ಯಕ್ಷಗಾನವು ಅನಾದಿಕಾಲದಿಂದಲೂ ಮನೋರಂಜನೆ ಮತ್ತು ಶಿಕ್ಷಣವನ್ನು ನೀಡುವ ಕಲಾಪ್ರಕಾರವಾಗಿ ಬೆಳೆದು ಬಂದಿದೆ. ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಗಾನ ಪ್ರದರ್ಶನಗಳ ವೀಕ್ಷಣೆಯ ಸಂಖ್ಯೆಯು ಹೆಚ್ಚಾಗಿದೆ. ಆದರೆ ಕಲಾಪ್ರದರ್ಶನಗಳ ಮೌಲ್ಯವು ಹೆಚ್ಚಾಗಿ ಪರಿಣಾಮಕಾರಿಯಾಗ ಬೇಕಾದರೆ ಕಲಾವಿದರ ಮತ್ತು ಪ್ರೇಕ್ಷಕರ ನೇರ ಸಂವಹನ ಅಗತ್ಯವಿದೆ. ಈ ನಿಟ್ಟಿನಲ್ಲಿ ಐದು ದಿನಗಳ ತಾಳಮದ್ದಳೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಯಕ್ಷಗಾನ ಸಂಘವು ಉತ್ತಮವಾದ ಕಾರ್ಯ ನಡೆಸುತ್ತಿದ್ದು ಸರ್ವರೂ ಸಹಕಾರ ನೀಡಬೇಕೆಂದು ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ತಿಳಿಸಿದರು.
ಶ್ರೀಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಆಶ್ರಯದಲ್ಲಿ ಶ್ರೀ ಪಂಚದುರ್ಗಾ ಭಜನ ಮಂಡಳಿ ಸಹಯೋಗದಲ್ಲಿ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾಸಂಘ ನೇತೃತ್ವದಲ್ಲಿ ಜರಗುತ್ತಿರುವ ತಾಳಮದ್ದಳೆ ಪಂಚಾಹ 2022 ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮೋಕ್ತೆಸರರಾದ ಕೆ.ಬಿ. ಹರಿಶ್ಚಂದ್ರ ಬಳ್ಳಾಲ್ ವಹಿಸಿದ್ದರು.
ಸಂಸ್ಮರಣೆ: ದೇವಳದ ಪ್ರಧಾನ ಅರ್ಚಕರಾಗಿ ಮತ್ತು ಯಕ್ಷಗಾನ ಕಲಾವಿದರಾಗಿ ಜನಪ್ರಿಯ ರಾಗಿದ್ದ ಕೀರ್ತಿಶೇಷ ಕುಂಠಿನಿ ಕೃಷ್ಣ ಭಾಂಗಿಣ್ಣಾಯ ಅಗ್ರಸಾಲೆ ಇವರ ಸಂಸ್ಮರಣೆಯನ್ನು ಶಿಕ್ಷಕರಾದ ರಾಮಕೃಷ್ಣ ಭಟ್ ನಿನ್ನಿಕಲ್ಲು ಮಾಡಿದರು. ಸಂಸ್ಮರಣೆಯ ಅಂಗವಾಗಿ ಕೃಷ್ಣ ಭಾಂಗಿಣ್ಣಾಯರ ಸುಪುತ್ರ ಅಶೋಕ ಕುಮಾರ್ ಭಾಂಗಿಣ್ಣಾಯರನ್ನು ಶಾಸಕ ಹರೀಶ್ ಪೂಂಜ ಮತ್ತು ಹರಿಶ್ಚಂದ್ರ ಬಲ್ಲಾಳ್ ಗೌರವಿಸಿದರು.
ತಾಳಮದ್ದಳೆ ಸಂಘಟಕರ ಪರವಾಗಿ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ ಕೋಡಿಯೆಲ್, ಬಾಸಮೆ ನಾರಾಯಣ ಭಟ್ ಮಾನ್ಯ ಶಾಸಕರನ್ನು ಗೌರವಿಸಿದರು.
ವೇದಿಕೆಯಲ್ಲಿ ಯಕ್ಷ ಭಾರತಿ ಬೆಳ್ತಂಗಡಿ (ರಿ) ಸಂಸ್ಥೆಯ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಕೊಯ್ಯುರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣ ಭಟ್, ಕೊಯ್ಯೂರು ಪೆಡರಲ್ ಬ್ಯಾಂಕಿನ ಸುಮಂತ್, ಸುಧಾಂಶು ಗೇರುಕಟ್ಟೆ ಉಪಸ್ಥಿತರಿದ್ದರು.
ದೇವಳದ ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಭಾಂಗಿಣ್ಣಾಯ ಸ್ವಾಗತಿಸಿ ಶಿಕ್ಷಕ ವಿಜಯಕುಮಾರ್.ಎಂ ಕೊಯ್ಯೂರು ಧನ್ಯವಾದ ಅರ್ಪಿಸಿದರು. ಉಪನ್ಯಾಸಕಿ ಕೆ.ಆರ್ ಸುವರ್ಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ದಶಮಾನ ಸಡಗರ ಇದೇ ನವೆಂಬರ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ.
ಈ ಸಂದರ್ಭದಲ್ಲಿ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ’ ಪುರಸ್ಕಾರಕ್ಕೆ ಮುಂಬೈ ಉದ್ಯಮಿ ಮತ್ತು ಕಲಾಪೋಷಕ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಐಕಳ ಹರೀಶ್ ಶೆಟ್ಟಿ : ನಿರಂತರ ಸೇವಾರಾಧಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಐಕಳ ಹರೀಶ್ ಶೆಟ್ಟಿ ಮುಂಬೈ ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ಸಮಾಜಸೇವಕರು. ತಮ್ಮ ಶಾಲಾ ದಿನಗಳಿಂದಲೇ ಹುಟ್ಟೂರಿನಲ್ಲಿ ಉತ್ತಮ ಕ್ರೀಡಾಪಟುವಾಗಿ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿ.ದಕ್ಷಿಣ ಕನ್ನಡ, ಕರ್ನಾಟಕ ಕಿಶೋರ್, ಭಾರತ್ ಕಿಶೋರ್ ಪ್ರಶಸ್ತಿಗಳನ್ನು ಪಡೆದವರು.
ಮುಂಬೈ ಆಹಾರ್ ಉಪಾಧ್ಯಕ್ಷರಾಗಿ, ಸಾಯಿ ಸಂಧ್ಯಾ ಆರ್ಟ್ಸ್ ಗೌರವಾಧ್ಯಕ್ಷರಾಗಿ, ಮಾತೃಭೂಮಿ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಎಸ್ಎಂಎಸ್ ಕಾಲೇಜು ಕಟ್ಟಡ ಸಮಿತಿ ಕಾರ್ಯಾಧ್ಯಕ್ಷರಾಗಿ ದುಡಿದವರು. ಬಂಟರ ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ ಅಖಿಲ ಭಾರತ ಮಟ್ಟದ ಕ್ರೀಡೋತ್ಸವ ನಡೆಸಿದ್ದಾರೆ. ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷರಾಗಿ 1500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಒಂದು ಕೋಟಿಗೂ ಮಿಕ್ಕಿದ ಶಾಶ್ವತ ನಿಧಿ ಸ್ಥಾಪನೆ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಆರ್ಥಿಕ ಸಹಾಯ, ಬಟ್ಟೆ ಬರೆ ವಿತರಣೆ ಇತ್ಯಾದಿ ಅವರ ಸಮಾಜ ಸೇವೆಯಲ್ಲಿ ಕೆಲವು.
ಅಪ್ಪಟ ದೈವಭಕ್ತರಾದ ಐಕಳರು ಶ್ರೀ ಕ್ಷೇತ್ರ ಬಪ್ಪನಾಡು ಮತ್ತು ಕಟೀಲು ದೇವಳದ ಮಹಾದ್ವಾರ ನಿರ್ಮಾಣ, ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ ಕಾರ್ಯಭಾರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮ ಕಳಶೋತ್ಸವದಲ್ಲಿ ಮುಂಬೈ ಸಮಿತಿ ಅಧ್ಯಕ್ಷರಾಗಿ ಶ್ರೀದೇವಿಗೆ ಚಿನ್ನದ ಕಳಶ ಸಮರ್ಪಣೆ, ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ, ಜಾತಿ ಮತ ಭೇದವಿಲ್ಲದೆ ಸಂತ್ರಸ್ತರಿಗೆ ಸಹಾಯ ಹಸ್ತ ಇತ್ಯಾದಿಗಳಿಂದ ಅವರು ಪಡೆದ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಸಾರ್ಥಕವೆನಿಸಿದೆ.
ಪ್ರಸ್ತುತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಎರಡು ವರ್ಷಗಳಿಂದ ವಿವಿಧ ಸಮಾಜದ ಬಡವರಿಗೆ, ರೋಗಿಗಳಿಗೆ, ವಸತಿ ರಹಿತರಿಗೆ ಮತ್ತು ಶಿಕ್ಷಣಾರ್ಥಿಗಳಿಗೆ ಸುಮಾರು 11 ಕೋಟಿ ರೂಪಾಯಿಯ ಸಮಾಜ ಸೇವಾ ಕಾರ್ಯಗಳ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಎಲ್ಲರಿಗೂ ಮಾದರಿಯೆನಿಸಿ ಗಮನ ಸೆಳೆದಿದ್ದಾರೆ. ವಿವಿಧ ರಂಗದ ಕಲಾವಿದರನ್ನು ಪ್ರೋತ್ಸಾಹಿಸುವುದರೊಂದಿಗೆ ಕಲೆ ಹಾಗೂ ಕಲಾ ಸಂಸ್ಥೆಗಳನ್ನು ನಿರಂತರ ಪೋಷಿಸುತ್ತಿರುವ ಐಕಳ ಹರೀಶ್ ಶೆಟ್ಟರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಸಮ್ಮಾನಗಳು ಲಭಿಸಿವೆ. ಅವರ ಸಾಧನೆಯ ಕುರಿತಾಗಿ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಸಾರ್ವಭೌಮ’ ಗೌರವ ಗ್ರಂಥ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.
ಪ್ರಶಸ್ತಿ ಪ್ರದಾನ: ಇದೇ ನವಂಬರ 21ರಂದು ಸಾಯಂಕಾಲ ಜರಗುವ ಯಕ್ಷಾಂಗಣದ ದಶಮಾನ ಸಡಗರ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ ಅವರು ಐಕಳ ಹರೀಶ್ ಶೆಟ್ಟರಿಗೆ ದಶಮಾನೋತ್ಸವ ಸಂಭ್ರಮದ ವಿಶೇಷ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡುವರು.
ಸಂಸ್ಥೆಯ ಗೌರವಾಧ್ಯಕ್ಷ ಡಾ. ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್, ಎ. ಸದಾನಂದ ಶೆಟ್ಟಿ, ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಶಶಿಧರ ಶೆಟ್ಟಿ ಬರೋಡ, ವಿ. ಕರುಣಾಕರ, ಕೆ.ಕೆ.ಶೆಟ್ಟಿ ಅಹಮದ್ ನಗರ ಮೊದಲಾದ ಗಣ್ಯರು ಅತಿಥಿಗಳಾಗಿರುವರು.
ಬಳಿಕ ಹತ್ತನೇ ವರ್ಷದ ನುಡಿ ಹಬ್ಬವಾಗಿ ನವೆಂಬರ 27ರವರೆಗೆ ‘ಸಪ್ತ ವಿಜಯ’ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸರಣಿ ತಾಳಮದ್ದಳೆ, ಸನ್ಮಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳು ಜರಗಲಿವೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಡಿದ್ದು ದಶಂಬರ 11,ಭಾನುವಾರದಂದು ಉಪ್ಪಿನಂಗಡಿ ಸಮೀಪದ ಡಾ.ತಾಳ್ತಜೆ ವಸಂತಕುಮಾರ ಅವರ ಮನೆ ಸುಧಾಮದಲ್ಲಿ ವಸುಧಾ ಪ್ರತಿಷ್ಟಾನದ ವತಿಯಿಂದ ನಡೆಸಲ್ಪಡುವ ಹೇಮಂತ ಹಬ್ಬ ನಡೆಯಲಿದೆ.
ಡಾ.ವಿವೇಕ ರೈಗಳವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ,ಮಹಿಳಾ ತಾಳಮದ್ದಳೆ, ಯಕ್ಷಗಾನ ಬಯಲಾಟ ಹೀಗೆ ಆ ದಿನ ಅಪರಾಹ್ನದಿಂದ ರಾತ್ರಿ 9 ಗಂಟೆ ತನಕ ವಿವಿಧ ಕಾರ್ಯಕ್ರಮಗಳು ಉಪಾಹಾರ, ಭೋಜನದ ಜೊತೆಜೊತೆಯಲ್ಲಿ ಸಂಪನ್ನಗೊಳ್ಳಲಿವೆ.
ಆ ದಿನವನ್ನು ಹೇಮಂತ ಹಬ್ಬಕ್ಕಾಗಿ ಮೀಸಲಿಡಿ. ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ವಸುಧಾ ಪ್ರತಿಷ್ಟಾನದ ಕಾರ್ಯದರ್ಶಿ ಡಾ.ಗೋವಿಂದ ಪ್ರಸಾದ ಕಜೆಯವರು ಕೋರಿದ್ದಾರೆ.
ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಿ.ಬಿ.ಎಸ್.ಇ ಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ INSEF-2022 ವಿಜ್ಞಾನ ಮೇಳದಲ್ಲಿ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿಗಳಾದ ಅಭಿನವ, ಮನಸ್ವಿತ್ ಬೆಳ್ಳಿ ಪದಕವನ್ನು,
ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಅರುಂಧತಿ ಎಲ್ ಆಚಾರ್ಯ, ಖುಷಿ ಇವರು ಕಂಚಿನ ಪದಕವನ್ನು ಪಡೆದಿರುತ್ತಾರೆ.
ಪುತ್ತೂರು: ಹದತಪ್ಪಿದ ಆಹಾರಪದ್ದತಿ, ಪ್ಲಾಸ್ಟಿಕ್ ಸಹಿತ ರಾಸಾಯನಿಕಗಳ ಅತಿಯಾದ ಬಳಕೆ, ಮಾದಕ ದ್ರವ್ಯಗಳ ವ್ಯಸನ ಮಹಾಮಾರಿ ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ ಎಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿಸ್ಟ್ ಡಾ.ಕಾರ್ತಿಕ್.ಕೆ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯೂತ್ ರೆಡ್ ಕ್ರಾಸ್, ಪೇರೆಂಟ್ ರಿಲೇಶನ್ ಸೆಲ್, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಹಾಗೂ ಸೀಡ್ಸ್ ಆಫ್ ಹೋಪ್ ಮುಳಿಯ ಫೌಂಡೇಶನ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ದಿನದ ಪ್ರಯುಕ್ತ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಕೂದಲು ದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕ್ಯಾನ್ಸರ್ ಎಂದಾಕ್ಷಣ ಧೃತಿಗೆಡುವ ಅಗತ್ಯವಿಲ್ಲ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಇದನ್ನು ಸಂಪೂರ್ಣ ಗುಣಪಡಿಸಬಹುದು ಎಂದರು. ಅದಕ್ಕಾಗಿ ನಿಯಮಿತವಾದ ಆರೋಗ್ಯ ತಪಾಸಣೆ ಅಗತ್ಯ ಎಂದರು. ಯಾವುದೇ ರೋಗವಾದರೂ ಸ್ವಯಂ ವೈದ್ಯ ಪದ್ದತಿಯನ್ನು ಅಳವಡಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ನುಡಿದರು.
ಸೀಡ್ಸ್ ಆಫ್ ಹೋಪ್ ಸಂಸ್ಥೆಯ ಇಶಾ ಸುಲೋಚನ ಮುಳಿಯ ಹಾಗೂ ಕಾವ್ಯ ಶೆಟ್ಟಿ ಕೂದಲು ದಾನದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕ್ಯಾನ್ಸರ್ ರೋಗಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸದಲ್ಲಿ ಸಂಸ್ಥೆಯು ನಿರತವಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ಕೂದಲು ದಾನ ಮಾಡುವ ವಿದ್ಯಾರ್ಥಿಗಳ ನಿರ್ಧಾರವನ್ನು ಶ್ಲಾಘಿಸಿದರು. ಮಾನವೀಯ ಮೌಲ್ಯಗಳೇ ಮರೆತುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ವಿದ್ಯಾರ್ಥಿಗಳು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಸಮಾಜಕ್ಕೆ ಸಹಕಾರಿಯಾಗುವ ಕೆಲಸದಲ್ಲಿ ನಿರತರಾಗಬೇಕು ಎಂದರು.
ಪ್ರಾ0ಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಳಿಯ ಫೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಇಂಜಿನಿಯರಿ0ಗ್ ಕಾಲೇಜಿನ 3 ಉಪನ್ಯಾಸಕರು ಮತ್ತು 10 ವಿದ್ಯಾರ್ಥಿನಿಯರು ಹಾಗೂ ವಿವೇಕಾನಂದ ಪದವಿ ಕಾಲೇಜಿನ 3 ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದರು.
ಐಎಸ್‌ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ ಪ್ರಾಸ್ತಾವನೆಗೈದರು. ವಿದ್ಯಾರ್ಥಿಗಳಾದ ಶ್ರೀನಿಧಿ ಸ್ವಾಗತಿಸಿ, ಸ್ನೇಹಾ ವಂದಿಸಿದರು. ಸುಪ್ರೀತ್.ಜಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಬಡಗು ತಿಟ್ಟಿನ ಅನುಭವೀ ಹಿರಿಯ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ ಇವರು ಸುಮಾರು ನಲುವತ್ತೈದು ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಗುಂಡಬಾಳಾ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದ ಇವರು ಶ್ರೇಷ್ಠ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ.
1998ನೇ ಇಸವಿಯಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಬಂಗಾರಮಕ್ಕಿ ಎಂಬ ಕಲಾ ಸಂಘಟನೆಯನ್ನು ಸ್ಥಾಪಿಸಿರುತ್ತಾರೆ. ಈ ಸಂಘಟನೆಯಡಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುತ್ತಾರೆ. ಈ ಸಂಸ್ಥೆಯ ನಾಯಕನಾಗಿ ವಿದೇಶ ಯಾತ್ರೆಯನ್ನು ಕೈಗೊಂಡು ಬಹರೇನ್ ನಲ್ಲಿ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಶ್ರೀಯುತರು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸುಪುತ್ರರು.
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿ. ಪ್ರಸ್ತುತ ಇವರು ನಗರ ಬಸ್ತಿಕೇರಿ ಗ್ರಾಮದ ಮೊಗೆಹಳ್ಳ ಎಂಬಲ್ಲಿ ವಾಸವಾಗಿದ್ದಾರೆ. 1962ನೇ ಇಸವಿ ಮಾರ್ಚ್ 25ರಂದು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಚಿಟ್ಟಾಣಿ ಅವರ ಮೂವರು ಪುತ್ರರಲ್ಲಿ ಇವರೇ ಹಿರಿಯರು.
ಶ್ರೀ ನರಸಿಂಹ ಚಿಟ್ಟಾಣಿ ಮತ್ತು ಶ್ರೀ ನಾರಾಯಣ ಚಿಟ್ಟಾಣಿ ಅವರು ಸುಬ್ರಹ್ಮಣ್ಯ ಚಿಟ್ಟಾಣಿ ಅವರ ತಮ್ಮಂದಿರು. ಇವರಲ್ಲಿ ಶ್ರೀ ನರಸಿಂಹ ಚಿಟ್ಟಾಣಿ ಅವರು ಅನುಭವೀ ಕಲಾವಿದರಾಗಿ ಎಲ್ಲರಿಗೂ ಪರಿಚಿತರು. ಶ್ರೀ ನಾರಾಯಣ ಚಿಟ್ಟಾಣಿ ಅವರು ಕೃಷಿಕರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿಯವರು ಓದಿದ್ದು ಹತ್ತನೇ ತರಗತಿ ವರೆಗೆ. ಏಳನೇ ತರಗತಿ ವರೆಗೆ ಭಾಸ್ಕೇರಿ ಶಾಲೆಯಲ್ಲಿ. ಬಳಿಕ ಅರೆಯಂಗಡಿ, ಕವಲಕ್ಕಿ ಮತ್ತು ಸಂಶಿ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ತನಕ ಓದಿದ್ದರು.
ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿಯ ಜತೆಗೆ ತಾನೂ ಕಲಾವಿದನಾಗಬೇಕೆಂಬ ಆಸೆಯೂ ಇತ್ತು. ಗುಡ್ಡೆಬಾಳು ಶ್ರೀ ಗೋವಿಂದ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿ ಏಳನೇ ತರಗತಿಯಲ್ಲಿ ಓದುತ್ತಿರುವಾಗ ಮೊತ್ತ ಮೊದಲು ವೇಷ ಮಾಡಲು ಅವಕಾಶವಾಗಿತ್ತು. ಹೊಸಾಕುಳಿ ಜಾತ್ರೆಯ ಪ್ರದರ್ಶನ, ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಷಣ್ಮುಖನಾಗಿ ರಂಗವೇರಿದ್ದರು. ಅಂದು ಕಡತೋಕ ಮಂಜುನಾಥ ಭಾಗವತರು ಪ್ರಸಂಗವನ್ನು ಮುನ್ನಡೆಸಿದ್ದರು. ಬಳಿಕ್ಕ ಎಸ್ಸೆಸ್ಸೆಲ್ಸಿ ತನಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡಲು ಅವಕಾಶ ಸಿಕ್ಕಿತ್ತು.
ಹತ್ತನೇ ತರಗತಿ ವರೆಗೆ ಓದಿದ ಬಳಿಕ ಮೇಳಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ಹಡಿನಬಾಳ ಶ್ರೀ ಸತ್ಯ ಹೆಗಡೆ ಅವರ ಸಂಚಾಲಕತ್ವದ ಗುಂಡಬಾಳಾ ಮೇಳದಲ್ಲಿ ಮೂರು ವರ್ಷಗಳ ವ್ಯವಸಾಯ. ಬಾಲಗೋಪಾಲ ವೇಷದಿಂದ ತೊಡಗಿ ಒಡ್ಡೋಲಗದ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಈ ಅವಧಿಯಲ್ಲಿ ಮಣಿಪಾಲ ಶ್ರೀ ವಿಜಯನಾಥ ಶೆಣೈ ಅವರು ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರ ನಿರ್ದೇಶನದಲ್ಲಿ ನಡೆಸಿದ 48 ದಿನಗಳ ಶಿಬಿರದಲ್ಲೂ ಭಾಗವಹಿಸಿ ತರಬೇತಿಯನ್ನು ಪಡೆದಿದ್ದರು.
ಗುಂಡಬಾಳಾ ಮೇಳದ ಬಳಿಕ ಶ್ರೀ ವೈ. ಕರುಣಾಕರ ಶೆಟ್ರ ಸಂಚಾಲಕತ್ವದ ಪೆರ್ಡೂರು ಮೇಳದಲ್ಲಿ ವ್ಯವಸಾಯ. ಈ ಸಮಯದಲ್ಲಿ ಪುಂಡುವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಬಳಿಕ ಎರಡು ವರ್ಷ ಪಳ್ಳಿ ಶ್ರೀ ಸೋಮನಾಥ ಹೆಗ್ಡೆ ಅವರ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಬಳಿಕ ಪುರ್ಲೆ ಶ್ರೀ ರಾಮಚಂದ್ರ ಹೆಗಡೆ ಅವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಇಲ್ಲಿ ಪುಂಡುವೇಷ ಮತ್ತು ಒಡ್ಡೋಲಗ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬಳಿಕ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರ ಜತೆ ಸೇರಿ ಬಚ್ಚಗಾರು ಟೆಂಟ್ ಮೇಳವನ್ನು ನಡೆಸಿ ಮೊತ್ತಮೊದಲು ಸಂಘಟಕನಾಗಿ ಗುರುತಿಸಿಕೊಂಡರು.
ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರು ಬಚ್ಚಗಾರು ಮೇಳವನ್ನು ನಡೆಸಿದಾಗ ಎರಡು ವರ್ಷ ವ್ಯವಸಾಯ. ಬಚ್ಚಗಾರು ಮೇಳದಲ್ಲಿ ಒಟ್ಟು ಐದು ವರ್ಷ ವ್ಯವಸಾಯ. ಬಳಿಕ ಶ್ರೀ ಕೃಷ್ಣ ನಾಯ್ಕ್ ಅವರ ಶಿರಸಿ ಮಾರಿಕಾಂಬಾ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಬಳಿಕ ಸಾಲಿಗ್ರಾಮ ಮೇಳದಲ್ಲಿ ಮೂರು ವರ್ಷ ಮತ್ತು ಮಂದಾರ್ತಿ ಮೇಳದಲ್ಲಿ ಮೂರು ವರ್ಷ. ಹೀಗೆ ಸಾಗಿತ್ತು ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಮೇಳದ ವ್ಯವಸಾಯ . ಪುಂಡುವೇಷ, ಒಡ್ಡೋಲಗ ವೇಷಗಳಲ್ಲದೆ ಎಲ್ಲಾ ಪಾತ್ರಗಳನ್ನೂ ಇವರು ನಿರ್ವಹಿಸಬಲ್ಲರು.
ಚಕ್ರಚಂಡಿಕಾ ಪ್ರಸಂಗದ ಬರ್ಬರೀಕ ಎಂಬ ಪಾತ್ರವು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಕವಿರತ್ನ ಕಾಳಿದಾಸ ಪ್ರಸಂಗದ ಕಲಾಧರ, ಕೃಷ್ಣಾರ್ಜುನ ಕಾಳಗ ಮತ್ತು ಚಂದ್ರಾವಳೀ ವಿಲಾಸದ ಶ್ರೀಕೃಷ್ಣ, ಗದಾಯುದ್ಧ ಪ್ರಸಂಗದ ಭೀಮ, ಸುಧನ್ವ ಮೋಕ್ಷ ಪ್ರಸಂಗದ ಸುಧನ್ವ, ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು. ಗದಾಯುದ್ಧ ಪ್ರಸಂಗದಲ್ಲಿ ಭೀಮನಾಗಿ ಇವರ ನಿರ್ವಹಣೆಯನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮೆಚ್ಚಿಕೊಂಡು ‘ನೀನು ಕಲಾವಿದ ಹೌದು’ ಎಂಬ ಹೊಗಳಿಕೆಯ ಪ್ರಮಾಣಪತ್ರವನ್ನು ನೀಡಿದ್ದರು.
1998ರಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಸಂಘಟಕನಾಗಿಯೂ ಕಾಣಿಸಿಕೊಂಡರು. ಶುಂಠಿ ಶ್ರೀ ಸತ್ಯನಾರಾಯಣ ಭಟ್ಟರ ಜತೆ ಸೇರಿ ಬಚ್ಚಗಾರು ಮೇಳವನ್ನು ಮೂರು ವರ್ಷ ನಡೆಸಿದ ಅನುಭವವು ಸಂಘಟಕನಾಗಿ ಮುನ್ನಡೆಯಲು ಅನುಕೂಲವಾಗಿತ್ತು. ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಪ್ರಸ್ತುತ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಸಂಚಾಲಕರಾಗಿ ಮುನ್ನಡೆಸುತ್ತಿದ್ದಾರೆ.
2016-17ನೇ ಸಾಲಿನಲ್ಲಿ ಇವರು ಜಲವಳ್ಳಿ ಶ್ರೀ ವಿದ್ಯಾಧರ ರಾವ್ ಅವರ ಕಲಾಧರ ಯಕ್ಷರಂಗ ಬಳಗ ತಂಡದ ಕಲಾವಿದನಾಗಿಯೂ ವ್ಯವಸಾಯ ಮಾಡಿತುತ್ತಾರೆ. ಬಡಗು ತಿಟ್ಟಿನ ಖ್ಯಾತ ಹಿಮ್ಮೇಳ ಮುಮ್ಮೇಳ ಕಲಾವಿದರ ಒಡನಾಟವು ಇವರಿಗೆ ದೊರಕಿದೆ. ಅನೇಕ ಹಿರಿಯ, ಕಿರಿಯ ಕಲಾವಿದರೊಂದಿಗೆ ರಂಗವೇರಿ ಅಭಿನಯಿಸಿದ ಅನುಭವೀ ಕಲಾವಿದರಿವರು.
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಪತ್ನಿ ಶ್ರೀಮತಿ ಪಾರ್ವತಿ. ಇವರು ಗೃಹಣಿ. ಯಕ್ಷಗಾನ ಕಲಾಸಕ್ತೆಯೂ ಹೌದು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಪಾರ್ವತೀ ದಂಪತಿಗಳಿಗೆ ಇಬ್ಬರು ಮಕ್ಕಳು. (1985ರಲ್ಲಿ ವಿವಾಹ) ಪುತ್ರಿ ಶ್ರೀಮತಿ ಪ್ರೀತಿ. ಇವರ ಪತಿ ಶ್ರೀ ಗುರುಪ್ರಸಾದ ಭಟ್. ಇವರು ಸಹಕಾರೀ ಸಂಸ್ಥೆಯಲ್ಲಿ ಉದ್ಯೋಗಿ ಮತ್ತು ಕೃಷಿಕರು.
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಪುತ್ರ ಶ್ರೀ ಕಾರ್ತಿಕ್ ಚಿಟ್ಟಾಣಿ. ಇವರನ್ನು ಕಲಾಭಿಮಾನಿಗಳು ಚೆನ್ನಾಗಿ ಬಲ್ಲರು. ಬಡಗುತಿಟ್ಟಿನ ಉದಯೋನ್ಮುಖ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ಇವರು ಯಕ್ಷಋಷಿ ಶ್ರೀ ಹೊಸ್ತೋಟ ಮಂಜುನಾಥ ಭಾಗವತರಿಂದ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಅಭ್ಯಸಿಸಿದ್ದಾರೆ. ಅಗತ್ಯ ಬಿದ್ದರೆ ಭಾಗವತಿಕೆಯನ್ನೂ ಮಾಡಬಲ್ಲರು. ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು.
ಇವರು ಮೊದಲು ಗುಂಡಬಾಳಾ ಮೇಳದಲ್ಲಿ ಮೂರು ವರ್ಷ ವ್ಯವಸಾಯ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆಗಾಲದ ಪ್ರದರ್ಶನಗಳಲ್ಲೂ ಇವರು ಬೇಡಿಕೆಯ ಕಲಾವಿದರು. ಶ್ರೀ ಕಾರ್ತಿಕ್ ಚಿಟ್ಟಾಣಿಯವರ ಪತ್ನಿ ಶ್ರೀಮತಿ ಅರ್ಪಿತಾ. ಇವರು ಗೃಹಣಿ. ಯಕ್ಷ ಕಲಾಸಕ್ತೆಯಾಗಿ ಪತಿಯನ್ನು ಪ್ರೋತ್ಸಾಹಿಸುತ್ತಾರೆ. ಶ್ರೀ ಕಾರ್ತಿಕ್ ಚಿಟ್ಟಾಣಿ ಅವರಿಗೆ ಕಲಾಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಅವರಿಗೆ ಸಕಲ ಭಾಗ್ಯಗಳನ್ನೂ ಭಗವಂತನು ಅನುಗ್ರಹಿಸಲಿ.
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರಿಂದ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಕೃತಿ,ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ
ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಣ ರಾಜ್ಯ ವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ)- 600 ಮೀಟರ್-ಪ್ರಥಮ, 400 ಮೀಟರ್- ದ್ವಿತೀಯ, 4*100 ಮೀಟರ್ ರಿಲೇ -ಪ್ರಥಮ ಸ್ಥಾನ ಪಡೆದುಕೊಂಡಿದ್ದು,
ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಯಕ್ಷಗಾನ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯರಿಂದ ಉದ್ಘಾಟಿಸಲ್ಪಟ್ಟ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಆಚರಣೆಯ ಪ್ರಯುಕ್ತ 34ನೇ ಸರಣಿ ಕಾರ್ಯಕ್ರಮ ಮಂಗಳೂರು ಕುಡ್ತೆರಿ ಶ್ರೀ ಮಹಾಮಾಯ ದೇವಸ್ಥಾನದಲ್ಲಿ ಜರಗಿತು.
ಸನ್ಮಾನ: ಈ ಸಂದರ್ಭದಲ್ಲಿ ಸಂಘದಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಉಮೇಶ ಆಚಾರ್ಯ ಗೇರುಕಟ್ಟೆ ಇವರನ್ನು ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರ ಎ. ಬಾಲಕೃಷ್ಣ ಶೆಣೈ ಸನ್ಮಾನಿಸಿದರು.
ಉಮೇಶ ಆಚಾರ್ಯರು ದಕ್ಷ ಸರಕಾರಿ ನೌಕರರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ ವಿವಿಧ ಆಯಾಮಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ರಾವ್ ಅಭಿನಂದನಾ ಮಾತುಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಉಮೇಶ ಆಚಾರ್ಯರು ಈ ಸಂಘದಲ್ಲಿ ಹಲವು ಹಿರಿಯ ಕಲಾವಿದರೊಂದಿಗೆ ಭಾಗವಹಿಸಿದ ನೆನಪುಗಳನ್ನು ಸ್ಮರಿಸಿ ನೂರು ವರ್ಷಗಳ ಇತಿಹಾಸ ಇರುವ ಯಕ್ಷಗಾನ ಸಂಘದ ಗೌರವ ಸ್ಮರಣೀಯವೆಂದು ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ಅಶೋಕ ಬೋಳೂರು ಅಭಿನಂದನಾ ಪತ್ರ ವಾಚಿಸಿದರು.
ಸಂಸ್ಮರಣೆ: ವಾಗೀಶ್ವರಿ ಸಂಘದ ತಾಳಮದ್ದಲೆಯಲ್ಲಿ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದ ಕೀರ್ತಿ ಶೇಷ ಸದಾನಂದ ಪ್ರಭು ಅವರ ಸಂಸ್ಮರಣೆ ಮಾಡಲಾಯಿತು.
ಸ್ವರ್ಣೋದ್ಯಮಿ ಗುರುಪ್ರಸಾದ್ ಶೇಟ್, ಲೆಕ್ಕಪರಿಶೋಧಕ ಚೇತನ ಕಾಮತ್ ಕದ್ರಿ ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಅಧ್ಯಕ್ಷ ಶ್ರೀನಾಥ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್ ಭಂಡಾರಿ, ಉಪಾಧ್ಯಕ್ಷ ಪ್ರಫುಲ್ಲನಾಯಕ್, ವಿಶ್ವ ಬ್ರಾಹ್ಮಣ ಮಹಿಳಾ ಯಕ್ಷಗಾನ ಮಂಡಳಿಯ ವನಿತಾ ಉಪೇಂದ್ರ ಆಚಾರ್ಯ, ಗುಣರತ್ನ ಉಮೇಶ ಆಚಾರ್ಯ, ಸುಮಂತ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಖಜಾಂಜಿ ಶಿವಪ್ರಸಾದ್ ಪ್ರಭು ಸ್ವಾಗತಿಸಿದರು.
ಶ್ರೀ ರಾಮಚರಿತಾಮೃತ ಸರಣಿಯಲ್ಲಿ ಮಂಗಳೂರು ರಥಬೀದಿಯ ವಿಶ್ವಬ್ರಾಹ್ಮಣ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರಿಂದ “ಇಂದ್ರಜಿತು ಕಾಳಗ” ತಾಳಮದ್ದಳೆ ಜರಗಿತು.
16 ವರ್ಷದ ಬಾಲಕಿ ಐದು ತಿಂಗಳ ಗರ್ಭಿಣಿ ಎಂದು ಪತ್ತೆಯಾದ ಪ್ರಕರಣವೊಂದರಲ್ಲಿ ಆಕೆಯ 17 ವರ್ಷದ ಸಹಪಾಠಿಯನ್ನು ಬಂಧಿಸಲಾಗಿದೆ. ತಾನು ಹಲವಾರು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ.
ಪತ್ತನಂತಿಟ್ಟ: ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ಲಸ್ ಒನ್ ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಆಕೆಯ 17 ವರ್ಷದ ಸಹಪಾಠಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ನಂತರದ ಕೌನ್ಸೆಲಿಂಗ್‌ನಲ್ಲಿ, ತನ್ನ 17 ವರ್ಷದ ಪ್ಲಸ್ ಒನ್ ವಿದ್ಯಾರ್ಥಿಯು ಗರ್ಭಧಾರಣೆಗೆ ಕಾರಣ ಎಂದು ಹುಡುಗಿ ಬಹಿರಂಗಪಡಿಸಿದಳು.
ಬಳಿಕ ಬಾಲಕಿಯ ಮನೆಯವರು ಅರನ್ಮುಲ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿ ಹಾಗೂ 17 ವರ್ಷದ ಬಾಲಕ ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆ. ಅವರು ಏಪ್ರಿಲ್ 2018 ರಿಂದ ಸ್ನೇಹಿತರಾಗಿದ್ದರು. ಮೊದಲ ಲೈಂಗಿಕ ದೌರ್ಜನ್ಯವು 2019 ರ ಬೇಸಿಗೆಯಲ್ಲಿ ನಡೆಯಿತು. ಬಳಿಕ ಎರಡು ಬಾರಿ ಬಾಲಕಿಯ ಮನೆಗೆ ಬಂದು ದೌರ್ಜನ್ಯ ಎಸಗಿದ್ದಾನೆ.
ಕಳೆದ ಏಪ್ರಿಲ್ ಮತ್ತು ಜೂನ್ ತಿಂಗಳಿನಲ್ಲಿ ಬಾಲಕಿಯನ್ನು ಆಕೆಯ ಮನೆಯ ಸಮೀಪದ ಕಟ್ಟಡಕ್ಕೆ ಕರೆದೊಯ್ದು ದೌರ್ಜನ್ಯ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಯುವಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು, ನ 8: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನವೆಂಬರ್ 10ರಂದು ವಾರ್ಷಿಕೋತ್ಸವವು ಜರುಗಲಿದೆ.
ಪೂರ್ವಾಹ್ನ 9.00 ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ವಹಿಸಲಿದ್ದು, ಅತಿಥಿಗಳಾಗಿ ಸಕಲೇಶಪುರದ ರೋಟರಿ ಶಾಲೆಯ ಮುಖ್ಯೋಪಾಧ್ಯಾಯ ಸುಮಂತ್ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿಕಿರಣ್ ಕೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್ ಉಪಸ್ಥಿತರಿರುತ್ತಾರೆ.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.