Tuesday, January 21, 2025
Home Blog Page 25

ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ ನಿಧನ.

ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ (75) ನಿನ್ನೆ(9-7-2024)ರಾತ್ರಿ ಹೊನ್ನಾವರದಲ್ಲಿ ನಿಧನರಾದರು.

ಅವರು ಪತ್ನಿ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಪ್ರಸಿದ್ಧ ಭಾಗವತರಾದ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆಯವರಲ್ಲಿ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದರು.

ಗುಂಡುಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ,ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳ ಕಲಾ ಸೇವೆ ಗೈದಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತ ಪಡಿಸುತ್ತಾ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಸರಳ ಸಜ್ಜನಿಕೆಯ ಕಲಾವಿದರು ಎಂದೇ ಮಾನಿತರಾಗಿದ್ದ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಳೆ ದಿನಾಂಕ 06.07.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ನಾಳೆ ದಿನಾಂಕ 06.07 2024ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾರೀ ಮಳೆಯ ಸಂಭಾವ್ಯತೆ ಇರುವುದರಿಂದ ಹಾಗೂ ಸಂಭಾವ್ಯ ಭೂಕುಸಿತಗಳನ್ನು ಗಮನದಲ್ಲಿಟ್ಟುಕೊಂಡು ಈ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿಯ ಪ್ರಕಟಣೆಯಿಂದ ತಿಳಿದುಬಂದಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ನಾಳೆ ದಿನಾಂಕ 06.07.2024ರಂದು ರಜೆ ಘೋಷಣೆ ಮಾಡಲಾಗಿದೆ

ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ – ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ

ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ನಿಧನರಾಗಿದ್ದಾರೆ. ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರು ತನ್ನ ಕಲಾಜೀವನದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕಲಾವಿದ ಮಾತ್ರವಲ್ಲದೆ ಅಪರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪುತ್ತೂರು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಶಾಂತಿನಗರದ ಬೇರಿಕೆ ಎಂಬಲ್ಲಿ ವಾಸವಾಗಿದ್ದ ಶ್ರೀಧರ ರಾಯರು ಇಂದು ಬೆಳಿಗ್ಗೆ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರು ಪತ್ನಿ, ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ

ಶ್ರೀ ಧರ್ಮಸ್ಥಳ ಮೇಳದ ರಂಗಸ್ಥಳ. ಕಡತೋಕ ಮಂಜುನಾಥ ಭಾಗವತರ ಹಾಡುಗಾರಿಕೆ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆವಾದನ. ಕುಂಬಳೆ ಸುಂದರ ರಾವ್, ವಿಟ್ಲ ಜೋಷಿ, ಪುತ್ತೂರು ನಾರಾಯಣ ಹೆಗ್ಡೆ, ಪಾತಾಳ ವೆಂಕಟರಮಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ನಯನ ಕುಮಾರ್, ಕಡಬ ಸಾಂತಪ್ಪ, ಬೆಳಾಲು ಧರ್ಣಪ್ಪ ನಾಯ್ಕ, ಬೆಳಾಲು ಶೀನ ಆಚಾರಿ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳನ್ನು ಮಾಡುತ್ತಾ ಬೆಳೆದು ಬಂದರು.

ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ಮಹಾಕಲಿ ಮಗದೇಂದ್ರ ಪ್ರಸಂಗದ ವಜ್ರಲೇಖೆ ಮೊದಲಾದ ಕಸೆ ಸ್ತ್ರೀವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಕುಂಬಳೆ ಶ್ರೀಧರ ರಾಯರು ಅದೇ ರಂಗಸ್ಥಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಅಡೂರು ಗಣೇಶ ರಾಯರೇ ಮೊದಲಾದವರ ಹಿಮ್ಮೇಳದಲ್ಲಿ ಪುರುಷ ಪಾತ್ರಗಳಲ್ಲಿಯೂ ಮಿಂಚಿದ್ದಾರೆ.

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ಕುಂಬಳೆ ಶ್ರೀಧರ ರಾಯರ ಹುಟ್ಟೂರು. 1948ನೇ ಇಸವಿ ಜುಲೈ 23ರಂದು ಮಾಲಿಂಗ ಮುಕಾರಿ ಮತ್ತು ಕಾವೇರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಸೂರಂಬೈಲು ಸರಕಾರೀ ಶಾಲೆಯಲ್ಲಿ 4ನೇ ತರಗತಿಯ ವರೇಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಬಡತನದ ಬೇಗೆ. ಹೊಟ್ಟೆಗೆ ಬಟ್ಟೆಗೆ ಇಲ್ಲದೆ ಕಷ್ಟವನ್ನನುಭವಿಸಿದ ದಿನಗಳು. ಶಾಲೆ ಅನಿವಾರ್ಯವಾಗಿ ಬಿಡಬೇಕಾಯಿತು.

ಪ್ರಸಿದ್ಧ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾಯರ ತೀರ್ಥರೂಪರು ಶ್ರೀ ಕುಂಞಕಣ್ಣ ಚೆಟ್ಟಿಯಾರರಿಂದ ಬಟ್ಟೆ ನೇಯುವ ಕೆಲಸವನ್ನು ಶ್ರೀಧರ ರಾಯರು ಕಲಿತರು. ಜತೆಗೆ ಕುಂಬಳೆ ಚಂದ್ರಶೇಖರರಿಂದ (ಕುಂಬಳೆ ಚಂದು) ಮತ್ತು ಕುಂಬಳೆ ಹಾಸ್ಯಗಾರ ಕಮಲಾಕ್ಷ ನಾಯಕ್ (ವಿಟ್ಲ ಜೋಯಿಸರ ಸಮಕಾಲೀನರು) ರಿಂದ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿದರು. ಅದೇ ಸಮಯದಲ್ಲಿ (1962) ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳ ಕುಂಬಳೆಗೆ ಬಂದಿದ್ದಾಗ ಕುಂಬಳೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು.

ಯಕ್ಷಗಾನದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ ಬೆಳೆದರು. ಮುಂದಿನ ವರ್ಷಗಳಲ್ಲಿ ನೂಜಿಪ್ಪಾಡಿ ಶಂಕರನಾರಾಯಣಪ್ಪಯ್ಯ ಯಜಮಾನಿಕೆಯ ಕುತ್ಯಾಳ ಗೋಪಾಲಕೃಷ್ಣ ಮೇಳದಲ್ಲಿ ಶೇಣಿಯವರ ಒಡನಾಟದಲ್ಲಿ ಕಲಾವಿದನಾಗಿ ಕಾಣಿಸಿಕೊಂಡರು.

ಎರಡು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯವನ್ನು ಮಾಡಿ ನಂತರ ಪೆರುವೊಡಿ ನಾರಾಯಣ ಭಟ್ಟರ ಸಂಚಾಲಕತ್ವದ ಮುಲ್ಕಿ ಮೇಳ ಮತ್ತೆ ಕೂಡ್ಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. 1970ರಲ್ಲಿ ಮತ್ತೆ ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳಕ್ಕೆ.

ಮುಂದಿನ ಮೂರು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿ ನಂತರ 42 ವರುಷಗಳಿಗೂ ಹೆಚ್ಚು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡಿದರು. ಹೀಗೆ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರದ್ದು 55 ವರುಷಗಳಿಗೂ ಮಿಕ್ಕಿದ ತಿರುಗಾಟ.


ಶೇಣಿ ಗೋಪಾಲಕೃಷ್ಣರಿಂದಲೇ ನಾನು ಮಾತುಗಾರಿಕೆ ಕಲಿತೆ. ಅವರು ಆಶೀರ್ವದಿಸಿದರು. ಅವರಿಂದಾಗಿಯೇ ನನಗೆ ಎಡನೀರು ಶ್ರೀಮಠ ಹತ್ತಿರವಾಯಿತು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ನನ್ನನ್ನು ಆಶೀರ್ವದಿಸಿದರು. ನಾನು ಶ್ರೀಮಠದ, ಶ್ರೀಗಳವರ ಭಕ್ತನೂ ಹೌದು ಶಿಷ್ಯನೂ ಹೌದು ಎಂದು ಹೇಳುತ್ತಿದ್ದ ಕುಂಬಳೆ ಶ್ರೀಧರ ರಾಯರು ಕಲಾವಿದನಾಗಿ ಶ್ರೀಮಠದ ಯಕ್ಷಗಾನ ಕಾರ್ಯ ಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು.

ಕಡತೋಕಾ, ಅಗರಿ, ಮಂಡೆಚ್ಚರು, ಹೊಳ್ಳರು, ಮಯ್ಯರ ಭಾಗವತಿಕೆಗೆ ವೇಷಗಳನ್ನು ಮಾಡಿ, ಶೇಣಿಯವರೊಂದಿಗೆ ಮಂಡೋದರಿ, ತಾರೆ ಮೊದಲಾದ ಪಾತ್ರಗಳನ್ನು ಮಾಡಿ, ಕುಂಬಳೆ ಸುಂದರ ರಾಯರ ಜತೆ ಲಕ್ಷ್ಮಿ, ಸತ್ಯಭಾಮೆ, ಕೆ. ಗೋವಿಂದ ಭಟ್ಟರ ಜತೆ ಹಲವು ವೇಷಗಳು, ನಯನ ಕುಮಾರರ ಬಾಹುಕ, ಬ್ರಾಹ್ಮಣ ಪಾತ್ರಗಳಿಗೆ ದಮಯಂತಿ, ದಾಕ್ಷಾಯಿಣಿ, ಅರುವ ಕೊರಗಪ್ಪ ಶೆಟ್ಟರ ಪುಷ್ಪಧ್ವಜ ಪಾತ್ರಕ್ಕೆ ಕನಕಮಾಲಿನಿಯಾಗಿ (ಪ್ರಸಂಗವೀರ ಪುಷ್ಪಧ್ವಜ) ಪುತ್ತೂರು ನಾರಾಯಣ ಹೆಗ್ಡೆಯವರ ಅಣ್ಣಪ್ಪ ಪಾತ್ರಕ್ಕೆ ಅಮ್ಮು ಬಲ್ಲಾಳ್ತಿಯಾಗಿ ಅಭಿನಯಿಸಿದ್ದ ಕುಂಬಳೆ ಶ್ರೀಧರ ರಾಯರು ತಮ್ಮ ಕಲಾಜೀವನವನ್ನು ಅವಿಸ್ಮರಣೀಯಗೊಳಿಸಿದ್ದರು.

ಕುಂಬಳೆ ಶ್ರೀಧರ ರಾಯರಿಗೆ ಯಕ್ಷದೀಪದ ಪರವಾಗಿ ಹಾಗೂ ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.

ಖ್ಯಾತ ಯಕ್ಷಗಾನ ಪ್ರಸಾದನ ತಜ್ಞ, ವೇಷಭೂಷಣಗಳ ನಿರ್ಮಾಪಕ ನಿಧನ

ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76 ವರ್ಷ) ಇಂದು (04-07-2024) ಮಣ ಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು.

ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು. ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕ್‌ರದ್ದು.

ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಕೃಷ್ಣ ನಾಯಕ್‌ರ ಕೊಡುಗೆ ಮಹತ್ತರವಾದುದು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶಪಾಲ್ ಸುವರ್ಣ, ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ್ಮನಾಭ ಗಾಣಿಗ ಹಾಗೂ ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ನಾಳೆ (05-07-2024) ಪೂರ್ವಾಹ್ನ 10.00 ಗಂಟೆಗೆ ಬ್ರಹ್ಮಾವರದಲ್ಲಿ ಜರಗಲಿದೆ.

ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜುಲೈ 7ನೇ ತಾರೀಕು ಆದಿತ್ಯವಾರ ಮಧ್ಯಾಹ್ನ 2:30 ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಸಹಭಾಗಿತ್ವದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಲಿದೆ.

ಶಿಬಿರವು ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬಳೆ, ಡಾ. ರವಿ ನಾರಾಯಣ ,ಸಂಜೀವಿನಿ ಕ್ಲಿನಿಕ್ ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ಸ್ ಕಬಕ ,ಸಿ ಕೆಮ್ ಫಾರ್ಮ್ ಸಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಲಿದೆ.

ಪ್ರಸಿದ್ಧ ವೈದ್ಯರಾದ ಡಾ. ಕೃಷ್ಣ ಮೋಹನ ಬಿ. ಆರ್. ಚಿನ್ಮಯ ಕ್ಲಿನಿಕ್ ಪೆರ್ಲ, ಡಾ. ಸತ್ಯನಾರಾಯಣ ಬಿ. ಪ್ರಶಾಂತಿ ಕ್ಲಿನಿಕ್ ಬಾಯಾರು ಶಿಬಿರವನ್ನು ನಡೆಸಿಕೊಡಲಿರುವರು.

ಅಧ್ಯಯನ ಯೋಗ್ಯ ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಪ್ರತಿಷ್ಠಾನ ಉಚಿತ ಆಯುರ್ವೇದ ಶಿಬಿರ ಹಾಗೂ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉಪಯುಕ್ತವಾಗುವ ಇನ್ನಿತರ ಶಿಬಿರಗಳನ್ನು ನಡೆಸಲಿದೆ ಎಂದು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.

ಶ್ರೀಮತಿ ಪರಿಣಯ, ಇಂದ್ರಕೀಲಕ, ಉತ್ತರ ಗೋಗ್ರಹಣ, ಶರಸೇತು ಬಂಧನ – ಕಟೀಲಿನಲ್ಲಿ ನಾಲ್ಕು ದಿನಗಳಲ್ಲಿ ನಾಲ್ಕು ಯಕ್ಷಗಾನ ಪ್ರದರ್ಶನಗಳು

ಜುಲೈ 6ರಿಂದ ಕಟೀಲು ಸರಸ್ವತಿ ಸದನದಲ್ಲಿ ನಾಲ್ಕು ದಿನಗಳಲ್ಲಿ ನಾಲ್ಕು ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ.

ಶ್ರೀಮತಿ ಪರಿಣಯ, ಇಂದ್ರಕೀಲಕ, ಉತ್ತರ ಗೋಗ್ರಹಣ, ಶರಸೇತು ಬಂಧನ ಎಂಬ ಪ್ರಸಂಗಗಳನ್ನು ಕಟೀಲಿನಲ್ಲಿ ನಾಲ್ಕು ದಿನಗಳಲ್ಲಿ ಪ್ರಸಿದ್ಧ ಕಲಾವಿದರು ಆಡಿ ತೋರಿಸಲಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಚಿತ್ರವನ್ನು ನೋಡಿ.

ಸತ್ಸಂಗದ ಕೊನೆಗೆ ನಿರ್ಗಮನ ವೇಳೆಯಲ್ಲಿ ಕಾಲ್ತುಳಿತದಲ್ಲಿ 116 ಮಂದಿ ಸಾವು – ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಭೀಕರ ಘಟನೆ

ಹತ್ರಾಸ್‌ನಲ್ಲಿ ನಡೆದ ಸತ್ಸಂಗದಲ್ಲಿ ಕಾಲ್ತುಳಿತದಿಂದ 116 ಸಾವು ವರದಿಯಾಗಿದೆ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ನಡೆದ ‘ಸತ್ಸಂಗ’ (ಧಾರ್ಮಿಕ ಕಾರ್ಯಕ್ರಮ)ದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ.

ಈವರೆಗೆ 116 ಮಂದಿ ಸಾವನ್ನಪ್ಪಿದ್ದಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಅಲಿಗಢ) ಶಲಭ್ ಮಾಥುರ್ ಹೇಳಿದ್ದಾರೆ. “ಕಾರ್ಯಕ್ರಮದಲ್ಲಿ ಅನುಮತಿಸಿದ್ದಕ್ಕಿಂತ ಹೆಚ್ಚು ಜನಸಂದಣಿ ಇದ್ದ ಕಾರಣ ಸತ್ಸಂಗದ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ” ಎಂದು ಅವರು ಹೇಳಿದರು.
ಸಾವನ್ನಪ್ಪಿದ 116 ಜನರಲ್ಲಿ 108 ಮಹಿಳೆಯರು, ಏಳು ಮಕ್ಕಳು ಮತ್ತು ಒಬ್ಬ ಪುರುಷ. ಈ ಪೈಕಿ ಇದುವರೆಗೆ 72 ಜನರನ್ನು ಗುರುತಿಸಲಾಗಿದೆ.

ರಾಜ್ಯ ಸರ್ಕಾರದಿಂದ ಮೃತರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ನೀಡಲಿದೆ ಎಂದು ತಿಳಿದುಬಂದಿದೆ.

ಸಕರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಎಂದು ಕರೆಯಲ್ಪಡುವ ಸ್ವಯಂ-ಘೋಷಿತ ದೇವಮಾನವ ನಾರಾಯಣ ಸಾಕರ್ ಹರಿಗಾಗಿ ಮಾನವ್ ಮಂಗಲ್ ಮಿಲನ್ ಸದ್ಭಾವನಾ ಸಮಾಗಮ್ ಸಮಿತಿಯು ಸತ್ಸಂಗವನ್ನು ಆಯೋಜಿಸಿದೆ. ಕಾಲ್ತುಳಿತ ಘಟನೆಯ ನಂತರ ಪತ್ತೆಯಾಗದ ಭೋಲೆ ಬಾಬಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಲ್ತುಳಿತದಲ್ಲಿ ಭಕ್ತರು ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ನರಳಿದರು ಮತ್ತು ದೇಹಗಳು ಪರಸ್ಪರರ ಮೇಲೆ ರಾಶಿ ಬಿದ್ದು ಸತ್ತು ಹೋದರು .

ಸ್ಥಳದಿಂದ ವೀಡಿಯೊಗಳು ಜನರು ಬಲಿಪಶುಗಳನ್ನು, ಸತ್ತ ಅಥವಾ ಪ್ರಜ್ಞಾಹೀನರನ್ನು ಆಂಬ್ಯುಲೆನ್ಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳಲ್ಲಿ ಸಿಕಂದರ ರಾವ್ ಟ್ರಾಮಾ ಸೆಂಟರ್‌ಗೆ ಕರೆತರುತ್ತಿರುವುದನ್ನು ತೋರಿಸಿದೆ.

ಸಿಕಂದರಾ ರಾವ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವೇಂದ್ರ ಕುಮಾರ್ ಪ್ರಕಾರ, ಕಾರ್ಯಕ್ರಮದ ಕೊನೆಯಲ್ಲಿ ‘ಸತ್ಸಂಗ’ ನಡೆಸಿದ ಭೋಲೆ ಬಾಬಾರ ದರ್ಶನ ಪಡೆಯಲು ಭಕ್ತರು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ.

ಅವರು ಬಾಬಾನ ಪಾದದ ಸುತ್ತಲೂ ಸ್ವಲ್ಪ ಮಣ್ಣನ್ನು ಸಂಗ್ರಹಿಸಲು ಬಯಸಿದ್ದರು ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಹಾಯವಾಣಿ ಕೇಂದ್ರವನ್ನು ತೆರೆದಿದೆ. ಸಾರ್ವಜನಿಕರಿಗಾಗಿ 05722227041 ಮತ್ತು 05722227042. ನಂಬರ್‌ ಗಳನ್ನು ನೀಡಿದೆ.

ಶ್ರೀಕೃಷ್ಣ ಪಾರಿಜಾತ, ವಸ್ತ್ರಾಪಹಾರ, ದುಶ್ಶಾಸನ ವಧೆ

ಶ್ರೀಕೃಷ್ಣ ಪಾರಿಜಾತ, ವಸ್ತ್ರಾಪಹಾರ, ದುಶ್ಶಾಸನ ವಧೆ

ಕಟೀಲು ಮೇಳದ ಖ್ಯಾತ ಅನುಭವೀ ಕಲಾವಿದರಾದ ವಾಟೆಪಡ್ಪು ವಿಷ್ಣು ಶರ್ಮರು ಬರೆದ ಕೃತಿಯಿದು. ರಂಗದಲ್ಲಿ ಸಹ ಕಲಾವಿದರ ಜತೆ ಉತ್ತಮ ರೀತಿಯಲ್ಲಿ ಸಂಭಾಷಿಸುವ ಶ್ರೀ ವಿಷ್ಣು ಶರ್ಮರೊಂದಿಗೆ ಮೇಳದ ತಿರುಗಾಟ ನಡೆಸುವ ಅವಕಾಶ ಮತ್ತು ಭಾಗ್ಯವು ನನಗೂ ಸಿಕ್ಕಿದೆ. ರಂಗದಲ್ಲಿ ಅವರೊಂದಿಗೆ ಅಭಿನಯಿಸಿದ್ದೇನೆ, ಸಂಭಾಷಿಸಿದ್ದೇನೆ. ಆ ಕ್ಷಣಗಳನ್ನು ಅನುಭವಿಸಿ ಸಂತೋಷಪಟ್ಟಿದ್ದೇನೆ. ಅವರ ಒಡನಾಟವು ಸದಾ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳು. ಮುಂದೆಯೂ ಆ ಅವಕಾಶವು ಬರಬಹುದೆಂದು ಭಾವಿಸುವೆ.

ಈ ಪುಸ್ತಕದಲ್ಲಿ ಶ್ರೀ ವಿಷ್ಣು ಶರ್ಮರು ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ, ದ್ರೌಪದಿ ವಸ್ತ್ರಾಪಹಾರ ಮತ್ತು ದುಶ್ಶಾಸನ ವಧೆ ಎಂಬ ನಾಲ್ಕು ಪ್ರಸಂಗಗಳಿಗೆ ಪದ್ಯ ಸಹಿತ ಸಂಭಾಷಣೆಗಳನ್ನು ಬರೆದು ನೀಡಿರುತ್ತಾರೆ. ಸರಳ ಸುಂದರವಾಗಿ ಸಂಭಾಷಣೆಗಳನ್ನು ಬರೆದಿರುತ್ತಾರೆ. ಹವ್ಯಾಸಿ ಮತ್ತು ವೃತ್ತಿ ಕಲಾವಿದರಿಗೂ ಇದು ಉಪಯುಕ್ತ ಪುಸ್ತಕವು.

ಈ ಕೃತಿಯ ಪ್ರಕಟಣೆಗೆ ಸಹಕಾರ ನೀಡಿದವರು ಶ್ರೀ ಭಾಸ್ಕರ ಆಳ್ವ, ಪನ್ಪೇವ್, ಮುಂಬಯಿ. ಇದು 2023ರಲ್ಲಿ ಬಿಡುಗಡೆಯಾಗಿತ್ತು. ಕಟೀಲು ಆರೂ ಮೇಳಗಳ ಪ್ರಥಮ ಸೇವೆಯಾಟದ ಶುಭ ದಿನದಂದು ಈ ಪುಸ್ತಕವು ಓದುಗರ ಕೈ ಸೇರಿತ್ತು.

ನೂರ ಎಪ್ಪತ್ತಾರು ಪುಟಗಳ ಈ ಪುಸ್ತಕದ ಬೆಲೆ ರೂಪಾಯಿ ನೂರ ಎಂಭತ್ತು ಮಾತ್ರ. ಮುದ್ರಕರು ಶ್ರೀ ಅನಂತ ಪ್ರಕಾಶ ಮುದ್ರಣಾಲಯ ಕಿನ್ನಿಗೋಳಿ. ಈ ಪುಸ್ತಕವನ್ನು ಶ್ರೀ ಶರ್ಮರು ತಮ್ಮ ಸಹಕಲಾವಿದರಾಗಿದ್ದ ದಿವಂಗತ ಕಟೀಲು ಶ್ರೀನಿವಾಸ ರಾವ್ ( ಶೀನಯ್ಯ) ಅವರಿಗೆ ಅರ್ಪಿಸಿದ್ದಾರೆ.

ಹಿರಿಯ ಕಲಾವಿದರಾದ ಸುಣ್ಣಂಬಳ ಶ್ರೀ ವಿಶ್ವೇಶ್ವರ ಭಟ್ ಈ ಪುಸ್ತಕದ ಬಗೆಗೆ “ಪ್ರಯೋಜನ ಸಿದ್ಧಿ” ಎಂಬ ಶೀರ್ಷಿಕೆಯಡಿ ಬರೆದ ಲೇಖನವೂ ಕಟೀಲು ಮೇಳದ ಭಾಗವತರಾದ ಅಂಡಾಲ ಶ್ರೀ ದೇವೀಪ್ರಸಾದ ಶೆಟ್ಟಿ ಅವರು ಬರೆದ ಲೇಖನವೂ ಈ ಪುಸ್ತಕದಲ್ಲಿದೆ. ಸಹ ಕಲಾವಿದರೂ, ಆತ್ಮೀಯರೂ ಆದ ಶ್ರೀ ವಿಷ್ಣು ಶರ್ಮ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

ಪುಸ್ತಕದ ಲೇಖಕರು: ವಾಟೆಪಡ್ಪು ವಿಷ್ಣು ಶರ್ಮ
ಪೋನ್: 9901985207

~ ರವಿಶಂಕರ್ ವಳಕ್ಕುಂಜ

‘ಯಕ್ಷಗಾನ ಪ್ರಸಂಗಗಳಲ್ಲಿ ನಾರದ’ – ನಾರದನ ಅಂತರಂಗವನ್ನು ಬಗೆದು ನೋಡಿದ ಹಾಸ್ಯಗಾರನ ಅತ್ಯಪೂರ್ವ ಹೊತ್ತಗೆ


ಪುರಾಣಗಳಲ್ಲಿ ಬರುವ ನಾರದನದು ಅತಿ ವಿಶಿಷ್ಟವೂ ಕೌತುಕವೂ ಆದ ವ್ಯಕ್ತಿತ್ವದ ಪಾತ್ರ. ನೋಟಕರಾಗಿ ನಾವು ಹಲವಾರು ಬಗೆಯಲ್ಲಿ ಅಥವಾ ದೃಷ್ಟಿಕೋನದಿಂದ ನಾರದನನ್ನು ಕಂಡಿದ್ದೇವೆ. ಆದರೆ ಪಾತ್ರಧಾರಿಯಾಗಿ ನಾರದನ ಪಾತ್ರಚಿತ್ರಣ ಹೇಗೆ. ಅದು ಅಷ್ಟು ಸುಲಭವಲ್ಲ.

ಪಾತ್ರಧಾರಿಯೊಬ್ಬ ನಾರದನ ಪಾತ್ರವನ್ನು ನಿರ್ವಹಿಸುವುದು ಒಂದು ದೊಡ್ಡ ಸವಾಲು. ಬೇರೆಯ ರಂಗ ಪ್ರಕಾರಗಳನ್ನು ಸ್ವಲ್ಪ ಬದಿಗಿರಿಸಿ ಯಕ್ಷಗಾನದ ಬಗ್ಗೆ ವಿಚಾರ ಮಾಡಿದಾಗ ನಮಗೆ ಇಲ್ಲಿ ನಾರದನ ಪಾತ್ರಕ್ಕೆ ಅತ್ಯಂತ ಗೌರವವನ್ನು ತಂದುಕೊಟ್ಟ ಕೆಲವೇ ಕೆಲವು ಕಲಾವಿದರನ್ನು ಕಾಣಸಿಗಬಹುದು.

ಯಕ್ಷಗಾನದಲ್ಲಿ ನಾರದ ಪಾತ್ರ ಸಾಮಾನ್ಯವಾಗಿ ಹಾಸ್ಯಗಾರರೇ ನಿರ್ವಹಿಸುವ ಪಾತ್ರ. ಆದುದರಿಂದಲೇ ನಾರದನ ಕ್ಯಾರೆಕ್ಟರ್ ಕೆಲವೊಮ್ಮೆ ನಗೆಪಾಟಲಿಗೀಡಾದದ್ದು ಸುಳ್ಳಲ್ಲ! ಆದರೆ ಯಕ್ಷಗಾನ ಹಾಸ್ಯ ಕಲಾವಿದರು ನಾರದನ ಪಾತ್ರವನ್ನು ನಿರ್ವಹಿಸುವಾಗ ತಮ್ಮ ಎಂದಿನ ಹಾಸ್ಯದ ಮೂಡಿನಿಂದ ಹೊರಬರಬೇಕಾದ ಅಗತ್ಯ ಈಗಿನ ದಿನಗಳಲ್ಲಿ ಖಂಡಿತವಾಗಿಯೂ ಇದೆ.

ನಾರದನೇನು? ಮತ್ತು ನಾರದನ ಉದ್ದೇಶವೇನು ಎಂಬುದನ್ನು ಮನನ ಮಾಡಿಕೊಂಡು ನಾರದನ ಪಾತ್ರವನ್ನು ರಂಗದಲ್ಲಿ ಚಿತ್ರಸುವ ಯಕ್ಷಗಾನ ಹಾಸ್ಯ ಕಲಾವಿದರು ಕೇವಲ ಬೆರಳೆಣಿಕೆಯಲ್ಲಿ ಕಾಣಸಿಗುತ್ತಾರೆ. ಅಂತಹವರಲ್ಲಿ ಕಟೀಲು ಮೇಳದ ಹಾಸ್ಯ ಕಲಾವಿದರಾದ ರವಿಶಂಕರ ವಳಕ್ಕುಂಜ ಅವರೂ ಒಬ್ಬರು.

ರವಿಶಂಕರ್ ವಳಕ್ಕುಂಜ ಅವರು ಪ್ರಸ್ತುತ ತೆಂಕುತಿಟ್ಟು ಯಕ್ಷಗಾನದ ಪ್ರಬುದ್ಧ, ಪ್ರಸಿದ್ಧ ಹಾಸ್ಯಗಾರರು. ನಾರದನ ಪಾತ್ರವೊಂದು ಕೆಲವರ ಕೈಯಲ್ಲಿ ಸಿಕ್ಕಿ ಅವಹೇಳನಕ್ಕೆ ಸಿಲುಕಿ ನಲುಗಿಹೋಗುತ್ತಿದ್ದ ಕಾಲಘಟ್ಟದಲ್ಲಿ ನಾರದ ಯಾರು ಮತ್ತು ನಾರದನ ಅಂತರಂಗವೇನು ಎಂಬುದನ್ನು ಪ್ರೇಕ್ಷಕರಿಗೆ ಮನನ ಮಾಡಿಕೊಟ್ಟು ನಾರದ ಪಾತ್ರವನ್ನು ನಿರ್ವಹಿಸಿದ ಕಲಾವಿದ. ಈ ದೃಷ್ಟಿಯಿಂದ ನೋಡಿದರೆ ರವಿಶಂಕರ್ ವಳಕ್ಕುಂಜ ಅವರು ಪ್ರಸ್ತುತ ಹಾಸ್ಯ ಕಲಾವಿದರ ನಡುವೆ ತಾನು ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ.

ರವಿಶಂಕರ್ ವಳಕ್ಕುಂಜ ಅವರು ಲೇಖಕರಾಗಿ ಈಗಾಗಲೇ ಎಲ್ಲರಿಗೂ ಪರಿಚಿತರು ಮತ್ತು ಅವರು ಬರೆದ ಪುಸ್ತಕಗಳು ಯಕ್ಷಗಾನ ವಲಯದಲ್ಲಿ ಬಾರೀ ಜನಪ್ರಿಯತೆಯನ್ನು ಪಡೆದಿವೆ. “ಯಕ್ಷಗಾನ ಪ್ರಸಂಗಗಳಲ್ಲಿ ನಾರದ” ಎಂಬುದು ಇತ್ತೀಚೆಗೆ ಪ್ರಕಟವಾದ ಅವರ ಕೃತಿ. ಎಲ್ಲರೂ ಓದಲೇಬೇಕಾದ ಪುಸ್ತಕ. ಇದರಲ್ಲಿ ಅವರು ಒಟ್ಟು 111 ಯಕ್ಷಗಾನ ಪ್ರಸಂಗಗಳಲ್ಲಿ ಬರುವ ನಾರದನ ಪಾತ್ರದ ಪದ್ಯ ಮತ್ತು ಅದರ ಅರ್ಥವನ್ನು (ಸಂಭಾಷಣೆ) ಬರೆದಿದ್ದಾರೆ. ಯಕ್ಷಗಾನ ಅಭ್ಯಾಸಿಗಳಿಗಂತೂ ಈ ಪುಸ್ತಕ ಅತಿದೊಡ್ಡ ಸಾಹಿತ್ಯ ನಿಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಪುಸ್ತಕದಲ್ಲಿ ಒಟ್ಟು 224 ಪುಟಗಳಿವೆ. ಖ್ಯಾತ ಕಲಾವಿದ, ಸಾಹಿತಿ, ಶಿಕ್ಷಕ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಪ್ರಬುದ್ಧ ಬರಹದ ಮುನ್ನಡಿಯಿದೆ. ಕಟೀಲು ದೇವಳದ ಆನುವಂಶಿಕ ಅರ್ಚಕರಾದ
ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಕಮಲಾದೇವೀಪ್ರಸಾದ ಆಸ್ರಣ್ಣ, ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣರ ಶುಭ ಸಂದೇಶಗಳಿವೆ.

ಲೇಖಕರ ಮಾತು ವಿಭಾಗದಲ್ಲಿ ಲೇಖಕ ರವಿಶಂಕರ್ ವಳಕ್ಕುಂಜ ಅವರು ನಾರದನ ಪಾತ್ರವನ್ನು ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ಟಿಪ್ಪಣಿಯನ್ನು ನೀಡಿದ್ದಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಪುಸ್ತಕ ಮಾರಾಟಕ್ಕೆ ಲಭ್ಯವಿಲ್ಲ. ನಿಮಗೆ ಪುಸ್ತಕ ಬೇಕಾದರೆ ಲೇಖಕರನ್ನೇ ಸಂಪರ್ಕಿಸಬಹುದು.

ಕಲಾವಿದ, ಲೇಖಕರ ವಿಳಾಸ: ರವಿಶಂಕರ್ ವಳಕ್ಕುಂಜ,
ಮಲೆ ಮನೆ, ಅಂಚೆ ಮಾಡಾವು, ಕೆಯ್ಯೂರು ಗ್ರಾಮ,
ಪುತ್ತೂರು ತಾಲೂಕು, ದ.ಕ – 574210
ಮೊಬೈಲ್: 9164487083

ಬರಹದ ಲೇಖನಿ ; ಯಕ್ಷರಸಿಕ, ಪುತ್ತೂರು

ನಾಳೆ ದಿನಾಂಕ 27.06.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

ನಾಳೆ ದಿನಾಂಕ 27.06. 2024ರ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾರೀ ಮಳೆಯ ಸಂಭಾವ್ಯತೆ ಇರುವುದರಿಂದ ಹಾಗೂ ಸಂಭಾವ್ಯ ಭೂಕುಸಿತಗಳನ್ನು ಗಮನದಲ್ಲಿಟ್ಟುಕೊಂಡು ಈ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿಯ ಪ್ರಕಟಣೆಯಿಂದ ತಿಳಿದುಬಂದಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ ದಿನಾಂಕ 27.06.2024ರಂದು ರಜೆ ಘೋಷಣೆ ಮಾಡಲಾಗಿದೆ.