ಯಕ್ಷಗಾನ ಕಲೆಯ ಪ್ರೀತಿಯಿಂದ ಅನೇಕ ಕಲಾವಿದರು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಇಂತಹ ಕಲಾವಿದರ ಸಂಸ್ಮರಣೆಯನ್ನು ನಡೆಸುವುದು ಅತ್ಯಂತ ಸೂಕ್ತವೆಂದು ರಾಮನಗರ ಶ್ರೀ ಸೌಹಾರ್ದಯಕ್ಷಗಾನ ಸಮಿತಿ ಅಧ್ಯಕ್ಷರಾದ ಉಮೇಶ ಶೆಣೈ ಎನ್ ತಿಳಿಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ ಜರುಗಿದ ಕೀರ್ತಿಶೇಷರಾದ ಗಣಪತಿ ಆಚಾರ್ಯ ನೇರೆಂಕಿ, ವಿಠ್ಠಲಾಚಾರ್ಯ ನೆಲ್ಯಾಡಿ, ಭಾಸ್ಕರಾಚಾರ್ಯ ಉಪ್ಪಿನಂಗಡಿ ಇವರ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಸ್ಮರಣಾ ಕಾರ್ಯಕ್ರಮವನ್ನು ಪ್ರತಿವರ್ಷ ಟ್ರಸ್ಟ್ ಮೂಲಕ ನಡೆಸುವುದಕ್ಕೆ ರೂಪಾಯಿ 10,000 ದೇಣಿಗೆಯನ್ನು ಉಮೇಶ ಶೆಣೈ ನೀಡಿದರು.
ಕಲಾವಿದರಾದ ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಸಂಸ್ಮರಣಾ ನುಡಿಗಳನ್ನಾಡಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗಂಗಾಧರ್ ಆಚಾರ್ಯ ನೇರೆಂಕಿ, ಪುರುಷೋತ್ತಮ್ ಆಚಾರ್ಯ ಉಪಸ್ಥಿತರಿದ್ದರು.
28-02-2022 ಸೋಮವಾರದಂದು ಪೇಜಾವರ ಮಠದ ಶ್ರೀ ರಾಮವಿಠಲ ಸಭಾಂಗಣದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ಮಟ್ಟಿ ಲಕ್ಷ್ಮಿನಾರಾಯಣ ರಾವ್ ಇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗದಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ ಪ್ರಶಸ್ತಿ’ನೀಡಿ ಗೌರವಿಸಿದರು.
ಶ್ರೀಮತಿ ವರಲಕ್ಷ್ಮಿ ಎಲ್. ರಾವ್ ಇವರನ್ನು ಇದೇ ಸಂದರ್ಭದಲ್ಲಿ ಮಂಗಳ ಸೀರೆ ನೀಡಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಟ್ಟಿಯವರು ಶ್ರೀಕೃಷ್ಣ ಮಠಕ್ಕೆ, ವಿವಿಧ ದೇವಸ್ಥಾನಗಳಿಗೆ ಹಾಗೂ ಆತ್ಮೀಯ ಒಡನಾಡಿಗಳಿಗೆ ಪ್ರತೀ ವರ್ಷ ವಾದಿರಾಜ ಅನುಗ್ರಹೀತ ಮಟ್ಟಿಗುಳ್ಳವನ್ನು ಉಚಿತವಾಗಿ ತಂದು ಕೊಟ್ಟು, ಸಮಾಜದ ಎಲ್ಲಾ ಚಟುವಟಿಗಕೆಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಭ್ರಮಿಸಿದ ಸರಳ ವ್ಯಕ್ತಿಯಾಗಿದ್ದಾರೆ. ಅವರಿಗೆ ಅರ್ಹವಾಗಿ ಈ ಪ್ರಶಸ್ತಿ ಸಂದಿದೆ ಎಂದು ನುಡಿದರು.
ಹರಿಕೃಷ್ಣ ಪುನರೂರು ಅತಿಥಿಗಳಾಗಿ ಪಾಲುಗೊಂಡರು. ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳಾಗಿ ಒಂದು ದಶಕದಿಂದ ಸೇವೆಸಲ್ಲಿಸುತ್ತಿರುವ, ಯಕ್ಷಗಾನ ಕೇಂದ್ರದ ಗುರುಗಳಾದ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇವರ ಪತ್ನಿ ತೀವ್ರ ಅಸೌಖ್ಯದಿಂದ ಇದ್ದು ಅವರಿಗೆ ವೈದ್ಯಕೀಯ ನೆರವಾಗಿ ಸಂಸ್ಥೆಯ ಕಾರ್ಯಕಾರಿ ಸದಸ್ಯರ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಅವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಅವರು ಎಸ್. ಗೋಪಾಲಕೃಷ್ಣ ಅವರಿಗೆ ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು.
ಅಂಬಲಪಾಡಿ ದೇವಳದ ಧರ್ಮದರ್ಶಿಯಾಗಿ ಕಲೆ, ಸಂಸ್ಕೃತಿಯನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಿದ್ದ ನಿ. ಬೀ. ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಅವರ ಸುಪುತ್ರ ಡಾ. ನಿ. ಬೀ. ವಿಜಯ ಬಲ್ಲಾಳರು ಸ್ಥಾಪಿಸಿದ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ಗೆ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಯಕ್ಷಗಾನ ಕಲಿಕೆ, ಪ್ರದರ್ಶನ, ಪ್ರಚಾರಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಗಾನಸೌರಭ ಯಕ್ಷಗಾನ ಶಾಲೆ ಆಯ್ಕೆಯಾಗಿದೆ.
ಪ್ರಶಸ್ತಿಯು ರೂಪಾಯಿ ಹತ್ತು ಸಾವಿರ ನಗದು ಪುರಸ್ಕಾರವನ್ನೊಳಗೊಂಡಿದೆ.
ಸುಮಾರು ಮೂವತ್ತು ವರ್ಷ ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಶಿವ ಕುಮಾರ್ ಬೇಗಾರ್ ಅವರು ಈ ಸಂಸ್ಥೆ ಸ್ಥಾಪಿಸಿದ್ದು ಬೆಂಗಳೂರಿನ ಹಲವು ಕಡೆಗಳಲ್ಲಿ ತೆಂಕು ಬಡಗಿನ ಆಸಕ್ತ ಕಲಾವಿದರಿಗೆ ತರಬೇತಿ ನೀಡುತ್ತಾ ಈ ಕಲೆಯ ಸಂವರ್ಧನೆಗೆ ಕೆಲಸ ಮಾಡುತ್ತಿದೆ.
ಮಾರ್ಚ್ 6, 2022 ಭಾನುವಾರ ಕಂಬ್ಳಕಟ್ಟದ ಶ್ರೀ ಜನಾರ್ದನ ಮಂಟಪದಲ್ಲಿ ನಡೆಯುವ ಸಂಸ್ಥೆಯ 64ನೇ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಕೆ. ಅಜಿತ್ ಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.