Wednesday, March 18, 2026
Home Blog Page 248

ಪೊನ್ನಿಯಿನ್ ಸೆಲ್ವನ್ 1′ ಸಿನಿಮಾದಲ್ಲಿ ರಾಣಿ ನಂದಿನಿಯಾಗಿ ಐಶ್ವರ್ಯಾ ರೈ ಬಚ್ಚನ್ ಅವರ ಆಕರ್ಷಕ ಪಾತ್ರ

ನಿನ್ನೆ ‘ಪೊನ್ನಿಯಿನ್ ಸೆಲ್ವನ್ ಭಾಗ 1’ ನಿರ್ಮಾಪಕರು ಐಶ್ವರ್ಯಾ ರೈ ಅವರ ಹೊಸ ಕ್ಯಾರೆಕ್ಟರ್ ಪೋಸ್ಟರ್‌ನೊಂದಿಗೆ ರಾಣಿ ನಂದಿನಿಯಾಗಿ ಅಭಿಮಾನಿಗಳಿಗೆ ಸಂತೋಷ ನೀಡಿದರು. ಬಹು ನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ನಟ ಚಿಯಾನ್ ವಿಕ್ರಮ್ , ಆದಿತ್ಯ ಕರಿಕಾಲ ಜೊತೆಗೆ ಐಶ್ವರ್ಯ ರೈ ನಾಯಕಿಯಾಗಿ ಹೆಜ್ಜೆ ಹಾಕಲು ಸಾಕ್ಷಿಯಾಗಲಿದೆ.

ಈ ಚಿತ್ರವು ಫನ್ನಿ ಖಾನ್ ನಂತರ ಐಶ್ವರ್ಯಾ ಅವರು ಮತ್ತೆ ದೊಡ್ಡ ಪರದೆಯ ಮೇಲೆ ಮರಳುವಂತೆ ಮಾಡಿದೆ. ಮಣಿರತ್ನಂ ಅವರ ಮಲ್ಟಿ-ಸ್ಟಾರರ್ ಚಿತ್ರದ ತಯಾರಕರು ಪೀರಿಯಡ್ ಡ್ರಾಮಾ ಚಿತ್ರದ ಇತ್ತೀಚಿನ ಕ್ಯಾರೆಕ್ಟರ್ ಪೋಸ್ಟರ್‌ಗಳೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುವುದರಲ್ಲಿ ಯಾವುದೇ ಅವಕಾಶಗಳನ್ನು ಬಿಡುತ್ತಿಲ್ಲ.

ವಿಕ್ರಮ್ ಮತ್ತು ಕಾರ್ತಿ ಅವರ ಪಾತ್ರ ಪೋಸ್ಟರ್‌ಗಳೊಂದಿಗೆ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದ ನಂತರ, ಪೊನ್ನಿಯಿನ್ ಸೆಲ್ವನ್ ತಯಾರಕರು ಇತ್ತೀಚೆಗೆ ಐಶ್ವರ್ಯಾ ರೈ ಅವರ ಸಮ್ಮೋಹನಗೊಳಿಸುವ ಅವತಾರವನ್ನು ರಾಣಿ ನಂದಿನಿಯಾಗಿ ಅಭಿಮಾನಿಗಳಿಗೆ ರೋಮಾಂಚನ ನೀಡಿದರು.

ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಮತ್ತೊಮ್ಮೆ ಅವಧಿಯ ನಾಟಕದಿಂದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಐಶ್ವರ್ಯಾ ರೈ ರಾಣಿ ನಂದಿನಿಯಾಗಿ ಪ್ರತೀಕಾರದ ಧ್ಯೇಯದಲ್ಲಿ ರೀಗಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೋಧಾ ಅಕ್ಬರ್ ಎಲ್ಲಾ ಸಾಂಪ್ರದಾಯಿಕ ರಾಜ ಉಡುಪುಗಳಲ್ಲಿ ಭಾರೀ ಆಭರಣಗಳು ಮತ್ತು ಉದ್ದನೆಯ ಕೂದಲಿನೊಂದಿಗೆ ಅಲಂಕರಿಸಲ್ಪಟ್ಟಿದೆ.

ಟ್ವಿಟರ್‌ನಲ್ಲಿ ಐಶ್ವರ್ಯಾ ಅವರ ನೋಟವನ್ನು ಹಂಚಿಕೊಂಡ ತಯಾರಕರು, “ಪ್ರತೀಕಾರಕ್ಕೆ ಸುಂದರವಾದ ಮುಖವಿದೆ! ಪಜುವೂರಿನ ರಾಣಿ ನಂದಿನಿಯನ್ನು ಭೇಟಿ ಮಾಡಿ!”

ಪೊನ್ನಿಯಿನ್ ಸೆಲ್ವನ್ ಭಾಗ 1 ರಲ್ಲಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಅವರು ಚೋಳ ಸಾಮ್ರಾಜ್ಯದ ಅವನತಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಪೆರಿಯಾ ಪಜುವೆಟ್ಟರಾಯರ್ ಅವರ ಪತ್ನಿ ನಂದಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ನಂದಿನಿಯ ತಾಯಿ ಮಂದಾಕಿನಿ ದೇವಿಯಾಗಿಯೂ ಕಾಣಿಸಿಕೊಳ್ಳುತ್ತಾರೆ.

ಪೊನ್ನಿಯಿನ್ ಸೆಲ್ವನ್ ಅನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ಬ್ಯಾಂಕ್ರೋಲ್ ಮಾಡಿದ್ದಾರೆ ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಹೆಲ್ಮ್ ಮಾಡಿದ್ದಾರೆ. ಸಿನಿಮಾ ಎರಡು ಕಂತುಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಜಯಂ ರವಿ, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧುಲಿಪಾಲ ಮತ್ತು ಅನೇಕರು ನಟಿಸಿದ್ದಾರೆ.

ಗಿರಿಜಾ ಕಲ್ಯಾಣ – ನಾಳೆ ಜುಲೈ 7ಕ್ಕೆ ಯಕ್ಷಗಾನ ಪ್ರದರ್ಶನ

ನಾಳೆ ಗುರುವಾರ ದಿನಾಂಕ 07.07.2022ರಂದು ಬೆಂಗಳೂರಿನಲ್ಲಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ ಘಂಟೆ 6ಕ್ಕೆ ಸರಿಯಾಗಿ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ಬಸವನಗುಡಿ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನವನ್ನು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರು ಆಯೋಜಿಸಿದ್ದಾರೆ.

ಗಿರಿಜಾ ಕಲ್ಯಾಣ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ. ವಿವರಗಳಿಗೆ ಕರಪತ್ರ ನೋಡಿ 

ಆನೆಯನ್ನು ರಕ್ಷಿಸಿದ ಜೆಸಿಬಿ! – ವೀಡಿಯೊ

ಆನೆಯನ್ನು ರಕ್ಷಿಸಿದ ಜೆಸಿಬಿ!  ವಿಚಿತ್ರವಾದರೂ ಸತ್ಯ. ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಹುಲು ಗ್ರಾಮದಲ್ಲಿ ಆನೆಯೊಂದು ಬಾವಿಗೆ ಬಿದ್ದ ಘಟನೆ ನಡೆದಿದೆಯಂತೆ.

ಆನೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಜೆಸಿಬಿ ತೊಡಗಿಸಿಕೊಂಡಿರುವುದು ಈ ವೀಡಿಯೋದಲ್ಲಿ ಕಾಣಬಹುದು.

ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಹುಲು ಗ್ರಾಮದಲ್ಲಿ ಕಂದಕಕ್ಕೆ ಬಿದ್ದ ಆನೆಯನ್ನು ಸ್ಥಳೀಯ ಆಡಳಿತವು ಅಗೆಯುವ ಯಂತ್ರದ (ಜೆಸಿಬಿ) ಸಹಾಯದಿಂದ ನಿನ್ನೆ ರಕ್ಷಿಸಿದೆ.

ದೊಡ್ಡ ಬಾವಿಗೆ ಬಿದ್ದ ಆನೆಯನ್ನು ಮೇಲೆ ತರುವುದು ಸುಲಭ ಸಾಧ್ಯವಾಗಿರಲಿಲ್ಲ. ಆದರೆ ಆ ಬಾವಿಗೆ ಒಂದು ಇಳಿಜಾರಾದ ಹಳ್ಳವನ್ನು ಕೊರೆಯಲಾಯಿತು. ಜೆಸಿಬಿ ಸಹಾಯದಿಂದ ಆ ಹಳ್ಳದ ಮೂಲಕ ಆನೆಯನ್ನು ಮೇಲಕ್ಕೆ ಎತ್ತಲಾಯಿತು.

ಈ ವೀಡಿಯೊವನ್ನು ANI ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ವೀಡಿಯೊ ನೋಡಿ.

ಪೆರುವಡಿ ನಾರಾಯಣ ಭಟ್ಟರಿಗೆ ‘ಶ್ರೀ ನರಹರಿ ತೀರ್ಥ ಪ್ರಶಸ್ತಿ’

ಶ್ರೀ ಅದಮಾರು ಮಠದ ಪ್ರಾಯೋಜಕತ್ವದಲ್ಲಿ ನೀಡುವ ಯಕ್ಷಗಾನ ಕಲಾ ಪ್ರಶಸ್ತಿಯಾದ ‘ಶ್ರೀ ನರಹರಿ ತೀರ್ಥ ಪ್ರಶಸ್ತಿ’ ಗೆ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ  ಪೆರುವಡಿ ನಾರಾಯಣ ಭಟ್ಟರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಪ್ರಶಸ್ತಿಪತ್ರ, ಸ್ಮರಣಿಕೆಗಳೊಂದಿಗೆ ರೂ. 50,000 ನಗದನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಯು ಕಳೆದ ವರ್ಷಗಳಲ್ಲಿ ಶ್ರೀ ಬಲಿಪ ನಾರಾಯಣ ಭಾಗವತ,(2020) ಶ್ರೀ ಶ್ರೀಪಾದ ತಿಮ್ಮಣ್ಣ ಭಟ್ಟ ಸಾಲ್ಕೋಡು(2021) ಇವರಿಗೆ ಲಭಿಸಿತ್ತು. 

ಪೆರುವಡಿ ನಾರಾಯಣ ಭಟ್ಟರು ಈಗ ಕಲಾಜೀವನದಿಂದ ನಿವೃತ್ತರಾಗಿ ಪುತ್ತೂರು ಸಮೀಪದ ಬಪ್ಪಳಿಗೆಯಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ಪರಂಪರೆಯ ಹಾಸ್ಯಗಾರರಾದ ಶ್ರೀಯುತರು ಮೇಳದ ಸಂಚಾಲಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಪೆರುವಡಿಯಲ್ಲಿ ಪದ್ಯಾಣ ಭೀಮ ಭಟ್ ಮತ್ತು ಗುಣವತಿ ಅಮ್ಮ ದಂಪತಿಗಳ ಮಗನಾಗಿ ಮೇ 28, 1927ರಂದು ಜನಿಸಿದರು.

ಮಿತ್ತನಡ್ಕ (ಕರೋಪಾಡಿ) ಮತ್ತು ಪೆರುವಡಿ ಕುದ್ರಡ್ಕ ಶಾಲೆಗಳಲ್ಲಿ 5ನೇ ತರಗತಿ ವರೆಗೆ ಓದಿದ್ದರು.  ತನ್ನ 14ನೇ ವಯಸ್ಸಿನಲ್ಲಿ ಪೆರುವಡಿ ನಾರಾಯಣ ಭಟ್ಟರು ನಾಟ್ಯಾಭ್ಯಾಸ ಇಲ್ಲದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟ ಮಾಡಿದ್ದರು. (ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲ, ಕುರಿಯ ವಿಠಲ ಶಾಸ್ತ್ರಿಗಳು ಮೇಳ ವಹಿಸಿಕೊಂಡ ಸಮಯ) ನಂತರ ಕುರಿಯ ವಿಠಲ ಶಾಸ್ತ್ರಿಗಳು ಇವರನ್ನು ನಾಟ್ಯ ಕಲಿಯಲು ಪ್ರೇರೇಪಿಸಿದರಂತೆ. ವ್ಯವಸ್ಥೆಯೂ ಆಯಿತು.

ಧರ್ಮಸ್ಥಳ, ಸುರತ್ಕಲ್, ಕದ್ರಿ, ನಂದಾವರ, ಅರುವ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದರು. 1954ರಲ್ಲಿ ಮುಲ್ಕಿ ಮೇಳದ ಸಂಚಾಲಕರಾಗಿ ಶ್ರೀ ಪೆರುವಡಿ ನಾರಾಯಣ ಭಟ್ಟರು ಮೇಳವನ್ನು 11 ವರ್ಷಗಳ ಕಾಲ ಮುನ್ನಡೆಸಿದ್ದರು.  17 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು.  

ಪಾಪಣ್ಣ ವಿಜಯ – ಗುಣಸುಂದರಿ’ ಪ್ರಸಂಗದ ‘ಪಾಪಣ್ಣ’ ಪಾತ್ರ ಇವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೆರುವಡಿ ನಾರಾಯಣ ಭಟ್ಟರು ‘ಪಾಪಣ್ಣ ಭಟ್ರು’ ಎಂದೇ ಪ್ರಸಿದ್ಧರಾದರು. ವೃತ್ತಿ ಸಂಕಷ್ಟವನ್ನು ಸಾರುವ ಮೂರ್ತೆಯವನಾಗಿ, ತಾಮಸಿ ಪ್ರವೃತ್ತಿಯ ರಾಕ್ಷಸ ದೂತನಾಗಿ, ಸಹಜ ಬದುಕಿಗೆ ಕನ್ನಡಿ ಹಿಡಿಯುವ ವಿಪ್ರನಾಗಿ, ದೇವತ್ವವನ್ನು ಎತ್ತಿ ಹಿಡಿವ ದೇವದೂತನಾಗಿ ಅಭಿನಯಿಸುತ್ತಾ ಇವರು ಎಲ್ಲಾ ಹಾಸ್ಯಗಾರರಿಗೂ ಆದರ್ಶರಾದರು.

ಪೆರುವಡಿ ಹಾಸ್ಯಗಾರರು ಪ್ರಸ್ತುತ ಪುತ್ತೂರಿನ ಬಪ್ಪಳಿಗೆಯ ಸಮೀಪದ ತೆಂಕಿಲ ನೂಜಿ ಶ್ರೀ ದುರ್ಗಾ ನಿಲಯದಲ್ಲಿ ವಾಸವಾಗಿದ್ದಾರೆ.

ನಿವೃತ್ತ ವಾಯುಸೇನಾಧಿಕಾರಿ ಗ್ರೂಪ್ ಕ್ಯಾಪ್ಟನ್ ಶಶಿಧರ ಎಚ್. ಐತಾಳ್ ನಿಧನ

ಭಾರತೀಯ ವಾಯುಸೇನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೇನಾಧಿಕಾರಿ ಗ್ರೂಪ್ ಕ್ಯಾಪ್ಟನ್ ಶಶಿಧರ ಎಚ್. ಐತಾಳ್ (68 ವರ್ಷ) ಇಂದು ಅಂಬಲಪಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಉಡುಪಿಯ ಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಎಚ್.ಪಿ ಐತಾಳ್ ಇವರ ಹಿರಿಯ ಪುತ್ರ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ನಿಲ್ಲದ ಮಳೆಯ ಅಬ್ಬರ – ಇಂದು ಕೂಡಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ (06.07.2022)

ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಂದು ಬುಧವಾರ ಕೂಡಾ (06-07.2022)ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.  ಈ ನಿಟ್ಟಿನಲ್ಲಿ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಹಾಗೂ ಮೂನ್ಸೂಚನೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಮಕ್ಕಳ ಸುರಕ್ಷತೆಯ ಸಲುವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ತಿಳಿಸಿದ್ದಾರೆ. 

ವೀರರಾಣಿ ಅಬ್ಬಕ್ಕ ಪ್ರತಿಷ್ಠಾನದಿಂದ ಸೌಹಾರ್ದ ಸಮಾವೇಶ – ಸಾಧಕ ಸಮ್ಮಾನ

ಮಂಗಳೂರು:  ‘ವೈಯಕ್ತಿಕವಾದ ಪ್ರತಿಷ್ಠೆಯನ್ನು ಮೀರಿ ಸೇವಾ ಮನೋಭಾವದಿಂದ ದುಡಿಯುವ ವ್ಯಕ್ತಿಗಳಿಗೆ ಸಾಮಾಜಿಕ ಮನ್ನಣೆ ಸಹಜವಾಗಿ ಲಭಿಸುತ್ತದೆ. ಅದರಲ್ಲೂ ರಾಷ್ಟ್ರ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಅಬ್ಬಕ್ಕ ರಾಣಿಯಂಥವರ ಹೆಸರಿನಲ್ಲಿ ಸಾಧಕರಿಗೆ ನೀಡುವ ಗೌರವ ಶ್ರೇಷ್ಠವಾದುದು’ ಎಂದು ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ರೊ. ಪ್ರಕಾಶ್ ಕಾರಂತ ಹೇಳಿದ್ದಾರೆ.

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ನಗರದ ಕೊಡಿಯಾಲ್ ಬೈಲ್ ಪತ್ತುಮುಡಿ ಸೌಧದಲ್ಲಿ ಜರಗಿದ ‘ನಮ್ಮ ಅಬ್ಬಕ್ಕ: ಸೌಹಾರ್ದ ಸಮಾವೇಶ ಮತ್ತು ಸಾಧಕ ಸಮ್ಮಾನ’  ಸಮಾರಂಭದ ಪ್ರಧಾನ ಅಭ್ಯಾಗತರಾಗಿ ಅವರು ಮಾತನಾಡಿದರು. 

       ಸಭೆಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ‘ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಸ್ವಾತಂತ್ರ್ಯ ಅಮೃತೋತ್ಸವ ಸಂದರ್ಭದಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದೆ. ಇದೇ ಮಾರ್ಚಿ ತಿಂಗಳಲ್ಲಿ ಪುರಭವನದಲ್ಲಿ ಆಯೋಜಿಸಿದ್ದ ನಮ್ಮ ಅಬ್ಬಕ್ಕ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮಕ್ಕೆ ಮಂಗಳೂರು ಮಹಾನಗರ ಪಾಲಿಕೆ ಸಹಯೋಗ ನೀಡಿರುವುದು ಶ್ಲಾಘನೀಯ’ ಎಂದರು.


 ಸಾಧಕರಿಗೆ ಅಭಿನಂದನೆ:  ಮಂಗಳೂರು ಮಹಾನಗರ ಪಾಲಿಕೆಯ ನಿರ್ಗಮನ ಮೇಯರ್ ಪ್ರೇಮಾನಂದ ಶೆಟ್ಟಿಯವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಜನಪರ ಕಾರ್ಯಕ್ರಮಗಳಿಗಾಗಿ ಅಭಿನಂದಿಸಿ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರನ್ನೂ ಅಭಿನಂದಿಸಲಾಯಿತು.ಇದೇ ಸಂದರ್ಭದಲ್ಲಿ ಜುಲೈ 3 ರಂದು ರೋಟರಿ ಜಿಲ್ಲಾ ನೂತನ ರಾಜ್ಯಪಾಲರಾಗಿ ಪದಗ್ರಹಣ ಮಾಡಿದ್ದ ರೊ.ಪ್ರಕಾಶ್ ಕಾರಂತ ಅವರನ್ನು ವಿರಾಟ್ ವತಿಯಿಂದ ಗೌರವಿಸಲಾಯಿತು.         

ಹಿರಿಯ ಲೆಕ್ಕಪರಿಶೋಧಕ ಎಸ್. ಎಸ್.ನಾಯಕ್ ಮುಖ್ಯ ಅತಿಥಿಗಳಾಗಿ ಸನ್ಮಾನಿತರನ್ನು ಅಭಿನಂದಿಸಿದರು. ಉದ್ಯಮಿ ಎ.ಕೆ.ಜಯರಾಮ ಶೇಖ, ಎಸ್.ಡಿ.ಎಂ.ಆಡಳಿತಾಧಿಕಾರಿ ಡಾ.ದೇವರಾಜ್, ಯುಗಪುರುಷದ ಭುವನಾಭಿರಾಮ ಉಡುಪ ಅತಿಥಿಗಳಾಗಿದ್ದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು.

ಸಂಘಟನಾ ಕಾರ್ಯದರ್ಶಿ  ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿರಾಂಟ್ ಪದಾಧಿಕಾರಿಗಳಾದ ವಾಮನ್ ಬಿ.ಮೈಂದನ್, ಕೆ.ರವೀಂದ್ರ ರೈ ಕಲ್ಲಿ ಮಾರ್,ತ್ಯಾಗಂ ಹರೇಕಳ,ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ್, ಬಾದ್ ಶಾ ಸಾಂಬಾರ್ ತೋಟ, ವಿಜಯಲಕ್ಷ್ಮಿ ಬಿ ಶೆಟ್ಟಿ, ಸುಮಾ ಪ್ರಸಾದ್ , ಪ್ರತಿಮಾ ಹೆಬ್ಬಾರ್ ಉಪಸ್ಥಿತರಿದ್ದರು.

ಶಿವರಾಮ ಜೋಗಿ ಇವರಿಗೆ ಹಾಸ್ಯ ರತ್ನ ವೇಣೂರು ಸುಂದರ ಆಚಾರ್ಯ ಪ್ರಥಮ ಸಂಸ್ಮರಣಾ ಪ್ರಶಸ್ತಿ

ಹಾಸ್ಯರತ್ನ ವೇಣೂರು ಸುಂದರ ಆಚಾರ್ಯ ಸಂಸ್ಮರಣ ಸಮಿತಿ, ಕಾಂಜರ ಕಟ್ಟೆ ವೇಣೂರು, ಬೆಳ್ತಂಗಡಿ ತಾಲೂಕು ದ.ಕ
ಶಿವರಾಮ ಜೋಗಿ ಇವರಿಗೆ ಹಾಸ್ಯ ರತ್ನ ವೇಣೂರು ಸುಂದರ ಆಚಾರ್ಯ ಪ್ರಥಮ ಸಂಸ್ಮರಣಾ ಪ್ರಶಸ್ತಿ


ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯಗಾರರಾಗಿ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ನೂರಾರು ಪಾತ್ರಗಳನ್ನು ತನ್ನ ಅಭಿನಯ ಮತ್ತು ಮಾತುಗಾರಿಕೆಯಿಂದ ವಿಶಿಷ್ಟವಾಗಿ ನಿರ್ವಹಿಸಿ ಖ್ಯಾತರಾದ ವೇಣೂರು ಸುಂದರಾಚಾರ್ಯರ ಪ್ರಥಮ ಸಂಸ್ಮರಣ ಕಾರ್ಯಕ್ರಮವನ್ನು ದಿನಾಂಕ 10/07/2022 ರಂದು ವೇಣೂರಿನ ಭರತೇಶ ಸಭಾಭವನದಲ್ಲಿ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯ ವೇದಿಕೆಯಲ್ಲಿ ನಡೆಸಲು ನಿರ್ಧರಿಸಿದೆ. ತನ್ನಿಮಿತ್ತ ಸುಂದರ ಆಚಾರ್ಯರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ನುಡಿ ನಮನ ಮತ್ತು ತಾಳಮದ್ದಳೆ ನಡೆಯಲಿದೆ.


ಕಲಾವಿದ ಶ್ರೀ ಶಿವರಾಮ ಜೋಗಿ ಅವರಿಗೆ ಪ್ರಶಸ್ತಿ ಪ್ರದಾನ: ಸುರತ್ಕಲ್ ಮೇಳದಲ್ಲಿ ಸುಂದರ ಆಚಾರ್ಯರೊಂದಿಗೆ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಒಡನಾಡಿ ಕಲಾವಿದರಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಶಿವರಾಮ ಜೋಗಿ ಬಿ.ಸಿ ರೋಡ್ ಇವರಿಗೆ ಪ್ರಥಮ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ಶಿವರಾಮ ಜೋಗಿ ಅವರ ಪರಿಚಯ: ಪುಂಡುವೇಷ, ರಾಜವೇಷ ಮತ್ತು ನಾಟಕೀಯ ವೇಷಗಳ ಮೂಲಕ ಯಾವುದೇ ಪ್ರಸಂಗದ ನಾಯಕ ಮತ್ತು ಪ್ರತಿನಾಯಕ ಪಾತ್ರಗಳನ್ನು ತನ್ನ ಗತ್ತುಗಾರಿಕೆಯ ನಾಟ್ಯ, ಸ್ವರ ಭಾರ ಮತ್ತು ಭಾವಪೂರ್ಣ ಅಭಿನಯದಿಂದ ನಿರ್ವಹಿಸುತ್ತಾ ಬಂದ ಶಿವರಾಮ ಜೋಗಿ ತೆಂಕುತಿಟ್ಟಿನ ಒಬ್ಬ ಪ್ರಾತಿನಿಧಿಕ ಕಲಾವಿದರಾಗಿ ಗುರುತಿಸಲ್ಪಟ್ಟವರು.


ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನದಲ್ಲಿ ಗುರುವಪ್ಪ ಜೋಗಿ ಮತ್ತು ಸೀತಮ್ಮ ದಂಪತಿಯ ಪುತ್ರನಾಗಿ ದಿನಾಂಕ 07/06/1947ರಲ್ಲಿ ಜನಿಸಿದ ಶಿವರಾಮ ಜೋಗಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಯಕ್ಷಗಾನದ ಸೆಳೆತದಿಂದ ಕಲಾವಿದ ಗೋಪಾಲಕೃಷ್ಣ ಕುಡಾಣ ಇವರಲ್ಲಿ ನಾಟ್ಯ ಅಭ್ಯಾಸ ಮಾಡಿದರು. ವಿಟ್ಲ ಗೋಪಾಲಕೃಷ್ಣ ಜೋಶಿ ಅವರು 13ನೇ ವಯಸ್ಸಿನಲ್ಲಿಯೇ ಇವರನ್ನು ಕೂಡ್ಲು ಮೇಳಕ್ಕೆ ಸೇರ್ಪಡೆಗೊಳಿಸಿದರು.

ಮೇಳದಲ್ಲಿ ಕಲಾವಿದರಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ಬಾಲ ಪಾತ್ರಗಳನ್ನು ನಿರ್ವಹಿಸುತ್ತಾ ಮುಂದಕ್ಕೆ ಮುಲ್ಕಿ ಮೇಳದಲ್ಲಿ ಒಂದು ತಿರುಗಾಟ ನಡೆಸಿ ಸುರತ್ಕಲ್ ಮೇಳಕ್ಕೆ ಸೇರಿದರು. ಸುರತ್ಕಲ್ ಮೇಳದಲ್ಲಿ ಪ್ರಸಿದ್ಧ ಕಲಾವಿದರ ಒಡನಾಟದಲ್ಲಿ 40 ವರ್ಷಗಳ ನಿರಂತರ ತಿರುಗಾಟವು ಇವರನ್ನು ಅಪೂರ್ವ ಕಲಾವಿದನನ್ನಾಗಿ ಬೆಳೆಯುವಲ್ಲಿ ಮತ್ತು ಗುರುತಿಸುವಲ್ಲಿ ಸಹಕಾರಿಯಾಯಿತು. ಸುರತ್ಕಲ್ ಮೇಳದಲ್ಲಿ ಕಲಾವಿದನಾಗಿದ್ದುಕೊಂಡೇ ಮೇಳದ ವಾಹನ ಚಾಲನೆ ಮತ್ತು ನೇಪತ್ಯದ ಕಾರ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡದ್ದು ಇವರ ವಿಶೇಷತೆ. ಸುರತ್ಕಲ್ ಮೇಳ ಸ್ಥಗಿತಗೊಂಡ ಬಳಿಕ ಕರ್ನಾಟಕ, ಮಂಗಳಾದೇವಿ, ಕುಂಟಾರು, ಎಡನೀರು, ಹೊಸನಗರ, ಹನುಮಗಿರಿ, ಸುಂಕದಕಟ್ಟೆ ಮೇಳಗಳಲ್ಲಿ ಕಲಾವಿದರಾಗಿ ಒಟ್ಟು 63 ವರ್ಷಗಳ ಕಲಾ ಯಾನ.


ಪತ್ನಿ ಶ್ರೀಮತಿ ಲತಾ, ಎಸ್.ಬಿ.ಐ ಲೈಫ್ ಉದ್ಯೋಗಿಯಾಗಿರುವ ಮಗ ಸುಮಂತ್ ರಾಜ್ ಮತ್ತು ಮಗಳು ಶ್ರೀಮತಿ ಸೌಮ್ಯ ಇವರೊಡನೆ ನೆಮ್ಮದಿಯ ಸಂಸಾರದೊ0ದಿಗೆ ಬಿ.ಸಿ ರೋಡ್ ಬೈಪಾಸ್ ಪೂಂಜರಕೋಡಿ ಯಕ್ಷದೀಪ ನಿವಾಸದಲ್ಲಿ ಜೋಗಿಯವರು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.


ಅಭಿಮನ್ಯು, ಅಶ್ವತ್ಥಾಮ, ಚಂಡ, ಮುಂಡ, ಕಾರ್ತವೀರ್ಯ, ಕರ್ಣ, ಅರ್ಜುನ, ಇಂದ್ರಜಿತು, ರಾವಣ, ಜಮದಗ್ನಿ, ಹನುಮಂತ, ದ್ರೋಣ, ಹಿರಣ್ಯಾಕ್ಷ, ವಾವರ, ಚೆನ್ನಯ್ಯ, ಚಂದುಗಿಡಿ, ದುಗ್ಗಣ ಕೊಂಡೆ ಮುಂತಾದ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಜೋಗಿ ಅವರ ಕಲಾಸಾಧನೆಗೆ ದೆಹಲಿ ಕನ್ನಡ ಸಂಘ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಮಠ, ಸಂಪಾಜೆ ಕೀಲಾರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೋಗಿ ಅವರು ಪ್ರಸ್ತುತ 76ರ ವಯಸ್ಸಿನಲ್ಲಿ ಮುಂದಿನ ಯಕ್ಷ ತಿರುಗಾಟಕ್ಕೆ ಸಿದ್ಧರಾಗಿದ್ದಾರೆ.


ನುಡಿ ನಮನ: ವೇಣೂರು ಸುಂದರ ಆಚಾರ್ಯರ ಕಿರಿಯ ಪುತ್ರ ಭಾಸ್ಕರ ಆಚಾರ್ಯರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ನಾಟ್ಯಾಭ್ಯಾಸ ತರಬೇತಿ ಪಡೆದು ಸುರತ್ಕಲ್ ಮೇಳದಲ್ಲಿ ತಂದೆಯೊ0ದಿಗೆ ತಿರುಗಾಟ ಆರಂಭಿಸಿದವರು. ಪುಂಡುವೇಷ, ಸ್ತ್ರೀ ವೇಷ ಮತ್ತು ಹಾಸ್ಯ ಪಾತ್ರಗಳ ನಿರ್ವಹಣೆಯಿಂದ ಅತ್ಯಂತ ಜನಪ್ರಿಯರಾಗಿದ್ದ ಇವರು ಮುಂದಕ್ಕೆ ಮಂಗಳಾದೇವಿ, ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಿ ಅಲ್ಪಕಾಲದ ಅಸೌಖ್ಯದಿಂದ 37ನೇ ವಯಸ್ಸಿನಲ್ಲಿ (2008) ನಿಧನರಾದರು.


ವೇಣೂರಿನ ಇನ್ನೋರ್ವ ಪ್ರತಿಭಾವಂತ ಕಲಾವಿದ ವಾಮನ ಕುಮಾರ್. ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಅಭ್ಯಾಸವನ್ನು ಮಾಡಿ ಧರ್ಮಸ್ಥಳ, ಕದ್ರಿ, ಮಂಗಳಾದೇವಿ ಮತ್ತು ಹಿರಿಯಡ್ಕ ಮೇಳಗಳಲ್ಲಿ ಒಟ್ಟು 29 ವರ್ಷ ತಿರುಗಾಟ ನಡೆಸಿದ ಇವರು 2022ರ ಜನವರಿಯಲ್ಲಿ 47ರ ಹರೆಯದಲ್ಲಿ ವಾಹನ ಅಪಘಾತದಲ್ಲಿ ದೈವಾಧೀನರಾದರು. ಈ ಕಲಾವಿದರಿಬ್ಬರಿಗೆ ನುಡಿ ನಮನವನ್ನು ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಸಲ್ಲಿಸಲಿದ್ದಾರೆ.


ಸಭಾ ಕಾರ್ಯಕ್ರಮ: ಅಪರಾಹ್ನ 4 ಗಂಟೆಯಿ0ದ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮುಕ್ತೇಸರ ಬೆಳುವಾಯಿ ಸುಂದರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ, ಶ್ರೀಪತಿ ಭಟ್ ಉದ್ಯಮಿ ಮೂಡುಬಿದ್ರೆ ಮುಖ್ಯ ಅತಿಥಿಗಳಾಗಿದ್ದು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ರಾವ್, ಉದ್ಯಮಿ ಭಾಸ್ಕರ್ ಪೈ ವೇಣೂರು, ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ರವೀಂದ್ರ ಆಚಾರ್ಯ ವೇಣೂರು ಮತ್ತು ಅಧ್ಯಕ್ಷ ಖಂಡಿಗ ಶ್ರೀಧರ ಆಚಾರ್ಯ ಉಪಸ್ಥಿತರಿರುತ್ತಾರೆ.

ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಮತ್ತು ಬಳಿಕ ‘ಕರ್ಣಾರ್ಜುನ’ ಹಾಗೂ ‘ವಾಲಿಮೋಕ್ಷ’ ತಾಳಮದ್ದಳೆ ಪ್ರಸಿದ್ಧ ಕಲಾವಿದರಿಂದ ಜರಗಲಿದೆ.
ದಿವಾಕರ ಆಚಾರ್ಯ ಗೇರುಕಟ್ಟೆ
9449076275

ಚಂದ್ರಶೇಖರ ಗುರೂಜಿ ಹತ್ಯೆ – ಹಂತಕ ಮಹಾಂತೇಶ್ ಪತ್ನಿ ವನಜಾಕ್ಷಿ ವಿಚಾರಣೆ

ಖ್ಯಾತ ವಾಸ್ತುತಜ್ಞ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು  ಭೀಕರವಾಗಿ ಹತ್ಯೆಗೈಯಲಾಗಿದೆ. ಪ್ರಸಿದ್ಧ ವಾಸ್ತು ತಜ್ಞರಾದ ಚಂದ್ರ ಶೇಖರ ಗುರೂಜಿ ಅವರನ್ನು ಹುಬ್ಬಳ್ಳಿ ನಗರದ ಉಣಕಲ್ ನ ಪ್ರೆಸಿಡೆಂಟ್ ಹೊಟೇಲ್ ನ ರಿಸಪ್ಶನ್ ಬಳಿ ದುಷ್ಕರ್ಮಿಗಳು  ಇರಿದು ಕೊಲೆ ಮಾಡಿದ ಘಟನೆ ಇಂದು  ಮಂಗಳವಾರ ಮಧ್ಯಾಹ್ನ‌ ನಡೆದಿದೆ.

ಗುರೂಜಿಯವರ ಆಪ್ತರಾದ ಮಹಾಂತೇಶ್ ಶಿರೂರು, ಮಂಜುನಾಥ್  ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ಹಂತಕ ಮಹಾಂತೇಶ್ ನ ಪತ್ನಿ ವನಜಾಕ್ಷಿ ಯನ್ನು ವಿಚಾರಣೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಖ್ಯಾತ ವಾಸ್ತುತಜ್ಞ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಭೀಕರ ಹತ್ಯೆ

ಖ್ಯಾತ ವಾಸ್ತುತಜ್ಞ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು  ಭೀಕರವಾಗಿ ಹತ್ಯೆಗೈಯಲಾಗಿದೆ. ಪ್ರಸಿದ್ಧ ವಾಸ್ತು ತಜ್ಞರಾದ ಚಂದ್ರ ಶೇಖರ ಗುರೂಜಿ ಅವರನ್ನು ಹುಬ್ಬಳ್ಳಿ ನಗರದ ಉಣಕಲ್ ನ ಪ್ರೆಸಿಡೆಂಟ್ ಹೊಟೇಲ್ ನ ರಿಸಪ್ಶನ್ ಬಳಿ ದುಷ್ಕರ್ಮಿಗಳು  ಇರಿದು ಕೊಲೆ ಮಾಡಿದ ಘಟನೆ ಇಂದು  ಮಂಗಳವಾರ ಮಧ್ಯಾಹ್ನ‌ ನಡೆದಿದೆ.


ಹೊಟೆಲ್ ರಿಸೆಪ್ಶನಿಸ್ಟ್ ಬಳಿ ಭಕ್ತರ ಸೋಗಿನಲ್ಲಿ ಬಂದು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.  ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.


ಹುಬ್ಬಳ್ಳಿಯಲ್ಲಿ ಹೋಟೆಲ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ 12.30ರ ವೇಳೆಗೆ ಡಾ.ಚಂದ್ರಶೇಖರ್ ಗುರೂಜಿ ಮೇಲೆ ದಾಳಿ ನಡೆಸಿದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.