ಕಟೀಲು ಮೇಳದ ಖ್ಯಾತ ಮದ್ದಳೆಗಾರರಾದ ಶ್ರೀ ಮುರಾರಿ ಕಡಂಬಳಿತ್ತಾಯರ ವಿವಾಹ ಸಮಾರಂಭ ಇತ್ತೀಚಿಗೆ ನಡೆಯಿತು. ಅವರ ಮದುವೆಯ ದಿನ ಸಹಜವಾಗಿಯೇ ಯಕ್ಷಗಾನ ಕಲಾವಿದರಲ್ಲಿ ಹಲವರು ಆಗಮಿಸಿದ್ದರು. ಇಷ್ಟು ಜನ ಕಲಾವಿದರೆಲ್ಲಾ ಒಂದೆಡೆಯಲ್ಲಿ ಸೇರಿದರೆ ಮತ್ತೆ ಕೇಳುವುದೇನು? ಕೂಡಲೇ ಅಲ್ಲಿ ದಿಢೀರ್ ಗಾನವೈಭವದ ರಸಪಾಕದ ಔತಣ ಸಿದ್ಧವಾಯಿತು. ಈ ಗಾನವೈಭವದ ವೀಡಿಯೋ ಚಿತ್ರೀಕರಣ ಮಾಡಿದ ಮಧುಸೂದನ ಅಲೆವೂರಾಯರು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಯೇ ಬಿಟ್ಟರು. ಅಲೆವೂರಾಯರ ಈ ವಿಡಿಯೋದ ಲಿಂಕ್ ಕೆಳಗೆ ಕೊಡಲಾಗಿದೆ. ನೋಡಿ ಆನಂದಿಸಿ.
ಮುರಾರಿ ಕಡಂಬಳಿತ್ತಾಯರ ಮದುವೆಯ ದಿನ ಗಾನವೈಭವ – ಮಧುಸೂದನ ಅಲೆವೂರಾಯರ ವೀಡಿಯೊ ನೋಡಿ
ಶ್ರೀ ಚಂದ್ರಶೇಖರ ಧರ್ಮಸ್ಥಳರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 4ನೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 1 ರಂದು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಚಂದ್ರಶೇಖರ ಧರ್ಮಸ್ಥಳರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 01 ಮಂಗಳವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.
ಕಲಾವಿದ ವಾದಿರಾಜ ಕಲ್ಲೂರಾಯರಿಗೆ ಈ ಸಾಲಿನ ಸಾಧನಾ ಪ್ರಶಸ್ತಿ
ಈ ವರ್ಷದ ಸಾಧನಾ ಪ್ರಶಸ್ತಿಗೆ ಉಪನ್ಯಾಸಕ, ಖ್ಯಾತ ಯಕ್ಷಗಾನ ಕಲಾವಿದ ಶ್ರೀ ವಾದಿರಾಜ ಕಲ್ಲೂರಾಯರು ಆಯ್ಕೆಯಾಗಿದ್ದಾರೆ. ಸಾಧನಾ ರಂಗಸಂಸ್ಥೆಯು ಪ್ರತಿವರ್ಷವೂ ಕ್ರಿಯಾಶೀಲ ಉಪನ್ಯಾಸಕರಿಗೆ ಕೊಡಮಾಡುವ ಈ ಪ್ರಶಸ್ತಿಯ ಗರಿ ಈ ಸಾಲಿನಲ್ಲಿ ಅಂದರೆ 2020ರಲ್ಲಿ ವಾದಿರಾಜ ಕಲ್ಲೂರಾಯರ ಮುಡಿಗೇರಲಿದೆ. ಶ್ರೀ ವಾದಿರಾಜ ಕಲ್ಲೂರಾಯರು ಉಪನ್ಯಾಸಕನಾಗಿ ಗುರುತಿಸಿಕೊಂಡುದು ಮಾತ್ರವಲ್ಲದೆ ಯಕ್ಷಗಾನ ಕಲಾವಿದನಾಗಿಯೂ ಹಾಗೂ ಇನ್ನಿತರ ಹತ್ತು ಹಲವು ಸಮಾಜಮುಖೀ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಾಮಂಜೂರಿನ ಸಂತ ರೇಮಂಡ್ಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕಟೀಲು ಮೇಳದಲ್ಲಿ ಕಲಾ ವ್ಯವಸಾಯವನ್ನೂ ಮಾಡುತ್ತಿದ್ದಾರೆ.
ಮಾತಿನ ಮಂಟಪದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರೊಂದಿಗೆ ಮಾತುಕತೆ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 3ನೇ ಕಾರ್ಯಕ್ರಮದಲ್ಲಿ ಇಂದು ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಸಮಯ ಇಂದು ಅಂದರೆ ಆಗಸ್ಟ್ 31 ಸೋಮವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ. ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.
ಉಡುವೆಕೋಡಿ ಸುಬ್ಬಪ್ಪಯ್ಯನವರ ರಾವಣ – ನೋಡಲೇ ಬೇಕಾದ ವೀಡಿಯೋ
ಆಗ ಕ್ಯಾಸೆಟ್ ಗಳ ಯುಗ.. ನನ್ನ ಚಿಕ್ಕಂದಿನಲ್ಲಿ ಅಂದರೆ ಹಲವಾರು ವರ್ಷಗಳ ಮೊದಲು ಉಡುವೆಕೋಡಿಯವರ ಅರ್ಥವನ್ನು ಕ್ಯಾಸೆಟ್ ನಲ್ಲಿ ಕೇಳಿದ್ದೆ. ಕೌರವನ ಅರ್ಥವಾಗಿತ್ತು ಅದು. ಆ ಪ್ರಸಂಗದಲ್ಲಿ ಕೌರವ ಪಾತ್ರಧಾರಿಗೆ ಒಂದೆರಡು ಪದ್ಯಗಳಿತ್ತೋ ಏನೋ ? ಆದರೆ ಆಗ ನನ್ನ ಮನಸ್ಸಿನಲ್ಲಿ ತನ್ನ ಪ್ರಭುದ್ದತೆಯ ಅರ್ಥಗಾರಿಕೆಯಿಂದ ಬಹಳಷ್ಟು ಪ್ರಭಾವವನ್ನು ಉಡುವೆಕೋಡಿ ಸುಬ್ಬಪ್ಪಯ್ಯನವರು ಬೀರಿದ್ದರು. ಆ ಪ್ರಭಾವ ಎಷ್ಟಿತ್ತೆಂದರೆ ಯಾವ ಪಾತ್ರಧಾರಿಯ ಕೌರವನ ಅರ್ಥ ಕೇಳಿದಾಗಲೂ ಉಡುವೆಕೋಡಿಯವರೇ ನೆನಪಾಗುತ್ತಿದ್ದರು. ಕೌರವ ಎಂದರೆ ಉಡುವೆಕೋಡಿ ಎಂದು ಭಾವಿಸುವಷ್ಟು ಪಾತ್ರದ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಆಮೇಲೆ ಅವರ ಅರ್ಥವನ್ನು ಕೇಳಬೇಕೆಂಬ ಬಯಕೆಯಿಂದ ಅಂತರ್ಜಾಲಗಳನ್ನು ಹುಡುಕಾಡಿದ್ದೆ. ಒಂದೆರಡು ಸಣ್ಣ ವೀಡಿಯೊ ತುಣುಕುಗಳು ಮಾತ್ರ ಗೋಚರಿಸಿತ್ತು. ಶೇಣಿ, ಸಾಮಗರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥಧಾರಿಗಳಲ್ಲಿ ಓರ್ವರಾಗಿದ್ದ ಹಾಗೂ ಅವರೊಡನೆ ತನ್ನ ಪ್ರಬುದ್ಧ ಮಾತುಗಾರಿಕೆಯಿಂದ ಗುರುತಿಸಿಕೊಂಡು ಅವರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದ ಉಡುವೆಕೋಡಿಯವರು ಆಮೇಲೆ ಸ್ವಲ್ಪ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸುವಲ್ಲಿ ಸ್ವಲ್ಪ ನಿರಾಸಕ್ತಿ ವಹಿಸಿದರೇನೋ ಎಂಬ ಸಂಶಯ ನನ್ನಲ್ಲಿ ಮನೆಮಾಡಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಅವರ ಅರ್ಥಗಾರಿಕೆಯು ಅಲ್ಲಲ್ಲಿ ಕೇಳಲು ಸಿಗತೊಡಗಿದ್ದು ತಾಳಮದ್ದಳೆಯ ರಸಿಕರ ಸೌಭಾಗ್ಯವೆಂದೇ ಹೇಳಬೇಕು. ಕೊರೋನಾ ಭಾದಿಸುವ ಕೆಲವೇ ದಿನಗಳ ಮೊದಲು ಅವರ ಮನೆಗೆ ಹೋಗಿ ಮಾತನಾಡಿಸಿದ್ದೆ. ಆಗ ಅವರಲ್ಲಿ ಇರುವ ಅರ್ಥಗಾರಿಕೆಯ ಧ್ವನಿಮುದ್ರಣಗಳ ಸಂಗ್ರಹವನ್ನು ಕೇಳಲು ಕೊಡುವುದಾಗಿ ಹೇಳಿದ್ದರು. ಆದರೆ ಅಷ್ಟರಲ್ಲೇ ಕೊರೋನಾ ಅವರಿಸತೊಡಗಿದ್ದುದರಿಂದ ಎಲ್ಲರೂ ಅವರವರ ವೃತ್ತಿ, ಕಾರ್ಯಕ್ಷೇತ್ರಗಳನ್ನು ಮರೆತು ಮನೆಯಲ್ಲಿಯೇ ಉಳಿಯುವಂತಾಯಿತು. ನಾನೂ ನಮ್ಮ ಬರವಣಿಗೆಯ ಕಾಯಕ ಮತ್ತು ಪತ್ರಿಕೆಯ ಕೆಲಸಗಳಿಗೆ ಒಂದು ಸಣ್ಣ ವಿರಾಮವನ್ನು ಘೋಷಿಸಿದ್ದೆ. ಆದರೆ ಇತ್ತೀಚೆಗೆ ಅವರ ರಾವಣನ ಅರ್ಥಗಾರಿಕೆಯ ವೀಡಿಯೊ ಒಂದನ್ನು ಯು ಟ್ಯೂಬ್ ಚಾನೆಲ್ ನಲ್ಲಿ ನೋಡುವ ಅವಕಾಶ ಒದಗಿ ಬಂತು. ಸೀತಾಪಹರದ ರಾವಣನಾಗಿ ಉಡುವೆಕೋಡಿಯವರು ಇಲ್ಲಿ ವಿಜೃಂಭಿಸಿದ್ದಾರೆ. ಇದು ಯಕ್ಷಗಾನ ಕಲಾವಿದ, ಛಾಯಾಗ್ರಾಹಕರೂ ಆದ ಶ್ರೀ ಮಧುಸೂದನ ಅಲೆವೂರಾಯರು ಅಪ್ಲೋಡ್ ಮಡಿದ ವೀಡಿಯೋ . ಇದಕ್ಕಾಗಿ ಮಧುಸೂದನ ಅಲೆವೂರಾಯರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಅವರ ವೀಡಿಯೋದ ಕೊಂಡಿಯನ್ನು ಕೆಳಗೆ ಕೊಡಲಾಗಿದೆ.
ಮಾತಿನ ಮಂಟಪವನ್ನು ಕಟ್ಟುವ ವೇಳೆಯಲ್ಲಿ ನಡುವೆ ನುಡಿಮುತ್ತುಗಳನ್ನು ಪೋಣಿಸುವುದು ಹಾಗೂ ಅರ್ಥಗರ್ಭಿತ ಮಾತುಗಳನ್ನು ಎಸೆಯುವುದು ಉಡುವೆಕೋಡಿಯವರ ಶೈಲಿ. ಅದನ್ನು ಈ ರಾವಣನ ಅರ್ಥಗಾರಿಕೆಯಲ್ಲಿ ಅಲ್ಲಲ್ಲಿ ಕೇಳಬಹುದು. ಉದಾಹರಣೆಗೆ, “ಹೋಮಕ್ಕೆ ತುಪ್ಪ ಹಾಕುವುದಕ್ಕೆ ಮುಂದಾದರೇ ಹೊರತು ನನ್ನ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಸಿದ್ಧರಾಗಲಿಲ್ಲ” “ಬಾಳೆ ಗೊನೆ ಹಾಕಿದ ಮೇಲೆ ಬಾಳೆಯ ಗೊನೆ. ಅದು ಬಾಳೆಗೆ ಗೊನೆ , ಬಾಳೆ ಕೊನೆ””ಆ ಎಸೆಯ ಓಲಗ .. ಅದು ಎಸೆಯಬೇಕಾದ ಓಲಗ “ಇಂತಹ ಹಲವು ಮಾತಿನ ಮುತ್ತುಗಳನ್ನು ಇದರಲ್ಲಿ ಕೇಳಬಹುದು. ಎಲ್ಲರೂ ನೋಡಲೇಬೇಕಾದ ಹಾಗೂ ಕೇಳಲೇ ಬೇಕಾದ ವೀಡಿಯೊ






