Wednesday, March 18, 2026
Home Blog Page 241

ತರಗತಿಯಲ್ಲಿ ಗಲಾಟೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯನ್ನು ಥಳಿಸಿದ ಶಿಕ್ಷಕಿ – ಪ್ರಕರಣ ದಾಖಲು, ಶಿಕ್ಷಕಿ ಅಮಾನತು -ವೀಡಿಯೊ ವೈರಲ್

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ತರಗತಿಯಲ್ಲಿ ಗಲಾಟೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕಿಯೊಬ್ಬರು ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಥಳಿಸಿದ ವಿಡಿಯೋ ವೈರಲ್ ಆದ ನಂತರ ಮಹಿಳಾ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ತರಗತಿಯಲ್ಲಿ ಗಲಾಟೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕಿಯೊಬ್ಬರು ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ. ಶಿಕ್ಷಕಿಯನ್ನು ಸುನಿಲ್ ಕುಮಾರಿ ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಅಸೋಹಾ ಬ್ಲಾಕ್‌ನಲ್ಲಿರುವ ಇಸ್ಲಾಂ ನಗರ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ದಾಖಲಾಗಿದೆ.

ಮಾಹಿತಿ ಪಡೆದ ನಂತರ, ಉನ್ನಾವೊ ಜಿಲ್ಲಾ ಪೊಲೀಸರು ಸ್ವಯಂ-ಪ್ರೇರಿತ ಸಂಜ್ಞೆ ತೆಗೆದುಕೊಂಡ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಸೋಹ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚಿಸಿದರು.

ವೀಡಿಯೋ ನೋಡಿದ ಬಳಿಕ ನಾವು ತನಿಖೆ ಆರಂಭಿಸಿದ್ದು, ಶಾಲೆಯ ಆವರಣದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಉನ್ನಾವೋ, ಅಂಜಯ್ ತಿವಾರಿ ಹೇಳಿದ್ದಾರೆ. ಅಲ್ಲದೆ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಕೃಷ್ಣಲೀಲೆ, ಕರ್ಣಪರ್ವ, ಗದಾಪರ್ವ – ಇಂದು ಎಡನೀರು ಮಠದಲ್ಲಿ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ

ಪರಮಪೂಜ್ಯ  ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಎಡನೀರು ಮಠದಲ್ಲಿ ನಡೆಯಲಿವೆ.

ಚಾತುರ್ಮಾಸ್ಯ ವ್ರತಾಚರಣೆಯು ದಿನಾಂಕ 13.07.2022ರಿಂದ  10.09.2022ರ ವರೆಗೆ ನಡೆಯಲಿದೆ.

ಇಂದು ದಿನಾಂಕ  13.07.2022 ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

ಆ ಪ್ರಯುಕ್ತ ಇಂದು, (13.07.2022)  3 ಘಂಟೆಗೆ ಸರಿಯಾಗಿ ಹನುಮಗಿರಿ ಮೇಳದವರಿಂದ ಕೃಷ್ಣಲೀಲೆ, ಕರ್ಣಪರ್ವ, ಗದಾಪರ್ವ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಉಡುಪಿಯಲ್ಲಿ ಪೆರುವಡಿ ನಾರಾಯಣ ಭಟ್ಟರಿಗೆ ‘ಶ್ರೀ ನರಹರಿ ತೀರ್ಥ ಪ್ರಶಸ್ತಿ’

ಶ್ರೀ ಅದಮಾರು ಮಠದ ಪ್ರಾಯೋಜಕತ್ವದಲ್ಲಿ ನೀಡುವ ಯಕ್ಷಗಾನ ಕಲಾ ಪ್ರಶಸ್ತಿಯಾದ ‘ಶ್ರೀ ನರಹರಿ ತೀರ್ಥ ಪ್ರಶಸ್ತಿ’ ಗೆ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ  ಪೆರುವಡಿ ನಾರಾಯಣ ಭಟ್ಟರಿಗೆ ಜು.11ರಂದು ಉಡುಪಿಯಲ್ಲಿ  ನೀಡಿ ಗೌರವಿಸಲಾಯಿತು. 

ಪ್ರಶಸ್ತಿಯು ಪ್ರಶಸ್ತಿಪತ್ರ, ಸ್ಮರಣಿಕೆಗಳೊಂದಿಗೆ ರೂ. 50,000 ನಗದನ್ನು ಒಳಗೊಂಡಿದೆ. 

ಈ ಪ್ರಶಸ್ತಿಯು ಕಳೆದ ವರ್ಷಗಳಲ್ಲಿ ಶ್ರೀ ಬಲಿಪ ನಾರಾಯಣ ಭಾಗವತ,(2020) ಶ್ರೀ ಶ್ರೀಪಾದ ತಿಮ್ಮಣ್ಣ ಭಟ್ಟ ಸಾಲ್ಕೋಡು(2021) ಇವರಿಗೆ ಲಭಿಸಿತ್ತು. 

ಮೊದಲ ಏಕದಿನ ಪಂದ್ಯ – ರಿಷಬ್ ಪಂತ್ ಎರಡು ಅದ್ಭುತವಾದ ಒಂದು ಕೈ ಕ್ಯಾಚ್ – ವೀಡಿಯೊ ವೈರಲ್

ENG Vs IND: ರಿಷಭ್ ಪಂತ್ ಇಂಗ್ಲೆಂಡ್ ಆಟಗಾರರನ್ನು ದಿಗ್ಭ್ರಮೆಗೊಳಿಸಿ ಎರಡು ಅದ್ಭುತವಾದ ಒಂದು ಕೈ ಕ್ಯಾಚ್‌ಗಳನ್ನು ಹಿಡಿದರು.

ಇಂಗ್ಲೆಂಡ್ ವಿರುದ್ಧ ಭಾರತದ ಮೊದಲ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಸ್ಟಂಪ್‌ನ ಹಿಂದಿನಿಂದ ಬೆಂಡ್ ತೆಗೆದುಕೊಂಡು ಬೆನ್ ಸ್ಟೋಕ್ಸ್ ಅವರನ್ನು ಡಕ್ ಆಗಿ ಔಟ್ ಮಾಡಿದರು ನಂತರ ಬುಮ್ರಾ ಅವರ ಬೌಲಿಂಗ್‌ನಲ್ಲಿ ಮತ್ತೊಂದು ಅದ್ಭುತ ಕ್ಯಾಚ್ ಪಡೆದರು.

ಇಂಗ್ಲೆಂಡ್ ವಿರುದ್ಧದ ಮೊದಲ ODI ಪಂದ್ಯದಲ್ಲಿ ಭಾರತೀಯ ವಿಕೆಟ್‌ಕೀಪರ್ ರಿಷಬ್ ಪಂತ್ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡಲು ಎರಡು ಅದ್ಭುತ ಒನ್-ಹ್ಯಾಂಡ್ ಕ್ಯಾಚ್‌ಗಳನ್ನು ಹಿಡಿದರು. ಪಂತ್ ಅವರ ಅದ್ಭುತ ಕ್ಯಾಚ್‌ಗಳನ್ನು ತೋರಿಸುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೀಡಿಯೊದಲ್ಲಿ, ಪಂತ್ ಎರಡು ಕ್ಯಾಚ್‌ಗಳನ್ನು ತೆಗೆದುಕೊಳ್ಳಲು ಬಲಕ್ಕೆ ಡೈವಿಂಗ್ ಮಾಡುವುದನ್ನು ಕಾಣಬಹುದು. ಮೊದಲ ಏಕದಿನ ಪಂದ್ಯದಲ್ಲಿ ಸ್ಟಂಪ್ ಹಿಂದೆ ಪಂತ್ ಅವರ ಅದ್ಭುತ ಕೆಲಸದ ವಿಡಿಯೋ ಇಲ್ಲಿದೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಬುಮ್ರಾ ಅಮೋಘ ಬೌಲಿಂಗ್‌ನಿಂದ ಇಂಗ್ಲೆಂಡ್‌ನ್ನು 7.5 ಓವರ್‌ಗಳಲ್ಲಿ 26/5ಕ್ಕೆ ತಗ್ಗಿಸಿದರು. ಅವರು ತಮ್ಮ ಮೊದಲ ಸ್ಪೆಲ್ನಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದರು. ಸ್ಟೋಕ್ಸ್ ಅವರನ್ನು ಡಕ್ ಆಗಿ ಔಟ್ ಮಾಡುವ ಮೂಲಕ ಶಮಿ ಕೊಡುಗೆ ನೀಡಿದರು.

ಪ್ರಸಿದ್ಧ್ ಕೃಷ್ಣ ಆಗಮಿಸಿ ಮೊಯಿನ್ ಅಲಿ ವಿಕೆಟ್ ಪಡೆದರು. ನಂತರ ಶಮಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರನ್ನು 30 ರನ್‌ಗಳಿಗೆ ಔಟ್ ಮಾಡಿದರು. ಸದ್ಯ ಇಂಗ್ಲೆಂಡ್ ಕೇವಲ 59 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ರಾಷ್ಟ್ರೀಯ ಚೆಸ್ ಟೂರ್ನಿ – ತೆಂಕಿಲದ ವಿವೇಕಾನಂದ ಶಾಲೆಯ ವಿದ್ಯಾರ್ಥಿಯ ವಿಶೇಷ ಸಾಧನೆ

ಅಖಿಲ ಭಾರತ ಚೆಸ್ ಫೆಡರೇಷನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಜುಲೈತಿಂಗಳ 1ರಿಂದ 9ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆದ 17ರ ಒಳಗಿನ ವಯೋಮಾನದ 32ನೇ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಧನುಷ್ ರಾಮ್. ಎಂ( ಶ್ರೀದಿನೇಶ್ ಪ್ರಸನ್ನ ಮತ್ತು ಶ್ರೀಮತಿ ಉಮಾ.ಡಿ. ಪ್ರಸನ್ನ ಇವರಪುತ್ರ) ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ

ಮುಕ್ತ ವಿಭಾಗದಲ್ಲಿ ನಗದು ಪುರಸ್ಕಾರದೊಂದಿಗೆ 12ನೇ ಸ್ಥಾನ ಪಡೆದಿದ್ದಾರೆ ಹಾಗೂ ಒಟ್ಟು ಸುಮಾರು 120 ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ನಗುಮೊಗದ ಅನುಭವಿ ಯಕ್ಷಗಾನ ಕಲಾವಿದ ಸುನಿಲ್ ಪದ್ಮುಂಜ

ಶ್ರೀ ಸುನಿಲ್ ಪದ್ಮುಂಜ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಕಳೆದ ಹದಿನಾಲ್ಕು ವರ್ಷಗಳಿಂದ ಕಟೀಲು ಮೂರನೆಯ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪುಂಡುವೇಷ ಮತ್ತು ಕಿರೀಟ ವೇಷಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ. ಅನಿವಾರ್ಯವಾದರೆ ಸ್ತ್ರೀವೇಷ ಮತ್ತು ಹಾಸ್ಯ ಪಾತ್ರಗಳನ್ನೂ ನಿರ್ವಹಿಸಬಲ್ಲರು.

ವೇಷ ಮಾಡುವುದಕ್ಕೆ ಮೊದಲೇ ವೇಷಭೂಷಣ ತಯಾರಿಕೆಯ ಕೆಲಸವನ್ನು ಕಲಿತಿದ್ದರು. ಈ ವಿಚಾರದಲ್ಲಿ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರಿಂದ ತರಬೇತಿಯನ್ನು ಪಡೆದಿದ್ದರು. ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ, ಬಜಪೆ ರಾಘವದಾಸರ ಶ್ರೀ ಭಾರತೀ ಕಲಾ ಆರ್ಟ್ಸ್, ಶ್ರೀ ಪ್ರಸಾದ್ ದಾಸರ ಮಾತಾಶ್ರೀ ಕಲಾ ಆರ್ಟ್ಸ್ ಉಜಿರೆ ಎಂಬ ಮೂರು ಸಂಸ್ಥೆಗಳಲ್ಲಿ ಯಕ್ಷಗಾನ ವೇಷಭೂಷಣ ತಯಾರಿಕೆಯ ಕೆಲಸಗಳನ್ನು ಮಾಡಿ ಅನುಭವಗಳನ್ನು ಗಳಿಸಿದ್ದರು.

ಕಳೆದ ಹದಿನಾಲ್ಕು ವರ್ಷಗಳಿಂದ ಕಟೀಲು ಮೇಳಗಳ ವೇಷಭೂಷಣ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಇವರದು ಬಿಡುವಿಲ್ಲದ ದುಡಿಮೆ. ಬೇಸಿಗೆಯಲ್ಲಿ ಮೇಳದ ತಿರುಗಾಟ, ಮಳೆಗಾಲದಲ್ಲಿ ವೇಷಭೂಷಣ ತಯಾರಿಕೆ. ಕಳೆದ ಇಪ್ಪತ್ತಾರು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ರಂಗಪ್ರಸಾಧನ ಮತ್ತು ವೇಷಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. 

ನಗುಮೊಗದ ಅನುಭವೀ ಕಲಾವಿದ  ಶ್ರೀ ಸುನಿಲ್ ಪದ್ಮುಂಜ 1976 ಜೂನ್ 1ರಂದು ಈ ಲೋಕದ ಬೆಳಕನ್ನು ಕಂಡವರು. ಓದಿದ್ದು ಹತ್ತನೇ ತರಗತಿ ವರೆಗೆ. ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ. ಬಾಲಕನಾಗಿದ್ದಾಗಲೇ ಯಕ್ಷಗಾನ ಆಸಕ್ತಿ ಇತ್ತು. ಸುಂಕದಕಟ್ಟೆ ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು.

ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯುಂಟಾಗಿತ್ತು. ಎಳವೆಯಲ್ಲಿ ತೆಂಕುತಿಟ್ಟಿನ ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಗಳ ಆಶ್ರಯದಲ್ಲೇ ಬೆಳೆದವರಿವರು. ಮಗನಂತೆಯೇ ಕಂಡು ಸಾಕಿ ಸಲಹಿದ್ದರು. ಸುಂಕದಕಟ್ಟೆಯಲ್ಲಿರುವಾಗ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರಿಂದ ವೇಷಭೂಷಣಗಳನ್ನು ತಯಾರಿಸುವ ಕೆಲಸವನ್ನು ಕಲಿಯಲು ಆರಂಭಿಸಿದರು. ತೆಂಕುತಿಟ್ಟಿನ ಹೆಸರಾಂತ ಪುಂಡುವೇಷಧಾರಿ ಪುತ್ತೂರು ಶ್ರೀ ರತ್ನಾಕರ ಹೆಗ್ಡೆ ಅವರಿಂದ ಹೆಜ್ಜೆಗಾರಿಕೆಯನ್ನು ಕಲಿತರು.

ಸುನಿಲ್ ಪದ್ಮುಂಜ ಅವರು ವೇಷ ಮಾಡುವ ಮೊದಲೇ ವೇಷಭೂಷಣ ತಯಾರಿಕೆಯ ಕೆಲಸವನ್ನು ಮಾಡಿದ್ದರು. (ಎಸ್ ಎಸ್ ಎಲ್ ಸಿ ಕಲಿಕೆಯ ನಂತರ) ಬಳಿಕ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ಬಾಲಗೋಪಾಲನಾಗಿ ರಂಗಪ್ರವೇಶ. ಒಂದು ವರ್ಷ ಸದ್ರಿ ಮೇಳದಲ್ಲಿ ತಿರುಗಾಟ. ಬಳಿಕ ಪುತ್ತೂರು ಶ್ರೀ ದಿವಾಕರ ಹೆಗ್ಡೆ ಅವರ ನಾಯಕತ್ವದ ಕೊಲ್ಲೂರು ಮೇಳದಲ್ಲಿ ಒಂದು ವರ್ಷ ಕಲಾಸೇವೆ.

ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ ಒಂಭತ್ತು ವರ್ಷಗಳ ತಿರುಗಾಟ. ಈ ಸಂದರ್ಭದಲ್ಲಿ ಸ್ತ್ರೀವೇಷ ಮತ್ತು ಪುಂಡುವೇಷಗಳನ್ನು ಮಾಡುತ್ತಿದ್ದರು. ಈ ಎರಡೂ ಮೇಳಗಳಲ್ಲಿ ಹೆಸರಾಂತ ಕಲಾವಿದರ ಒಡನಾಟವು ದೊರಕಿತ್ತು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಅನುಭವವನ್ನು ಪಡೆದುಕೊಂಡರು. ಬಳಿಕ ಒಂದು ವರ್ಷ ಹೊಸನಗರ ಮೇಳದಲ್ಲಿ ಕಲಾಸೇವೆ. 

ಶ್ರೀ ಸುನಿಲ್ ಪದ್ಮುಂಜ ಅವರು ಕಳೆದ ಹದಿನೈದು ವರುಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ  ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಕಟೀಲು ಮೇಳದ ತಿರುಗಾಟ ಮತ್ತು ಶ್ರೀ  ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳು  ಸುನಿಲ್ ಪದ್ಮುಂಜ ಅವರಿಗೆ ಪುರಾಣ ಪ್ರಸಂಗಗಳಲ್ಲಿ ಅನುಭವಗಳನ್ನು ಗಳಿಸುವುದಕ್ಕೆ ಕಾರಣವಾಯಿತು.

ಪುಂಡು ವೇಷಕ್ಕೆ ಸಂಬಂಧಿಸಿದ ವಿಷ್ಣು, ಶ್ರೀರಾಮ, ಶ್ರೀಕೃಷ್ಣ, ಬ್ರಹ್ಮ, ಈಶ್ವರ ಮೊದಲಾದ ಪಾತ್ರಗಳಲ್ಲಿ ಇವರಿಗೆ ಆಸಕ್ತಿ. ದೇವೇಂದ್ರ, ಅರ್ಜುನ, ಗರುಡ, ಬಲರಾಮ ಮೊದಲಾದ ಕಿರೀಟ ವೇಷಗಳನ್ನೂ ಈಗ ಮಾಡುತ್ತಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ಕಟೀಲು ಮೂರನೇ ಮೇಳದಲ್ಲಿ ವ್ಯವಸಾಯ.  ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ಬೆಳೆದವರು.

ಶ್ರೀ ಗೋಪಾಲಕೃಷ್ಣ ಮಯ್ಯ, ಗೇರುಕಟ್ಟೆ ಗಂಗಯ್ಯ ,ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯ,ಕೈರಂಗಳ ಕೃಷ್ಣ ಮೂಲ್ಯ, ಅಡೂರು ಲಕ್ಷ್ಮೀನಾರಾಯಣ ರಾವ್, ಪ್ರಫುಲ್ಲಚಂದ್ರ ನೆಲ್ಯಾಡಿ, ಅಮ್ಮುಂಜೆ ಮೋಹನ ಕುಮಾರ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ತೊಡಿಕಾನ ವಿಶ್ವನಾಥ ಗೌಡ, ಮೊದಲಾದವರ ಒಡನಾಟವೂ ಕಟೀಲು ಮೇಳದಲ್ಲಿ ದೊರಕಿತ್ತು. ಕಸೆ ಸ್ತ್ರೀ ವೇಷಗಳಲ್ಲೂ  ಸುನಿಲ್ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ಹದಿಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ವಾಸವಾಗಿದ್ದಾರೆ.  ಸುನಿಲ್ ಪದ್ಮುಂಜ ಅವರ ಪತ್ನಿ ಶ್ರೀಮತಿ ಗೀತಾ ಶೆಟ್ಟಿ. ಗೀತಾ  ಸುನಿಲ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಶ್ರೀದೇವಿ ಏಳನೆಯ ತರಗತಿ ವಿದ್ಯಾರ್ಥಿನಿ. ಪುತ್ರ ಮಾ| ಶ್ರೀನಿಧಿ ಎರಡನೇ ತರಗತಿ ವಿದ್ಯಾರ್ಥಿ. (ಪದ್ಮುಂಜ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು) ಮಕ್ಕಳಿಬ್ಬರೂ ಶ್ರೀ ರಾಕೇಶ್ ರೈ ಅಡ್ಕ ಇವರಿಂದ ಯಕ್ಷಗಾನ ನಾಟ್ಯ ಕಲಿತು ವೇಷ ಮಾಡುತ್ತಿದ್ದಾರೆ.

ಇವರಿಗೆ ಉಜ್ವಲವಾದ ಭವಿಷ್ಯವು ದೊರೆಯಲಿ. ಶ್ರೀ  ಸುನಿಲ್ ಪದ್ಮುಂಜ ಅವರಿಂದ ಕಲಾಸೇವೆಯು  ನಿರಂತರವಾಗಿ ಸಾಗಲಿ. ಕಲಾಮಾತೆಯ  ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

(ಸುನಿಲ್ ಪದ್ಮುಂಜ, ಯಕ್ಷಗಾನ ಕಲಾವಿದ, ಕಟೀಲು ಮೇಳ, ಮೊ: 9902720134)

ಲೇಖಕ: ರವಿಶಂಕರ್ ವಳಕ್ಕುಂಜ 

ವೇಣೂರು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ತಾಳಮದ್ದಳೆ

ದೇಲಂತಪುರಿ ಮೇಳದ ಇತಿಹಾಸ ಹೊಂದಿರುವ ವೇಣೂರು ಯಕ್ಷಗಾನ ಪ್ರದರ್ಶನಗಳ ಮತ್ತು ಕಲಾವಿದರ ನೆಲೆಬೀಡಾಗಿದ್ದು ಹಾಸ್ಯರತ್ನ ಸುಂದರ ಆಚಾರ್ಯರ ಕೊಡುಗೆಯು ನಾಡಿಗೆ ಕೀರ್ತಿಯನ್ನು ತಂದಿದೆ ಎಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ರಾವ್ ತಿಳಿಸಿದರು. ವೇಣೂರು ಭರತೇಶ ಸಭಾಭವನದ ಅರ್ಕುಳ ಸುಬ್ರಾಯ ಆಚಾರ್ಯ ವೇದಿಕೆಯಲ್ಲಿ ಜರಗಿದ ಸುಂದರ ಆಚಾರ್ಯರ ಪ್ರಥಮ ಸಂಸ್ಮರಣಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ವೇಣೂರು ಸುಂದರ ಆಚಾರ್ಯರ ಸಂಸ್ಮರಣಾ ಭಾಷಣ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಎಂ.ಕೆ ರಮೇಶ ಆಚಾರ್ಯ ಆರಂಭದಲ್ಲಿ ಪುಂಡುವೇಷಧಾರಿಯಾಗಿದ್ದ ಸುಂದರಾಚಾರ್ಯರು ಹಾಸ್ಯಗಾರರಾಗಿ ಸುರತ್ಕಲ್ ಮೇಳದಲ್ಲಿ 42 ವರ್ಷಗಳ ತಿರುಗಾಟದಲ್ಲಿ ಶೇಣಿ, ಸಾಮಗ ತೆಕ್ಕಟ್ಟೆಯಂತಹ ಮಹಾನ್ ಕಲಾವಿದರಿಂದ ಮೆಚ್ಚುಗೆ ಪಡೆದವರಾಗಿದ್ದು ಪೌರಾಣಿಕ ಐತಿಹಾಸಿಕ ಮತ್ತು ತುಳು ಯಕ್ಷಗಾನ ಪ್ರಸಂಗಗಳಲ್ಲಿ ಅವರು ನಿರ್ವಹಿಸಿದ ನೂರಾರು ಪಾತ್ರಗಳಲ್ಲಿ ಅವರ ಸ್ವಂತಿಕೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.


ಸಂಸ್ಮರಣಾ ಪ್ರಶಸ್ತಿ ಪ್ರದಾನ: ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವರಾಮ ಜೋಗಿ ಅವರ 63 ವರ್ಷಗಳ ತಿರುಗಾಟವು ಯಕ್ಷಗಾನ ಕ್ಷೇತ್ರದಲ್ಲಿ ಅವರ ಶೈಲಿಯಿಂದಾಗಿ ಅಚ್ಚಳಿಯದೆ ಉಳಿದಿದೆ ಎಂದು ತಿಳಿಸಿ ವೇಣೂರು ಸುಂದರಾಚಾರ್ಯರ ದೀರ್ಘಕಾಲದ ಸಹ ಕಲಾವಿದರಾದ ಜೋಗಿ ಅವರಿಗೆ ಸುಂದರ ಆಚಾರ್ಯರ ಪ್ರಥಮ ಸಂಸ್ಮರಣಾ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಸೂಕ್ತವಾಗಿರುವುದಾಗಿ ಅಭಿನಂದನಾ ನುಡಿಗಳಲ್ಲಿ ರಮೇಶ ಆಚಾರ್ಯರು ಸಂತಸ ವ್ಯಕ್ತಪಡಿಸಿದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೋಗಿ ಅವರು ಸುಂದರಾಚಾರ್ಯರೊ0ದಿಗಿನ ಮೇಳದ ತಿರುಗಾಟವು ಸಾಹೋದರ್ಯ ಭಾವದಿಂದ ಕೂಡಿತ್ತು. ಉದರಂಬರಣಕ್ಕಾಗಿ ಯಕ್ಷಗಾನ ಕ್ಷೇತ್ರಕ್ಕೆ ಬಂದ ನಾನು ಕಲಾಮಾತೆಯ ಅನುಗ್ರಹದಿಂದ ಕಲಾವಿದರ ಮತ್ತು ಕಲಾಭಿಮಾನಿಗಳ ಪ್ರೀತಿಯಿಂದ ಸಕ್ರಿಯನಾಗಿದ್ದೇನೆಂದು ತಿಳಿಸಿ ಈ ಪ್ರಶಸ್ತಿಯು ನನಗೆ ಅತ್ಯಂತ ದೊಡ್ಡ ಗೌರವವನ್ನು ತಂದಿದೆ ಎಂದು ಕೃತಜ್ಞತೆ ಸಲ್ಲಿಸಿದರು.


ನುಡಿ ನಮನ: ವೇಣೂರಿನ ಪ್ರತಿಭಾವಂತ ಯುವ ಕಲಾವಿದರಾಗಿ ಜನಪ್ರಿಯರಾಗಿದ್ದಾಗಲೇ ಅಸ್ತಂಗತರಾದ ವೇಣೂರು ಸುಂದರಾಚಾರ್ಯರ ಕಿರಿಯ ಪುತ್ರ ಭಾಸ್ಕರಚಾರ್ಯ ಮತ್ತು ಹಿರಿಯಡ್ಕ ಮೇಳದ ಕಲಾವಿದ-ಪ್ರಬಂಧಕರಾಗಿದ್ದ ವಾಮನ ಕುಮಾರ್ ಅವರ ಕಲಾಸಾಧನೆಯನ್ನು ಪೂಕಳ ಲಕ್ಷ್ಮೀನಾರಾಯಣ ಭಟ್ ಸ್ಮರಿಸಿ ಮಹಾನ್ ಕಲಾವಿದ ಕೀರ್ತಿಶೇಷ ಅರ್ಕುಳ ಸುಬ್ರಾಯಾಚಾರ್ಯ ವೇದಿಕೆಯಲ್ಲಿ ಸಾರ್ಥಕ ಕಾರ್ಯಕ್ರಮ ಸಂಪನ್ನಗೊ0ಡಿದೆ ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿದ್ದ ಕಲಾಪೋಷಕ ಶ್ರೀಪತಿ ಭಟ್ ಮೂಡಬಿದ್ರೆ, ಉದ್ಯಮಿ ಭಾಸ್ಕರ್ ಪೈ ವೇಣೂರು, ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಶುಭ ಹಾರೈಸಿದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಸಮಿತಿಗೆ ನೀಡಿದ ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿ ಅವರ ಶುಭ ಸಂದೇಶವನ್ನು ತಿಳಿಸಲಾಯಿತು.


ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ಶ್ರೀ ಕಾಳಿಕಾಂಬಾ ದೇವಳದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಮಾತನಾಡಿ ಕಲಾವಿದರ ತ್ಯಾಗ, ಕಲಾ ಪ್ರೀತಿ ಮತ್ತು ಕಲಾಭಿಮಾನಿಗಳ ಬೆಂಬಲದಿ0ದ ಯಕ್ಷಗಾನ ಉಳಿದು ಬೆಳೆದು ಬಂದಿದೆ. ವೇಣೂರು ಸುಂದರ ಆಚಾರ್ಯರ ಸಾಧನೆ ಮತ್ತು ಕೊಡುಗೆಗಾಗಿ ಅವರ ಸಂಸ್ಮರಣೆಯು ನಿರಂತರವಾಗಿ ನಡೆಯುವಂತಹ ವ್ಯವಸ್ಥೆಯಾಗುವಂತೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಆಚಾರ್ಯ ವೇಣೂರು, ಅಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ, ಸುಂದರ ಆಚಾರ್ಯರ ಪತ್ನಿ ಪ್ರೇಮಾವತಿ ಉಪಸ್ಥಿತರಿದ್ದರು. ಕುಮಾರಿ ಶ್ರೇಯಾ ಅಲಂಕಾರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿದರು. ಸಮಿತಿಯ ಸಲಹೆಗಾರ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪ್ರಭಾಕರ ಪ್ರಭು ವೇಣೂರು ಸನ್ಮಾನ ಪತ್ರ ವಾಚಿಸಿದರು.


ಸಂಸ್ಮರಣಾ ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ಕುಲಾಲ್ ವೇಣೂರು, ಚಂದ್ರಶೇಖರ ಭಟ್ ಕೊಂಕಣಾಜೆ, ಸದಾಶಿವ ಆಚಾರ್ಯ ಕೊಡ್ಲೆ, ಅಶೋಕ್ ಆಚಾರ್ಯ ವೇಣೂರು, ಖಜಾಂಜಿ ಸೀತಾರಾಮ ಆಚಾರ್ಯ ವೇಣೂರು, ಸಹ ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ, ಭಾಸ್ಕರಾಚಾರ್ಯ ಅಂಡಿ0ಜೆ, ಪ್ರಭಾಕರ ಆಚಾರ್ಯ, ಮಮತಾ.ವಿ ಆಚಾರ್ಯ ಮಂಗಳೂರು, ಯಶೋಧರ ಆರಿಗ, ಸತೀಶ್ ಆಚಾರ್ಯ, ಗಂಗಾಧರಾಚಾರ್ಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ದಿನೇಶ ಶರ್ಮ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ಪ್ರಕಾಶ ಪುರೋಹಿತ್ ವೇಣೂರು ವಂದಿಸಿದರು.


ಸದಾನಂದ ಆಚಾರ್ಯ ನೂರಾಲ್ ಬೆಟ್ಟು ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಕಣಾರ್ಜುನ ಮತ್ತು ವಾಲಿಮೋಕ್ಷ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ದಿವಾಕರ ಆಚಾರ್ಯ ಪೊಳಲಿ, ಚಂದ್ರಶೇಖರ ಭಟ್ ಕೊಂಕಣಾಜೆ, ಸುಧಾಸ್ ಕಾವೂರು, ಯೋಗೀಶ್ ಕುಂದಲ್ಕೋಡಿ, ಯೋಗೀಶ್ ಆಚಾರ್ಯ ಉಳೆಪಾಡಿ, ಕುಮಾರಿ ಪೂಜಾ ಆಚಾರ್ಯ ಶಿರ್ತಾಡಿ, ಸತೀಶ್ ಚಾರ್ಮಾಡಿ ಅರ್ಥದಾರಿಗಳಾಗಿ ಎಂ.ಕೆ ರಮೇಶ ಆಚಾರ್ಯ, ಪೂಕಳ ಲಕ್ಷ್ಮೀನಾರಾಯಣ ಭಟ್, ಜಬ್ಬಾರ್ ಸಮೋ, ಬಂಟ್ವಾಳ ಜಯರಾಮ ಆಚಾರ್ಯ, ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸತೀಶ್ ಆಚಾರ್ಯ ಮಾಣಿ, ಅಶೋಕ ಆಚಾರ್ಯ ವೇಣೂರು, ದಿನೇಶ ಶರ್ಮ ಕೊಯ್ಯೂರು ಭಾಗವಹಿಸಿದ್ದರು.

ಪಯ್ಯನ್ನೂರಿನ (ಕಣ್ಣೂರು, ಕೇರಳ) ಆರ್‌ಎಸ್‌ಎಸ್ ಕಚೇರಿ ಮೇಲೆ ಬಾಂಬ್ ದಾಳಿ

ಮಂಗಳವಾರ ಬೆಳಗ್ಗೆ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ.

ಮಂಗಳವಾರ ಬೆಳಗ್ಗೆ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆ ಸಮೀಪದಲ್ಲಿಯೇ ಈ ದಾಳಿ ನಡೆದಿದೆ. ಬಾಂಬ್ ದಾಳಿಯ ಪರಿಣಾಮವಾಗಿ ಯಾವುದೇ ಗಾಯಗಳು ವರದಿಯಾಗಿಲ್ಲ. ಬಿಜೆಪಿ ನಾಯಕ ಟಾಮ್ ವಡಕ್ಕನ್, ಇಂತಹ ದಾಳಿಗಳನ್ನು ತಡೆಯುವಲ್ಲಿ ವಿಫಲವಾದ ರಾಜ್ಯದ ಆಡಳಿತವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.

ಬಿಜೆಪಿಯ ಟಾಮ್ ವಡಕ್ಕನ್, “ಸಾಮಾಜಿಕ ಸಂಘಟನೆಗಳ ಮೇಲೆ ಬಾಂಬ್ ಎಸೆಯುವ ಮಟ್ಟಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಆಘಾತಕಾರಿ ಮತ್ತು ದುರದೃಷ್ಟಕರವಾಗಿದೆ ಮತ್ತು ನಾಗರಿಕ ಸಮಾಜದಲ್ಲಿ ಅದು ಸ್ವೀಕಾರಾರ್ಹವಲ್ಲ. ಈ ಹಿಂದೆಯೂ ಸಹ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿಗಳು ನಡೆದಿವೆ. ಸಮಾಜಮುಖಿ ಕೆಲಸಗಳಲ್ಲಿ ಮತ್ತು ಈ ರೀತಿಯ ಕಾನೂನು ಸುವ್ಯವಸ್ಥೆಯನ್ನು ತ್ವರಿತವಾಗಿ ನಿಭಾಯಿಸಬೇಕು.ಇದಕ್ಕೆ ಪೊಲೀಸರು ಮತ್ತು ರಾಜ್ಯ ಆಡಳಿತವು ಜವಾಬ್ದಾರರಾಗಿರುತ್ತಾರೆ” ಎಂದು ಹೇಳಿದ್ದಾರೆ.

“ಪೊಲೀಸರ ಕುಮ್ಮಕ್ಕು ತುಂಬಾ ಅಪಾಯಕಾರಿ. ಪೊಲೀಸ್ ಠಾಣೆ 100 ಮೀಟರ್ ದೂರದಲ್ಲಿದ್ದರೂ ಏನೂ ಆಗದ ನಿದರ್ಶನಗಳಿವೆ. ಕಣ್ಣೂರಿನಂತಹ ಸೂಕ್ಷ್ಮ ಜಿಲ್ಲೆಯಲ್ಲಿ ಕಚೇರಿಗಳಿಗೆ ವಿಶೇಷವಾಗಿ ರಕ್ಷಣೆ ನೀಡಬೇಕು. ಅದು ಮಾಡಿಲ್ಲ. ಅಂದರೆ ಸುಮ್ಮನೆ ಅಲ್ಲ. ನಿರ್ಲಕ್ಷ್ಯ ಆದರೆ ಇದನ್ನು ಹೇಳಲು ವಿಷಾದಿಸುತ್ತೇನೆ ಮತ್ತು ರಾಜ್ಯದಲ್ಲಿ ಯಾವುದೇ ರಾಜಕೀಯ ಕಚೇರಿಗೆ ಹಾನಿಯಾದರೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಅವರು ವಿವರಿಸಿದರು.

ಮುಸ್ಲಿಂ ಸಮುದಾಯಕ್ಕೆ ಆರ್‌ಎಸ್‌ಎಸ್ ಮನವಿ: ಜುಲೈ 9 ರಂದು, ಉದಯಪುರ ಮೂಲದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯನ್ನು ಆರ್‌ಎಸ್‌ಎಸ್ ಖಂಡಿಸಿತು ಮತ್ತು ಅಂತಹ ಘಟನೆಗಳನ್ನು “ಉಗ್ರವಾಗಿ” ವಿರೋಧಿಸಲು ಮುಸ್ಲಿಂ ಸಮುದಾಯವು ಮುಂದೆ ಬರುವಂತೆ ಮನವಿ ಮಾಡಿತು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, ಇಂತಹ ಘಟನೆಗಳು ಸಮಾಜ ಅಥವಾ ದೇಶದ ಹಿತಾಸಕ್ತಿಯಲ್ಲ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ, ಯಾರಿಗಾದರೂ ಏನಾದರೂ ಇಷ್ಟವಾಗದಿದ್ದರೆ ಅದಕ್ಕೆ ಪ್ರತಿಕ್ರಿಯಿಸಲು ಪ್ರಜಾಸತ್ತಾತ್ಮಕ ಮಾರ್ಗವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ಸಮಾಜವು ಶಕ್ತಿಯುತ, ಸಾಂವಿಧಾನಿಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ, ಮುಸ್ಲಿಂ ಸಮಾಜವೂ ಇಂತಹ ಘಟನೆಯನ್ನು ನಿಷೇಧಿಸುವ ನಿರೀಕ್ಷೆಯಿದೆ, ಕೆಲವು ಬುದ್ಧಿಜೀವಿಗಳು ಇದನ್ನು ವಿರೋಧಿಸಿದ್ದಾರೆ, ಆದರೆ ಮುಸ್ಲಿಂ ಸಮಾಜವು ಮುಂದೆ ಬಂದು ಇದನ್ನು ತೀವ್ರವಾಗಿ ವಿರೋಧಿಸಬೇಕು. ಸಮಾಜದ ಹಿತಾಸಕ್ತಿ ಅಥವಾ ದೇಶದ ಹಿತಾಸಕ್ತಿ ಅಲ್ಲ, ಇದನ್ನು ಸಂಪೂರ್ಣವಾಗಿ ನಿಷೇಧಿಸುವುದು ಅವಶ್ಯಕ.

ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆ – ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ

ಪರಮಪೂಜ್ಯ  ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಎಡನೀರು ಮಠದಲ್ಲಿ ನಡೆಯಲಿವೆ.

ಚಾತುರ್ಮಾಸ್ಯ ವ್ರತಾಚರಣೆಯು ದಿನಾಂಕ 13.07.2022ರಿಂದ  10.09.2022ರ ವರೆಗೆ ನಡೆಯಲಿದೆ. ನಾಳೆ ದಿನಾಂಕ  13.07.2022 ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

ಅಪರಾಹ್ನ 2 ಘಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ.

3 ಘಂಟೆಗೆ ಸರಿಯಾಗಿ ಹನುಮಗಿರಿ ಮೇಳದವರಿಂದ ಕೃಷ್ಣಲೀಲೆ, ಕರ್ಣಪರ್ವ, ಗದಾಪರ್ವ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಬೈತಡ್ಕ ಗೌರಿ ಹೊಳೆ ಅಪಘಾತ ಪ್ರಕರಣ – ಎರಡೂ ಮೃತದೇಹಗಳು ಪತ್ತೆ

ಇತ್ತೀಚೆಗಿನ ವರದಿಯ ಪ್ರಕಾರ ಬೈತಡ್ಕ ಗೌರಿ ಹೊಳೆ ಅಪಘಾತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವಕರ  ಮೃತದೇಹಗಳು ಪತ್ತೆಯಾಗಿದೆ. ಇಬ್ಬರಲ್ಲಿ ಓರವನ ಮೃತದೇಹ ಇಂದು ಬೆಳಗ್ಗೆ 8 ಘಂಟೆಗೆ ಪತ್ತೆಯಾಗಿದೆ.

ಬೈತಡ್ಕ ಗೌರಿಹೊಳೆ ಸೇತುವೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಹೊಳೆಗೆ ಬಿದ್ದಿದ್ದ ಭಾರೀ ಗಾತ್ರದ ಮರವೊಂದರಲ್ಲಿ ಸಿಕ್ಕಿಹಾಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.ನಿನ್ನೆಯ ವರೆಗೆ ಹೋಳೆ ತುಂಬಿ ಹರಿಯುತ್ತಿದ್ದುದರಿಂದ ಆ ಮರದ ದಿಮ್ಮಿ ಕಾಣಿಸುತ್ತಿರಲಿಲ್ಲ.

ಇಂದು ಮಳೆಯ ಜೊತೆಗೆ ಹೊಳೆಯ ನೀರಿನ ಮಟ್ಟವೂ ಕಡಿಮೆಯಾಗಿದೆ. ಆದ್ದರಿಂದ ಆ ಮರದ ದಿಮ್ಮಿಯಲ್ಲಿ ನೇತಾಡುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಮರಕ್ಕಡದ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹರಿಯುತ್ತಿದ್ದ ಹೊಳೆಯಲ್ಲಿ ಇದ್ದ ಮರದ ಕೊಂಬೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೊದಲ ಮೃತದೇಹ ಪತ್ತೆಯಾದ 50 ಮೀಟರ್ ದೂರದಲ್ಲಿ ಇನ್ನೊಂದು ಮೃತದೇಹವೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.  ಸ್ಥಳೀಯ ಜನರಿಗೆ ಈಗ ಎರಡನೇ ಮೃತದೇಹವೂ ಕಾಣಸಿಕ್ಕಿದೆ. 

ಪೊಲೀಸ್ ಇಲಾಖೆಯವರು ಆಗಮಿಸಿದ್ದು ಮೃತದೇಹವನ್ನು ಮೇಲೆತ್ತಿ ಶವಪರೀಕ್ಷೆಗೆ ಕಳುಹಿಸುವ ಕಾರ್ಯ ಇನ್ನಷ್ಟೇ ಆಗಬೇಕಾಗಿದೆ.