ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳೂ, ಮಂದಾರ್ತಿ ಮೇಳದ ಹಿಮ್ಮೇಳ ಕಲಾವಿದರೂ ಆದ ಮಹೇಶ್‌ಕುಮಾರ್ ಇವರ ಗೃಹಪ್ರವೇಶ 06-05-2023ರಂದು ಮಂದಾರ್ತಿಯಲ್ಲಿ ಜರುಗಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ನೂತನ ಮನೆಗೆ ಭೇಟಿ ನೀಡಿ, ಯಕ್ಷಶಿಕ್ಷಣ ಟ್ರಸ್ಟಿನ ವತಿಯಿಂದ ಉಡುಗೊರೆಯಾಗಿ 50,000 ರೂಪಾಯಿಯನ್ನು ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್, ಸದಸ್ಯರಾದ ಎಸ್. ವಿ. ಭಟ್, ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.
ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ 5 ದಿನಗಳ ವೇಷಗಾರಿಕೆ ಕಮ್ಮಟ ಇಂದು 13.05.2023 ಶ್ರೀ ಜನಾರ್ದನ ಮಂಟಪದಲ್ಲಿ ಸಮಾಪನಗೊಂಡಿತು.
ನರಸಿಂಹ ತುಂಗ ಮತ್ತು ಮಿಥುನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ 20 ವಿದ್ಯಾರ್ಥಿಗಳು ವಿವಿಧ ವೇಷಗಳ ಮುಖವರ್ಣಿಕೆ ಮಾಡುವುದು ಮತ್ತು ಕಿರೀಟ ಕಟ್ಟಿಕೊಳ್ಳುವ ಕೌಶಲವನ್ನು ಈ ಶಿಬಿರದಲ್ಲಿ ತಿಳಿದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಶ್ರೀ ವಿಜಯಕುಮಾರ್ ಮುದ್ರಾಡಿ, ಶ್ರೀಮತಿ ವಿದ್ಯಾ ಪ್ರಸಾದ್ ಹಾಗೂ ಶ್ರೀ ಗೋವಿಂದ ಭಂಡಾರಿ ಪಾಲ್ಗೊಂಡರು. ಶ್ರೀ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರದ್ಧೆಯಿಂದ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಮಂಡಳಿಯ ಅಧ್ಯಕ್ಷ ಕೆ. ಅಜಿತ್‌ಕುಮಾರ್ ಮಾತನಾಡಿ ಮುಂದೆ ಪ್ರತಿ ಭಾನುವಾರ ಯಕ್ಷಗಾನ ನೃತ್ಯ ಅಭಿನಯ ಮತ್ತು ವೇಷಗಾರಿಕೆ ತರಗತಿಗಳು ಜರುಗಲಿವೆ ಎಂದು ತಿಳಿಸಿದರು.
ಶಿಬಿರಾರ್ಥಿಗಳ ಪರವಾಗಿ ಶೈಲೇಶ್, ಮಾನ್ಯ, ಅದಿತಿ ಹಾಗೂ ಶ್ರಾವ್ಯ ಇವರು ಶಿಬಿರದ ತಮ್ಮ ಅಮೂಲ್ಯ ಅನುಭವವನ್ನು ಹಂಚಿಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಅರ್ಥಧಾರಿ, ಪತ್ರಕರ್ತ, ಲೇಖಕ, ವಿಮರ್ಶಕ, ಸಂಘಟಕ ಶ್ರೀಕರ ಭಟ್ ಹಾಗೂ ಅರ್ಥಧಾರಿ, ಸಂಶೋಧಕ, ಲೇಖಕ, ಪ್ರವಚನಕಾರ ಡಾ.ಪಾದೆಕಲ್ಲು ವಿಷ್ಣು ಭಟ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 21ರಿಂದ 27ರ ವರೆಗೆ ನಡೆಯಲಿದ್ದು, ಮೇ 27 ಶನಿವಾರ ಸಂಜೆ 5.00 ಗಂಟೆಗೆ ಶಿರ್ವದ ಮಹಿಳಾ ಸೌಧದಲ್ಲಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ವಿಷಯವನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.
ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ಯಕ್ಷಗಾನ ಕೇಂದ್ರ ಸೇರ್ಪಡೆಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ಇಲ್ಲಿಗೆ ಸೇರಲು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡಲಾಗುವುದು
ಅದರೊಂದಿಗೆ ಶಾಲಾ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಲಾಗುವುದು
ಉಚಿತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯಿದೆ
ಅರ್ಜಿಗಳು ಬಂದ ನಂತರ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ: 22.05.2023. ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 9901190392/ 9900907702/ 9113880188
ಕಾಸರಗೋಡು: ಕೊಟ್ಟಾಯಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ತನ್ನ ಮಾಜಿ ಸ್ನೇಹಿತ ಸೈಬರ್ ಬೆದರಿಕೆಯ ಆರೋಪಿ ಅರುಣ್ ವಿದ್ಯಾಧರನ್ (32) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಸರಗೋಡಿನ ಕಾಞಂಗಾಡ್‌ನಲ್ಲಿರುವ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳದಿಂದ ದೊರೆತ ಗುರುತಿನ ಚೀಟಿಯಿಂದ ಅರುಣ್ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೊಥನಲ್ಲೂರಿನ ವಿ ಎಂ ಅತಿರಾ (26) ಎಂಬಾಕೆ ಅರುಣ್‌ನಿಂದ ಸೈಬರ್ ಬೆದರಿಸುವಿಕೆಯಿಂದ ತನ್ನ ಜೀವನವನ್ನು ಕೊನೆಗೊಳಿಸಿದ ಬೆನ್ನಲ್ಲೇ ಅರುಣ್ ತಲೆಮರೆಸಿಕೊಂಡಿದ್ದ.
ಪೊಲೀಸರು ಹುಡುಕಾಟ ನಡೆಸಿದರೂ ಆತನ ಪತ್ತೆಗೆ ಸಾಧ್ಯವಾಗಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠ ಕೆ.ಕಾರ್ತಿಕ್ ಅವರಿಗೆ ಲುಕ್ ನೋಟಿಸ್ ನೀಡಿದ್ದರು. ಮಣಿಪುರದ ಸಬ್ ಕಲೆಕ್ಟರ್ ಆಶಿಶ್ ದಾಸ್ ಆಕೆಯ ಭಾವ. ಅತಿರಾ ಸೋಮವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮಾನಸಿಕ ಕಿರುಕುಳದಿಂದ ಒಂದು ವರ್ಷದ ಹಿಂದೆ ಅರುಣ್ ಜೊತೆಗಿನ ಸಂಬಂಧವನ್ನು ಅತಿರಾ ಕಡಿದುಕೊಂಡಿದ್ದರು. ಇಬ್ಬರು ನೆರೆಹೊರೆಯವರಾಗಿದ್ದರು. ಆಕೆ ಸೈಬರ್ ಬೆದರಿಸುವಿಕೆ ಮತ್ತು ಆನ್‌ಲೈನ್ ಕಿರುಕುಳಕ್ಕೆ ಬಲಿಯಾದಳು.
ಭಾನುವಾರ ಆಥಿರಾ ಅವರ ‘ಪೆಣ್ಣು ಕಾಣಾಲ್’ ಕಾರ್ಯಕ್ರಮ. ಅದನ್ನು ತಿಳಿದ ಆತ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.
ಪೊಲೀಸರು ಅರುಣ್‌ಗೆ ಕರೆ ಮಾಡಿ ಸೋಮವಾರ ಬೆಳಗ್ಗೆ ಠಾಣೆಗೆ ಹಾಜರಾಗುವಂತೆ ತಿಳಿಸಿದರು. ಆದರೂ ಅರುಣ್ ಹಿಂದೆ ಸರಿಯಲಿಲ್ಲ. ಅವರು ಫೇಸ್ ಬುಕ್ ಮೂಲಕ ಆಶಿಶ್ ದಾಸ್ ಮೇಲೆ ನಿಂದನೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಅತಿರಾ ಕಠಿಣ ಹೆಜ್ಜೆ ಇಟ್ಟಿದ್ದಾಳೆ. ಆಶಿಶ್ ದಾಸ್ ಆಕೆಯ ಮಾನಸಿಕ ಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಮೂರು ಮಂದಿ ವಿದ್ಯಾರ್ಥಿಗಳು 2023ರ ಎನ್‌ಡಿಎ – 1 (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ- 1) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೆಂಗಳೂರಿನ ಖುಷಿಕರ ಬಿ.ಎಸ್ ಹಾಗೂ ಉದಯಕಲಾ ಎನ್.ಎಲ್ ದಂಪತಿ ಪುತ್ರ ಪ್ರಜ್ವಲ್ ಬಿ.ಕೆ, ಕಡಬದ ಕೃಷ್ಣ ಮೂರ್ತಿ ಕೆ ಹಾಗೂ ಅನುಪಮ ದಂಪತಿ ಪುತ್ರ ಶ್ರೀಶ ಶರ್ಮ ಕೆ ಹಾಗೂ ಪುರುಷರಕಟ್ಟೆಯ ಚರಣ್ ಕುಮಾರ್ ಹಾಗೂ ಮಾಲತಿ ದಂಪತಿ ಪುತ್ರ ಶ್ಯಮಂತ್ ಕುಮಾರ್ ಸಿ.ಕೆ ಎನ್‌ಡಿಎ ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಯುಪಿಎಸ್‌ಇಯು ವರ್ಷಕ್ಕೆ ಎರಡು ಬಾರಿ ಎನ್‌ಡಿಎ ಪರೀಕ್ಷೆ ನಡೆಸುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಮೊದಲ ಪರೀಕ್ಷೆ ನಡೆದಿತ್ತು. ದೇಶಾದ್ಯಂತ ಸುಮಾರು ಐದು ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಷ್ಟು ಮಂದಿ ವಿದ್ಯಾರ್ಥಿಗಳಲ್ಲಿ ಕೇವಲ ಎಂಟು ಸಾವಿರ ಮಂದಿ ವಿದ್ಯಾರ್ಥಿಗಳಷ್ಟೇ ಎಸ್‌ಎಸ್‌ಬಿ (ಸರ್ವಿಸ್ ಸೆಲೆಕ್ಷನ್ ಬೋರ್ಡ್) ನಡೆಸುವ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಸಂದರ್ಶನದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಮುಂದೆ ಸೈನಿಕ ದಳ, ನೌಕಾದಳ ಅಥವ ವಾಯುದಳದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲಿದ್ದು ನಂತರ ಭಾರತೀಯ ಸೇನೆಯಲ್ಲಿ ನಿಯುಕ್ತಿ ಹೊಂದಲಿದ್ದಾರೆ.
ಅಂಬಿಕಾ ಪದವಿಪೂರ್ವ ವಿದ್ಯಾಲಯವು ಎನ್‌ಡಿಎ ಪರೀಕ್ಷೆಗಾಗಿ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದು, ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಉತ್ಸಾಹ ಇರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವೆನಿಸಿದೆ.
ಪ್ರತಿವರ್ಷವೂ ಇಲ್ಲಿನ ವಿದ್ಯಾರ್ಥಿಗಳು ಎನ್‌ಡಿಎ ಪರೀಕ್ಷೆಯಲ್ಲಿ ಸಾಧನೆ ತೋರುತ್ತಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವುದರೊಂದಿಗೆ ಎನ್‌ಡಿಎ ಪರೀಕ್ಷೆಗೂ ತರಬೇತಿ ಲಭ್ಯವಾಗುತ್ತಿರುವುದು ಹೆತ್ತವರ ಸಂತಸಕ್ಕೂ ಕಾರಣವೆನಿಸಿದೆ.
ಉಡುಪಿ ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಅಂಬಲಪಾಡಿಯ ಕಂಬ್ಳಕಟ್ಟದಲ್ಲಿರುವ ಸಂಸ್ಥೆಯ ಜನಾರ್ದನ ಮಂಟಪದಲ್ಲಿ ಹತ್ತು ದಿನಗಳ ಪರ್ಯಂತ ನಡೆಸಿದ ‘ಯಕ್ಷಗಾನ ಶಿಬಿರ’ ಇಂದು (04-05-2023) ಸಮಾಪನಗೊಂಡಿತು.
ಶಿಬಿರದಲ್ಲಿ 56 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಕೆ.ಅಜಿತ್‌ಕುಮಾರ್ ಸ್ವಾಗತಿಸಿದರು. ನಿಕಟಪೂರ್ವಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ.ಭಟ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಪ್ರಮಾಣಪತ್ರ ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕೆ.ಜೆ. ಗಣೇಶ್, ಕೆ. ಜೆ. ಕೃಷ್ಣ, ಗೋವಿಂದ ಭಂಡಾರಿ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ಕೋಟ ನರಸಿಂಹ ತುಂಗರನ್ನುಶಾಲು ಹೊದಿಸಿ ಗೌರವಿಸಲಾಯಿತು.
ಬಳಿಕ ವಿದ್ಯಾರ್ಥಿಗಳಿಂದ ಪೂರ್ವರಂಗದ ಪ್ರಾತ್ಯಕ್ಷಿಕೆ ಜರಗಿತು. ಮೇ 6ರಿಂದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಕಮ್ಮಟ ಜರಗಲಿದೆ ಎಂದು ಅಧ್ಯಕ್ಷರು ತಿಳಿಸಿದರು.
ಕನ್ನಡದ ಬಹು ಮುಖ್ಯ ಕಥೆಗಾರರಾದ ರಾಘವೇಂದ್ರ ಪಾಟೀಲರ ಹೆಸರಿನಲ್ಲಿ ಕಥಾ ಪ್ರಶಸ್ತಿ ನೀಡುವ ಮೂಲಕ ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಉತ್ತಮ ಕಾರ್ಯವನ್ನು ಮಾಡುತ್ತಿವೆ. ಪಾಟೀಲರ ಬದುಕಿನ ಆದರ್ಶ ಮತ್ತು ಸಾಹಿತ್ಯಕ ಧೋರಣೆಗಳನ್ನು ಅನುಸರಿಸುವುದರೊಂದಿಗೆ ಯೋಗ್ಯ ಬರಹಗಾರರನ್ನು ಆಯ್ದು ಪ್ರಶಸ್ತಿಯನ್ನು ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕನ್ನಡದ ಮಹತ್ವದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಹೇಳಿದರು.
ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ರಂಗಾಯಣದಲ್ಲಿ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಲಾಬಿ, ಸ್ವಜನ ಪಕ್ಷಪಾತಗಳಿಗೆ ಒಳಗಾಗದೆ, ಪಾರದರ್ಶಕ ನೀತಿಯ ಮೂಲಕ ಸತ್ಪಾತ್ರರಿಗಷ್ಟೇ ಯೋಗ್ಯತೆಯನ್ನು ಕಲ್ಪಿಸುವ ಇಂಥ ಯೋಜನೆಗಳು ಭವಿಷ್ಯದಲ್ಲಿ ಯಶಸ್ಸು ಕಾಣಲಿ ಎಂದು ಅವರು ಅಭಿಪ್ರಾಯ ಪಟ್ಟರು.
ಖ್ಯಾತ ಕಾದಂಬರಿಕಾರ ಎಂ. ಆರ್. ದತ್ತಾತ್ರಿಯವರು ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಕಾದಂಬರಿಯ ಕುರಿತು ಮಾತನಾಡಿದರು.
ಯುವ ವಿಮರ್ಶಕ ಮತ್ತು ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀ ವಿಕಾಸ ಹೊಸಮನಿಯವರು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯ ಕುರಿತು ಮಾತನಾಡಿ, ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಮತ್ತು ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯ ಕುರಿತು ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠರು ಸಾಹಿತ್ಯ ವೇದಿಕೆಯ ಕಾರ್ಯ ಚಟುವಟಿಕೆಗಳು ಮತ್ತು ಪಾಟೀಲರ ಕುರಿತು ವಿಚಾರಗಳನ್ನು ಹಂಚಿಕೊಂಡರು.
72 ವಸಂತಗಳನ್ನು ಪೂರೈಸಿದ ಕನ್ನಡದ ಶ್ರೇಷ್ಠ ಕಥೆಗಾರ ರಾಘವೇಂದ್ರ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡದ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಮಹಾಂತೇಶ ನವಲಕಲ್ಲ ಮತ್ತು ಶ್ರೀಲೋಲ ಸೋಮಯಾಜಿಯವರಿಗೆ 2022ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯನ್ನು, ಪ್ರೊ. ರಾಘವೇಂದ್ರ ಪಾಟೀಲರು ವಾಸುದೇವ ನಾಡಿಗ್ ಮತ್ತು ಡಾ. ರತ್ನಾಕರ ಕುನುಗೋಡು ಅವರಿಗೆ ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಸಮಾರಂಭದಲ್ಲಿ ರಾಘವೇಂದ್ರ ಪಾಟೀಲರು ಸ್ವತಃ ತಾವೇ ಇಂಗ್ಲಿಷಿಗೆ ಅನುವಾದಿಸಿದ ‘ದೇಸಗತಿ’ ಕಥಾಸಂಕಲನದ ಇಂಗ್ಲಿಷ್ ಅನುವಾದ ‘In the Domain of White Herons’ ಕೃತಿಯನ್ನು ಖ್ಯಾತ ವಿಮರ್ಶಕ ಡಾ. ಎಂ. ಜಿ. ಹೆಗಡೆಯವರು ಬಿಡುಗಡೆಗೊಳಿಸಿದರು. ತಮ್ಮ ಕಥೆಗಳನ್ನು ತಾವೇ ಅನುವಾದ ಮಾಡುವ ಸವಾಲನ್ನು ಸ್ವೀಕರಿಸಿದ ಪಾಟೀಲರು ಅದರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಇಂಗ್ಲಿಷ್ ಅನುವಾದದ ಮೂಲಕ ಅವರ ಕತೆಗಳು ಇನ್ನಷ್ಟು ಅರ್ಥ ವಿಸ್ತಾರಗಳನ್ನು ಪಡೆದಿವೆ ಎಂದು ಅವರು ನುಡಿದರು.
ರಾಘವೇಂದ್ರ ಪಾಟೀಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟ ‘ತೇರು’ ಕಾದಂಬರಿಯನ್ನು ಹಿಂದಿಗೆ ಭಾಷಾಂತರಿಸಿದ ಹಿರಿಯ ಅನುವಾದಕಿ ಪ್ರೊ ಮಾಲತಿ ಆದವಾನಿಯವರ ಹಿಂದಿ ಅವತರಣಿಕೆ ‘ರಥ್’ ಅನ್ನು ಎಚ್. ಎಸ್. ವೆಂಕಟೇಶಮೂರ್ತಿಯವರು ಬಿಡುಗಡೆಗೊಳಿಸಿದರು.
ಕನ್ನಡದ ಪ್ರತಿಷ್ಠಿತ ಕಥಾ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೇದಿಕೆಯ ಮಹಾಪೋಷಕ ಡಾ. ಬಿ. ಸಿ. ಪ್ರಭಾಕರ, ಸಂಚಾಲಕ ವಿಕಾಸ ಹೊಸಮನಿ, ಎಂ. ಆರ್. ದತ್ತಾತ್ರಿ, ಸಂಕೇತ ಪಾಟೀಲ ಮತ್ತು ಡಾ. ಸುಭಾಷ್ ಪಟ್ಟಾಜೆಯವರನ್ನು ಎಚ್. ಎಸ್. ವೆಂಕಟೇಶ ಮೂರ್ತಿಯವರು ಅಭಿನಂದಿಸಿದರು.
ರಾಘವೇಂದ್ರ ಪಾಟೀಲರ ‘ಮಾಯಿಯ ಮುಖಗಳು’ ಕಥಾಸಂಕಲನಕ್ಕೆ 25 ವರ್ಷ ಮತ್ತು ‘ತೇರು’ ಕಾದಂಬರಿಗೆ 20 ವರ್ಷ ತುಂಬಿದ ಸವಿನೆನಪಿಗೆ ಶ್ರೀ ಆನಂದ ಝಂಜರವಾಡ ಮತ್ತು ಬಸು ಬೇವಿನಗಿಡದ ಆ ಕೃತಿಗಳ ಕುರಿತು ಮಾತನಾಡಿದರು.
ಮಹದೇವ ಹಡಪದ ತಂಡದವರು ಪ್ರಸ್ತುತ ಪಡಿಸಿದ ಪಾಟೀಲರ ‘ಮತ್ತೊಬ್ಬ ಮಾಯಿ’ ನಾಟಕ ನೆರೆದವರನ್ನು ಮಂತ್ರಮುಗ್ಧಗೊಳಿಸಿತು.
ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯೆ ಮೀನಾ ಮೈಸೂರು ಸ್ವಾಗತಿಸಿದರು. ಹನುಮಂತ ಕಾಖಂಡಕಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇಡೀ ದಿನ ಅದ್ದೂರಿಯಾಗಿ ನಡೆದ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಹಿತ್ಯಪ್ರಿಯರು ಕಿಕ್ಕಿರಿದು ನೆರೆದು ಸಮಾರಂಭವನ್ನು ಯಶಸ್ವಿಗೊಳಿಸಿದರು.
ಪುತ್ತೂರು: ಕೇರಳದ ಕಾಲಡಿಯಲ್ಲಿ ಹುಟ್ಟಿದ ಶಂಕರಾಚಾರ್ಯರು ಸಮಾಜದಲ್ಲಿ ತುಂಬಿದ್ದ ಕರಾಳತೆಯನ್ನು ಮಟ್ಟಹಾಕಲು ಪಣತೊಟ್ಟರು. ಸಮಗ್ರ ಭಾರತವನ್ನು ಅದ್ವೈತ ತತ್ವದಡಿಯಲ್ಲಿ ಒಂದುಗೂಡಿಸಿದರು. ಅವರು ವೈದಿಕ ಸಂಸ್ಕೃತಿಯ ಮೂಲಕ ವೇದಗಳನ್ನು ಹಾಗೂ ಧರ್ಮವನ್ನು ಸಂರಕ್ಷಿಸಿದ ಪರಿ ಅದ್ಭುತವಾದುದು ಎಂದು ವಿದ್ವಾಂಸ ವಿದ್ವಾನ್ ಕೇಶವ ಭಟ್ಟ ಕೇಕಣಾಜೆ ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ತತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೋಮವಾರದಂದು ಆಚರಿಸಲಾದ ಶಂಕರ ಜಯಂತಿ ಹಾಗೂ ವಿಶ್ವ ತತ್ವಜ್ಞಾನಿಗಳ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.
ಶಂಕರಾಚಾರ್ಯರು ಹಲವಾರು ಭಾಷ್ಯಗಳನ್ನು ರಚಿಸಿದ್ದಾರೆ. ಅವರ ಭಾಷ್ಯಗಳು ಸುಲಲಿತವಾದ ಭಾಷೆಯಿಂದ ಕೂಡಿವೆ. ಜತೆಗೆ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ತಿಳಿಸುತ್ತವೆ. ಶಂಕರಾಚಾರ್ಯರು ತಮ್ಮ ವ್ಯಕ್ತಿತ್ವ ಹಾಗೂ ಸಾಧನೆಯಿಂದಾಗಿ ಇಂದು ಸಮಾಜದಲ್ಲಿ ಪೂಜಿಸಲ್ಪಡುತ್ತಿದ್ದಾರೆ ಎಂದರಲ್ಲದೆ ಶಂಕರಾಚಾರ್ಯರು ವಿಶ್ವದ ಮೊದಲ ತತ್ವಜ್ಞಾನಿಗಳು. ತದನಂತರ ಬಂದ ಎಲ್ಲಾ ತತ್ವಜ್ಞಾನಿಗಳು ಶಂಕರಾಚಾರ್ಯರು ನಡೆದ ಹಾದಿಯನ್ನು ಅನುಕರಿಸಿದ್ದಾರೆ ಎಂದರು.
ನಮ್ಮ ಅಂತಃ ಸತ್ವದ ಪರಿಚಯವಾಗಬೇಕಾದರೆ ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕು. ದೇಶ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಬೇಕು. ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು. ಮಾತ್ರವಲ್ಲದೆ, ಆದರ್ಶ ಪುರುಷರ ನಡೆ ನಮ್ಮ ಜೀವನದ ಬದಲಾವಣೆಗೆ ಪ್ರೇರಣೆಯಾಗಬೇಕು. ಅವರ ನುಡಿಗಳು ಜೀವನದಲ್ಲೊಂದು ಹೊಸ ಸ್ಪೂರ್ತಿಯನ್ನು ತುಂಬಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ಸಾಧನಾ ಶಿಖರವನ್ನು ಏರಿದ್ದಾರೆ. ವಿಶ್ವವೇ ಅನುಕರಿಸುವಂತೆ ಬದುಕಿದ್ದಾರೆ. ಇಂದಿನ ಸಮಾಜವುಜಾತಿ, ಧರ್ಮಗಳ ನಡುವೆ ಸಿಲುಕಿ ಛಿದ್ರವಾಗಿದೆ. ಇಂತಹ ವಿಚ್ಛಿದ್ರ ಸಮಾಜವನ್ನು ಒಂದೇ ಸೂತ್ರದಡಿಯಲ್ಲಿ ಜೋಡಿಸಲು ಶಂಕರಾಚಾರ್ಯರು ಮತ್ತೊಮ್ಮೆ ಅವತರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಾ ಪ್ರಾರ್ಥಿಸಿ, ವಿದ್ಯಾರ್ಥಿನಿಯರಾದ ಮಹಿಮಾ, ಅಂಕಿತ, ಪಂಚಮಿ ಶಂಕರಾಚಾರ್ಯ ವಿರಚಿತ ಸೋತ್ರವನ್ನು ಹಾಡಿದರು.
ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ವಂದಿಸಿ, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.