ದಿನಾಂಕ 24.03.2022ರ ಗುರುವಾರ ರಾತ್ರಿ 8.30ರಿಂದ ಶ್ರೀಮತಿ ಗಾಯತ್ರಿ ಮತ್ತು ಸಚ್ಚಿದಾನಂದ ಉಡುಪ ಕೊಡೆತ್ತೂರು ಹಾಗೂ ಅನಂತಪ್ರಕಾಶ ಕಿನ್ನಿಗೋಳಿ ಅವರ ಸೇವೆಯ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ತ್ರ್ಯಂಬಕರುದ್ರ, ರಾಮಕಾರುಣ್ಯ, ನೈಮಿಷಾರಣ್ಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಬಯಲಾಟದ ಕರಪತ್ರದಲ್ಲಿ ಒಂದು ವಿಶೇಷತೆಯನ್ನು ಕಾಣಬಹುದು. ಕರಪತ್ರದ ಕೊನೆಯಲ್ಲಿ ಕಟೀಲು ಆರೂ ಮೇಳಗಳ ಎಲ್ಲಾ ಕಲಾವಿದರ ಸಹಿತ ನೇಪಥ್ಯ ಕಲಾವಿದರ ಹೆಸರುಗಳನ್ನೂ ನಮೂದಿಸಲಾಗಿದೆ.
ಪ್ರಸಂಗಕರ್ತರ ಹೆಸರು ಹಾಗೂ ಕಥಾಸಾರಾಂಶವನ್ನೂ ನೀಡಲಾಗಿದೆ. ಸಂಘಟಕರ ಈ ಪ್ರಯತ್ನ ನಿಜಕ್ಕೊ ಶ್ಲಾಘನೀಯ ಹಾಗೂ ಅನುಕರಣೀಯವಾಗಿದೆ.
ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ತೊಡಿಕಾನ ವಿಶ್ವನಾಥ ಗೌಡ (62ವರ್ಷ) 17-03-2022 ರಂದು ಸಂಜೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದರು.
ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದ್ರು ಅವರಲ್ಲಿ ಯಕ್ಷಗಾನ ತರಬೇತಿ ಪಡೆದು ನಾಲ್ಕುವರೆ ದಶಕಗಳಿಂದ ಕಲಾಸೇವೆಗೈದ ಇವರು ಸುಂಕದ ಕಟ್ಟೆ, ಕದ್ರಿ, ಕುಂಬಳೆ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ಮಾಡಿ ಕಳೆದ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದರು.
ದಮಯಂತಿ, ಚಂದ್ರಮತಿ, ಕಯಾದು, ಸೀತೆ, ಶ್ರೀದೇವಿ, ನಂದಿನಿ, ಯಶೋಮತಿ, ಅಜಮುಖಿ, ಶಾರದೆ, ಶಶಿಪ್ರಭೆಯೂ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.
ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿರುವ ಯಕ್ಷದೇಗುಲ ಸಂಸ್ಥೆಯು 19-03-2022 ರಂದು ಸಂಜೆ 5.30ಕ್ಕೆ ಆರ್. ವಿ. ಡೆಂಟಲ್ ಕಾಲೇಜು ಜೆ.ಪಿ. ನಗರ 1st ಪೇಸ್‌ನಲ್ಲಿ ಯಕ್ಷದೇಗುಲ ಮಕ್ಕಳ ತಂಡದವರಿ0ದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಕ್ಕಳೊಂದಿಗೆ ಭಾಗವತರಾಗಿ ಪ್ರಸಿದ್ಧ ಯುವ ಭಾಗವತ ಲಂಬೋದರ ಹೆಗಡೆ, ಮದ್ದಳೆಯಲ್ಲಿ ಸಂಪತ್, ಚಂಡೆಯಲ್ಲಿ ಅಮೃತದೇವರವರು ಭಾಗವಹಿಸಿದ್ದಾರೆ. ಪ್ರಸಂಗದ ನಿರ್ದೇಶನವನ್ನು ಪ್ರಿಯಾಂಕ ಕೆ. ಮೋಹನ್ ನೀಡಲಿದ್ದಾರೆಂದು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.