ದಿ. ವೇಣೂರು ಸುಂದರ ಆಚಾರ್ಯರ ಸಂಸ್ಮರಣಾ ಕಾರ್ಯಕ್ರಮವನ್ನು ವೇಣೂರಿನಲ್ಲಿ ಜುಲೈ 10 ರಂದು ನಡೆಸಲು ಉದ್ದೇಶಿಸಲಾಗಿದ್ದು ಸಮಿತಿಗೆ ಪದಾಧಿಕಾರಿಗಳನ್ನು ವೇಣೂರು ಯಾತ್ರಿ ನಿವಾಸದಲ್ಲಿ ಜರುಗಿದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನಿವೃತ್ತ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರವೀಂದ್ರ ಆಚಾರ್ಯ ವೇಣೂರು (ಗೌರವಾಧ್ಯಕ್ಷರು), ಖಂಡಿಗ ಶ್ರೀಧರಾಚಾರ್ಯ (ಅಧ್ಯಕ್ಷರು), ಉಪಾಧ್ಯಕ್ಷರಾಗಿ ಸದಾಶಿವ ಕುಲಾಲ್ ವೇಣೂರು, ಅಶೋಕ ಆಚಾರ್ಯ ವೇಣೂರು, ಚಂದ್ರಶೇಖರ ಭಟ್ ಕೊಂಕಣಾಜೆ, ಸದಾಶಿವ ಆಚಾರ್ಯ ವೇಣೂರು, ಕಾರ್ಯದರ್ಶಿಯಾಗಿ ಪ್ರಕಾಶ್ ಪುರೋಹಿತ್ ಇವರನ್ನು ಆಯ್ಕೆ ಮಾಡಲಾಯಿತು.
ಸಹ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಆಚಾರ್ಯ, ಕೋಶಾಧಿಕಾರಿಯಾಗಿ ಸೀತಾರಾಮಾಚಾರ್ಯ ವೇಣೂರು ಇವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿ ಪ್ರಭಾಕರ ಆಚಾರ್ಯ, ಸತೀಶ್ ಆಚಾರ್ಯ, ಪ್ರಭಾಕರ ಪ್ರಭು, ಗಂಗಾಧರ್ ಆಚಾರ್ಯ, ಮಮತಾ. ಬಿ ಆಚಾರ್ ಮಂಗಳೂರು, ಚಂದ್ರಹಾಸ ಆಚಾರ್ಯ ಮತ್ತು ಸಲಹೆಗಾರರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಸ್ಕರ ಅಂಡಿAಜೆ, ಯಶೋಧರ ಆರಿಗ ವೇಣೂರು ಇವರನ್ನು ಆಯ್ಕೆ ಮಾಡಲಾಯಿತು.
ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲಾಯಿತು. ಸದಾನಂದ ಆಚಾರ್ಯ ನೂರಾಲ್ ಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾರಾಮಾಚಾರ್ಯ ವೇಣೂರು ಸ್ವಾಗತಿಸಿ ಪ್ರಭಾಕರ ಪ್ರಭು ವಂದಿಸಿದರು.
17-07-2022 ರವಿವಾರದಂದು 45 ವರ್ಷದ ಒಳಗಿನ ಕಲಾವಿದರಿಂದ ‘ನೀರ್ಚಾಲು ಯಕ್ಷೋತ್ಸವ’ ನಡೆಯಲಿದೆ.
ನೀರ್ಚಾಲು ಶಾಲಾ ವಠಾರದಲ್ಲಿ ನಡೆಯುವ ಈ ಯಕ್ಷಗಾನ ಪ್ರದರ್ಶನದಲ್ಲಿ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಹಾಗೂ ಯಕ್ಷಸಾಧಕರಿಗೆ ಸನ್ಮಾನ ನಡೆಯಲಿದೆ. ವಿವರಗಳಿಗಾಗಿ ಕರಪತ್ರ ನೋಡಿ.
ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಕೂಡ್ಲು ಆನಂದ (76 ವರ್ಷ) ಇಂದು 16-06-2022 ಸಂಜೆ 3.30ಕ್ಕೆ ಕಾಸರಗೋಡಿನ ಕೂಡ್ಲಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಚಾರಿತ್ರಿಕ ಮಹತ್ವದ ಕೂಡ್ಲು ಮೇಳವೂ ಸೇರಿದಂತೆ ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಾವು ಕಣ್ಣರ ಗುರುತ್ವದಲ್ಲಿ ನಾಟ್ಯಾಭಿನಯ ಕಲಿತ ಅವರು ಕಾಸರಗೋಡು ಸುಬ್ರಾಯ ಹೊಳ್ಳರೇ ಮೊದಲಾದ ಶಿಷ್ಯರನ್ನು ಸಿದ್ಧಗೊಳಿಸಿದ್ದರು.
ಐದು ದಶಕಗಳಿಗಿಂತಲೂ ಹೆಚ್ಚು ಕಾಲ ತಾಳಮದ್ದಳೆ ಮತ್ತು ಬಯಲಾಟಗಳಲ್ಲಿ ಹವ್ಯಾಸಿ ಕಲಾವಿದರಾಗಿ ಕಲಾ ಸೇವೆ ಮಾಡಿದ ದಿ. ನಾರಾಯಣಚಾರ್ಯ ಗೇರುಕಟ್ಟೆ ಇವರ ನುಡಿನಮನ ಕಾರ್ಯಕ್ರಮ ಯಕ್ಷಾರಾಧನಾ ಪ್ರತಿಷ್ಠಾನ ನಾಳ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಜರುಗಿತು.
ಧಾರ್ಮಿಕ-ಸಾಂಸ್ಕೃತಿಕ ಮತ್ತು ಕಲಾಕ್ಷೇತ್ರದಲ್ಲಿ ನಾರಾಯಣಾಚಾರ್ಯರ ತೊಡಗಿಸಿಕೊಳ್ಳುವಿಕೆ ಬಗ್ಗೆ ಪ್ರೊ| ಮಧೂರು ಮೋಹನ ಕಲ್ಲೂರಾಯ ನೆನಪಿಸಿಕೊಂಡರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ್ ಮಾತನಾಡಿ ದೇವಳದ ಅಭಿವೃದ್ಧಿ ಕಾರ್ಯಕ್ರಮ ಮತ್ತು ಭಜನಾ ಸೇವೆಯಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು.
ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜನಾರ್ದನ ಪೂಜಾರಿ, ಶ್ರೀಮತಿ ಅಂಬಾ ಆಳ್ವಾ, ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಶೆಟ್ಟಿ, ವಿಠ್ಠಲ ಶೆಟ್ಟಿ ಉಪ್ಪಡ್ಕ, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು. ಯಕ್ಷಾರಾಧನಾ ಪ್ರತಿಷ್ಠಾನದ ರಾಘವ ಹೆಚ್ ಗೇರುಕಟ್ಟೆ ಸ್ವಾಗತಿಸಿ ವಂದಿಸಿದರು.
ಯಕ್ಷಗಾನ ಅಭ್ಯಾಸ ತರಗತಿಯ ಸುಮಾರು 50 ರಷ್ಟು ಕಲಾವಿದರು ಸರಿಸುಮಾರು ದಾಖಲೆಯ 72 ಪಾತ್ರಗಳನ್ನು ರಂಗದಲ್ಲಿ ಯಶಸ್ವಿಯಾಗಿ ನಿರ್ವಹಿಸಿ – ದುಬಾಯಿಯ ಯಕ್ಷಚರಿತ್ರೆಯಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಪ್ರಸ್ತುತಪಡಿಸಿದ ದುಬಾಯಿ ಯಕ್ಷೋತ್ಸವ 2022 – ಶ್ರೀ ಮಹಾದೇವೀ ಲಲಿತೋಪಖ್ಯಾನ ಯಕ್ಷಗಾನ ಪ್ರಸಂಗ ಮತ್ತು ಸಾಧನಾ ಸಂಭ್ರಮ 2021-22 ರ ಸಮಾರೋಪ ಸಮಾರಂಭ
ದುಬಾಯಿಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಜೂನ್ 11, 2022 ರ ಶುಕ್ರವಾರದಂದು ನಡೆದ – ದುಬಾಯಿ ಯಕ್ಷೋತ್ಸವ 2022 ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ ಯಕ್ಷಬ್ರಹ್ಮ ಖ್ಯಾತಿಯ ಕೀರ್ತಿಶೇಷ ಅಗರಿ ಶ್ರೀನಿವಾಸ ಭಾಗವತ ವಿರಚಿತ “ಶ್ರೀ ಮಹಾದೇವೀ ಲಲಿತೋಪಖ್ಯಾನ” “ಯಕ್ಷಮಯೂರ”, “ದ.ರಾ.ಬೇಂದ್ರೆ ಪ್ರಶಸ್ತಿ” ಪುರಸ್ಕೃತ ದುಬಾಯಿಯ ಯಕ್ಷಗುರು ಶ್ರೀಯುತ ಶೇಖರ್ ಡಿ. ಶೆಟ್ಟಿಗಾರರ ದಕ್ಷ ನಿರ್ದೇಶನದಲ್ಲಿ- ಶ್ರೀಯುತ ಶರತ್ ಕುಡ್ಲರ ನೃತ್ಯ ಸಂಯೋಜನೆಯೊಡನೆ –ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸದಸ್ಯರು, ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶಿಸಲ್ಪಟ್ಟು, ನೆರೆದ ಯಕ್ಷಪ್ರೇಮಿಗಳ ಮುಕ್ತಕಂಠದ ಪ್ರಶಂಸೆಗೆ ಮಾತ್ರವಲ್ಲದೆ ದೇಶ ವಿದೇಶಗಳ ಯಕ್ಷಾಭಿಮಾನಿಗಳ ಶ್ಲಾಘನೆಗೂ ಪಾತ್ರವಾಯಿತು.
ಧಾರ್ಮಿಕ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಶುಭಾರಂಭ ಲಲಿತಾಸಹಸ್ರನಾಮ ಪಠಣ, ಭಜನೆ ಮತ್ತು ಚೌಕಿ ಪೂಜೆಯಿಂದ ಆರಂಭಗೊಂಡ ಕಾರ್ಯಕ್ರಮ ಪೂರ್ವರಂಗ ಪ್ರದರ್ಶನದ ಮೂಲಕ ರಂಗಚಾಲನೆ ಪಡೆಯಿತು. ದೀಪ ಪ್ರಜಲ್ವನೆಯ ಮೂಲಕ ಗಣ್ಯರು ಮತ್ತು ಸುಮಂಗಲೆಯರು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಶುಭಕೋರಿದರು.
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ ಪ್ರದಾನ: ಪ್ರಸಂಗ ಪ್ರದರ್ಶನದ ಮಧ್ಯಾವಧಿಯಲ್ಲಿ, ಅಭ್ಯಾಸ ತರಗತಿಯ ವಿಶೇಷ ವಾರ್ಷಿಕ ಪ್ರಶಸ್ತಿ, ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ ಯನ್ನು ಹಿರಿಯ ಕಲಾವಿದ – ಸಂಘಟಕ ಶ್ರೀಯುತ ಪ್ರಭಾಕರ ಡಿ. ಸುವರ್ಣ ಕರ್ನಿರೆಯವರಿಗೆ ಗಣ್ಯರ ಸುಮ್ಮುಖದಲ್ಲಿ ನೀಡಲಾಯಿತು.
ಪ್ರಮುಖ ಪ್ರಾಯೋಜಕತ್ವದ ಮೂಲಕ ಪ್ರೋತ್ಸಾಹಿಸಿದ ಸಂಸ್ಥೆ ಭೀಮ ಗೋಲ್ಡ್ ಕೊಡುಗೆ: ಸದವಸರದಲ್ಲಿ ಅತಿಥಿ ಕಲಾವಿದರ ಸನ್ಮಾನ ಮತ್ತು ಭೀಮ ಗೋಲ್ಡ್ ಪ್ರಾಯೋಜಿತ ಬಂಗಾರದ ನಾಣ್ಯಗಳನ್ನು ನೀಡಲಾಯಿತು ಅಲ್ಲದೆ ಅದೃಷ್ಟ ಚೀಟಿ ವಿಜೇತರಿಗೆ ಬಂಗಾರದ ನಾಣ್ಯಗಳನ್ನು ನೀಡಲಾಯಿತು. ಶ್ರೀಯುತ ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರು, ಶ್ರೀಯುತ ಗಣೇಶ ರೈಯವರು ಅಭಿನಂದನಾ ಭಾಷಣ ನೆರವೇರಿಸಿ- ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮಕ್ಕೆ ರಂಜನೆ ನೀಡಿದ ಅಭ್ಯಾಗತ ಕಲಾವಿದರ ಸಮೂಹ: ಕಾರ್ಯಕ್ರಮದ ಕೇಂದ್ರಬಿಂದುವಾಗಿ ಭಾಗವತರಾದ ಯಕ್ಷಧ್ರುವ ಶ್ರೀಯುತ ಪಟ್ಲ ಸತೀಶ ಶೆಟ್ಟಿಯವರು ತಮ್ಮ ಭಾವಪೂರ್ಣ ಹಾಡುಗಾರಿಕೆ, ಭಕ್ತಿ-ಶೃಂಗಾರ, ವೀರ-ರೌದ್ರ ರಸಗಳ ರಮ್ಯ ಹಾಡುಗಾರಿಕೆಯಿಂದ ನೆರೆದ ಜನಸ್ತೋಮವನ್ನು ರಂಜಿಸಿದರು.
ಯಕ್ಷದಂಪತಿಗಳಾದ ಶ್ರೀಮತಿ ಅಮೃತ ಅಡಿಗ ತಮ್ಮ ಸುಮಧುರ ಕಂಠದ ಭಾಗವತಿಕೆ, ಮತ್ತು ಚೆಂಡೆ-ಮದ್ದಳೆಯಲ್ಲಿ ಶ್ರೀಯುತ ಕೌಶಿಕ್ ರಾವ್ ಪುತ್ತಿಗೆಯವರು ರಂಜಿಸಿದರೆ, ಚಂಡೆ- ಮದ್ದಳೆಯಲ್ಲಿ ಶ್ರೀಯುತ ಸವಿನಯ ನೆಲ್ಲಿತೀರ್ಥ, ಪ್ರಖ್ಯಾತ ಸ್ತ್ರೀವೇಷಧಾರಿ ದೀಪಕ್ ರಾವ್ ಪೇಜಾವರ ಮೋಹಿನಿ ಮತ್ತು ಲಲಿತಾಂಬಿಕೆಯ ಪಾತ್ರದಲ್ಲಿ ವಿಜೃಂಭಿಸಿದರು.
ಪ್ರಸಾಧನ –ವೇಷಭೂಷಣ ಕಲಾವಿದರಾಗಿ ಶ್ರಿಯುತ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ನಿತಿನ್ ಕುಂಪಲರು ಅಭ್ಯಾಗತರ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯರು, ಕಿರಿಯರು ಮತ್ತು ಬಾಲ ಬಾಲೆಯರ ಸಮತೂಕದ ಸ್ಪರ್ಧಾತ್ಮಕ ಯಕ್ಷಾಭಿನಯ-ನೃತ್ಯಗಳ ಮೇಲಾಟ: ವಿಶೇಷವಾಗಿ ಪುಟ್ಟ ಮಕ್ಕಳು- ಹಿರಿಯರೊಡನೆ ಸ್ಪರ್ಧೆಗೆ ಇಳಿದವರಂತೆ ರಂಗದಲ್ಲಿ ವಿಜೃಂಭಿಸಿ ಪ್ರಸಂಗ ಕಳೆಕಟ್ಟುವಂತೆ ಮಾಡಿದರು ಮಾತ್ರವಲ್ಲದೆ ಯಕ್ಷಾಭಿಮಾನಿಗಳ ವಿಶೇಷ ಮೆಚ್ಚುಗೆಗೆ ಪಾತ್ರರಾದರು. ಕರಾವಳಿ ಪ್ರದೇಶದ ಅವಿಭಜಿತ ದಕ್ಷಿಣಕನ್ನಡ-ಉತ್ತರಕನ್ನಡದ ಮಂದಿ, ಬೆಂಗಳೂರಿಗರು, ಮುಂಬಾಯಿಯ ಕಲಾಪ್ರೇಮಿಗಳು ತಮ್ಮ ಸಂದೇಶ, ಕರೆಗಳಿಂದ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ- ಪ್ರಾಯೋಜಕತ್ವ ವಹಿಸಿಕೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಿದ ದುಬಾಯಿಯ ಗಣ್ಯಾತಿಗಣ್ಯರು: ಗಣ್ಯರ ನೆಲೆಯಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ವಾಸು ಭಟ್ ಪುತ್ತಿಗೆ, ಶ್ರೀ ಸುಜಾತ್ ಶೆಟ್ಟಿ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಶ್ರೀ ಹರೀಶ್ ಶೇರಿಗಾರ್, ಶ್ರೀ ಹರೀಶ್ ಬಂಗೇರ, ಶ್ರೀ ಗುಣಶೀಲ್ ಶೆಟ್ಟಿ, ಶ್ರೀ ಸತೀಶ್ ಪೂಜಾರಿ, ಶ್ರೀ ನಾಗರಾಜ್ ರಾವ್, ಶ್ರೀ ಸುಧಾಕರ್ ರಾವ್ ಪೇಜಾವರ, ಶ್ರೀ ಆತ್ಮನಂದ ರೈ, ಶ್ರೀ ಪ್ರೇಮನಾಥ್ ಶೆಟ್ಟಿ, ಶ್ರೀ ವಿನೋದ್ ಕುಮಾರ್, ಶ್ರೀ ರಮಾನಂದ ಶೆಟ್ಟಿ, ಶ್ರೀ ರಾಮಚಂದ್ರ ಹೆಗ್ಡೆ, ಶ್ರೀ ರಮೇಶ್ ಶೆಟ್ಟಿ ಅಬುಧಾಬಿ, ಶ್ರೀ ಮನೋಹರ್ ತೋನ್ಸೆ, ಶ್ರೀ ಜಯರಾಮ್ ರೈ, ಶ್ರೀ ಸುಂದರ್ ಶೆಟ್ಟಿ, ಶ್ರೀ ಸುದರ್ಶನ್ ರೈ, ಶ್ರೀ ರಶ್ಮಿಕಾಂತ್ ಶೆಟ್ಟಿ, ಶ್ರೀ ಸಂದೀಪ್ ರೈ ನಂಜೆ, ಶ್ರೀ ರೋನಾಲ್ಡ್ ಮಾರ್ಟೀಸ್, ಶ್ರೀ ಯೋಗೀಶ್ ಪ್ರಭು ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರೆ, ಇವರ ಜೊತೆಗೆ ದುಬಾಯಿಯ ಅನೇಕ ಗಣ್ಯಾತಿಗಣ್ಯರು-ಉದ್ಯೋಗಪತಿಗಳು ಸಭಾ ಕಾರ್ಯಕ್ರಮ –ಸನ್ಮಾನ ಕಾರ್ಯಕ್ರಮದಲ್ಲಿ ಬಾಗವಹಿಸಿದರು. ಅನೇಕರು ಪ್ರಾಯೋಜಕತ್ವ ವಹಿಸಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತರು.
ಸಾಧನಾ ಸಂಭ್ರಮ 2021-2022 ರ ಸಮಾರೋಪ ಮತ್ತು ಸಂತೋಷಕೂಟ: ಜೂನ್ 12, ಆದಿತ್ಯವಾರದಂದು ನಡೆದ ಸಾಧನಾ ಸಂಭ್ರಮ 2021-22 ರ ಸಮಾರೋಪ ಸಮಾರಂಭದಲ್ಲಿ, ಕಾರ್ಯಕ್ರಮಕ್ಕಾಗಿ ದುಡಿದ ಕಾರ್ಯಕರ್ತರು, ಕಲಾ ಪೋಷಕರು, ಕಲಾವಿದರು ಹೆತ್ತವರ ಪ್ರೋತ್ಸಾಹವನ್ನು ನೆನಪಿಸಿಕೊಂಡು ಸಾದರ ಪೂರ್ವಕವಾಗಿ ನಮ್ಮ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು, ಎಲ್ಲರಿಗೂ ನೆನಪಿನ ಕಾಣಿಕೆಯನ್ನು ವಿತರಿಸಿದರು.
ತಮ್ಮ ಮಾದರಿ ನಾಯಕತ್ವದ ಮೂಲಕ ದುಬಾಯಿಯ ಯಕ್ಷಗಾನ ಅಭ್ಯಾಸ ತರಗತಿಯನ್ನು ಮುನ್ನಡೆಸುತ್ತಿರುವ – ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರ ಪರಿಶ್ರಮ ಬಹುಜನ ವಂದನೀಯವೆನಿಸಿತು. ಸಾಧನಾ ಸಂಭ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಮತ್ತು ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನೆರೆದ ಪ್ರಾಯೋಜಕರು ಪ್ರಶಸ್ತಿ ಪತ್ರ ವಿತರಿಸಿದರು.
ಮಾದರಿ ಸಂಘಟನೆಯ ಬೆನ್ನೆಲುಬಾಗಿ ನಿಂತ ಮಾದರಿ ಕಾರ್ಯಕರ್ತರ ಪಡೆ: ಸ್ವಾಗತ ದ್ವಾರ, ದೇವರ ಮಂಟಪ, ವಸಂತ ಮಂಟಪ, ರಂಗಸ್ಥಳ, ಚೌಕಿ, ವೇಷಭೂಷಣ ಪರಿಕರಗಳ ಸಂಯೋಜನೆ, ಅತಿಥಿಗಳ ಸ್ವಾಗತ, ಸಭಾ ಕಾರ್ಯಕ್ರಮಗಳ ನಿರ್ವಹಣೆ, ವಿಶೇಷವಾಗಿ ಮುದ್ರಣ, ಮಾಧ್ಯಮಗಳಲ್ಲಿ ನಿರಂತರ ಪ್ರಚಾರಕ್ಕಾಗಿ ಬಹುಸಂಖ್ಯೆಯ ಕಾರ್ಯಕರ್ತರು ಟೊಂಕಕಟ್ಟಿ, ಶಿಸ್ತಿನಿಂದ ದುಡಿದ ಕಾರ್ಯಕರ್ತರ ಪರಿಶ್ರಮ ಈ ಯಶಸ್ವಿ ಸಮಾರಂಭದ ಮೂಲದ್ರವ್ಯ ಎನ್ನುವುದನ್ನು ಯಾವತ್ತೂ ಮರೆಯುವಂತಿಲ್ಲ.
ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ತರಗತಿಯ ಮಹಿಳಾ ವಿಭಾಗದ ಕಾರ್ಯಕರ್ತರು ಅಭ್ಯಾಸ ತರಗತಿಗಳಿಗೆ ಮನೆಯೂಟ ಸಿದ್ಧಪಡಿಸಿಕೊಂಡು ಬಂದು ಸಹಕರಿಸಿದರೆ, ಕಾರ್ಯಕ್ರಮದ ದಿನ ಬಹುಮಂದಿ ದಾನಿಗಳು ಅನ್ನಸಂತರ್ಪಣೆಗೆ ಸಹಕರಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
ತರಗತಿ ಅಂಗಸಂಸ್ಥೆ ಯಕ್ಷಯೋಧಾಸ್ ನ ಸದಸ್ಯರ ಜೊತೆ ಕಟೀಲು ಫ್ರೆಂಡ್ಸ್ ಮತ್ತು ಬಿರುವೆರ್ ಕುಡ್ಲ ದುಬಾಯಿ ಘಟಕದ ಸದಸ್ಯರು ಸಹಕರಿಸಿದರು. ಒಟ್ಟಿನಲ್ಲಿ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನ ದುಬಾಯಿಯ ಯಕ್ಷಗಾನ ಚರಿತ್ರೆಯಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿತು.
ಜುಲೈ 09, 2022ರ ಶನಿವಾರದಂದು ನಡೆಯುವ ಖ್ಯಾತ ಯಕ್ಷಗಾನ ಭಾಗವತ ಕೀರ್ತಿಶೇಷ ಪದ್ಯಾಣ ಗಣಪತಿ ಭಟ್ಟರ ಸಂಸ್ಮರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀರಾಮ ದೇವಾಲಯ ಚೊಕ್ಕಾಡಿಯಲ್ಲಿ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಚೂಂತಾರು ಲೋಕಾರ್ಪಣೆಗೊಳಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬಂದ ಕಲಾವಿದರ ಸಮಾವೇಶ 31-05-2022 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊ0ಡಿತು.
ಪೂರ್ವಾಹ್ನ 9.00 ರಿಂದ 11.30ರವರೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ಇವರ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಪೂರ್ವಾಹ್ನ 11.30 ರಿಂದ 1.30ರ ವರೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ‘ಪ್ರಸ್ತುತ ಯಕ್ಷಗಾನದ ಅವಲೋಕನ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಕಲಾವಿದರಿಗೆ ಉಡುಗೊರೆಯನ್ನು ವಿತರಿಸಿದರು.
ನೂತನ ಮನೆ ನಿರ್ಮಿಸಿದ 16 ಮಂದಿ ಕಲಾವಿದರಿಗೆ ತಲಾ 10,000/- ನಗದು ಉಡುಗೊರೆಯೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿಂದಿನ ಸಮಾವೇಶದ ಬಳಿಕ ಅಗಲಿದ ಕಲಾವಿದರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡುವ ಉಡುಗೊರೆಗಳನ್ನು ಸಾಂಕೇತಿಕವಾಗಿ 15 ಮಂದಿ ಹಿರಿಯ ಕಲಾವಿದರಿಗೆ ವೇದಿಕೆಯಲ್ಲಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲೆ-ಕಲಾವಿದರನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರನ್ನು ಪರ್ಯಾಯ ಮಠಾಧೀಶರು ಶಾಲು, ಸ್ಮರಣಿಕೆ ಅಭಿವಂದನಾ ಪತ್ರದೊಂದಿಗೆ ಗೌರವಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಶುಭಾಶಂಸನೆಗೈದರು. ಅಭ್ಯಾಗತರಾಗಿ ಕುಯಿಲಾಡಿ ಸುರೇಶ್ ನಾಯಕ್, ಹಾರಾಡಿ ನಿತ್ಯಾನಂದ ಶೆಟ್ಟಿ, ಸಿ.ಎ ಗಣೇಶ್ ಕಾಂಚನ್, ಡಾ. ಚಂದ್ರಶೇಖರ ದಾಮ್ಲೆ, ಜೀವನ್‌ರಾಮ್ ಸುಳ್ಯ, ಎಂ.ಕೆ ಭಟ್ ಹೊನ್ನಾವರ, ಮಲ್ಪೆ ಕರುಣಾಕರ ಸಾಲಿಯಾನ್ ಪಾಲ್ಗೊಂಡಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ, ವಿ.ಜಿ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ : ಯಕ್ಷಗಾನ ಕಲಾರಂಗ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಸಿದ ಈ ವರ್ಷದ ‘ಉತ್ತರ ರಾಮಾಯಣ’ದ ಶೀರ್ಷಿಕೆಯಲ್ಲಿ ಜರಗಿದ ತಾಳಮದ್ದಲೆ ಸಪ್ತಾಹದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 29-05-2022 ರಂದು ಸಂಪನ್ನಗೊ0ಡಿತು.
ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀ ಕೆ. ಎಲ್. ಕುಂಡ0ತಾಯ ಅವರಿಗೆ ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.
ಎಸ್.ಎಂ. ಹೆಗಡೆ ಮುಡಾರೆಯವರಿಗೆ ಮರಣೋತ್ತರವಾಗಿ ನೀಡಿದ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಮುಡಾರೆಯವರ ಮಗಳು ಶ್ರೀಮತಿ ವಿಮಲಾ ಹೆಗಡೆಯವರು ಸ್ವೀಕರಿಸಿದರು.
ಯಕ್ಷಗಾನ ನಮ್ಮ ಆಸ್ತಿಕತೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಯಕ್ಷಗಾನ ಕಲಾರಂಗ ಕಲೆ, ಕಲಾವಿದರು ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅರ್ಥಪೂರ್ಣವಾದ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಶ್ರೀ ರಾಜಕುಮಾರ್ ಪಿ.ಎಚ್ ಸಂಸ್ಥೆಯ ವಾರ್ಷಿಕ ಸಂಚಿಕೆ ‘ಕಲಾಂತರ0ಗ 2021-22’ವನ್ನು ಬಿಡುಗಡೆಗೊಳಿಸಿದರು. ಹೊನ್ನಾವರದ ಶ್ರೀ ಕೃಷ್ಣಮೂರ್ತಿ ಶಿವಾನಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷ ಎಸ್. ವಿ. ಭಟ್ ಉಪಸ್ಥಿತರಿದ್ದರು.
ಸಂಸ್ಥಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಜತೆಕಾರ್ಯದರ್ಶಿ ಹೆಚ್.ಎನ್ ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು.