Tuesday, September 22, 2026
Home Blog Page 324

ಪ್ರಸಂಗ ನಿಷ್ಠ ಹಾಗೂ ಕವಿನಿಷ್ಠ – ಭಾಗವತ ಶ್ರೇಷ್ಠ

ಯಕ್ಷಗಾನದ ಪ್ರಸಂಗಕ್ಕೆ ಪ್ರಸಂಗದ ಪಠ್ಯವೇ (ಪ್ರಸಂಗ ಪುಸ್ತಕ) ಪ್ರಧಾನವಾಗಿದೆ. ಹಾಗೂ ಪ್ರಸಂಗವನ್ನು ರಚಿಸಿದ ಕವಿಗೆ ಮಹತ್ತರವಾದ ಸ್ಥಾನವಿದೆ. ಇದನ್ನು ಪ್ರತಿಯೊಬ್ಬ ಕಲಾವಿದನೂ ಹಾಗೂ ಕಲಾಪೋಷಕರು, ಕಲಾರಸಿಕರೂ ಅರಿತಿರಲೇಬೇಕು.

    ಯಾಕೆಂದರೆ ಒಂದು ಪ್ರಸಂಗದ ಪ್ರದರ್ಶನದ ಗೆಲುವಿನ ಹಿಂದೆ ಭಾಗವತರು, ಹಿಮ್ಮೇಳದವರು, ಹಾಗೂ ಎಲ್ಲಾ ಕಲಾವಿದರ ಶ್ರಮ  ಇದ್ದಹಾಗೆ ಪ್ರಸಂಗವನ್ನು ರಚಿಸಿದ ಕವಿಯ ಶ್ರಮವೂ ಇರುತ್ತದೆ. ಪ್ರಸಂಗದ ಹಾಗೂ ಕವಿಯ *ಆಶಯ* ವನ್ನು ಮೀರಿ ಕಲಾವಿದ ಹೋಗುವಂತಿಲ್ಲ ಹೋಗಬಾರದು. ಕಲಾವಿದನಾದವನು ಪ್ರಸಂಗಕ್ಕೆ ಹಾಗೂ ಕವಿಗೆ *ನಿಷ್ಠ* ನಾಗಿ ಇದ್ದರೆ ಒಳ್ಳೆಯದು. ಇಂತಹ *ಕವಿ ನಿಷ್ಠೆ* ಹಾಗೂ *ಪ್ರಸಂಗ ನಿಷ್ಠೆ* ಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ರಂಗ ವನ್ನಾಳಿದ ಹಲವು ಮಂದಿ ಕಲಾವಿದರು ಇದ್ದಾರೆ, ಅಂಥವರಲ್ಲಿ *ಯಕ್ಷರಂಗದ ಬೀಷ್ಮ ಅಜಾತಶತ್ರು* ಇತ್ಯಾದಿ ನೆಗಳ್ತೆಗೆ ಪಾತ್ರರಾದ ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ *ಶ್ರೀ ಬಲಿಪ ನಾರಾಯಣ ಭಾಗವತರು* ಅಗ್ರಗಣ್ಯರಾಗಿದ್ದಾರೆ.

    ಯಾಕೆಂದರೆ….
ಕವಿಯು ಪ್ರಸಂಗದಲ್ಲಿ ಬರೆದ ಸಾಲುಗಳನ್ನು ಮಾತ್ರ ಭಾಗವತ ನಾದವನು ಹಾಡಬೇಕು ಎಂಬ ನಿಯಮ ಹಿಂದೆ ಇತ್ತಂತೆ.ಅದರಂತೆ ಬಲಿಪರು ಕೂಡ ಪ್ರಸಂಗ ಸಾಹಿತ್ಯದಲ್ಲಿ ಇದ್ದಂತಹ ಸಾಲುಗಳನ್ನೇ ಹೇಳುತ್ತಾರೆ ಹೊರತು ಬೇರೆ ಸ್ವಂತ ವಾಕ್ಯಗಳನ್ನು ಅಥವಾ ಬದಲಿ ಶಬ್ದಗಳನ್ನು ಹೇಳುವುದಿಲ್ಲ.
ಉದಾಹರಣೆಗೆ: ದೇವ ಲಾಲಿಪುದೀಗ  ಬಿಡದೊಂದು ಯೋಜನ….ಎಂಬ ಪದ  ಹೇಳಿ ಪುನಃ ದೇವ ಎನ್ನುವ ಬದಲು ಕೃಷ್ಣಾ….. ಎಂದು ಸೇರಿಸಿ ಆಲಾಪನೆ ಗೈಯುವುದು. ಲಾಲಿಪುದೆಲೆ ತಾಯೆ ಎನ್ನ ಬಿನ್ನಪವನು…. ಎಂಬ ಪದದಲ್ಲಿ ಕೊನೆಗೆ ಅಮ್ಮ, ಜನನಿ ಇತ್ಯಾದಿ ಶಬ್ದಗಳನ್ನು ಭಾಗವತನಾದವ ಸೇರಿಸಿ ಹಾಡುವುದನ್ನು ನೋಡುತ್ತೇವೆ. ಈ ವಿಚಾರವಾಗಿ ಒಮ್ಮೆ ಬಲಿಪ ರಲ್ಲಿ ಕೇಳಿದಾಗ ಅವರು ಹೇಳಿದ ಮಾತು ಹೀಗಿದೆ.
“ಭಾಗವತನಾದವ ಪ್ರಸಂಗ ಸಾಹಿತ್ಯದಲ್ಲಿ ಕವಿ ಬರೆದ ಸಾಲುಗಳನ್ನು ಮಾತ್ರವೇ ತಾಳಕ್ಕೆ ಮಾತ್ರೆಗೆ ಸರಿಯಾಗಿ ಹೇಳಬೇಕು, ಹೊರತು ತನಗೆ ಇಷ್ಟ ಬಂದ ಬದಲಿ ಶಬ್ದಗಳನ್ನು ಸೇರಿಸಿಕೊಂಡು ಹಾಡಬಾರದು, ನಮಗೆ ಇಷ್ಟ ಬಂದಂತೆ ಸಾಹಿತ್ಯಗಳನ್ನು ಬದಲಿಸಿ ಹಾಡುವುದಾದರೆ ಅಲ್ಲಿ ಕವಿ ಬರೆದದ್ದು ಯಾಕೆ? ಬರೆದ ಕವಿಗೆ ಬೇರೆ ಶಬ್ದಗಳು ಗೊತ್ತಿಲ್ಲದೆ ಬರೆದದ್ದೋ? ಭಾಗವತನಿಗೆ ಕವಿಯನ್ನು ಮೀರಿಹೋಗುವ ಸ್ವಾತಂತ್ರ್ಯ ಇಲ್ಲ.ನೀವು ಸಿನಿಮಾದ ಹಾಡುಗಳನ್ನು ನೋಡಿ ಇಲ್ಲದಿದ್ದರೆ ಶಾಸ್ತ್ರೀಯ ಸಂಗೀತದಲ್ಲಿ ಬರುವ ಪದ್ಯಗಳನ್ನು ಕೇಳಿ,ಅಲ್ಲಿ ಕವಿ ಬರೆದ ಸಾಲುಗಳನ್ನು ಮಾತ್ರವೇ ಹಾಡುಗಾರರು ಹಾಡುತ್ತಾರೆ ವಿನಃ ಇವರ ಸ್ವಂತದ್ದನ್ನು ಸೇರಿಸಿ ಹಾಡುವುದಿಲ್ಲ.(ಲಂಬೋದರ ಲಕುಮಿಕರ ಎಂಬ ಹಾಡಿನಲ್ಲಿ ಲಂಬೋದರ ಎಂದು ಹೇಳಿ ಪುನಃ ಗಣೇಶ, ಗಜಮುಖ, ಎಂದು ಸಂಗೀತದವರು ಹೇಳುವುದಿಲ್ಲ ತಾನೇ?)  ಹಾಗೆಯೇ ಭಾಗವತ ಪ್ರಸಂಗದಲ್ಲಿ ಕವಿ ಬರೆದದ್ದನ್ನು ಬಿಟ್ಟು ಬೇರೆ ಹಾಡಿದರೆ ಅದು ಕವಿಗೆ ಮಾಡಿದ ಅಪಚಾರವಾಗುತ್ತದೆ.”
ಬಲಿಪರ ಈ ಮಾತುಗಳು ಭಾಗವತನಾದವನು ಕವಿಗೆ ಎಷ್ಟು ಗೌರವವನ್ನು ಕೊಡಬೇಕು, ನಿಷ್ಠನಾಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದೆ.
 
*ಪ್ರಸಂಗದ ಆಶಯ*….
ಕೆಲವೊಮ್ಮೆ ಕಲಾವಿದರು ರಂಗದಲ್ಲಿ ಪ್ರಸಂಗದ ಹಾಗೂ ಕವಿಯ ಆಶಯಕ್ಕೆ ವಿರುದ್ಧವಾಗಿ ಅರ್ಥವನ್ನು ಹೇಳುತ್ತಾರೆ.ಕಲಾವಿದನಾದವನು ತನ್ನ ಪ್ರತಿಭೆಯಿಂದ ಅಥವಾ ವಿದ್ವತ್ತಿನಿಂದ ಅರ್ಥಗಾರಿಕೆಯನ್ನು ವಿಸ್ತಾರಗೊಳಿಸಬಹುದು ಆದರೆ ಪ್ರಸಂಗದ ಆಶಯಕ್ಕೆ ಚ್ಯುತಿ ಬಾರದಂತೆ ವರ್ತಿಸಬೇಕಾಗುತ್ತದೆ. ಎಷ್ಟೋಬಾರಿ ಬಲಿಪರು ಹೇಳಿದ್ದು ಇದೆ “ಅರ್ಥ ಬಹಳ ಚಂದವಾಗಿ ತುಂಬಾ ಮಾತಾಡಿದ್ದಾರೆ ಒಳ್ಳೆಯ ವಿಷಯ ಇತ್ತು ಆದರೆ ಕವಿ ಬರೆದ ಪದದ ಅರ್ಥ ಮಾತ್ರ ಬರಲಿಲ್ಲ” ಎಂದರೆ ಕಲಾವಿದನಾದವನು ಪ್ರಸಂಗದ ಪದದಲ್ಲಿ ಅಡಕವಾಗಿರುವ ಅರ್ಥವನ್ನು ಹೇಳದಿದ್ದರೆ ಅವರು ಸಹಿಸುತ್ತಿರಲಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಯಕ್ಷಗಾನ ರಂಗದಲ್ಲಿ ಕಲಾವಿದನಾದವನು ಪ್ರಸಂಗದ ಪಠ್ಯಕ್ಕೆ ಹಾಗೂ ಪ್ರಸಂಗವನ್ನು ರಚಿಸಿದ ಕವಿಗೆ ನಿಷ್ಠನಾಗಿರಬೇಕು ಎಂಬುದು ತಾತ್ಪರ್ಯ.  ಅಂತಹ *ಕವಿ ನಿಷ್ಠ ಪ್ರಸಂಗ ನಿಷ್ಠ ಭಾಗವತ ಶ್ರೇಷ್ಠ* ನಮ್ಮ ಬಲಿಪಜ್ಜ.

ಬಲಿಪ ಭಾಗವತರ ಇಂತಹ ಅನೇಕ ವಿಚಾರಗಳು  ಯಕ್ಷಗಾನ ರಂಗದಲ್ಲಿ ಮುಂದೆ ಕಾಣಿಸಿಕೊಳ್ಳಲಿರುವ ಯುವಕಲಾವಿದರಿಗೆ ಹಾಗೂ ವ್ಯವಸಾಯ ಮಾಡುತ್ತಿರುವ ಎಲ್ಲಾ ಕಲಾವಿದರಿಗೂ ದಾರಿದೀವಿಗೆಯಾಗಲಿ….

ಲೇಖಕ: ಚಂದ್ರಶೇಖರ್ ಭಟ್, “ಅದ್ವೆತ” ಕೊಂಕಣಾಜೆ.

ಚಂದ್ರಶೇಖರ್ ಭಟ್, “ಅದ್ವೆತ” ಕೊಂಕಣಾಜೆ.

‘ಕೊರೊನಾಸ್ತ್ರ’: ಕೊರೊನಾ ವಿಮುಕ್ತಿಯ ಯಕ್ಷ ಜಾಗೃತಿ

ಪ್ರಪಂಚವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾದ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು ಜನಜೀವನವನ್ನು  ಕಂಗೆಡಿಸಿದೆ. ಈ ಸೋಂಕಿನಿಂದ ಪಾರಾಗಲು ಮುನ್ನೆಚ್ಚರಿಕೆಯ ಸಂದೇಶಗಳು ವಿವಿಧ ಮಾಧ್ಯಮಗಳಲ್ಲಿ ನಿರಂತರ ಹರಿದಾಡುತ್ತಿವೆ. ಇದಕ್ಕೆ ಯಕ್ಷಗಾನವೂ ಹೊರತಾಗಿಲ್ಲ. ಈ ಹಿಂದೆ ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ ಮೊದಲಾದ ಜನಜಾಗೃತಿ ಯಕ್ಷಗಾನಗಳನ್ನು ನೀಡಿದ ಕಲಾವಿದರ ತಂಡ ಇದೀಗ ಕೋವಿಡ್-19 ‘ಕೊರೊನಾ’ ಸಾಂಕ್ರಾಮಿಕ ರೋಗದ ವಿರುದ್ಧ ಜಾಗೃತಿ ಸಂದೇಶ ನೀಡುವ ವಿಶೇಷ ಯಕ್ಷಗಾನ ತಾಳಮದ್ದಳೆಯೊಂದನ್ನು ಲಾಕ್ ಡೌನ್ ಅವಧಿಯಲ್ಲಿ ಮತ್ತೊಮ್ಮೆ ಸಾಮಾಜಿಕ ಜಾಲದ ಮೂಲಕ ಪ್ರಸಾರ ಮಾಡುತ್ತಿದೆ.


ಕೃಷ್ಣೋಪದೇಶದ ಹಿನ್ನೆಲೆ: ಮಹಾಭಾರತ ಯುದ್ಧದಲ್ಲಿ ದ್ರೋಣ ವಧೆಯಾದ ಬಳಿಕ ಕುಪಿತನಾದ ಗುರುಪುತ್ರ ಅಶ್ವತ್ಥಾಮ ಪಾಂಡವ ಸೇನೆಯ ಮೇಲೆ ಮಾರಣಾಂತಿಕ ನಾರಾಯಣಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ.  ಅದನ್ನು ಪ್ರತಿಭಟಿಸಲು ಸಿದ್ಧನಾದ ಭೀಮಸೇನನನ್ನು ತಡೆದ ಶ್ರೀಕೃಷ್ಣ ‘ಪ್ರಕೃತಿಯ ಎದುರಿನಲ್ಲಿ ಮಾನವನ ಶಕ್ತಿ ಕ್ಷುಲ್ಲಕ. ಅದಕ್ಕೆ ಶರಣಾಗುವುದೇ ಪರಿಹಾರ’ ಎಂದು ಉಪದೇಶಿಸುತ್ತಾನೆ. ಅವನ ಮುನ್ನೆಚ್ಚರಿಕೆಯಂತೆ ಪಾಂಡವರು ಆ ಮಹಾಸ್ತ್ರಕ್ಕೆ ಶರಣಾಗಿ ಜೀವ ಉಳಿಸಿಕೊಳ್ಳುತ್ತಾರೆ.

ಈ ಘಟನೆಯನ್ನಾಧರಿಸಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ *’ನಾರಾಯಣಾಸ್ತ್ರ – ಕೊರೊನಾಸ್ತ್ರ’* ಎಂಬ ಜನಜಾಗೃತಿಯ ಯಕ್ಷಗಾನ ಪ್ರಸಂಗವನ್ನು ಹೆಣೆಯಲಾಗಿದೆ. ಇದರಲ್ಲಿ ಸುಶ್ರುತನೆಂಬ ವೈದ್ಯ ಪಂಡಿತನ ಮೂಲಕ ಶ್ರೀಕೃಷ್ಣನ ಮಾದರಿಯಲ್ಲಿ ಮನುಕುಲಕ್ಕೆ ಕೋವಿಡ್ ವಿಮುಕ್ತಿಯ ಮುಂಜಾಗ್ರತಾ ಕ್ರಮಗಳನ್ನು ನಿರೂಪಿಸಲಾಗಿದೆ. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಡಾ.ದಿನಕರ ಎಸ್. ಪಚ್ಚನಾಡಿ ಹಾಡುಗಳನ್ನು ರಚಿಸಿದ್ದಾರೆ. ಕಾರ್ಯಕ್ರಮದ ನಿರ್ಮಾಣದಲ್ಲಿ ಸಹಕರಿಸಿದವರು ಪೊಸಕುರಲ್ ಸುದ್ದಿ ಮಾಧ್ಯಮದ ವಿದ್ಯಾಧರ ಶೆಟ್ಟಿ.

ಪ್ರಸಿದ್ಧ ಕಲಾವಿದರ ಸಮ್ಮಿಲನ: ಕೊರೋನಾ ಜಾಗೃತಿಯ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಲೇಖಕ – ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ಡಾ.ದಿನಕರ ಎಸ್. ಪಚ್ಚನಾಡಿ, ಸದಾಶಿವ ಆಳ್ವ ತಲಪಾಡಿ, ವಿದ್ಯಾಧರ ಶೆಟ್ಟಿ, ಪ್ರಶಾಂತ ಸಿ.ಕೆ. ಅವರೂ ಅರ್ಥಧಾರಿಗಳಾಗಿದ್ದಾರೆ.       ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ ಹಾಗೂ ಚಂಡೆ-ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ರಾಜೇಶ್  ಜೆಪ್ಪು ಕುಡುಪಾಡಿ ಸಹಕರಿಸಿದ್ದಾರೆ. ಚಿತ್ರೀಕರಣ ಶಿವಶಂಕರ್ ಮತ್ತು ಧನುಶ್  ಪೊಸಕುರಲ್ ಅವರದು.


‘ರಂಗವಿಹಾರ’ದಲ್ಲಿ ಪ್ರಸಾರ: ಮಂಗಳೂರಿನ ಪ್ರಾದೇಶಿಕ ಸುದ್ದಿವಾಹಿನಿ  ‘ನಮ್ಮಕುಡ್ಲ’ ಪ್ರತಿ ಆದಿತ್ಯವಾರ ಪ್ರಸ್ತುತ ಪಡಿಸುವ ‘ರಂಗ ವಿಹಾರ’ ಕರಾವಳಿಯ ಸಾಂಸ್ಕೃತಿಕ ಜಗತ್ತಿನ ಅನಾವರಣ ಕಾರ್ಯಕ್ರಮದ 13 ನೇ ಅಂಕವಾಗಿ ಈ ‘ನಾರಾಯಣಾಸ್ತ್ರ- ಕೊರೋನಾಸ್ತ್ರ’ ಯಕ್ಷಗಾನ ತಾಳಮದ್ದಳೆ 2 ಭಾಗಗಳಲ್ಲಿ ಪ್ರಸಾರವಾಗುವುದು. ಮೊದಲ ಭಾಗ ಮೇ 15, 2021 ರಂದು ಶನಿವಾರ ಸಂಜೆ ಗಂಟೆ 4.00 ಕ್ಕೆ ಪ್ರಸಾರವಾಗುವುದು. ದ್ವಿತೀಯ ಭಾಗ  ಮರುದಿನ ಮೇ 16, 2021 ರಂದು ಆದಿತ್ಯವಾರ ಸಾಯಂಕಾಲ ಗಂ.6.00 ಕ್ಕೆ ಪ್ರಸಾರ ವಾಗುವುದು. ಹೊರನಾಡು ಮತ್ತು ವಿದೇಶಗಳಲ್ಲಿರುವ ಕಲಾಸಕ್ತರು ವೆಬ್ ಸೈಟ್ ಮತ್ತು ಫೇಸ್ ಬುಕ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಭಾಗವತಿಕೆಯನ್ನು ಹವ್ಯಾಸವಾಗಿ ಸ್ವೀಕರಿಸಿದ ಅಧ್ಯಾಪಕ – ಡಾ| ಸತೀಶ ಪುಣಿಂಚತ್ತಾಯ ಪೆರ್ಲ 

ಉದ್ಯೋಗಿಯಾಗಿದ್ದುಕೊಂಡು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದವರಲ್ಲಿ ಶ್ರೀ ಸತೀಶ ಪುಣಿಂಚತ್ತಾಯರೂ ಒಬ್ಬರು. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಅಧ್ಯಾಪಕರು. ತೆಂಕು-ಬಡಗಿನ ಸವ್ಯಸಾಚಿ ಭಾಗವತ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರ ಅಣ್ಣ. ಸತೀಶ ಪುಣಿಂಚತ್ತಾಯರು ಹವ್ಯಾಸಿ ಭಾಗವತರಾಗಿ ಗುರುತಿಸಿಕೊಂಡ ಸರಳ ಸಜ್ಜನ ಯಕ್ಷಗಾನ ಕಲಾವಿದ. 

ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೆರ್ಲ ಸಮೀಪದ ಪಡ್ರೆ ಎಂಬಲ್ಲಿ 1970ನೇ ಇಸವಿ ಮೇ 16ರಂದು ಶ್ರೀ ಗಣಪತಿ ಪುಣಿಂಚತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳ ಮಗನಾಗಿ ಜನಿಸಿದರು.  ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವರೆಗೆ ಓದಿ ಆಳಿಕೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದಿದ್ದರು. ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪದವೀಧರನಾಗಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು (ಎಂ.ಎ ) ಪಡೆದರು. ಮೈಸೂರಿನಲ್ಲಿ ಬಿಎಡ್ ಶಿಕ್ಷಣವನ್ನೂ ಪೂರೈಸಿದರು.

1994ರಲ್ಲಿ ಪೆರ್ಲ ಪೆರ್ಲ ಸತ್ಯನಾರಾಯಣ ಎಲ್.ಪಿ ಶಾಲೆಗೆ ಅಧ್ಯಾಪಕರಾಗಿ ಸೇರಿದ್ದರು. ಪ್ರಸ್ತುತ ಇವರು ಪ್ರೌಢಶಾಲಾ ಅಧ್ಯಾಪಕ. ಇವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆ ಶ್ರೀ ಗಣಪತಿ ಪುಣಿಂಚತ್ತಾಯರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಇವರೂ, ಇವರ ಕಿರಿಯ ಸಹೋದರ ಸತ್ಯನಾರಾಯಣ ಪುಣಿಂಚತ್ತಾಯರೂ ತಂದೆಯ ಜತೆ ತಾಳಮದ್ದಲೆಗೆ ಹೋಗುತ್ತಿದ್ದರು. ಆಗ ಬಲಿಪ ಭಾಗವತರು ಆ ಪರಿಸರದಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದರು. (ಬಲಿಪರ ಹುಟ್ಟೂರು) ಧರ್ಮಸ್ಥಳ ಮೇಳದ ಮದ್ದಳೆಗಾರರಾದ ಶೇಣಿ ಸುಬ್ರಹ್ಮಣ್ಯ ಭಟ್ಟರು ಒತ್ತಾಯ ಮಾಡಿ ಪ್ರದರ್ಶನಗಳಿಗೆ ಕರೆದೊಯ್ಯುತ್ತಿದ್ದರಂತೆ. ಊಟ ಮಾಡಿ ತಾಳಮದ್ದಳೆ ಕೇಳುವುದು, ಆಯಾಸವಾದಾಗ ನಿದ್ದೆ ಮಾಡುವುದು. ಹೀಗೆ ಸಾಗಿತ್ತು ಬಾಲ್ಯದ ಬದುಕು.

ಚೆಂಡೆ, ಮದ್ದಳೆ, ಶ್ರುತಿಯ ನಿನಾದವನ್ನು ಕೇಳಿಯೇ ಬೆಳೆದವರು. ಹಾಗಾಗಿ ತಾಳ, ಲಯ, ಶೃತಿಜ್ಞಾನವು ಉಂಟಾಗಿತ್ತು. ಭಾಗವತಿಕೆಯನ್ನು ಸರಿಯಾಗಿ ಅಭ್ಯಸಿಸುವ ಮೊದಲೇ ಅನಿವಾರ್ಯವಾಗಿ ಆಟಕ್ಕೆ ಪದ್ಯ ಹೇಳುವ ಸಂದರ್ಭವೇರ್ಪಟ್ಟಿತ್ತು. ಪೆರ್ಲ ಶಾಲಾ ಮಕ್ಕಳ ಯಕ್ಷಗಾನ ಸ್ಪರ್ಧೆ. ಅತಿಕಾಯ ಮೋಕ್ಷ ಪ್ರಸಂಗ. ಭಯವಾಗಿತ್ತು ಇವರುಗೆ. ಆದರೆ ಅನಿವಾರ್ಯ. ಒತ್ತಾಯಕ್ಕೆ ಕಟ್ಟುಬಿದ್ದು ಪದ್ಯ ಹೇಳಿದ್ದರು. ಅಂದೇ ಸಭಾಕಂಪನ ದೂರವಾಗಿತ್ತು.

ಇವರು ಭಾಗವತಿಕೆ ಕಲಿತುದು ಕೋಟೆ ಶ್ರೀ ನಾರಾಯಣ ಭಟ್ಟರಿಂದ. ತಮ್ಮ ಸತ್ಯನಾರಾಯಣ ಪುಣಿಂಚತ್ತಾಯರೂ ಜತೆಯಾಗಿ ಕಲಿತುದು. ಇದಕ್ಕೆ ಪೂರಕವಾಗಿ ಶ್ರೀ ಪದ್ಮನಾಭ ಆಚಾರ್ಯ ಸ್ವರ್ಗ ಮತ್ತು ಶ್ರೀ ನರಸಿಂಹ ಹೇರಳ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ ಕಲಿಕೆ. ಸೀನಿಯರ್ ವರೆಗೆ ಪಾಠ. ಅಕ್ಕ ವತ್ಸಲಾ ಪುಣಿಂಚತ್ತಾಯಯರೂ ಕಲಿತಿದ್ದರು. ವತ್ಸಲಾ ವಿದ್ವತ್ ವರೆಗೆ ಕಲಿತಿದ್ದರು. ಅಕ್ಕ ವತ್ಸಲಾ ವಿವಾಹಿತೆ. ಶ್ರೀ ರಾಮಚಂದ್ರ ಬಡಿಕಿಲ್ಲಾಯರ ಪತ್ನಿ.

ಕಲಿಯುತ್ತಾ ಇರುವಾಗಲೇ ಆಟಕೂಟಗಳಿಗೆ ಪದ್ಯ ಹೇಳುವ ಅವಕಾಶಗಳೂ ಸಿಕ್ಕಿತ್ತು. “ಪೆರ್ಲ ಅಯ್ಯಪ್ಪ ಮಂದಿರದ ಆಟ. ಶ್ರೇಷ್ಠ ಕಲಾವಿದರ ಕೂಡುವಿಕೆ. ಭಾಗವತರು ಬಂದಿರಲಿಲ್ಲ. ಅಂದು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಚೆಂಡೆಗೆ. ಭಾಗವತರು ಬರುವ ವರೆಗೆ ಪದ್ಯ ಹೇಳಲು ಸೂಚನೆ ಬಂದಿತ್ತು. ನಾನು ಒಪ್ಪಲಿಲ್ಲ. ಹೆದರಿ ಕಂಗಾಲಾಗಿದ್ದೆ. ಚಿಪ್ಪಾರು ಮದ್ದಳೆಗಾರರು ಧೈರ್ಯ ತುಂಬಿದರು. ಪದ್ಯ ಹೇಳು ಎಂದು ಹೇಳಿದರು. ಅವರು ನನ್ನನ್ನು ಮುನ್ನಡೆಸಿದರು. ನಾಲ್ಕೈದು ಪದ್ಯ ಹೇಳಿದಾಗ ಭಾಗವತರು ಬಂದಿದ್ದರು. ಅವರನ್ನು ಕಂಡಾಗ ಬೆಟ್ಟವನ್ನು ತಲೆಯಿಂದ ಇಳಿಸಿದ ಅನುಭವವಾಯಿತು”. ಅಂದಿನ ದಿನವನ್ನು ಹೀಗೆ ನೆನಪಿಸುತ್ತಾರೆ ಶ್ರೀ ಸತೀಶ ಪುಣಿಂಚತ್ತಾಯರು. 

ಸಾಮಾನ್ಯ 1990-91ರಲ್ಲಿ ಶ್ರೀ ಸಬ್ಬಣಕೋಡಿ ರಾಮ ಭಟ್ಟರು ಪಡ್ರೆಗೆ ಬಂದಾಗ ವಾಸ್ತವ್ಯ ಹೂಡಿದ್ದರು. ಅವರಿಂದ ಸಹಕಾರವೂ ಸಿಕ್ಕಿತ್ತು. ಅವರಿಂದ ಯಕ್ಷಗಾನ ಪಾಠಗಳನ್ನೂ ಕಲಿತಿದ್ದರು. “ಅಂದಿನಿಂದ ಇಂದಿನವರೆಗೆ ಶ್ರೀ ಸಬ್ಬಣಕೋಡಿ ರಾಮ ಭಟ್ಟರು ಆತ್ಮೀಯರಾಗಿ ಬಂಧುವಿನಂತೆ ಸಹಕರಿಸಿದ್ದಾರೆ” ಎಂಬುದು ಪುಣಿಂಚತ್ತಾಯರು ಅಭಿಪ್ರಾಯ. ಕಾರ್ಯಕ್ರಮ ಕಡಿಮೆಯಿದ್ದ ಕಾಲ. ಪ್ರತಿಭಾ ಪ್ರಕಟಣೆಗೆ ವೇದಿಕೆ ಬೇಕೆಂಬ ನೆಲೆಯಲ್ಲಿ ಮೇಳ ಮಾಡುವ ಯೋಚನೆಯನ್ನೂ ಮಾಡಿದ್ದರು. ಶ್ರೀ ಸತೀಶ ಪುಣಿಂಚತ್ತಾಯರಿಗೆ ಮೇಳ ನಡೆಸುವಂತೆ ಸೂಚನೆ ನೀಡಿದ್ದು ಮದ್ಲೆಗಾರ ಶ್ರೀ ಬಾಲಕೃಷ್ಣ ಕಾಟುಕುಕ್ಕೆ. ಕೊಲ್ಲಂಗಾನ ಮೇಳವನ್ನು ನಡೆಸುವ ನಿರ್ಧಾರ. ಆ ಕಾಲದಲ್ಲಿ ಕೊಲ್ಲಂಗಾನ ಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ತಾಳಮದ್ದಳೆಗಳು ನಡೆಯುತ್ತಿತ್ತು.

ಪ್ರಸ್ತುತ ಶ್ರೀ ಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ತಂತ್ರಿ ಗಣಧಿರಾಜ ಉಪಾಧ್ಯಾಯರು ಕಲಾ ಸಂಬಂಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ತಂತ್ರಿಗಳ ನಿರ್ದೇಶನದಂತೆ 1998ರಲ್ಲಿ ಕೊಲ್ಲಂಗಾನ ಮೇಳ ಆರಂಭ. ಪುತ್ತೂರು ಶೀನಪ್ಪ ಭಂಡಾರಿಗಳ ವೇಷಭೂಷಣ. ಅನಿವಾರ್ಯವಾದರೆ ಕಂಬನೆಡುವುದು, ರಂಗಸ್ಥಳ ಹಾಕುವುದು, ಭಾಗವತಿಕೆ ಹೀಗೆ ಎಲ್ಲಾ ಕೆಲಸಗಳ ಅನುಭವ. ಸರ್ವ ಹೊಣೆಯನ್ನೂ ಹೊತ್ತು ಮೇಳ ನಡೆಸಿದರು. ಇಷ್ಟೆಲ್ಲಾ ಮಾಡಿದ್ದು ಕೊಲ್ಲಂಗಾನ ಯಕ್ಷಪ್ರೇಮಿಗಳ ಸಹಕಾರದಿಂದ. ಕೊಲ್ಲಂಗಾನ ಶ್ರೀ ಕ್ಷೇತ್ರದ ಭಕ್ತರು – ಉಪಾಧ್ಯಾಯರ ನಿರ್ದೇಶನದಲ್ಲಿ ಮುನ್ನಡೆಯುವ ಕಲಾಸೇವಕರೇ ಕೊಲ್ಲಂಗಾನ ಯಕ್ಷಪ್ರೇಮಿಗಳು. ಕಾರ್ಯಕ್ರಮಗಳು ಹೆಚ್ಚಾಗಿ ಮೇಳಕ್ಕೆ ಒಳ್ಳೆಯ ಹೆಸರೂ ಬಂದಿತ್ತು.

ಶ್ರೀ ಸತೀಶ ಪುಣಿಂಚತ್ತಾಯರು 1999ರಲ್ಲಿ ಮಧುರಾ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು. ಸಾಂಸಾರಿಕ ಹೊಣೆಯಿದ್ದುದರಿಂದ ಮೇಳ ಬಿಡಬೇಕಾಯಿತು. ಆ ಸಮಯ ಶ್ರೀ ಗಣಾಧಿರಾಜ ಉಪಾಧ್ಯಾಯರು ಕೊಲ್ಲಂಗಾನ ಮೇಳದ ಹೊಣೆ ಹೊತ್ತು ಮುನ್ನಡೆಸಿದ್ದು ಇವರಿಗೆ ಅನುಕೂಲವೇ ಆಗಿತ್ತು. ಬಳಿಯೇ 8 ವರ್ಷ ಊರ ಪರವೂರಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ನಂತರ ಬಪ್ಪನಾಡು ಮೇಳಕ್ಕೆ. ಶಾಲೆಯ ರಜಾದಿನಗಳಲ್ಲಿ ಮಾತ್ರ ವ್ಯವಸಾಯ. ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು. ಸಂಚಾಲಕರು ಮತ್ತು ವ್ಯವಸ್ಥಾಪಕರ ಸಹಕಾರ. ಅರುವ ಕೊರಗಪ್ಪ ಶೆಟ್ಟಿ, ಮಧೂರು ರಾಧಾಕೃಷ್ಣ ನಾವಡ, ಕಟೀಲು ಭಾಸ್ಕರ ಭಟ್, ಚಂದ್ರಶೇಖರ ಕಕ್ಕೆಪದವು, ನೆಕ್ಕರೆಮೂಲೆ ಗಣೇಶ ಭಟ್ ಮೊದಲಾದವರ ಒಡನಾಟವೂ ಸಿಕ್ಕಿತ್ತು.

ಮರುವರ್ಷ ಶ್ರೀ ಗಣಾಧಿರಾಜ ಉಪಾಧ್ಯಾಯರ ಮತ್ತು ಮ್ಯಾನೇಜರ್ ಮಹೇಶ ಮುಳಿಯಾರು ಅವರ ಕರೆಯಂತೆ ಮತ್ತೆ ಕೊಲ್ಲಂಗಾನ ಮೇಳಕ್ಕೆ. 4 ವರುಷಗಳಿಂದ ಕೊಲ್ಲಂಗಾನ ಮೇಳದ ಕಲಾಸೇವೆ ಮುಗಿಸಿ ಮಂಗಳಾದೇವಿ ಮೇಳದಲ್ಲೂ ಅವಕಾಶ ಸಿಕ್ಕಿತ್ತು. ಗೆಳೆಯ ಶ್ರೀ ಸುಬ್ರಹ್ಮಣ್ಯ ಶಗ್ರಿತ್ತಾಯ ಅವರ ಮೂಲಕ ಈ ಅವಕಾಶ ಸಿಕ್ಕಿತ್ತು. ಮೇಳದ ಯಜಮಾನರ ಮತ್ತು ಸರ್ವಕಲಾವಿದರ ಸಹಕಾರವೂ ಸಿಕ್ಕಿತ್ತು. 

ಮಳೆಗಾಲದಲ್ಲಿ ಮಕ್ಕಳನ್ನೂ ಹಳ್ಳಿಗರನ್ನೂ ಯಕ್ಷಗಾನದತ್ತ ಆಕರ್ಷಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರ ಮೊಮ್ಮಗ ಶೇಣಿ ವೇಣುಗೋಪಾಲ ಭಟ್ ಇವರ ಜತೆಗೂಡಿ :ಶೇಣಿ ರಂಗಜಂಗಮ ಟ್ರಸ್ಟ್ (ರಿ) ಎಂಬ ಸಂಸ್ಥೆಯಡಿ ಊರಿನ ಪ್ರತಿಭಾನ್ವಿತ ಕಲಾವಿದರನ್ನು ಸೇರಿಸಿ ತಾಳಮದ್ದಳೆ ಕೂಟಗಳನ್ನು ಏರ್ಪಡಿಸಲು ತೊಡಗಿದರು. ಕಳೆದ 5 ವರ್ಷಗಳಿಂದ ನೂರಕ್ಕೂ ಮಿಕ್ಕಿ ತಾಳಮದ್ದಳೆ ಕಾರ್ಯಕ್ರಮಗಳು ನಡೆದಿವೆ. ಇದನ್ನು ನಿರಂತರ ಮುಂದುವರಿಸುವ ಯೋಜನೆ ಇವರದು.

ಸತೀಶ ಪುಣಿಂಚತ್ತಾಯರು ಯಕ್ಷಗಾನ ಭಾಗವತನೊಬ್ಬ ಡಾಕ್ಟರೇಟ್ ಪದವಿ ಪಡೆದ ಅಪರೂಪದ ಸಾಧನೆ ಮಾಡಿದ್ದಾರೆ. ತೆಂಕು ಮತ್ತು ಬಡಗು ತಿಟ್ಟು ಭಾಗವತಿಕೆಗಳ ಬಗ್ಗೆ ತೌಲನಿಕ ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಮಂಡಿಸಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 

ಶ್ರೀ ಸತೀಶ ಪುಣಿಂಚತ್ತಾಯ ಮತ್ತು ಮಧುರಾ ದಂಪತಿಗಳ ಪುತ್ರ ಮಾ| ಸಮೃದ್ಧ ಪುಣಿಂಚತ್ತಾಯ. ಪೆರ್ಲ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿ ಕೊಲ್ಲಂಗಾನ ಮೇಳದಲ್ಲಿ ಚಕ್ರತಾಳ ಬಾರಿಸುತ್ತಾನೆ. ಮಾ| ಸಮೃದ್ಧ ಪುಣಿಂಚತ್ತಾಯನಿಗೆ ಉಜ್ವಲ ಭವಿಷ್ಯವನ್ನು ನಾವೆಲ್ಲರೂ ಹಾರೈಸೋಣ. ಅಧ್ಯಾಪಕ, ಭಾಗವತ ಶ್ರೀ ಸತೀಶ ಪುಣಿಂಚತ್ತಾಯರಿಗೆ ಕಲಾಮಾತೆಯ ಸೇವೆಯನ್ನು ನಿರಂತರವಾಗಿ ಮಾಡುವ ಅವಕಾಶಗಳನ್ನು ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಬರಹ: ರವಿಶಂಕರ್ ವಳಕ್ಕುಂಜ 

ನಿಡ್ಲೆ ಗೋವಿಂದ ಭಟ್ ಮತ್ತು ಚಂದ್ರಶೇಖರ ಧರ್ಮಸ್ಥಳ – 2012ರ ಭಾರ್ಗವ ವಿಜಯ ಯಕ್ಷಗಾನ ವೀಡಿಯೊ

ಚಂದ್ರಶೇಖರ ಧರ್ಮಸ್ಥಳ ಮತ್ತು ನಿಡ್ಲೆ ಗೋವಿಂದ ಭಟ್ –  2012ರ ಭಾರ್ಗವ ವಿಜಯ ಯಕ್ಷಗಾನ ವೀಡಿಯೊ ನೋಡಿ 

ಮೇ 7ಕ್ಕೆ ಕರ್ನಾಟಕ ಯಕ್ಷಭಾರತಿಯಿಂದ ‘ರಾಜಾ ದಿಲೀಪ’ ಬಾನುಲಿ ಯಕ್ಷಗಾನ

ಆಕಾಶವಾಣಿ ಮಂಗಳೂರು ನಿಲಯದಿಂದ ಪ್ರತಿ ಶುಕ್ರವಾರ  ಪ್ರಸಾರವಾಗುವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಈ ವಾರ ಕರ್ನಾಟಕ ಯಕ್ಷ ಭಾರತಿ ಬೆಟ್ಟಂಪಾಡಿ, ಪುತ್ತೂರು ತಂಡವು ‘ರಾಜಾ ದಿಲೀಪ’ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸಲಿದೆ‌. ಈ ಕಾರ್ಯಕ್ರಮ ಇದೇ ಮೇ.7 ಶುಕ್ರವಾರ ರಾತ್ರಿ 9.30 ಕ್ಕೆ ಬಾನುಲಿಯಲ್ಲಿ ಪ್ರಸಾರವಾಗುವುದು.   

ದೇವಲೋಕದ ಕಾಮಧೇನುವನ್ನು ನಿರ್ಲಕ್ಷಿಸಿದ ಕಾರಣದಿಂದ ಸಂತಾನ ಹೀನನಾದ  ಸೂರ್ಯವಂಶದ ಚಕ್ರವರ್ತಿ ದಿಲೀಪ ಮಹಾರಾಜ ವಶಿಷ್ಠಾಶ್ರಮದಲ್ಲಿ ಗೋಪೂಜೆ ಮಾಡಿದ ಫಲ ರೂಪವಾಗಿ ಕುಲದೀಪಕನಾದ ರಘುವನ್ನು ಮಗನಾಗಿ ಪಡೆಯುವ ವಿಶಿಷ್ಟ ಕಥಾ ಹಂದರದ ‘ರಾಜಾ ದಿಲೀಪ’ ಯಕ್ಷಗಾನದಲ್ಲಿ ಹೆಸರಾಂತ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ (ದಿಲೀಪ), ಎಂ.ಕೆ. ರಮೇಶಾಚಾರ್ಯ (ನಂದಿನಿ), ಗಣರಾಜ ಕುಂಬಳೆ (ರುಧಿರಾಕ್ಷ), ರಮೇಶ್ ಸಾಲ್ವಣ್ಕರ್ (ವಶಿಷ್ಠ), ಮತ್ತು ಉಮೇಶ ಗೇರುಕಟ್ಟೆ (ಸುದಕ್ಷಿಣೆ) ಅರ್ಥಧಾರಿಗಳಾಗಿ ಭಾಗವಹಿಸಿದ್ದಾರೆ.     

ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್ ಅವರ ಹಾಡುಗಾರಿಕೆಗೆ ಪಿ.ಟಿ ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ಮಾಡೂರು ಅವರ ಹಿಮ್ಮೇಳವಿದೆ. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ಮಾಪಕ ಸೂರ್ಯನಾರಾಯಣ ಭಟ್ ಪಿ.ಎಸ್. ಇದನ್ನು ಧ್ವನಿಮುದ್ರಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ.

ಭಾರ್ಗವ ವಿಜಯ (ಭಾಗ-7) ಯಕ್ಷಗಾನ ವೀಡಿಯೊ – ಚಂದ್ರಶೇಖರ ಧರ್ಮಸ್ಥಳ ಮತ್ತು ನಿಡ್ಲೆ ಗೋವಿಂದ ಭಟ್

ಚಂದ್ರಶೇಖರ ಧರ್ಮಸ್ಥಳ ಮತ್ತು ನಿಡ್ಲೆ ಗೋವಿಂದ ಭಟ್ –  ಭಾರ್ಗವ ವಿಜಯ ಯಕ್ಷಗಾನ ವೀಡಿಯೊ ನೋಡಿ 

ಚಂದ್ರಶೇಖರ ಧರ್ಮಸ್ಥಳ ಮತ್ತು ನಿಡ್ಲೆ ಗೋವಿಂದ ಭಟ್ –  ಭಾರ್ಗವ ವಿಜಯ ಯಕ್ಷಗಾನ ವೀಡಿಯೊ 

ಚಂದ್ರಶೇಖರ ಧರ್ಮಸ್ಥಳ ಮತ್ತು ನಿಡ್ಲೆ ಗೋವಿಂದ ಭಟ್ –  ಭಾರ್ಗವ ವಿಜಯ ಯಕ್ಷಗಾನ ವೀಡಿಯೊ ನೋಡಿ 

ಅಜ್ಜನಗದ್ದೆ ಗಣಪಯ್ಯ ಭಾಗವತ – ಗಾನಾಲಾಪನೆಯ ಮಹಾತಪಸ್ವಿ 

ಅಜ್ಜನಗದ್ದೆ ಗಣಪಯ್ಯ ಭಾಗವತರ ಹೆಸರು ಪ್ರಸ್ತುತ ಯಕ್ಷಗಾನದ ಯುವ ಪ್ರೇಕ್ಷಕರಲ್ಲಿ ಹೆಚ್ಚಿನವರಿಗೆ ತಿಳಿದಿರಲಾರದು. ಕೇವಲ ಹಿರಿಯ ಪ್ರೇಕ್ಷಕರಿಗೆ ಮಾತ್ರ ಪರಿಚಿತವಾದ ಮತ್ತು ಕೇಳಿ ತಿಳಿದ ಹೆಸರಾಗಿರಬಹುದು ಎಂದು ಭಾವಿಸುತ್ತೇನೆ. ಆದರೂ ಅಜ್ಜನಗದ್ದೆ ಗಣಪಯ್ಯ ಭಾಗವತರ ಕುರಿತು ತಿಳಿಯದಿದ್ದ ಸಮಯದಿಂದಲೂ  ‘ಅಜ್ಜನಗದ್ದೆ’ ಎಂಬುದು ಯಕ್ಷಗಾನ ರಂಗಕ್ಕೆ ತುಂಬಾ ಹತ್ತಿರವಾದ ಹೆಸರು ಎಂದು ಯಾಕೋ ನನ್ನ ಮನಸ್ಸು ಅಕಾರಣವಾಗಿ ಯೋಚಿಸುತ್ತಿತ್ತು! 

ಅಜ್ಜನಗದ್ದೆ ಎಂಬುದು ಸುಳ್ಯ ತಾಲೂಕಿನ ಚೊಕ್ಕಾಡಿಯ ಸಮೀಪದ ಊರು. ಇಲ್ಲಿಗೆ ಅಜ್ಜನಗದ್ದೆ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ರೋಚಕವಾದ ಒಂದು ಕಥೆಯಿದೆ. ಈ ಲೇಖನದ ನಾಯಕ ಅಜ್ಜನಗದ್ದೆ ಗಣಪಯ್ಯ ಭಾಗವತರ ಅಜ್ಜನ ಹೆಸರೂ ಕೂಡಾ ಗಣಪಯ್ಯ ಎಂಬುದಾಗಿ ಆಗಿತ್ತು. ಅವರೂ ಕೂಡಾ ಯಕ್ಷಗಾನ ಭಾಗವತರೇ ಆಗಿದ್ದರು!  ಅಜ್ಜನಗದ್ದೆ ಗಣಪಯ್ಯ ಭಾಗವತರ ಅಜ್ಜ ಅಂದರೆ ಹಿರಿಯ ಗಣಪಯ್ಯ ಭಾಗವತರು ಆ ಕಾಲದಲ್ಲಿ, ಅಂದರೆ ಸುಮಾರು ಒಂದೂವರೆ ಶತಮಾನಗಳ ಹಿಂದೆ ತಾವೊಬ್ಬರೇ ಗುಡ್ಡವನ್ನು ಕಡಿದು ಗದ್ದೆಯನ್ನಾಗಿ ಪರಿವರ್ತಿಸಿದ ಸಾಹಸಿ. ಆದುದರಿಂದ ಆ ಜಾಗಕ್ಕೆ ‘ಅಜ್ಜನಗದ್ದೆ’ (ಅಜ್ಜ ನಿರ್ಮಿಸಿದ ಗದ್ದೆ) ಎಂಬ ಹೆಸರು ಶಾಶ್ವತವಾಯಿತು.

ಹಿರಿಯ ಅಜ್ಜನಗದ್ದೆ ಗಣಪಯ್ಯ ಭಾಗವತರ ಹೆಸರು ಮೊಮ್ಮಗ ಕಿರಿಯ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ಹೇಗೆ ಬಂತೋ ಹಾಗೆಯೇ ಯಕ್ಷಗಾನ ಭಾಗವತಿಕೆ ಎಂಬ ಅಮೂಲ್ಯ ಕಲಾಸಂಪತ್ತು ಕೂಡಾ ಅಜ್ಜನಿಂದ ಮೊಮ್ಮಗನಿಗೆ ಹರಿದುಬಂತು. ಅಜ್ಜನಗದ್ದೆ ಗಣಪಯ್ಯ ಭಾಗವತರ ಕಲಾಯಾನ ಬಹಳಷ್ಟು ಎಡರುತೊಡರುಗಳ ನಡುವೆ ಎಗ್ಗಿಲ್ಲದೆ ಮುಂದುವರಿದ ಕಲಾತಪಸ್ಸು. ಬಡತನದ ಬೇಗೆಯಲ್ಲಿ ಮಿಂದು ಬೆಂದು ಪರಿಪಕ್ವವಾದರೂ ಕಲಾಶ್ರೀಮಂತಿಕೆ ಮತ್ತು ಹೃದಯಶ್ರೀಮಂತಿಕೆಗಳಿಗೆ ಅಜ್ಜನಗದ್ದೆ ಭಾಗವತರು ಹೆಸರುವಾಸಿ.

ಅತ್ಯುತ್ತಮ ಭಾಗವತರಾಗಿದ್ದುದು ಮಾತ್ರವಲ್ಲದೆ ಆ ಕಾಲದಲ್ಲಿ ಅಜ್ಜನಗದ್ದೆಯ ಆ ಮನೆ ಅತಿಥಿಸತ್ಕಾರಕ್ಕೆ ಹೆಸರಾಗಿತ್ತು. ತಾನುಣ್ಣದಿದ್ದರೂ ಪರರುಂಡಲ್ಲಿ ತೃಪ್ತಿಯನ್ನನುಭವಿಸುವ ಭಾಗವತರು ತಾನೆಂದಿಗೂ ಒಬ್ಬನೇ ಉಣ್ಣಲು ಚಡಪಡಿಸುವವರು.  ಇಂತಹಾ ಮಹಾನ್ ಹೃದಯವಂತ ಅಜ್ಜನಗದ್ದೆ ಗಣಪಯ್ಯ ಭಾಗವತರು ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಅಜ್ಜನಗದ್ದೆ ಎಂಬಲ್ಲಿ ಅಜ್ಜನಗದ್ದೆ ಸುಬ್ರಾಯ ಮತ್ತು ಸುಬ್ಬಮ್ಮ ದಂಪತಿಗಳಿಗೆ ಮಗನಾಗಿ 7.10.1916ರಂದು ಜನಿಸಿದರು. ತಂದೆ ಅಜ್ಜನಗದ್ದೆ ಸುಬ್ರಾಯರು ಮದ್ದಳೆವಾದನದಲ್ಲಿ ಸಿದ್ಧಹಸ್ತರಾಗಿದ್ದರು. ಹೀಗೆ ಗಣಪಯ್ಯ ಭಾಗವತರ ತಂದೆ, ಅಜ್ಜ, ದೊಡ್ಡಜ್ಜ ಸಹಿತ ಕುಟುಂಬದ ಹೆಚ್ಚಿನೆಲ್ಲಾ ಸದಸ್ಯರು ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಆದ ಕಾರಣ ಸಹಜವಾಗಿ ಬಾಲಕ ಗಣಪಯ್ಯನವರು ಯಕ್ಷಗಾನದಿಂದ ಆಕರ್ಷಿತರಾಗಿದ್ದರು. 

ಗಣಪಯ್ಯನವರು ಕಲಿತದ್ದು ಎಂಟನೆಯ ತರಗತಿಯವರೆಗೆ. ಆದರೂ ಆ ಕಾಲದ ಮಟ್ಟಿಗೆ ಎಂಟನೆಯ ತರಗತಿಯ ವಿದ್ಯಾಭ್ಯಾಸ ಎನ್ನುವುದು ಕಡಿಮೆಯೇನೂ ಆಗಿರಲಿಲ್ಲ. ಗಣಪಯ್ಯನವರು ಸ್ವಂತ ಪರಿಶ್ರಮದಿಂದ ನೋಡಿ, ಕೇಳಿ ಕಲಿತದ್ದೇ ಹೆಚ್ಚು. ಜೊತೆಗೆ ತಂದೆ ಅಜ್ಜಂದಿರ ಪ್ರಭಾವವೂ ಸ್ವಲ್ಪ ಮಟ್ಟಿಗೆ ಆಗಿರಬಹುದಾದ ಸಾಧ್ಯತೆಯನ್ನೂ ಅಲ್ಲಗೆಳೆಯುವ ಹಾಗಿರಲಿಲ್ಲ. ರಾಗಗಳ, ಸ್ವರಸಂಚಾರದ ಅನುಭವಕ್ಕಾಗಿ ಹಾಗೂ ಸಂಗೀತಾಭ್ಯಾಸಕ್ಕಾಗಿ ಕಾಂಚನದಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಸಂಗೀತ ಸಂಬಂಧೀ ಪುಸ್ತಕಗಳನ್ನು ಓದಿಯೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡಿದ್ದರು. 

ಅಜ್ಜನಗದ್ದೆ ಗಣಪಯ್ಯನವರು ತನಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕಾಗಿದ್ದ ಯಕ್ಷಗಾನ ವಿದ್ವಾಂಸ, ಸಾಹಿತಿ, ಕಲಾವಿದ ದೇರಾಜೆ ಸೀತಾರಾಮಯ್ಯನವರ ಜೊತೆಯಲ್ಲಿ ಚೊಕ್ಕಾಡಿ ಮೇಳವನ್ನು ಸ್ಥಾಪಿಸಿದ್ದರು. ಈ ಮೇಳದ ಪ್ರದರ್ಶನಕ್ಕೆ ಅಜ್ಜನಗದ್ದೆ ಭಾಗವತರು ಖಾಯಂ ಭಾಗವತರಾಗಿದ್ದರು. ಚೊಕ್ಕಾಡಿ ಮೇಳದ ಹಾಗೂ ಸುಳ್ಯ ತಾಲೂಕಿನ ಪರಿಸರದಲ್ಲಿ ಭಾಗವತನಾಗಿ ಜನಪ್ರಿಯರಾಗಿದ್ದ ಗಣಪಯ್ಯ ಭಾಗವತರಿಗೆ ದೂರದೂರುಗಳಿಂದಲೂ ಕರೆ ಬರುತ್ತಿತ್ತು. ಅಷ್ಟೇ ಪ್ರಸಿದ್ಧಿ ಹೊಂದಿದರೂ ಬೇಡಿಕೆಯಿದ್ದರೂ ಆ ಕಾಲದಲ್ಲಿ ಯಕ್ಷಗಾನ ಕಲಾವಿದರಿಗಿದ್ದ ಸಂಬಳ ಬಹಳ ಕಡಿಮೆಯಾಗಿತ್ತು. ಇಡೀ ರಾತ್ರಿ ಭಾಗವತಿಕೆ ಮಾಡಿದ್ದಕ್ಕಾಗಿ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ಐದು ರೂಪಾಯಿ ಸಿಗುತ್ತಿತ್ತು. ಇಂತಹಾ ಸಂಕಷ್ಟದ ಸಮಯದಲ್ಲಿ ಭಾಗವತರಿಗೆ ಜೀವನ ನಿರ್ವಹಣೆ ಬಹಳ ಕಷ್ಟವಾಗಿದ್ದರೂ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದರು.

ತನ್ನಜ್ಜನ ಕಾಲಕ್ಕೆ ದೊಡ್ಡ ಜಮೀನುದಾರರಾಗಿದ್ದ ಅಜ್ಜನಗದ್ದೆಯ ಭೂಮಿ ಹಾಗೂ ಗೇಣಿಗೆ ಕೊಟ್ಟ ಆಸ್ತಿಯನ್ನೆಲ್ಲಾ ನಿಧಾನವಾಗಿ ಕಳೆದುಕೊಳ್ಳಬೇಕಾಗಿ ಬಂದಿತ್ತು. ಹಾಗೂ ಹೀಗೂ ಸ್ವಲ್ಪ ಆಸ್ತಿಯನ್ನು ಉಳಿಸಿಕೊಂಡಿದ್ದರು. ಹೀಗೆ ಒಂದೆಡೆಯಲ್ಲಿ ಕಷ್ಟಕರ ಜೀವನ ಸಾಗಿಸುತ್ತಿದ್ದರೂ ಗಣಪಯ್ಯ ಭಾಗವತರು ತಮ್ಮ ಅಪ್ರತಿಮ ಕಲಾಪ್ರೇಮ, ಕಲಾಸೇವೆಗಳನ್ನು ಬಿಡಲಿಲ್ಲ. ಚೊಕ್ಕಾಡಿ ಮೇಳದ ಪ್ರದರ್ಶನ, ತಾಳಮದ್ದಲೆಗಳ ನಂತರ ಅಜ್ಜನಗದ್ದೆ ಭಾಗವತರು ಕೂಡ್ಲು ಹಾಗೂ ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಟೀಲು ಮೇಳದಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರ ಜೊತೆ ಸಹಕಲಾವಿದರಾಗಿದ್ದರು.

ಅಜ್ಜನಗದ್ದೆಯ ಕುಟುಂಬದ ಅಪ್ರತಿಮ ಕಲಾಪ್ರೇಮವೂ ಕಲಾಸೇವೆಯೂ ಚೊಕ್ಕಾಡಿ, ಕಲ್ಮಡ್ಕದ ಪರಿಸರವು ಒಂದು ಯಕ್ಷಗಾನದ ಸಾಂಸ್ಕೃತಿಕ ಕೇಂದ್ರವಾಗಲು ಸಹಾಯ ಮಾಡಿತು ಎಂದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಅಂದಿನ ಆ ಪರಿಸರದಲ್ಲಿ ಗಣಪಯ್ಯ ಭಾಗವತರ ಭಾವಪೂರ್ಣ ಹಾಡುಗಾರಿಕೆಗೆ ಮನಸೋಲದ ಯಕ್ಷಪ್ರೇಮಿಗಳಿರಲಿಲ್ಲ ಎನ್ನುವುದೂ ಕೂಡಾ ಅಷ್ಟೇ ಸತ್ಯ. ಗಣಪಯ್ಯ ಭಾಗವತರಿಗೆ ಮೂವರು ಶಿಷ್ಯಂದಿರಿದ್ದರು. ಅವರಲ್ಲಿ ಒಬ್ಬರು ಪ್ರಸಿದ್ಧ ಭಾಗವತರಾಗಿದ್ದ ದಾಸರಬೈಲು ಚನಿಯ ನಾಯ್ಕ. ಇನ್ನಿಬ್ಬರೆಂದರೆ ಕುಂಟಿಕಾನ ಪರಮೇಶ್ವರ ಆಚಾರ್ಯ ಮತ್ತು ಪಡ್ಪು ಕೂಸಪ್ಪ ಗೌಡ. ಆಗ ಅಜ್ಜನಗದ್ದೆ ಭಾಗವತರ ಭಾಗವತಿಕೆಯ ಶೈಲಿ ಪ್ರಖ್ಯಾತವಾಗಿತ್ತು. ಹಾಗೂ ಯಕ್ಷಗಾನ ಪ್ರೇಕ್ಷಕರು ಆ ಶೈಲಿಗೆ ಮನಸೋತಿದ್ದರು. ದಿವಂಗತ ದಾಸರಬೈಲು ಚನಿಯ ನಾಯ್ಕರು ಈ ಶೈಲಿಯಲ್ಲಿಯೇ ಹಾಡುತ್ತಿದ್ದರು. ಈಗಿನ ಪ್ರಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್ಟರೂ ಇದೆ ಶೈಲಿಯಲ್ಲಿಯೇ ಹಾಡುತ್ತಿದ್ದರು. 

ಅಜ್ಜನಗದ್ದೆ ಭಾಗವತರು ಕೆಲವು ಪ್ರಸಂಗಗಳನ್ನೂ ರಚಿಸಿದ್ದಾರೆ. ಅದರಲ್ಲಿ ಮನ್ಮಥ ವಿಜಯ(ಅಪ್ರಕಟಿತ), ಮೋಹಿನೀ ಚರಿತ್ರೆ(ಅಪ್ರಕಟಿತ), ಖಾಂಡವ ವನ ದಹನ (ಪ್ರಕಟಿತ) ಮೊದಲಾದುವುಗಳು ಸೇರಿವೆ. ಗಣಪಯ್ಯ ಭಾಗವತರಿಗೆ 1942ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಮಂಜಯ್ಯ ಹೆಗ್ಗಡೆಯವರಿಂದ ಸನ್ಮಾನದ ಗೌರವ ಲಭಿಸಿತ್ತು. 1972ರಲ್ಲಿ ಕಲ್ಮಡ್ಕದಲ್ಲಿ ಸನ್ಮಾನ ಮತ್ತು 1973ರಲ್ಲಿ ಕಳಂಜ ಗ್ರಾಮದ ಕೋಟೆಮುಂಡುಗಾರು ಎಂಬಲ್ಲಿ ಸನ್ಮಾನಿಶಿ ಗೌರವಿಸಿದ್ದರು. 

 ಭಾಗವತರಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಬಹಳಷ್ಟು ಪುಸ್ತಕಗಳನ್ನು ಸಂಗ್ರಹಿಸಿದರು. ಮಾತ್ರವಲ್ಲದೆ ಜೀವನ ನಿರ್ವಹಣೆಗಾಗಿ ಪ್ರಸಿದ್ಧ ಸಾಹಿತಿಗಳ ಕೃತಿಗಳು, ಕಾದಂಬರಿಗಳು, ಪೌರಾಣಿಕ ಪುಸ್ತಗಳು, ದೇವರ ಭಜನೆ, ಹಾಗೂ ಇನ್ನಿತರ ಪುಸ್ತಕಗಳನ್ನು ಮನೆ ಮನೆಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಇದರಿಂದ ಊರಿನ ಜನರಿಗೂ ಉಪಕಾರ ಆಗುತ್ತಿತ್ತು. ಭಾಗವತರಿಗೂ ಮಾರಾಟದಿಂದ ಕಮಿಷನ್ ಸಿಗುತ್ತಿತ್ತು. ಭಾಗವತರಲ್ಲಿ ಸಾವಿರಾರು ಪುಸ್ತಕಗಳ ಸಂಗ್ರಹ ಇತ್ತು. ಅವರು ಸಂಗ್ರಹಿಸಿಟ್ಟ ಪುಸ್ತಕಗಳಲ್ಲಿ ಹೆಚ್ಚಿವನವನ್ನು ಅವರ ಸುಪುತ್ರರೂ ಖ್ಯಾತ ಸಾಹಿತಿಗಳೂ ಆದ ಸುಬ್ರಾಯ ಚೊಕ್ಕಾಡಿ ಮತ್ತು ಲಕ್ಷ್ಮೀಶ ಚೊಕ್ಕಾಡಿಯವರು ಸಂಗ್ರಹಿಸಿ ಜತನದಿಂದ ಇರಿಸಿದ್ದಾರೆ. 

ಅಜ್ಜನಗದ್ದೆ ಗಣಪಯ್ಯ ಭಾಗವತರ ಪತ್ನಿ ಶ್ರೀಮತಿ ಸುಬ್ಬಮ್ಮ (ಕಾಂಚೋಡು ಮನೆತನ). ಸುಬ್ಬಮ್ಮನವರು ಅನ್ನಪೂರ್ಣೆ. ಅದೆಷ್ಟೋ ಜನ ಹಸಿದು ಬಂದಾಗ ಅಡುಗೆ ಮಾಡಿ ಅನ್ನವಿಕ್ಕಿದ ಕೈ. ಅವರ ಕೈಯಡುಗೆ ಉಂಡವರು ಲೆಕ್ಕವಿಲ್ಲದಷ್ಟು ಮಂದಿ. ಅಜ್ಜನಗದ್ದೆ ದಂಪತಿಗೆ ಮೂವರು ಗಂಡುಮಕ್ಕಳು. ಮೂವರು ಮಕ್ಕಳೂ ಪ್ರಸಿದ್ದ ಸಾಹಿತಿಗಳೇ. ಹೆಸರು ಅರಿಯದವರು ವಿರಳ. ಸುಬ್ರಾಯ ಚೊಕ್ಕಾಡಿ, ಲಕ್ಷ್ಮೀಶ ಚೊಕ್ಕಾಡಿ ಮತ್ತು ಸಂತೋಷ ಚೊಕ್ಕಾಡಿ. ಮೂವರು ಮಕ್ಕಳಿಗೆ ಪುಸ್ತಗಳನ್ನು ಓದಲು ಕೊಟ್ಟು ಸಾಹಿತ್ಯದ ರುಚಿ ಹತ್ತಿಸಿದವರೇ ಅಜ್ಜನಗದ್ದೆ ಗಣಪಯ್ಯ ಭಾಗವತರು. ಆದುದರಿಂದ ಶ್ರೀ ಸುಬ್ರಾಯ ಚೊಕ್ಕಾಡಿ, ಶ್ರೀ ಲಕ್ಷ್ಮೀಶ ಚೊಕ್ಕಾಡಿ ಮತ್ತು ಶ್ರೀ ಸಂತೋಷ ಚೊಕ್ಕಾಡಿಯವರು, ಇಂದು ತಾವು ಪಡೆದ ಪ್ರಸಿದ್ಧಿಗೆ ಮತ್ತು ತಮ್ಮ ಸಾಧನೆಗೆ ಮೂಲ ಕಾರಣ ತಂದೆಯವರಾದ ಅಜ್ಜನಗದ್ದೆ ಗಣಪಯ್ಯ ಭಾಗವತರೇ ಎಂಬುದನ್ನು ಗೌರವಪೂರ್ವಕ ಸ್ಮರಿಸಿಕೊಳ್ಳುತ್ತಾರೆ. ಬಡತನದಲ್ಲಿ ಬೆಳೆದು ಆಸ್ತಿಪಾಸ್ತಿಯನ್ನು ಮಕ್ಕಳಿಗೆ ಉಳಿಸಿಹೋಗದಿದ್ದರೇನಾಯಿತು? ಅದ್ಭುತವಾದ ವಿದ್ಯೆಯನ್ನು, ಸಾಹಿತ್ಯವನ್ನು ತನ್ನ ಮಕ್ಕಳ ರಕ್ತದ ಕಣ ಕಣದಲ್ಲಿಯೂ ಸಂಚರಿಸುವಂತೆ ಮಾಡಿದ್ದರಲ್ಲವೇ? ಇದಕ್ಕಿಂದ ದೊಡ್ಡ ಸಂಪತ್ತು ಇನ್ನೇನಿದೆ? ಯಾರೂ ಕದಿಯಲಾರದ ಸಂಪತ್ತನ್ನು ಅಜ್ಜನಗದ್ದೆ ಗಣಪಯ್ಯ ಭಾಗವತರು ಬಿಟ್ಟು ಹೋಗಿದ್ದಾರೆ. ಆ ಸಂಪತ್ತು ಅವರ ಮೂವರು ಗಂಡುಮಕ್ಕಳಲ್ಲಿ ನಿಕ್ಷೇಪಿಸಲ್ಪಟ್ಟಿದೆ.

ಬರಹ: ಮನಮೋಹನ್ ವಿ. ಎಸ್ (ಪೂರಕ ಮಾಹಿತಿ: ಜಿ. ಎಸ್. ಉಬರಡ್ಕ ಬರೆದ “ಗಾನಯೋಗಿ ಅಜ್ಜನಗದ್ದೆ ಗಣಪಯ್ಯ ಭಾಗವತ”)

ಜಮದಗ್ನಿ-ನಿಡ್ಲೆ ಗೋವಿಂದ ಭಟ್, ರೇಣುಕೆ-ಈಶ್ವರಪ್ರಸಾದ ಧರ್ಮಸ್ಥಳ: ಯಕ್ಷಗಾನ ವೀಡಿಯೋ 

ಜಮದಗ್ನಿ-ನಿಡ್ಲೆ ಗೋವಿಂದ ಭಟ್, ರೇಣುಕೆ-ಈಶ್ವರಪ್ರಸಾದ ಧರ್ಮಸ್ಥಳ: ಯಕ್ಷಗಾನ ವೀಡಿಯೋ ನೋಡಿ