Wednesday, March 11, 2026
Home Blog Page 55

ಈ ನಿರೋಧ, ತಡೆಗಳು ಇವರಿಗೆ ಮಾತ್ರವೇ? ಸರ್ಪಸಂಸ್ಕಾರ ಪೂಜೆ ಮಾಡುವವರಿಗೆ  ಬೇಕಾಗಿದೆ ಜೀವನಕ್ಕೊಂದು ಆರ್ಥಿಕ ಭದ್ರತೆ 

0

ಈ ಪ್ರಪಂಚದಲ್ಲಿ ಎಂತೆಂತಹ ವೃತ್ತಿಗಳನ್ನು ಕೈಗೊಂಡು ಬದುಕನ್ನು ನಡೆಸುವವರಿದ್ದಾರೆ ಎಂದು ಯೋಚಿಸಿದಾಗ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಕೆಲವೊಂದು ದೇಶಗಳಲ್ಲಿ ಚಿತ್ರವಿಚಿತ್ರವಾದ ವೃತ್ತಿ, ಉದ್ಯೋಗಗಳನ್ನು ಮಾಡಿಕೊಂಡು ಜೀವನ ಸಾಗಿಸುವವರಿದ್ದಾರೆ. ಅದರಲ್ಲಿಯೂ ಆಫ್ರಿಕಾದ  ದೇಶಗಳಲ್ಲಿ, ದಕ್ಷಿಣ ಅಮೆರಿಕಾ ಖಂಡದ ದೇಶಗಳಲ್ಲಿ, ಚೀನಾ, ಅರಬಿಕ್ ರಾಷ್ಟ್ರಗಳಲ್ಲಿ ಕೆಲವೊಂದು ರೀತಿಯ ವಿಚಿತ್ರವಾದ ವೃತ್ತಿಗಳಿವೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಕೂಡ ಅಂತಹಾ, ನಾವು ಊಹಿಸದೇ ಇರುವಂತಹಾ ವೃತ್ತಿಗಳಿವೆ. 

ಇದರಲ್ಲೇನು ವಿಶೇಷ? ‘ಉದರನಿಮಿತ್ತಂ ಬಹುಕೃತ ವೇಷಂ’ ಎಂದು ಕೆಲವರು ವಾದಿಸಬಹುದು. ಅದು ಕೂಡಾ ಒಪ್ಪುವ ಮಾತೇ ಸರಿ. ಎಲ್ಲಾ ಉದ್ಯೋಗಗಳಲ್ಲಿಯೂ ಅದರದ್ದೇ ಆದ ನಿಯಮಗಳು, ಪ್ರತಿಬಂಧಕಗಳು ಇದ್ದೆ ಇರುತ್ತವೆ. ಆದರೆ ಕೆಲವೊಂದು ಉದ್ಯೋಗದಲ್ಲಿರುವ ನಿರೋಧ, ಅಡೆತಡೆ, ನಿಯಮಗಳು ನಿಮ್ಮನ್ನು ಸಾಮಾಜಿಕ ಜೀವನದಿಂದ ಪರೋಕ್ಷವಾಗಿ ವಿಮುಖರಾಗುವಂತೆ ಮಾಡುತ್ತವೆ.

ಅಂತಹ ಸಂದರ್ಭದಲ್ಲಿ ನೀವು ಸಾರ್ವಜನಿಕವಾಗಿ ದೇವಸ್ಥಾನಗಳಲ್ಲಿ ಪ್ರವೇಶ ಮಾಡಲು ಸಾಧ್ಯವಿಲ್ಲ, ನಿಮಗೆ ಶುಭ ಸಮಾರಂಭಗಳಲ್ಲಿ ಮುಕ್ತವಾಗಿ ಎಲ್ಲರೊಡನೆ ಬೆರೆಯಲು ಅಸಾಧ್ಯ.  

ಇನ್ನು ವಿಷಯಕ್ಕೆ ಬರೋಣ. ಭಾರತದಲ್ಲಿಯೇ ಖ್ಯಾತಿಯನ್ನು ಪಡೆದಿರುವಂತಹ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಗದೇವರ ಸಾನ್ನಿಧ್ಯವಿರುವ ದೇವಸ್ಥಾನ. ಇಲ್ಲಿ ನಾಗದೇವರಿಗೆ ಸಂಬಂಧಿತ ಎಲ್ಲಾ ಸೇವೆಗಳು ನಡೆಯುತ್ತವೆ. ಅಂತಹ ಸೇವೆಗಳನ್ನು ನಡೆಸುವ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವೂ ಒಂದು.

ಆಶ್ಲೇಷ ಬಲಿ, ಸರ್ಪಸಂಸ್ಕಾರ ಪೂಜೆ, ನಾಗಪ್ರತಿಷ್ಠೆ, ನಾಗತಂಬಿಲ ಮೊದಲಾದ ಸೇವೆಗಳಿಗೆ ಇಲ್ಲಿ ಪ್ರತಿದಿನವೂ ಅತಿಯಾದ ಜನಜಂಗುಳಿಯಿರುತ್ತದೆ. ಅದರಲ್ಲಿಯೂ ಸರ್ಪಸಂಸ್ಕಾರ ಪೂಜೆ ಮತ್ತು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇವೆಗಳಿಗೆ ವಿಪರೀತ ರಷ್. ಸರ್ಪಸಂಸ್ಕಾರ ಪೂಜೆಯಂತೂ ಕೇಳುವುದೇ ಬೇಡ. ಸರ್ಪಸಂಸ್ಕಾರ ಪೂಜೆಗಾಗಿ ನೀವು ಆನ್ಲೈನ್ ನಲ್ಲಿ ಮುಂಗಡ ಕಾಯ್ದಿರಿಸಬೇಕಾದರೆ ಸುಮಾರು ಒಂದೂವರೆ ತಿಂಗಳಿನಿಂದ ಎರಡು ತಿಂಗಳುಗಳ ವರೆಗೆ ಕಾಯಬೇಕು. ಈ ಸೇವಾಕಾಂಕ್ಷಿ ಭಕ್ತರು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆ. 

ಇನ್ನು ಸರ್ಪಸಂಸ್ಕಾರ ಪೂಜೆಯ ಬಗ್ಗೆ ಹೇಳುವುದಾದರೆ ಪ್ರತಿಯೊಬ್ಬ ಸೇವಾಕರ್ತರ ಪೂಜೆಗೂ ಇಲ್ಲಿ ಪ್ರತ್ಯೇಕವಾದ ಅರ್ಚಕರು (ಈ ಅರ್ಚಕರನ್ನು ಇಲ್ಲಿ ಸರ್ಪಸಂಸ್ಕಾರ ಕ್ರಿಯಾಕರ್ತರು ಎಂದು ಕರೆಯಲಾಗುತ್ತದೆ) ಇರುತ್ತಾರೆ. ಈ ಸರ್ಪಸಂಸ್ಕಾರ ಕ್ರಿಯಾಕರ್ತರು ಅಥವಾ ಅರ್ಚಕರನ್ನು ತಾತ್ಕಾಲಿಕ ದಿನಗೂಲಿ ಆಧಾರದ ಮೇಲೆ ದೇವಸ್ಥಾನದ ಆಡಳಿತ ಮಂಡಳಿಯೇ ನೇಮಕ ಮಾಡುತ್ತಿದೆ. ಸಾಧಾರಣವಾಗಿ ಸುಮಾರು ಇನ್ನೂರರ ಆಸುಪಾಸಿನ ಸಂಖ್ಯೆಯಲ್ಲಿ ಅಂತಹ ಅರ್ಚಕರಿದ್ದಾರೆ. ಒಂದು ಸರ್ಪಸಂಸ್ಕಾರ ಪೂಜೆಯು ಎರಡು ದಿನಗಳ ಕಾಲ ನಡೆಯುವುದರಿಂದ ಪೂಜಾಕರ್ತರಿಗೆ ಅಥವಾ ಕ್ರಿಯಾಕರ್ತರಿಗೆ ಎರಡು ದಿನಗಳಲ್ಲಿ ಸಂಭಾವನೆಯಾಗಿ ರೂ. 850/- ನೀಡಲಾಗುತ್ತದೆ. 

 ಇವರಿಗೆ ಸರ್ಪಸಂಸ್ಕಾರ ಕ್ರಿಯಾಕರ್ತರು ಎಂಬ ಹೆಸರು ಹೇಗೆ ಬಂತು ಎಂಬುದು ಗೊತ್ತಿಲ್ಲ. ಹಾಗೆ ನೋಡಿದರೆ ಪ್ರತಿಯೊಬ್ಬರೂ ಕ್ರಿಯಾಕರ್ತರೇ ಆಗಿರುತ್ತಾರೆ. ಎಲ್ಲರೂ ಒಂದಲ್ಲ ಒಂದು ಕ್ರಿಯೆಯಲ್ಲಿ ತೊಡಗಿರುವವರಾದ್ದರಿಂದ ಎಲ್ಲರೂ ಕ್ರಿಯಾಕರ್ತರು. ಆದರೆ ಇವರು ಸರ್ಪಸಂಸ್ಕಾರದ ಪೂಜೆಯನ್ನು ಮಾಡುವವರಾದ್ದರಿಂದ ‘ಸಹಾಯಕ ಅರ್ಚಕ’ರೆಂದು ಕರೆಯುವುದು ಉಚಿತ ಮತ್ತು ಅಗತ್ಯವೂ ಕೂಡ. ಆದರೆ ಅದಕ್ಕೆ ಬೇಕಾದ ಮೇಲ್ಮಟ್ಟದ ನೈತಿಕತೆ ಮತ್ತು ಸ್ವಭಾವವನ್ನು ಕ್ರಿಯಾಕರ್ತರು ಮೈಗೂಡಿಸಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ. 

ಸರ್ಪಸಂಸ್ಕಾರ ಪೂಜಾ ಸೇವೆ ಎರಡು ದಿನಗಳಲ್ಲಿ ನಡೆಯುತ್ತದೆ. ಪೂಜೆ ಪ್ರಾರಂಭವಾಗುವುದು ಮೊದಲನೆಯ ದಿನ ಸುಮಾರು ಒಂಭತ್ತು ಘಂಟೆಗೆ. ಆದಿನ ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ ಮುಗಿಯುತ್ತದೆ. ದಯವಿಟ್ಟು ಗಮನಿಸಿ. ಇಲ್ಲಿಗೆ ಪೂಜೆಯ ಅರ್ಧ ಭಾಗ ಮಾತ್ರ ಆಗಿರುತ್ತದೆ. ಉಳಿದರ್ಧ ಮರುದಿನ ಪ್ರಾತಃಕಾಲ ಐದೂವರೆ ಘಂಟೆಯಿಂದೆ ಏಳು ಘಂಟೆಯವರೆಗೆ ನಡೆಯುತ್ತದೆ.

ಒಂದನೇ ದಿನದ ಪೂಜೆ ಮಾಡಿದ ನಂತರ ಸೇವಾಕರ್ತರು ಒಂದು ದಿನದ ಸೂತಕ, ಮೈಲಿಗೆಯನ್ನು ಆಚರಿಸಬೇಕಾಗುತ್ತದೆ. ಎರಡನೇ ದಿನದ ಪೂಜೆ ಮುಗಿಯುವವರೆಗೆ ಅವರು ದೇವಸ್ಥಾನದ ಒಳಗಿನ ಪ್ರಾಂಗಣವನ್ನು ಪ್ರವೇಶ ಮಾಡುವಂತಿಲ್ಲ.

ಸೇವಾಕರ್ತರಿಗೆ ಕೇವಲ ಒಂದು ದಿನ ದೇವಸ್ಥಾನದ ಪ್ರವೇಶ ನಿಷಿದ್ಧ, ಆದರೆ ಸರ್ಪಸಂಸ್ಕಾರ ಅರ್ಚಕರಿಗೆ ಪ್ರತಿದಿನವೂ ದೇವಸ್ಥಾನದ ಪ್ರವೇಶ ನಿಷಿದ್ಧ! ಯಾಕೆಂದರೆ ಪ್ರತಿದಿನವೂ ಸರ್ಪಸಂಸ್ಕಾರ ಪೂಜೆ ಮಾಡುತ್ತಾರಲ್ಲ! ಅಷ್ಟು ಮಾತ್ರವಲ್ಲ, ಶುಭ ಸಮಾರಂಭ ಮತ್ತು ಮಂಗಳ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಿಲ್ಲ. ಇನ್ನು ತನ್ನ ಮನೆಯ ಪೂಜೆಯನ್ನು ಮಾಡುವ ವಿಧಾನದ ಬಗ್ಗೆ ಸರಿಯಾದ ಮಾಹಿತಿಯನ್ನು ಬಲ್ಲವರೇ ತಿಳಿಸಬೇಕು. 

 ಸ್ವಲ್ಪ ಯೋಚಿಸಿ ನೋಡಿ, ಎರಡನೇ ದಿನ ಪೂಜೆ ಮುಗಿದ ನಂತರ ಅಂದರೆ ಬೆಳಗ್ಗೆ ಸುಮಾರು ಏಳು ಘಂಟೆಯ ಹೊತ್ತಿಗೆ ಮೈಲಿಗೆ ನಿವಾರಣೆಯಾಗುತ್ತದೆ. ಆದರೆ ಒಂಭತ್ತು ಘಂಟೆಯ ಹೊತ್ತಿಗೆ ಮತ್ತೆ ಇನ್ನೊಂದು ಪೂಜೆಗೆ ಕ್ರಿಯಾಕರ್ತರು ತಯಾರಾಗಿ ಇರಬೇಕಾಗಿರುವುದರಿಂದ ಅವರಿಗೆ ಕೇವಲ ಒಂದು ಘಂಟೆಯ ಹೊತ್ತು ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಆದುದರಿಂದ ಸುಬ್ರಹ್ಮಣ್ಯ ದೇವಸ್ಥಾನವನ್ನು ಆ ಹೊತ್ತಿನಲ್ಲಿ ಸಂದರ್ಶಿಸಬಹುದೇ ಹೊರತು ಬೇರೆ ಯಾವುದೇ ದೇವಸ್ಥಾನವನ್ನು ಪ್ರವೇಶ ಮಾಡುವ ಅವಕಾಶವೇ ಇರುವುದಿಲ್ಲ.

ಮುಂಜಾನೆ ಎದ್ದು ದೇವರ ದರ್ಶನಕ್ಕಾಗಿಯೋ ಅಥವಾ ಸಾಯಂಕಾಲದ ಹೊತ್ತಿನ ದೇವಸ್ಥಾನದ ಭೇಟಿಗೆ ಅವಕಾಶ ಇರುವುದಿಲ್ಲ. ಅದೂ ಅಲ್ಲದೇ ಇವರು ಬೇರೆ ಯಾವುದೇ ಪುಣ್ಯಕ್ಷೇತ್ರ ಸಂದರ್ಶನವನ್ನು ಮಾಡುವ ಹಾಗಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಈ ಅರ್ಚಕರು ಅಥವಾ ಕ್ರಿಯಾಕರ್ತರು ಎಲ್ಲವನ್ನೂ ತ್ಯಾಗ ಮನೋಭಾವದಿಂದ ಸ್ವೀಕರಿಸಿ ಈ ಸೇವೆಗೆ ಬರುವ ಮನಮಾಡಿದ್ದಾರೆ. ಅವರಿಗೆ ಸ್ವತಂತ್ರ ಜೀವನ ಇರುವುದಿಲ್ಲ. ಅಂದರೆ ಎಲ್ಲರ ಹಾಗೆ ಎಲ್ಲೆಂದರಲ್ಲಿ ಹೋಗುವ ಹಾಗಿಲ್ಲ. ಎಲ್ಲದಕ್ಕೂ ಕೆಲವೊಂದು ಕಟ್ಟುಪಾಡುಗಳು, ಕೆಲವು ರೀತಿರಿವಾಜುಗಳು ಇರುವ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. 

ಆದರೂ ದಿನವೊಂದಕ್ಕೆ ಇವರಿಗೆ ನೀಡುವ ಸಂಭಾವನೆ (ರೂ. 850/-) ಕಡಿಮೆ ಎಂದೇ ಹೇಳಬೇಕಾಗುತ್ತದೆ. ದಕ್ಷಿಣೆಯ ಹಣದಿಂದಲಾದರೂ ಆದಾಯವನ್ನು ಸರಿದೂಗಿಸಬಹುದು ಎಂದು ಕ್ರಿಯಾಕರ್ತರು ಭಾವಿಸಿದ್ದರು. ಆದರೆ ಈಗೀಗ ದಕ್ಷಿಣೆ ಕೊಡುವ ಅಗತ್ಯ ಇಲ್ಲ ಎಂದು ಪರೋಕ್ಷವಾಗಿ ದೇವಸ್ಥಾನದ ಆಡಳಿತವು ಸೂಚನಾ ಫಲಕದ ಮೂಲಕ ಸೇವಾಕರ್ತರಿಗೆ ಸೂಚಿಸಿದೆ. ಸೇವಾಕರ್ತರಿಗೆ, ಭಕ್ತರಿಗೆ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಆಡಳಿತ ಮಂಡಳಿಯು ಈ ತೀರ್ಮಾನ ತೆಗೆದುಕೊಂಡಿರಬಹುದು. ಆದರೆ ಇದರಿಂದ ಪ್ರಾಮಾಣಿಕ ಕ್ರಿಯಾಕರ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ‌. 

ದಕ್ಷಿಣೆ ಎನ್ನುವುದು ಪೂಜೆಯ ಅಥವಾ ಯಾವುದೇ ವೈದಿಕ ಕಾರ್ಯಕ್ರಮದ ಒಂದು ಭಾಗ. ಒಂದು ವೈದಿಕ ಕ್ರಿಯೆಯು ಪರಿಪೂರ್ಣತೆಯನ್ನು ಹೊಂದಬೇಕಾದರೆ ಕೇವಲ ಸಾಂಕೇತಿಕವಾಗಿ ಆದರೂ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆಯುವುದು ಸಂಪ್ರದಾಯ. ಇಲ್ಲಿ ಯಾವುದೇ ಕಾನೂನಾತ್ಮಕ ಅಂಶಗಳು ತಲೆಹಾಕಬಾರದು. ಆದರೆ ದಕ್ಷಣೆಯನ್ನು ತೆಗೆದುಕೊಳ್ಳುವ ವ್ಯಕ್ತಿ ದುರಾಸೆಯ ದಾಸನಾಗಬಾರದು ಎನ್ನುವುದು ಕೂಡ ಅಷ್ಟೇ ಮುಖ್ಯ.

ಕ್ಷೇತ್ರದ ಒಂದು ವಸತಿಗೃಹದ ಸಿಬ್ಬಂದಿಗಳೂ ಕ್ರಿಯಾಕರ್ತರ ದಕ್ಷಿಣೆ ಬಗ್ಗೆ ವ್ಯಾಪಕ ಋಣಾತ್ಮಕ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಕ್ರಿಯಾಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ರೂಮ್ ಬಾಯ್ ಗಳು ಕೂಡ ದಕ್ಷಿಣೆ ಕೊಡಬೇಡಿ ಎಂದು ಹೇಳುತ್ತಾ ತಾವು ಮಾತ್ರ ವಸೂಲು ಮಾಡುತ್ತಿದ್ದಾರೆ ಎಂಬುದು ಗಾಳಿಸುದ್ದಿಯೋ ಎಂದು ಗೊತ್ತಿಲ್ಲ. 

ಪೂಜಾಕರ್ತರಿಗೆ ಅಥವಾ ಕ್ರಿಯಾಕರ್ತರಿಗೆ ಎರಡು ದಿನಗಳಲ್ಲಿ ಸಂಭಾವನೆಯಾಗಿ ರೂ. 850/- ನೀಡಲಾಗುತ್ತದೆ. ಅಂದರೆ ದಿನವೊಂದಕ್ಕೆ ರೂ. 850/- ಎಂದು ಅಂದುಕೊಂಡರೂ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಪೂಜೆ ಇರುವುದಿಲ್ಲ(ದಶಮಿ, ಏಕಾದಶಿ). ಉಳಿದಂತೆ ಒಂದೆರಡು ದಿನಗಳ ಅಗತ್ಯ ರಜೆಗಳನ್ನು ಸೇರಿಸಿದರೆ ಕೆಲಸದ ದಿನಗಳು ಕಡಿಮೆ ಆಗುತ್ತವೆ. ಸಂಭಾವನೆ ಕೂಡ ಕಡಿಮೆ ಆಗುತ್ತದೆ. ದಿನಸಂಬಳದ ಲೆಕ್ಕಾಚಾರ ಹಾಕುವಾಗ ಇದನ್ಮು ದಿನವೊಂದಕ್ಕೆ ರೂಪಾಯಿ 1500/- ಮಾಡಿ, ದಕ್ಷಣೆಯ ವಿಚಾರದಲ್ಲಿ ಬಿಗಿ ನಿಯಂತ್ರಣ ಕ್ರಮವನ್ನು ಕೈಗೊಂಡರೆ ಅದೊಂದು ಉತ್ತಮ ನಿರ್ಧಾರ ಆಗಬಹುದು.

ಈ ಲೇಖನದಲ್ಲಿ ಮೊದಲೇ ಹೇಳಿದಂತೆ ತ್ಯಾಗಿಗಳಾದ ಕ್ರಿಯಾಕರ್ತರಿಗೆ ಇದರಿಂದ ನ್ಯಾಯ ಸಲ್ಲಿಸಿದ ಹಾಗೆ ಆಗುತ್ತದೆ. ತನ್ನ ಅವಕಾಶ, ನಿದ್ರೆ ಮೊದಲಾದುವನ್ನು ತ್ಯಾಗ ಮಾಡಿದ ಕ್ರಿಯಾಕರ್ತರಿಗೆ ಒಂದು ಉಡುಗೊರೆಯೂ ಆಗಬಹುದು. ನಿವೃತ್ತಿ ವೇತನ, ಪಿಂಚಣಿಯ ಸೌಲಭ್ಯಗಳನ್ನು ಕೊಟ್ಟರೆ ವೃದ್ಧಾಪ್ಯದ ದಿನಗಳಲ್ಲಿ ಅದೊಂದು ಆಸರೆಯಾಗಿ ಪರಿಣಮಿಸುತ್ತದೆ.

ಬರಹ: ಕ್ಷೇತ್ರದ ಆರಾಧಕ ಮತ್ತು ಹಿತಚಿಂತಕ,  ದಕ್ಷಿಣ ಕನ್ನಡ ಜಿಲ್ಲೆ

ಪೂರಕ ಮಾಹಿತಿ;- ನಮ್ಮ ಸುಬ್ರಹ್ಮಣ್ಯ ಪ್ರತಿನಿಧಿ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯದಿಂದ ಕೊಡಮಾಡುವ ಸರ್ಪಸಂಸ್ಕಾರ ಮಾಹಿತಿ ಪತ್ರದ ಆಧಾರದಿಂದ

ಯಕ್ಷಗಾನ ನೇಪಥ್ಯ ಕಲಾವಿದ ಶ್ರೀ ತನಿಯಪ್ಪ ಜೋಗಿಯವರಿಗೆ ಸನ್ಮಾನ

0

ದಿನಾಂಕ. 18.02.2024ರಂದು ಅಣ್ಣೇರಪಾಲು ಕೊಣಾಜೆ ಎಂಬಲ್ಲಿ ನಡೆದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಕಟೀಲು ನಾಲ್ಕನೇ ಮೇಳದ ನೇಪಥ್ಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಅಣ್ಣೇರಪಾಲು, ಕೊಣಾಜೆ ಇವರ ಸೇವೆಯಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ (ನಾಲ್ಕನೇ ಮೇಳ) ಬಯಲಾಟವನ್ನು ಪ್ರದರ್ಶಿಸಲಾಯಿತು.

ಆ ಸಂದರ್ಭದಲ್ಲಿ ಕಟೀಲು ನಾಲ್ಕನೇ ಮೇಳದ ನೇಪಥ್ಯ ಕಲಾವಿದರಾದ ಶ್ರೀ ತನಿಯಪ್ಪ ಜೋಗಿಯವರಿಗೆ ಸನ್ಮಾನದ ಗೌರವವನ್ನು ಸಲ್ಲಿಸಲಾಯಿತು.

ತನಿಯಪ್ಪ ಜೋಗಿ ಇವರು ಪ್ರಸ್ತುತ ಕಟೀಲು 4ನೇ ಮೇಳದ ನೇಪಥ್ಯ ಕಲಾವಿದ. ಸರಳ ಸಜ್ಜನ ಹಾಗೂ ವಿನಯವಂತ. ಚೌಕಿಯಲ್ಲಿ ಇವರು ಎಲ್ಲರಿಗೂ ಪ್ರಿಯರು. ತನಗೆ ಒಪ್ಪಿಸಿದ ಕೆಲಸವನ್ನು ಚಾಚೂ ತಪ್ಪದೆ ಒಪ್ಪವಾಗಿ ಮಾಡಿ ಪೂರೈಸುತ್ತಾರೆ. ಇವರು 1954ನೇ ಇಸವಿ ಅಣ್ಣಪ್ಪ ಜೋಗಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಹುಟ್ಟೂರು ಕಾಸರಗೋಡು ಜಿಲ್ಲೆಯ ಜೋಡುಕಲ್ಲು.

1970ನೇ ಇಸವಿ ನೇಪಥ್ಯ ಕಲಾವಿದನಾಗಿ ಕಲಾಸೇವೆ ಆರಂಭಿಸಿದರು. ಮೊದಲು ಶ್ರೀ ನಾಗರಾಜ ಶೆಟ್ರ ಕುಂಡಾವು ಮೇಳದಲ್ಲಿ 2 ವರ್ಷ, ನಂತರ ಕರ್ನಾಟಕ ಮೇಳದಲ್ಲಿ 12 ವರ್ಷಗಳ ಕಲಾಸೇವೆ. ತನಿಯಪ್ಪ ಜೋಗಿ ನಂತರ ಕಣಿಪುರ ಮೇಳದಲ್ಲಿ 1 ತಿರುಗಾಟ. ಪ್ರಸ್ತುತ ಕಟೀಲು ಮೇಳದಲ್ಲಿ ಹಲವಾರು ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ.

ಹೆಂಡತಿಗೆ ಬೆಂಕಿ ಹಚ್ಚಿದ ಗಂಡ – ಸುಟ್ಟಗಾಯಗಳಿಂದ ಸಾವನ್ನಪ್ಪಿದ ಮಹಿಳೆ

0

ಪತಿಯೇ ತನ್ನ ಪತ್ನಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆಯಲ್ಲಿ ಮಹಿಳೆಯೊಬ್ಬರು ಕೆಲವೇ ಗಂಟೆಗಳಲ್ಲಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ.

ಪಟ್ಟಣಕ್ಕಾಡ್ ಮೂಲದ ಆರತಿ (32) ಮೃತ ದುರ್ದೈವಿ. ಆರತಿಯ ಪತಿ ಶ್ಯಾಮಜಿತ್(42) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 9:50ರ ಸುಮಾರಿಗೆ ಚೇರ್ತಲ ಆಸ್ಪತ್ರೆ ಬಳಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಶ್ಯಾಮಜಿತ್ ತನ್ನ ಪತ್ನಿ ಆರತಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಶ್ಯಾಮಜಿತ್ ಕೂಡ ಸುಟ್ಟ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರತಿ ಆವರು ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಬೆಳಗ್ಗೆ ತನ್ನ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಶ್ಯಾಮಜಿತ್‌ ದಾಳಿ ನಡೆಸಿದ್ದಾನೆ. ದಂಪತಿಗಳು ದೀರ್ಘಕಾಲದವರೆಗೆ ಬೇರೆ ಬೇರೆಯಾಗಿ ವಾಸವಾಗಿದ್ದರು ಮತ್ತು ವಿರಸಗಳನ್ನು ಹೊಂದಿದ್ದರು,

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ನಿರಂತರ’ ಖ್ಯಾತಿಯ ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ, ತುಳು-ಕನ್ನಡ-ಇಂಗ್ಲೀಷ್ ಭಾಷಾ ಸಾಹಿತಿ ಕೆ.ಟಿ.ಗಟ್ಟಿ ನಿಧನ

0

ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ ಕೆ. ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ, ಭಾಷಾತಜ್ಞ , ಅಧ್ಯಾಪಕರಾಗಿ ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದ ಕೆ.ಟಿ.ಗಟ್ಟಿಯವರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಸೇವೆ ಸಲ್ಲಿಸಿದವರು.

ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ ಕೆ.ಟಿ. ಗಟ್ಟಿ ಅವರು ಫೆಬ್ರವರಿ 19 ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಇವರ ತಂದೆ ಯಕ್ಷಗಾನ ಕಲಾವಿದರೂ ಆಗಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಕೂಡ್ಲು ಧೂಮಪ್ಪ ಗಟ್ಟಿಯವರ ಸುಪುತ್ರ ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ.‌ಗಟ್ಟಿ)

ಕೆ.ಟಿ ಗಟ್ಟಿಯವರು 80 ಕ್ಕೂ ಹೆಚ್ಚು ಕಾದಂಬರಿಗಳು, ಪ್ರಬಂಧಗಳು, ಕವನಗಳು ಮತ್ತು 50 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಹಾಗೂ ಇತರ ಕೃತಿಗಳನ್ನು ರಚಿಸಿದ್ದಾರೆ. ಇವರ ನಿರಂತರ ಎಂಬ ಕಾದಂಬರಿಯ ಆ ಕಾಲದಲ್ಲಿ ಬಹಳ ಜನಮೆಚ್ಚುಗೆ ಪಡೆಯಿತು.

ಸೌಮ್ಯ, ಮನೆ, ರಾಜಯಜ್ಞ, ನಿರಂತರ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ಥೆ, ಕೂಪ, ಬಿಸಿಲುಗುದುರೆ, ಮೃತ್ಯೋಮ ಅಮೃತಂಗಮಯ, ಯುಗಾಂತರ, ಶಿಲಾ ತಪಸ್ವಿ, ಸ್ವರ್ಣ ಮೃತ್ಯು, ಮತ್ತು ಅರಾಘ್ನಮೃತ ಅವರು ರಚಿಸಿದ ಕೆಲವು ಪ್ರಮುಖ ಕಾದಂಬರಿಗಳು.

ಜುಲೈ 22, 1938 ರಂದು ಕೇರಳದ ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ ಜನಿಸಿದ ಶ್ರೀ ಕೆ.ಟಿ. ಗಟ್ಟಿಯವರ ಸಾಹಿತ್ಯ ಕೃಷಿ ಎಳವೆಯಿಂದಲೇ ಆರಂಭವಾಗಿತ್ತು.

ಅವರು 80 ಕ್ಕೂ ಹೆಚ್ಚು ಕಾದಂಬರಿಗಳು, ಪ್ರಬಂಧಗಳು, ಕವನಗಳು ಮತ್ತು 50 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಶ್ರೀ ಗಟ್ಟಿಯವರು 10ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮತ್ತು ಎರಡನೇ ಕಾಸರಗೋಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಫೆಬ್ರವರಿ 25ಕ್ಕೆ ಅಮೋಘ ಯಕ್ಷಗಾನ ಪ್ರದರ್ಶನ – ಪುತ್ರಕಾಮೇಷ್ಠಿ, ಸೀತಾಪಹಾರ, ಜಟಾಯು ಮೋಕ್ಷ, ರಾವಣ ವಧೆ, ಶ್ರೀರಾಮ ನಿಜ ಪಟ್ಟಾಭಿಷೇಕ

0

ಯಕ್ಷಗಾನ ಪ್ರೇಮಿಗಳಿಗೆ ಫೆಬ್ರವರಿ 25ಕ್ಕೆ ಅಮೋಘ ಯಕ್ಷಗಾನ ಪ್ರದರ್ಶನ ಸವಿಯುವ ಭಾಗ್ಯ ದೊರೆಯಲಿದೆ.

ಪುತ್ತೂರು ಸಮೀಪದ ಬಿಲ್ವಗಿರಿ ಬೆಟ್ಟಂಪಾಡಿಯಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 25.02.2024ನೇ ಆದಿತ್ಯವಾರ ಸಂಜೆ ಘಂಟೆ 5.30ಕ್ಕೆ ಸರಿಯಗಿ ಶ್ರೀ ದುರ್ಗಾಂಬಾ ಕಲಾ ವೇದಿಕೆ, ಬಿಲ್ವಗಿರಿ ಬೆಟ್ಟಂಪಾಡಿ ಇಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ

‘ಪುತ್ರಕಾಮೇಷ್ಠಿ, ಸೀತಾಪಹಾರ, ಜಟಾಯು ಮೋಕ್ಷ, ರಾವಣ ವಧೆ, ಶ್ರೀರಾಮ ನಿಜ ಪಟ್ಟಾಭಿಷೇಕ’ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಗಂಡ ಹೆಂಡತಿ, ಅವಳಿ ಮಕ್ಕಳು ಶವವಾಗಿ ಪತ್ತೆ – ದಂಪತಿಯ ದೇಹದಲ್ಲಿ ಗುಂಡಿನ ಗಾಯಗಳು

0


ಫೆಬ್ರವರಿ 13, ಮಂಗಳವಾರದಂದು ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೊ ನಗರದಲ್ಲಿ ಕೇರಳದ ಒಂದೇ ಕುಟುಂಬದ ನಾಲ್ವರ ಸದಸ್ಯರು ಅವರ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ.

ತನಿಖೆ ನಡೆಸುತ್ತಿರುವ ಪೊಲೀಸರು ಇದು ಕೊಲೆ ಮತ್ತು ಆತ್ಮಹತ್ಯೆ ಎಂದು ತಿಳಿಸಿದ್ದಾರೆ.

ವರದಿಯ ಪ್ರಕಾರ, ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಆಲಿಸ್ ಪ್ರಿಯಾಂಕಾ ಬೆಂಜಿಗರ್ (40) ಮತ್ತು ಅವರ 4 ವರ್ಷದ ಅವಳಿ ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.

ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ, ಚಲನವಲನಗಳು ಬಾರದ ಹಿನ್ನೆಲೆಯಲ್ಲಿ, ಪರಿಶೀಲನೆಗಾಗಿ ಸೋಮವಾರ ಬೆಳಿಗ್ಗೆ ಅಲಮೇಡಾ ಡೆ ಲಾಸ್ ಪುಲ್ಗಾಸ್‌ನ 4100 ಬ್ಲಾಕ್‌ನಲ್ಲಿರುವ ಕುಟುಂಬದ ಮನೆಗೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಲಾಯಿತು.

ಆಗಮನದ ನಂತರ, ಅಧಿಕಾರಿಗಳು ಮನೆಯ ಒಳ ಪ್ರವೇಶಿಸಲು ಅನ್ಲಾಕ್ ಮಾಡಿದ ಕಿಟಕಿಯನ್ನು ಪತ್ತೆಹಚ್ಚಿದರು. ಒಳಗೆ, ಅವರು ಬಾತ್ರೂಮ್ನಲ್ಲಿ ಇಬ್ಬರು ವಯಸ್ಕರ ದೇಹಗಳನ್ನು ಕಂಡರು, ಇಬ್ಬರಿಗೂ ಗುಂಡಿನ ಗಾಯಗಳಾಗಿತ್ತು. ಘಟನಾ ಸ್ಥಳದಲ್ಲಿ 9 ಎಂಎಂ ಪಿಸ್ತೂಲ್ ಮತ್ತು ಲೋಡೆಡ್ ಮ್ಯಾಗಜೀನ್ ಕೂಡ ಪತ್ತೆಯಾಗಿದೆ.

ಐಟಿ ವೃತ್ತಿಪರರಾದ ಆನಂದ್ ಮತ್ತು ಆಲಿಸ್ ಕಳೆದ ಒಂಬತ್ತು ವರ್ಷಗಳಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರು. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಆಲಿಸ್ ಹಿರಿಯ ವಿಶ್ಲೇಷಕ ಹುದ್ದೆಯಲ್ಲಿದ್ದರು.

ಅವಳಿ ಮಕ್ಕಳು ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತನಿಖೆಯಲ್ಲಿದೆ, ಅವರು ದೈಹಿಕ ಬಾಹ್ಯ ಗಾಯಗಳ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ ಅವರನ್ನು ಉಸಿರುಗಟ್ಟಿಸಿರಬಹುದು, ಕತ್ತು ಹಿಸುಕಿರಬಹುದು ಅಥವಾ ವಿಷ ಕೊಟ್ಟಿರಬಹುದು ಎಂದು ಪೊಲೀಸರು ತಿಳಿಸಿದರು.

2016ರ ಡಿಸೆಂಬರ್‌ನಲ್ಲಿ ಆನಂದ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ನ್ಯಾಯಾಲಯದ ದಾಖಲೆಗಳು ಸೂಚಿಸುತ್ತವೆ, ಆದರೆ ಪ್ರಕ್ರಿಯೆಗಳು ಅಂತಿಮಗೊಂಡಿರಲಿಲ್ಲ. ಈ ಹಿಂದೆ ಮೊಬೈಲ್ ಗಳಿಗೆ ಬಂದ ಕರೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಆದರೂ ಆ ಘಟನೆಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ, ಮತ್ತು ತನಿಖಾಧಿಕಾರಿಗಳು ಇನ್ನೂ ಸಾವಿಗೆ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.

ಜೆ.ಇ.ಇ. ಪರೀಕ್ಷೆ – ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳ ಅಮೋಘ ಸಾಧನೆ

0


ಪ್ರಮಿತ್ ರೈ 99.69, ಆಕಾಶ್ ಶಿರಂತಡ್ಕ 99.47 ಪರ್ಸೆಂಟೈಲ್ ದಾಖಲು
14 ಮಂದಿಗೆ ಶೇಕಡಾ 95ಕ್ಕಿಂತಲೂ ಅಧಿಕ, 24 ಮಂದಿಗೆ 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್ ಅಂಕಗಳು

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ಕೃಷ್ಟ ಸಾಧನೆ ಮೆರೆದಿದ್ದಾರೆ.

ಪುತ್ತೂರು ಕೆದಂಬಾಡಿಯ ಕೆ. ಪುರಂದರ ರೈ ಮತ್ತು ಕೆ ಮೈನಾ ಪಿ ರೈ ದಂಪತಿಯ ಪುತ್ರ ಕೆ ಪ್ರಮಿತ್ ರೈ (99.69), ಕಾಸರಗೋಡು ಪೆರ್ಲದ ಮಧುಸೂದನ ಎಸ್ ಮತ್ತು ಮಮತಾ ದಂಪತಿಯ ಪುತ್ರ ಆಕಾಶ್ ಶಿರಂತಡ್ಕ (99.47), ಕುಶಾಲನಗರದ ಎ ಯು ಸುಂದರೇಶ್ ಮತ್ತು ಎ ಎಸ್ ಕವಿತಾ ದಂಪತಿಯ ಪುತ್ರ ರಾಹುಲ್ ಎ ಎಸ್ (97.94),

ಪುತ್ತೂರು ನರಿಮೊಗರಿನ ಡಾ. ರಾಮಮೋಹನ್ ಎಸ್ ಮತ್ತು ಸಂಧ್ಯಾ ಎಸ್ ದಂಪತಿಯ ಪುತ್ರಿ ಶಾರ್ವರಿ ಎಸ್ (97.90), ಪುತ್ತೂರು ಕೆದಂಬಾಡಿಯ ಸತೀಶ್ ನಾಯಕ್ ಪಿ ಮತ್ತು ಲಾವಣ್ಯ ಎಮ್ ಬಿ ದಂಪತಿಯ ಪುತ್ರಿ ಶೃಂಗ ನಾಯಕ್ ಪಿ (97.31), ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅನುಶ್ರೀ ಎ ಎಸ್ (96.79),

ಬಂಟ್ವಾಳ ಪೆರಮೊಗ್ರುವಿನ ಕೆ ವಿ ತಿರುಮಲೇಶ್ವರ ಭಟ್ ಮತ್ತು ಕೆ ಟಿ ಆಶಾ ದಂಪತಿಯ ಪುತ್ರ ಅಭಿರಾಮ ಕೆ. ಟಿ (96.71), ಬಂಟ್ವಾಳದ ಕುಡುಪಲ್ಲತಡ್ಕದ ವೆಂಕಪ್ಪ ಶರ್ಮ ಕೆ ಮತ್ತು ಸಹನಾ ಬಿ ದಂಪತಿಯ ಪುತ್ರ ವಿಶಾಂತ್ (96.16), ಬಂಟ್ವಾಳ ಕೊಳ್ನಾಡಿನ ಶಶಿಧರ ಭಂಡಾರಿ ಮತ್ತು ಸಂಧ್ಯಾ ಎಸ್ ಭಂಡಾರಿ ದಂಪತಿಯ ಪುತ್ರ ಅನುನಯ ಎಸ್ ಭಂಡಾರಿ (95.72),

ಕಡಬ ಕಾಣ ಯೂರಿನ ನಿರಂಜನ ಕೆ ಎನ್ ಮತ್ತು ಸ್ವರ್ಣಲತಾ ಎನ್ ಆಚಾರ್ಯ ದಂಪತಿಯ ಪುತ್ರ ನಿಧಿ ಎನ್ ಆಚಾರ್ಯ (95.62), ಬಂಟ್ವಾಳ ಅಡ್ಯನಡ್ಕದ ವಿಶ್ವನಾಥ್ ಎಂ ಮತ್ತು ರಮ್ಯ ಎಮ್ ದಂಪತಿಯ ಪುತ್ರ ವರುಣ್ ಎಮ್ (95.43), ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅಭಿಶ್ರೀ ಎ ಎಸ್ (95.16), ಪುತ್ತೂರು ಸಾಮೆತಡ್ಕದ ಎಮ್ ಪ್ರತಾಪ್‌ಚಂದ್ರ ರೈ ಮತ್ತು ಶಶಿಕಲಾ ಪಿ ರೈ ದಂಪತಿಯ ಪುತ್ರ ಗಗನ್‌ದೀಪ್ ರೈ (95.09),

ಪುತ್ತೂರು ದರ್ಬೆಯ ರಾಮಕೃಷ್ಣ ಪ್ರಕಾಶ್ ಬಿ ಮತ್ತು ಸುಜಾತ ಎಮ್ ದಂಪತಿಯ ಪುತ್ರ ಚೈತನ್ಯ ಬಿ (95), ಪುತ್ತೂರು ಚಿಕ್ಕಮೂಡ್ನೂರಿನ ಗ್ರೆಗೊರಿ ರೋನಿ ಪಾಯ್ಸ್ ಮತ್ತು ಮಾಬೆಲ್ ರೊಡ್ರಿಗಸ್ ದಂಪತಿಯ ಪುತ್ರಿ ಅನುಶಾ ಜೇನ್ ಪಾಯ್ಸ್ (94.37), ಪುತ್ತೂರು ಕೊಂಬೆಟ್ಟಿನ ಎಚ್ ವೆಂಕಟ್ರಾಯ ಪ್ರಭು ಮತ್ತು ಎಚ್ ವಿದ್ಯಾ ಪ್ರಭು ದಂಪತಿಯ ಪುತ್ರ ಎಚ್ ಸಮರ್ಥ್ ಪ್ರಭು (94.27), ಬಂಟ್ವಾಳ ತಾಲೂಕು ಕಲ್ಲಿಗೆಯ ಶಿವಪ್ರಸಾದ್ ಕೆ ಮತ್ತು ಗೀತಾ ದಂಪತಿಯ ಪುತ್ರ ಪ್ರಥಮ್ ಎಸ್ (94.02),

ಪುತ್ತೂರು ಮೊಟ್ಟೆತಡ್ಕದ ಗಣಪತಿ ಪಿ ಮತ್ತು ಸುಧಾ ಕೆ ದಂಪತಿಯ ಪುತ್ರ ಪವನ್ ಕುಮಾರ್ ಪಿ (93.95), ಸುಳ್ಯಪದವಿನ ಸೀತಾರಾಮ ಮೂಲ್ಯ ಎಸ್ ಮತ್ತು ಮಮತ ಬಿ ಡಿ ದಂಪತಿಯ ಪುತ್ರ ಸೃಜನ್ ಕುಮಾರ್ ಜಿ ಎಸ್ (93.62), ಬಂಟ್ವಾಳ ಅಡ್ಯನಡ್ಕದ ಎಸ್ ಶಂಕರನಾರಾಯಣ ಮತ್ತು ಸ್ವೌಮ್ಯ ಪ್ರಸನ್ನ ದಂಪತಿಯ ಪುತ್ರ ಗಣೇಶ್ ರಾಮ (93.33), ಸುಳ್ಯ ಮಣ ಕ್ಕರದ ಪದ್ಮನಾಭ ಕೆ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿ ಚಂದನಲಕ್ಷ್ಮಿ ಪಿ ಎನ್ (92.58), ಪುತ್ತೂರು ನೆಹರುನಗರದ ಹರೀಶ್ ಬಿ ಮತ್ತು ಪುಷ್ಪಲತಾ ಬಿ ದಂಪತಿಯ ಪುತ್ರಿ ಪೂರ್ವಿ ಎಚ್ ರಾವ್ (91.75) ,

ಈಶ್ವರಮಂಗಲದ ಕೃಷ್ಣಪ್ಪ ಗೌಡ ಎಂ ಮತ್ತು ಕೋಮಲ ಎಮ್ ದಂಪತಿಯ ಪುತ್ರಿ ಕೃತಿ ಕೆ ಎಮ್ (91.45), ಪುತ್ತೂರು ಬೊಳ್ವಾರಿನ ಶಶಿ ಕೆ ಕೆ ಮತ್ತು ಶ್ಯಾಮಲಾ ಸಿ ದಂಪತಿಯ ಪುತ್ರ ಹರಿಪ್ರಸಾದ್ ಕೆ ಎಸ್ (90.02) ಇವರುಗಳು ಉತ್ತಮ ಸಾಧನೆ ಮೆರೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ವಿಡಿಯೋ: ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕೆ ಕೇಸು ಹಾಕಿದಾಗ ಪೊಲೀಸರ ಕೈಬೆರಳನ್ನೇ ಕಚ್ಚಿದ ಸವಾರ – ಬೆಂಗಳೂರಿನಲ್ಲಿ ನಡೆದ ಘಟನೆ

0


ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಹೆಲ್ಮೆಟ್ ಇಲ್ಲದೇ ಸವಾರಿ ಮಾಡಿದ್ದಕ್ಕೆ ತಡೆದ ಟ್ರಾಫಿಕ್ ಪೋಲೀಸರ ಬೆರಳು ಕಚ್ಚಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಹೆಲ್ಮೆಟ್ ಇಲ್ಲದೆ ತನ್ನ ಸ್ಕೂಟಿ ಸವಾರಿ ಮಾಡಿದ್ದಕ್ಕಾಗಿ ಪೊಲೀಸರು ಕೇಸ್ ದಾಖಲಿಸಿದಾಗ ವ್ಯಕ್ತಿಯೊಬ್ಬ ಟ್ರಾಫಿಕ್ ಪೋಲೀಸಿನ ಬೆರಳನ್ನು ಕಚ್ಚಿದ್ದಾನೆ. ಫೆಬ್ರವರಿ 12 ರಂದು ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೈಯದ್ ಶಾಫಿ ಎಂಬ ಸವಾರನನ್ನು ತಡೆದ ಪೊಲೀಸರೊಂದಿಗೆ ಆತ ವಾಗ್ವಾದ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅವರ ತೀವ್ರ ವಾಗ್ವಾದದ ನಡುವೆ, ಶಫಿ ಅವರ ಸ್ಕೂಟಿ ಕೀಗಳನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಯಿದ್ದಾಗ ಪೊಲೀಸರ ಬೆರಳನ್ನು ಸವಾರ ಸೈಯದ್ ಕಚ್ಚಿದ.

ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ: “ಹೆಲ್ಮೆಟ್ ಇಲ್ಲ” ಉಲ್ಲಂಘನೆಗಾಗಿ ವ್ಯಕ್ತಿಯ ವಿರುದ್ಧ ಎಫ್‌ಟಿವಿಆರ್ (ಟ್ರಾಫಿಕ್ ಕಾನ್‌ಸ್ಟೆಬಲ್ ಬಳಸುವ ಮೊಬೈಲ್ ಫೋನ್) ಅನ್ನು ಬಳಸಿಕೊಂಡು ಸಂಪರ್ಕವಿಲ್ಲದ ಪ್ರಕರಣವನ್ನು ದಾಖಲಿಸಲಾಗಿದೆ.”

“ನಿಯಮ ಉಲ್ಲಂಘಿಸಿದವರು ಕಾನ್‌ಸ್ಟೆಬಲ್‌ಗೆ ಅಡ್ಡಿಪಡಿಸಿ ಮೊಬೈಲ್ ಫೋನ್ ಕಸಿದುಕೊಂಡರು. ಅವರನ್ನು ತಡೆದಾಗ, ಅವರು ಹಲ್ಲೆ ನಡೆಸಿ ಕಾನ್‌ಸ್ಟೆಬಲ್‌ನ ಬೆರಳನ್ನು ಕಚ್ಚಿದ್ದಾರೆ, ”ಎಂದು ಅವರು ಹೇಳಿದರು.

ಸೈಯದ್ ಶಫಿಯನ್ನು ತಕ್ಷಣವೇ ಬಂಧಿಸಲಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾದ ಎಂಟು ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಡುಗಡೆ – ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಗೆ ಕೃತಜ್ಞತೆ ಸಲ್ಲಿಸಿದ ಅಧಿಕಾರಿಗಳು – ಶೀಘ್ರದಲ್ಲೇ ಮೋದಿ ಕತಾರ್ ಗೆ ಭೇಟಿ

0

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾದ ಎಂಟು ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಶೀಘ್ರವಾಗಿ ಖುಲಾಸೆಗೊಳಿಸಿರುವುದು ಭಾರತದ ರಾಜತಾಂತ್ರಿಕತೆಗೆ ದೊಡ್ಡ ಮನ್ನಣೆಯಾಗಿದೆ.

ಭಾರತ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಕತಾರ್ ಜೈಲಿನಲ್ಲಿದ್ದ ಎಂಟು ನಾವಿಕರ ಪೈಕಿ ಏಳು ಮಂದಿ ಭಾರತಕ್ಕೆ ಮರಳಿದ್ದು, ಪ್ರಯಾಣ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಒಬ್ಬ ವ್ಯಕ್ತಿಯ ಪ್ರಯಾಣವು ವಿಳಂಬವಾಗಿದೆ.

ಸ್ವದೇಶಕ್ಕೆ ಮರಳಿದ ನಾವಿಕರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. “ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಲು ತುಂಬಾ ಸಂತೋಷವಾಗಿದೆ. ನಾವು ಮನೆಗೆ ಬರಲು 18 ತಿಂಗಳು ಕಾಯುತ್ತಿದ್ದೆವು. ಪ್ರಧಾನಿಯವರ ವೈಯಕ್ತಿಕ ಮಧ್ಯಸ್ಥಿಕೆಯಿಂದ ನಮ್ಮ ಬಿಡುಗಡೆ ಸಾಧ್ಯವಾಯಿತು” ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ.

ನೌಕಾಪಡೆಯ ಮಾಜಿ ಕ್ಯಾಪ್ಟನ್ ಗಳಾದ ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ, ಸೌರಭ್ ವಶಿಷ್ಠ್, ರಾಕೇಶ್ ಗೋಪಕುಮಾರ್ ಮಾಜಿ ಕಮಾಂಡರ್‌ಗಳಾದ ಅಮಿತ್ ನಾಗ್ಪಾಲ್, ಪುರ್ಣೇಂದು ತಿವಾರಿ, ಸುಗುಣಾಕರ್ ಪಕಾಲ ಮತ್ತು ಸಂಜೀವ್ ಗುಪ್ತಾ ಖುಲಾಸೆಗೊಂಡ ವ್ಯಕ್ತಿಗಳು.

ಅನುಭವಿ ಅಧಿಕಾರಿಗಳನ್ನು ಮುಕ್ತಗೊಳಿಸುವ ನಿರ್ಧಾರವನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ, “ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆ ಮತ್ತು ಮನೆಗೆ ಬರಲು ಅನುವು ಮಾಡಿಕೊಡಲು ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ.”

ಎಂಟು ಭಾರತೀಯ ಪ್ರಜೆಗಳು ಅಕ್ಟೋಬರ್ 2022 ರಿಂದ ಕತಾರ್‌ನಲ್ಲಿ ಜೈಲಿನಲ್ಲಿದ್ದರು ಮತ್ತು ಜಲಾಂತರ್ಗಾಮಿ ಕಾರ್ಯಕ್ರಮದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನೌಕಾಪಡೆಯ ನಿವೃತ್ತ ಸಿಬ್ಬಂದಿಗೆ ಕತಾರ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ, ಅದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ.

ಮಗುವನ್ನು ತೊಟ್ಟಿಲಲ್ಲಿಡುವ ಬದಲು ಒಲೆಯಲ್ಲಿಟ್ಟು ಕೆಲಸಕ್ಕೆ ಹೋದ ತಾಯಿ – ಮುಂದೇನಾಯ್ತು?

0

ತಾಯಿ ತೊಟ್ಟಿಲಿನಲ್ಲಿ ತೂಗಬೇಕಾದ ಮಗುವನ್ನು ನಿರ್ಲಕ್ಷ್ಯದಿಂದ ಒಲೆಯಲ್ಲಿಟ್ಟ ಘಟನೆ ನಡೆದಿದೆ. ಒಂದು ತಿಂಗಳ ಮಗು ಸಾವನ್ನಪ್ಪಿದೆ.

ಅಮೆರಿಕಾದಲ್ಲಿ ತಾಯಿಯ ನಿರ್ಲಕ್ಷ್ಯದಿಂದ ಒಂದು ತಿಂಗಳ ಹೆಣ್ಣು ಮಗು ದಾರುಣವಾಗಿ ಸಾವನ್ನಪ್ಪಿದೆ. ತಾಯಿ ತಪ್ಪಾಗಿ ಮಗುವನ್ನು ಮಲಗಲು ತೊಟ್ಟಿಲಿನ ಬದಲು ಒಲೆಯಲ್ಲಿ ಬಿಟ್ಟಿದ್ದಾಳೆ. ಮಗುವಿನ ದೇಹದ ಮೇಲೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಿದರೂ ಆಕೆಯನ್ನು ಉಳಿಸಲಾಗಲಿಲ್ಲ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಯುನೈಟೆಡ್ ಸ್ಟೇಟ್ಸ್‌ನ ಮಿಸೌರಿಯಲ್ಲಿ ಹೆಣ್ಣು ಶಿಶುವೊಂದು ಸಾವನ್ನಪ್ಪಿದೆ, ಆಕೆಯ ತಾಯಿ ಅವಳನ್ನು ತೊಟ್ಟಿಲಿನ ಬದಲಾಗಿ ಒಲೆಯಲ್ಲಿ ಮಲಗಲು ಇಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲೇ ಶಿಶು ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಬೆಚ್ಚಿ ಬೀಳಿಸುವ ದೃಶ್ಯ ಕಂಡುಬಂತು. ಮಗುವಿನ ದೇಹ ಮತ್ತು ಬಟ್ಟೆಗಳು ಬೆಂಕಿಯಿಂದ ಸುಟ್ಟುಹೋಗಿರುವುದನ್ನು ಅವರು ಕಂಡುಕೊಂಡರು. ಪರಿಣಾಮವಾಗಿ, ಅಧಿಕಾರಿಗಳು ಮಗುವಿನ ತಾಯಿ 26 ವರ್ಷದ ಮರಿಯಾ ಥಾಮಸ್ ನ್ನು ಬಂಧಿಸಿದ್ದಾರೆ.

ಶಿಶುವಿನ ತಾಯಿ, ಕನ್ಸಾಸ್ ನಗರದ ನಿವಾಸಿ ಮರಿಯಾ ಥಾಮಸ್ ಮೇಲೆ ಮಗುವಿನ ಯೋಗಕ್ಷೇಮವನ್ನು ಅಪಾಯಕ್ಕೆ ಒಳಪಡಿಸಿದ ಆರೋಪವನ್ನು ಹೊರಿಸಲಾಗಿದೆ.

ತನಿಖೆಯ ಸಮಯದಲ್ಲಿ, ಥಾಮಸ್ ಅವರು “ತನ್ನ ಮಗುವನ್ನು ನಿದ್ರೆಗಾಗಿ ತೊಟ್ಟಿಲಿಗೆ ಹಾಕುತ್ತಿದ್ದೇನೆ ಎಂದು ಭಾವಿಸಿದೆ ಮತ್ತು ಆಕಸ್ಮಿಕವಾಗಿ ಮಗುವನ್ನು ಒಲೆಯಲ್ಲಿ ಇರಿಸಿದೆ” ಎಂದು ಪೊಲೀಸರಲ್ಲಿ ಹೇಳಿದರು.

ಮರಿಯಾ ಥಾಮಸ್ ಅವರನ್ನು ಪ್ರಸ್ತುತ ಜಾಕ್ಸನ್ ಕೌಂಟಿ ಡಿಟೆನ್ಶನ್ ಸೆಂಟರ್‌ನಲ್ಲಿ ಇರಿಸಲಾಗಿದೆ ಮಕ್ಕಳ ಮೇಲಿನ ಅಪರಾಧವನ್ನು ಮಿಸೌರಿಯಲ್ಲಿ ಎ ವರ್ಗದ ಅಪರಾಧ ಎಂದು ವರ್ಗೀಕರಿಸಲಾಗಿದೆ, ಇದು 10 ರಿಂದ 30 ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿರುತ್ತದೆ.