಮಾಜದ ಹಾಗೂ ಕಲಾವಿದರ ಒಳಿತಿಗಾಗಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ತರಬಾರದೇಕೆ? ವೃಥಾ ವಿವಾದಕ್ಕೆಡೆಯಾಗದಂತೆ ಸುಮ್ಮನಿರುವುದೇ ಒಳ್ಳೆಯದು. ಯಾವುದೇ ಜಾತಿ, ಹಾಗೂ ಸಂಬಂಧಿತ ವಿಚಾರಗಳನ್ನು ಅನಗತ್ಯವಾಗಿ ಅಪಹಾಸ್ಯ ಮಾಡದಿರುವುದರಿಂದ ವಿವಾದಗಳಿಂದ ದೂರವಿರಬಹುದು.  ಜಾತಿಯ ವಿಚಾರ ಬೇಡ. ಜಾತಿಯ ವಿವಾದದ ಕಿಚ್ಚನ್ನು ನೀರೆರೆದು ನಂದಿಸಿ.

ಬರಹ: ಯಕ್ಷರಸಿಕ