ಯಕ್ಷಗಾನಪ್ರಿಯರಿಗೆ ಯಕ್ಷಗಾನ ಆಸ್ವಾದಿಸಲು ಒಂದು ಸುವರ್ಣಾವಕಾಶದ ಸಂದರ್ಭ ಇದೀಗ ಒದಗಿಬಂದಿದೆ.
ಸೂರಂಬೈಲಿನ (ಕುಂಬಳೆ-ಬದಿಯಡ್ಕ ರಸ್ತೆ) ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ 28ನೇ ವಾರ್ಷಿಕ ದೀಪೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಮಂದಿರದ ವಠಾರದಲ್ಲಿರುವ ರಂಗ ಮಂಟಪದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾಗವಹಿಸುವಿಕೆಯಲ್ಲಿ ‘ಸಂಪೂರ್ಣ ಕುರುಕ್ಷೇತ್ರ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಇಂದು ಸೂರಂಬೈಲಿನಲ್ಲಿ “ಸಂಪೂರ್ಣ ಕುರುಕ್ಷೇತ್ರ” ಭರ್ಜರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮೊದಲಿಗೆ ಭೀಷ್ಮ ಪರ್ವ ಪ್ರಸಂಗದಲ್ಲಿ ಅನುಭವಿಗಳ ಪ್ರದರ್ಶನ, ದ್ರೋಣಪರ್ವದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರ ಸಂಗಮ, ಕರ್ಣಪರ್ವದಲ್ಲಿ ವಾಗ್ದೇವಿಯ ಸುಪುತ್ರರಿಂದ ಮಾತಿನ ಜಟಾಪಟಿಯ ನಿರೀಕ್ಷೆ, ಗದಾಪರ್ವದಲ್ಲಿ ಅಭಿನಯ,ನಾಟ್ಯಗಳ ಸಂಗಮ ವಿವಿಧ ಪ್ರಸಿದ್ಧ ಕಲಾವಿದರಿಂದ ನಡೆಯಲಿದೆ. ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಹೆಸರಾಂತ ಕಲಾವಿದರು ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ.
ದಿನಾಂಕ 19.11.2022ನೇ ಶನಿವಾರ ರಾತ್ರಿ 10 ಘಂಟೆಗೆ ಆರಂಭವಾಗಲಿರುವ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ.
ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಕಾಲೇಜು ಫೆಸ್ಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕಾಗಿ ಬೆಂಗಳೂರಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತರ ಕಾಲೇಜು ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಐಪಿಎಲ್ ಕ್ರಿಕೆಟ್ ತಂಡಗಳ ಘೋಷಣೆಗಳನ್ನು ಕೂಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅದೇ ಸಮಯದಲ್ಲಿ, ಅಪ್ರಾಪ್ತ ವಯಸ್ಕರಾದ ಒಬ್ಬ ಹುಡುಗ ಮತ್ತು ಹುಡುಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದರು ಮತ್ತು ಇತರ ವಿದ್ಯಾರ್ಥಿಗಳು ಆಕ್ಷೇಪಿಸಿ ಅವರನ್ನು ತಡೆಯಲು ಪ್ರಯತ್ನಿಸಿದರು, ನಂತರ ಅವರು ಕೂಗುವುದನ್ನು ನಿಲ್ಲಿಸಿದರು.
ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ವಿಡಿಯೋ ವೈರಲ್ ಆಗಿದ್ದು, ಕಾಲೇಜು ವಿಚಾರಣೆ ನಡೆಸಿ ಇಬ್ಬರಿಂದ ಕ್ಷಮಾಪಣೆ ಪತ್ರ ಪಡೆದು ಅಮಾನತು ಮಾಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 505(1)ಬಿ (ಸಾರ್ವಜನಿಕರಿಗೆ ಭಯ ಉಂಟು ಮಾಡುವ ಉದ್ದೇಶದಿಂದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಪೊಲೀಸರು ಇಬ್ಬರು ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅಪಘಾತದಲ್ಲಿ ಗರ್ಭಿಣಿ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾರಾಯಣಗಾಂವ್, 18 ನವೆಂಬರ್ 2022: ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ತನ್ನ 23 ವರ್ಷದ ಗರ್ಭಿಣಿ ಪತ್ನಿಯ ಸಾವಿನಿಂದ ಮಾನಸಿಕ ಆಘಾತದಿಂದ ಪತಿ ವಿಷಕಾರಿ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜುನ್ನಾರದ ಧೋಂಡಕರವಾಡಿ ನಿಮ್ದಾರಿ ನಿವಾಸಿ ರಮೇಶ ನವನಾಥ ಕಂಸ್ಕರ್ (29) ನ.14ರಂದು ತನ್ನ ಪತ್ನಿ ವಿದ್ಯಾ ಕಂಸ್ಕರ್ (23) ತಾಯಿ ವಿಮಲ್ ಜಾಧವ್ ಅವರೊಂದಿಗೆ ಚಿನ್ನಾಭರಣ ಖರೀದಿಸಲು ನಾರಾಯಣನಗರಕ್ಕೆ ಬಂದಿದ್ದರು. ಶಾಪಿಂಗ್ ಮುಗಿಸಿ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಾಲಿನ ಡೇರಿ ಎದುರು ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಬೈಕ್ ನಿಂದ ಇಳಿದಿದ್ದಾರೆ.
ಅದೇ ಸಮಯಕ್ಕೆ ಎದುರಿನಿಂದ ಎರಡು ಟ್ರಾಲಿಗಳಲ್ಲಿ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಢಿಕ್ಕಿ ಹೊಡೆದು ಚಕ್ರದ ಕೆಳಗೆ ಸಿಲುಕಿ ಮೃತಪಟ್ಟಳು. ಪತಿ ಎದುರೇ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕಳೆದ ಮೂರು ದಿನಗಳಿಂದ ರಮೇಶ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಈ ಅಪಘಾತಕ್ಕೆ ನಾನೇ ಕಾರಣ ಎಂದು ಭಾವಿಸಿದ್ದರು. ಅದೇ ಸ್ಥಿತಿಯಲ್ಲಿ ಮಧ್ಯರಾತ್ರಿ ವಿಷ ಸೇವಿಸಿದ್ದಾರೆ. ಬೆಳಗ್ಗೆ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ರಮೇಶನನ್ನು ಆರಂಭದಲ್ಲಿ ಜುನ್ನಾರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ನಾರಾಯಣಗೌಡ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.
ರಮೇಶ್ ಕನ್ಸ್ಕರ್ ಮತ್ತು ವಿದ್ಯಾ ಪ್ರೇಮ ವಿವಾಹವಾಗಿದ್ದರು. ಮದುವೆಗೆ ಮುನ್ನ ಆಕೆಯ ಕೆಲವು ಶಿಕ್ಷಣ ವೆಚ್ಚವನ್ನು ರಮೇಶ್ ಭರಿಸಿದ್ದರು. ವಿದ್ಯಾಗೆ ತಾಯಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹಾಗಾಗಿ ರಮೇಶ ತನ್ನ ತಾಯಿಯೊಂದಿಗೆ ವಿದ್ಯಾಳನ್ನು ನೋಡಿಕೊಳ್ಳುತ್ತಿದ್ದ.
ಎಂಟು ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿದ್ಯಾ ಒಂದು ತಿಂಗಳ ಗರ್ಭಿಣಿ. ಪತ್ನಿಯ ಆಕಸ್ಮಿಕ ಸಾವಿನಿಂದ ರಮೇಶ್ ಆಘಾತಕ್ಕೊಳಗಾಗಿದ್ದರು. ಇವರು ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದಾಗ ಅಥವಾ ಚೆನ್ನಾಗಿ ಅಧ್ಯಯನ ಮಾಡದಿದ್ದಾಗ ಪೋಷಕರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಕೊನೆಯವರೆಗೆ ಈ ವೀಡಿಯೊ ನೋಡಿ.
ಈ ವೀಡಿಯೋದಲ್ಲಿ ಮಕ್ಕಳ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಬೆಂಗಳೂರು ನಿಮ್ಹಾನ್ಸ್ ನ ಮಾನಸಿಕ ತಜ್ಞೆ ಡಾ.ಸ್ನೇಹಾ ಅವರು ಹಲವಾರು ವಿಷಯಗಳತ್ತ ಬೆಳಕು ಚೆಲ್ಲಿದ್ದಾರೆ.
ಡಾ. ಸ್ನೇಹಾ ಅವರು ಹೇಳುವಂತೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದಾಗ ಅಥವಾ ಚೆನ್ನಾಗಿ ಅಧ್ಯಯನ ಮಾಡದಿದ್ದಾಗ ಅಧ್ಯಯನದಲ್ಲಿ ಸೋಮಾರಿಗಳು ಅಥವಾ ಉತ್ಸಾಹವಿಲ್ಲದವರು ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ.
ಮಕ್ಕಳಿಗೆ ಕೆಲವು ನಿಜವಾದ ಸಮಸ್ಯೆಗಳಿರಬಹುದು. ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್ – ಮಕ್ಕಳು ದೀರ್ಘಕಾಲದವರೆಗೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ದೀರ್ಘಕಾಲದವರೆಗೆ ಒಂದು ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು, ಅವರ ತಿರುವುಗಳಿಗಾಗಿ ಕಾಯುವಲ್ಲಿ ಕಷ್ಟವಾಗಬಹುದು.
ಈ ಎಲ್ಲಾ ಸಮಸ್ಯೆಗಳು ಶೈಕ್ಷಣಿಕವಾಗಿ ಅವನತಿಗೆ ಕಾರಣವಾಗುತ್ತವೆ ಎಂದು ಡಾಕ್ಟರ್ ಹೇಳುತ್ತಾರೆ. ವೀಡಿಯೊ ನೋಡಿ.
ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವ ವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಹತ್ತನೇ ವರ್ಷದ ನುಡಿಹಬ್ಬವನ್ನು ಇದೇ 2022 ನವೆಂಬರ 21 ರಿಂದ 27 ರವರೆಗೆ ‘ದಶಮಾನ ಸಡಗರ’ವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ಸಂಜೆ ಸರಣಿ ತಾಳಮದ್ದಳೆ, ಸಾಧಕ ಸಮ್ಮಾನ, ಪ್ರಶಸ್ತಿ ಪ್ರದಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
ಉದ್ಘಾಟನೆ ಮತ್ತು ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ : ನವೆಂಬರ 21 ರಂದು ಸೋಮವಾರ ಸಂಜೆ ಗಂ. 4ಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಸರಣಿಯನ್ನು ಉದ್ಘಾಟಿಸುವರು. ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಯಕ್ಷಾಂಗಣದ ದಶಮಾನ ಜ್ಯೋತಿ ಬೆಳಗುವರು. ಕಲಾ ಪೋಷಕ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿಯವರಿಗೆ ಮಂಗಳೂರು ವಿ.ವಿ. ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಅವರು ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ವನ್ನು ಪ್ರದಾನ ಮಾಡುವರು.
ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ‘ಸಾರ್ವಭೌಮ’ ಗ್ರಂಥಾರ್ಪಣೆ ಮಾಡುವರು. ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಯವರು ಅಧ್ಯಕ್ಷತೆ ವಹಿಸಲಿದ್ದು ಮೇಯರ್ ಜಯಾನಂದ ಅಂಚನ್, ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ರಮೇಶ್ ಭಟ್, ಶಶಿಧರ ಶೆಟ್ಟಿ ಬರೋಡ, ಪ್ರದೀಪ್ ಕುಮಾರ ಕಲ್ಕೂರ, ವೇಣುಗೋಪಾಲ್ ಎಲ್ ಶೆಟ್ಟಿ ಥಾಣೆ, ವಿ. ಕರುಣಾಕರ, ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಕೆ. ಶೆಟ್ಟಿ ಅಹ್ಮದ್ ನಗರ, ಡಾ. ಅನಸೂಯ ರೈ, ಸಿ.ಎಸ್.ಭಂಡಾರಿ ಅತಿಥಿಗಳಾಗಿರುವರು.
‘ಸಪ್ತ ವಿಜಯ’ ಸರಣಿ ತಾಳಮದ್ದಳೆ : ಹತ್ತನೇ ವರ್ಷದ ತಾಳಮದ್ದಳೆ ಸಪ್ತಾಹದಲ್ಲಿ ‘ಸಪ್ತ ವಿಜಯ’ ಸರಣಿ ಪ್ರಸಂಗಗಳನ್ನು ಆಯ್ದುಗೊಳ್ಳಲಾಗಿದೆ. ನ. 21 ರಿಂದ ಕ್ರಮವಾಗಿ ಷಡಾನನ ವಿಜಯ, ವಾನರೇಶ್ವರ ವಿಜಯ, ವೀರಾಂಜನೇಯ ವಿಜಯ, ಭೀಮಸೇನ ವಿಜಯ, ಸ್ವರಾಜ್ಯ ಸ್ವಾತಂತ್ರ್ಯ ವಿಜಯ, ವಿಕ್ರಮಾರ್ಜುನ ವಿಜಯ ಮತ್ತು ಯಕ್ಷಲೋಕ ವಿಜಯ ಆಖ್ಯಾನಗಳಿದ್ದು, ಸಮಾರೋಪಕ್ಕೆ ಮುನ್ನ ಸಿರಿಕಿಟ್ಣ ವಿಜಯೊ ಎಂಬ ತುಳು ಪ್ರಸಂಗವನ್ನು ಸಂಯೋಜಿಸಲಾಗಿದೆ.
ಸಂಸ್ಮರಣೆ – ಸನ್ಮಾನ : ಪ್ರತಿ ದಿನದ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಕಲಾವಿದರು ಮತ್ತು ಕಲಾಪೋಷಕರ ಸಂಸ್ಮರಣೆಯೂ ನಡೆಯಲಿದೆ. ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿ, ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ. ಕಾಂತ ರೈ ಮೂಡಬಿದ್ರೆ, ಅತ್ತಾವರ ಶಿವಾನಂದ ಕರ್ಕೇರ, ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ, ಹಾಗೂ ದಿ| ಎನ್. ಎಸ್. ಕಿಲ್ಲೆ ಅವರ ನುಡಿ ನಮನದಲ್ಲಿ ಹಿರಿಯ ಸಾಧಕರಾದ ಬಿ. ಭುಜಬಲಿ ಧರ್ಮಸ್ಥಳ, ಪಟ್ಲ ಗುತ್ತು, ಮಹಾಬಲ ಶೆಟ್ಟಿ, ಪ್ರೊ| ಜಿ.ಆರ್. ರೈ, ಕೃಷ್ಣ ಶೆಟ್ಟಿ ಕುಡುಮಲ್ಲಿಗೆ, ಕೆ.ಕೆ. ಪೂಂಜಾ ಫರಂಗಿಪೇಟೆ ಅವರನ್ನು ಸನ್ಮಾನಿಸಲಾಗುವುದು. ಯಕ್ಷಾಂಗಣ ಪ್ರಶಸ್ತಿ ಪ್ರದಾನ :
ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಭಾಗವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ. ರಮೇಶಾಚಾರ್ಯ ಅವರಿಗೆ 2021-22 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡುವರು.
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ದೀಪ ಪ್ರಜ್ವಲನೆ ಮಾಡುವರು. ಡಾ. ಹರಿಕೃಷ್ಣ ಪುನರೂರು, ಸೌಂದರ್ಯ ರಮೇಶ್, ಬಾಬು ಶೆಟ್ಟಿ ಪೆರಾರ, ಅಗರಿ ರಾಘವೇಂದ್ರ ರಾವ್, ವಿಜಯ ಕುಮಾರ್ ಶೆಟ್ಟಿ, ಡಾ. ಸುಭಾಷಿಣಿ ಶ್ರೀವತ್ಸ, ಕಡಮಜಲು ಸುಭಾಷ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಯಕ್ಷಾಂಗಣ ದಶಮಾನೋತ್ಸವ ಅಂಗವಾಗಿ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಗಣ್ಯರು ಅತಿಥಿಗಳಾಗಿ ಸಭಾ ಕಲಾಪಗಳನ್ನು ನಡೆಸಿಕೊಡುವುದರೊಂದಿಗೆ ಕರಾವಳಿ ಜಿಲ್ಲೆಗಳ 70 ಕ್ಕೂ ಮಿಕ್ಕಿದ ಪ್ರಸಿದ್ಧ ಕಲಾವಿದರು ತಾಳಮದ್ದಳೆ ಸರಣಿಯ ಹಿಮ್ಮೇಳ ಮುಮ್ಮೇಳಗಳಲ್ಲಿ ಕಾಣಿಸಿಕೊಳ್ಳುವರು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬೆಟ್ಟಂಪಾಡಿ ಸುಂದರ ಶೆಟ್ಟಿ (ಉಪಾಧ್ಯಕ್ಷ), ತೋನ್ಸೆ ಪುಷ್ಕಳ ಕುಮಾರ್ (ಪ್ರಧಾನ ಕಾರ್ಯದರ್ಶಿ), ಕೆ. ರವೀಂದ್ರ ರೈ ಕಲ್ಲಿಮಾರು (ಸಂಚಾಲಕರು), ಕೆ. ಲಕ್ಷ್ಮೀನಾರಾಯಣ ರೈ ಹರೇಕಳ (ಜತೆ ಕಾರ್ಯದರ್ಶಿ), ನಿವೇದಿತಾ ಎನ್. ಶೆಟ್ಟಿ (ಮಹಿಳಾ ಪ್ರತಿನಿಧಿ) ಯವರು ಉಪಸ್ಥಿತರಿದ್ದರು.
ತೆಂಕುತಿಟ್ಟು ಯಕ್ಷಗಾನದ ಯುವ ಭಾಗವತರೋರ್ವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೆಂಕುತಿಟ್ಟಿನ ಭಾಗವತಿಕೆಯಲ್ಲಿ ತನ್ನದೇ ಛಾಪನ್ನು ಮೂಡಿಸಿ ಹೆಸರು ಮಾಡುತ್ತಿದ್ದ ಯುವ ಭಾಗವತರಾದ ಕೀರ್ತನ್ ಶೆಟ್ಟಿ ವಗೆನಾಡು ಅವರು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಕಲಾವಿದರು.
ಭಾಗವತರು ಇಂದು ಮುಡಿಪು ಸಮೀಪ ಮೂಳೂರು ಬಳಿ ತಮ್ಮ ಬಾಡಿಗೆ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರು ಬಪ್ಪನಾಡು ಹಾಗೂ ಇನ್ನಿತರ ಮೇಳಗಳಲ್ಲಿ ಭಾಗವತರಾಗಿ ಕಲಾಸೇವೆ ಮಾಡಿದ್ದರು.
ಇತ್ತೀಚಿಗೆ ಚಿಕ್ಕಮೇಳಗಳಲ್ಲಿಯೂ ಭಾಗವತರಾಗಿ ತಿರುಗಾಟ ನಡೆಸಿದ್ದರು. ಕೆಲವೊಂದು ವೈಯುಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
“ಆತ್ಮಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ, ನಿಮ್ಮ ಯಾವುದೇ ಸಮಸ್ಯೆಗಳಿಗೆ ಮಾನಸಿಕ ತಜ್ಞರ ಸಹಾಯ ಪಡೆಯಿರಿ”
ದಿನಾಂಕ 18-11-2022ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಎಳೆಯ ಮಕ್ಕಳಲ್ಲಿ ಚೈತನ್ಯ ತುಂಬುವ ಸಲುವಾಗಿ ಪೂರ್ವ ಪ್ರಾಥಮಿಕ ವಿಭಾಗ – ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಹಾಗೂ 1ನೇ ಯಿಂದ 4ನೇ ತರಗತಿಯ ಪುಟಾಣಿ ಮಕ್ಕಳಿಗೆ ಚಿಣ್ಣರ ಕ್ರೀಡೋತ್ಸವ-2022 ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಶೆಣೈ ಉದ್ಘಾಟಿಸಿ, ಪುಟಾಣಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ವಹಿಸಿ, ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಸದೃಢ ಶರೀರವನ್ನು ಪಡೆದು ಸತ್ಪ್ರಜೆಗಳಾಗಲು ಕ್ರೀಡೆ ಪೂರಕ ಎಂದು ಹೇಳಿ ಪುಟಾಣಿ ಮಕ್ಕಳಿಗೆ ಶುಭ ಕೋರಿದರು.
ನಂತರ ಪುಟಾಣಿ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವಿನಾರಾಯಣ.ಎಂ, ರಕ್ಷಕ-ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಜಯಕುಮಾರ್ ಜೈನ್ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ ಗೌಡ ಉಪಸ್ಥಿತಸಿದ್ದರು.
ಶ್ರೀಮತಿ ಸಂಧ್ಯಾ ಸ್ವಾಗತಿಸಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ವಂದಿಸಿ, ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿದರು.
ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಅರ್ಪಿಸುವ ಈ ಬಾರಿಯ ಅಂದರೆ 8 ನೆಯ ವರ್ಷದ ತಲಪಾಡಿ ಯಕ್ಷೋತ್ಸವವು ಇಂದು ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ.
ಈ ಕಾರ್ಯಕ್ರಮವು ಮಂಗಳೂರಿನ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ತೆಂಕು-ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಹಿರಿಯ ಯಕ್ಷಗಾನ ಸಾಹಿತಿ, ಅರ್ಥಧಾರಿ ಹಾಗೂ ವೈದ್ಯರಾದ ಡಾ. ರಮಾನಂದ ಬನಾರಿಯವರಿಗೆ ಸನ್ಮಾನ ನಡೆಯಲಿದೆ.
ಮೊದಲನೇ ಪ್ರಸಂಗ ಸಮರಸೌಗಂಧಿಕಾ ಹಾಗೂ ಎರಡನೇ ಪ್ರಸಂಗ ‘ಬಬ್ರುವಾಹನ ಮತ್ತು ಶೇಷವಿಜಯ’ ಪಾತ್ರವರ್ಗ ಮತ್ತು ಕಲಾವಿದರ ವಿವರಗಳಿಗೆ ಆಹ್ವಾನಪತ್ರಿಕೆಯ ಚಿತ್ರವನ್ನು ನೋಡಿ.
ಈ ಅಪರೂಪದ ಪ್ರದರ್ಶನಗಳಿಗೆ ಯಕ್ಷಾಭಿಮಾನಿಗಳನ್ನು, ಯಕ್ಷಮಿತ್ರ ಸೇವಾ ಬಳಗದ ಸಂತೋಷ್ ಅಲಂಕಾರಗುಡ್ಡೆ ಹಾಗೂ ಎಲ್ಲಾ ಸದಸ್ಯರು ಆದರದಿಂದ ಆಮಂತ್ರಿಸಿದ್ದಾರೆ.
ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು.
ಶ್ರೀ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ” ಸಂಗೀತವು ನಮ್ಮ ಸಂಸ್ಕೃತಿಯಾಗಿದೆ. ಸಂಗೀತದ ನಿರಂತರ ಆಸ್ವಾದನೆಯು ಪ್ರತಿಯೊಂದು ಜೀವಿಯ ಆರೋಗ್ಯಕ್ಕೆ ಪೂರಕವಾಗಿದೆ. ಸಂಗೀತದ ಮೂಲಕ ದೇವರ ನಾಮಸ್ಮರಣೆ ನಿರಂತರ ನಡೆಯುತ್ತಿರಲಿ “ಎಂದು ಶುಭಕೋರಿದರು.
ನಂತರ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸುಮಧುರವಾದ ಸಂಗೀತ ಉಪಾಸನೆ ಜರಗಿತು. ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು.
ಪಿಟೀಲಿನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಅನಿಲಕ್ಕಾಡ್ ಡಾ ಆರ್ ಜಯಕೃಷ್ಣನ್, ಘಟಂ ನಲ್ಲಿ ವಿದ್ವಾನ್ ಬಿ.ಜಿ. ಈಶ್ವರ ಭಟ್ ಜೊತೆಗೂಡಿದರು.
ಕಾರ್ಯಕ್ರಮದ ಕೊನೆಗೆ ಸಂಗೀತ ಕಲಾವಿದರನ್ನು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಅನಂತಪದ್ಮನಾಭ ಮಯ್ಯ ಗೌರವಿಸಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ರಾಘವನ್ ಬೆಳ್ಳಿಪ್ಪಾಡಿ ಧನ್ಯವಾದವಿತ್ತರು. ಶಾಸ್ತಾ ಕುಮಾರ ನಿರೂಪಣೆ ಮಾಡಿದರು.
ಮುಂಬಯಿ : ನ.16 ಯಕ್ಷಗಾನ ಕಲಾವಿದ , ಕಲಾಸೇವಕ ದಿನೇಶ್ ಶೆಟ್ಟಿ ವಿಕ್ರೋಲಿ ನಿಧರಾಗಿದ್ದಾರೆ.
ಅವರು ನಗರದ ಜನಪ್ರಿಯಾ ಯಕ್ಷಗಾನ ಗುರು , ಸಂಘಟಕ ಬಾಲಕೃಷ್ಣ ಶೆಟ್ಟಿ ಅಜೆಕಾರು ಇವರ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಹಾಗೂ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೋಪರ್ ಈ ಕಲಾ ಸಂಸ್ಥೆಗಳ ಮುಖಾಂತರ ಜರಗುತ್ತಿದ್ದ ಎಲ್ಲಾ ಯಕ್ಷಗಾನ ಪ್ರದರ್ಶನಗಳಿಗೆ ಹಿನ್ನಲೆ ಸಹಕಾರವನ್ನು ನೀಡುತ್ತಿದ್ದ
ಮತ್ತು ಸಮಯ ಸಂದರ್ಭಕ್ಕನುಗಣವಾಗಿ ಸಣ್ಣ , ಪುಟ್ಟ ವೇಷವನ್ನು ಮಾಡಿ ಈ ಮೂಲಕ ಯಕ್ಷಗಾನ ಕಲಾಸೇವಾ ನಿರತರಾಗಿದ್ದರು. ದಿನೇಶ್ ಶೆಟ್ಟಿ ವಿಕ್ರೋಲಿ ಇವರು ಇಂದು ಅಂದರೆ ನ.16 ರ ಬುಧವಾರ ದೈವಾಧೀನರಾದರು.
ಅವರ ಆತ್ಮಕ್ಕೆ ಭಗವಂತನು, ಕಲಾಮಾತೆ ಸರಸ್ವತಿಯು ಚಿರಶಾಂತಿಯನ್ನು ಕರುಣಿಸಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.