Saturday, August 1, 2026
Home Blog Page 113

ಸ್ವಸ್ತಿಕ್‌ ಶರ್ಮ ಯಕ್ಷಪ್ರತಿಭಾ ಪ್ರಶಸ್ತಿಗೆ ಆಯ್ಕೆ

0

ಪುತ್ತೂರು, ಡಿ 15: ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರುನೆಲ ಕುಂಬ್ಳೆಯ ಶೇಡಿಕಾವಿನಲ್ಲಿ ಡಿಸೆ0ಬರ್ 18ರ0ದು ನಡೆಯಲಿರುವ ಕಣಿಪುರ ಯಕ್ಷೋತ್ಸವದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಸ್ವಸ್ತಿಕ್‌ ಶರ್ಮ ಪಿ ಯಕ್ಷಪ್ರತಿಭಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕುಂಬ್ಳೆ ಸೀಮೆಯ ಬಳ್ಳಂಬೆಟ್ಟು ಮೂಲದ ಖ್ಯಾತ ಪುಂಡುವೇಷಧಾರಿ ದಿ. ಶ್ರೀಧರ ಭಂಡಾರಿ ಸ್ಮರಣಾರ್ಥ ಪ್ರಶಸ್ತಿ ನೀಡಲಿದ್ದು, ಪ್ರಶಸ್ತಿಯು ಐದು ಸಾವಿರ ರೂ ನಗದು ಮತ್ತು ಸ್ಮರಣಿಕೆ, ಸನ್ಮಾನ ಪತ್ರ, ಪಾರಿತೋಷಕವನ್ನೊಳಗೊಂಡಿದೆ.

ಈತನು ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಪಳ್ಳತ್ತಡ್ಕದ ಕೇಶವ ಪಿ ಮತ್ತು ದಿವ್ಯಾ ಪಿ ದಂಪತಿ ಪುತ್ರ.

ಚಾಕಲೇಟ್ ಉತ್ಪಾದನೆ ಹಾಗೂ ಪ್ಯಾಕೇಜಿಂಗ್ ಬಗೆಗೆ ಸವಿವರ ವೀಕ್ಷಣೆ

0

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಕೈಗಾರಿಕಾ ಭೇಟಿ’ ಕಾರ್ಯಕ್ರಮ ನಡೆಯಿತು. ಪದವಿ ಪೂರ್ವ ವಾಣಿಜ್ಯ ವಿದ್ಯಾರ್ಥಿಗಳು ಕೆಮ್ಮಿಂಜೆಯ ಕ್ಯಾಂಪ್ಕೋ ಚಾಕಲೇಟು ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.


ಕ್ಯಾಂಪ್ಕೋ ಚಾಕಲೇಟು ತಯಾರಿಕಾ ಘಟಕದ ಆಡಳಿತ ವಿಭಾಗದ ರಾಧೇಶ್ ಮಾಹಿತಿ ನೀಡಿ, ಕ್ಯಾಂಪ್ಕೋ ಮೂಲಕ ಕೃಷಿಕರಿಂದ ಕೋಕೋ ಖರೀದಿಸಿ ಅದನ್ನು ಸಂಸ್ಕರಣೆ ಮಾಡಿ ಕೋಕೋ ಪೌಡರ್ ಹಾಗೂ ಕೋಕೋ ಬಟರ್ ಉತ್ಪಾದನೆ ಮಾಡಲಾಗುತ್ತದೆ. ಕೋಕೋ ಬಟರ್‌ಗೆ ಕೆ.ಜಿ.ಗೆ 700 ರೂಪಾಯಿಗೂ ಹೆಚ್ಚು ಮೌಲ್ಯವಿದ್ದು, ದೇಶದ ವಿವಿಧ ಘಟಕಗಳಿಗೆ ಮಾರಾಟ ಮಾಡಲಾಗುತ್ತಿದೆ.

ಘಟಕದಲ್ಲಿ ಉತ್ಪಾದಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ದೇಶದ ವಿವಿಧೆಡೆ ವಿತರಣೆ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.


ವಿದ್ಯಾರ್ಥಿಗಳು ಚಾಕಲೇಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕೋ ಕೋ ಬೀನ್ ಸಂಸ್ಕರಣೆ ಹೊಂದಿ ಕೋ ಕೋ ಪೌಡರ್ ಹಾಗೂ ಬಟರ್ ಆಗುವ ವಿಧಾನದ ಬಗೆಗೆ, ಸಕ್ಕರೆ ಹಾಗೂ ವಿವಿಧ ವಸ್ತುಗಳನ್ನು ಬಳಸಿಕೊಂಡು ಚಾಕಲೇಟ್ ಉತ್ಪಾದನೆಯಾಗುವ ಬಗೆ ಹಾಗೂ ಅದನ್ನು ಪ್ಯಾಕೇಜಿಂಗ್ ಮಾಡುವ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಪಡೆದುಕೊಂಡರು.


ರಾಧೇಶ್ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. 63 ವಿದ್ಯಾರ್ಥಿಗಳು ಕ್ಯಾಂಪ್ಕೋ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


ಈ ವೇಳೆ ನೆಲ್ಲಿಕಟ್ಟೆ ಅಂಬಿಕಾ ಪಿಯು ವಿದ್ಯಾಲಯ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ, ಉಪನ್ಯಾಸಕರಾದ ವಿದ್ಯಾ ಸರಸ್ವತಿ, ಕಾವ್ಯಾ, ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ ಉಪಸ್ಥಿತರಿದ್ದರು.

ಮಹಿಳೆಯನ್ನು ಕೊಂದ ಯುವಕ –  ಮಹಿಳೆ ಸಿಂಧು ಹತ್ತಿದ ಬಸ್ಸಿನಲ್ಲಿ ಆರೋಪಿ ಹಿಂಬಾಲಿಸಿದ್ದ – ತನ್ನಿಂದ ದೂರವಾಗಿದ್ದಾಳೆ ಎಂಬ ಭಾವನೆಯೇ ಕೊಲೆಗೆ ಕಾರಣ

0

ತಿರುವನಂತಪುರಂ: ಪೆರೂರ್ಕಡದಲ್ಲಿ ನಡುರಸ್ತೆಯಲ್ಲಿ ಮಹಿಳೆಯೋರ್ವಳ ಕೊಲೆ ಯೋಜಿತ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ. ವಝೈಲ ನಿವಾಸಿ ಸಿಂಧು (50) ಎಂಬುವರನ್ನು ನಂದಿಯೋಡು ಮೂಲದ ರಾಜೇಶ್ (46) ಎಂಬಾತ ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹನ್ನೆರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಇಬ್ಬರೂ ಜಗಳದ ನಂತರ ಒಂದು ತಿಂಗಳ ಕಾಲ ಬೇರ್ಪಟ್ಟರು. ಇತ್ತೀಚಿಗೆ ಇಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆದಿದೆ. ಸಿಂಧು ತನ್ನಿಂದ ದೂರವಾಗಿದ್ದಾಳೆ ಎಂಬ ಭಾವನೆಯೇ ಕೊಲೆಗೆ ಕಾರಣ ಎಂದು ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಪೊಲೀಸರ ಪ್ರಕಾರ, ಸಿಂಧು ಕೆಲಸಕ್ಕೆ ಹೋಗುವ ಬಗ್ಗೆ ಅವರ ನಡುವೆ ಜಗಳವೂ ಇತ್ತು. ರಾಜೇಶ್ ಕೂಡ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಇಂದು ಬೆಳಗ್ಗೆ ಪಾಲೊಡೆಯಲ್ಲಿ ನಿಂತಿದ್ದ ರಾಜೇಶ್ ಸಿಂಧು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದುದನ್ನು ನೋಡಿದ್ದಾರೆ. ನಂತರ ನೆಡುಮಂಗಾಡು ತಲುಪಿ ಆಕೆ ಪ್ರಯಾಣಿಸುತ್ತಿದ್ದ ಬಸ್ಸಿಗೆ ಹತ್ತಿದರು.

ಪೊಲೀಸರ ಪ್ರಕಾರ, ಸಿಂಧು ಬಸ್‌ನಿಂದ ಇಳಿದಾಗ, ರಾಜೇಶ್ ಆಕೆಯನ್ನು ಹಿಂಬಾಲಿಸಿ ಕಡಿಮೆ ಜನಸಂದಣಿ ಇರುವ ಸ್ಥಳಕ್ಕೆ ತಲುಪಿದ ನಂತರ ಚಾಕುವಿನಿಂದ ಇರಿದಿದ್ದಾನೆ. ಸಿಂಧು ಕುತ್ತಿಗೆ ಮತ್ತು ತಲೆಗೆ ಕತ್ತಿಯಿಂದ ಇರಿಯಲಾಗಿದೆ.

ಘಟನೆಯ ನಂತರ ಸ್ಥಳೀಯರು ಮತ್ತು ಪೊಲೀಸರು ಸಿಂಧುವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು ಆದರೆ ಅವರು ಸಾವನ್ನಪ್ಪಿದ್ದಾರೆ. ಆಕೆಗೆ ಎರಡಕ್ಕಿಂತ ಹೆಚ್ಚು ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ.

ಸ್ಥಳೀಯರು ರಾಜೇಶ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಖ್ಯಾತ ಯಕ್ಷಗಾನ ಭಾಗವತರಾದ ತಿಮ್ಮಪ್ಪ ಭಾಗವತ ಬಾಳೆಹದ್ದ ನಿಧನ – ನಿನ್ನೆ ಸಂಜೆ ರಸ್ತೆ ಅಫಘಾತದಲ್ಲಿ ಮೃತ್ಯು 

ಖ್ಯಾತ ಯಕ್ಷಗಾನ ಭಾಗವತರಾದ ತಿಮ್ಮಪ್ಪ ಭಾಗವತ ಬಾಳೆಹದ್ದ ಅವರು ನಿನ್ನೆ ನಿಧನರಾಗಿದ್ದಾರೆ. ಅವರು ನಿನ್ನೆ ಸಂಜೆ ಆಕಸ್ಮಿಕವಾಗಿ ಮೃತ್ಯುವಶರಾಗಿದ್ದಾರೆ.

ನಿನ್ನೆ ದಿನಾಂಕ 13.12.2022ರ ಮಂಗಳವಾರ ಸಂಜೆ ಘಟಿಸಿದ ರಸ್ತೆ  ಅಫಘಾತವೊಂದರಲ್ಲಿ ಅವರು ದುರದೃಷ್ಟಕರವಾಗಿ ಸಾವನ್ನಪ್ಪಿದ್ದಾರೆ. ಯಲ್ಲಾಪುರ ತಾಲೂಕಿನ ಬಾಳೆಹದ್ದ ಮೂಲದವರಾಗಿದ್ದ ಅವರು ಬಡಗುತಿಟ್ಟಿನ ಭಾಗವತರಾಗಿ ಜನಪ್ರಿಯರಾಗಿದ್ದರು.

ಯಲ್ಲಾಪುರ ಮತ್ತು ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಎರಡು  ಕಾರುಗಳ ನಡುವೆ ಉಂಟಾದ ಅಫಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಅವರನ್ನು ಕೂಡಲೇ ಶಿರಸಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿನ್ನೆ ಮಧ್ಯರಾತ್ರಿ ಮೃತಪಟ್ಟಿದ್ದಾರೆ.

ತಿಮ್ಮಪ್ಪ ಬಾಳೆಹದ್ದ ಅವರು ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದರು ಮತ್ತು ಬಡಗುತಿಟ್ಟಿನ ಭಾಗವತಿಕೆಯ ರಾಗ ಮತ್ತು ಮಟ್ಟುಗಳಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಪಡೆದಿದ್ದರು.

ಅವರ ನಿಧನಕ್ಕೆ ಯಕ್ಷಗಾನ ಕಲಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ವಿಸ್ಮಯ ಎಂಬ ಯುವತಿಯ ಸಾವಿನ ಪ್ರಕರಣ: ಶಿಕ್ಷೆಯ ಅಮಾನತು ಕೋರಿ ಕಿರಣ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್

0

ವಿಸ್ಮಯ ಪ್ರಕರಣದ ಆರೋಪಿ ಕಿರಣ್ ಕುಮಾರ್ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಶಿಕ್ಷೆಯನ್ನು ಅಮಾನತುಗೊಳಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಅಲೆಕ್ಸಾಂಡರ್ ಥಾಮಸ್ ಮತ್ತು ಸೋಫಿ ಥಾಮಸ್ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿರುವ ಮನವಿಯ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಆರೋಪಿಗಳು ಒತ್ತಾಯಿಸಿದರು.

ವರದಕ್ಷಿಣೆ ಕಿರುಕುಳದಿಂದ ಪತ್ನಿ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪತಿ ಕಿರಣ್‌ಗೆ ನ್ಯಾಯಾಲಯ ಮೇ 24ರಂದು ಶಿಕ್ಷೆ ವಿಧಿಸಿತ್ತು. ಕಿರಣ್ ಸದ್ಯ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಕಿರಣ್ ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A (ವರದಕ್ಷಿಣೆಗಾಗಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 304B (ವರದಕ್ಷಿಣೆ ಸಾವು) ಮತ್ತು ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಪ್ರಕರಣದಲ್ಲಿ 42 ಸಾಕ್ಷಿಗಳು, 120 ದಾಖಲೆಗಳು ಮತ್ತು 12 ಪ್ರಮುಖರಿದ್ದಾರೆ. ವಿಸ್ಮಯಾ 2021 ರ ಜೂನ್ 21 ರಂದು ಸಾಸ್ತಾಮಕೋಟಾದಲ್ಲಿರುವ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಪ್ರಕರಣದ ವಿಚಾರಣೆ ಜನವರಿ 10 ರಂದು ಪ್ರಾರಂಭವಾಯಿತು. ಪ್ರಕರಣದ ಪ್ರಮುಖ ಸಾಕ್ಷಿಗಳು ಆಕೆಯ ತಂದೆ ತ್ರಿವಿಕ್ರಮನ್ ನಾಯರ್ ಮತ್ತು ಸಹೋದರ ವಿಜಿತ್.

ಮಂಗಳೂರು ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ಪುರುಷನ ನಗ್ನ ಮೃತದೇಹ ಪತ್ತೆ – ಸ್ವಲ್ಪ ಸಮಯದ ಮೊದಲು ಕೊಠಡಿಗೆ ಬಂದಿದ್ದ ಮಹಿಳೆ  

0

ಮಂಗಳೂರು ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ಪುರುಷನ ಶವ ಬೆತ್ತಲೆ ಸ್ಥಿತಿಯಲ್ಲಿ ಕಂಡುಬಂದಿದೆ. ಸಾವಿಗೂ ಸ್ವಲ್ಪ ಸಮಯದ ಮೊದಲು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಕೊಠಡಿಗೆ ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.

ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಲಾಡ್ಜ್‌ನಲ್ಲಿ ಮಂಗಳವಾರ ಡಿ.13ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕಾಸರಗೋಡು ಮೂಲದ ಅಬ್ದುಲ್ ಕರೀಂ (56) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಪಂಪ್‌ವೆಲ್‌ನಲ್ಲಿರುವ ಪದ್ಮಶ್ರೀ ಲಾಡ್ಜ್‌ನಲ್ಲಿ ಅಬ್ದುಲ್ ಕರೀಂ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಕೆಲವು ಮಾತ್ರೆಗಳೂ ಪತ್ತೆಯಾಗಿವೆ.

ಸಾವಿಗೂ ಮೊದಲು ಮಹಿಳೆಯೊಬ್ಬರು ಮೃತ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

ಮಹಿಳೆ ಜೊತೆಗಿರುವಾಗ ಸಾವು ಸಂಭವಿಸಿದೆಯೇ ಅಥವಾ ಆಮೇಲೆ ಸಾವು ಸಂಭವಿಸಿದೆಯೇ ಎಂದು ತನಿಖೆಯಿಂದ ತಿಳಿಯಲಿದೆ.

“ಇಳೆಯಣ್ಣನ ಕತೆ” ಯಕ್ಷಗಾನ ಪ್ರದರ್ಶನ

9-12-2022 ರಂದು ಸೀಮಾ ಶುಲ್ಕ, ಬೆಂಗಳೂರು ವಲಯ (customs, bangalore zone) ಸೀಮಾ ಶುಲ್ಕ ಕಾಯಿದೆ 1962, 60 ರ ಸಂಭ್ರಮಾಚರಣೆಯಲ್ಲಿ ಯಕ್ಷದೇಗುಲ ಬೆಂಗಳೂರು ತಂಡದವರಿಂದ ಬಹು ಜನರ ಅಪೇಕ್ಷೆ ಮೇರೆಗೆ 1500ಕ್ಕೂ ಹೆಚ್ಚು ಪ್ರದರ್ಶನ ಕಂಡ “ಇಳೆಯಣ್ಣನ ಕತೆ” ಯಕ್ಷಗಾನ ಪ್ರದರ್ಶನ ನಡೆಯಿತು.

ಹಿರಿಯ ರಂಗಕರ್ಮಿ ಗೋಪಾಲ ಕೃಷ್ಣ ನಾಯರಿ ಯವರು ಹಿಂದಿಯ  “ಏಕ್ ಚಿಟ್ಟಿ” ಕಿರು ನಾಟಕವನ್ನು ಕನ್ನಡಕ್ಕೆ ಇಳೆಯಣ್ಣನ ಕತೆ ಎನ್ನುವ ಯಕ್ಷಗಾನ ಪ್ರಸಂಗವಾಗಿ ರಚಿಸಿದರು.

ಪ್ರಸಂಗವನ್ನು ಕೆ.ಮೋಹನ್ ನಿರ್ದೇಶಿಸಿ ಈಗ 1500 ಕ್ಕೂ ಹೆಚ್ಚು ಪ್ರದರ್ಶನ ಕಂಡು ನೂರಾರು ಕಲಾವಿದರು ಈ ಪ್ರಸಂಗದಲ್ಲಿ ವೇಷ ಮಾಡಿರುವುದು ಹೆಮ್ಮೇಯ ವಿಚಾರ. ನಿನ್ನೆಯ ಕಾರ್ಯಕ್ರಮ customs ವಿಚಾರದ ಬಗ್ಗೆ ನಡೆದಿದ್ದು, ಪ್ರಿಯಾಂಕ ಕೆ  ಮೋಹನ್ ನಿರ್ದೇಶನ ನೀಡಿ,ಸುದರ್ಶನ ಉರಾಳರು ಸಂಯೋಜನೆ ಮಾಡಿದರು.

ಕಲಾವಿದರಾಗಿ ಸುಬ್ರಹ್ಮಣ್ಯ ಹೊಳ್ಳ, ಕಾರ್ತಿಕ ದಾರೇಶ್ವರ, ಶ್ರೀಧರ,ವಿಶ್ವನಾಥ ಶೆಟ್ಟಿ, ಶಶಾಂಕ ಕಾಶಿ, ಬಾಲಕೃಷ್ಣ ಭಟ್, ತಮ್ಮಣ್ಣ ಗಾಂವ್ಕರ್, ಶ್ರೀವತ್ಸ ಇನ್ನೀತರು ಭಾಗವಹಿಸಿದರು.

“ರಾವಣ ವಧೆ” – ಯಕ್ಷಗಾನ

ಹನುಮಜ್ಜಯಂತಿ ಯ ಪ್ರಯುಕ್ತ ಇತ್ತೀಚಿಗೆ 11.12.2022 ರಂದು ಜಯನಗರದ ಅಶೋಕ ಪಿಲ್ಲರ್ ನ “ಶ್ರೀ ರಾಮ ಸೇವಾ ಟ್ರಸ್ಟ್” ನಲ್ಲಿ ಬೆಂಗಳೂರಿನ “ಯಕ್ಷ ಕಲಾ ಅಕಾಡೆಮಿ (ರಿ)”ಯವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾವಣ ವಧೆ” ಎಂಬ ಯಕ್ಷಗಾನ ಪ್ರಸಂಗ ನೆರವೇರಿತು

ಕಾಸರಗೋಡು ಸುಬ್ರಾಯ ಪಂಡಿತರಿಂದ ವಿರಚಿಸಲ್ಪಟ್ಟ ರಾವಣ ವಧೆಯ, “ಮುಂದೆ ರವಿ ತಾ ಪಶ್ಚಿಮಾಂಬುಧಿ” ಎಂಬ ಪದ್ಯಕ್ಕೆ ರಾವಣನ ಒಡ್ಡೋಲಗದಿಂದ ಕಥಾನಕ ಆರಂಭಗೊಂಡಿತು.

ರಣಕಣದ ವಾರ್ತಾ ವಾಹಕ (ಕೃಷ್ಣ ಶಾಸ್ತ್ರಿ) ರಣದ ವರ್ತಮಾನವನ್ನು ಹೇಳಿದಾಗ ಮಂಡೋದರಿಯ ಗೃಹವನ್ನು ಪ್ರವೇಶಿಸಿ “ಹರನೇ ಶಂಕರ ಪಾರ್ವತಿ ವರನೇ” ಪದ್ಯಕ್ಕೆ ವ್ಯಥಿಸುತ್ತಿರುವ ಸಂದರ್ಭದಲ್ಲಿ ಮಂಡೋದರಿಯ ಪ್ರವೇಶ. ಮಂಡೋದರಿಯ ಪಾತ್ರದಲ್ಲಿ ಪ್ರವೀಣ ಚಂದ್ರ ಕುತ್ಪಾಡಿ ಯವರು ಇನ್ನು ಬಿಡು ಬಿಡು ಛಲವ, ಸಾಕೋರ್ವ ಮಗ ವಿರೂಪಾಕ್ಷ ವಿಶೇಷವಾಗಿ “ಅಳಲಿದಳು ಬೇಡಕಟ” ಪದ್ಯಕ್ಕೆ ತಮ್ಮ ಸುದೀರ್ಘವಾದ ನಾಲ್ಕು ದಶಕಗಳ ಅಭಿನಯದ ಅನುಭವವನ್ನು ಧಾರೆ ಎರೆದು, ಪ್ರೇಕ್ಷಕರ ಕಣ್ಣಂಚು ತೀವಗೊಂಡದ್ದು ಸುಳ್ಳಲ್ಲ.

ಮಾತಲಿಯಾಗಿ ಯುವ ಪ್ರತಿಭೆ ನಾಗೇಶ್ ಗೀಜಗಾರ್ ತಮ್ಮ ವೈವಿಧ್ಯಮಯ ನಾಟ್ಯಗಳಿಂದ ಜನಮನ ಗೆದ್ದರು. ವಿಭೀಷಣನಾಗಿ ಶಶಿಕಾಂತ್ ಆಚಾರ್ಯ ತಮ್ಮ ಆಳ್ತನ, ವೇಷಗಾರಿಕೆಯಿಂದ ರಂಜಿಸಿದರು. ರಾಮನ ಪಾತ್ರದಲ್ಲಿ ತಮ್ಮ ಎಂದಿನ ಮಟಪಾಡಿ ಶೈಲಿಯ ಚುರುಕಿನ ಹೆಜ್ಜೆಯ, ಶೃತಿ ಬದ್ಧ ಮಾತಿನಲ್ಲಿ ಗುರು ಕೃಷ್ಣಮೂರ್ತಿ ತುಂಗರು ಪ್ರೇಕ್ಷಕರನ್ನು ರಂಜಿಸಿದರು.

ತಮ್ಮವರನ್ನು ಕಳೆದುಕೊಂಡ ನೋವು, ಹಿಂದಿನ ಜನ್ಮದ ನೆನಪು, ರಾಮನ ಮೇಲಿನ ದ್ವೇಷಗಳನ್ನು ತೋರ್ಪಡಿಸುವಲ್ಲಿ ಮಾಹಿತಿ ತಂತ್ರಜ್ಞ ರವಿ ಮಡೋಡಿಯವರು ತಮ್ಮ ರಸಾಭಿನಯ, ಸಾಹಿತ್ಯ ಪಾರಮ್ಯದಲ್ಲಿ ಯಶ ಪಡೆದರು. ಮೇಲಾಗಿ ಕಂಡನು ದಶವದನ ಪದ್ಯಕ್ಕೆ ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. ಶ್ರೀಮತಿ ಲತಾ ಹೊಳ್ಳ, ರಿತೇಶ್ ರಾವಣನ ಎಡಬಲದಲ್ಲಿದ್ದರೆ, ಶ್ರೀ ರಮೇಶ್ ಮಟಪಾಡಿ, ಶ್ರೀ ನಿಧಿ ಎಂ ಎಸ್, ಸದಾಶಿವ, ಮಂಜುನಾಥ್ ಭಟ್ ವೇಷಭೂಷಣದಲ್ಲಿ ಸಹಕರಿಸಿದರು.

ಹಿಮ್ಮೇಳದಲ್ಲಿ ಯುವ ಪ್ರತಿಭೆ ಕುಮಾರಿ ಚಿತ್ಕಲಾ ಕೆ ತುಂಗ, ಮದ್ದಲೆಯಲ್ಲಿ ಹಿರಿಯರಾದ ಶ್ರೀ ಎ ಪಿ ಫಾಟಕ್, ಚಂಡೆಯಲ್ಲಿ ಮತ್ತೋರ್ವ ಯುವ ಪ್ರತಿಭೆ ಮನೋಜ್ ಆಚಾರ್ಯ ತಮ್ಮ ಕಲಾ ಪ್ರೌಢಿಮೆಯನ್ನು ತೋರಿದರು.

ಈ ಪ್ರದರ್ಶನಕ್ಕೆ ಹಿರಿಯ ಅನುಭವೀ ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನ ಗೋಪುರಕ್ಕೆ ಕಳಶವಿಟ್ಟಂತಿತ್ತು.

ಯಕ್ಷಾಂಗಣ ದಶಮಾನ ಸಡಗರ – ತಾಳಮದ್ದಳೆ ಸಪ್ತಾಹ 2022 – “ಯಕ್ಷಾಂಗಣ ಶತಮಾನ ಕಾಣಲಿ”: ಶಾಸಕ ಡಿ. ವೇದವ್ಯಾಸ ಕಾಮತ್

0

 

ಮಂಗಳೂರು: ‘ನಮ್ಮ ಸನಾತನ ಸಂಸ್ಕೃತಿ – ಸಂಪ್ರದಾಯಗಳನ್ನು ವಿವಿಧ ಕಥಾನಕಗಳ ಮೂಲಕ ಜನಮಾನಸಕ್ಕೆ ಮುಟ್ಟಿಸುವ ಸುಸಂಸ್ಕೃತ ಕಲೆ ಯಕ್ಷಗಾನ. ಅದರಲ್ಲೂ ತಾಳಮದ್ದಳೆ ಪ್ರಕಾರದಲ್ಲಿ ಪೌರಾಣಿಕ ಕಥೆಗಳೊಂದಿಗೆ ಕಲಾವಿದರು ವಿವರಿಸಿ ಹೇಳುವ ಜೀವನ ಮೌಲ್ಯಗಳು ಹಲವಾರಿವೆ.

ಅದನ್ನು ನುಡಿ ಹಬ್ಬದ ರೂಪದಲ್ಲಿ ಪ್ರತಿ ವರ್ಷ ನಡೆಸುವ ಯಕ್ಷಾಂಗಣವು ತನ್ನ ದಶಮಾನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಮುಂದೆ ಅದು ಶತಮಾನ ಕಾಣುವಂತಾಗಲಿ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

             ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ‘ಯಕ್ಷಾಂಗಣ ಮಂಗಳೂರು’ ಇದರ ದಶಮಾನೋತ್ಸವ ಪ್ರಯುಕ್ತ ಮಂಗಳೂರು ವಿ.ವಿ.ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಜರಗಿದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಹತ್ತನೇ ವರ್ಷದ ನುಡಿ ಹಬ್ಬ ಸಮಾರೋಪ ಸಮಾರಂಭದಲ್ಲಿ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.

         ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಿಶೋರ್ ಕೊಟ್ಟಾರಿ ಅತಿಥಿಗಳಾಗಿ ಶುಭ ಹಾರೈಸಿದರು.

         ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ಸುಮಾ ಪ್ರಸಾದ್ ವಂದಿಸಿದರು. ಜೊತೆ ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ನಿವೇದಿತಾ ಎನ್.ಶೆಟ್ಟಿ, ಅರುಣ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಪ್ಪಿನಂಗಡಿಯಲ್ಲಿ ಕುಂಬಳೆ ಸುಂದರ ರಾಯರಿಗೆ ನುಡಿ ನಮನ

0

ಮಲಯಾಳ ಮಾತೃಭಾಷೆಯಾಗಿದ್ದರೂ ಕನ್ನಡದಲ್ಲಿ ಅಪೂರ್ವ ವಾಗ್ಮಿಯಾಗಿ ಮಿಂಚಿದ ಕುಂಬಳೆ ಸುಂದರ ರಾಯರು ಆಟ ಮತ್ತು ತಾಳಮದ್ದಳೆಯಲ್ಲಿ ತನ್ನದೇ ಶೈಲಿಯ ಕಲಾವಿದನಾಗಿ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಿದ್ದಾರೆಂದು ಮಾಣಿ ಬಾಲವಿಕಾಸ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ರವೀಂದ್ರ ದರ್ಬೆ ತಿಳಿಸಿದರು. 

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿದ ಕುಂಬಳೆ ಸುಂದರ ರಾಯರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. 

ನಿವೃತ್ತ ಶಿಕ್ಷಕ ಕಲಾವಿದ ಗೋಪಾಲ್ ಶೆಟ್ಟಿ ಕಳೆಂಜ ನುಡಿ ನಮನ ಸಲ್ಲಿಸಿ, ಕುಂಬ್ಳೆ ಅವರು ತನ್ನ ಅಲ್ಪ ಶಾಲಾ ಶಿಕ್ಷಣದ ಹಿನ್ನೆಲೆಯಲ್ಲಿ ಯಕ್ಷಗಾನದ ಆಸಕ್ತಿಯಿಂದ ಅಧ್ಯಯನಶೀಲರಾಗಿ ದೈವದತ್ತವಾದ ಮಾತುಗಾರಿಕೆಯ ಶಕ್ತಿಯಿಂದ ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆಂದು  ತಿಳಿಸಿದರು. 

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಮಾತನಾಡಿ ತೆಂಕು ಮತ್ತು ಬಡಗಿನ ಸುಮಾರು 600 ಕ್ಕೂ ಹೆಚ್ಚು ಕಲಾವಿದರ ಮಾಹಿತಿಗಳನ್ನು ಒಳಗೊಂಡ ಯಕ್ಷೋಪಾಸಕರು ಎಂಬ ಎರಡು ಸಂಪುಟದ ಪ್ರಕಟಣೆ, ವಿದ್ಯಾರ್ಥಿ ಯಕ್ಷಗಾನ ಸಂಭ್ರಮ, ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಸಂಘಗಳಿಗೆ ನೆರವು ನೀಡುವ ಮೂಲಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಕಿಶೋರ್ ಮೂಡಾಯಿರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಪಾತಾಳ ಅಂಬಾ ಪ್ರಸಾದ್, ಸತೀಶ ಶಿರ್ಲಾಲು ,ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್  ಉಪ್ಪಿನಂಗಡಿ ಸ್ವಾಗತಿಸಿ ಉಪನ್ಯಾಸಕ ಗುಡ್ಡಪ್ಪ ಬಲ್ಯ ವಂದಿಸಿದರು. ಸಂಜೀವ ಪಾರೆಂಕಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.